"ಅಲ್ಲಾ ನಾನೇನೋ ಗೂಬ್ ನನ್ಮಗ.... ಸರಿ ಇಲ್ಲ. ನೀ ಆದ್ರೂ ಸರಿ ಇದ್ದೀಯಲ್ಲ.... ಬದುಕಿದ್ದೀನೋ ಸತ್ತಿದ್ದೀನೋ ಅಂತಾದ್ರೂ ವಿಚಾರಿಸ್ಬೇಕು ಅಂತ ಕೂಡ ಅನ್ನಿಸಲಿಲ್ಲವಲ್ಲ ನಿನಗೆ..... ಯಾವ್ದೋ ಸಿಟ್ಟಲ್ಲಿ ಬೇಸರದಲ್ಲಿ ನಿನ್ ನಂಬರ್ ಕೂಡ ಡಿಲೀಟ್ ಮಾಡ್ಬಿಟ್ಟಿದ್ದೀನಿ ಕಣವ್ವ.... ಮುಚ್ಕಂಡ್ ಫೋನ್ ಮಾಡು ಬಿಡುವಾದಾಗ". ಸಾಗರನ ಮೆಸೇಜು. ಎಫ್.ಬಿ ಮೆಸೆಂಜರಿನಲ್ಲಿ. ಸಾಗರನ ಮೆಸೇಜು ಮುಖದ ಮೇಲೊಂದು ನಗು ಮೂಡಿಸದೇ ಇದ್ದೀತೆ. ಒಂಚೂರೇ ಚೂರು ನಗು ಮೂಡಿತು. ಬೇಸರದಿಂದಿದ್ದ ಮನಸ್ಸಿಗೆ ಸಾಗರನ ಮೆಸೇಜು ಒಂದಷ್ಟು ಲವಲವಿಕೆ ತರಿಸಿದ್ದು ಸುಳ್ಳಲ್ಲ.
ʻಇಲ್ಲಪ್ಪ. ಅದ್ಯಾರೋ ಒಬ್ರು ನಾ ಸತ್ತಾಗ್ಲೂ ಮೆಸೇಜ್ ಮಾಡ್ಬೇಡ ಅಂದಿದ್ರುʼ ವ್ಯಂಗ್ಯ ಮಾತಾಡೋ ಅವಕಾಶ ಬಿಡುವುದು ಸಾಧುವೇ.
"ಆಯ್ತಾಯ್ತು. ತಪ್ ನಂದೇ. ನಿಂದೂ ತಪ್ಪಿಲ್ಲ ಅಂತಲ್ಲ. ನಾ ತುಂಬಾ ಇಮೆಚ್ಯೂರ್ ಆಗಿ ವರ್ತಿಸಿದ್ದೌದು. ಫೋನ್ ಮಾಡ್ತೀಯಾ ಇಲ್ವಾ?"
ʻಮಾಡ್ತೀನಿ ಕಣೋ. ಮಾಡ್ದೇ ಇರ್ತೀನಾ. ಎಷ್ಟ್ ಸಲ ಫೋನ್ ಮಾಡ್ಬೇಕು ಮಾಡ್ಬೇಕು ಅಂತಂದುಕೊಳ್ಳುತ್ತಲೇ ಇದ್ದೆ. ಅದರಲ್ಲೂ ಕಳೆದೊಂದು ತಿಂಗಳಿನಿಂದʼ
"ಸುಮ್ನೆ ಡವ್ ಕಟ್ತಿ. ಅಷ್ಟೊಂದೆಲ್ಲ ಅಂದುಕೊಂಡಿದ್ರೆ ಮಾಡಿರ್ತಿದ್ದೆ ಬಿಡು"
ʻಮ್. ಹೋಗ್ಲಿ ಬಿಡು. ನಾ ಏನ್ ಹೇಳಿದ್ರೂ ನಂಬಲ್ಲ ನೀನು. ನಂಬಿಕೆ ಕಮ್ಮಿ ಆಗಿರುವ ದಿನಗಳಲ್ಲಿ ಮೌನವಾಗಿರೋದೇ ಒಳ್ಳೇದುʼ
"ಇದ್ಯಾಕವ್ವ? ಏನೇನೋ ಮಾತಾಡ್ತಿದ್ದಿ. ಏನ್ ಆಯ್ತೇ. ಇಸ್ ಎವೆರಿತಿಂಗ್ ಆಲ್‌ರೈಟ್?"
ʻಬಿಡೋ. ಫೋನಲ್ ಹೇಳ್ತೀನಿ. ಈಗ ಒಪಿಡಿಗೆ ಹೋಗಬೇಕು. ಐದರಷ್ಟೊತ್ತಿಗೆ ಮುಗಿಯುತ್ತೆ. ಆಮೇಲ್ ಫೋನ್ ಮಾಡ್ತೀನಿ. ನೀ ಬಿಡುವಾಗಿರ್ತೀಯಲ್ಲ?ʼ
ʻಡವ್ ಮಾಡೋದ್ರಲ್ ನೀನೂ ಏನ್ ಕಮ್ಮಿ ಇಲ್ಲ ಕಣ್ ತಗ. ಸರಿ ಆಮೇಲ್ ಫೋನ್ ಮಾಡ್ತೀನಿ. ಸುಮಾರ್ ಹೊತ್ ಕುಯ್ಯೋದಿದೆ! ರೆಡಿಯಾಗಿರು!ʼ
ಒಪಿಡಿ ಮುಗಿಸಿ, ವಾರ್ಡಿಗೆ ಒಂದು ರೌಂಡು ಹೋಗಿ ಬರುವುಷ್ಟರಲ್ಲಿ ಐದೂವರೆ ಆಗೇ ಹೋಗಿತ್ತು. ಆಸ್ಪತ್ರೆ ಎದುರಿಗಿನ ಕಾಫಿ ಶಾಪಿಗೆ ಹೋಗಿ ಒಂದು ಲೆಮನ್ ಟೀ ಹೇಳಿ ಸಾಗರನಿಗೆ ಫೋನು ಮಾಡಿದೆ.
"ಹಲೋ ಯಾರು" ಅಂದ.
ʻಲೋ! ನಾನೆಲ್ಲೋ ಸುಳ್ಳೇಳ್ದೆ ಅಂದ್ಕಂಡಿದ್ದೆ. ನಿಜವಾಗ್ಲೂ ನನ್ ಫೋನ್ ನಂಬರ್ ಡಿಲೀಟ್ ಮಾಡಿಬಿಟ್ಟಿದ್ದ!ʼ
"ಹು"
ʻಗೂಬೆʼ
"ಹು"
ʻಬರೀ ಹು ಅಲ್ಲೇ ಮುಗಿಸ್ತೀಯೋ ಹೆಂಗೆʼ
"ಮ್. ಹೇಗಿದ್ದೀಯೇ... ಎಷ್ಟೊಂದ್ ದಿನದ ಮೇಲೆ ನಿನ್ನ ಮಾತು ಕೇಳಿದ್ದಲ್ವ. ಖುಷೀಗೆ ದುಃಖಕ್ಕೆ ಮಾತೇ ಹೊರಡಲಿಲ್ಲ"
ʻದುಃಖ ಯಾಕೋʼ
"ಬಿಡಿಸಿ ಹೇಳಬೇಕೇನೋ"
ʻಬೇಡ ಬಿಡುʼ
"ಹು... ಹೇಗಿದ್ದಿ.... ಮಗಳು ಹೇಗಿದ್ದಾಳೆ?"
ʻಮ್. ಮಗಳಿಗೇನು ಚೆನ್ನಾಗಿದ್ದಾಳೆ. ಆಟ ಆಟ ಆಟ. ಸುಸ್ತು ಮಾಡಿಬಿಡ್ತಾಳೆʼ
"ಮತ್ತೆ ಮಕ್ಕಳಂದ್ರೆ ಹಂಗೇ ಇರ್ಬೇಕಪ್ಪ"
ʻಓಹೋ! ಮತ್ತೆ ನಿಂಗೆಷ್ಟಾದ್ವು ಮಕ್ಳುʼ
"ಆಗಿದ್ರೆ ಹೇಳ್ತಿರಲಿಲ್ವ?"
