-
ಡಾ. ಅಶೋಕ್. ಕೆ. ಆರ್
ಪೂರ್ವಿಕಾಳ
ಹೆಸರಿನಿಂದ (ಹೆಸರು ಬದಲಿಸಲಾಗಿದೆ) ಫೇಸ್ಬುಕ್ಕಿನಲ್ಲಿ ಸ್ನೇಹದ ಕೋರಿಕೆ ಬಂದಿತ್ತು. ನಲವತ್ತು ಚಿಲ್ಲರೆ ಮಂದಿ ಪರಸ್ಪರ ಸ್ನೇಹಿತರ ಪಟ್ಟಿಯಲ್ಲಿದ್ದರು. ಮುಂಚಿನಂತೆ ಬಂದೆಲ್ಲ ಸ್ನೇಹಿತರ ಕೋರಿಕೆಯನ್ನು ಒಪ್ಪಿಕೊಳ್ಳುತ್ತಿರಲಿಲ್ಲವಾದ್ದರಿಂದ ಪೂರ್ವಿಕಾಳ
ಪ್ರೊಫೈಲಿನ ಮೇಲೆ ಕ್ಲಿಕ್ಕಿಸಿದೆ. ಸುಳ್ಯದ ವಿದ್ಯಾರ್ಥಿನಿಯ ಫೋಟೋ ಇದ್ದ
ಪ್ರೊಫೈಲದು. ಸುಳ್ಯದ ಹಳೆಯ ವಿದ್ಯಾರ್ಥಿಗಳೇ ಪರಸ್ಪರ ಸ್ನೇಹಿತರ ಪಟ್ಟಿಯಲ್ಲಿದ್ದರು.
ಸ್ನೇಹದ ಕೋರಿಕೆಯನ್ನು ಒಪ್ಪಿಕೊಂಡ ದಿನದ ನಂತರ ಪೂರ್ವಿಕಾಳ ಪ್ರೊಫೈಲಿನಿಂದ ಮೆಸೆಂಜರ್ನಲ್ಲಿ ʻಹಾಯ್ʼ ಎಂದೊಂದು ಮೆಸೇಜು ಬಂದಿತ್ತು.
ಮೆಸೇಜುಗಳನ್ನು ಆಗಾಗ್ಯೆ ನೋಡುವ ಅಭ್ಯಾಸವಿಲ್ಲದ ಕಾರಣ ಒಂದಷ್ಟು ಸಮಯದ ನಂತರ ʻಹಾಯ್ʼ ಎಂದು ಉತ್ತರಿಸಿ ʻಹೇಗಿದ್ದೀಯಪ್ಪ?ʼ ಎಂದು ಇಂಗ್ಲೀಷಿನಲ್ಲಿ ಕೇಳಿದೆ. ಪೂರ್ವಿಕಾ
ಕೇರಳದ ಹುಡುಗಿ ಎಂದು ನೆನಪಿತ್ತು. ʻನಾನು ಚೆನ್ನಾಗಿದ್ದೀನಿ. ನೀವು ಹೇಗಿದ್ದೀರಿ?ʼ ಎಂದು ಕೇಳಿದವಳು ನನ್ನ ಮರುತ್ತರಕ್ಕೂ ಕಾಯದೆ ನಿಮ್ಮ ವಾಟ್ಸಪ್
ನಂಬರ್ ಕಳುಹಿಸಿ ಅಲ್ಲಿಯೇ ಚಾಟ್ ಮಾಡುವ ಎಂದು ಕೇಳಿದಳು. ಓಹ್! ಇದು
ಅಸಲಿ ಖಾತೆ ಇರಲಿಕ್ಕಿಲ್ಲ ಎಂದರಿವಾಯಿತಾಗ. ಹಳೆಯ ವಿದ್ಯಾರ್ಥಿಗಳು ಯಾವುದಾದರೂ
ವಿಷಯದ ಬಗ್ಗೆ ಮಾಹಿತಿ ಕೇಳಲು, ಅಥವಾ ಬಹಳ ವರುಷಗಳ ನಂತರ ಮಾತನಾಡಲು ಫೋನ್
ನಂಬರ್ ಕೇಳುವುದು ಅಪರೂಪವೇನಲ್ಲ. ಆದರೆ ಚಾಟ್ ಮಾಡಲು ವಾಟ್ಸಪ್ ನಂಬರ್
ಕೇಳುವುದು ಸಾಮಾನ್ಯ ಸಂಗತಿಯೇನಲ್ಲ. ಪರಿಚಿತರ ಫೋಟೋ ಬಳಸಿಕೊಂಡು
ನಕಲಿ ಖಾತೆ ಸೃಷ್ಟಿಸಿ ಸ್ನೇಹದ ಕೋರಿಕೆ ಕಳುಹಿಸಿ ಮೆಸೆಂಜರ್ನಲ್ಲಿ ʻತುರ್ತು ಅವಶ್ಯಕತೆ ಇದೆ. ಒಂದೈದು ಸಾವಿರ ಗೂಗಲ್
