"ಇದ್ಯಾಕೆ? ಪರೀಕ್ಷೆ ಮುಗಿದ ಮೇಲೆ ಓದೋಕೇನೂ ಇಲ್ಲ ಅಂತ ತುಂಬಾ ಬೇಸರಕ್ ಹೋಗ್ಬಿಟ್ಟಂಗಿದ್ದಿ" ಬೆಳಗಿನ ರೌಂಡ್ಸು ಮುಗಿಸಿ ಕ್ಯಾಂಟೀನಿನಲ್ಲಿ ಕಾಫಿ ಕುಡಿಯುತ್ತ ಕುಳಿತಿದ್ದಾಗ ಒಳಬಂದ ಸುಮಾ ಕೇಳಿದ ಪ್ರಶ್ನೆಗೆ ಮುಗುಳ್ನಕ್ಕೆ, ಉತ್ತರಿಸಲಿಲ್ಲ. ಇವತ್ತಿಗೆ ಇಪ್ಪತ್ತು ದಿನವೇ ಆಯಿತು ಮನೆಯಲ್ಲಿ ಗಲಾಟೆ ನಡೆದು. ಅವತ್ತಿನಿಂದ ಇವತ್ತಿನವರೆಗೂ ಮನಸ್ಸು ಸರಿ ಹೋಗಿಲ್ಲ. ಯಾಂತ್ರಿಕವಾಗಿ ಬೆಳಿಗ್ಗೆ ಮಗಳನ್ನು ಅಪ್ಪನ ಮನೆಗೆ ಬಿಟ್ಟು ಕೆಲಸಕ್ಕೆ ಬಂದು ಸಂಜೆ ಹೋಗುವಾಗ ಮಗಳನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದೀನಷ್ಟೇ. ಅಪ್ಪನ ಮನೆಯೊಳಗೂ ಕಾಲಿಟ್ಟಿಲ್ಲ ಅಷ್ಟು ದಿನದಿಂದ. ಬೆಳಿಗ್ಗೆ ಹೋಗಿ ಮನೆ ಮುಂದೆ ನಿಂತು ಹಾರ್ನ್ ಹೊಡೆದ್ರೆ ಅಪ್ಪನೋ ಅಮ್ಮನೋ ಶಶೀನೋ ಹೊರಬಂದು ಮಗಳನ್ನು ಕರೆದುಕೊಂಡು ಹೋಗುತ್ತಾರೆ, ಸಂಜೆ ಮತ್ತೊಂದು ಸುತ್ತು ಹಾರ್ನ್ ಹೊಡೆದ್ರೆ ಅಮ್ಮ ಒಳಗಡೆ ಬಾಗಿಲು ತೆರೆಯುತ್ತಾರೆ. ರಾಧ ಹೊರಬರುತ್ತಾಳೆ. ಅಮ್ಮ ಹೊರಬಂದು ನನ್ನನ್ನು ಮಾತನಾಡಿಸುವುದಿಲ್ಲ, ನಾನು ಒಳಗೋಗಿ ಅವರನ್ನು ವಿಚಾರಿಸಿಕೊಳ್ಳುವುದಿಲ್ಲ. ಅಪರೂಪಕ್ಕೆ ಸಂಜೆ ಅಪ್ಪ ಮನೆಯಲ್ಲೇ ಇದ್ದರೆ "ಬಾ ಒಳಗೆ" ಎನ್ನುತ್ತಾರೆ. ʻಇರ್ಲಿ ಪರವಾಗಿಲ್ಲ ಕೆಲಸವಿದೆʼ ಎಂದ್ಹೇಳಿ ನಾ ಹೊರಟುಬಿಡುತ್ತೇನೆ. ಅಪ್ಪನಿಗೂ ನನ್ನ ಮನಸ್ಥಿತಿಯ ಅರಿವಿದೆಯಲ್ಲ, ಬಲವಂತಿಸುವುದಿಲ್ಲ. ಇನ್ನು ಮನೆಗೆ ಬಂದು