Mar 13, 2024

ಕಣ್ಣು ಮಿಟುಕಿಸದೇ ನೋಡಿಸಿಕೊಳ್ಳುವ 'ಬ್ಲಿಂಕ್'


ಡಾ. ಅಶೋಕ್. ಕೆ. ಆರ್

ಟೈಂ ಟ್ರಾವೆಲ್ ಹಿನ್ನೆಲೆಯ ಕಲ್ಪನಾತ್ಮಕ - ವೈಜ್ಞಾನಿಕ (?) ಚಿತ್ರಕ್ಕೆ ಹೆಚ್ಚಿನ ಬಜೆಟ್ ಅತ್ಯವಶ್ಯವಿದೆ ಎನ್ನುವ ಸಾಮಾನ್ಯ ತಿಳುವಳಿಕೆಯನ್ನು ಸುಳ್ಳಾಗಿಸುವ ಚಿತ್ರ ಬ್ಲಿಂಕ್. ಗಟ್ಟಿ ಚಿತ್ರಕತೆಯಿದ್ದು ಉತ್ತಮ ನಿರ್ದೇಶನವಿದ್ದರೆ ಕಡಿಮೆ ಬಜೆಟ್ಟಿನಲ್ಲಿ, ಸುತ್ತಮುತ್ತಲಿರುವ ಕೆಲವೊಂದು ಜಾಗಗಳನ್ನು ಬಳಸಿಕೊಂಡೇ ಒಂದು ಉತ್ತಮ, ಉತ್ತಮವೇನು ಅತ್ಯುತ್ತಮ ಚಿತ್ರವನ್ನೇ ಜನರ ಮುಂದಿಡಬಹುದೆಂದು ಬ್ಲಿಂಕ್ ನಿರ್ದೇಶಕ ಶ್ರೀನಿಧಿ ತೋರಿಸಿಕೊಟ್ಟಿದ್ದಾರೆ.

ಅನಾದಿ ಕಾಲದಿಂದಲೂ ಆಗೊಮ್ಮೆ ಈಗೊಮ್ಮೆ ಎಲ್ಲಾ ಭಾಷೆಗಳಲ್ಲಿ ಟೈಂ ಟ್ರಾವೆಲ್ನ ಕುರಿತಾದ ಚಿತ್ರಗಳು ಮೂಡಿಬರುತ್ತಲೇ ಇವೆ. ವಾಸ್ತವದಲ್ಲಿರುವುದನ್ನು ಬಿಟ್ಟು ಹಿಂದಿನ ಮುಂದಿನ ಸಮಯಕ್ಕೆ ಹೋಗುವಾಸೆ ಮನುಷ್ಯನಿಗೆ ಇದ್ದೇ ಇದೆಯಲ್ಲ! ಲಾಜಿಕ್ಕಾಗಿ ನೋಡಿದರೆ ಟೈಂ ಟ್ರಾವೆಲ್ ಅನ್ನೋದೆ ಇಲ್ಲಾಜಿಕಲ್! ಹಂಗಾಗಿ ಟೈಂ ಟ್ರಾವೆಲ್ ಯಾವ ರೀತಿ ಮಾಡಿದರು ಅನ್ನೋದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬಾರದು. ವಾಚ್ ಕಟ್ಟಿಕೊಂಡು, ಟೈಂ ಮೆಷೀನಿನ ಒಳಗೆ ಕುಳಿತುಕೊಂಡು, ಏನನ್ನೋ ಕುಡಿದುಹೀಗೆ ಹತ್ತಲವು ರೀತಿಯಲ್ಲಿ ಟೈಂ ಟ್ರಾವೆಲ್ಲನ್ನು ಚಿತ್ರಗಳಲ್ಲಿ ತೋರಿಸಿದ್ದಾರೆ, ಬ್ಲಿಂಕ್ ಚಿತ್ರದಲ್ಲಿ ಅಡ್ವಾನ್ಸ್ಡ್ ಲ್ಯಾಪ್ ಟಾಪಿನ ಮುಂದೆ ಕುಳಿತುಕೊಂಡು ದ್ರವ್ಯವೊಂದನ್ನು ಕಣ್ಣಿಗೆ ಎರಡು ತೊಟ್ಟು ಹಾಕಿಕೊಂಡರೆ ಸಾಕು ನಮಗೆ ಯಾವ ಹಿಂದಿನ ಕಾಲಕ್ಕೆ ಹೋಗಬೇಕೋ ಅಲ್ಲಿಗೆ ಹೋಗಿಬಿಡಬಹುದು. ಹೇ! ಅಷ್ಟು ಸುಲಭದಲ್ಲಿ ಟೈಂ ಟ್ರಾವೆಲ್ ಮಾಡಿಬಿಡಬಹುದಾ ಅಂತೆಲ್ಲ ಕೇಳಬೇಡಿ. ಟೈಂ ಟ್ರಾವೆಲ್ ಅನ್ನೋದೆ ಅಸಾಧ್ಯವಾಗಿರುವಾಗ ಅಷ್ಟು ಸುಲಭದಲ್ಲೋ ಇಷ್ಟು ಕಷ್ಟದಲ್ಲೋ ಅನ್ನೋದೆಲ್ಲ ಇಲ್ಲಾಜಿಕಲ್ ಪರಿಧಿಯೊಳಗೇ ಇರ್ತದೆ!