ಪೇ ಮಾಡಿʼ ಎಂದು
ಬೇಡಿಕೆ ಇಡುವ ಸ್ಕ್ಯಾಮು ಹೆಚ್ಚಿದೆ. ಇಲ್ಲಿ ಹಣದ ಬೇಡಿಕೆಯೂ ಇಲ್ಲದೆ ವಾಟ್ಸಪ್
ನಂಬರ್ ಕೇಳುತ್ತಿದ್ದಾರಲ್ಲಾ? ಇದ್ಯಾವ ಹೊಸ ಮೋಸದ ಯೋಜನೆಯಿರಬಹುದು ಎಂಬ ಕುತೂಹಲವುಂಟಾಯಿತು. ನವಮೋಸದ ಪರಿ ಹೇಗಿರಬಹುದೆಂದು ತಿಳಿಯಬಯಸುವ ಆಸಕ್ತಿಯಿಂದ ವಾಟ್ಸಪ್ ನಂಬರ್ ಅನ್ನು ಕಳುಹಿಸಿದೆ. ಮೊದಲ ದಿನ
ʻಹಾಯ್ʼʻಬಾಯ್ʼ ಮೆಸೇಜಿವೆ ಸಂವಹನ ಸೀಮಿತವಾಗಿತ್ತು. ಮಾರನೆಯ
ದಿನ ಮತ್ತೇನೂ ಹೆಚ್ಚಿನ ಸಂವಾದಗಳಿಲ್ಲದೆ ಸೀದಾ ಸಾದಾ ವೀಡಿಯೋ ಕರೆ ಮಾಡುವ ಬೇಡಿಕೆ ಅತ್ತಲಿಂದ ಬಂತು.
ಇವರ ಮೋಸದ ಹೊಸ ಯೋಜನೆಯ ರೂಪುರೇಷೆ ಸೂಕ್ಷ್ಮವಾಗಿ ಅರಿವಾಯಿತಾದರೂ ಪೂರ್ಣ ಪ್ರಮಾಣದಲ್ಲಿ
ತಿಳಿದುಕೊಳ್ಳುವ ಉತ್ಸಾಹವಿನ್ನೂ ಕಡಿಮೆಯಾಗಿರಲಿಲ್ಲ! ʻವೀಡಿಯೋ ಕರೆ ಯಾಕೆ?ʼ ಎಂದು ಮುಗ್ಧನಂತೆ ಕೇಳಿದೆ. ಮೆಸೇಜುಗಳಲ್ಲಿ
ನಾನಿನ್ನೂ ಅತ್ತಲಿನವರನ್ನು ನನ್ನ ಹಳೆಯ ವಿದ್ಯಾರ್ಥಿನಿಯೆಂದೇ ತಿಳಿದುಕೊಂಡಿರುವಂತೆ ನಂಬಿಸಿದೆ.
ʻನಾನೊಬ್ಳೇ ಇದೀನಿ. ವೀಡಿಯೋ ಕರೆ ಮಾಡಿ.
ಬಾತ್ರೂಮಿಗೆ ಹೋಗಿ ಕಾಲ್ ಮಾಡಿʼ ಎಂದು ನೇರಾನೇರ ಅಶ್ಲೀಲ ವೀಡಿಯೋ ಕರೆಗೆ ಬೇಡಿಕೆ ಬಂತು!
ʻಸಾರಿ. ನನಗೆ ಆಸಕ್ತಿಯಿಲ್ಲʼ ಎಂದು ಟೈಪಿಸಿದ್ದನ್ನು ಕಳುಹಿಸುವುದಕ್ಕೆ ಮೊದಲೆಯೇ ವೀಡಿಯೋ ಕರೆ
ಬಂದಿತು! ಕಾಲೇಜಿಗೆ ಹೊರಡುತ್ತಿದ್ದವನು ಇವರ ಆಟ ಪೂರ್ತಿಯೇ ನೋಡಿಬಿಡುವ
ಎಂದು ಕರೆ ಸ್ವೀಕರಿಸಿದೆ. ಅತ್ತ ಕಡೆ ಹುಡುಗಿಯೊಬ್ಬಳಿದ್ದಳು. ಖಂಡಿತಾ ಸುಳ್ಯದ ವಿದ್ಯಾರ್ಥಿನಿ ಪೂರ್ವಿಕಾಳಲ್ಲ ಅವಳು. ಅತ್ತ
ಕಡೆ ಹುಡುಗಿ ಇದ್ದಿದ್ದೂ ಅನುಮಾನವೇ, ಕಂಪ್ಯೂಟರಿನಲ್ಲಿದ್ದ ಹುಡುಗಿಯ ವೀಡಿಯೋ
ಒಂದನ್ನು ಬಳಸಿಕೊಂಡಂತನ್ನಿಸಿತು. ಆರೇಳು ಸೆಕೆಂಡುಗಳಲ್ಲಿ ಕರೆ ತುಂಡಾಯಿತು.
