Oct 3, 2020

ಒಂದು ಬೊಗಸೆ ಪ್ರೀತಿ - 82

ರಾಮ್‌ಪ್ರಸಾದ್‌ ಮುಜುಗರದಿಂದ ಮುದುಡಿ ಕುಳಿತಿದ್ದರು. ಬಿಯರ್‌ ಬಾಟಲಿನ ಮುಚ್ಚಳದಂಚಿದ ಕೆಳಗೆ ಜಾರಿ ಬೀಳುತ್ತಿದ್ದ ನೀರ ಹನಿಗಳನ್ನೊಮ್ಮೆ ನೋಡ್ತಾರೆ, ಬಾಗಿಲ ಕಡೆಗೊಮ್ಮೆ ನೋಡ್ತಾರೆ, ನಂತರ ಟಿವಿಯ ಕಡೆ ಕಣ್ಣಾಡಿಸಿ ಮತ್ತೆ ಬಿಯರ್ರು ಬಾಟಲುಗಳೆಡೆಗೆ ಕಣ್ಣೋಟ ಹರಿಸಿಬಿಡುತ್ತಾರೆ. ಅವರಿಗೇನು! ಹಿಂದೂ ಗೊತ್ತಿಲ್ಲ, ಮುಂದೂ ಗೊತ್ತಿಲ್ಲ! ಮನೇಲ್ಯಾರೂ ಇಲ್ಲ, ಕುಡಿದೋಗುವ ಅಂತ ಬಂದಿದ್ದಾರೆ ಅಷ್ಟೇ! ಮೇಲ್ನೋಟಕ್ಕೆ ಶಾಂತವಾಗಿ ಕುಳಿತಿದ್ದವಳ ಮನದಲ್ಲಿದ್ದ ಚಿಂತೆಯ ಆಳ ಅಗಲವ್ಯಾವೂ ರಾಮ್‌ಗೆ ಗೊತ್ತೇ ಇಲ್ಲ! ಟೇಬಲ್‌ ಮೇಲೇನೋ ಎರಡೇ ಬಿಯರ್‌ ಇದೆ. ಇವರೊಂದು ಅವರೊಂದು ಕುಡಿದು ಅಲ್ಲಿಗೆ ಮುಗಿಸಿದರೆ ಸರಿ. ಇದರೊಟ್ಟಿಗೆ ಮತ್ತೊಂದಷ್ಟು ಬಿಯರನ್ನು ರಾಜೀವ ಗಂಟಲೊಳಗಿಳಿಸಿದರೆ ಮುಗೀತು ಕತೆ. ನಶೆಯೇರಿದ ಮೇಲೆ ಅವರ ಮಾತುಗಳು ಎತ್ತೆತ್ತಲಿಗೋ ಹೋಗುವುದು ಅಪರೂಪವೇನಲ್ಲ. ಏನಾಗ್ತದೋ ಏನಾಗ್ತದೋ ಅನ್ನೋ ಚಿಂತೆಯಲ್ಲೇ ನನ್ನ ನಿದ್ರೆ ಹಾರಿ ಹೋಗಿತ್ತು. ನಿಮಿಷಕ್ಕೆರಡೆರಡು ಬಾರಿ ರಾಮ್‌ ಕಡೆಗೊಮ್ಮೆ, ಬಾಗಿಲು ಕಡೆಗೊಮ್ಮೆ, ಟಿವಿ ಕಡೆಗೊಮ್ಮೆ ನೋಡುತ್ತಾ ಕುಳಿತೆ. 

ಕೊನೆಗೂ ರಾಜೀವ್‌ ಬಂದರು. ಅದೇನು ಎರಡೇ ನಿಮಿಷಕ್ಕೆ ಬಂದರೋ ಹತ್ತು ನಿಮಿಷಕ್ಕೆ ಬಂದರೋ ಅರ್ಧ ಘಂಟೆಯ ನಂತರ ಬಂದರೋ ಒಂದೂ ತಿಳಿಯಲಿಲ್ಲ ನನಗೆ. ಒಂದು ಯುಗವೇ ಕಳೆದುಹೋದಂತನ್ನಿಸಿತು. ಒಳಗೆ ಕಾಲಿಡುತ್ತಿದ್ದಂತೆಯೇ ನನ್ನನ್ನು ಕಂಡು ಮುಖ ಕಿವುಚಿಕೊಂಡರು. ಥೂ ಅನಿಷ್ಟವೇ ಯಾಕ್‌ ಬಂದೆ ಇವತ್ತು ಅಂದಂತಾಯಿತು. ಅಷ್ಟೆಲ್ಲ ಮುಖ ಕಿವುಚಿಕೊಂಡು ಸಿಟ್ಟು ತೋರಿಬಿಟ್ಟು ನಾ ಅವರಿಬ್ಬರಿಗೂ ಕುಡಿಯುವುದಕ್ಕೇ ಅವಕಾಶ ಕೊಡದಂತೆ ಓಡಿಸಿಬಿಟ್ಟರೆ! ಮುಳುಗುವ ಸೂರ್ಯ ಕೂಡ ಅಷ್ಟು ವೇಗವಾಗಿ ಮೋಡಗಳ ಮೇಲೆ ಬಣ್ಣವನ್ನೆರಚಿರಲಾರ. ಅಷ್ಟು ವೇಗವಾಗಿ ಮುಖದ ಮೇಲೊಂದು ನಗು ಎರಚಿಕೊಂಡು "ಅರೆರೆ... ಇದೇನ್‌ ಬಂದುಬಿಟ್ಟಿದ್ದಿ. ಸುಮಾರ್‌ ಲೇಟಾಯ್ತಲ್ಲ. ಬರೋಲ್ಲವೇನೋ ನೀನು ಅಂದುಕೊಂಡೆ" ಎಂದರು. 

ʻಅಂದುಕೊಳ್ಳೋ ಬದಲು ಫೋನ್‌ ಮಾಡಿದ್ರಾಗಿರೋದುʼ ಎಂದುಕೊಳ್ಳುತ್ತಾʼ ಪಾಪು ಮಲಗಿಬಿಟ್ಟಿದ್ದಳು. ಹಂಗಾಗಿ ತಡವಾಯ್ತುʼ ಎಂದೆ. 

"ಹೌದಾ.... ಹೋಗ್ಲಿ ಬಿಡು. ಒಳ್ಳೇದೇ ಆಯ್ತು. ರಾಮ್‌ ಸಿಕ್ಕಿ ಸುಮಾರು ದಿನಗಳಾಗಿದ್ದವಲ್ಲ. ಇವತ್ಯಾಕೋ ನೆನಪಾಯಿತು. ನೀನೂ ಬರೋ ಹಂಗೆ ಕಾಣಿಸಲಿಲ್ಲವಲ್ಲ. ಫೋನ್‌ ಮಾಡಿ ಕರೆಸಿಕೊಂಡೆ ಅಷ್ಟೇ" 

ʻಮ್.‌ ಏನೇನ್‌ ತಂದ್ರಿ ಪಾರ್ಸಲ್ಲುʼ 

"ಜಾಸ್ತಿ ಇಲ್ಲ. ಒಂದ್‌ ಪ್ಲೇಟ್‌ ಕಬಾಬು, ಒಂದ್‌ ಚಿಲ್ಲಿ ಪೋರ್ಕು, ಎರಡ್‌ ಬಿರಿಯಾನಿ ಅಷ್ಟೇ. ಹೋಗ್ಲಿ ಬಿಡು. ಫ್ರಿಜ್ಜಲ್ಲಿರ್ತದೆ. ನಾಳೆಗಾಗುತ್ತೆ" 

ʻಫ್ರಿಜ್ಜಲ್ಲಿ? ಯಾಕ್‌ ತಿನ್ನಲ್ವ ಈಗʼ 

"ಹೇ... ನೀ ಬರಲ್ಲ ಅಂದ್ಕಂಡು ಮನೇಲೇ ಕೂರೋಣ ಅಂದ್ಕಂಡಿದ್ದೆ. ನೀ ಬಂದುಬಿಟ್ಟಿದ್ದೀಯಲ್ಲ. ಹೊರಗೆ ಎಲ್ಲಾದ್ರೂ ಹೋಗಿ ಕೂರ್ತೀವಿ" 

