ಚಿತ್ರಮೂಲ: ಎಕನಾಮಿಕ್ ಟೈಮ್ಸ್ |
ಕಾಡ ನಡುವಿನಲ್ಲಿ ಮರಿಯಾನೆಯೊಂದು ಹಿಂಡಿನಿಂದ ಬೇರ್ಪಟ್ಟು ಒಂಟಿಯಾಗುತ್ತದೆ. ಆಹಾರ ಹುಡುಕುವ, ನೀರನ್ನರಸುವ ಗುಣಗಳನ್ನು ಹಿಂಡಿನ ಹಿರಿಯರಿಂದ ಇನ್ನೂ ಕಲಿಯದ ಮರಿಯಾನೆಗೆ ಜೀವವುಳಿಸಿಕೊಳ್ಳುವುದು ಕಷ್ಟದ ಸಂಗತಿಯೇ ಸರಿ. ಮರಿಯಾನೆಯ ಕೂಗಾಟ ಅರಣ್ಯ ಇಲಾಖೆಯ ಕಿವಿಗೆ ತಲುಪುತ್ತದೆ. ಕಾಡಿನ ನಿಯಮಗಳಿಂದ ರಕ್ಷಿಸಲ್ಪಟ್ಟ ಈ ಮರಿಯಾನೆಯನ್ನು ಸಾಕುವ ಜವಾಬ್ದಾರಿಯನ್ನು ಇಲಾಖೆಯ ಕೆಲಸಗಾರರಾದ, ಮೂಲತಃ ಆದಿವಾಸಿಗಳಾದ ಇಬ್ಬರಿಗೆ ವಹಿಸಲಾಗುತ್ತದೆ. ಆ ಈರ್ವರ ನಡುವಿನ ವೈಯಕ್ತಿಕ ಸಂಬಂಧ, ಆನೆಯನ್ನು ಸಾಕಿ ಸಲಹುವ ಪರಿ, ಆನೆ ಜೊತೆಗಿನ ಮಮಕಾರದ ಸಂಬಂಧವೇ "ದಿ ಎಲಿಫೆಂಟ್ ವಿಸ್ಪರರ್ಸ್" ಸಾಕ್ಷ್ಯಚಿತ್ರದ ಹೂರಣ.
ಆಸ್ಕರ್ರಿಗೆ ಭಾರತದಿಂದ ಕಳುಹಿಸಲ್ಪಟ್ಟ ಸಾಕ್ಷ್ಯಚಿತ್ರಕ್ಕೆ ಅತ್ಯುತ್ತಮವೆಂಬ ಪ್ರಶಸ್ತಿಯೂ ದೊರೆತು ಖ್ಯಾತಿಗಳಿಸಿದ ಚಿತ್ರ ನೆಟ್ ಫ್ಲಿಕ್ಸ್ ನಲ್ಲಿ ನೋಡಲು ಲಭ್ಯವಿದೆ. ಆಸ್ಕರ್ ದೊರೆಯುವ ಮುಂಚೆ ಈ ಸಾಕ್ಷ್ಯಚಿತ್ರವನ್ನು ವೀಕ್ಷಿಸಿದ್ದೆ. ನೋಡಿದ ಯಾರಿಗಾದರೂ ಕಣ್ಣಂಚಿನಲ್ಲಿ ನೀರು ತರಿಸುವ ಚಿತ್ರವಿದು. ನಾನೂ ಅದಕ್ಕೆ ಹೊರತಲ್ಲ.
ಚಿತ್ರ ಮೆಚ್ಚುಗೆಯಾದರೂ, ಚಿತ್ರದಲ್ಲಿನ ನೈಜತೆ ಇಷ್ಟವಾದರೂ, ಈ ಚಿತ್ರಕ್ಕೆ ಆಸ್ಕರ್ ದೊರೆತಿರುವುದಕ್ಕೆ ಖುಷಿಯಾದರೂ, ಮನಸ್ಸಿನ ಮೂಲೆಯಲ್ಲಿ ಕಾಡಿನ ಸಹಜ ನ್ಯಾಯಕ್ಕೆ ವಿರುದ್ಧವಾದ ಸಂದೇಶ ನೀಡುವ ಚಿತ್ರವಿದಲ್ಲವೇ, ಅರಣ್ಯದ ಪರಿಸರದಲ್ಲಿ ಮಾನವನ ಹಸ್ತಕ್ಷೇಪಕ್ಕೆ ಅಧಿಕೃತತೆಯ ಮುದ್ರೆಯನ್ನೊತ್ತುವ ಚಿತ್ರವಿದಲ್ಲವೇ ಎನ್ನಿಸಿದ್ದು ಹೌದು. ನಮ್ಮ ಅರಣ್ಯ ಉಳಿಸುವ ಹಪಾಹಪಿ ಹೇಗೆ ದೊಡ್ಡ 'ಸುಂದರ' ಪ್ರಾಣಿಗಳ ಕುರಿತಾಗಷ್ಟೇ ಇದೆ ಎನ್ನುವುದರ ಸೂಚಕ ಈ ಸಾಕ್ಷ್ಯಚಿತ್ರ.