ʻಬಾತ್ರೂಮಿಗೆ ಹೋಗಿ. ಸೆಕ್ಸ್ ವೀಡಿಯೋ ಕರೆ ಮಾಡುವʼ ಎಂದು ಬಂದ ಮೆಸೇಜಿಗೆ ಈಗಾಗಲೇ ಟೈಪಿಸಿದ್ದ ʻಸಾರಿ. ನನಗೆ ಆಸಕ್ತಿಯಿಲ್ಲʼ ಎಂಬ ಮೆಸೇಜನ್ನು ಕಳುಹಿಸಿ ಕಾಲೇಜಿಗೆ ಹೊರಟೆ. ಸಂಜೆ ವಾಟ್ಸಪ್ಪಿನಲ್ಲಿ ಪುಟ್ಟ ವೀಡಿಯೋ ಒಂದನ್ನು ಕಳುಹಿಸಿದ್ದರು. ಆರು ಸೆಕೆಂಡಿನ ನನ್ನ ಬೆಳಗಿನ ವೀಡಿಯೋ ಕರೆ ರೆಕಾರ್ಡು ಮುಗಿದ ನಂತರ ಬಚ್ಚಲು ಮನೆಯಲ್ಲಿ
ಪುರುಷನೊಬ್ಬ ಜನನಾಂಗ ತೋರಿಸಿರುವ ಮತ್ತೊಂದು ತುಣುಕನ್ನು ಸೇರಿಸಿ ಮಾಡಲಾಗಿದ್ದ ವೀಡಿಯೋ ಅದು.
ವೀಡಿಯೋ ಹಿಂದೆಯೇ ಒಂದಷ್ಟು ಸ್ಕ್ರೀನ್ಶಾಟುಗಳನ್ನು ಕಳಿಸಿದರು.
ಫೇಸ್ಬುಕ್ಕಿನ ನನ್ನ ಪ್ರೊಫೈಲಿನಲ್ಲಿದ್ದ ನನ್ನ ನೆಂಟರಿಷ್ಟರ
ಕಸಿನ್ಸುಗಳ ಪಟ್ಟಿ ಅದು. ನಾವು ಕೇಳಿದಷ್ಟು ಹಣ ನೀಡದಿದ್ದರೆ ಈ ಪಟ್ಟಿಯಲ್ಲಿರುವ
ನಿಮ್ಮ ಕಸಿನ್ಸುಗಳಿಗೆಲ್ಲ ಈ ವೀಡಿಯೋ ಕಳಿಸುತ್ತೀವಿ. ನಿಮ್ಮ ಮಾನ ಮರ್ಯಾದೆ
ಹೋಗ್ತದೆ, ಯೋಚನೆ ಮಾಡಿ. ತುರ್ತು ಪ್ರತಿಕ್ರಿಯಿಸಿ
ಎಂಬ ಮೆಸೇಜು ಹಿಂದಿ ಭಾಷೆಯಲ್ಲಿ ಬಂದಿತ್ತು. ʻಇದು ನನ್ನ ವೀಡಿಯೋನೆ ಅಲ್ಲ. ಯಾರಿಗಾದರೂ ಕಳಿಸಿಕೊಳ್ಳಿʼ ಎಂದುತ್ತರಿಸಿದೆ. ಕರೆ ಬಂತು.
ಸ್ವೀಕರಿಸಿದೆ. ಜೋರು ಹಿಂದಿಯಲ್ಲಿ ಹಣದ ಬೇಡಿಕೆ ಇರಿಸಿದರು.
ಪೋಲೀಸರಿಗೆ ದೂರು ನೀಡುವುದಾಗಿ ಬೆದರಿಸಿದೆ. ಯಾವ ಪೋಲೀಸರ
ಬಳಿಯಾದರೂ ಹೋಗಿ. ನಮಗೇನೂ ಹೆದರಿಕೆ ಇಲ್ಲ ಎಂದರು. ಯಾರಿಗಾದರೂ ವೀಡಿಯೋ ಕಳಿಸಿಕೊಳ್ಳಿ, ನಿಮ್ಮ ಹಣೆಬರಹ ಎಂದೇಳಿ ಫೋನಿಟ್ಟೆ.