ಅಡುಗೆ ಪಾತ್ರೆ ಕ್ಲೀನಿಂಗು ಅಂತ ಸಮಯ ಹೋಗುವುದು ತಿಳಿಯುವುದಿಲ್ಲ. ರಾಜೀವ ಬರೋದು ತಡವಾಗಿ, ಹತ್ತು ಹತ್ತೂವರೆಯ ಸುಮಾರಿಗೆ. ಅಷ್ಟೊತ್ತಿಗೆ ಹೆಚ್ಚಿನ ದಿನ ನಾನೂ ಮಗಳು ಮಲಗಿ ಬಿಟ್ಟಿರುತ್ತೇವೆ. ಅವರ ಬಳಿ ಇರುವ ಕೀಯಿಂದ ಬಾಗಿಲು ತೆಗೆದುಕೊಂಡು ಒಳಬಂದು ಹಾಲಿನಲ್ಲೇ ಮಲಗಿಬಿಡುತ್ತಾರೆ. ಬೆಳಿಗ್ಗೆ ನಾ ಎದ್ದ ಮೇಲೆ ರೂಮಿನೊಳಗೆ ಬಂದು ಮಗಳ ಪಕ್ಕ ಮಲಗಿದರೆ ನಾನೂ ಮಗಳು ಹೊರಗೆ ಕಾಲಿಡುವವರೆಗೂ ಎದ್ದೇಳುವ ಯಾವ ಸೂಚನೆಯನ್ನೂ ತೋರಿಸುವುದಿಲ್ಲ. ಅವರಿಗೇನೋ ಮುಂಚೆಯಿಂದಾನೂ ಹೆಚ್ಚು ಮಲಗುವ ಅಭ್ಯಾಸವಿರುವುದು ಹೌದು. ಆದರೆ ತೀರ ಇಷ್ಟೊಂದೆಲ್ಲ ಅಲ್ಲ. ನನ್ನ ಜೊತೆ ಯಾವುದೇ ಮಾತುಕತೆ ನಡೆಸಬಾರದೆಂಬ ಕಾರಣಕ್ಕಷ್ಟೇ ಈ ರೀತಿಯ ವರ್ತನೆ. ನಾನೂ ಪ್ರಶ್ನಿಸಲೋಗಲಿಲ್ಲ. "ನಿನಗೆ ಬೇಕಾಗುವವರೆಗೆ, ನಿನಗೆ ಅವಶ್ಯಕತೆ ಇರುವವರೆಗೆ ನೀನು ನಾ ಕೋಪಗೊಂಡರೂ, ಸಿಟ್ಟುಗೊಂಡರೂ, ನಿನ್ನನ್ನು ಹಿಗ್ಗಾಮುಗ್ಗಾ ಬಯ್ದರೂ ಮತ್ತೆ ಮೆಸೇಜು ಮಾಡಿಕೊಂಡು ಫೋನ್ ಮಾಡಿಕೊಂಡು ಗೋಳಾಡಿ ಮುದ್ದಾಡಿ ಸಮಾಧಾನ ಪಡಿಸುತ್ತಿದ್ದೆ. ಇವಾಗ ನಾ ನಿನಗೆ ಬೇಡ, ಹಂಗಾಗಿ ನಾ ಚೂರು ಸಿಡುಕಿದರೂ ಸುಮ್ಮನಾಗಿಬಿಡುತ್ತಿ. ನನ್ನನ್ನು ಸಮಾಧಾನ ಪಡಿಸುವ ಅನಿವಾರ್ಯತೆ ನಿನಗೀಗಿಲ್ಲ" ಎಂದಿದ್ದ ಸಾಗರ. ಒಟ್ರಾಸಿ, ನೀ ಮನುಷ್ಯರನ್ನು ಬಳಸಿ ಬಿಸಾಡುವುದರಲ್ಲಿ ಪ್ರವೀಣೆ ಎಂದು ತಿಳಿಸಿಕೊಟ್ಟಿದ್ದ. ಇರಬಹುದು. ನನ್ನನ್ನು ಸಾಗರನಿಗಿಂತ ಚೆನ್ನಾಗಿ ಅರ್ಥ ಮಾಡಿಕೊಂಡವರು ಯಾರಿದ್ದಾರೆ. ಅವನ ಸ್ನೇಹವನ್ನೂ ಉಳಿಸಿಕೊಳ್ಳಲಿಲ್ಲ ನಾನು. ಇವತ್ತಿನ ಪರಿಸ್ಥಿತಿಯಲ್ಲಿ ಅವನ ಜೊತೆ ಮಾತನಾಡಿದ್ದರೆ, ಕಷ್ಟ ಹಂಚಿಕೊಂಡಿದ್ದರೆ ಅರ್ಧಕ್ಕರ್ಧ ಸಮಾಧಾನವಾಗಿಬಿಡುತ್ತಿತ್ತು. ಯಾವ ಮುಚ್ಚುಮರೆಯಿಲ್ಲದೆಯೇ ಇದ್ದುದೆಲ್ಲವನ್ನೂ ಇದ್ದಂತೆಯೇ ಹೇಳಿಕೊಳ್ಳಲು ಸಾಧ್ಯವಾಗೋದು ಅವನ ಜೊತೆ ಮಾತ್ರ. ಒಂದು ಫೋನ್ ಮಾಡೇಬಿಡಲಾ? ಅಥವಾ ಅದಕ್ಕೂ ಮುಂಚೆ ಒಂದು ಮೆಸೇಜ್ ಕಳಿಸಿಯೇಬಿಡಲಾ? ಎಂದಂದುಕೊಂಡು ಕೈಗೆ ಫೋನೆತ್ತಿಕೊಂಡಿದ್ದಕ್ಕೆ ಲೆಕ್ಕವಿಲ್ಲ. "ನಿನಗೆ ಬೇಸಿಕಲಿ ನಿನ್ನ ದುಃಖ ಹಂಚಿಕೊಳ್ಳೋಕೆ ಒಂದು ಜೊತೆ ಕಿವಿಗಳು ಬೇಕಿತ್ತಷ್ಟೇ. ಬೇರೆಯವರ ದುಃಖ ಕೇಳಿಸಿಕೊಳ್ಳೋ ತಾಳ್ಮೆ ನಿನ್ನಲ್ಲಿಲ್ಲ. ತುಂಬಾ ಸೆಲ್ಫ್ ಸೆಂಟರ್ಡ್ ಪರ್ಸನ್ ನೀನು" "ನನ್ನ ಹುಟ್ಟಿದಹಬ್ಬಕ್ಕಲ್ಲ, ನಾನು ಸತ್ತರೂ ನನಗೆ ಮೆಸೇಜು ಮಾಡಬೇಡ" ಅವನ ಮಾತುಗಳು ನೆನಪಾಗುತ್ತಿತ್ತು. ಫೋನನ್ನು ಪಕ್ಕಕ್ಕಿಡುತ್ತಿದ್ದೆ. ಕಾಲೇಜು ದಿನಗಳೇ ಚೆಂದಿದ್ದವಪ್ಪ. ಇನ್ನೇನಿಲ್ಲ ಅಂದ್ರೂ ಕಷ್ಟ ಸುಖ ಹಂಚಿಕೊಳ್ಳೋಕೆ ಅಂತಾನೇ ಗೆಳತಿಯರಿದ್ದರು. ದುಃಖಕ್ಕೆ ಹೆಗಲು ಬೇಡೋ, ಹೆಗಲಾಗೋ ಗೆಳೆಯರೂ ಇರ್ತಿದ್ರೇನೋ, ಪುರುಷೋತ್ತಮ ನನ್ನ ಜೀವನದಲ್ಲಿ ಇಲ್ಲದೇ ಹೋಗಿದ್ದರೆ. ಈಗ್ಯಾರಿದ್ದಾರೆ? ಈಗಿರಲಿ ನಾ ಮೆಡಿಕಲ್ ಮುಗಿಸಿದ ಮೇಲೆ ಯಾರೊಬ್ಬರಾದರೂ ನನ್ನ ಗೆಳೆಯರಾಗಿದ್ದಾರಾ? ಸಾಗರ ಗೆಳೆಯನ ಗಡಿಗಳನ್ನು ದಾಟಿ ಹತ್ತಿರಾದವನು. ಸುಮ ಒಬ್ಬಳಿದ್ದಳು, ನನ್ನ ರಾಮ್‌ಪ್ರಸಾದ್ ಬಗ್ಗೆ ಕೇಳಿದ ವದಂತಿಗಳನ್ನೇ ಬಳಸಿಕೊಂಡು ನೋವುಂಟು ಮಾಡಿದಳು. ಅವತ್ತಿನ ನಂತರ ಸುಮಾಳೊಂದಿಗೆ ಎಷ್ಟು ಬೇಕೋ ಅಷ್ಟೇ ಮಾತು. ಅವಳೇನೋ ಪಾಪ ರೇಗಿಸಲೇ ಹೇಳಿರಬಹುದು, ಆದರದು ಮನಸ್ಸು ಮುರಿದು ಹಾಕಿತು. ರಾಜೀವನ ಗೆಳೆಯರನೇಕರು ಪರಿಚಯ, ಅದು ಪರಿಚಯದ ಮಿತಿ ದಾಟಲಿಲ್ಲ. ರಾಮ್‌ಪ್ರಸಾದ್ ಒಬ್ಬನನ್ನು ಹೊರತುಪಡಿಸಿ. ತೀರ ಖಾಸಗಿ ವಿಷಯಗಳನ್ನೇನೂ ರಾಮ್ ಜೊತೆಗೆ ಇಲ್ಲಿಯವರೆಗೆ ಹಂಚಿಕೊಂಡವಳಲ್ಲ ನಾನು, ಆದರೆ ಗೆಳೆತನ ದೃಡವಾಗುತ್ತಿದ್ದ ಎಲ್ಲಾ ಸೂಚನೆಗಳು ಸ್ಪಷ್ಟವಾಗಿದ್ದವು. ಈ ವಿಷಯದಲ್ಲಿ ರಾಮ್‌ಪ್ರಸಾದ್ ಕೂಡ ನನ್ನ ಜೊತೆಗೆ ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ. ಬೇರೆ ಯಾರೋ ಆಗಿದ್ದರೂ ರಾಮ್ ಜೊತೆ ಒಮ್ಮೆ ಚರ್ಚಿಸಬಹುದಿತ್ತೋ ಏನೋ. ಹೇಗೆ ಇದನ್ನು ಸರಿ ಮಾಡೋದು, ಹೇಗೆ ರಾಜೀವನಿಗೆ ನಮ್ಮ ಮನೆಯವರಿಗೆ ನನ್ನ ಅವರ ಮಧ್ಯೆ ಸಂಬಂಧ ಇಲ್ಲ ಅಂತ ವಿವರಿಸೋದು ಅಂತಲಾದರೂ ಸಲಹೆ ಪಡೆಯಬಹುದಿತ್ತು. ಅದೀಗ ಸಾಧ್ಯವಿಲ್ಲ. ಎಷ್ಟೇ ಆದ್ರೂ ಸುಮಾ ಗುಡ್ ಫ್ರೆಂಡು. ಅವಳ ಹತ್ತಿರವೇ ಹೇಳಿಕೊಂಡುಬಿಡಲಾ ಅನ್ನೋ ಯೋಚನೆಯೂ ಸುಳಿಯದೆ ಇರಲಿಲ್ಲ. ಅವಳತ್ತಿರ ಹೇಳುವುದೋ ಬೇಡವೋ ತಿಳಿಯುತ್ತಿಲ್ಲ. ಒಟ್ಟಾರೆ ಯಾವ ಸಣ್ಣ ಪುಟ್ಟ ನಿರ್ಧಾರಗಳನ್ನೂ ಖಚಿತವಾಗಿ ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿ ನಾನಿಲ್ಲ.