ʻನನಗೇನ್ಗೊತ್ತುʼ
"ಸರಿ ಬಿಡವ್ವ. ಈಗ ವೈಫು ಕ್ಯಾರಿಯಿಂಗು. ಅದ ತಿಳ್ಸೋಕೆ ಅಂತಾನೇ ಮೆಸೇಜು ಮಾಡಿದ್ದು"
ʻಓ! ಕಂಗ್ರಾಟ್ಸ್ ಕಣೋ. ಖುಷಿಯಾಯ್ತು. ಎಷ್ಟು ತಿಂಗಳೀಗʼ
"ಈಗ ಒಂದೂವರೆ ತಿಂಗಳು ಕಣೆ. ನಿನ್ನೆಯಷ್ಟೇ ಪ್ರೆಗ್ನೆನ್ಸಿ ಟೆಸ್ಟು ಸ್ಕ್ಯಾನು ಮಾಡ್ಸಿದ್ದು"
ʻಗುಡ್ ಗುಡ್. ಆರಾಮಿದ್ದಾಳಾ ವೈಫುʼ
"ಹು. ಆರಾಮಿದ್ದಾಳೆ"
ʻಮತ್ತೆ ನೀನೆಂಗಿದ್ದಿʼ
ʻಇದ್ದೀನಿ ಹಿಂಗೆʼ
"ಅಂದ್ರೆ"
ʻಹೋಗ್ಲಿ ಬಿಡೋ. ಅಪರೂಪಕ್ಕೆ ಫೋನ್ ಮಾಡಿದ್ದಿ. ಸುಮ್ನೆ ನಾನೇನೋ ಹೇಳ್ಕೊಳ್ಳೋದು. ಆಮೇಲೆ ನೀನು ʼನಿಂಗ್ ಕೇಳೋದಿಕ್ಕೆರಡು ಕಿವಿಗಳು ಬೇಕಿದ್ವು ಅಷ್ಟೇʼ ಅಂತ ಗೋಳಾಡೋದೆಲ್ಲ ಯಾಕೆ ಬಿಡುʼ
"ಸರಿ ಕಣವ್ವ್. ಅದೆಷ್ಟ್ ರೇಗಿಸ್ತೀಯೋ ರೇಗ್ಸು! ಇಡ್ತೀನಿ"
ʻಹಂಗಲ್ವೋʼ
"ಇನ್ನೆಂಗೇ"
ʻಲೈಫಲ್ ತಗಂಡಿದ್ದ ಕೆಲವು ತಪ್ಪು ನಿರ್ಧಾರಗಳು ಸಾಯೋವರೆಗೂ ಕಾಡ್ತಾವಲ್ವ?ʼ
"ಮ್. ಕೆಲವೊಂದ್ ಸಲ ಹಂಗಾಗಬಹುದು"
ʻಕೆಲವೊಂದು ಸಲಾನ..... ನನಗಂತೂ ದಿನನಿತ್ಯ ಹಂಗೇ ಆಗ್ತಿದೆʼ
"ಅಂತದ್ದೇನಾಯ್ತೆ? ರಾಜೀವ್ ಇನ್ಫೀರಿಯಾರಿಟಿ ಕಾಂಪ್ಲೆಕ್ಸ್ ಮತ್ತೆ ಜಾಸ್ತಿ ಆಗಿದೆಯಾ?"
ʻಅಯ್ಯೋ ಈಗ ಆಗಿರೋದಕ್ಕೆಲ್ಲ ಹೋಲಿಸಿದರೆ ಆ ಇನ್ಫೀರಿಯಾರಿಟಿ ಕಾಂಪ್ಲೆಕ್ಸ್ ಸಾವಿರ ಪಾಲು ಉತ್ತಮ ಬಿಡುʼ
"ಥೂ! ಬರೀ ಒಗಟೊಗಟಾಗೇ ಮಾತಾಡ್ತೀದ್ದೀಯಪ್ಪ. ಅದೇನಾಯ್ತು ಅಂತ ನೆಟ್ಟಗೆ ಹೇಳೇ"
ಎಲ್ಲಿಂದ ಶುರು ಮಾಡೋದು ಅನ್ನೋದೇ ಅರ್ಥವಾಗಲಿಲ್ಲ. ಮಗಳು ಹುಷಾರು ತಪ್ಪಿದ ದಿನದಿಂದ ಶುರುಮಾಡಿ ಮಧ್ಯೆ ಒಮ್ಮೆ ಹಿಂದಕ್ಕೋಗಿ ಸುಮಾಳ ಮದುವೆಯ ಹಿಂದಿನ ದಿನ ನಡೆದಿದ್ದನ್ನು ತಿಳಿಸಿ ಮತ್ತೆ ಮುಂದಕ್ಕೆ ಬಂದು ರಾಜೀವ ರಾಮ್‌ಪ್ರಸಾದ್‌ರನ್ನು ಮನೆಗೆ ಕರೆದುಕೊಂಡು ಬಂದು ಜಗಳವಾಡಿ ಮಗಳನ್ನೆತ್ತಿಕೊಂಡು ಹೋದ ದಿನದವರೆಗೆ ಹೇಳಿ ಮುಗಿಸಿದೆ. ಬರೋಬ್ಬರಿ ಅರ್ಧ ಘಂಟೆ ಹಿಡಿಯಿತು. ಸಾಗರ ಮಧ್ಯೆ ಮಧ್ಯೆ ಹ್ಞುಂಗುಟ್ಟುತ್ತಿದ್ದ. ಪ್ರತಿ ಹು ಕೂಡ ಮತ್ತೊಂದು ರೌಂಡು ದುಃಖದಲ್ಲಿ ಅದ್ದಿ ತೆಗೆದಂತೆ ಕೇಳಿಸುತ್ತಿತ್ತು.
"ಆಮೇಲೇನಾಯ್ತೆ" ಅಂದವನಲ್ಲಿ ಹೆಂಗೋ ಎಲ್ಲಾ ಸರಿ ಹೋಗಿರಲಿ ಅನ್ನೋ ಕಾಳಜಿ ಎದ್ದು ಕಾಣುತ್ತಿತ್ತು.
ʻಮ್. ಮಾರನೇ ದಿನ ಬೆಳಿಗ್ಗೆ ಎಂಟಕ್ಕೆಲ್ಲ ರಾಜೀವನ ಮನೆಗೋದೊ. ನಾನೂ ಅಪ್ಪ ಅಮ್ಮ. ಶಶಿ ಕೂಡ ಬರ್ತೀನಂದ. ಸೋನಿಯಾ ಮುಗುಮ್ಮಾಗಿದ್ದಳು ಶಶಿ ಕೂಡ ನಮ್ಮ ಜೊತೆಗೂಡಿದ್ದಕ್ಕೆ. ಆಸ್ಪತ್ರೆಯಲ್ಲಿ ಒಂದಷ್ಟು ಗೆಳೆಯರ ಜೊತೆ ಚರ್ಚೆ ಮಾಡಿದ ನಂತರ ಶಶಿಗೆ ನನ್ನ ಮೇಲೆ ನಂಬಿಕೆ ಬಂದಿತ್ತು. ಅಂತದ್ದೇನಿಲ್ಲ ಇವರಿಬ್ಬರ ನಡುವೆ ಅಂತ ಖಚಿತವಾಗಿತ್ತವನಿಗೆ.
ನಾವೆಂಗೆ ದಂಡು ದಾಳಿಯ ಸಮೇತ ಸಿದ್ಧರಾಗಿದ್ದೆವೋ ಅವರ ಮನೆಯವರೂ ಸಕಲ ಶಸ್ತ್ರಾಸ್ತ್ರಗಳೊಂದಿಗೆ ಸಿದ್ಧವಾಗಿದ್ದರು! ರಾಜೀವನ ಅಕ್ಕ ಭಾವ... ಚಿಕ್ಕಪ್ಪ.... ದೊಡ್ಡಪ್ಪ..... ಚಿಕ್ಕಮ್ಮ ದೊಡ್ಡಮ್ಮ..... ನಮಗಿಂತ ಹೆಚ್ಚಿನ ಸಂಖ್ಯೆಯ ಜನರಿದ್ದರು ಅವರ ಮನೆಯಲ್ಲಿ. ನಾನಂತೂ ನಿರ್ಧಾರ ಮಾಡಿಬಿಟ್ಟಿದ್ದೆ. ಯಾರಾದರೂ ಇರಲಿ. ಯಾರು ಏನು ಬೇಕಾದರೂ ಮಾತನಾಡಲಿ..... ನನಗೆ ನನ್ನ ಮಗಳು ಜೊತೆಗೆ ಬರಬೇಕು ಅಷ್ಟೇ. ಅಷ್ಟು ಬಿಟ್ಟರೆ ನನಗೆ ಇನ್ನೇನು ಆಸಕ್ತಿಕರ ವಿಷಯವಲ್ಲ.
ಮನೆಯ ಒಳಗೋಗಿ ಕುಳಿತೆವೋ ಇಲ್ಲವೋ ಯಾರು ಏನು ಮಾತನಾಡುತ್ತಿದ್ದಾರೆ ಅನ್ನುವುದೇ ತಿಳಿಯದಂತೆ ಕಾವ್ ಕಾವ್ ಎಂದು ಎಲ್ಲರೂ ಅರಚಲು ಶುರುಮಾಡಿದರು. ಕಾಗೆಗಳೂ ಇವರ ಗಲಾಟೆಗೆ ನಾಚಿಕೊಳ್ಳಬೇಕು. ಮಾತನಾಡದೆ ಕುಳಿತವರೆಂದರೆ ನಾನು ರಾಜೀವು ಮತ್ತು ರಾಜೀವನ ದೊಡ್ಡಪ್ಪ. ನನ್ನ ಕಣ್ಣೆಲ್ಲ ಮಗಳೆಲ್ಲಿ ಅನ್ನುವುದನ್ನು ಹುಡುಕುವುದರತ್ತಲೇ ಇತ್ತು. ಮಗಳಿನ್ನೂ ಎದ್ದಿರಲಿಕ್ಕಿಲ್ಲ. ಅಥವಾ ಮಗಳನ್ನು ನಾ ಕರೆದುಕೊಂಡು ಹೋಗಿಬಿಟ್ಟರೆ ಅನ್ನೋ ಗಾಬರಿಯಿಂದ ನೆಂಟರ ಮನೆಗೇನಾದರೂ ಸಾಗಿಸಿಬಿಟ್ಟಿದ್ದಾರಾ?
"ಏನ್ ಮನುಷ್ರು ಕುಲಾನಾ ನೀವೆಲ್ಲ? ಸುಮ್ನಿರಿ ಒಂದ್ನಿಮಿಷ" ಅಂತ ರಾಜೀವನ ದೊಡ್ಡಪ್ಪ ನಮ್ಮ ಮನೆಯವರಿಗೂ ಅವರ ಮನೆಯವರಿಗೂ ಜೋರು ದನಿಯಲ್ಲಿ ಗದರಿಸಿದಾಗಷ್ಟೇ ಮನೆಯಲ್ಲೊಂದಷ್ಟು ಶಾಂತಿ ನೆಲೆಸಿದ್ದು.
ಎಲ್ಲರೂ ಸುಮ್ಮನಾಗಿ ಅಕ್ಕಪಕ್ಕ ಕುಳಿತವರೊಂದಿಗೆ ಗುಸು ಗುಸು ಚರ್ಚೆ ನಡೆಸಿದರು. ಅಲ್ಲಿದ್ದವರಿಗೆ ಕೆಲವರಿಗಷ್ಟೇ ಈ ಸಮಸ್ಯೆಗಳಿಗೆಲ್ಲ ಒಂದು ಪರಿಹಾರ ಸಿಗಲಿ ಎಂಬ ಮನಸ್ಸಿದ್ದಿದ್ದು. ಇನ್ನುಳಿದವರಿಗೆ ಇದು ಎಂಟರ್‌ಟೈನ್‌ಮೆಂಟ್ ಅಷ್ಟೇ.
ದೊಡ್ಡಪ್ಪ ನನ್ನನ್ನುದ್ದೇಶಿಸಿ "ನೋಡಮ್ಮ. ರಾಜೀವ ನಿನ್ನ ಬಗ್ಗೆ ಬಹಳಷ್ಟು ಆರೋಪ ಮಾಡಿದ್ದಾನೆ. ಅದೆಷ್ಟು ಸತ್ಯವೋ ಸುಳ್ಳೋ ನಿನಗೊಬ್ಬಳಿಗೇ ಗೊತ್ತಿರಬೇಕು. ಸಂಸಾರ ಅಂದ ಮೇಲೆ ಜಗಳ ತಪ್ಪು ಒಪ್ಪು ಎಲ್ಲಾ ಇರುವಂತದ್ದೇ. ಜಗಳ ಆಡ್ಕೊಂಡ ಕಾರಣಕ್ಕೆ ಮಗಳನ್ನು ನಡುರಾತ್ರಿ ಎತ್ಕಂಡು ಬಂದಿದ್ದು ತಪ್ಪು. ನಾನೂ ಒಪ್ತೀನಿ. ಬುದ್ಧಿವಾದ ಹೇಳಿದ್ದೀನಿ ಅವನಿಗೂ. ತಾಯಿ ಪಕ್ಕ ಮಲಗಿದ್ದ ಮಗಳನ್ನು ಹಂಗ್ ಎತ್ಕಂಡ್ ಬಂದಿದ್ದು ತಪ್ಪು ಅಂತ ರಾಜೀವನೂ ಒಪ್ಪಿಕೊಂಡವನೆ. ನೀ ನಿನ್ನ ತಪ್ಪುಗಳನ್ನೆಲ್ಲ ಒಪ್ಕಂಡು ಎಲ್ಲರ ..... ಮುಖ್ಯವಾಗಿ ರಾಜೀವನ ಕ್ಷಮೆ ಕೇಳಿ..... ಇನ್ಮೇಲೆ ಈ ತರದ ತಪ್ಪುಗಳನ್ನ ಮಾಡದಂಗೆ ಬದುಕ್ತೀನಿ ಅಂತ ಹೇಳಿದರೆ ರಾಜೀವ ನಿನ್ನ ಕ್ಷಮಿಸಿ ಮತ್ತೆ ನಿನ್ ಕೈ ಹಿಡಿಯುವಂಗೆ ನೋಡಿಕೊಳ್ಳೋದು ನನ್ನ ಜವಾಬ್ದಾರಿ" ಎಂದರು.
ರಾಜೀವ ನನ್ನ ಕ್ಷಮಿಸಿ..... ಕೈಹಿಡಿದು ಬಾಳು ಕೊಟ್ಟು..... ಈ ತರದ ಪದಗಳನ್ನು ಕೇಳಿದಾಗ ನಗು ಬರದೇ ಇದ್ದೀತಾ ಹೇಳು.... ಜೋರಾಗೇ ನಕ್ಕುಬಿಟ್ಟೆ. ಎಲ್ಲರೂ .... ನಮ್ಮ ಮನೆಯವರೂ ಸೇರಿದಂತೆ..... ಸುಟ್ಟುಬಿಡುವಂತೆ ನನ್ನನ್ನು ನೋಡಿದರು. ಪುಣ್ಯಕ್ಕೆ ಅಲ್ಲಿದ್ದವರಾರಿಗೂ ಬೆಂಕಿ ಉಗುಳುವ ಮೂರನೇ ಕಣ್ಣಿರಲಿಲ್ಲ!
ದೊಡ್ಡಪ್ಪ ಪಾಪ ನಿಜ್ಜ ನಮ್ಮಿಬ್ಬರ ಒಳಿತಿಗೇ ಆ ರೀತಿ ಮಾತನಾಡಿದ್ದರು. ಹಳೇ ಕಾಲದವರು .... ಗಂಡ ಅನ್ನಿಸಿಕೊಂಡವನು ಹೆಂಡತಿಯ ಕೈಹಿಡಿದು ಬಾಳು ಕೊಡ್ತಾನೆ.... ಅಂತ ನಿಜ್ಜ ನಂಬಿಕೊಂಡಿರುವವರು.... ಅದೊಂದನ್ನು ಬಿಟ್ಟರೆ ಅವರ ಉದ್ದೇಶ ಒಳ್ಳೆಯದೇ ಆಗಿತ್ತು. ಅವರ ಮಾತಿಗೆ ನಕ್ಕಿದ್ದು ತಪ್ಪು.
ʻಸಾರಿ ಅಂಕಲ್. ಏನೋ ನೆನಪಿಸಿಕೊಂಡು ನಕ್ಕುಬಿಟ್ಟೆ. ಬೇಸರ ಮಾಡಬೇಡಿ. ಸಾರಿ. ಮಾತಾಡುವ ಮೊದಲು ಮಗಳೆಲ್ಲಿ ಅಂತ ಕೇಳ್ಬೋದಾʼ
"ಮೇಲೆ ಮಲಗಿದ್ದಾಳಮ್ಮ" ಅಂದರು.
ʻಸರಿ. ನಾ ಎಷ್ಟು ಜನರ ಜೊತೆ ಚಕ್ಕಂದವಾಡ್ತಿರೋ ಚಿನಾಲಿ ಅಂತಂದ್ರು ನಿಮ್ ಮಗʼ
ನನ್ನ ಮಾತಿನಲ್ಲಿದ್ದ ವ್ಯಂಗ್ಯವನ್ನು ಗುರುತಿಸುತ್ತ "ಅದೆಲ್ಲಾ ಈಗ್ಯಾಕೆ. ಮಾತಿಗೆ ಮಾತು ಬೆಳೆಯುತ್ತೆ ಅಷ್ಟೇ. ನಿನ್ನ ಕ್ಷಮಿಸುವ ದೊಡ್ಡ ಮನಸ್ಸು ಮಾಡಿದ್ದಾನಲ್ಲ ಅವನು. ಅಷ್ಟು ಸಾಕಲ್ವ. ಕಾಲಿಡ್ಕಂಡು ಕ್ಷಮೆ ಕೇಳ್ಕೊ ಅಷ್ಟೇ" ಅಂದಿದ್ದು ನಮ್ಮತ್ತೆ. ಪಂಚಾಯ್ತಿಗೆಂದು ನನ್ನನ್ನು ಕರೆಸಿ ಇವರೇ ಮಾತಾಡ್ತಾರಲ್ಲ ಅಂತ ಅತ್ತೆಯ ಕಡೆಗೊಮ್ಮೆ ಕೆಕ್ಕರಿಸಿ ನೋಡಿದರು ದೊಡ್ಡಪ್ಪ.
ʻನಾ ನಿಮ್ ಜೊತೆ ಮಾತಾಡ್ತಿಲ್ಲ ಅತ್ತೆ. ನೀವೇಳಿ ಅಂಕಲ್. ನಾ ಎಷ್ಟು ಜನರ ಜೊತೆ ಚಕ್ಕಂದವಾಡ್ತಿರೋ ಚಿನಾಲಿ ಅಂತಂದ್ರು ನಿಮ್ ಮಗʼ
"ಇಬ್ಬರು"
ʻಯಾರ್ಯಾರಂತೆ?ʼ
"ಇನ್ಯಾರೇ ಚಿನಾಲಿ" ರಾಜೀವ ಕಿರುಚಿದ "ಆ ನಿನ್ ಹಳೇ ಲವರ್ರು ಪುರುಷೋತ್ತಮ.... ಮತ್ತೀ ಹೊಸ ಮಿಂಡ ರಾಮು..... ಅದೇನ್ ಇಬ್ರೂ ಕೈಲೂ ಹಿಂದೆ ಮುಂದೆ ಒಟ್ಗೇ ಮಾಡಿಸ್ಕೋತೀಯೋ ಏನೋ...." ಯಪ್ಪ ಹೇಳಬಾರದ ಕೇಳಬಾರದ ಮಾತುಗಳು. ಮಗಳು ಜೀವನದಲ್ಲಿ ಅಲ್ಲೊಂದು ಇಲ್ಲೊಂದು ತಪ್ಪು ಮಾಡಿರಬಹುದು, ಇಲ್ಲಾ ಅಂತಲ್ಲ. ಆದರೂ ಮಾಡದ ತಪ್ಪುಗಳಿಗೆ ಈ ರೀತಿಯ ಬಿರುದುಗಳನ್ನು ಪಡೆಯುವಷ್ಟು ನಿಕೃಷ್ಟಳಲ್ಲ ನನ್ನ ಮಗಳು ಎಂದು ನಮ್ಮಪ್ಪನಿಗೆ ಗೊತ್ತಿತ್ತು. ಮಾತನಾಡಲು ಬಾಯಿ ತೆರೆದವರನ್ನು ನಾನೇ ಸುಮ್ಮನಾಗಿಸಿದೆ.
ʻಬರೀ ಇಬ್ರೇನಾ! ತಪ್ ತಿಳ್ದಿದ್ದೀರ ರಾಜೀವ್. ಅವರಿಬ್ಬರ ಜೊತೆ ಇನ್ನೂ ಏಳು ಜನರಿದ್ದಾರೆ. ಅಷ್ಟೂ ಜನರೊಟ್ಟಿಗೆ ಒಂದೇ ಸಲ ದೇಹದ ನವರಂಧ್ರಗಳಿಗೂ ಮಾಡಿಸಿಕೊಳ್ತೀನಿ. ನಿಮಗೇನಾದ್ರೂ ಪ್ರಾಬ್ಲಮ್ಮಾ?ʼ
"ಸೀರಿಯಸ್ಲಿ ಹಂಗಂದೇನೇ?" ಸಾಗರನ ದನಿಯಲ್ಲಿ ಬೆರಗಿತ್ತು.
ʻಹು ಕಣೋ. ನಂಗೂ ಸಾಕಾಗಿತ್ತು. ಬರೀ ರಾಮ್‌ಪ್ರಸಾದ್ ಹೆಸರೇಳಿದ್ದರೆ ಅವರನ್ನೇ ಕರೆಸಿ ಕೇಳಿ ಅವರು ಯಾರಿಗೆ ಫ್ರೆಂಡು ಅಂತೆಲ್ಲ ಸಮಜಾಯಿಷಿ ಕೊಡೋಣ. ರಾಜೀವ ರಾಮ್‌ಪ್ರಸಾದ್ ಸ್ನೇಹದ ಕುರಿತು ರಾಜೀವನನ್ನೇ ಒಂದಷ್ಟು ಪ್ರಶ್ನೆ ಕೇಳಿದರೆ ಗೊತ್ತಾಗಿಹೋಗ್ತದೆ. ಸತ್ಯ ಹೊರಗೆ ಬರ್ತದೆ. ಪ್ರಶ್ನೆಗಳನ್ನೂ ತಯಾರು ಮಾಡಿಟ್ಟುಕೊಂಡಿದ್ದೆ ಮನಸಿನಲ್ಲಿ. ಆದರೆ ರಾಜೀವ ಪುರುಷೋತ್ತಮನ ಹೆಸರೆತ್ತಿದ ನೋಡು. ಅಲ್ಲಿಗೆ ನನ್ನ ವಾದದ ದಾಟಿಯೇ ಬದಲಾಗಿಹೋಯಿತು. ರಾಜೀವನಿಗೂ ಗೊತ್ತು ನಾ ಪುರುಷೋತ್ತಮನ ಜೊತೆಗೆ ದೈಹಿಕ ಸಂಪರ್ಕ ಹಾಳ್ ಬಿದ್ದೋಯ್ತು ಫೋನಿನಲ್ಲಾಗಲೀ ಮೆಸೇಜಿನಲ್ಲಾಗಲೀ ಒಂದ್ ದಿನಕ್ಕೂ ಸಂಪರ್ಕಿಸಿದವಳಲ್ಲ ಅಂತ. ಹಂಗ್ ನೋಡಿದ್ರೆ ಅವರೇ ಅವಳ ಹಳೇ ಲವ್ವು ಅಶ್ವಿನಿ ಜೊತೆ ಘಂಟೆಗಟ್ಲೆ ಮಾತಾಡೋರು. ನಮ್ಮಪ್ಪ ಹೇಳೋದು ಕೇಳಿದರೆ ಅವಳ ಜೊತೆ ಸುತ್ತಾಡೋದನ್ನೂ ನಡೆಸಿದ್ದರು. ನಂಗದು ತಪ್ಪು ಅಂತ ಕೂಡ ಅನ್ನಿಸಿರಲಿಲ್ಲ. ಏನೋ ನಂಗ್ ನೀ ಇದ್ದಂಗೆ ಅವರಿಗೆ ಅಶ್ವಿನಿ ಇದ್ದಾಳೆ ಕಷ್ಟ ಸುಖ ಹಂಚಿಕೊಳ್ಳೋಕೆ ಅಂತಂದುಕೊಂಡು ಸುಮ್ಮನೆಯೇ ಇದ್ದೆʼ
"ಮ್"
ʻನೀ ಈಗ ಶಾಕ್ ಆದ್ಯಲ್ಲ ಅದೇ ತರ ಅವತ್ತು ಅಲ್ಲಿದ್ದವರೆಲ್ಲ ನನ್ನ ವಾದದ ಸರಣಿಯನ್ನು ಕೇಳಿ ಬೆರಗಾಗಿಬಿಟ್ಟರು. ಕ್ಷಮೆ ಕೇಳ್ತಾಳೆ... ತಪ್ಪು ಮಾಡಿದ್ದಾಳೋ ಇಲ್ಲವೋ.... ಕ್ಷಮೆ ಕೇಳ್ತಾಳೆ.... ಅಲ್ಲಿಗೆ ಸರಿ ಹೋಗ್ತದೆ. ಮನೆಗೋಗಿ ತಿಂಡಿ ತಿನ್ಕಂಡು ನಮ್ಮ ಕೆಲಸ ನೋಡಿಕೊಳ್ಳುವ ಅಂತಂದುಕೊಂಡು ಬಂದಿದ್ದವರೆಲ್ಲ ನನ್ನ ಮಾತುಗಳನ್ನು ಕೇಳಿ ಬೆಚ್ಚಿಬಿದ್ದರು.
