- ಡಾ. ಅಶೋಕ್. ಕೆ. ಆರ್
ಪೂರ್ವಿಕಾಳ ಹೆಸರಿನಿಂದ (ಹೆಸರು ಬದಲಿಸಲಾಗಿದೆ) ಫೇಸ್‌ಬುಕ್ಕಿನಲ್ಲಿ ಸ್ನೇಹದ ಕೋರಿಕೆ ಬಂದಿತ್ತು. ನಲವತ್ತು ಚಿಲ್ಲರೆ ಮಂದಿ ಪರಸ್ಪರ ಸ್ನೇಹಿತರ ಪಟ್ಟಿಯಲ್ಲಿದ್ದರು. ಮುಂಚಿನಂತೆ ಬಂದೆಲ್ಲ ಸ್ನೇಹಿತರ ಕೋರಿಕೆಯನ್ನು ಒಪ್ಪಿಕೊಳ್ಳುತ್ತಿರಲಿಲ್ಲವಾದ್ದರಿಂದ ಪೂರ್ವಿಕಾಳ ಪ್ರೊಫೈಲಿನ ಮೇಲೆ ಕ್ಲಿಕ್ಕಿಸಿದೆ. ಸುಳ್ಯದ ವಿದ್ಯಾರ್ಥಿನಿಯ ಫೋಟೋ ಇದ್ದ ಪ್ರೊಫೈಲದು. ಸುಳ್ಯದ ಹಳೆಯ ವಿದ್ಯಾರ್ಥಿಗಳೇ ಪರಸ್ಪರ ಸ್ನೇಹಿತರ ಪಟ್ಟಿಯಲ್ಲಿದ್ದರು. ಸ್ನೇಹದ ಕೋರಿಕೆಯನ್ನು ಒಪ್ಪಿಕೊಂಡ ದಿನದ ನಂತರ ಪೂರ್ವಿಕಾಳ ಪ್ರೊಫೈಲಿನಿಂದ ಮೆಸೆಂಜರ್‌ನಲ್ಲಿ ʻಹಾಯ್ʼ ಎಂದೊಂದು ಮೆಸೇಜು ಬಂದಿತ್ತು. ಮೆಸೇಜುಗಳನ್ನು ಆಗಾಗ್ಯೆ ನೋಡುವ ಅಭ್ಯಾಸವಿಲ್ಲದ ಕಾರಣ ಒಂದಷ್ಟು ಸಮಯದ ನಂತರ ʻಹಾಯ್ʼ ಎಂದು ಉತ್ತರಿಸಿ ʻಹೇಗಿದ್ದೀಯಪ್ಪ?ʼ ಎಂದು ಇಂಗ್ಲೀಷಿನಲ್ಲಿ ಕೇಳಿದೆ. ಪೂರ್ವಿಕಾ ಕೇರಳದ ಹುಡುಗಿ ಎಂದು ನೆನಪಿತ್ತು. ʻನಾನು ಚೆನ್ನಾಗಿದ್ದೀನಿ. ನೀವು ಹೇಗಿದ್ದೀರಿ?ʼ ಎಂದು ಕೇಳಿದವಳು ನನ್ನ ಮರುತ್ತರಕ್ಕೂ ಕಾಯದೆ ನಿಮ್ಮ ವಾಟ್ಸಪ್ ನಂಬರ್ ಕಳುಹಿಸಿ ಅಲ್ಲಿಯೇ ಚಾಟ್ ಮಾಡುವ ಎಂದು ಕೇಳಿದಳು. ಓಹ್! ಇದು ಅಸಲಿ ಖಾತೆ ಇರಲಿಕ್ಕಿಲ್ಲ ಎಂದರಿವಾಯಿತಾಗ. ಹಳೆಯ ವಿದ್ಯಾರ್ಥಿಗಳು ಯಾವುದಾದರೂ ವಿಷಯದ ಬಗ್ಗೆ ಮಾಹಿತಿ ಕೇಳಲು, ಅಥವಾ ಬಹಳ ವರುಷಗಳ ನಂತರ ಮಾತನಾಡಲು ಫೋನ್ ನಂಬರ್ ಕೇಳುವುದು ಅಪರೂಪವೇನಲ್ಲ. ಆದರೆ ಚಾಟ್ ಮಾಡಲು