ಇವರಿಬ್ರೂ ಹೊರಗೋಗಿ ಅಲ್ಲಿ ರಾಜೀವ ಜಗಳ ತೆಗೆದರೆ ಅನ್ನೋ ಭಯ ಕಾಡಿತು. ಹೊರಗಡೆ ಕುಡ್ಕಂಡು ಗಲಾಟೆ ಮಾಡ್ಕಂಡು ಅಲ್ಲಿಗೋಗಿ ಇವರನ್ನ ಸಮಾಧಾನ ಪಡಿಸಿ ಕರ್ಕೊಂಡು ಬರೋದು ಆಗದ ಹೋಗದ ಮಾತು. ಇವರು ರಾಮ್‌ಪ್ರಸಾದನ್ನು ಜಗಳವಾಡಲೇ ಕರೆಸಿಕೊಂಡಿದ್ದರೆ ಇಲ್ಲೇ ನನ್ನ ಎದುರಿನಲ್ಲೇ ನಡೆದುಹೋಗಲಿ. ಹೊರಗೆ ಬೇಡ. ʻಅದ್ಯಾಕೆ! ಯಾವತ್ತೂ ನಿಮ್ಮ ಫ್ರೆಂಡ್ಸ್‌ ಜೊತೆ ಕುಡಿದೇ ಇಲ್ವಾ ನೀವು? ಎಲ್ಲಾ ತಂದಿದ್ದೀರಲ್ಲ. ಕುಡೀರಿ ಇಲ್ಲೇ. ನಂಗೊಂದರ್ಧ ಬಿರಿಯಾನಿ ಕೊಡಬೇಕು ಅಷ್ಟೇ!ʼ 

"ಅಯ್ಯೋ ಅರ್ಧ ಪ್ಲೇಟ್‌ ಯಾಕ್‌ ಮಾರಾಯ್ತಿ. ಎರಡೂ ನೀನೇ ತಿನ್ಕೋ. ನಾವ್‌ ಹೊರಗೋಗಿ ತಿನ್ಕೋತೀವಿ" ಅಂತಂದು ಒಂದು ದೊಡ್ಡ ನಗೆ ಬೀರಿದರು. ಪ್ರಪಂಚ ಗೆದ್ದವರು ಕೂಡ ಅಷ್ಟು ಚೆಂದ ನಗ್ತಾರೋ ಇಲ್ವೋ! ರಾಮ್‌ಪ್ರಸಾದ್‌ ಮುಖದಲ್ಲಿ ಮುಜುಗರ ಮರೆಯಾದ ಸಡಗರ. 

ಬಿರಿಯಾನಿ ಅದೆಷ್ಟೇ ರುಚಿ ರುಚಿಯಾಗಿದ್ದರೂ ಒಂದು ಸ್ಪೂನು ಮೊಸರುಬಜ್ಜಿ ಇದ್ರೇ ಅದೊಂದು ಸೊಗಸು. ಅದೆಲ್ಲಿಂದ ಪಾರ್ಸಲ್‌ ತಂದಿದ್ರೋ ಏನೋ ಶೇರ್ವ ಕಟ್ಟಿದ್ದವನು ಮೊಸರುಬಜ್ಜಿ ಕಟ್ಟಿರಲಿಲ್ಲ. ಅರ್ಧ ಬಿರಿಯಾನಿ ತಿನ್ನೋಕೆ ಈರುಳ್ಳಿ ಟೊಮೋಟೋ ಹಸಿಮೆಣಸಿನಕಾಯಿ ಸೌತೆಕಾಯಿಯನ್ನೆಲ್ಲ ಕಟ್‌ ಮಾಡಿ ಮೊಸರುಬಜ್ಜಿ ಮಾಡೋಕಾಗುತ್ತಾ? ಒಂದೆರಡು ಸ್ಪೂನು ಮೊಸರು ಹಾಕಿಕೊಂಡು ಬರೋಣ ಅಂತ ಅಡುಗೆ ಮನೆಗೋಗಿ ಫ್ರಿಜ್‌ ಬಾಗಿಲು ತೆರೆದವಳ ಕಣ್ಣಿಗೆ ಪಳ ಪಳ ಅಂತ ಹೊಳೆಯುತ್ತಿದ್ದ ಮೂರು ಬಿಯರ್ರು ಬಾಟಲುಗಳು ಕಂಡವು. ಕರ್ಮ ಕರ್ಮ ಅಂತ ಬಯ್ದುಕೊಳ್ಳುತ್ತಾ ಅಡುಗೆಮನೆಯಲ್ಲಿ ನಿಂತುಕೊಂಡೇ ಅರ್ಧ ಬಿರಿಯಾನಿ ತಿಂದು ಮುಗಿಸಿ ಕೈ ತೊಳೆದುಕೊಂಡು ಹೊರಬಂದೆ. ಇಬ್ಬರ ಬಾಟಲಿಯೂ ಅರ್ಧರ್ಧ ಖಾಲಿಯಾಗಿತ್ತು. ರಾಜೀವನ ಕಡೆಗೆ ಕುತೂಹಲದಿಂದ ನೋಡಿದೆ. ಯಾವತ್ತೂ ರಾಮ್‌ಪ್ರಸಾದ್‌ ಬಗ್ಗೆ ಕೆಟ್ಟದಾಗಿ ಯೋಚಿಸಿಯೂ ಇಲ್ಲ ಅನ್ನುವಂತೆ ನಿರಾಳವಾಗಿದ್ದರು. ಅವತ್ತು ಮೊದಲ ಸಲ ಸುಮಾಳ ಮದುವೆಗೆಂದು ಹೋದಾಗ ರಾಮ್‌ಪ್ರಸಾದ್‌ ಜೊತೆ ಕುಳಿತು ಕುಡಿಯುತ್ತಿದ್ದರಲ್ಲ, ಇವತ್ತೂ ಹಂಗೇ ಕಾಣಿಸುತ್ತಿದ್ದರು. ಅಬ್ಬ, ಅಷ್ಟರಮಟ್ಟಿಗೆ ನನ್ನ ಮನಸ್ಸಿಗೆ ಸಮಾಧಾನವಾಯಿತು. ಗಾಬರಿಯಿಂದ ದೂರ ಓಡಿದ್ದ ನಿದಿರೆ ಅರ್ಧ ಬಿರಿಯಾನಿ ಹೊಟ್ಟೆಗೆ ಬೀಳುತ್ತಿದ್ದಂತೇ ಮತ್ತೆ ಓಡೋಡಿ ಬಂದು ಅಪ್ಪಿಕೊಂಡಿತು. ನಾ ಮಲ್ಕೋತೀನಿ ನಿದ್ರೆ ಬರ್ತಿದೆ ಅಂತ ಇಬ್ಬರಿಗೂ ಗುಡ್‌ ನೈಟ್‌ ಹೇಳಿ ರೂಮಿಗೋಗಿ ಮಗಳ ಪಕ್ಕ ಬೆನ್ನು ಹಾಸುತ್ತಿದ್ದಂತೆಯೇ ನಿದ್ರೆ ಹೋದೆ. 

ಮಗಳು ಮಿಸುಕಾಡಿದಂತಾಗಿ ಎಚ್ಚರವಾದಾಗ ಮಧ್ಯರಾತ್ರಿ ಕಳೆದಿರಬೇಕು. ನಿದ್ರೆಯಲ್ಲಿ ಚೂರು ಅತ್ತಿತ್ತ ಅಲ್ಲಾಡದವಳ್ಯಾಕಿವತ್ತು ಒದ್ದಾಡ್ತಿದ್ದಾಳೆ ಅಂತ ಕಣ್ರೆಪ್ಪೆಗಳನ್ನು ಜೋರು ಬಲದಿಂದ ದೂರ ಮಾಡಿದಾಗ ಕಂಡನ್ನು ನೋಡಿ ಗಾಬರಿಯಾಯಿತು. ಹಾಸಿಗೆ ಬಿಡಲು ನಿರಾಕರಿಸುತ್ತಿದ್ದ ರಾಧಳನ್ನು ರಾಜೀವ್ ಬಲವಂತವಾಗಿ ಎತ್ತಿಕೊಳ್ಳುತ್ತಿದ್ದದ್ದು ಕಣ್ಣಿಗೆ ಕಂಡಿತು. ರಾಧಳ ಬಗ್ಗೆ ಹೆಚ್ಚಿನ ಕಾಲ ಬಯ್ಗುಳಗಳ ಮಳೆಯನ್ನೇ ಸುರಿಸುತ್ತಿದ್ದ ರಾಜೀವ ಮಗಳಿಗೇನೋ ಮಾಡಿಬಿಡುತ್ತಿದ್ದಾರೆ ಎಂದು ಗಾಬರಿಯಾಗಿ ʻಏನ್ ಮಾಡ್ತಿದ್ದೀರ ರಾಜೀವ್?' ಅಂತ ಅಕ್ಷರಶಃ ಕಿರುಚಿಕೊಂಡಿದ್ದು ಕೇಳಿ ಹಾಲಿನಿಂದ ರಾಮ್‍ಪ್ರಸಾದ್ ಕೂಡ ಓಡಿ ಬಂದರು. 

"ರಾಜೀವ್ ಇದೇನ್ ಮಾಡ್ತಿದ್ದೀರ? ಬಿಡಿ ಮಗಳನ್ನ" 

"ನನ್ ಮಗಳ ವಿಷಯ ಮಾತಾಡೋಕೆ ನೀನ್ಯಾರೋ ಬೋಸುಡಿಕೆ.... ನೀವಿಬ್ರೂ ಅದೇನ್ ಹಲಾಲ್‍ಕೋರ ಕೆಲಸ ಮಾಡ್ಕೋತೀರೋ ಮಾಡ್ಕಳಿ. ಇವಳ ಕಣ್ ಮುಂದೆ ಅವೆಲ್ಲ ನಡಿಯೋದ್ಬೇಡ" ಎಂದವರು ಅಳುತ್ತಿದ್ದ ರಾಧಳ ತಲೆಯ ಮೇಲೊಂದು ಎಷ್ಟು ಜೋರು ಬಾರಿಸಿದರೆಂದರೆ ರಾಧಳ ಕಣ್ಣೀರೇ ಹಿಂಗಿ ಹೋಯಿತು. ಹಾಸಿಗೆಯಿಂದ ಮೇಲೇಳಲು ಪ್ರಯತ್ನಿಸುತ್ತಿದ್ದವಳನ್ನು ತಳ್ಳಿ ಬೀಳಿಸಿ, ಬಾಗಿಲಿಗಡ್ಡವಾಗಿದ್ದ ರಾಮ್‍ಪ್ರಸಾದ್‍ನನ್ನು ಬಲದಿಂದ ಸರಿಸಿ ಹೊರಟೇ ಹೋದರು. ನಾ ಹಾಸಿಗೆಯಿಂದ ದಡಬಡ ಅಂತ ಎದ್ದು ಹೊರಬರುವಷ್ಟರಲ್ಲಿ ಮಗಳನ್ನು ಕಾರಿನಲ್ಲಿ ಲಗೇಜಿನಂತೆ ಎಸೆದುಕೊಂಡು ಹೊರಟೇ ಹೋದರು. ಮಧ್ಯರಾತ್ರಿಯ ಸಮಯದಲ್ಲಿ. 

ಗೇಟಿನ ಮುಂದೆ ಚಪ್ಪಡಿಯ ಮೇಲೆ ಕುಳಿತವಳಿಗೆ ಅಳುವುದಕ್ಕೂ ಆಗದಷ್ಟು ಆಘಾತವಾಗಿತ್ತು. ಇದು ನಿಜವೋ ಭ್ರಮೆಯೋ‌ ಕನಸೋ ಅಸ್ಪಷ್ಟವಾಗಿತ್ತು. ನಾ ಈಗ ಎದ್ ಬರ್ತೀನಿ ಇನ್ನೇನು ಎದ್ಲು ಅಂತ ಕಾಯುತ್ತಿದ್ದ ರಾಮ್‍ಪ್ರಸಾದ್ ಎಷ್ಟೊತ್ತಾದರೂ ನಾ ಕುಂತ ಜಾಗದಿಂದ ಏಳದಿದ್ದನ್ನು ಕಂಡು ಬಾಗಿಲು ದಾಟಿ ಹೊರಬಂದು ನಡುಗುವ ದನಿಯಲ್ಲಿ "ಧರಣಿ" ಎಂದರು. 

ಅವರೆಡೆಗೊಮ್ಮೆ ನೋಡಿದೆ. ಪಶ್ಚಾತ್ತಾಪವಿತ್ತು. ತಪ್ಪು ಮಾಡಿದಾಗ ತೋರುವ ಪಶ್ಚಾತ್ತಾಪವಲ್ಲ; ತಪ್ಪಿಲ್ಲದಿದ್ದರೂ ಇನ್ನೊಬ್ಬರಿಗೆ ಒಳ್ಳೆಯದಾಗುವುದಾರೆ ಕ್ಷಮೆ ಕೇಳುವುದರಲ್ಲಿ ತಪ್ಪೇನಿಲ್ಲ ಅಂದುಕೊಳ್ಳುವಾಗ ಮೂಡುವ ಪಶ್ಚಾತ್ತಾಪವದು. 

ಬದಲು ಹೇಳಲು ಮನಸ್ಸಾಗಲಿಲ್ಲ. "ಬನ್ನಿ ಒಳಗೆ ಹೋಗುವ ಮೊದಲು" ಎಂದು ಕೈ ನೀಡಿದರು. ಅವರ ಭುಜಕ್ಕೆ ಆನಿಕೊಂಡು ಒಳಬಂದು ಸೋಫಾದ ಮೇಲೆ ಕುಳಿತುಕೊಂಡೆ. 

ಅಡುಗೆಮನೆಗೋಗಿ ಒಂದು ಲೋಟ ನೀರು ತಂದು ಕೊಟ್ಟರು. ಖಾಲಿ ಲೋಟವನ್ನು ವಾಪಸ್ ತೆಗೆದುಕೊಳ್ಳುವಾಗ "ತಪ್ ಮಾಡ್ ಬಿಟ್ರಿ ಧರಣಿ. ನಮ್ ಮನೆಯಲ್ಲಿ ಹಿಂಗಿಂಗೆ ನಮ್ಮಿಬ್ಬರ ಸ್ನೇಹವನ್ನು ಅಪಾರ್ಥ ಮಾಡಿಕೊಂಡಿದ್ದಾರೆ ಅಂತ ಸೂಚ್ಯವಾಗಾದರೂ ನೀವೇಳಿದ್ದಿದ್ದರೆ ನಿಮ್ಮ ಮನೆಗೆ ಬರುವುದನ್ನು ತಪ್ಪಿಸಿಕೊಳ್ಳುತ್ತಿದ್ದೆ ನಾನು. ನಿಮ್ ಸಂಸಾರಕ್ಕಿಂತ ನಮ್ಮ ಸ್ನೇಹವೇನೂ ದೊಡ್ಡದಲ್ಲವಲ್ಲ. ನಮ್ ಸ್ನೇಹ ಮುರ್ಕೊಂಡಿದ್ರೂ ಆಗ್ತಿತ್ತು" ಎಂದರು. 

ಹೌದು. ಸುಮಾ ಅಷ್ಟು ಸಲ ಬಡ್ಕಂಡಿದ್ಲು ಹೇಳು ಅವರಿಗೊಮ್ಮೆ, ಗೊತ್ತಿರಲಿ ವಿಷಯ ಅಂತ. ನಾನೇ ಇವರವರೆಗೆಲ್ಲ ಮನೆ ವಿಷಯ ಎಲ್ಲಿಂದ ಬರ್ತದೆ ಎಂದು ನಿರ್ಲಕ್ಷಿಸಿದೆ. ʻಏನಾಯ್ತು?' ಅಂತ ಕೇಳುವುದಕ್ಕೂ ಆಗಲಿಲ್ಲ. ಮನದ ತುಂಬಾ ಬೆದರಿ ಅಳುವುದನ್ನೂ ನಿಲ್ಲಿಸಿ ಬಿಟ್ಟ ಮಗಳ ಭಯಭೀತ ಮುಖವೇ ಅಚ್ಚೊತ್ತಿಬಿಟ್ಟಿತ್ತು. ಮೊದಲು ಮಗಳು ನನ್ನ ಹತ್ರ ಬರಬೇಕು. ಮಿಕ್ಕಿದ್ದೆಲ್ಲ ಆಮೇಲೆ. 

ʻರೂಮಲ್ ನನ್ ಫೋನ್ ಇದೆ ಹಾಸಿಗೆಯ ಮೇಲೆ. ತಗಂಡ್ ಬನ್ನಿ' ಅಂದೆ. ತಂದುಕೊಟ್ಟರು. 

ಅಪ್ಪನಿಗೆ ಫೋನಾಯಿಸಿದೆ. ರಾತ್ರಿಯ ಒಂದು ಘಂಟೆಯ ಸಮಯ. ಮಲಗಿರುತ್ತಾರೆ. ಗಾಢ ನಿದ್ರೆಯಲ್ಲಿರುತ್ತಾರೆ. ಫೋನ್‌ ತೆಗೆಯಲಿಲ್ಲ. ಬಿಡಲಾಗುವುದಿಲ್ಲವಲ್ಲ. ಮತ್ತೊಂದಷ್ಟು ಸಲ ಪ್ರಯತ್ನಿಸಿದೆ. ಐದನೇ ಸಲಕ್ಕೆ ಫೋನ್ ಎತ್ತಿಕೊಂಡರು. ಮಧ್ಯರಾತ್ರಿ ಈ ತರ ಫೋನ್ ಬಂದರೆ ಏನೋ ಅನಾಹುತ ಆಗೇಹೋಗಿದೆ ಅಂತ ಗೊತ್ತೇ ಇರ್ತದಲ್ಲ, ಗಾಬರಿ ತುಂಬಿದ ದನಿಯಲ್ಲಿ ಅಪ್ಪ "ಏನಮ್ಮ? ಏನಾಯ್ತು?" ಎಂದರು. 

