Jan 16, 2025

ಬಿಬಿಎಂಪಿ ಪಾರ್ಕಿನಲ್ಲಿ ಸಿಕ್ಕ ನೊಣಹಿಡುಕಗಳು.

Indian paradise flycatcher/ ಬಾಲದಂಡೆ/ ರಾಜಹಕ್ಕಿ 
ಡಾ. ಅಶೋಕ್.‌ ಕೆ. ಆರ್

ಹೆಂಡ್ರುಗೆ ಆರ್‌.ಆರ್.‌ ನಗರದಲ್ಲಿ ಒಂದಷ್ಟು ಕೆಲಸವಿತ್ತು. ಅವಳನ್ನು ಬಿಟ್ಟು ನಾನು ಮಕ್ಕಳು ಹತ್ತಿರದ ಹೋಟೆಲ್ಲಿಗೆ ಹೋಗಿ ತಿಂಡಿ ತಿಂದೆವು. ಎರಡು ತಾಸು ಸಮಯ ಕಳೆಯಬೇಕಿತ್ತು. ಗೂಗಲ್ಲಿನಲ್ಲಿ ಹತ್ತಿರದಲ್ಲಿರುವ ಪಾರ್ಕಿನ ಪಟ್ಟಿ ತೋರಿಸಲು ಕೇಳಿದೆ. ಎಲ್ಲದಕ್ಕಿಂತ ಸಮೀಪವಿದ್ದ ಹೆಸರಿಲ್ಲದ ಬಿಬಿಎಂಪಿ ಪಾರ್ಕಿಗೆ ಹೋದೆವು. ಮಕ್ಕಳಿಗೆ ಆಟವಾಡಲಿದ್ದ ಜಾಗದ ಹಿಂದೆ ಬಿದಿರಿನ ಪುಟ್ಟ ಮೆಳೆಯಿತ್ತು. ಬಿದಿರಿನ ಮೆಳೆಯ ಹಿಂದೆ ಎರಡು ಗಸಗಸೆ (ಸಿಂಗಾಪೂರ್‌ ಚೆರ್ರಿ) ಹಣ್ಣಿನ ಮರಗಳಿದ್ದವು. ಗಾತ್ರ ನೋಡಿದರೆ ಐದಾರು ವರ್ಷಗಳ ಆಯಸ್ಸು. ಅಳಿಲುಗಳು ಚಿಂವ್‌ಗುಟ್ಟುತ್ತಿದ್ದವು. ಗಸಗಸೆ ಮರದ ಬಳಿ ಇದ್ದಕ್ಕಿದ್ದಂತೆ ಅಚ್ಚ ಬಿಳುಪಿನ ಹಾಳೆಯೊಂದು ಮಣ್ಣಿನಿಂದ ಗಿಡದ ಕಡೆಗೆ ತೂರಿಹೋದಂತೆನ್ನಿಸಿತು. ಏನದು ಎಂದು ಕತ್ತೆತ್ತಿ ನೋಡಿದವನಿಗೆ ಕಂಡದ್ದು ಇಂಡಿಯನ್‌ ಪ್ಯಾರಡೈಸ್‌ ಫ್ಲೈಕ್ಯಾಚರ್‌ (ಬಾಲದಂಡೆ, ರಾಜಹಕ್ಕಿ). ಅರೆರೆ ಈ ಪಕ್ಷಿ ನೋಡಲೆಂದೇ ಒಮ್ಮೆ ನಂದಿ ಬೆಟ್ಟಕ್ಕೆ ಹೋಗಿದ್ದೆನಲ್ಲವೇ? ದೂರದಲ್ಲಿ ಕಾಣಿಸಿತ್ತಷ್ಟೇ. ಕುಣಿಗಲ್ಲಿನ ಬಳಿ ಒಮ್ಮೆ ಕಂದು