"ಏನಮ್ಮ ಹೇಳ್ತಿದ್ದಿ?" ಅಪ್ಪ ಗಾಬರಿಬಿದ್ದು ಕೇಳಿದರು. ಅಮ್ಮ ತಲೆತಗ್ಗಿಸಿ ಅಳುತ್ತಿದ್ದರು.
ʻನಿಜಾನೇ ಹೇಳ್ತಿದ್ದೀನಪ್ಪ. ನಾ ಬರೋಬ್ಬರಿ ಒಂಭತ್ತು ಜನರನ್ನು ಇಟ್ಟುಕೊಂಡಿದ್ದೀನಿʼ
"ನಾ ಹೇಳಲಿಲ್ವ ದೊಡ್ಡಪ್ಪ. ಎಂತ ಚಿನಾಲಿ ಇವಳೆಂದು" ರಾಜೀವನ ಅಕ್ಕ ಮೊಕಕ್ಕುಗಿದರು. ನನ್ನನ್ನು ಚಿನಾಲಿ ಎಂದವರ ಪಟ್ಟಿಗೆ ಇವರೊಬ್ಬರು ಹೊಸ ಸೇರ್ಪಡೆ.
"ನೀ ಸುಮ್ಮನಿರಮ್ಮ. ಅವಳು ಹೇಳೋದು ಕೇಳಿದ್ರೆ ಗೊತ್ತಾಗಲ್ವ. ಸುಮ್ಮನೆ ರಾಜೀವನನ್ನು ರೇಗಿಸೋಕೇ ಈ ರೀತಿ ಮಾತನಾಡ್ತಿದ್ದಾಳೆ ಅಂತ. ಸ್ವಲ್ಪ ನೆಟ್ಟಗೆ ಗೌರವ ಇಟ್ಕಂಡು ಮಾತಾಡು ಧರಣಿ" ಎಂದು ಬೇಡಿಕೊಂಡರು.
ʻಸಾರಿ ಅಂಕಲ್. ನಿಮಗೊಬ್ಬರಿಗೆ ಬಿಟ್ಟರೆ ಇಲ್ಲಿರುವ ಇನ್ಯಾರಿಗೂ ಗೌರವ ಕೊಡಬೇಕೆಂದಾಗಲೀ... ಇಲ್ಲಿ ಕುಳಿತು ರಾಜಿ ಪಂಚಾಯ್ತಿ ಮಾಡಿಕೊಳ್ಳಬೇಕೆಂದಾಗಲೀ.... ರಾಜೀವ ಹೇಳಿದ ಸುಳ್ಳುಗಳಿಗೆ ಪ್ರತಿಯಾಗಿ ವಾದ ಮಾಡಬೇಕೆಂದಾಗಲೀ ನನಗನ್ನಿಸುತ್ತಿಲ್ಲ. ನನ್ನ ಮಗಳನ್ನ ಕರೆದುಕೊಂಡು ಹೋಗುವುದಷ್ಟೇ ನನ್ನುದ್ದೇಶ. ಮಗಳನ್ನ ಕಳಿಸಿಕೊಡಿ ನಾ ಹೊರಡ್ತೀನಿʼ
"ಯಾಕವಳನ್ನು ನಿನ್ನ ತರಾ ಚಿನಾಲಿ ಸೂಳೆ ಮಾಡಿಬಿಡಬೇಕೆಂಬ ಉದ್ದೇಶವೇನೋ?" ರಾಜೀವ ಮಗಳ ಬಗ್ಗೆಯೂ ಈ ರೀತಿ ಮಾತನಾಡಿದ್ದು ಅಲ್ಲಿದ್ದ ಬಹುತೇಕರಿಗೆ ಸರಿ ಕಾಣಲಿಲ್ಲ.
ʻನೀ ನಮ್ಮ ಮಗಳನ್ನ ಎಷ್ಟೆಲ್ಲ ಪ್ರೀತಿಯಿಂದ ನೋಡ್ಕಂಡಿದ್ದಿ.... ಎಷ್ಟೆಲ್ಲ ಒಳ್ಳೊಳ್ಳೆ ಮಾತಲ್ಲಿ ಹೊಗಳಿದ್ದಿ ಅನ್ನೋದನ್ನ ಇಲ್ಲಿರುವವರ ಹತ್ತಿರವೆಲ್ಲ ಹೇಳುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ನನ್ ಮಗಳು ಚಿನಾಲಿ ಸೂಳೆಯಾದ್ರೂ ನನ್ನ ಬಳಿ ಇದ್ದೇ ಆಗಲಿ. ಮಗಳನ್ನ ನೀವೇ ಕಳಿಸ್ತೀರೋ ನಾನೇ ರೂಮಿಗೋಗಿ ಕರೆದುಕೊಂಡು ಹೋಗಲೋʼ
"ಓಹೋ! ಇವಳು ಕಳಿಸಿ ಅಂದ ತಕ್ಷಣ ಹೆದರಿಬಿಟ್ಟು ಕಳಿಸಿಬಿಡ್ತೀವಿ ಅಂದ್ಕೊಂಡವ್ಳೆ! ಹೋಗೇ ಹೋಗೇ ಕಂಡಿದ್ದೀನಿ ಕಣ. ಮುಟ್ ನೋಡು ಮಗೂನ, ಕೈಕಾಲು ಮುರಿದಾಕಿಬಿಡ್ತೀನಿ" ಅತ್ತೆಯ ಉವಾಚ.