ಯಾವ ವಿಷಯ ಹೇಳಬೇಕು, ಯಾವುದನ್ನು ಬಿಡಬೇಕು ಅಂತ ಗೊತ್ತಾಗದೆ ʻಮೊದ್ಲಿಲ್ಲಿಗೆ ಬನ್ನಿ ಅಪ್ಪ. ಹಾಳಾಯ್ತು ನನ್ ಜೀವ್ನ' ಎಂದೆ. 

ಹತ್ತು ನಿಮಿಷದಲ್ಲಿ ಅಪ್ಪ, ಅಮ್ಮನನ್ನು ಕರೆದುಕೊಂಡು ಮನೆಯ ಬಳಿ ಬಂದರು. ಹೊರಗೆ ನಮ್ಮ ಕಾರಿರಲಿಲ್ಲ. ಮನೆ ಬಾಗಿಲು ತೆರೆದಿತ್ತು. ಒಳಬಂದರೆ ನೆಲದ ಮೇಲೆ ನಾ ಕುಳಿತಿದ್ದೆ. ಹೊರಡಬೇಕೋ ಇರಬೇಕೋ ಕೂರುವುದು ಸರಿಯೋ ತಪ್ಪೋ ಅಂತೆಲ್ಲ ಯೋಚಿಸುತ್ತಾ ಒಂದು ಮೂಲೆಯಲ್ಲಿ ನಿಂತೇ ಇದ್ದ ರಾಮ್ ಪ್ರಸಾದನನ್ನು ಕಂಡು ಅಮ್ಮನ ಮುಖದಲ್ಲಿ ಅಸಹ್ಯ ಮೂಡಿದರೆ ಅಪ್ಪ ಏನಾಗಿರಬಹುದು ಅನ್ನೋ ಗೊಂದಲಗಳನ್ನೊತ್ತುಕೊಂಡಿದ್ದರು. 

"ಮನೇಲೇ ಶುರು ಹಚ್ಕೊಂಡ್ಯೇನೇ ಚಿನಾಲಿ" ಅಮ್ಮ ಜೋರು ಮಾಡಿದರು. ಅಮ್ಮ ಬರುವುದೂ ನನಗೆ ಬೇಕಿರಲಿಲ್ಲ. ಅವರ ಮಾತಿಗೆ ಪ್ರತಿಕ್ರಿಯೆ ನೀಡದೆ ಅಪ್ಪನ ಕಡೆಗೆ ನೋಡಿದೆ. 

ಇವನ್ಯಾಕೆ ಇಲ್ಲಿದ್ದಾನೆ ಅನ್ನೋ ಪ್ರಶ್ನೆ ಅವರಲ್ಲೂ ಖಂಡಿತವಾಗಿ ಇದ್ದಿರಲೇಬೇಕು. ನನ್ನೆಡೆಗೆ ನೋಡಿದವರು ಆ ಪ್ರಶ್ನೆಯನ್ನತ್ತ ಸರಿಸಿ "ರಾಜೀವ್ ಎಲ್ಲಿ? ಪಾಪು ಎಲ್ಲಿ?" ಎಂದರು. 

ʻಇಲ್ಲ ರಾಜೀವ್. ಮಗಳನ್ನು ಕರೆದುಕೊಂಡು ಹೊರಟು ಹೋದರು' ಎಂದೆ. 

"ಏನು" ಎಂದಿಬ್ಬರೂ ಉದ್ಗರಿಸಿದರು. ಅಪ್ಪ ಕಾರಣಗಳೇನಿರಬಹುದೆಂಬ ಯೋಚನೆಯಲ್ಲಿದ್ದರೆ ಅಮ್ಮ ಥಟ್ಟನೆ "ಇನ್ನೇನ್ ಮಾಡ್ತಾರೆ ಪಾಪ. ಇಟ್ಕಂಡವನನ್ನ ಮನೆಗೇ, ಅದೂ ಪಾಪು ಇದ್ದಾಗಲೇ ಕರ್ಕಂಡ್ ಬಂದ್ರೆ ಇನ್ನೇನ್ ಮಾಡೋಕಾಗುತ್ತೆ. ಇನ್ನೂ ಏನೇನ್ ನೋಡ್ಬೇಕೋ ನಮ್ ಕರ್ಮ" ಎಂದು ಅಳಲಾರಂಭಿಸಿದರು. 

ʻಮೋ.... ನಿಮುಗ್ ನನ್ ಬಯ್ಕಂಡು ಅಳ್ಬೇಕು ಅನ್ಸಿದ್ರೆ ಹೋಗಿ ರೂಮು ಸೇರ್ಕಂಡ್ ಬಾಗಿಲ್ ಹಾಕಂಡ್ ಅಳೋಗಿ. ಇವರನ್ನ ಕುಡಿಯೋಕೆ ಅಂತ ಕರ್ಕಂಡ್ ಬಂದಿದ್ದು ನಿಮ್ ಪಾಪದ ಅಳಿಯ. ನಾನಲ್ಲ. ಕಟ್ಕಂಡವನ ಕಾಟವನ್ನೇ ತಡೆಯೋಕಾಗ್ತಿಲ್ಲ.... ಇನ್ನು ಇಟ್ಕೊಳ್ಳೋಕ್ ಬೇರೆ ಹೋಗ್ಲಾ? ನನ್ನ ಇವರ ನಡುವೆ ಯಾವ ಸಂಬಂಧವೂ ಇಲ್ಲ ಅಂತ ರಾಜೀವನಿಗೂ ಗೊತ್ತಿತ್ತು, ನನ್ನ ಜೊತೇನೂ ಸರಿ ಹೋಗಿದ್ದರು. ನಾ ಮನೆಯಿಂದ ಬರುವಷ್ಟರಲ್ಲಿ ಡ್ರಿಂಕ್ಸ್ ಎಲ್ಲಾ ತಂದು ರೆಡಿಯಾಗಿದ್ರು ಇವರಿಬ್ರೂನು. ಅವರ ಫ್ರೆಂಡ್ನ ಜೊತೆ ಮನೇಲಿ ಕುಡಿಯೋದು ಅಪರೂಪವೇನಲ್ಲವಲ್ಲ. ಏನೋ ಕುಡ್ಕಂಡ್ ಹಾಳಾಗೋಗ್ಲಿ ಅಂತ ನನ್ ಪಾಡಿಗೆ ನಾನು ರಾಧಳ ಜೊತೆ ಮಲಗಿಕೊಂಡಿದ್ದೆ. ಇವರಿಬ್ರ ಮಧ್ಯೆ ಅದೇನು ನಡೆಯಿತೋ ಏನೋ ಅರ್ಧ ಘಂಟೆ ಮುಂಚೆ ಮಗಳನ್ನೂ ಎಳೆದುಕೊಂಡು ಹೊರಟೇ ಹೋದರು' ಮಧ್ಯೆ ಮಧ್ಯೆ ಬಾಯಿ ಹಾಕಲು ಬಂದವರನ್ನೆಲ್ಲ ಕೆಕ್ಕರಿಸಿ ನೋಡುತ್ತಾ ಹೇಳುವುದಷ್ಟನ್ನೂ ಹೇಳಿ ಮುಗಿಸಿದೆ. 

ಅಳುತ್ತಳುತ್ತಲೇ ಅಮ್ಮ ಬಾಯಿ ಮುಚ್ಚಿಕೊಂಡರು. ಅಪ್ಪನಲ್ಲಿದ್ದ ಗೊಂದಲಗಳು ನನ್ನ ಮಾತಿನಿಂದ ಮತ್ತಷ್ಟು ಹೆಚ್ಚಿದವಷ್ಟೇ. ಎಲ್ಲರ ಕಣ್ಣುಗಳೂ ರಾಮ್ ಪ್ರಸಾದ್ ಅವರತ್ತ ನೆಟ್ಟಿತು. ರಾತ್ರಿ ಏನು ನಡೆಯಿತು ಅನ್ನೋದು ಅವರಿಗೆ, ರಾಜೀವನಿಗಷ್ಟೇ ಗೊತ್ತು. ರಾಜೀವನನ್ನಂತೂ ಏನೊಂದೂ ಕೇಳಲಾಗುವುದಿಲ್ಲ ಈಗ. 