ವಾಟ್ಸಪ್ ನಂಬರ್ ಕೇಳುವುದು ಸಾಮಾನ್ಯ ಸಂಗತಿಯೇನಲ್ಲ. ಪರಿಚಿತರ ಫೋಟೋ ಬಳಸಿಕೊಂಡು ನಕಲಿ ಖಾತೆ ಸೃಷ್ಟಿಸಿ ಸ್ನೇಹದ ಕೋರಿಕೆ ಕಳುಹಿಸಿ ಮೆಸೆಂಜರ್‌ನಲ್ಲಿ ʻತುರ್ತು ಅವಶ್ಯಕತೆ ಇದೆ. ಒಂದೈದು ಸಾವಿರ ಗೂಗಲ್ ಪೇ ಮಾಡಿʼ ಎಂದು ಬೇಡಿಕೆ ಇಡುವ ಸ್ಕ್ಯಾಮು ಹೆಚ್ಚಿದೆ. ಇಲ್ಲಿ ಹಣದ ಬೇಡಿಕೆಯೂ ಇಲ್ಲದೆ ವಾಟ್ಸಪ್ ನಂಬರ್ ಕೇಳುತ್ತಿದ್ದಾರಲ್ಲಾ? ಇದ್ಯಾವ ಹೊಸ ಮೋಸದ ಯೋಜನೆಯಿರಬಹುದು ಎಂಬ ಕುತೂಹಲವುಂಟಾಯಿತು. ನವಮೋಸದ ಪರಿ ಹೇಗಿರಬಹುದೆಂದು ತಿಳಿಯಬಯಸುವ ಆಸಕ್ತಿಯಿಂದ ವಾಟ್ಸಪ್ ನಂಬರ್ ಅನ್ನು ಕಳುಹಿಸಿದೆ. ಮೊದಲ ದಿನ ʻಹಾಯ್ʼʻಬಾಯ್ʼ ಮೆಸೇಜಿವೆ ಸಂವಹನ ಸೀಮಿತವಾಗಿತ್ತು. ಮಾರನೆಯ ದಿನ ಮತ್ತೇನೂ ಹೆಚ್ಚಿನ ಸಂವಾದಗಳಿಲ್ಲದೆ ಸೀದಾ ಸಾದಾ ವೀಡಿಯೋ ಕರೆ ಮಾಡುವ ಬೇಡಿಕೆ ಅತ್ತಲಿಂದ ಬಂತು. ಇವರ ಮೋಸದ ಹೊಸ ಯೋಜನೆಯ ರೂಪುರೇಷೆ ಸೂಕ್ಷ್ಮವಾಗಿ ಅರಿವಾಯಿತಾದರೂ ಪೂರ್ಣ ಪ್ರಮಾಣದಲ್ಲಿ ತಿಳಿದುಕೊಳ್ಳುವ ಉತ್ಸಾಹವಿನ್ನೂ ಕಡಿಮೆಯಾಗಿರಲಿಲ್ಲ! ʻವೀಡಿಯೋ ಕರೆ ಯಾಕೆ?ʼ ಎಂದು ಮುಗ್ಧನಂತೆ ಕೇಳಿದೆ. ಮೆಸೇಜುಗಳಲ್ಲಿ ನಾನಿನ್ನೂ ಅತ್ತಲಿನವರನ್ನು ನನ್ನ ಹಳೆಯ ವಿದ್ಯಾರ್ಥಿನಿಯೆಂದೇ ತಿಳಿದುಕೊಂಡಿರುವಂತೆ ನಂಬಿಸಿದೆ. ʻನಾನೊಬ್ಳೇ ಇದೀನಿ. ವೀಡಿಯೋ ಕರೆ ಮಾಡಿ. ಬಾತ್‌ರೂಮಿಗೆ ಹೋಗಿ ಕಾಲ್ ಮಾಡಿʼ ಎಂದು ನೇರಾನೇರ ಅಶ್ಲೀಲ ವೀಡಿಯೋ ಕರೆಗೆ ಬೇಡಿಕೆ ಬಂತು! ʻಸಾರಿ. ನನಗೆ ಆಸಕ್ತಿಯಿಲ್ಲʼ ಎಂದು ಟೈಪಿಸಿದ್ದನ್ನು ಕಳುಹಿಸುವುದಕ್ಕೆ ಮೊದಲೆಯೇ ವೀಡಿಯೋ ಕರೆ ಬಂದಿತು! ಕಾಲೇಜಿಗೆ ಹೊರಡುತ್ತಿದ್ದವನು ಇವರ ಆಟ ಪೂರ್ತಿಯೇ ನೋಡಿಬಿಡುವ ಎಂದು ಕರೆ ಸ್ವೀಕರಿಸಿದೆ. ಅತ್ತ ಕಡೆ ಹುಡುಗಿಯೊಬ್ಬಳಿದ್ದಳು. ಖಂಡಿತಾ ಸುಳ್ಯದ ವಿದ್ಯಾರ್ಥಿನಿ ಪೂರ್ವಿಕಾಳಲ್ಲ ಅವಳು. ಅತ್ತ ಕಡೆ ಹುಡುಗಿ ಇದ್ದಿದ್ದೂ ಅನುಮಾನವೇ, ಕಂಪ್ಯೂಟರಿನಲ್ಲಿದ್ದ ಹುಡುಗಿಯ ವೀಡಿಯೋ ಒಂದನ್ನು ಬಳಸಿಕೊಂಡಂತನ್ನಿಸಿತು. ಆರೇಳು ಸೆಕೆಂಡುಗಳಲ್ಲಿ ಕರೆ ತುಂಡಾಯಿತು. ʻಬಾತ್‌ರೂಮಿಗೆ ಹೋಗಿ. ಸೆಕ್ಸ್ ವೀಡಿಯೋ ಕರೆ ಮಾಡುವʼ ಎಂದು ಬಂದ ಮೆಸೇಜಿಗೆ ಈಗಾಗಲೇ ಟೈಪಿಸಿದ್ದ ʻಸಾರಿ. ನನಗೆ ಆಸಕ್ತಿಯಿಲ್ಲʼ ಎಂಬ ಮೆಸೇಜನ್ನು ಕಳುಹಿಸಿ ಕಾಲೇಜಿಗೆ ಹೊರಟೆ. ಸಂಜೆ ವಾಟ್ಸಪ್ಪಿನಲ್ಲಿ ಪುಟ್ಟ ವೀಡಿಯೋ ಒಂದನ್ನು ಕಳುಹಿಸಿದ್ದರು. ಆರು ಸೆಕೆಂಡಿನ ನನ್ನ ಬೆಳಗಿನ ವೀಡಿಯೋ ಕರೆ ರೆಕಾರ್ಡು ಮುಗಿದ ನಂತರ ಬಚ್ಚಲು ಮನೆಯಲ್ಲಿ ಪುರುಷನೊಬ್ಬ ಜನನಾಂಗ ತೋರಿಸಿರುವ ಮತ್ತೊಂದು ತುಣುಕನ್ನು ಸೇರಿಸಿ ಮಾಡಲಾಗಿದ್ದ ವೀಡಿಯೋ ಅದು. ವೀಡಿಯೋ ಹಿಂದೆಯೇ ಒಂದಷ್ಟು ಸ್ಕ್ರೀನ್‌ಶಾಟುಗಳನ್ನು ಕಳಿಸಿದರು. ಫೇಸ್‌ಬುಕ್ಕಿನ ನನ್ನ ಪ್ರೊಫೈಲಿನಲ್ಲಿದ್ದ ನನ್ನ ನೆಂಟರಿಷ್ಟರ ಕಸಿನ್ಸುಗಳ ಪಟ್ಟಿ ಅದು. ನಾವು ಕೇಳಿದಷ್ಟು ಹಣ ನೀಡದಿದ್ದರೆ ಈ ಪಟ್ಟಿಯಲ್ಲಿರುವ ನಿಮ್ಮ ಕಸಿನ್ಸುಗಳಿಗೆಲ್ಲ ಈ ವೀಡಿಯೋ ಕಳಿಸುತ್ತೀವಿ. ನಿಮ್ಮ ಮಾನ ಮರ್ಯಾದೆ ಹೋಗ್ತದೆ, ಯೋಚನೆ ಮಾಡಿ. ತುರ್ತು ಪ್ರತಿಕ್ರಿಯಿಸಿ ಎಂಬ ಮೆಸೇಜು ಹಿಂದಿ ಭಾಷೆಯಲ್ಲಿ ಬಂದಿತ್ತು. ʻಇದು