ಮತ್ತೊಮ್ಮೆ ಜೋರಾಗಿ ನಕ್ಕೆ. ದೊಡ್ಡಪ್ಪನ ಕಡೆಗೆ ನೋಡಿ ʻಅಂಕಲ್. ಇಲ್ಲಿ ನಮ್ಮಿಬ್ಬರ ಸಂಸಾರ ಸರಿಹೋಗಬೇಕು ಅಂತ ಮನಸ್ಸಿರೋದು ನಿಮ್ಮೊಬ್ಬರಿಗೆ ಮಾತ್ರ ಅನ್ನಿಸುತ್ತೆ. ಮಿಕ್ಕವರಿಗೆಲ್ಲ ನನ್ನ ಕುರಿತು ಅವರ ಮನಸ್ಸಲ್ಲಿರೋ ವಿಷ ಕಕ್ಕಿಕೊಳ್ಳುವ ಚಟ ಅಷ್ಟೇ. ನನ್ನ ಮಗಳನ್ನ ಜೊತೆಗೆ ಕಳಿಸಿಕೊಡಿ ಅಂಕಲ್. ಅಷ್ಟೇ ನನಗೆ ಬೇಕಿರೋದುʼ
"ನೋಡಮ್ಮ. ಇಲ್ಲಿ ಯಾರದು ತಪ್ಪು ಯಾರದು ಸರಿ ಅಂತ ನನಗಂತೂ ಗೊತ್ತಾಗ್ತಿಲ್ಲ. ಒಂದ್ ಕೆಲಸ ಮಾಡಿ. ತಪ್ಪು ಮಾಡಿದ್ದೀರೋ ಬಿಟ್ಟಿದ್ದೀರೋ. ಇಬ್ರೂ ಒಬ್ಬರೊಬ್ಬರ ಕ್ಷಮೆ ಕೇಳಿ. ಅಲ್ಲಿಗೆ ಮುಗಿಸುವ. ಮಗಳನ್ನು ಕರೆದುಕೊಂಡು ಹೋಗುವಂತೆ. ಒಂದಷ್ಟು ದಿನ ಎಲ್ಲ ಸರಿ ಹೋಗ್ತದೆ"
ʻಅವರೂ ಕ್ಷಮೆ ಕೇಳ್ತಾರೆ ಅನ್ನೋದಾದರೆ ನಾನೂ ಕೇಳ್ತೀನಿ. ತಪ್ ಮಾಡಿಲ್ಲ. ಅಂದ್ರೂ ನಿಮ್ ಮಾತಿಗೆ ಬೆಲೆಕೊಟ್ಟು ಕ್ಷಮೆ ಕೇಳ್ತೀನಿ, ಅವರೂ ಕೇಳಿದರೆ ಮಾತ್ರ. ಮಗಳನ್ನು ಕಳಿಸಿಕೊಡಿʼ
"ಕಳಸಲ್ಲ ಅಂತ ಅಮ್ಮ ಹೇಳಿದ್ದು ಕೇಳಿಸಲಿಲ್ವ ನಿನಗೆ. ನಿನ್ನಂತ ಚಿನಾಲಿ ಹತ್ರ ನಾನ್ಯಾಕೆ ಕ್ಷಮೆ ಕೇಳಲಿ. ದೊಡ್ಡಪ್ಪ ಹೇಳಿದ್ರು ಅಷ್ಟೇ ಯಾರ್ ಹೇಳಿದ್ರೂ ಅಷ್ಟೇ...." ರಾಜೀವನ ಮಾತಿಗೆ ಪ್ರತಿಯಾಡಿದ್ದು ದೊಡ್ಡಪ್ಪ.
"ಮತ್ತೆ ನನ್ನನ್ಯಾಕೆ ರಾಜಿ ಪಂಚಾಯ್ತಿಗೆ ಕರೆಸಿದಪ್ಪ ದೊಡ್ಡ ಮನುಷ್ಯ. ಮಾಡ್ಕೊಳ್ಳಿ ನಿಮಗಿಷ್ಟ ಬಂದಂಗೆ"
ದೊಡ್ಡಪ್ಪ ಕೂಡ ಕೈ ಚೆಲ್ಲಿ ಕುಳಿತಾಗ ಏನು ಮಾಡಬೇಕೆಂದು ಒಂದು ಕ್ಷಣ ಯಾರಿಗೂ ತಿಳಿಯಲಿಲ್ಲ. ನಮ್ಮ ಮಾವ ಮೂಕ ಪ್ರೇಕ್ಷಕರಂತೆ ಮಗನ ಜೀವನ ಹಿಂಗಾಗೋಯ್ತಲ್ಲ ಅನ್ನೋ ಚಿಂತೆಯಿಂದ ಕುಳಿತಂತಿತ್ತು. ರಾಜೀವನ ಅಕ್ಕ ಅಮ್ಮ ಗುಸು ಗುಸು ಮಾತನಾಡಿಕೊಂಡರು. ಅವರ ಭಾವ ಅನ್ಯಮನಸ್ಕರಾಗಿ ಮೊಬೈಲಿನಲ್ಲೇನನ್ನೋ ನೋಡುತ್ತಾ ಕುಳಿತಿದ್ದರು. ಅವರು ಅವರ ಹೆಂಡತಿಗೆ ಡ್ರೈವರ್ ಆಗಿ ಬಂದಂತಿತ್ತು ಅಷ್ಟೇ.
ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಯಜಮಾನಿಕೆ ಸಾಧಿಸುವ ಉದ್ದೇಶದಿಂದ ಅತ್ತೆ "ನನ್ನ ಮಗ ಹೇಳಿದ್ನಲ್ಲ. ಅದೇ ಫೈನಲ್ಲು. ಮಗಳನ್ನ ಕಳಿಸಲ್ಲ. ತಪ್ಪು ಮಾಡದ ಚಿನ್ನದಂತ ನನ್ನ ಮಗ ಕ್ಷಮೆ ಕೂಡ ಕೇಳಲ್ಲ. ನೀ ಕ್ಷಮೆ ಕೇಳು. ಕ್ಷಮಿಸಬೇಕೋ ಬೇಡವೋ ನಾವು ನಿರ್ಧರಿಸುತ್ತೀವಿ" ಎಂದರು.
ನಾ ಮಾತನಾಡುವ ಮೊದಲು ಅಪ್ಪ ಮೇಲೆದ್ದು ನಿಂತರು "ಎದ್ ನಡಿಯಮ್ಮ. ಈ ಕಿತ್ತೋದ್ ನನ್ ಮಕ್ಳತ್ರಾ ನಮಗೇನು ಮಾತು. ನನ್ ಮಗಳೇನು ಅಂತ ನನಗೆ ಗೊತ್ತು. ನನ್ ಮಗಳ ಕಾಲ್ ಧೂಳೀಗೂ ಸಮವಲ್ಲದವರ ಹತ್ರ ಇವಳ್ಯಾಕೆ ಕ್ಷಮೆ ಕೇಳ್ಬೇಕು? ಮಗಳನ್ನ ಕಳಿಸಲ್ವ…ಕಳಿಸಬೇಡಿ. ಪೋಲೀಸ್ ಸ್ಟೇಷನ್ಗೋಗಿ ಒಂದ್ ಡೌರಿ ಕೇಸ್ ಹಾಕಿದ್ರೆ ನಮ್ ಮಗೂನು ನಮಗ್ ಸಿಗುತ್ತೆ ನೀವ್ ಆಡಿದ ಪಾಪದ ಮಾತುಗಳಿಗೆ ಶಿಕ್ಷೇನೂ ಆಗುತ್ತೆ" ಎಂದುಬಿಟ್ಟರು. ಸುಳ್ ಸುಳ್ಳೇ ಡೌರಿ ಕೇಸ್ ಹಾಕೋದೆಲ್ಲ ತಪ್ಪು, ಹೌದು. ಆದರಾ ಸಂದರ್ಭದಲ್ಲಿ ಅಪ್ಪ ಹೆದರಿಸಲೆಂದು ಹೇಳಿದ ಮಾತುಗಳು ಬೀರಬೇಕಾದ ಪರಿಣಾಮ ಬೀರಿತು. ಎಲ್ಲರ ಮುಖದಲ್ಲೂ ಗಾಬರಿ ಮೂಡದೇ ಇರಲಿಲ್ಲ. ನಮ್ಮಪ್ಪ ಎಂತಾ ತಿಕ್ಲು ಅಂತ ಗೊತ್ತಿದ್ದ ರಾಜೀವನ ಕಣ್ಣುಗಳಾಗಲೇ ಪೋಲೀಸ್ ಠಾಣೆಯ ಕಂಬಿಗಳನ್ನು ಎಣಿಸಲಾರಂಭಿಸಿತ್ತು! ಮೊಬೈಲಿನಲ್ಲಿ ಮುಳುಗಿ ಹೋಗಿದ್ದ ರಾಜೀವನ ಭಾವನಿಗೆ ಆಗ ಪರಿಸ್ಥಿತಿಯ ಗಾಂಭೀರ್ಯತೆ ಅರಿವಾಯಿತೆನ್ನಿಸುತ್ತೆ. ಮೊಬೈಲನ್ನು ಜೇಬಿನಲ್ಲಿರಿಸಿ ಒಂದರೆಕ್ಷಣ ಯೋಚಿಸಿದಂತೆ ಮಾಡಿ ರಾಜೀವನ ಕಡೆಗೆ ನೋಡಿ "ನೋಡ್ ರಾಜೀವ್. ತೀರ ಪೋಲೀಸ್ ಸ್ಟೇಷನ್ ಅಂತೆಲ್ಲ ಹೋದ್ರೆ ನಮ್ಮ ಮರ್ಯಾದೇನೇ ಹಾಳಲ್ವ. ಏನೇ ಅಂದ್ರೂ ಮಗು ಅಮ್ಮನ ಬಳಿಯಿರೋದೇ ಸರಿ"
"ನಿಮಗೆ ಗೊತ್ತಾಗಲ್ಲ ಸುಮ್ನಿರಿ ಭಾವ. ಈ ಚಿನಾಲಿ ಹೆಂಗಾದ್ರೂ ಸಾಯಲಿ... ಮಗು ಮಾತ್ರ ಕಳಿಸಲ್ಲ...."