ʻಅದೇನಾಯ್ತೂಂತ ಹೇಳ್ರೀ ರಾಮ್. ಗರ ಬಡಿದವರ ತರ ನಿಂತಿದ್ದೀರಲ್ಲ' ಸದಾ ನಗುನಗುತ್ತಾ ಮಾತನಾಡುವ ಧರಣಿ ಇಷ್ಟೊಂದು ಕಠಿಣವಾಗಿ ಮಾತನಾಡುವುದನ್ನೂ ಅವರೂ ಕಲ್ಪಿಸಿಕೊಂಡಿರಲಿಲ್ಲವೋ ಏನೋ. ನಡೆದ ಘಟನೆಗಳನ್ನೆಲ್ಲ ಮತ್ತೊಮ್ಮೆ ಮನಸ್ಸಿನಲ್ಲಿ ತಂದುಕೊಳ್ಳುವವರಂತೆ ಕಣ್ಣು ಮುಚ್ಚಿ ನಿಧಾನ ಕಣ್ಣು ತೆರೆದು ಅಮ್ಮನ ಕಡೆಗೆ ನೋಡಿ "ನೋಡಿ ಅಮ್ಮ, ನಾ ಖಂಡಿತವಾಗಿ ನಿಮ್ಮ ಮಗಳ ಇಟ್ಕಂಡವನಲ್ಲ. ನಮ್ಮಿಬ್ರ ಮಧ್ಯೆ ತೆಳು ತೆಳುವಾದ ಒಂದು ಸ್ನೇಹ ಇರೋದು ಬಿಟ್ರೆ ಮತ್ತೇನೂ ಇಲ್ಲ. ಅದೂ ನಮ್ಮ ಸ್ನೇಹ ಶುರುವಾಗಿದ್ದು ಕೂಡ ರಾಜೀವನಿಂದಲೇ. ಇವರಿಗಿಂತ ನನಗೆ ರಾಜೀವ ಜಾಸ್ತಿ ಫ್ರೆಂಡು. ಇವತ್ತಿಲ್ಲಿಗೆ ಬರುವವರೆಗೂ ರಾಜೀವನಿಗೆ ನನ್ನ ಧರಣಿಯ ನಡುವೆ ಸಂಬಂಧ ಇರುವ ಬಗ್ಗೆ ಅನುಮಾನವಿದೆ ಅಂತ ಕೂಡ ಗೊತ್ತಿರಲಿಲ್ಲ. ಸಂಬಂಧ ಇರೋದೇ ಆಗಿದ್ರೆ ಹಿಂಗ್ ಮನೇಗ್ ಬರ್ತಿದ್ನಾ ನೀವೇ ಹೇಳಿ" 

ʻಯಾರ್ ಏನಾದ್ರೂ ಅಂದ್ಕೊಳ್ಲಿ ಬಿಡ್ರೀ. ಇಬ್ರೂ ಅದೇನ್ ಕಿತ್ತಾಡ್ಕಂಡ್ರಿ? ಅವರ್ಯಾಕ್ ಹಂಗ್ ಮಗೂನ ಎತ್ಕಂಡ್ ಹೋಗುವಂಗ್ ಆಯ್ತು ಅಂತೇಳಿ ಮೊದಲು' ಕತೆ ಪುರಾಣವನ್ನೆಲ್ಲ ಕೇಳುವಷ್ಟು ತಾಳ್ಮೆ ನನ್ನಲ್ಲಿರಲಿಲ್ಲ. 

"ಸಾರಿ ಸಾರಿ. ಆರಾಮ್ವಾಗೇ ಕುಡ್ಕಂಡು ಅದೂ ಇದೂ ಮಾತಾಡ್ಕಂಡೇ ಇದ್ದೊ. ನನಗೊಂದ್ ಹೆಣ್ ನೋಡೋಕ್ ಹೋಗಿದ್ವಲ್ಲ ಅದರ ಬಗ್ಗೆ ವಿಚಾರಿಸಿದರು. 

"ಹುಡುಗಿ ಮನೆಯವರಿಗೆ ನಾ ಪೂರ್ತಿ ಒಪ್ಪಿಗೆಯಾಗಿದ್ದೀನಿ. ನಮ್ಮ ಅಪ್ಪ ಅಮ್ಮ ಅಕ್ಕ ಭಾವ ಬಂದು ನೋಡ್ಕಂಡು ಹೋಗಾಯ್ತು. ಹುಡುಗಿ ಮನೆಯವರೂ ಒಂದ್ಸಲ ಬೆಂಗಳೂರಿನ ನಮ್ಮ ಮನೆಗೆ ಹೋಗಿಯಾಯ್ತು. ಹುಡುಗೀಗೂ ನಾ ಒಪ್ಪಿಗೆಯಾಗಿದ್ದೀನಿ" ಎಂದೆ. 

"ನಿಮಗೇ ಹುಡುಗಿ ಒಪ್ಪಿಗೆಯಾದಂಗಿಲ್ಲ ಅನ್ನಿ" ವ್ಯಂಗ್ಯದಿಂದ ರಾಜೀವ್ ಕೇಳಿದಾಗ ಇದೆಲ್ಲ ನನ್ನ ಜೊತೆ ಜಗಳ ತೆಗೆಯುವುದಕ್ಕೆ ಹಾಕುತ್ತಿರುವ ಮುನ್ನುಡಿ ಅಂತ ಕಲ್ಪನೆಯೂ ಮೂಡಲಿಲ್ಲ ನನ್ನಲ್ಲಿ. 

"ಹಂಗೇನಿಲ್ಲ. ನನಗೂ ಹುಡುಗಿ ಇಷ್ಟವಾಗಿದ್ದಾಳೆ, ಇಲ್ಲ ಅಂತಲ್ಲ. ಆದರ್ಯಾಕೋ ಮದುವೆ ಅಂದ್ರೆ ಭಯವಾಗ್ತದಪ್ಪ. ಮದುವೆಗೇ ನಾನಿನ್ನೂ ತಯಾರಿಲ್ಲವೇನೋ ಅಂತ ಅನ್ನಿಸಿಬಿಡ್ತದೆ" ಅಂದಿದ್ದಕ್ಕೆ ರಾಜೀವ್ ಪಟ್ಟಂತ 

"ಕಂಡೋರ್ ಹೆಂಡ್ರು ಜೊತೆ ಮಜಾ ಮಾಡಿದಂಗಲ್ಲ ಬಿಡಿ ಮದುವೆಯಾಗೋದು" ಎಂದುಬಿಟ್ಟರು. ಕುಡಿದ ಅಮಲಿನಲ್ಲಿ ಅವರೇನೋ ಹೇಳಿದ್ದನ್ನು ಮತ್ಯಾವುದೋ ರೀತಿಯಲ್ಲಿ ಅರ್ಥೈಸಿಕೊಂಡುಬಿಟ್ಟೆನೇನೋ ಅಂತೆಲ್ಲ ಅನುಮಾನ ಮೂಡಿ "ಸಾರಿ. ಏನಂದ್ರಿ ಅಂತ ಕೇಳಿದೆ" 

ಈ ಸಲ ನಿಧಾನಕ್ಕೆ ಒಂದೊಂದೇ ಪದವನ್ನು ತುಂಬಾ ಸ್ಪಷ್ಟವಾಗಿ "ಕಂಡೋರ್..... ಹೆಂಡ್ರು...... ಜೊತೆ..... ಮಜಾ....... ಮಾಡಿದಂಗಲ್ಲ....... ಬಿಡಿ....... ಮದುವೆಯಾಗೋದು......" ಎಂದು ಅದೇ ಪದಗಳನ್ನು ಒಂದೊಂದು ಪದವೂ ನೇರ ನನ್ನ ಮಿದುಳಿಗೇ ಹೋಗುವಷ್ಟು ಸ್ಪಷ್ಟವಾಗಿ ಹೇಳಿದರು. 

ಇದು ಸುಖಾಸುಮ್ಮನೆ ರೇಗಿಸುವ ಛೇಡಿಸುವ ಮಾತಲ್ಲವೆಂದು ಅವರ ಮುಖದ ಮೇಲಿದ್ದ ವ್ಯಂಗ್ಯ ಸಾರಿ ಹೇಳುತ್ತಿತ್ತು. 

"ಅರ್ಥವಾಗಲಿಲ್ಲ ರಾಜೀವ್. ಏನ್ ಹೇಳ್ತಿದ್ದೀರ?" 

"ಓಹೋ! ಏನೂ ಗೊತ್ತಿಲ್ಲದ ಪಾಪದ ಕಂದಮ್ಮ. ನಿಂಗೂ ನನ್ ಈ ದರಿದ್ರ ಹೆಂಡ್ತಿಗೂ ಇರೋ ಕಳ್ಳ ಸಂಬಂಧ ಊರ್ಗೆಲ್ಲ ಗೊತ್ತು ಕಣ್ ಬಿಡೊ ಲೋಫರ್ ತಕಂಬಂದು" ಎಂದುಬಿಟ್ಟರು. 

ನನಗೆ ನಗಬೇಕೋ ಸಿಟ್ಟಾಗಬೇಕೋ ತಿಳಿಯಲಿಲ್ಲ. ಸೀರಿಯಸ್ಸಾಗಿ ಅಂತ ಸನ್ನಿವೇಶದಲ್ಲೂ ಜೋರು ನಕ್ಕೇ ಬಿಟ್ಟೆ. 

