ಡಾ. ಅಶೋಕ್. ಕೆ. ಆರ್
ಕೆಲವೊಂದು ಪುಸ್ತಕಗಳೇ ಹಾಗೆ, ನೇರಾನೇರ ಸಂಬಂಧವಿಲ್ಲದಿದ್ದರೂ ನಮ್ಮ ನಡುವಿನದೇ ಪುಸ್ತಕವೆನಿಸಿಬಿಡುತ್ತದೆ. ನಮ್ಮದಲ್ಲದ ಸಂಸ್ಕೃತಿಯ, ನಮ್ಮ ದೇಶದ್ದಲ್ಲದ, ನಮ್ಮ ಖಂಡದ್ದೂ ಅಲ್ಲದ ದೂರದ ದೇಶವೊಂದರ ಲೇಖಕಿಯ ಬರಹಗಳು ನಮ್ಮ ಸುತ್ತಮುತ್ತಲಿನ ಸಮಾಜಕ್ಕೇ ಕನ್ನಡಿ ಹಿಡಿದಂತಿರುವುದನ್ನು ಮೆಚ್ಚಬೇಕೋ ಅಲ್ಲಿರುವ ಸಂಕಷ್ಟ ದುಮ್ಮಾನಗಳು ನಮ್ಮಲ್ಲೂ ಇರುವುದಕ್ಕೆ ದುಃಖ ಪಡಬೇಕೋ ಎನ್ನುವ ಗೊಂದಲಗಳೊಂದಿಗೆಯೇ ಪುಸ್ತಕ ಓದಿ ಮುಗಿಸಿದೆ.
ಈ ಪುಸ್ತಕದ ವ್ಯಾಪ್ತಿ ಹಿರಿದಾದುದು. ಕಪ್ಪು ಜನರ ಬವಣೆ, ಕಪ್ಪು ಮಹಿಳೆಯರ ಬವಣೆ, ಸ್ತ್ರೀವಾದ, ಬದಲಾದ ಸಮಾಜದಲ್ಲಿ ಶೋಷಣೆಯ ರೂಪಗಳೂ ಮಾರ್ಪಾಡಾಗುವುದು, ಒಂದು ಕಾಲದಲ್ಲಿ ಶೋಷಣೆಗೊಳಗಾಗಿದ್ದವರೆ ಮತ್ತೊಂದು ಹಂತದಲ್ಲಿ ಶೋಷಕರಾಗುವ ಬಗೆ…ಇವೆಲ್ಲದರ ಜೊತೆಗೆ ಮನುಕುಲದ ಅವನತಿಗೆ ಬಹುಮಖ್ಯ ಕಾರಣವಾದ ಸ್ವಪ್ರೀತಿಯ ಕೊರತೆಯ ಬಗೆಗಿನ ಒಳನೋಟಗಳನ್ನು ಕೊಡುವ ಪುಸ್ತಕ ಬೆಲ್ ಹುಕ್ಸ್ರವರ “ಬಂಧ ಮುಕ್ತ, ಪ್ರೀತಿಯ ಹುಡುಕಾಟದಲ್ಲಿ ದಮನಿತರು”. ಶ್ರೀಮತಿ ಎಚ್.ಎಸ್ರವರ ಸಶಕ್ತ ಅನುವಾದವು ಪುಸ್ತಕವನ್ನು ಮತ್ತಷ್ಟು ಆಪ್ತಗೊಳಿಸುತ್ತದೆ.
ಈ ಆಪ್ತಗೊಳಿಸುವಿಕೆಯು ಖುಷಿ ಕೊಡುವ ಸಂಗತಿಯಂತೂ ಖಂಡಿತ ಅಲ್ಲ. ನಮ್ಮಲ್ಲಿ ವರ್ಣಬೇಧ ನೀತಿಯಿಲ್ಲ, ಆದರೆ ಅದರಷ್ಟೇ ಅಥವಾ ಅದಕ್ಕಿಂತಲೂ ಹೀನಾಯವಾದ ಜಾತಿ ಬೇಧ ಪದ್ಧತಿ ನಮ್ಮಲ್ಲಿದೆ. ಕಪ್ಪು ಜನರು ಮತ್ತು ಬಿಳಿಯ ಜನರೆಂದು ಬರೆದಿರುವ ಕಡೆಯಲ್ಲೆಲ್ಲ ಶೋಷಿತ ಜನರು ಮತ್ತು ಶೋಷಕ ಜಾತಿಯ ಜನರೆಂದು ಬದಲಿಸಿಬಿಟ್ಟರೆ ನಮ್ಮಲ್ಲಿ ನಡೆದಿರುವ ಸಂಗತಿಯಂತೆಯೇ, ನಮ್ಮ ಸಮಾಜದ ದಮನಿತರ ಕತೆಯಂತೆಯೇ ಭಾಸವಾಗುತ್ತದೆ. ವರ್ಣಬೇಧ ಕಡಿಮೆಯಾಗಿರುವ ವೇಗದಲ್ಲಿಯೇ ಜಾತಿಬೇಧವು ಕಡಿಮೆಯಾಗಿದೆಯೇ ಎಂದು ಪ್ರಶ್ನಿಸಿಕೊಂಡರೆ ನಿರಾಶೆಯ ಉತ್ತರವೇ ದೊರಕೀತು ಅಲ್ಲವೇ.