"ಬರೀ ನಿಂದೇ ಆಯ್ತಲ್ಲ ಅಷ್ಟೊತ್ತಿಂದ. ನಿಂದಷ್ಟೇ ನಡೀಬೇಕು ಅಂತಿದ್ರೆ ನಮ್ಮನ್ನೆಲ್ಲಾ ಯಾಕೆ ಕರೆಸಿದ್ದು? ನಮಗೇನ್ ಕೆಲಸ ಕಾರ್ಯ ಇಲ್ವಾ? ಅವರು ಡೌರಿ ಕೇಸಾಕಿದ್ರೆ ನಿಂಗ್ ಬೇಡ ಬೇಡ ಅಂದ್ರೂ ಮಗಳನ್ನ ಕಳಿಸಿಕೊಟ್ಟು ಠಾಣೆಗೋಗಬೇಕು. ಒಳ್ಳೆ ಎಳಸೆಳಸಾಗಿ ಮಾತಾಡಬೇಡ. ನಿಂಗೆ ಹೆಂಡತೀನೇ ಬೇಡ ಅಂದಮೇಲೆ ಅವಳಲ್ಲುಟ್ಟಿದ ಮಗು ಯಾಕೆ ಬೇಕೇಳು.... ನಾವೆಲ್ಲ ನೋಡಿಲ್ವ... ನೀ ಆ ಮಗೂನ ಎಷ್ಟೆಲ್ಲ ಎತ್ತಿ ಆಡ್ಸಿದ್ದಿ ಅಂತ! ಹೆಂಡತಿ ಮೇಲಿನ ಹಟಕ್ಕೆ ಮಗು ಬೇಕಷ್ಟೇ ನಿನಗೆ.... ಇಲ್ಲಾಂದ್ರೆ ಆ ಮಗು ಬಗ್ಗೆ ನಿನಗಿರೋ ಪ್ರೀತಿ ಅಷ್ಟಕಷ್ಟೇ ಅಂತ ಇಲ್ಲಿರೋರಿಗೆಲ್ಲ ಗೊತ್ತೇ ಇದೆ. ನೋಡಮ್ಮ ಧರಣಿ. ಇಷ್ಟಾದ ಮೇಲೂ ಇವರು ಮಗೂನ ಕಳಿಸಲಿಲ್ಲ ಅಂದರೆ ನಿಮಗೆಂಗೆ ಬೇಕೋ ಹಂಗ್ ಮಾಡ್ರಮ್ಮ. ಡೌರಿ ಕೇಸಲ್ ನನ್ ಹೆಸರಾಕಬೇಡಿ ಅಷ್ಟೇ. ಮೊದಲೇ ಗವರ್ನ್‌ಮೆಂಟ್ ಕೆಲಸ ನಂದು. ಕೆಲಸ ಹೊರಟೋಗ್ತದೆ ಅಷ್ಟೇ" ಅವತ್ತಲ್ಲಿದ್ದವರಲ್ಲಿ ಪ್ರಾಕ್ಟಿಕಲ್ ಆಗಿ ಮಾತನಾಡಿದ್ದು ಅವರೊಬ್ಬರೇ.
ಮೇಲಿನ ರೂಮಿನ ಕಡೆಗೆ ಕೈ ತೋರುತ್ತಾ "ಆ ರೂಮಲ್ಲಿದ್ದಾಳೆ. ಕರ್ಕಂಡ್ ಹೋಗು ಆ ಪಾಪಿ ಮುಂಡೇನಾ..." ಎಂದರು ರಾಜೀವ್.
ಮೊಮ್ಮಗಳಿಗೆ ಪಾಪಿ ಮುಂಡೆ ಅಂದವರಿಗೆ ಬದಲುತ್ತರ ಕೊಡಲು ಮುಂದಾದ ಅಪ್ಪನಿಗೆ ಸುಮ್ಮನಿರುವಂತೆ ಸನ್ನೆ ಮಾಡಿ ರೂಮಿಗೆ ಹೋಗಿ ಮಗಳನ್ನೆತ್ತಿಕೊಂಡೆ. ನನ್ನ ಸ್ಪರ್ಷ ಮಾತ್ರದಿಂದಲೇ ಎಚ್ಚರವಾದ ರಾಧ ಖುಷಿಯಲ್ಲಿ ಅಳುತ್ತಾ ಕೆನ್ನೆಯೆಲ್ಲ ತೇವವಾಗಿಬಿಡುವಂತೆ ಮುತ್ತನಿತ್ತಳುʼ
"ಅಯ್ಯಪ್ಪ! ಇಷ್ಟೆಲ್ಲ ನಾಟಕ ನಡೆದೋಯ್ತೇನೆ. ಅದೆಂಗ್ ತಡ್ಕಂಡ್ಯಪ್ಪ"
ʻನೀನೇ ಹೇಳಿದ್ಯಲ್ಲ. ಸ್ಟ್ರಾಂಗ್ ಗರ್ಲ್ ನಾನುʼ
"ಮ್. ಅದೇನೋ ನಿಜಾನೇ. ಎಷ್ಟು ದಿನವಾಯ್ತೆ ಇವೆಲ್ಲ ನಡೆದು"
ʻಆಯ್ತು ಕಣೋ ತಿಂಗಳ ಮೇಲೆʼ
"ಒಂದ್ ಮಾತ್ ಕೇಳ್ಲಾ?"
ʻಇಲ್ವೋ ನಿಜ್ಜ ನಂಗೂ ರಾಮ್‌ಪ್ರಸಾದ್‌ಗೂ ಯಾವ ಸಂಬಂಧವೂ ಇರಲಿಲ್ಲ. ಸ್ನೇಹಿತರಾಗಿದ್ದೋ ಅಷ್ಟೇ. ಆ ಸ್ನೇಹಕ್ಕೆ ಕೂಡ ರಾಜೀವನೇ ಕಾರಣʼ
"ನಾ ಅದರ ಬಗ್ಗೇನೇ ಕೇಳ್ತೀನಿ ಅಂತ ಹೆಂಗ್ ಅಂದುಕೊಂಡೆ"
ʻಎಷ್ಟೇ ವರುಷಗಳ ಮೇಲೆ ಮಾತನಾಡಿದರೂ ಸೋಲ್ ಮೇಟೇ ಕಣೋ ನೀನುʼ
"ಸಾರಿ ಕಣೇ"
ʻಯಾಕೆ?ʼ
"ನಂಗೂ ಒಂದು ಕ್ಷಣ ನಿನ್ನ ರಾಮ್ ನಡುವೆ ಸಂಬಂಧ ಇದೆಯೇನೋ ಅಂತನ್ನಿಸಿಬಿಡ್ತಲ್ಲ ಅದಕ್ಕೆ"
ʻನಿನಗಾ ಅನುಮಾನ ಬಂದರೆ ತಪ್ಪೇನಿಲ್ಲವೋ. "ಮದುವೆಯಾದವಳು ನನ್ನ ಜೊತೆ ಕಳ್ಳ ಸಂಬಂಧ ಇಟ್ಕಂಡಿದ್ಲು. ನಾ ದೂರಾಗಿದ್ದೀನಿ ಈಗ. ಇನ್ನೊಬ್ಬನ ಜೊತೆ ಕಳ್ಳ ಸಂಬಂಧ ಇಟ್ಟುಕೊಂಡಿದ್ದರೆ ಅಚ್ಚರಿಯೇನಿದೆ" ಅನ್ನಿಸಿರುತ್ತೆ ನಿನಗೆ. ತಪ್ಪೇನಿಲ್ಲ ಬಿಡುʼ
"ಮ್. ಸಾರಿ"
ʻಬಿಡೋ. ಅದ್ಯಾಕೆ ಅಷ್ಟು ಸಲ ಸಾರಿ ಕೇಳ್ತಿʼ
"ಏನೋ ಬಿಡು. ಲೈಫಂದ ಮೇಲೆ ಏಳು ಬೀಳು ಇದ್ದೇ ಇರ್ತವಲ್ಲ. ಈಗ ಸರಿ ಹೋದ್ರಾ ರಾಜೀವು?"