ಬಣ್ಣದಲ್ಲಿದ್ದ ನೊಣಹಿಡುಕ ಸಿಕ್ಕಿತ್ತು, ಸುಮಾರಾಗಿ ಹತ್ತಿರದಲ್ಲಿ. ಕುಕ್ಕರಹಳ್ಳಿ ಕೆರೆ, ಕಣ್ವ ಜಲಾಶಯದ ಬಳಿ ಹತ್ತಿರದಲ್ಲೇ ಸಿಕ್ಕಿತ್ತು, ಕ್ಯಾಮೆರಾ ಕೈಯಲ್ಲಿರಲಿಲ್ಲ. ಇವತ್ತೂ ಕ್ಯಾಮೆರಾ ಕೈಯಲ್ಲಿಲ್ಲದಾಗಲೇ ಇಷ್ಟು ಹತ್ತಿರದಲ್ಲಿ ಬಂದು ಕೂರಬೇಕಾ?! ಮಕ್ಕಳಿತ್ತ ಆಟವಾಡುತ್ತಿದ್ದರು. ನಾನು ಪಕ್ಷಿಯ ದಿನಚರಿಯನ್ನು ವೀಕ್ಷಿಸುತ್ತಿದ್ದೆ. ಅದರ ಉದ್ದನೆಯ ಬಾಲ ಗಾಳಿಯಲ್ಲಿ ತುಯ್ದಾಡುವುದನ್ನು ಕಾಣುವುದೇ ಒಂದು ಸೊಗಸು. ಅಷ್ಟು ಉದ್ದನೆಯ ಬಾಲವನ್ನೊತ್ತುಕೊಂಡು ಗಸಗಸೆ ಮರದ ಪೀಚು ಹಣ್ಣುಗಳು, ಎಲೆಗಳ ನಡುವಿದ್ದ ಸಣ್ಣ ಪುಟ್ಟ ಹುಳ – ನೊಣಗಳನ್ನು ಹಿಡಿಯಲು ಆಗೊಮ್ಮೆ ಈಗೊಮ್ಮೆ ನೆಲದ ಬಳಿ ಬಂದು ಮತ್ತೆ ಹಿಂದಿರುಗಿ ಗಸಗಸೆ ಮರ ಹಾಗು ಸುತ್ತಮುತ್ತಲಿದ್ದ ಇತರೆ ಮರಗಳ ಮೇಲೆ ಕುಳಿತು ವಿರಮಿಸಿಕೊಳ್ಳುತ್ತಿತ್ತು. ಸುತ್ತಮುತ್ತಲೆಲ್ಲ ಮನೆಗಳೇ ಇರುವ ಜಾಗದಲ್ಲಿ ಇಂತಹ ಪಕ್ಷಿ ನೋಡಿದೆನೆಂದು ಹೇಳಿದರೆ ಯಾರಾದರೂ ನಂಬದೇ ಹೋದರೆ ಎಂಬ ನೆಪದಲ್ಲಿ ನನ್ನ ಸಮಾಧಾನಕ್ಕೆ ಮೊಬೈಲಿನಲ್ಲೇ ಸುಮ್ಮನೊಂದು ವೀಡಿಯೋ ತೆಗೆದೆ! ಈ ಉದ್ದ ಬಾಲದ ನೊಣಹಿಡುಕನ ಜೊತೆಯೇ ಕೆಂಪುಕೊರಳಿನ ನೊಣಹಿಡುಕುಗಳ (ಟಿಕೆಲ್ಸ್‌ ಬ್ಲೂ ಫ್ಲೈಕ್ಯಾಚರ್) ದರ್ಶನವೂ ಆಯಿತು. ʻಕ್ಯಾಮೆರಾ ಇಲ್ಲದಾಗಲೇ ಎಲ್ಲ ಬಂದು ಕುಣೀರಪ್ಪʼ ಎಂದು ಬಯ್ದುಕೊಂಡೆ!

