ಬದುಕು ಬದಲಾಗಲು ತುಂಬ.... ತುಂಬ ಅಂದರೆ ತುಂಬಾ ಕಡಿಮೆ ಸಮಯ ಬೇಕು. ನಿನ್ನೆಯವರೆಗೂ ಜೊತೆಯಲ್ಲಿದ್ದವರು, ಜೊತೆಯಲ್ಲಿದ್ದು ಹರಟಿದವರು, ಹರಟಿ ಕಷ್ಟ ಸುಖಕ್ಕಾದವರು, ಕಷ್ಟ ಸುಖಕ್ಕಾಗುತ್ತಾ ಜೀವನ ಪೂರ್ತಿ ಜೊತೆಯಲ್ಲಿಯೇ ಇರುತ್ತೀವಿ ಅಂತ ನಂಬಿಕೆ ಚಿಗುರಿಸಿದವರು, ಚಿಗುರಿದ ನಂಬುಗೆಯನ್ನು ಮರವಾಗಿಸಿದವರು ಇದ್ದಕ್ಕಿದ್ದಂತೆ ದೊಡ್ಡದೊಂದು ಜೆ.ಸಿ.ಬಿ ಹೊತ್ತು ತಂದು ಮುಲಾಜೇ ಇಲ್ಲದೆ ಬೇರು ಸಮೇತ ಆ ಮರವನ್ನು ಉರುಳಿಸಿಬಿಟ್ಟರೆ ಅದನ್ನು ತಡೆದುಕೊಳ್ಳುವುದು ಮನುಷ್ಯ ಮಾತ್ರರಿಗೆ ಸಾಧ್ಯವೇ? ನಾ ತಡೆದುಕೊಂಡೆ. ಸಾಗರ ಹೇಳ್ತಾನೇ ಇರ್ತಾನಲ್ಲ ನೀ ದೇವತೆ ಅಂತ! ಇದ್ರೂ ಇರಬಹುದೇನೋ ಅಂತಂದುಕೊಂಡು ನಕ್ಕೆ.
ಡೈವೋರ್ಸ್ ತೆಗೆದುಕೊಳ್ಳುವ ನಿರ್ಧಾರ ಸುಲಭದ್ದಾಗಿರಲಿಲ್ಲ. ಡೈವೋರ್ಸ್ ಬಗ್ಗೆ ಯೋಚನೆ ಮಾಡಿದಾಗೆಲ್ಲ ಮದುವೆಯ ದಿನಗಳ ನೆನಪಾಗುತ್ತಿತ್ತು. ಪುರುಷೋತ್ತಮ ಎಷ್ಟೆಲ್ಲ ತೊಂದರೆ ಕೊಟ್ಟರೂ ಅದನ್ನೆಲ್ಲ ಗಮನಕ್ಕೇ ತೆಗೆದುಕೊಳ್ಳದಂತೆ ಪ್ರಬುದ್ಧರಾಗಿ ವರ್ತಿಸಿದ್ದರು ರಾಜೀವ್. ಪುರುಷೋತ್ತಮನನ್ನು ಬಿಡುವುದು ಎಷ್ಟು ಕಷ್ಟದ ಸಂಗತಿಯಾಗಿತ್ತೋ ರಾಜೀವನನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಅಷ್ಟೇ ಸಂತಸವಾಗಿತ್ತು. ತುಂಬಾ ಸರಿಯಾದ ಆಯ್ಕೆ ಅನ್ನಿಸಿತ್ತು. ಎಲ್ಲಾ ನಿರ್ಧಾರಗಳೂ ಹಿಂಗೇ ಒಂದಷ್ಟು ವರುಷಗಳ ನಂತರ ತಪ್ಪು