ಪಟ್ಟಿಯಲ್ಲಿದ್ದ ಕೆಲವು ಕಸಿನ್ಸುಗಳಿಗೆ ಮೆಸೆಂಜರ್ನಲ್ಲಿ
ವೀಡಿಯೋ ಕಳುಹಿಸಿದ ಸ್ಕ್ರೀನ್ ಶಾಟುಗಳನ್ನು ತೆಗೆದು ನನಗೆ ಕಳುಹಿಸಿ ʻಇನ್ನೂ ಅವರು ವೀಡಿಯೋ ನೋಡಿಲ್ಲ. ದುಡ್ಡು ಕಳುಹಿಸಿದರೆ ವೀಡಿಯೋ ಡಿಲೀಟ್ ಮಾಡ್ತೀನಿʼ ಎಂದವನಿಗೆ ಉತ್ತರಿಸುವ ಗೋಜಿಗೆ ಹೋಗದೆ ಫೇಸ್ಬುಕ್ಕಿನಲ್ಲಿ ಘಟನೆ ಕುರಿತಾಗಿ ವಿವರವಾಗಿ ಬರೆದು ʻಪೂರ್ವಿಕಾʼಳ ನಕಲಿ ಖಾತೆಯನ್ನು
ಟ್ಯಾಗ್ ಮಾಡಿ ಫೋನ್ ನಂಬರ್ ಹಾಕಿ ʻಈ ರೀತಿಯೂ ಮೋಸ ಮಾಡುತ್ತಿದ್ದಾರೆ. ಎಚ್ಚರಿಕೆʼ ಎಂದು ಪೋಸ್ಟ್ ಮಾಡಿದೆ. ಒಂದಷ್ಟು ಸ್ನೇಹಿತರು, ವಿದ್ಯಾರ್ಥಿಗಳು ಅವರಿಗೂ ಈ ರೀತಿ ವೀಡಿಯೋ
ಕಾಲ್ ಮಾಡುವಂತೆ ಮೆಸೇಜುಗಳು ಬಂದಿದ್ದರ ಬಗ್ಗೆ ತಿಳಿಸಿದರು. ಇನ್ನೊಂದಷ್ಟು ಜನರು ತಮ್ಮ ಪರಿಚಯಸ್ಥರು ಈ ರೀತಿಯ ವಂಚನೆಗೆ ಸಿಕ್ಕಿ ಫೇಸ್ಬುಕ್ಕನ್ನೇ ತೊರೆದ ಬಗ್ಗೆ ಮೆಸೇಜು ಮಾಡಿ ತಿಳಿಸಿದರು. ಇವ ಬಡಪಟ್ಟಿಗೆ
ಸಿಗುವ ಆಳಲ್ಲ ಎಂದರಿವಾಗಿ ಪೂರ್ವಿಕಾಳ ನಕಲಿ ಖಾತೆಯವ ನನ್ನನ್ನು ಫೇಸ್ಬುಕ್ಕಿನಲ್ಲಿ,
ವಾಟ್ಸಪ್ಪಿನಲ್ಲಿ ಬ್ಲಾಕ್ ಮಾಡಿಬಿಟ್ಟ.
* * *
Image source: Deccan herald
ಕ್ಲಾಸೊಂದನ್ನು
ಮುಗಿಸಿ ರೂಮಿನ ಬಳಿ ಬಂದಾಗ ತಿಳಿದ ವಿಷಯ ಆಘಾತ ಮೂಡಿಸಿತು, ಬೇಸರ ತರಿಸಿತು. ಎರಡು ಮೂರು ತಿಂಗಳ ಹಿಂದಷ್ಟೇ ಇಂಟರ್ನ್‌ಶಿಪ್ ಮುಗಿಸಿ ನಮ್ಮ ಆಸ್ಪತ್ರೆಯಲ್ಲೇ ಕಿರಿಯ ವೈದ್ಯನಾಗಿ ಕಾರ್ಯನಿರ್ವಹಿಸುತ್ತಿದ್ದ
ಡಾ. ಅಜಯ್ (ಹೆಸರು ಬದಲಿಸಲಾಗಿದೆ) ಎಂಬ ಹುಡುಗ ಆತ್ಮಹತ್ಯೆ ಮಾಡಿಕೊಂಡಿದ್ದ. ಕೆಲವೇ ತಿಂಗಳ ಹಿಂದೆ
ಕೊರೋನಾ ನೆಪದಲ್ಲಿ ಲಾಕ್‌ಡೌನ್ ಘೋಷಣೆಯಾದಾಗ
ತಂದೆಯೊಂದಿಗೆ ಊರಿಗೆ ಪಯಣಿಸುತ್ತಿದ್ದ ಮೊದಲ ವರುಷದ ವಿದ್ಯಾರ್ಥಿಯೊಬ್ಬ ಅಪಘಾತದಲ್ಲಿ ಮಡಿದ ಸುದ್ದಿ
ಮನಃಪಟಲದಿಂದ ದೂರಾಗುವ ಮುಂಚೆಯೇ ಅಜಯನ ಸಾವಿನ ಸುದ್ದಿ. ದೊಡ್ಡವರ ಕಣ್ಣ
ಮುಂದೆ ಚಿಕ್ಕವರು ಸಾಯಬಾರದು. ಅದರಲ್ಲೂ ಆತ್ಮಹತ್ಯೆ ಮಾಡಿಕೊಂಡರೆ ಬೇಸರದ
ಜೊತೆ ಸಿಟ್ಟೂ ಮೂಡುತ್ತದೆ. ಈಗಷ್ಟೇ ವೈದ್ಯನಾಗಿ ಜೀವನ ಆರಂಭಿಸಬೇಕಿದ್ದ