"ಏನ್ ಹೇಳ್ತಿದ್ದೀರ ರಾಜೀವ್? ನಂಗೂ ಧರಣಿಯವರಿಗೂ ಸಂಬಂಧಾನ? ಜೋಕ್ ಮಾಡ್ತಿಲ್ಲ ತಾನೆ" 

"ಜೋಕು... ಹ....ಹ.... ಇಲ್ಲಿ ನನ್ನ ಲೈಫೇ ಕಾಮಿಡಿಯಾಗಿ ಕೂತಿದೆ. ಈ ಟೈಮಲ್ಲಿ ನಾ ಜೋಕ್ ಬೇರೆ ಮಾಡ್ತೀನಾ! ನಿಮ್ಮಿಡೀ ಆಸ್ಪತ್ರೆಗೇ ಗೊತ್ತಿರೋ ನಿಮ್ ಸಂಬಂಧ ನನ್ ಕಿವಿಗೆ ಬೀಳೋದಿಲ್ಲ ಅಂತ ಅದೆಂಗ್ ಅನ್ಕೊಂಡ್ರಿ" 

"ಅಯ್ಯೋ ನಿಮ್ಮ. ಗಾಸಿಪ್ ಹಬ್ಸೋರಿಗೇನು ಸಾವಿರ ಹಬ್ಬಿಸ್ತಾರೆ. ಇದಕ್ಕೆ ಮುಂಚೆ ನನಗೆ ಒಟ್ಟು ಇಬ್ರು ನರ್ಸ್ ಜೊತೆ ಇನ್ನೊಬ್ರು ಆಫೀಸ್ ರಿಸೆಪ್ಶನಿಷ್ಟ್ ಜೊತೆ ಸಂಬಂಧ ಇದೆ ಅಂತ ಮಾತಾಡ್ಕೋತಿದ್ರು! ಧರಣಿ ಜೊತೆ ಕೂಡ ನಂಗ್ ಸಂಬಂಧ ಇದೆ ಅಂತ ಮಾತಾಡ್ಕೋತಿದ್ದಾರೆ ಅಂತ ನಂಗ್ ನಿಜ್ಜ ಗೊತ್ತಿರಲಿಲ್ಲ" 

"ಓಹೋ! ನಿಂಗ್ ಚಿನಾಲಿ ಕೂಡ ಸಾಕಾಗಲ್ವ. ಅಷ್ಟೂ ಜನ ಒಟ್ಗೇ ಸೇರಿ ಮಜಾ ಮಾಡ್ತಿದ್ರೋ ಹೆಂಗೆ" 

"ಥೂ ಥೂ... ಏನಂತ ಮಾತಾಡ್ತೀರ. ನನಗವರ್ಯಾರ ಜೊತೆ ಕೂಡ ಸ್ನೇಹದ ಹೊರತಾಗಿ ಮತ್ಯಾವ ಸಂಬಂಧವೂ ಇರಲಿಲ್ಲ" 

"ಹಂಗಾದ್ರೆ ಸಂಬಂಧ ಇವಳೊಬ್ಬಳ ಜೊತೆ ಮಾತ್ರ ಅನ್ನು" 

"ಥೂ... ಮತ್ತೆ ಅದೇ ಹೇಳ್ತೀರಲ್ಲ. ನಾನೂ ಅವರು ಮಾತೂ ಆಡ್ತಿರಲಿಲ್ಲ ನೆಟ್ಗೆ. ನೀವ್ ನನ್ ಫ್ರೆಂಡು. ಅವ್ರು ನನ್ ಫ್ರೆಂಡ್ ವೈಫು ಅಂತಷ್ಟೇ ನನ್ನಲ್ಲಿದ್ದಿದ್ದು. ಅವತ್ ನಿಮ್ ಮಗಳು ಆಸ್ಪತ್ರೆಯಲ್ಲಿದ್ದಾಗ ನೀವಿಲ್ಲ ಅಂತ ನನಗೆ ಹೋಗಲು ಹೇಳಿದ್ರಲ್ಲ ಅವತ್ತಿಂದ ಚೂರ್ ಫ್ರೆಂಡ್ಸಾಗಿದ್ದೋ ಅಷ್ಟೇ. ಅದೂ ಏನು ಕ್ಯಾಂಟೀನಲ್ಲಿ ಕಾಫಿ ಗೀಫಿ ಜೊತೆಗೆ ಕುಡಿಯುವಷ್ಟು. ನಂಗಿವತ್ತಿಗೂ ನೀವು ಫ್ರೆಂಡು, ಅವರು ನನ್ನ ಫ್ರೆಂಡ್ ವೈಫು ಅಷ್ಟೇ" ಮೂಲೆಮೂಲೇಲಿ ಚದುರಿಹೋಗಿದ್ದ ತಾಳ್ಮೆಯನ್ನೆಲ್ಲ ಒಟ್ಟುಗೂಡಿಸಿಕೊಂಡು ಹೇಳಿದ್ದನ್ನು ಪಾಪ ರಾಜೀವ್ ಕೂಡ ಅಷ್ಟೇ ತಾಳ್ಮೆಯಿಂದ ಕೇಳಿಸಿಕೊಂಡರು. ನನ್ನ ಮಾತಿನಲ್ಲಿ ಅವರಿಗೆ ನಂಬಿಕೆ ಬರುತ್ತಿರಬೇಕೆಂದುಕೊಳ್ಳುತ್ತಾ..... "ಅಲ್ಲಾ ರಾಜೀವ್. ನೀವಂದ್ಕಂಡಂಗೆ ಅಥವಾ ನಮ್ಮಾಸ್ಪತ್ರೆಯವರು ಅಂದ್ಕೊಂಡಂಗೆ ನಮ್ಮಿಬ್ಬರ ನಡುವೆ ನಿಜ್ಜ ಸಂಬಂಧ ಇದ್ದಿದ್ರೆ ನಿಮ್ಮಿಬ್ಬರನ್ನೇ ಕರ್ಕಂಡು ಹೆಣ್ ನೋಡೋಕ್ ಹೋಗ್ತಿದ್ನಾ?" ಎಂದೆ. ಹೇಳಬೇಕಿರಲಿಲ್ಲ. 

"ಅಂಥ ಐಡಿಯಾನೇಲ್ಲ ಈ ಚಿನಾಲೀನೇ ಕೊಟ್ಟಿರ್ತಾಳೆ. ಹಿಂಗೆಲ್ಲ ನಾಟ್ಕ ಆಡ್ಕಂಡಿದ್ರೆ ನಿಮ್ ಚಟಾನ ಲೈಫ್ ಲಾಂಗ್ ತೀರಿಸ್ಕೋಬೋದು ಅಂತ" 

"ನಾನ್ ಸೆನ್ಸ್. ದೇವರಂತ ಹುಡುಗಿ ಧರಣಿ. ಅಂತ ಹೆಂಡ್ತಿ ಪಡೆಯೋಕೂ ಪುಣ್ಯ ಮಾಡಿರಬೇಕು. ಅವರ ಬಗ್ಗೆ ಅಂತ ಕೆಟ್ಟ ಪದವೆಲ್ಲಾ ಬಳಸ್ತೀರಲ್ಲಾ ನಾಚ್ಕೆಯಾಗಬೇಕು ನಿಮಗೆ. ಮೇಲಾಗಿ ನಾ ಹೆಣ್ ನೋಡೋಕ್ ಹೋಗ್ವಾಗ ಜೊತೇಲಿ ಬರ್ತೀವಿ ಬಿಡಿ ಅಂತ ಮೊದಲು ಹೇಳಿದ್ದು ನೀವು. ಅವರಲ್ಲ" 

"ಕಂಡೋರ್ ಜೊತೆ ಮಲಗೋರ್ಗೆ ನಾಚ್ಕೆ ಇಲ್ಲ. ಮಾನ ಇಲ್ಲ. ಮರ್ಯಾದೆ ಇಲ್ಲ. ನನಗಿರಬೇಕಂತೆ. ನನ್ ಹೆಂಡ್ತೀನಾ ನಾ ಏನಾದ್ರೂ ಕರ್ಕೋತೀನಿ ನಿನಗೇನೋ ಸುವ್ವರ್.... " 

"ಮಾತಲ್ ಹಿಡ್ತ ಇರ್ಲಿ. ನನ್ ತಾಳ್ಮೆಗೂ ಒಂದ್ ಮಿತಿ ಇರುತ್ತೆ" ತಾಳ್ಮೆ ಮಿತಿ ದಾಟಲು ಸಿದ್ಧವಾಗಿತ್ತು. 

"ಮಿತಿ ಅಂತೆ ಮಿತಿ. ಸೂಳೆಮಕ್ಳು ತಗಂಬಂದು" ಸೂಳೆಮಗ ಅನ್ನೋ ಪದ ಕೇಳಿಸಿಕೊಂಡರೆ ನನಗೆ ತಡೆಯಲಾಗುವುದೇ ಇಲ್ಲ. ಕಷ್ಟಪಟ್ಟು ತಡಕಂಡೆ. 