ಅರಣ್ಯದಲ್ಲಿ ಹುಲಿ ಆನೆ ಕಾಟಿಯಂತಹ ಬೃಹತ್ ಪ್ರಾಣಿಗಳು ಸಹಜ ಕಾರಣಗಳಿಂದ ಸಾವನ್ನಪ್ಪಿದಾಗ ಆ ಸತ್ತ ಪ್ರಾಣಿಯ ಕಳೇಬರವನ್ನು ಸಂಪ್ರದಾಯಬದ್ಧವಾಗಿ (ಮನುಷ್ಯನ ಸಂಪ್ರದಾಯಗಳು ಎಂದು ಹೇಳುವ ಅವಶ್ಯಕತೆಯಿಲ್ಲ ಎಂದು ಭಾವಿಸುತ್ತೇನೆ!) ವಿಲೇವಾರಿ ಮಾಡುವ ಮೂಲಕ ಕಳೆಬರದ ಮೇಲೆ ಅವಲಂಬಿತವಾಗಿರುವ ಎಷ್ಟೋ ಪ್ರಾಣಿ ಪಕ್ಷಿಗಳ, ಚಿಕ್ಕ ಪುಟ್ಟ ಕ್ರಿಮಿಕೀಟಗಳ, ಫಂಗಸ್ಸುಗಳ ಆಹಾರವನ್ನು ನಾವು ಕಸಿದುಕೊಳ್ಳುತ್ತಿದ್ದೇವೆ. ಈ ಸಂಪ್ರದಾಯ ಈಗಲೂ ಚಾಲ್ತಿಯಲ್ಲಿದೆಯಾದರೂ ಕರ್ನಾಟಕದ ಅರಣ್ಯ ಇಲಾಖೆ ಇತ್ತೀಚೆಗೆ ಕಾಡಿನಲ್ಲಿ ಸತ್ತ ಪ್ರಾಣಿಗಳನ್ನು (ಹುಲಿಯೊಂದನ್ನು ಹೊರತುಪಡಿಸಿ) ಅಂತ್ಯಸಂಸ್ಕಾರ ಮಾಡದೆ ಕಾಡಿನಲ್ಲೇ ಬಿಡುವ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಕಾಡಿನ ಪರಿಸರದ ನ್ಯಾಯವನ್ನು ತನ್ಮೂಲಕ ಅರಣ್ಯ ಇಲಾಖೆ ಕಾಪಿಡಲು ಪ್ರಯತ್ನಿಸಿದೆ.
ಈ ಹಿನ್ನೆಲೆಯಲ್ಲಿ ನೋಡಿದಾಗ ಕಾಡಿನಲ್ಲಿ ಹತ್ತಲವು ಕಾರಣಗಳಿಂದ ಬೇರ್ಪಟ್ಟ ಮರಿಯಾನೆಯನ್ನು ಸಾಕಿ ಸಲಹುವ ನಿರ್ಧಾರವೂ ಕಾಡಿನ ನ್ಯಾಯಕ್ಕೆ ವಿರುದ್ಧವಾದುದಲ್ಲವೇ? ಆಹಾರ ಹುಡುಕಲಾಗದೇ, ನೀರನ್ನರಸಲಾಗದೆ ಮರಿಯಾನೆಯು ಸಾವನ್ನಪ್ಪಿ ಕಳೇಬರವನ್ನು ಆಧರಿಸಿದ ಪ್ರಾಣಿಗಳಿಗೆ ಆಹಾರವಾಗುತ್ತಿತ್ತು. ಅಥವಾ ಕಾಡಿನ ನ್ಯಾಯಕ್ಕೆ ಸವಾಲೊಡ್ಡಿ ಸ್ವಸಾಮರ್ಥ್ಯದಿಂದ ಜೀವ ಉಳಿಸಿಕೊಂಡು, ತನ್ನ ಜೀವವುಳಿಸಲು ನೆರವಾದ ವಂಶವಾಹಿನಿಯು ಮುಂದಿನ ಜನಾಂಗಕ್ಕೆ ವರ್ಗವಾಗಿ ಅತ್ಯುತ್ತಮ ತಳಿಯ ಆನೆಯ ಕುಟುಂಬವೊಂದು ಕಾಡಿನಲ್ಲಿ ಅರಳುತ್ತಿತ್ತು. ಇವೆರಡೂ ಸಾಧ್ಯತೆಗಳು ಮಾನವನ ಹಸ್ತಕ್ಷೇಪದಿಂದ ಇಲ್ಲವಾಗಿದೆ.
ಹೌದು, ಆನೆಗಳನ್ನು ಅರಣ ಇಲಾಖೆ ಇವತ್ತಿಗೂ ಸಾಕುವುದಕ್ಕೆ ಸಾಕಷ್ಟು ಕಾರಣಗಳಿವೆ. ಕಾಡಂಚಿನ ಗ್ರಾಮಗಳಿಗೆ ಲಗ್ಗೆ ಇಡುವ ಕಾಡಾನೆಗಳನ್ನು ಓಡಿಸಲು, ಮರಮಟ್ಟುಗಳನ್ನು ಕಾಡೊಳಗಿಂದ ರಸ್ತೆ ಬದಿಗೆ ಸಾಗಿಸಲು, ದೇವಸ್ಥಾನಗಳಲ್ಲಿ ಭಕ್ತರಿಗೆ ಆಶೀರ್ವಾದ ಮಾಡಲು, ದಸರಾದಂತಹ ಹಬ್ಬಗಳಲ್ಲಿ ನಮ್ಮ ನೆಚ್ಚಿನ ದೇವರುಗಳನ್ನು ಹೊತ್ತು ನಮ್ಮ ಕಣ್ಮನ ತಣಿಸಲು, ಉಡುಗೊರೆಯ ರೂಪದಲ್ಲಿ ಕೊಡಲು ನಮಗೆ ಆನೆಗಳು ಬೇಕೇ ಬೇಕು. ಹಿಂದಿನ ಕಾಲದಲ್ಲಿ ಆನೆಗಳನ್ನು ಯುದ್ಧಕ್ಕೆ, ಮನುಷ್ಯರ ಯುದ್ಧಕ್ಕೆ ಬಳಸಲಾಗುತ್ತಿತ್ತು. ಮನುಷ್ಯರಿಗೂ ಆನೆಗೂ ಶತಮಾನಗಳಿಂದ ಅವಿನಾಭಾವ ಸಂಬಂಧ ಇರುವುದು ಹೌದಾದರೂ ಇವತ್ತಿಗೂ ಆನೆ ಕಾಡು ಪ್ರಾಣಿಯ ಪಟ್ಟಿಯಲ್ಲಿ ಬರುತ್ತದೆಯೇ ಹೊರತು ಸಾಕುಪ್ರಾಣಿಯ ಪಟ್ಟಿಯಲ್ಲಲ್ಲ.
ಸಾಕ್ಷ್ಯಚಿತ್ರ ನೋಡಿ ಮನುಷ್ಯ ತನ್ನ " ಮಾನವೀಯ" ಗುಣವನ್ನು ಕಾಡುಪ್ರಾಣಿಯ ಮೇಲೆ ತೋರುವ ಪರಿಯನ್ನು ಕಂಡು ಕಣ್ಣು ತೇವಗೊಳಿಸಿಕೊಳ್ಳುವಾಗ ಇದು ಅರಣ್ಯ ರಕ್ಷಣೆಯ ಮೂಲೋದ್ದೇಶಕ್ಕೆ ವಿರುದ್ಧವಾದ ಸಂದೇಶ ಕೊಡುವ ಚಿತ್ರ ಎಂಬರಿವಾದರೂ ನಮ್ಮಲ್ಲೊಮ್ಮೆ ಮೂಡಬೇಕಿದೆ.
No comments:
Post a Comment