"ಹಲೋ ಮೇಡಂ. ನಿಮ್ ಯೋಚನೆಗಳೆಲ್ಲ ಮುಗಿದಿದ್ರೆ ನಾ ಏನೋ ಕೇಳಿದ್ನಲ್ಲ ಅದಕ್ಕೆ ಬದಲೇಳೋ ಕೃಪೆ ತೋರಬಹುದು" ನಾಟಕೀಯವಾಗಿ ಕೈ ಜೋಡಿಸಿ ನಟಿಸಿದವಳು ನಗು ತರಿಸಿದಳು.
"ಅಬ್ಬಾ! ನಕ್ಕಳಾ ರಾಜಕುಮಾರಿ! ಏನಾಯ್ತವ್ವ. ಇಸ್ ಎವೆರಿತಿಂಗ್ ಫೈನ್?"
ʻಮ್. ಫೈನ್ ಅಂದ್ಕೊಂಡ್ರೆ ಫೈನ್. ಇಲ್ಲಾಂದ್ರೆ ಇಲ್ಲ'
"ಅಂತದ್ದೇನಾಯ್ತವ್ವ ಈಗ?"
ʻಇರ್ತಾವಲ್ಲ ಮಾಮೂಲಿ. ಅದೂ ಇದೂ ಕಿರಿಕಿರಿ'
"ಮಾಮೂಲಿ ಕಿರಿಕಿರೀಗೆ ಇಷ್ಟೆಲ್ಲ ತಲೆ ಕೆಡಿಸಿಕೊಳ್ಳೋಳಲ್ಲವಲ್ಲ ನೀನು"
ʻಮ್. ಬಿಡು ಆ ವಿಷಯ. ನಿನ್ನೊಂದು ಮಾತು ಕೇಳಲಾ...'
"ಕೇಳವ್ವ"
ʻನಿಜಕ್ಕೂ ನಿನಗೆ ನನ್ನ ರಾಮ್‍ಪ್ರಸಾದ್ ಮಧ್ಯೆ ಸಂಬಂಧ ಇದೆ ಅನ್ಸುತ್ತಾ'
"ಛೀ ಛೀ ... ಇಲ್ಲಪ್ಪ. ನಾನ್ಯಾಕ್ ಹಂಗ್ ಅಂದ್ಕೊಳ್ಳಲಿ"
ʻಮತ್ತೆ ಅವತ್ ನೀ ಆಡಿದ್ದು?'
"ಅಯ್ಯ ನಿನ್ನ. ಅವತ್ತೇ ಹೇಳಿದ್ನಲ್ಲ. ಸುಮ್ನೆ ರೇಗ್ಸಿದ್ದು ಅಂತ. ಅಫ್ ಕೋರ್ಸ್ ನಮ್ಮಾಸ್ಪತ್ರೆಯಲ್ಲೇ ಒಂದಷ್ಟು ಜನ ಹಂಗ್ ಮಾತಾಡ್ತಿರೋದ್ ಹೌದು. ಹಂಗ್ ಮಾತಾಡೋರ್ಗೂ ಕೂಡ ನಿಮ್ಮಿಬ್ಬರ ನಡುವೆ ಗೆಳೆತನದಾಚೆಗೊಂದು ಸಂಬಂಧವಿದೆ ಅಂತ ಧೃಡವಾಗೇನೂ ಗೊತ್ತಿಲ್ಲ. ಸುಮ್ನೆ ಬಾಯ್ ತೀಟೆ ತೀರಿಸಿಕೊಳ್ಳೋಕೆ ಮಾತಾಡ್ತಾರೆ ಅಷ್ಟೇ. ಅವತ್ ನಾ ಮಾತಾಡಿದ್ನಲ್ಲ ಆ ತರ ಅಷ್ಟೇ"
ʻಮ್. ಜನರ ಬಾಯ್ ತೀಟೆಯ ಮಾತುಗಳು ನಮ್ ಮನೆಯನ್ನೂ ತಲುಪಿಬಿಟ್ಟಿವೆ'
"ವಾಟ್?! ಅದೆಂಗ್ ತಲುಪಿತು?"