ಒಂದು ಇಲ್ಲಾಜಿಕಲ್ ಕತೆಯನ್ನು ಕಣ್ಣುಮಿಟುಕಿಸದೇ ನೋಡುವಂಗೆ ಮಾಡಿರುವುದು ಚಿತ್ರಕತೆ. ಥ್ರಿಲ್ಲರ್ ಚಿತ್ರವೊಂದು ಥ್ರಿಲ್ಲರ್ ಅಂಶಕ್ಕೆ ಬಿಟ್ಟು ಬೇರ್ಯಾವುದಕ್ಕೂ ಪ್ರಾಮುಖ್ಯತೆ ಕೊಡದೆ ಹೋಗುವ ಸಾಧ್ಯತೆಗಳಿರುತ್ತವೆ. ಮತ್ತದು ಒಳ್ಳೆಯದು ಕೂಡ. ಥ್ರಿಲ್ಲರ್ ಚಿತ್ರದಲ್ಲಿ ಇದ್ದಕ್ಕಿದ್ದಂತೆ ನಾಯಕ - ನಾಯಕಿ ಹಾಡನ್ನಾಡಿಬಿಡುವುದು ಚಿತ್ರದ ಓಘಕ್ಕೆ ಅಡ್ಡಿಯಾಗಿಬಿಡುವುದುಂಟು. ಹಾಡಿರಲಿ, ನಾಯಕ - ನಾಯಕಿ ಇಬ್ಬರೂ ಇದ್ದು ಅವರ ಮಧ್ಯೆ ಪ್ರೇಮಾಂಕುರವಾಗುವುದೇ ಅಭಾಸದಂತೆ ಕಾಣಿಸಿವುದುಂಟು. ಬ್ಲಿಂಕ್ ಅಲ್ಲಿ ನಾಯಕ - ನಾಯಕಿ ಇದ್ದಾರೆ, ಅವರ ನಡುವೆ ಸಾಕಾಗುವಷ್ಟು ಪ್ರೇಮವಿದೆ, ಪ್ರಸ್ತುತದ ಕತೆಯಲ್ಲಷ್ಟೇ ಅಲ್ಲ ಹಿಂದಿನ ಸಮಯಕ ಕತೆಯಲ್ಲೂ ನಾಯಕ - ನಾಯಕಿ ಇದ್ದಾರೆ, ಅವರ ನಡುವೂ ಪ್ರೇಮವಿದೆ. ಈಗಿನ ಪ್ರೇಮಕ್ಕೆ ಪೂರಕವಾಗಿ ನಾಟಕಗಳಿದ್ದರೆ, ಆಗಿನ ಪ್ರೇಮಕ್ಕೆ ಪೂರಕವಾಗಿ ಸಾಹಿತ್ಯವಿದೆ, ಕನ್ನಡ ಚಿತ್ರಗಳಲ್ಲಿ ಅತ್ಯಪರೂಪಕ್ಕೆ ಕಾಣಿಸುವ ಮಂತ್ರಮಾಂಗ್ಯದ ಮದುವೆಯಿದೆ! ಹಾಡುಗಳೂ ಚಿತ್ರದಲ್ಲಿವೆ. ಚಿತ್ರದ ಭಾಗವಾಗಿ ಹಾಡುಗಳಿವೆಯೇ ಹೊರತು ಹಾಡಿಗಾಗಿ ಚಿತ್ರಕತೆಯನ್ನು ಬದಲಿಸಿಲ್ಲ ಅನ್ನುವುದು ಸಮಾಧಾನದ ಸಂಗತಿ. ಚಿತ್ರದಲ್ಲಿ ಎಲ್ಲರ ನಟನೆಯೂ ಮೆಚ್ಚುವಂತಿದೆ. ಚಿತ್ರದುದ್ದಕ್ಕೂ ಆವರಿಸಿಕೊಂಡಿರುವ ನಾಯಕನ ನಟನೆ ಅದ್ಭುತವಾಗಿದೆ ಎಂದೇ ಹೇಳಬಹುದು.