ಒಂದಷ್ಟು ಹೊತ್ತು ಏನೂ ಮಾತನಾಡಲಿಲ್ಲ ಅವರು. ಎದ್ ಹೋಗೋಣ ಅತ್ಲಾಗೆ... ಇವರ ಸಂಸಾರ ಇವರಿಷ್ಟ ಏನಾದ್ರೂ ಮಾಡ್ಕಂಡ್ ಸಾಯ್ಲಿ ಅತ್ಲಾಗೆ ಅಂತಂದುಕೊಳ್ಳುವಾಗ ಮನೆಯ ಗೋಡೆಗಳನ್ನೆಲ್ಲ ಗಮನವಿಟ್ಟು ನೋಡುತ್ತಿದ್ದವರು ಇದ್ದಕ್ಕಿದ್ದಂತೆ "ಈ ದರಿದ್ರ ಮನೇಲಿ ಅದೇನೇನೂ ನೌಟಂಕಿ ಆಟ ನಡೆಸಿದ್ದೀರೋ ಇಬ್ರೂನು. ಹೆಂಗಾದ್ರೂ ಮಾಡ್ಕಂಡ್ ಸಾಯ್ರಿ ಸೂಳೆಮಕ್ಳಾ. ನಾ ಹೊರಟೆ ಇನ್ನು" ಅಂತ ಬಾಗಿಲ ಕಡೆ ಎರಡೆಜ್ಜೆ ಇಟ್ಟವರು ನಿಂತರು. ಮತ್ತೊಂದು ಕ್ಷಣ ಏನನ್ನೋ ಯೋಚಿಸುತ್ತಾ ನಿಂತರು. 

"ರಾಜೀವ್" ಸಮಾಧಾನಿಸುವ ದನಿಯಲ್ಲಿ ಮೆಲ್ಲಗೆ ಹೇಳಿದೆ. ನನ್ನ ದನಿ ಕೇಳಿದ್ದೆ ಹುಚ್ಚೆದ್ದವರಂತೆ ಅಲ್ಲೇ ಟೇಬಲ್ಲಿನ ಮೇಲಿದ್ದ ಖಾಲಿ ಬಾಟಲನ್ನು ಎತ್ತಿ ನನ್ನೆಡೆಗೆ ತೋರುತ್ತಾ "ಇನ್ನೊಂದ್ಸಲ ನಿನ್ನ ಬಾಯಲ್ಲಿ ನನ್ ಹೆಸ್ರು ಬಂದ್ರೆ ಮುಗಿಸಿಬಿಡ್ತೀನಿ ಸೂಳೆಮಗನೇ...." ಎಂದರು. ಸಿಟ್ಟು ಬಂದಿತ್ತು. ಅವರ ಕೈಯಲ್ಲಿದ್ದ ಖಾಲಿ ಬಾಟಲಿಯು ಸಿಟ್ಟನ್ನು ನಿಯಂತ್ರಿಸಿತು. 

"ನಿಮ್ಮಿಬ್ರ ದರಿದ್ರ ಆಟವನ್ನು ನೋಡೋ ಕರ್ಮ ನನ್ನ ಮಗಳಿಗ್ಯಾಕೆ" ಅಂತಂದವರೇ ಮಗಳನ್ನೆತ್ತಿಕೊಂಡು ಹೊರಟೇ ಬಿಟ್ಟರು" 

ಥೂ ಥೂ ಎಂತ ದರಿದ್ರ ಕೆಲಸ ಮಾಡಿಬಿಟ್ಟರವರಿವರು? ನನ್ನೊಡನೆ ಚರ್ಚಿಸದೇ, ನನ್ನ ಜೊತೆಯೂ ಬೇಡ, ಆಸ್ಪತ್ರೆಯಲ್ಲಿಯೇ ಅವರಿಗೆ ಗೊತ್ತಿರುವವರ ಹತ್ತಿರ ಒಂದಷ್ಟು ವಿಚಾರಿಸಿದ್ದರೂ ಸತ್ಯ ತಿಳಿದುಹೋಗ್ತಿತ್ತಲ್ಲ. ಇಂಥ ದರಿದ್ರವನ್ನು ಮನಸಲ್ಲಿಟ್ಟುಕೊಂಡು ರಾಮ್ ಅವರನ್ನು ಮನೆಗೆ ಕರೆತರುವ ಅವಶ್ಯಕತೆಯಾದರೂ ಏನಿತ್ತು. ರಾಜೀವನ ಆಲೋಚನೆಗಳ್ಯಾಕೆ ಹಿಂಗಾಗೋದ್ವು? ಅವರೊಬ್ಬರೇ ಮನೆ ಬಿಟ್ಟು ಹೋಗಿದ್ರೆ ಒಂದಷ್ಟು ಜಿಗುಪ್ಸೆ ಮೂಡುತ್ತಿತ್ತಷ್ಟೇ.... ಮಗಳನ್ನ ಎತ್ತಿಕೊಂಡು ಹೋಗಿರುವುದು ಎಲ್ಲಿಲ್ಲದ ಕೋಪ ತರಿಸಿತ್ತು. ಎಷ್ಟೆಲ್ಲ ಕಷ್ಟಪಟ್ಟು ಹುಟ್ಟಿದ ಮಗಳವಳು ಅಂತ ಅನುಭವಿಸಿದವರಿಗಷ್ಟೇ ಗೊತ್ತು. ನಾಕು ಹನಿ ವೀರ್ಯ ಬಿಸಾಕಿದವರಿಗವೆಲ್ಲ ತಿಳಿಯುವುದಾದರೂ ಹೆಂಗೆ ಸಾಧ್ಯ? ಅಪ್ಪನಂತೂ ಮುಂಚಿನಿಂದಾನೂ ನನ್ನ ರಾಮ್ ಮಧ್ಯೆ ಸಂಬಂಧ ಇಲ್ಲ ಅಂತ ಖಚಿತವಾಗಿ ನಂಬಿದ್ದವರು. ರಾಮ್ ಹೇಳಿದ್ದು ಅಮ್ಮನಲ್ಲೂ ನನ್ನ ಮೇಲೊಂದಷ್ಟು ನಂಬಿಕೆ ಮೂಡಿಸಿದ್ದೌದು. 

ಈಗೇನ್ ಮಾಡಬೇಕು ಅನ್ನೋ ಗೊಂದಲ ಎಲ್ಲರಲ್ಲಿತ್ತು. 

ಅಪ್ಪನ ಕಡೆಗೆ ತಿರುಗಿ ʻಫೋನ್ ಮಾಡೀಪ ನಿಮ್ಮಳಿಯನಿಗೆ' ಎಂದೆ. ಫೋನ್ ತೆಗೆದು ರಿಂಗಣಿಸಿದರು. ʻಸ್ಪೀಕರ್ ಆನ್ ಮಾಡಿ' ಎಂದೆ. 

ಬಹಳಷ್ಟೊತ್ತು ರಿಂಗ್ ಆದಮೇಲೆ ಫೋನೆತ್ತಿಕೊಂಡರು. ಅಪ್ಪನಿಗೆ ಹಲೋ ಎನ್ನಲೂ ಬಿಡದ ರಾಜೀವ "ಇವತ್ತಿನ್ನೊಂದ್ಸಲ ಫೋನ್ ಮಾಡಿದ್ರೆ… ಇಲ್ಲಿಗೇನಾದರೂ ಬರೋ ಪ್ರಯತ್ನ ಮಾಡಿದ್ರೆ ಈ ಪಾಪಿ ಪಿಂಡಾನೂ ಸಾಯ್ಸಿ ನಾನೂ ಸತ್ತೋಗ್ತೀನಿ" ಎಂದೇಳಿ ಫೋನ್ ಕಟ್ ಮಾಡಿಬಿಟ್ಟರು. ಹಿನ್ನೆಲೆಯಲ್ಲಿ ಮಗಳ ಜೋರು ಅಳು ಕೇಳಿಸುತ್ತಿತ್ತು, ರಾಜೀವನಮ್ಮ ಸಮಾಧಾನ ಮಾಡಲು ಪ್ರಯತ್ನಿಸುತ್ತಿದ್ದಿದ್ದೂ ಕೇಳುತ್ತಿತ್ತು. ಚುರುಕ್ಕೆಂದಿತು ಮನಸ್ಸು. 