ʻನನ್ ತಮ್ಮನ ಹೆಂಡತಿ ಸೋನಿಯಾ ಅಡ್ಮಿಟ್ ಆಗಿದ್ಲಲ್ಲ. ಅವಳಿದ್ದ ವಾರ್ಡಿನಲ್ಲಿ ಸಿಸ್ಟರ್ಗಳ್ಯಾರೋ ಮಾತಾಡಿಕೊಂಡರಂತೆ'
"ಅಯ್ಯೋ.... ರಾಜೀವ್ ಹತ್ರ ಎಲ್ಲಾ ಏನೂ ಹೇಳಿಲ್ಲ ತಾನೆ"
ʻರಾಜೀವ್ ಹತ್ರ, ನಮ್ಮಮ್ಮನ ಹತ್ರ, ಅವಳ ಗಂಡನ ಹತ್ರ .... ಎಲ್ಲರತ್ರ ಹೇಳಿದ್ದಾಳೆ'
"ಕರ್ಮ. ಅವಳೂ ವರ್ಕಿಂಗ್ ತಾನೆ?"
ʻಹು'
"ಮತ್ತೆ ವರ್ಕಿಂಗ್ ವುಮೆನ್‍ಗೆ ಗೊತ್ತಿರಲ್ವ ಕೆಲಸದ ಜಾಗದಲ್ಲಿ ಈ ತರ ಅನಗತ್ಯ ಮಾತುಗಳು ಸಾವಿರ ಇರ್ತವೆ ಅಂತ?"
ʻಮಾತುಗಳು ನಮ್ಮ ಬಗ್ಗೆ ಇದ್ದಾಗ ಮಾತ್ರ ಅದು ಅನಗತ್ಯ ಅನ್ನಿಸೋದಲ್ವ? ಬೇರೆಯವರ ಬಗ್ಗೆ ಇರೋ ಮಾತುಗಳ್ಯಾವತ್ತೂ ಆಕರ್ಷಕವಾಗೇ ಇರ್ತದೆʼ
"ಮ್. ಅದು ಸರಿ ಅನ್ನು. ನಾನೂ ಅದನ್ನೇ ತಾನೇ ಮಾಡಿದ್ದು"
ʻಮ್ʼ
"ರಾಜೀವ ಏನಂದ್ರು?"
ವಿವರಿಸಿದೆ.
"ಮ್. ಕಷ್ಟದ ಪರಿಸ್ಥಿತಿ"
ʻಕಷ್ಟಾನಾ! ಅಯ್ಯಪ್ಪ. ಏನ್ ಮಾಡ್ಬೇಕು ಅಂತಾನೇ ತಿಳೀತಿಲ್ಲ. ನಿಜ್ಜ ನನ್ನದೇನಾದ್ರೂ ತಪ್ಪಿದ್ದರೆ ಅದನ್ನ ಸರಿಪಡಿಸಿಕೊಂಡಾದರೂ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಿತ್ತು. ನನ್ನ ತಪ್ಪೂ ಇಲ್ಲ ಇಲ್ಲಿ. ಏನಂತ ಸರಿಮಾಡೋದೋ ಗೊತ್ತಾಗುತ್ತಲೇ ಇಲ್ಲʼ
"ಅದ್ ಹೌದು. ರಾಜೀವನಿಗೆ ವಿವರಿಸಿ ಹೇಳಬಹುದಿತ್ತು"
ʻಹೇಳಾಯಿತು. ಸರಿ ಸರಿ ಎಂದು ಮೇಲ್ಮೇಲೆ ಒಪ್ಪಿದಂತಿದ್ದಾರೆ. ಪೂರ್ತಿ ನನ್ನ ಮೇಲೆ ನಂಬಿಕೆ ಬಂದಿದೆ ಎಂದು ನನಗನ್ನಿಸುವುದಿಲ್ಲʼ
"ಸಮಯ ಬೇಕು ಅನ್ಸುತ್ತೆ ಅಷ್ಟೇ. ರಾಮ್‌ಪ್ರಸಾದ್‌ಗೆ ಈ ವಿಷಯ ಗೊತ್ತಿದೆಯಾ?"
