Dec 28, 2024

ಕ್ಯಾಪಿಟಲಿಸಂ ಬಿಟ್ಟು ಬೇರೆ ಆಯ್ಕೆ ನಿಜಕ್ಕೂ ನಮ್ಮ ಮುಂದಿದೆಯೇ?

 

image source: yourdictionary

ಡಾ. ಅಶೋಕ್.‌ ಕೆ. ಆರ್.

ಯಾರಾದರೂ ಎಡಪಂಥೀಯ – ಬಲಪಂಥೀಯ ಅಂತ ಮಾತನಾಡುವಾಗ, ವಾದ ಮಾಡುವಾಗ ನಿಜಕ್ಕೂ ಈಗ ನಮ್ಮಲ್ಲಿ ಎಡಪಂಥೀಯತೆ – ಬಲಪಂಥೀಯತೆ ಅನ್ನುವುದಿದೆಯೇ ಎನ್ನುವ ಪ್ರಶ್ನೆ ನನ್ನಲ್ಲಿ ಮೂಡುತ್ತಲೇ ಇರುತ್ತದೆ. ಈ ರೀತಿಯಾಗಿ ಮಾತನಾಡುವ, ವಾದ ಮಾಡುವ ನಾವೆಲ್ಲರೂ ಬಂಡವಾಳಶಾಹಿ – ಕ್ಯಾಪಿಟಲಿಸ್ಟುಗಳೇ ಅಲ್ಲವೇ ಎನ್ನುವ ಯೋಚನೆ ಸುಳಿಯುತ್ತದೆ. ಅಬ್ಬಬ್ಬಾ ಅಂದರೆ ಒಂಚೂರು ಎಡಕ್ಕಿರುವ ಅಥವಾ ಒಂದಷ್ಟು ಬಲಕ್ಕಿರುವ ಕ್ಯಾಪಿಟಲಿಸ್ಟುಗಳಷ್ಟೇ ಅಲ್ಲವೇ ನಾವು ಬಹುತೇಕರು…

ನರಸಿಂಹರಾವ್‌ ಕಾಲದಲ್ಲಿ, ಮನಮೋಹನ್‌ ಸಿಂಗ್‌ರವರು ಹಣಕಾಸು ಸಚಿವರಾಗಿದ್ದಾಗಿನ ಸಮಯದಲ್ಲಿ ಇಂಡಿಯಾ ಜಾಗತೀಕರಣಕ್ಕೆ ಸಂಪೂರ್ಣವಾಗಿ ತೆರೆದುಕೊಂಡಿತು. ಹಲವು ವರುಷಗಳ ಕಾಲ ವಿಧವಿಧದ ವಿರೋಧಗಳನ್ನು ಈ ಹೊಸ ಆರ್ಥಿಕ ನೀತಿಗಳು ಎದುರಿಸಿತಾದರೂ ಅಂತಿಮವಾಗಿ ಕ್ಯಾಪಿಟಲಿಸಂ ಎನ್ನುವ ಸಿದ್ಧಾಂತವಲ್ಲದ ಸಿದ್ಧಾಂತ ಉಳಿದೆಲ್ಲ ಸಿದ್ಧಾಂತಗಳನ್ನು ಮೀರಿ ಜಯಿಸಲಾರಂಭಿಸಿತು ಎನ್ನುವುದು ತಿರಸ್ಕರಿಸಲಾಗದ ವಾಸ್ತವ.