ಸೈ ಫೈ ಚಿತ್ರ ಮಾಡಲು ಲೆಕ್ಕವಿಲ್ಲದಷ್ಟು ಹಣ ಖರ್ಚು ಮಾಡುವ ಚಿತ್ರಗಳು ಮೂಡಿಬರುತ್ತಿರುವ ಸಂದರ್ಭದಲ್ಲಿ ಕಡಿಮೆ ಬಜೆಟ್ಟಿನಲ್ಲಿ ಕೂಡ ಪ್ರೇಕ್ಷಕರನ್ನು ಕೊನೆಯ ನಿಮಿಷದವರೆಗೂ ಹಿಡಿದಿಡುವಂತಹ ಚಿತ್ರವನ್ನು ಮಾಡಬಹುದೆಂಬುದಕ್ಕೆ ಬ್ಲಿಂಕ್ ಉದಾಹರಣೆ. ಕತೆ ಚಿತ್ರಕತೆ ನಿರ್ದೇಶನ ಮುಖ್ಯ ಬಜೆಟ್ಟೊಂದೇ ಅಲ್ಲ ಎನ್ನುವುದಕ್ಕೂ ಬ್ಲಿಂಕ್ ಉದಾಹರಣೆ.

 ಚಿತ್ರ ಥಿಯೇಟರುಗಳಲ್ಲಿ ಗೆಲ್ಲುತ್ತದಾ? ಹೇಳುವುದು ಕಷ್ಟ. ಮೊದಲ ದಿನದ ಶೋಗೆ ನಾನು ಹೋಗಿದ್ದಾಗ ಚಿತ್ರತಂಡದವರು ಮತ್ತವರ ಪರಿಚಿತರನ್ನು ಬಿಟ್ಟರೆ ಇದ್ದವರು ನಾಲ್ಕು ಮತ್ತೊಂದು ಮಂದಿ ಅಷ್ಟೇ. ಎರಡು ದಿನ ಕಳೆದ ಮೇಲೆ ಚಿತ್ರ ನೋಡಲು ಹೆಚ್ಚಿನ ಜನರು ಬರುತ್ತಿದ್ದಾರೆಂದು ಸಾಮಾಜಿಕ ಜಾಲತಾಣಗಳಿಂದ ತಿಳಿಯಿತು. ಜನರು ಬರುವ ಸಾಧ್ಯತೆಯಿದ್ದರೂ ಪ್ರತಿ ವಾರ ಏಳೆಂಟು ಕನ್ನಡ ಚಿತ್ರಗಳು ತೆರೆಗೆ ಬರುತ್ತಿರುವುದನ್ನು ನೋಡಿದರೆ ಬ್ಲಿಂಕ್ ಚಿತ್ರಕ್ಕೆ ಥಿಯೇಟರುಗಳು ಸಿಗುತ್ತದಾ ಕಾದು ನೋಡಬೇಕಷ್ಟೇ.

No comments:

Post a Comment