ʻಅದೊಂದ್ ಬಾಕಿ ಇತ್ತು ಈಗ ನೋಡು. ಇಲ್ಲ ಅವರಿಗೆ ಗೊತ್ತಿಲ್ಲʼ
"ರಾಜೀವನಿಗೂ ರಾಮ್ ಫ್ರೆಂಡೇ ಹೌದಲ್ಲ. ಹೇಳಿರಲ್ಲ ಅಂತೀಯ?"
ʻಹೇಳಿದಂಗಿಲ್ಲ. ರಾಮ್ ಅಂತೂ ಅದರ ಬಗ್ಗೆಯೆಲ್ಲ ಏನೂ ಕೇಳಿಲ್ಲ. ಜೊತೆಗವರ ವರ್ತನೆಯಲ್ಲೂ ಅಂತದ್ದೇನೂ ನನಗೆ ಕಾಣಿಸಲಿಲ್ಲʼ
"ಅವರಿಗೆ ಗೊತ್ತಾದರೆ ಒಳ್ಳೆಯದೋ ಗೊತ್ತಾಗದಿದ್ದರೆ ಒಳ್ಳೆಯದೋ ನನಗಂತೂ ಗೊತ್ತಾಗುತ್ತಿಲ್ಲ"
ʻಗೊತ್ತಾಗದೇ ಇದ್ರೆ ಒಳ್ಳೆಯದೇನೋಪʼ
"ಮ್"
ʻಇದನ್ನೆಲ್ಲ ಹೇಗೆ ಸರಿ ಮಾಡೋದು ಅಂತಾನೇ ಗೊತ್ತಾಗ್ತಿಲ್ಲ ನೋಡುʼ
"ಏನ್ ವಿಚಿತ್ರ ಅಲ್ಲ. ನೀ ತಪ್ಪೇ ಮಾಡಿಲ್ಲ. ಯಾರೋ ನೀ ತಪ್ ಮಾಡ್ದೆ ಅಂತ ಸುಳ್ಳು ಸುಳ್ಳೇ ಅಪವಾದ ಹೊರಿಸಿದರು. ತಪ್ ಮಾಡಿಲ್ಲ ಅನ್ನೋದನ್ನ ಕೂಡ ಈಗ ನೀನೇ ಪ್ರೂವ್ ಮಾಡ್ಕೋಬೇಕು"
ʻಹಣೆಬರ. ಪಿಜಿ ಮುಗೀತು. ಫೈನ್ಯಾನ್ಶಿಯಲಿ ಕೂಡ ಒಂದಷ್ಟು ನೆಮ್ಮದಿ ಸಿಗೋಹಂಗಾಗಿದೆ. ರಾಜೀವ ಕೂಡ ಮುಂಚಿಗಿಂತ ಎಷ್ಟೋ ಬದಲಾಗಿದ್ದರು. ಎಲ್ಲಾ ಸರಿ ಹೋಗ್ತಿದೆ ಅನ್ನೋವಾಗ ಈ ತರ ಆಗೋಯ್ತುʼ
"ಮತ್ತೆ. ಏನಾದ್ರೂ ಎಂಟರ್‌ಟೈನ್ಮೆಂಟ್ ಇರಬೇಕಲ್ಲ ಜೀವನದಲ್ಲಿ" ನಕ್ಕಳು.
ನಾನೂ ಬಲವಂತದ ನಗೆ ನಕ್ಕು ಸುಮ್ಮನಾದೆ. ಸುಮಾಳ ಜೊತೆ ಮಾತನಾಡಿದ್ದಕ್ಕೆ ಪರಿಹಾರದ ರೂಪದಲ್ಲಂತೂ ಏನೂ ಸಿಗಲಿಲ್ಲ. ಕೊನೆಪಕ್ಷ ಯಾರೋ ಒಬ್ಬರತ್ರ ಹೇಳಿಕೊಂಡ ಸಮಾಧಾನ ಜೊತೆಯಾಯಿತು.
ಮುಖಪುಟ ಚಿತ್ರ: ಚೇತನ ತೀರ್ಥಹಳ್ಳಿ.
ಮುಂದುವರೆಯುವುದು
No comments:
Post a Comment