ಆರ್ಥಿಕ ಹಿಂಜರಿವಿದ್ದ ಸಮಯದಲ್ಲಿ ಈ ಮಾದರಿಯನ್ನು ಹೊರತುಪಡಿಸಿ ಮತ್ಯಾವ ಮಾದರಿಯೂ ಆರ್ಥಿಕ ವ್ಯವಸ್ಥೆಯನ್ನು ಸರಿಪಡಿಸಲು ಸಾಧ್ಯವಿರಲಿಲ್ಲವೇ? ಖಂಡಿತವಾಗಿ ಅನೇಕ ಮಾದರಿಗಳಿದ್ದವು. ಆದರೆ ಈ ಬೇರೆ ಎಲ್ಲಾ ಮಾದರಿಗಳೂ ಬಹಳಷ್ಟು ದೇಶದಲ್ಲಿ ವಿಫಲವಾಗಿತ್ತು, ಅಥವಾ ಆ ಮಾದರಿಗಳು ವಿಫಲಗೊಳ್ಳುವಂತೆ ಮಾಡುವಲ್ಲಿ ಕ್ಯಾಪಿಟಲಿಸಂ ಸಫಲತೆ ಕಂಡಿತ್ತು. ಕ್ಯೂಬಾದಂತಹ ದೇಶಗಳಲ್ಲಿ ಭಿನ್ನ ಮಾದರಿಗಳು ಒಂದು ಮಟ್ಟಿಗೆ ಯಶ ಕಂಡಿತ್ತಾದರೂ ನಮ್ಮ ದೇಶದ ಅಗಾಧತೆಗೆ – ನಮ್ಮ ಜನಸಂಖೈಗೆ ಆ ಮಾದರಿಯನ್ನು ಸಂಪೂರ್ಣವಾಗಿ ಅಳವಡಿಸಿ ಯಶ ಕಾಣಲು ಸಾಧ್ಯವಿತ್ತೆ? ಸಮಾಜವಾದಿ ಮಾದರಿ, ಕಮ್ಯುನಿಷ್ಟ್‌ ಮಾದರಿ ಸಂಪೂರ್ಣ ಯಶ ಕಾಣಬೇಕೆಂದರೆ ಅಡಿಯಿಂದ ಮುಡಿಯವರೆಗೂ ಆಡಳಿತ ಯಂತ್ರ ಅತ್ಯಂತ ಸಮರ್ಥವಾಗಿ ಕಾರ್ಯನಿರ್ವಹಿಸಬೇಕು. ಆಡಳಿತ ಯಂತ್ರದ ಒಂದು ಕೀಲು ಕೈಕೊಟ್ಟರೆ ಇಡೀ ವ್ಯವಸ್ಥೆಯೇ ಅವ್ಯವಸ್ಥೆಯ ಕಡೆಗೆ ಸಾಗಿ ಅಂತಿಮವಾಗಿ ಈ ಮಾದರಿಗಳಲ್ಲೇ ಲೋಪವಿದೆ ಎಂಬ ಅಭಿಪ್ರಾಯ ಮೂಡಿಸಿಬಿಡುತ್ತದೆ. ಈ ಅಭಿಪ್ರಾಯಗಳನ್ನು ತನ್ನನುಕೂಲಕ್ಕೆ ಬಳಸಿಕೊಂಡೇ ಕ್ಯಾಪಿಟಲಿಸ್ಟ್‌ ವ್ಯವಸ್ಥೆಯು ಮುನ್ನಡೆಯಲಾರಂಭಿಸಿದ್ದು. ಪಕ್ಕಾ ಕಮ್ಯುನಿಷ್ಟ್‌ ದೇಶವೆಂದೇ ಖ್ಯಾತಿ ಹೊಂದಿದ ಚೀನಾದಂತಹ ದೇಶವೂ ಸಹ ಕ್ಯಾಪಿಟಲಿಸಂನ ತೋಳತೆಕ್ಕೆಗೆ ಸೇರಿದ್ದು. ಭ್ರಷ್ಟಾಚಾರವು ಉಳಿದೆಲ್ಲ ವ್ಯವಸ್ಥೆಗಳನ್ನು ದಿನಬೆಳಗಾಗುವುದರಲ್ಲಿ ಮುಳುಗಿಸಿಬಿಟ್ಟರೆ ಕ್ಯಾಪಿಟಲಿಸಂ ವ್ಯವಸ್ಥೆಯೂ ಭ್ರಷ್ಟಾಚಾರವಿದ್ದಷ್ಟೂ ಪ್ರಖರವಾಗಿ ಬೆಳಗುತ್ತದೆ!