Tickells blue flycatcher/ ಕೆಂಪುಕೊರಳಿನ ನೊಣಹಿಡುಕ

ಮಕ್ಕಳ ಜೊತೆ ಅಲ್ಲೇ ಆಟವಾಡುತ್ತಿದ್ದ ಪಾರ್ಕಿನ ಎದುರಿನ ಮನೆಯವನಾದ ಶಂಕರನೆಂಬ ಪುಟ್ಟ ಹುಡುಗ ನಾನು ಪಕ್ಷಿಯ ಕಡೆಗೇ ಗಮನಕೊಟ್ಟಿದ್ದು ನೋಡಿ ʻಅದ್ಯಾವಾಗಲೂ ಇಲ್ಲೇ ಇರ್ತದೆ. ಅದರ ಬಾಲ ನನ್ನ ಕೈಗಿಂತ ಉದ್ದ, ನಿಮ್ಮ ಕೈಗಿಂತ ಉದ್ದʼ ನನ್ನ ಮಕ್ಕಳ ಕಡೆ ಕೈ ತೋರುತ್ತಾ ʻನಮ್ಮೆಲ್ಲರ ಕೈ ಸೇರಿಸಿದರೂ ಅದಕ್ಕಿಂತ ಉದ್ದದ ಬಾಲ ಆ ಪಕ್ಷಿಗೆʼ ಎಂದ. ಪಕ್ಷಿಯ ಹೆಸರನ್ನು ಅವನಿಗೆ ತಿಳಿಸಿ ಸಮಯವಾಗಿದ್ದರಿಂದ ಮಕ್ಕಳೊಂದಿಗೆ ಹೊರಟೆ. ನಾನು ಕೆಲಸ ಮಾಡುತ್ತಿದ್ದ ಕಾಲೇಜಿನ ಸಮೀಪವೇ ಈ ಪಾರ್ಕಿರುವುದರಿಂದ ಆಗಾಗ ಭೇಟಿ ಕೊಡಬಹುದು ಎಂದು ಮನಸಿನಲ್ಲೇ ಲೆಕ್ಕ ಹಾಕುತ್ತ ಹೆಂಡ್ರನ್ನು ಕರೆದುಕೊಂಡು ಮನೆ ತಲುಪಿದೆ. ಮನೆ ತಲುಪಿದರೂ ಸಮಾಧಾನವಿಲ್ಲ. ಕ್ಯಾಮೆರಾ ತಗೊಂಡೋಗಿ ಮತ್ತೊಂದು ಸಲ ಈ ಪಕ್ಷಿಯನ್ನು ನೋಡೇ ಬಿಡುವ ಎಂದು ದಡಬಡನೆ ವಾಪಸ್ಸಾದೆ. ಪಕ್ಷಿ ಸಿಗದೇ ಇದ್ದರೂ ಪಾರ್ಕಿಗೆ ಯಾವ್ಯಾವ ಸಮಯದಲ್ಲಿ ಈ ಪಕ್ಷಿ ಬರಬಹುದು ಎನ್ನುವುದನ್ನಾದರೂ ತಿಳಿದುಕೊಳ್ಳಬಹುದು ಎಂಬ ಆಸೆ.

ʻಆಯ್ತು ಬೇಜಾರ್‌ ಮಾಡಿಕೋ ಬೇಡ ಬಾʼ ಎಂದೆನ್ನುತ್ತಾ ಎರಡೂ ಪಕ್ಷಿಗಳು ಗಿಡಗಳ ಮರೆಯಲ್ಲೇ ಒಂದಷ್ಟು ಚಿತ್ರ ತೆಗೆಯಲು ಅನುವು ಮಾಡಿಕೊಟ್ಟವು. ಪಕ್ಷಿಗಳ ಸ್ವಭಾವ ವೀಕ್ಷಿಸುತ್ತಾ, ಆವಾಗಿವಾಗ ಒಂದೊಂದು ಫೋಟೋ ತೆಗೆಯುತ್ತಾ ಹತ್ತಿರತ್ತಿರ ಮೂರು ತಾಸು ನಿಂತರೆ ಕಾಲು ನೋಯದೇ ಇದ್ದೀತೆ. ಒಂದೈದು ನಿಮಿಷ ಅಲ್ಲೇ ವಿರಮಿಸಿಕೊಂಡು ಹೊರಟವನಿಗೆ ಮನೆಯ ಅಂಗಳದಲ್ಲಿ ಅಪ್ಪನೊಂದಿಗೆ ಕ್ರಿಕೆಟ್‌ ಆಡುತ್ತಿದ್ದ ಪುಟ್ಟ ಶಂಕರ ಕಂಡ. ತೆಗೆದ ಫೋಟೋಗಳನ್ನು ಅವನಿಗೆ ತೋರಿಸಿ ಅವನ ಮುಖದ ಮೇಲೆ ಮೂಡಿದ ಮುಗುಳ್ನಗೆಯನ್ನು ಕಣ್ತುಂಬಿಕೊಳ್ಳುತ್ತಾ ಮನೆ ಕಡೆಗೆ ಹೊರಟೆ.

No comments:

Post a Comment