ಹುಡುಗನೊಬ್ಬ ಬೆಂಗಳೂರಿನ ಕೆಂಗೇರಿಯ ಬಳಿ ರೈಲಿಗೆ ತಲೆ ಕೊಟ್ಟಿದ್ದ. ರೈಲಿನ
ಬರುವಿಕೆಗೆ ಕಾಯುತ್ತಾ ಸೈರನ್ನಿನ ಶಬ್ದಕ್ಕೆ ಬೆದರದೆ ಜೀವ ಒಡ್ಡಿದವನಿಗೆ ಸಮಸ್ಯೆ ಎದುರಿಸಲು ಆಗಲಿಲ್ಲವೇ
ಎಂಬ ಅಸಹನೆ. ಆನ್ಲೈನಿನಲ್ಲಿ ಅರವತ್ತೇಳು ಸಾವಿರ
ಕಳೆದುಕೊಂಡಿದ್ದಕ್ಕೆ ಸತ್ತನಂತೆ ಎಂಬ ವಿಷಯ ತಿಳಿದಾಗಲಂತೂ ಸಿಟ್ಟು ಹೆಚ್ಚೇ ಆಯಿತು. ಆನ್‌ಲೈನ್ ಜೂಜಿನ ಅಡ್ಡೆಗಳಲ್ಲಿ ಹಣ
ಕಳೆದುಕೊಳ್ಳುವವರ ಸಂಖೈ ಕಡಿಮೆಯೇನಲ್ಲ. ಆದರೂ ಬರೀ ಅರವತ್ತೇಳು ಸಾವಿರಕ್ಕೆ
ಜೀವ ಕಳೆದುಕೊಳ್ಳುವುದಾ? ಅದೂ ದುಡಿಯುತ್ತಿರುವ ವೈದ್ಯನಾಗಿ. ಏನೇ ಕಡಿಮೆ ಎಂದರೂ ಒಂದೂವರೆ ಎರಡು ತಿಂಗಳ ಸಂಬಳವಷ್ಟೇ ಎಂದು ಬಯ್ದುಕೊಂಡೆ. ದಿನ ಕಳೆದಂತೆ ಅಜಯನ ಸಾವಿನ ಸುದ್ದಿ ಮನದ ಮೂಲೆ ಸೇರಿತು.
* * *
ಮೂರು
ತಿಂಗಳ ನಂತರ ಸಹೋದ್ಯೋಗಿಗಗಳಿಂದ ತಿಳಿದ ಸುದ್ದಿ ದುಃಖಕ್ಕೆ ದೂಡಿತು. ಸೆಕ್ಸ್ ವೀಡಿಯೋ ಕರೆಯೆಂಬ ಹೊಸ ರೀತಿಯ
ಮೋಸಕ್ಕೆ ಸಿಲುಕಿಬಿಟ್ಟ ಕಾರಣಕ್ಕೆ ಡಾ. ಅಜಯ್ ಆತ್ಮಹತ್ಯೆ ಮಾಡಿಕೊಂಡಿದ್ದ. ಅಂತರ್ಜಾಲದಲ್ಲಿ ಸುದ್ದಿಗಾಗಿ ಹುಡುಕಿದೆ.
ಬೋಪಾಲಿನ ಇಪ್ಪತ್ತೆರಡು ವರುಷದ ಹುಡುಗ, ಮೂರನೇ ವರುಷದ
ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನನ್ನು ಪೋಲೀಸರು ಬಂಧಿಸಿದ್ದರು.
ನನಗೆ ಫೇಸ್ಬುಕ್ಕಿನಲ್ಲಿ ಸ್ನೇಹದ ಕೋರಿಕೆ ಕಳಿಸಿ ಸೆಕ್ಸ್
ವೀಡಿಯೋ ಕರೆ ಮಾಡುವಂತೆ ಕೇಳಿದಂತೆಯೇ ಡಾ. ಅಜಯ್ಗೆ ಇನ್ಸ್ಟಾಗ್ರಾಂ ಮತ್ತು ಟೆಲಿಗ್ರಾಮ್ ಬಳಸಿ ವೀಡಿಯೋ ಕರೆಯ
ಹಳ್ಳಕ್ಕೆ ಕೆಡವಿದ್ದರು. ನಿಜವಾಗಿಯೂ ಅತ್ತ ಕಡೆಯಿದ್ದವರು ಹುಡುಗಿಯೆಂದು
ನಂಬಿ, ಇಷ್ಟಪಟ್ಟು ವೀಡಿಯೋ ಕರೆ ಮಾಡಿಬಿಟ್ಟನೇನೋ ಅಜಯ್. ಅರವತ್ತೇಳು ಸಾವಿರದಷ್ಟು ಹಣ ಕಳುಹಿಸಿದ, ಮತ್ತಷ್ಟು ಹಣಕ್ಕೆ ಬೇಡಿಕೆ
ಬಂದಾಗ ಒತ್ತಡ ಎದುರಿಸಲಾಗದೇ ಆನ್ಲೈನಿನಲ್ಲಿ ತನ್ನ ಅಶ್ಲೀಲ ವೀಡಿಯೋ ಬಂದುಬಿಟ್ಟರೆ
ಗತಿಯೇನು ಎಂದು ಹೆದರಿ ಮೋಸದ ವಿವರಗಳನ್ನು ಬರೆದಿಟ್ಟು ರೈಲಿಗೆ ತಲೆಯೊಡ್ಡಿ ಜೀವ ಕಳೆದುಕೊಂಡುಬಿಟ್ಟ.