ಕ್ಯಾಪಿಟಲಿಸಂನ ಗೆಲುವಿಗೆ ಬಹುಮುಖ್ಯ ಕಾರಣ ನಮ್ಮನ್ನು ವಸ್ತುಗಳೆಡೆಗೆ ಆಕರ್ಷಿಸಿದ್ದು. ಆ ಆಕರ್ಷಣೀಯ ವಸ್ತುಗಳು ನಮಗೆ ಸುಲಭದಲ್ಲಿ ಲಭ್ಯವಾಗುವಂತೆ ಮಾಡಿದ್ದು. ಮೂಲತಃ ಮನುಷ್ಯರಿಗೆ ಆಟಿಕೆಗಳೆಂದರೆ ಪ್ರೀತಿ. ಸಣ್ಣದರಲ್ಲಿ ಆಟಿಕೆಯ ಗೊಂಬೆಗಳ ಮೇಲಿರುಷ್ಟೇ ಆಸೆ ಮುರಿದ ಪ್ಲ್ಯಾಸ್ಟಿಕ್‌ ಲೋಟದ ಮೇಲೂ ಇರುತ್ತದೆ. ದೊಡ್ಡವರಾಗುತ್ತ ಆಟಿಕೆಗಳ ರೂಪ ಬೈಕು, ಕಾರು, ಒಡವೆ, ಮನೆ, ಬಟ್ಟೆ, ಫೋನು, ಚಪ್ಪಲಿಗಳ ರೂಪ ಪಡೆಯುತ್ತದಷ್ಟೇ. ಆಟಿಕೆ ಕಷ್ಟದಲ್ಲಿ ಸಿಕ್ಕರೆ ಹೆಚ್ಚು ಸಂತಸವೋ ಸುಲಭದಲ್ಲಿ ಸಿಕ್ಕರೆ ಹೆಚ್ಚು ಖುಷಿಯೋ? ಹೆಚ್ಚೇನಿಲ್ಲ, ಮೂರು ದಶಕದ ಹಿಂದೆ ಒಂದು ಸ್ಕೂಟರ್‌ ಖರೀದಿಸಬೇಕೆಂದರೆ ಹಣವಿದ್ದರೂ ತಿಂಗಳುಗಳವರೆಗೆ ಕಾಯಬೇಕಿತ್ತು. ಈಗ ಆನ್‌ಲೈನಿನಲ್ಲೇ ಬುಕ್‌ ಮಾಡಿದರೆ ಎರಡು ಮೂರು ದಿನದಲ್ಲಿ ಮನೆಬಾಗಿಲಿಗೇ ಸ್ಕೂಟರ್‌ ತಲುಪಿಸುತ್ತಾರೆ. ವಸ್ತು ಪ್ರೇಮಿಯಾದ ಮನುಷ್ಯನ ಆಸೆ ದುರಾಸೆಗಳನ್ನು ಪೂರೈಸುವುದೇ ಮೂಲಗುಣವಾದ ಕ್ಯಾಪಿಟಲಿಸಂ ವ್ಯವಸ್ಥೆ ದೇಶ – ದೇಶಗಳನ್ನು ಆವರಿಸುತ್ತಿರುವುದಲ್ಲಿ ಅಚ್ಚರಿಯಿಲ್ಲ.

ಕ್ಯಾಪಿಟಲಿಸಂ ವ್ಯವಸ್ಥೆಯಿಂದಲೇ ಪರಿಸರನಾಶ ವೇಗ ಪಡೆದುಕೊಂಡಿದೆ, ಹೌದು.

ಈ ವ್ಯವಸ್ಥೆಯು ಹಣವಿದ್ದವರಿಗೆ ಚೆಂದ ಕಾಣಿಸುತ್ತದೆಯೇ ಹೊರತು ಹಣದ ವಿಚಾರದಲ್ಲಿ ಹಿಂದುಳಿದಿರುವವರಿಗಲ್ಲ, ಹೌದು ಸತ್ಯ.

ಆರ್ಥಿಕ ಅಸಮತೋಲನ ಈ ವ್ಯವಸ್ಥೆಯಲ್ಲಿ ಮತ್ತಷ್ಟು ಹೆಚ್ಚಾಗುತ್ತದೆ, ಹೌದು.

ಮೊದಲೇ ಸ್ವಾರ್ಥಿ – ಲೋಭಿಯಾದ ಮನುಷ್ಯನನ್ನು ಮತ್ತಷ್ಟು ಮಗದಷ್ಟು ಲೋಭಿಯಾಗಿಸಿ ಮನುಷ್ಯತ್ವವನ್ನೇ ಮರೆತುಬಿಡುವಂತೆ ಮಾಡಿಬಿಡುತ್ತದೆ ಈ ವ್ಯವಸ್ಥೆ, ಹೌದು ಸತ್ಯವೇ.

ಸದ್ಯದ ಪರಿಸ್ಥಿತಿಯಲ್ಲಿ, ಹತ್ತಿರದ ಭವಿಷ್ಯತ್ತಿನಲ್ಲಿ ಪರ್ಯಾಯ ವ್ಯವಸ್ಥೆಯೇನಾದರೂ ರೂಪುಗೊಂಡು, ಸಫಲತೆ ಕಂಡು ಪ್ರಸ್ತುತ ವ್ಯವಸ್ಥೆಯ ಕುಂದುಕೊರತೆಗಳನ್ನು ಸರಿಪಡಿಸಬಲ್ಲದೇ? ಭರವಸೆಯಿಲ್ಲ. ಈ ವ್ಯವಸ್ಥೆಯೇ ಒಂದಷ್ಟು ಮಾನವೀಯವಾಗಿ ಮಾರ್ಪಡುತ್ತಾ ಹೆಚ್ಚಿನ ಜನರನ್ನು ಒಳಗೊಳ್ಳುತ್ತಾ ಸಾಗಬಹುದೆಂದು ನಿರೀಕ್ಷೆ ಮಾಡಬಹುದಷ್ಟೇ.

No comments:

Post a Comment