ʻನನಗೆಂಗೆ ಗೊತ್ತಾಗ್ಬೇಕು ಅವರು ಸರಿ ಹೋದ್ರಾ ಇಲ್ಲವಾ ಅಂತ?ʼ
"ಅಂದ್ರೆ. ಇನ್ನೂ ಬೇರೆಬೇರೇನೇ ಇದ್ದೀರಾ ನೀವು"
ʻಹೌದುʼ
"ಅಯ್ಯೋ... ಕೂತು ಮಾತಾಡಿ ಸರಿ ಮಾಡ್ಕೊಳ್ಳೋದಲ್ವೇನ್ರೋ"
ʻಏನ್ ಸರಿ ಮಾಡ್ಕೊಳ್ಳೋದು? ದಿನಾ ಅವರ ಮನೆ ಕಡೆಯವರು ಒಬ್ಬರಲ್ಲ ಒಬ್ಬರು ಫೋನ್ ಮಾಡೋದು ಬಾಯಿಗೆ ಬಂದಂಗ್ ಬಯ್ಯೋದು. ಕೆಲವೊಮ್ಮೆ ಕೇಳಿಸಿಕೊಳ್ಳುತ್ತಿದ್ದೆ. ಕೆಲವೊಮ್ಮೆ ಕಟ್ ಮಾಡುತ್ತಿದ್ದೆ. ಕೆಲವೊಮ್ಮೆ ಸುಮ್ಮನೆ ರಿಸೀವ್ ಮಾಡಿ ಬದಿಗಿಟ್ಟುಬಿಡುತ್ತಿದ್ದೆ. ಎದುರು ಮಾತನಾಡುವಷ್ಟು ಶಕ್ತಿಯೇ ಇಲ್ಲವಾಗಿಹೋಗಿತ್ತುʼ
"ಹೆಂಗೇ ಇವೆಲ್ಲ ತಡ್ಕಂಡಿದ್ದಿ. ಅಲ್ಲ....ಹೆಂಗಾದ್ರೂ ಸರಿ ಮಾಡ್ಕೊಳ್ಳದೆ ಜೀವನ ಪೂರ್ತಿ ಹಿಂಗೇ ಇರೋಕಾಗುತ್ತಾ?"
ʻಖಂಡಿತ ಇರೋಕಾಗಲ್ವೋ. ಪರಸ್ಪರ ಒಪ್ಪಿಗೆಯ ಮೇಲೆ ಡೈವೋರ್ಸ್ ತಗೊಳೋಣ ಅಂತಂದೆ. ಯಾವ್ದೇ ಕಾರಣಕ್ಕೂ ನಾ ಒಪ್ಪಲ್ಲ ಅಂದ್ರು. ಸರಿ ಬಿಡಿ ಕೋರ್ಟಲ್ಲೇ ಸಿಗುವ ಅಂತಂದೆʼ
"ಡೈವೋರ್ಸ್ ಎಲ್ಲಾ ಯಾಕೆ ಈಗ್ಲೇ ಯೋಚ್ನೆ ಮಾಡ್ತಿ ಸುಮ್ನಿರು. ಸರಿ ಹೋಗ್ತದೆ"
ʻಇಲ್ವೋ ಮೊನ್ನೆ ಲಾಯರ್‌ನ ಭೇಟಿಯಾಗಾಯ್ತು. ಡೈವೋರ್ಸಿಗೆ ಹಾಕೂ ಆಯ್ತು. ಇನ್ನೊಂದ್ ಆರು ತಿಂಗಳೋ ವರ್ಷಕ್ಕೋ ಡೈವೋರ್ಸ್ ಸಿಗುತ್ತೆ. ಕೋರ್ಟಲ್ ಏನೇನು ಮಾತು ಕೇಳಿ ಪಜೀತಿ ಅನುಭವಿಸುವುದಿದೆಯೋ ನೋಡಬೇಕುʼ
"ಅಲ್ವೇ.... ನಾವಿಬ್ರೂ ಭಯಂಕರ ಕ್ಲೋಸಿದ್ದಾಗ ಡೈವೋರ್ಸ್ ತಗಂಡ್ ನನ್ನ ಮದುವೆಯಾಗೋ ಯೋಚನೆ ಬರಲಿಲ್ವ ಅಂತ ಕೇಳಿದಾಗ ʻಇಲ್ವೋ ರಾಜೀವನನ್ನು ಬಿಡೋದಿಕ್ಕಾಗಲ್ಲ ನನಗೆ. ಕಷ್ಟದ ದಿನಗಳಲ್ಲಿ ನನ್ನ ಕೈಹಿಡಿದಿದ್ದವರುʼ ಅಂದಿದ್ದೆ...."
ʻಮ್. ಅವತ್ತಿಗೆ ಅದೇ ಸತ್ಯವಾಗಿತ್ತು. ಇವತ್ತಿಗೂ ನನಗೆ ಅವರ ಬಗ್ಗೆ ಗೌರವವಿದ್ದೇ ಇದೆ. ಮದುವೆಯ ಸಮಯದಲ್ಲಿ ಅವರು ನನ್ನೊಡನೆ ನಡೆದುಕೊಂಡ ರೀತಿಯ ಕಾರಣಕ್ಕಾಗಿʼ
"ಮತ್ತಿನ್ಯಾಕೆ ಇಷ್ಟು ಬೇಗ ಡೈವೋರ್ಸಿಗೆ ಹಾಕ್ತಿದ್ದಿ?"
ʻಐ ಡಿಸರ್ವ್ ಎ ಬೆಟರ್ ಲೈಫ್ ಕಣೋʼ
ಮುಖಪುಟ ಚಿತ್ರ: ಚೇತನ ತೀರ್ಥಹಳ್ಳಿ.
ಮುಂದುವರೆಯುವುದು
ಸತ್ಯವನ್ನು ಬಹುತೇಕ ಯಾರೂ ನಂಬುವುದಿಲ್ಲ ಏಕೆಂದರೆ ಸತ್ಯ ಯಾವಾಗಲೂ ಕಹಿಯಾಗಿ ಇರುತ್ತದೆ. ಕೆಲವೊಮ್ಮೆ ನಮ್ಮಲ್ಲಿನ ಅಹಂ ನಿಂದಾಗಿ ಸತ್ಯವನ್ನು ನಿರಾಕರಿಸುವ ಸಂಭವವೇ ಹೆಚ್ಚು. ಇದಕ್ಕೆ ನಮ್ಮ ಈಗಿನ ಜೀವನಶೈಲಿ ಸಹ ಕಾರಣ. ಮೊದಲು ನಮ್ಮ ಅಹಂ ನಿಂದ ಹೊರಬಂದರೆ ನಮಗೆ ಸತ್ಯದ ಅರಿವಾಗುತ್ತದೆ.
ReplyDelete