"ಅವರೇನಾದ್ರೂ ಹೇಳಲಿ ನಡಿಯಮ್ಮ ಹೋಗುವ. ಏನ್ ಇವನೊಬ್ಬನಿಗೇ ರೋಷ ಇರೋದು.... ಬೋಳಿಮಗನ್ನ ತಗಂಡ್ ಬಂದು" ಅಪ್ಪನ ಸಿಟ್ಟಿನ ಅರಿವಿತ್ತಲ್ಲ ನನಗೆ. ಅಪ್ಪನ ಸಿಟ್ಟು, ರಾಜೀವನ ಸಿಟ್ಟು ಎರಡೂ ಅಪಾಯಕಾರಿ. ಇವರಿವರು ಹೊಡೆದಾಡಿಕೊಂಡು ಸತ್ರೆ ಸಾಯಲಿ. ಮಗಳಿಗೇನಾದರೂ ಆಗಿಬಿಟ್ಟರೆ? ಮೊದಲೇ ಅವರಿಗೆ ಮಗಳೆಂದರೆ ಆಗಲ್ಲ. ಆ ಪುಟ್ಟ ಮಗುವಿಗೆ ಯಾವ್ಯಾವೆಲ್ಲ ಭಾಷೆ ಬಳಸಿ ಮಾತಾಡ್ತಾರೆ.... ಅಸಹ್ಯವೆಂದರೆ ಅಸಹ್ಯ. ಬೆಳಿಗ್ಗೆಯಷ್ಟೊತ್ತಿಗೆ ರಾಜೀವನ ಸಿಟ್ಟೂ ತಣ್ಣಗಾಗಿರ್ತದೆ. ಬೆಳಿಗ್ಗೆ ಮಾತಾಡುವ. 

ʻಇವಾಗ್ ಬೇಡ ಅಪ್ಪ. ಮಗಳಿಗೇನಾದ್ರೂ ಮಾಡಿಬಿಟ್ಟಾರು. ಬೆಳಿಗ್ಗೆ ಹೋಗುವ ಸುಮ್ಮನಿರಿ' ಎಂದೆ. ನನ್ನ ಮಾತುಗಳಲ್ಲಿದ್ದ ಕಠಿಣತೆಗೆ ಅಪ್ಪನೂ ಶರಣಾದರು. 

"ನೀವ್ ಹೊರಡಿ ರಾಮ್. ನಮ್ ಅಳಿಯನ ಪರವಾಗಿ ಸಾರಿ ಕೇಳುವುದನ್ನಷ್ಟೇ ನಾನೀಗ ಮಾಡಲು ಸಾಧ್ಯವಾಗೋದು" 

ಹೊರಡುತ್ತಾ ರಾಮ್ "ಏನಾದ್ರೂ ಬೇಕಿದ್ರೆ ಹೇಳಿ ಅಂಕಲ್. ಏನೋ ಕೆಟ್ಟ ಘಳಿಗೆ ಆ ರೀತಿ ಮಾತಾಡ್ಸಿದೆ ರಾಜೀವ್ ಕೈಲಿ. ಇಲ್ಲಾಂದ್ರೆ ಅವರಿಗೂ ಧರಣಿ ಅಂದ್ರೆ ತುಂಬಾನೇ ಪ್ರೀತಿ. ಪಾಪ ಅವಳಿಗೊಂದು ಚೆಂದದ ಬಾಳು ಕೊಡೋಕಾಗ್ತಿಲ್ಲ ನನಗೆ ಅಂತ ಪ್ರತೀ ಸಲ ಗೋಳಾಡೋರು" 

ಪ್ರೀತಿ ಅಂತೆ ಪ್ರೀತಿ. ಬದುಕು ಚೆಂದವಾಗಲು ಪ್ರೀತಿಯಲ್ಲ ನಂಬುಗೆ ಮುಖ್ಯ. 

ಸರಿಯೆಂದು ಅಪ್ಪ ತಲೆಯಾಡಿಸಿದರು. 

ರಾಮ್ ಹೋದ ಮೇಲೆ ಅಮ್ಮ "ನಡಿಯಮ್ಮ ಮನೆಗೋಗುವ" ಎಂದರು. 

ʻಮನೇಲೇ ಇದೀನಲ್ಲ' 

"ನಮ್ಮಲ್ಲಿಗೆ ಹೋಗುವ ನಡಿ" 

ʻಯಾಕೆ... ಇಲ್ಲಿ ನನ್ನ ಗಂಡನ ಹತ್ರ ಹೇಳಿಸ್ಕೊಂಡಿದ್ದು ಸಾಲಲ್ಲ ಅಂತ ಅಲ್ಲಿಗೆ ಬಂದು ನಿಮ್ಮ ನಿಮ್ ಸೊಸೆಯ ಮಾತು ಕೇಳು ಅಂತಾನ?' 

ರಾಮ್ ಮಾತುಗಳು ಒಂದಷ್ಟು ಅವರಿಗೆ ಸಮಾಧಾನ ನೀಡಿದ್ದೌದು ಆದರೂ ನನ್ನ ಮೇಲೆ ಪೂರ್ತಿ ನಂಬಿಕೆಯೇನೂ ಮೂಡಿರಲಿಲ್ಲವಲ್ಲ. "ಸರಿ ಅಮ್ಮ ನಿನ್ನಿಷ್ಟ. ದೊಡ್ಮನುಷೆ ನೀನು" ಎಂದು ಬಾಗಿಲ ಬಳಿ ಹೋಗಿ ನಿಂತರು, ಅಪ್ಪನಿಗೆ ಕಾಯುತ್ತ. 

ಮಗಳಿಗೀಗ ನಾವ್ಯಾರೂ ಅವಶ್ಯಕತೆಯಿಲ್ಲ. ಅವಳಿಗೆ ಬೇಕಿರುವುದು ಒಂದಷ್ಟು ಏಕಾಂತ ಅಂತ ಅಪ್ಪನಿಗೆ ಅರಿವಾಯಿತು. ಹತ್ತಿರ ಬಂದು ಕೆಳಗೆ ಕುಳಿತು ತಲೆ ಸವರುತ್ತಾ "ಸಾರಿ ಮಗಳೇ. ನೀ ಪ್ರೀತಿಸಿದವನ ಜೊತೆಯೇ ನಿನ್ನ ಮದುವೆ ಮಾಡಿಕೊಟ್ಟಿದ್ದರೆ ನೀ ಚೆನ್ನಾಗಿರ್ತಿದ್ದೋ ಇಲ್ವೋ ಗೊತ್ತಿಲ್ಲ. ಕಡೇ ಪಕ್ಷ ಇಂತ ದರಿದ್ರ ಸನ್ನಿವೇಶಗಳನ್ನೆಲ್ಲ ನೋಡಬೇಕಿರಲಿಲ್ಲ" ಎಂದರು. 

ನಕ್ಕೆ. 

"ಹುಷಾರು ಕಂದ. ನೀ ನಿನ್ ಜೀವಕ್ಕೇನೂ ಅಪಾಯ ಮಾಡ್ಕಳಲ್ಲ ಅಂತ ಮಾತು ಕೊಟ್ರಷ್ಟೇ ನಾ ಇಲ್ಲಿಂದ ಹೋಗೋದು. ಇಲ್ಲಾಂದ್ರೆ ಇಲ್ಲೇ ಉಳೀತೀನಿ ನಾನು" ಎಂದರು. 

ʻನಿಮ್ಮ ಮಗಳು ಅಷ್ಟೆಲ್ಲ ದುರ್ಬಲ ಮನಸ್ಸಿನವಳಲ್ಲ ಅಪ್ಪ' ಎಂದೇಳಿ ನಕ್ಕೆ. 

"ಗೊತ್ತು ನನಗೆ" ಎಂದು ಅವರೂ ನಕ್ಕು ಹಣೆಗೊಂದು ಮುತ್ತು ಕೊಟ್ಟು "ಎದ್ದು ಬಾಗಿಲಾಕಿಕೊಂಡು ಮಲಗು. ಬೆಳಿಗ್ಗೆ ಎಂಟರಷ್ಟರೊತ್ತಿಗೆ ಅವರ ಮನೆಗೋಗುವ" ಎಂದರು. 

ಬಾಗಿಲಾಕಿಕೊಂಡು ಮುಖಕ್ಕೊಂದಷ್ಟು ನೀರೆರಚಿಕೊಂಡು ಮುಖವನ್ನೊರೆಸಿಕೊಂಡು ಕನ್ನಡಿಯ ಎದುರಿಗೆ ನಿಂತು ಕೆದರಿದ್ದ ಕೂದಲನ್ನು ಸರಿ ಮಾಡಿಕೊಳ್ಳುವಾಗ ಕನ್ನಡಿಯಲ್ಲಿದ್ದವಳು "ಯು ಡಿಸರ್ವ್ ಎ ಬೆಟರ್ ಲೈಫ್ ಧರು" ಎಂದು ಕೂಗಿ ಹೇಳಿದಳು.

ಮುಖಪುಟ ಚಿತ್ರ: ಚೇತನ ತೀರ್ಥಹಳ್ಳಿ. 
ಮುಂದುವರೆಯುವುದು

No comments:

Post a Comment