ಫೇಸ್‌ಬುಕ್ ತೆರೆದು ಡಾ.
ಅಜಯ್‌ನ ಪ್ರೊಫೈಲ್ ಹುಡುಕಿದೆ.
ನನ್ನ ಸ್ನೇಹಿತರ ಪಟ್ಟಿಯಲ್ಲವನು ಇರಲಿಲ್ಲ. ಆತ ನನ್ನ ಸ್ನೇಹಿತರ
ಪಟ್ಟಿಯಲ್ಲಿದ್ದಿದ್ದರೆ, ಈ ತರಹದ ಮೋಸದ ಬಗ್ಗೆ ನಾನು ಒಂದಷ್ಟು ತಮಾಷೆಯಾಗಿಯೇ
ಹಾಕಿದ್ದ ಪೋಸ್ಟ್ ನೋಡಿದ್ದಿದ್ದರೆ…. ಆತ ನನ್ನನ್ನು
ಒಮ್ಮೆಯಾದರೂ ಸಂಪರ್ಕಿಸುತ್ತಿದ್ದನೋ ಏನೋ ಎಂಬ ಸಣ್ಣ ಯೋಚನೆಯೊಂದು ತಲೆಗೆ ಹೊಕ್ಕಿ ಬಿಟ್ಟಿತು.
ಪ್ರತ್ಯಕ್ಷವಾಗಿ ಪರೋಕ್ಷವಾಗಿ ಡಾ. ಅಜಯ್ನ ಸಾವಿಗೆ ಯಾವ ರೀತಿಯಲ್ಲೂ ನನಗೆ ಸಂಬಂಧವಿರಲಿಲ್ಲವಾದರೂ ತಪ್ಪಿತಸ್ಥ ಭಾವ ದಿನೇದಿನೇ ಹೆಚ್ಚಾಗಲಾರಂಭಿಸಿತು.
ಫೇಸ್‌ಬುಕ್ ತೆರೆದರೆ ಎಲ್ಲಾ
ಪೋಸ್ಟುಗಳಲ್ಲೂ ಅಜಯನದೇ ಮುಖ ಕಾಣಿಸುತ್ತಿತ್ತು. ದಿನದ ಯಾವುದೋ ಸಮಯದಲ್ಲಿ
ಅಜಯನ ನೆನಪಾಗಿ ಕಣ್ಣಾಲಿಗಳು ತುಂಬಿಕೊಳ್ಳುತ್ತಿದ್ದವು. ಮನಸ್ಥಿತಿ ಕೊಂಚ
ಸರಿಹೋಗುವವರೆಗೂ ಸಾಮಾಜಿಕ ಜಾಲತಾಣಗಳಿಂದ ದೂರವಿರಲು ನಿರ್ಧರಿಸಿ ಫೇಸ್‌ಬುಕ್
ಖಾತೆಯನ್ನು ತಾತ್ಕಾಲಿವಾಗಿ ನಿಷ್ಕ್ರಿಯಗೊಳಿಸಿದೆ.
* * *
ಖಾತೆ
ನಿಷ್ಕ್ರಿಯಗೊಳಿಸಿ ಮೂರು ತಿಂಗಳಾಗುತ್ತ ಬಂದಿದೆ. ಅಜಯನ ಸಾವಿಗೆ ಕಾರಣ ಯಾರು? ಎಂಬ ಪ್ರಶ್ನೆಗೆ ತೃಪ್ತಿಕರ ಉತ್ತರವಂತೂ
ಇದುವರೆಗೆ ಸಿಕ್ಕಿಲ್ಲ. ಬ್ಲ್ಯಾಕ್ಮೇಲೆ ಮಾಡಿದ
ಬೋಪಾಲಿನ ಹುಡುಗ ಪ್ರಮುಖ ಕಾರಣ, ಆದರೆ ಅವನೊಬ್ಬನೇ ಕಾರಣವಾ? ಅಪರಿಚಿತರೊಂದಿಗೆ ಸೆಕ್ಸ್ ವೀಡಿಯೋ ಕರೆ ಮಾಡಿದ ಅಜಯ್
ಅಷ್ಟೇ ಅವನ ಸಾವಿಗೆ ಹೊಣೆಯಾ? ಅಜಯ್ನ ಸಾವಿನಲ್ಲಿ ನಮ್ಮ ಪಾಲಿಲ್ಲವೇ? ಆ ಘಟನೆಗೆ ನೇರವಾಗಿ ಸಂಬಂಧಪಡದಿದ್ದರೂ
ಸೂಕ್ಷ್ಮತೆ ಕಳೆದುಕೊಂಡಿರುವ ನಮ್ಮ ಮನಸ್ಥಿತಿಗಳು, ನಮ್ಮ ಅಸೂಕ್ಷ್ಮ ಸಮಾಜ
ಕೂಡ ಅಜಯ್ನ ಸಾವಿನ ಹೊಣೆ ಹೊರಬೇಕಲ್ಲವೇ?