ಇನ್ನು ವರ್ಣ ಜಾತಿ ಧರ್ಮಗಳನ್ನು ಮೀರಿ ಸಾರ್ವತ್ರಿಕವಾಗಿರುವ ಪುರುಷ ಅಹಂಕಾರದ ಬಗ್ಗೆ ಹೊಸನೋಟಗಳನ್ನು ಕೊಡುವ ಬಹಳಷ್ಟು ಲೇಖನಗಳಿವೆ. ಪುರುಷರ ಅಹಮಿಕೆಯ ಕೂಪದಿಂದ ಹೊರಬರಬೇಕಿರುವುದು ಮಹಿಳೆಯರಿಗೆಷ್ಟು ಅನಿವಾರ್ಯವೋ ಪುರುಷರಿಗೂ ಅಷ್ಟೇ ಅವಶ್ಯಕ, ಅಷ್ಟೇ ಅನಿವಾರ್ಯ. ಮನೆ ಮನಗಳಲ್ಲಿ ಗಂಡಸಿನ ʻಸ್ಥಾನಮಾನʼವನ್ನು ನಿರ್ಧರಿಸುವುದರಲ್ಲಿ ಮನೆಯಲ್ಲಿನ ಹಿರಿಯ ಗಂಡಸರ – ಯಜಮಾನರ – ಪಾತ್ರ ಎಷ್ಟು ಮುಖ್ಯವಾಗಿದೆಯೋ ಅದೇ ಮನೆಯಲ್ಲಿರುವ ಹಿರಿಯ ಹೆಂಗಸರ ಪಾತ್ರವೂ ಅಷ್ಟೇ ಪ್ರಮುಖವಾಗಿದೆ. ಇಲ್ಲಿ ʻಯಜಮಾನʼ ಗಂಡಸರನ್ನಷ್ಟೇ ದೂಷಿಸಬೇಕೋ, ಮೇಲಾಟದ ಸಂಪ್ರದಾಯ ಮುಂದುವರೆಯಲು ತನ್ನದೇ ಕೊಡುವೆ ನೀಡುತ್ತಿರುವ ಹಿರಿಯ ಹೆಂಗಸರನ್ನು ದೂಷಿಸಬೇಕೋ? ಅಥವಾ ಇಬ್ಬರಲ್ಲಿಯೂ ಈ ರೀತಿಯ ಮೇಲು ಕೀಳಿನ ಮನೋಭಾವವನ್ನು ತುಂಬಿಬಿಟ್ಟಿರುವ ಸಮಾಜದ ನೀತಿರೀತಿಗಳನ್ನು ದೂಷಿಸಬೇಕೋ?
ಎಷ್ಟೇ ಪ್ರಗತಿಪರ, ಓಪನ್ ಮೈಂಡೆಡ್ ಅನ್ನಿಸಿಕೊಂಡವರಲ್ಲಿಯೂ ಉಳಿದುಬಿಟ್ಟಿರುವ ಸಂಕುಚಿತ ಮನೋಭಾವಗಳ ಕುರಿತಾಗಿಯೂ ಪುಸ್ತಕ ಮಾತನಾಡುತ್ತದೆ. ಕಪ್ಪು ಜನರ ಪರವಾಗಿ ಕಪ್ಪು ಮಹಿಳೆಯರ ಪರವಾಗಿ ಚಳುವಳಿಯಲ್ಲಿ ತೊಡಗಿಸಿಕೊಂಡವರೂ ಸಹ ತಮಗೆ ಅರ್ಥವಾಗದ, ತಮಗೆ ಒಪ್ಪಿತವಾಗುತ್ತಿಲ್ಲವೆಂದ ಏಕೈಕ ಕಾರಣಕ್ಕೆ ʻಗೇʼಗಳ ಬಗ್ಗೆ, ʻಲೆಸ್ಬಿಯನ್ನರʼ ಬಗ್ಗೆ ತುಚ್ಛ ಭಾವನೆಗಳನ್ನು ಬೆಳೆಸಿಕೊಂಡುಬಿಡುತ್ತಾರೆ. ನಮ್ಮಲ್ಲಿನ ಸಣ್ಣತನಗಳನ್ನು ಒತ್ತಾಯಪೂರ್ವಕವಾಗಿಯಾದರೂ ಕಳೆದುಕೊಳ್ಳದಿದ್ದರೆ ನಮ್ಮ ಪ್ರಗತಿಪರತೆಗೆ, ಓಪನ್ ಮೈಂಡೆಡ್ನೆಸ್ಗೆ ಬೆಲೆ ಇರುತ್ತದೆಯೇ?
No comments:
Post a Comment