ನನ್ನ ವೀಡಿಯೋನೆ ಅಲ್ಲ. ಯಾರಿಗಾದರೂ ಕಳಿಸಿಕೊಳ್ಳಿʼ ಎಂದುತ್ತರಿಸಿದೆ. ಕರೆ ಬಂತು. ಸ್ವೀಕರಿಸಿದೆ. ಜೋರು ಹಿಂದಿಯಲ್ಲಿ ಹಣದ ಬೇಡಿಕೆ ಇರಿಸಿದರು. ಪೋಲೀಸರಿಗೆ ದೂರು ನೀಡುವುದಾಗಿ ಬೆದರಿಸಿದೆ. ಯಾವ ಪೋಲೀಸರ ಬಳಿಯಾದರೂ ಹೋಗಿ. ನಮಗೇನೂ ಹೆದರಿಕೆ ಇಲ್ಲ ಎಂದರು. ಯಾರಿಗಾದರೂ ವೀಡಿಯೋ ಕಳಿಸಿಕೊಳ್ಳಿ, ನಿಮ್ಮ ಹಣೆಬರಹ ಎಂದೇಳಿ ಫೋನಿಟ್ಟೆ. ಪಟ್ಟಿಯಲ್ಲಿದ್ದ ಕೆಲವು ಕಸಿನ್ಸುಗಳಿಗೆ ಮೆಸೆಂಜರ್‌ನಲ್ಲಿ ವೀಡಿಯೋ ಕಳುಹಿಸಿದ ಸ್ಕ್ರೀನ್ ಶಾಟುಗಳನ್ನು ತೆಗೆದು ನನಗೆ ಕಳುಹಿಸಿ ʻಇನ್ನೂ ಅವರು ವೀಡಿಯೋ ನೋಡಿಲ್ಲ. ದುಡ್ಡು ಕಳುಹಿಸಿದರೆ ವೀಡಿಯೋ ಡಿಲೀಟ್ ಮಾಡ್ತೀನಿʼ ಎಂದವನಿಗೆ ಉತ್ತರಿಸುವ ಗೋಜಿಗೆ ಹೋಗದೆ ಫೇಸ್‌ಬುಕ್ಕಿನಲ್ಲಿ ಘಟನೆ ಕುರಿತಾಗಿ ವಿವರವಾಗಿ ಬರೆದು ʻಪೂರ್ವಿಕಾʼಳ ನಕಲಿ ಖಾತೆಯನ್ನು ಟ್ಯಾಗ್ ಮಾಡಿ ಫೋನ್ ನಂಬರ್ ಹಾಕಿ ʻಈ ರೀತಿಯೂ ಮೋಸ ಮಾಡುತ್ತಿದ್ದಾರೆ. ಎಚ್ಚರಿಕೆʼ ಎಂದು ಪೋಸ್ಟ್ ಮಾಡಿದೆ. ಒಂದಷ್ಟು ಸ್ನೇಹಿತರು, ವಿದ್ಯಾರ್ಥಿಗಳು ಅವರಿಗೂ ಈ ರೀತಿ ವೀಡಿಯೋ ಕಾಲ್ ಮಾಡುವಂತೆ ಮೆಸೇಜುಗಳು ಬಂದಿದ್ದರ ಬಗ್ಗೆ ತಿಳಿಸಿದರು. ಇನ್ನೊಂದಷ್ಟು ಜನರು ತಮ್ಮ ಪರಿಚಯಸ್ಥರು ಈ ರೀತಿಯ ವಂಚನೆಗೆ ಸಿಕ್ಕಿ ಫೇಸ್‌ಬುಕ್ಕನ್ನೇ ತೊರೆದ ಬಗ್ಗೆ ಮೆಸೇಜು ಮಾಡಿ ತಿಳಿಸಿದರು. ಇವ ಬಡಪಟ್ಟಿಗೆ ಸಿಗುವ ಆಳಲ್ಲ ಎಂದರಿವಾಗಿ ಪೂರ್ವಿಕಾಳ ನಕಲಿ ಖಾತೆಯವ ನನ್ನನ್ನು ಫೇಸ್‌ಬುಕ್ಕಿನಲ್ಲಿ, ವಾಟ್ಸಪ್ಪಿನಲ್ಲಿ ಬ್ಲಾಕ್ ಮಾಡಿಬಿಟ್ಟ.