ಹೌದು, ಅಜಯ್ ಮಾಡಿದ್ದು ತಪ್ಪು. ವೀಡಿಯೋ ಕರೆಯ ಬಲೆಗೆ ಬೀಳಬೇಕಿರಲಿಲ್ಲ. ತಪ್ಪೇ ಮಾಡದವರ್ಯಾರೂ
ನಮ್ಮ ನಡುವೆ ಇಲ್ಲವಲ್ಲ. ಅಜಯ್ ನೋಟ್
ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಕಾರಣಕ್ಕೆ ತಪ್ಪಿತಸ್ಥನ ಬಂಧನವಾಯಿತು.
ಸಾಯುವ ನಿರ್ಧಾರದ ಬದಲು ಪೋಲೀಸರ ಬಳಿ ಹೋಗಿದ್ದರೆ? ʻಡಾಕ್ಟರಾಗಿ ಹಿಂಗೆಲ್ಲ ಮಾಡಿಕೊಂಡಿದ್ದೀಯಲ್ಲಪ್ಪʼ ಎಂದು ನಗಾಡಿಕೊಂಡು ಕಳುಹಿಸಿಬಿಡುತ್ತಿದ್ದರೇನೋ. ರಾಜಕಾರಣಿಗಳ ಸೆಕ್ಸ್ ವೀಡಿಯೋ ಕರೆಗಳನ್ನು ಫಾರ್ವರ್ಡಿನ ಮೇಲೆ
ಫಾರ್ವರ್ಡು ಮಾಡುತ್ತ ಟಿವಿಗಳಲ್ಲಿ ಆ ಸುದ್ದಿಯನ್ನು ಚಪ್ಪರಿಸಿಕೊಂಡು ನೋಡುತ್ತ ಕುಳಿತುಕೊಳ್ಳುವ ನಮ್ಮ
ಅಸೂಕ್ಷ್ಮ ಸಮಾಜದಿಂದಲೇ ಮೂಡಿಬಂದವರಲ್ಲವೇ ನಮ್ಮ ಪೋಲೀಸರು. ಸಮಾಜದಲ್ಲಿಲ್ಲದ,
ನಮ್ಮ ಮನೆಗಳಲ್ಲಿಲ್ಲದ ಸೂಕ್ಷ್ಮತೆಯನ್ನು ಪೋಲೀಸರಲ್ಲಿ ನಿರೀಕ್ಷಿಸುವುದು ಮೂರ್ಖತನ.
ನಿಜಕ್ಕೂ ಪೋಲೀಸಿನವರಲ್ಲೊಬ್ಬರು ಘಟನೆಯ ಗಂಭೀರತೆಯನ್ನು ಅರಿತುಕೊಂಡರೂ ಬ್ಲ್ಯಾಕ್ಮೇಲಿನ ಆರೋಪಕ್ಕಾಗಿ ಬೋಪಾಲಿಗೆ ಹೋಗಿ ಕಾರ್ಯನಿರತರಾಗುವುದು ಪೋಲೀಸರಿಗಿರುವ ಒತ್ತಡದ ನಡುವೆ
ಆಗಹೋಗದ ಕೆಲಸವೇ ಸರಿ.
ಅಜಯ್ ಮತ್ತೇನು ಮಾಡಬಹುದಿತ್ತು? ಮಾಡಿದ ತಪ್ಪನ್ನು
ಒಪ್ಪಿಕೊಂಡು ಮನೆಯವರ ಜೊತೆ, ಆತ್ಮೀಯ ಸ್ನೇಹಿತರ ಜೊತೆ ಮಾತನಾಡಬೇಕಿತ್ತು.
ಒಂದಷ್ಟು ಅಪಹಾಸ್ಯಕ್ಕೆ, ಬಹಳಷ್ಟು ಬಯ್ಗುಳಕ್ಕೆ ತುತ್ತಾಗುತ್ತಿದ್ದ.
ʻಮಾನ ಮರ್ಯಾದೆ ತೆಗೆಯುವಂತಹ ಕೆಲಸ ಮಾಡಿಬಿಟ್ಟೆಯಲ್ಲʼ ಎಂದು ಬಯ್ಯುವವರ ನಡುವೆ ಅಲ್ಲೆಲ್ಲೋ ಒಬ್ಬರು ʻಹೋಗ್ಲಿ ಬಿಡು. ಆಗಿದ್ದಾಯ್ತು. ಹೆಚ್ಚು ತಲೆಕೆಡಿಸಿಕೊಳ್ಳಬೇಡ. ಇನ್ನು ಮುಂದೆ ಹುಷಾರಾಗಿರುʼ ಎಂದು ಹೇಳುವವರಿದ್ದೇ ಇರುತ್ತಿದ್ದರಲ್ಲವೇ? ಮೋಸಕ್ಕೆ ಸಿಲುಕಿಕೊಂಡವನನ್ನೇ ದೂಷಿಸುವವರ ನಡುವೆ ʻಮೋಸ ಮಾಡಿದವನು ಅಪರಾಧಿ. ನೀನಲ್ಲʼ ಎಂದು ಸಮಾಧಾನದ ಮಾತುಗಳನ್ನಾಡಿ ಸ್ಥೈರ್ಯ ತುಂಬುವವರು ಇರುತ್ತಿದ್ದರಲ್ಲವೇ…
ಅಥವಾ ಎಲ್ಲರಿಗೂ ತಿಳಿಸಿಯೂ ಅಜಯ್ಗೆ ಯಾರ ಸಹಾಯವೂ ಸಿಗಲಿಲ್ಲವೇ…
ಈ ಎಲ್ಲಾ ಕಲ್ಪನೆಗಳ ನಡುವಿರುವ ವಾಸ್ತವವೆಂದರೆ ʻಮಾನ – ಮರ್ಯಾದೆಗೆ ಅಂಜಿದ ಯುವ ವೈದ್ಯನೊಬ್ಬ
ನಮ್ಮ ನಡುವಿನಿಂದ ಎದ್ದು ನಡೆದಿದ್ದಾನೆ. ಸೂಕ್ಷ್ಮತೆ ಬೆಳೆಸಿಕೊಳ್ಳಿ,
ಮೋಸ ಹೋದವನನ್ನೇ ಅಪರಾಧಿಯನ್ನಾಗಿ ನೋಡಬೇಡಿ ಎಂದು ಮೆಲುದನಿಯಲ್ಲಿ ತಿಳಿಸಿ ಹೋಗಿದ್ದಾನೆ….
ಕೇಳಿಸಿಕೊಳ್ಳುವ ವ್ಯವಧಾನ ನಮಗಿರಬೇಕಷ್ಟೇ.
* * *
ಡಾ. ಅಜಯ್‌ಗೆ ಬ್ಲ್ಯಾಕ್‌ಮೇಲ್ ಮಾಡಿದವನನ್ನು ಬಂಧಿಸಿದ ಸುದ್ದಿ ಪ್ರಕಟವಾದ ಹತ್ತು ದಿನಕ್ಕೆ
ಬೆಂಗಳೂರಿನ ಮಲ್ಲೇಶ್ವರದ ಬಳಿ ರೈಲಿಗೆ ತಲೆ ಒಡ್ಡಿ ಯುವ ಇಂಜಿನಿಯರ್ ಪ್ರಾಣ
ಕಳೆದುಕೊಂಡಿದ್ದಾನೆ. ಸೆಕ್ಸ್ ಬ್ಲ್ಯಾಕ್‌ಮೇಲ್‌ಗೆ ಒಳಪಟ್ಟ ಬಗೆಗಿನ ಮಾಹಿತಿಗಳು ಯುವಕನ ಮೊಬೈಲಿನಲ್ಲಿದ್ದ
ಮೆಸೇಜುಗಳಿಂದ ಪೋಲೀಸರಿಗೆ ತಿಳಿಯಿತು. ತನ್ನ ಸಾವಿನಿಂದ ಅಪರಾಧಿಗಳ ಬಂಧನವಾಗಬಹುದೆಂಬ
ನಿರೀಕ್ಷೆಯಲ್ಲಿ ಅಜಯನ ರೀತಿಯಲ್ಲಿಯೇ ಪ್ರಾಣ ಕಳೆದುಕೊಂಡನಾ? ತಿಳಿಯದು.
ಮಾನ ಮರ್ಯಾದೆಗಿಂತ
ಜೀವ ಮುಖ್ಯವೆಂದು ಯುವಜನರಿಗೆ, ನಮ್ಮ ಸಮಾಜಕ್ಕೆ,
ನಮ್ಮ ಮನಸ್ಸುಗಳಿಗೆ ತಿಳಿಹೇಳಬೇಕಿದೆ.
Good job
ReplyDeleteGrateful for sharinng this
ReplyDelete