ಅನ್ನಿಸಲು ಶುರುವಾಗಿಬಿಡುತ್ತಾ? ಯಪ್ಪ! ಆ ತರವಾಗಿಬಿಟ್ಟರೆ ಯಾವ ನಿರ್ಧಾರಗಳನ್ನೂ ತೆಗೆದುಕೊಳ್ಳುವುದೇ ಸಾಧ್ಯವಿಲ್ಲ. ಅವತ್ತಿಗೆ ಆ ನಿರ್ಧಾರ ಸರಿ ಇವತ್ತಿಗೆ ಈ ನಿರ್ಧಾರ ಸರಿಯಾ? ಡೈವೋರ್ಸ್ ತೆಗೆದುಕೊಳ್ಳುತ್ತಿರುವುದು ರಾಜೀವ ನನ್ನ ಮೇಲೆ ಅನುಮಾನ ಪಟ್ಟ, ಅನುಮಾನ ಪಟ್ಟು ಮನೆಯಲ್ಲಿ ಅಸಹ್ಯದ ವಾತಾವರಣ ಸೃಷ್ಟಿಸಿದ ಅನ್ನುವುದು ಮಾತ್ರ ಕಾರಣವಾ? ಕ್ಷಮೆ ಕೇಳು, ಜೊತೆಯಲ್ಲಿರಿ ಅಂತೇಳಿದ್ರಲ್ಲ ಅವರ ಮನೆಯವರು. ಯಾರೋ ದೂರದವರಲ್ಲವಲ್ಲ ರಾಜೀವು, ಒಂದು ಕ್ಷಮೆ ಬಿಸಾಕಿ ಸರಿ ಮಾಡಿಕೊಳ್ಳಬಹುದಿತ್ತಲ್ಲ. ಯಾಕೆ ಕ್ಷಮೆಯ ದಾರಿಯನ್ನು ನಾ ಆಯ್ದುಕೊಳ್ಳಲಿಲ್ಲ? ಯಾಕೆ ಆಯ್ದುಕೊಳ್ಳಲಿಲ್ಲವೆಂದರೆ ಅದಕ್ಕೆ ಕಾರಣ ರಾಧ ಅಂದರೆ ತಪ್ಪಲ್ಲ.
ಹೌದು. ರಾಜೀವ್ ದೊಡ್ಡ ಸಂಬಳದ ಕೆಲಸ ಹಿಡಿಯುವುದು ನನಗೆ ಬೇಕಿರಲಿಲ್ಲ, ನಾ ಅದನ್ನು ಯಾವತ್ತಿಗೂ ನಿರೀಕ್ಷೆಯೂ ಮಾಡಿರಲಿಲ್ಲ. ಹೋಗಲಿ ಅಪ್ಪನ ಮನೆಯಲ್ಲಿ ದಂಡಿಯಾಗಿ ದುಡ್ಡು ಬಿದ್ದಿದೆಯಲ್ಲ, ಹೋಗಿ ಈಸ್ಕೊಂಡು ಬನ್ನಿ ಅಂತ ಗೋಗರೆದಿರಲಿಲ್ಲ, ಅತ್ತು ರಂಪಾಟ ಮಾಡಿರಲಿಲ್ಲ. ಬರೋ ಸಂಬಳದಲ್ಲಿ ಆರಾಮಾಗಿ ಇರುವ ಬಿಡಿ ಅಂತ ಹೇಳುತ್ತಲೇ ಇದ್ದರೂ ಅವರಿಗೇ ವಾಸ್ತವದ ಜೀವನ ಶೈಲಿ ರುಚಿಸುತ್ತಿರಲಿಲ್ಲ. ಮತ್ತಾ ಜೀವನವನ್ನು ಸರಿಪಡಿಸುವ ಹೆಚ್ಚಿನ ಜವಾಬ್ದಾರಿ ನನ್ನ ಮೇಲೇ ಹೊರಿಸಿಬಿಟ್ಟಿದ್ದರು. ಅದನ್ನೂ ತಡೆದುಕೊಳ್ಳಬಹುದಿತ್ತು. ಆದರೆ ರಾಧಳೆಡೆಗೆ ಅವರು ತೋರುತ್ತಿದ್ದ ಅಸಡ್ಡೆ, ಅಸಡ್ಡೆ ವ್ಯಕ್ತಪಡಿಸಲು ಅವರು ಬಳಸುತ್ತಿದ್ದ ಕೀಳಾದ ಭಾಷೆ, ಆ ಕೀಳಾದ ಭಾಷೆಯನ್ನು ಶತ್ರುವಿನ ಮಕ್ಕಳಿಗೂ ಬಳಸಬಾರದು, ಬಳಸಬಾರದ ಭಾಷೆಯನ್ನು ಬಳಸಿ ಬಳಸಿ ನನ್ನಲ್ಲೂ ಅವರೆಡೆಗೊಂದು ಅಸಹ್ಯ ಮೂಡಿಸಿಬಿಟ್ಟರು. ಅವರ ಬಗ್ಗೆಯಿದ್ದ ಗೌರವ ದಿನೇ ದಿನೇ ಚೂರ್ಚೂರೇ ಕಮ್ಮಿಯಾಗಿದ್ದು ನನಗೂ ಗೊತ್ತಾಗಲಿಲ್ಲ. ರಾಮ್ ಮತ್ತು ನನ್ನ ಕಲ್ಪಿತ ಸಂಬಂಧದ ಬಗೆಗಿನ ಜಗಳ ನನ್ನೊಳ ಮನಸ್ಸಿನಲ್ಲಿದ್ದ ಡೈವೋರ್ಸ್ ತಗೊಂಡ್ ಹೋಗಿಬಿಟ್ಟರೆ ಹೇಗೆ ಅನ್ನೋ ದೂರದ ಬೆಟ್ಟವನ್ನು ಹತ್ತಿರವಾಗಿಸಿಬಿಟ್ಟಿತು. ಇದು ಹತ್ತಲಾರದ ಬೆಟ್ಟವೇನಲ್ಲ ಎಂದು ಅರಿವಾದ ಮೇಲೆ ತಿರುಗಿ ನೋಡುವ ಪ್ರಮೇಯ ಮೂಡಲಿಲ್ಲ.
ಈ ಒಂದು ತಿಂಗಳಲ್ಲಿ ಕೊನೇ ಪಕ್ಷ ಒಂದೇ ಒಂದು ಸಲ ರಾಜೀವ್ "ಬಿಡು ಏನೋ ಸಿಟ್ಟಲ್ ನಾನೂ ಹೆಂಗೆಂಗೋ ಆಡಿಬಿಟ್ಟೆ" ಎಂದುಬಿಟ್ಟಿದ್ದರೆ ಖುಷಿಖುಷಿಯಾಗಿ ʻನನ್ನದೂ ತಪ್ಪಾಯಿತು ಬಿಡಿ' ಎಂದೇಳಿ ಮತ್ತೆ ಒಂದಾಗಿಬಿಡುತ್ತಿದ್ದೆ. ಮತ್ತೆ ಜಗಳವಾಡ್ತೀವಿ ಅನ್ನೋದು ಖಚಿತವಾಗಿ ಗೊತ್ತಿದ್ದರೂ ಒಂದಾಗಿಬಿಡುತ್ತಿದ್ದೆ. ಆದರವರೆಲ್ಲಿ ಆ ರೀತಿ ಮಾತನಾಡಿದರು? ಜಗಳವಾದ ಮೊದಲ ವಾರವಂತೂ ಬೆಳಿಗ್ಗೆ ಅನ್ನುವಂಗಿಲ್ಲ ಸಂಜೆ ಅನ್ನುವಂಗಿಲ್ಲ ರಾತ್ರಿ ಅನ್ನುವಂಗಿಲ್ಲ ಪದೇ ಪದೇ ಫೋನು ಮಾಡೋರು. ಏನೋ ಮಾತಾಡೋದಿದೆ ಅವರಿಗೆ ಅಂತ ಫೋನ್ ರಿಸೀವ್ ಮಾಡಿದರೆ ನಾ ಹಲೋ ಅನ್ನೋಕು ಬಿಡದೆ ಒಂದೇ ಸಮನೆ ಬಯ್ಯೋರು. ಯಾರೂ ಕೇಳಿಸಿಕೊಳ್ಳಬಾರದ ಬಯ್ಗುಳಗಳವು. ಒಂದು ವಾರದವರೆಗೂ ಈ ಸಲ ಖಂಡಿತವಾಗಿ ತಾಳ್ಮೆಯಿಂದ ಮಾತನಾಡ್ತಾರೆ ಅಂತ ರಿಸೀವ್ ಮಾಡಿದೆ. ಉಪಯೋಗವಾಗಲಿಲ್ಲ. ಅವರ ಫೋನ್ ರಿಸೀವ್ ಮಾಡುವುದನ್ನೇ ಬಿಟ್ಟುಬಿಟ್ಟೆ. ಅವರ ಅಮ್ಮನ ಮೊಬೈಲಿನಿಂದ ಮಾಡಿದರು, ಅಕ್ಕನ ಮೊಬೈಲಿನಿಂದ, ಅಪ್ಪನ ಮೊಬೈಲಿನಿಂದ ಕರೆ ಮಾಡಿದರು. ಮೊದಲ ಸಲ ರಿಸೀವ್ ಮಾಡುತ್ತಿದ್ದೆ. ಇವರೇ ಅಂತ ಗೊತ್ತಾಗುತ್ತಿದ್ದಂತೆ ಕಟ್ ಮಾಡಿಬಿಡುತ್ತಿದ್ದೆ. ಆಸ್ಪತ್ರೆಯ ಹತ್ತಿರವೋ ಮನೆ ಹತ್ತಿರವೋ ಬಂದು ಜಗಳ ಮಾಡಿಬಿಟ್ಟರೆ ಅನ್ನೋ ಅನುಮಾನ, ಮನೆ ಹತ್ರ ಬಂದು ಮಗಳನ್ನು ಬಲವಂತವಾಗಿ ಎತ್ತಿಕೊಂಡು ಹೋಗಿಬಿಟ್ಟರೆ, ಎತ್ಕೊಂಡು ಹೋದ್ರೂ ಪರವಾಗಿಲ್ಲ ಏನಾದರೂ ತೊಂದರೆ ಮಾಡಿಬಿಟ್ಟರೆ ಅನ್ನೋ ಭಯ ಭಯ ಭಯ. ಬದುಕದಿದ್ದರೂ ಪರವಾಗಿಲ್ಲ ಭಯದಲ್ಲಿ ಬದುಕಬಾರದು.
ಮುಂದೇನು ಅನ್ನುವುದು ಸ್ಪಷ್ಟವಾಗುತ್ತಲೇ ಇರಲಿಲ್ಲ. ಮೊದಲ ವಾರ ಭಯದಿಂದ ಅಪ್ಪನ ಮನೆಯಲ್ಲೇ ಇದ್ದೆ. ಅಮ್ಮನ ಗೊಣಗಾಟ ಮುಂದುವರಿದೇ ಇತ್ತು. ಅಪ್ಪನಂತ ಅಪ್ಪನಿಗೆ ನನ್ನದು ತಪ್ಪಿಲ್ಲ ಅಂತ ಅರ್ಥವಾಗಿದೆ, ಅಮ್ಮನಿಗೆ ಅರ್ಥವಾಗಿಲ್ಲ. ಅವರ ಪ್ರಕಾರ ನನ್ನದೇ ಕೊಬ್ಬಿನ ನಡತೆ. ಅವರ ಮನೆಯಲ್ಲಿರುವುದು ನನಗನಿವಾರ್ಯವಾಗಿತ್ತು. ಅವರ ಮಾತುಗಳನ್ನೆಲ್ಲ ಕೇಳಿಸಿಕೊಳ್ಳದಂತೆ ಇದ್ದುಬಿಟ್ಟೆ. ಸೋನಿಯಾ ಅಂತೂ ಎದುರಿಗೆ ಬಂದರೆ ಅತ್ತ ಸರಿದು ಬಿಡುತ್ತಿದ್ದಳು. ಇಷ್ಟಕ್ಕೆಲ್ಲ ಅವಳೇ ಕಾರಣವಲ್ಲವಾ? ಅಯ್ಯೋ ಇವರ ಬದುಕನ್ನು ಹಿಂಗ್ ಹಾಳುಮಾಡಿಬಿಟ್ನಲ್ಲ ಅಂತ ಚೂರಾದ್ರೂ ಪಶ್ಚಾತ್ತಾಪ ಬೇಡವಾ? ಸುಳ್ಳನ್ನು ಪದೇ ಪದೇ ಹೇಳಿಕೊಂಡರೆ ಸುಳ್ಳೇಳಿದವರಿಗೂ ಅದೇ ಸತ್ಯದಂತೆ ತೋರಲಾರಂಭಿಸಿಬಿಡುತ್ತದೆ. "ಇವಳಿಗೂ ರಾಮ್ಗೂ ಸಂಬಂಧವಿದೆ' ಅಂತ ದಿನಕ್ಕೆ ನೂರು ಸಲವಾದರೂ ಹೇಳಿಕೊಂಡು ಅದನ್ನೇ ನಂಬಿಕೊಂಡು ನಾ ಮಾಡಿದ್ದೇ ಸರಿ ಅನ್ನೋ ಕಲ್ಪನಾ ಲೋಕದಲ್ಲೇ ಇರಬೇಕವಳು. ಅವಳಿದ್ದಾಗ ರಾಜೀವನ ಯಾವ ವಿಷಯಗಳನ್ನೂ ಮಾತನಾಡಲು ಹೋಗುತ್ತಿರಲಿಲ್ಲ. ಅವಳು ರಾಜೀವನಿಗೆ ಫೋನು ಮಾಡಿಯೋ ಅಥವಾ ಮೆಸೇಜು ಮಾಡಿ ಹಿಂಗಿಂಗೆ ಅಂತ ತಿಳಿಸಿ ವಿಷಯವನ್ನು ಮತ್ತಷ್ಟು ಜಟಿಲಗೊಳಿಸಿಬಿಟ್ಟರೆಂಬ ಕಾರಣದಿಂದ. ನಿಜಕ್ಕೂ ನಮ್ಮ ಮನೆಯಲ್ಲಿ ಯಾರಾದರೂ ತುಂಬಾ ಪ್ರಬುದ್ಧರು ವಿಷಯ ಎಂತದ್ದೇ ಇದ್ದರೂ ಸಮಾಧಾನದ ಮನಸ್ಥಿತಿಯಿಂದಿದ್ದು ಆತುರಕ್ಕೆ ಬೀಳದೆ ಇರುವವನೆಂದರೆ ಶಶಿ ಮಾತ್ರ. ಈಗಂತಲ್ಲ ಚಿಕ್ಕ ವಯಸ್ಸಿನಿಂದಲೂ ಅವನಂಗೇ. ಸೋನಿಯಾ ಮಾಡಿದ್ದು ಅವನಿಗೂ ಸಿಟ್ಟು ತರಿಸಿದೆ. ಏನೇ ಅಂದ್ರೂ ಗರ್ಭಿಣಿಯಾಕೆ. ಅದೊಂದೇ ಕಾರಣಕ್ಕೆ ಅವಳಿಗೆ ರೇಗದೆ ಸುಮ್ಮನಿದ್ದಾನೆ. ಮತ್ತದು ಸರಿಯೂ ಹೌದಲ್ಲ. ಅವಳಿಗೆ ರೇಗಿ, ಅವಳೂ ತಿರುಗಿಸಿ ರೇಗಿ.... ಈಗಿರೋ ಸಮಸ್ಯೆಗಳೇ ಹೊದ್ದಿಕೊಳ್ಳಲು ಸಾಕಾಗಿವೆಯಲ್ಲ.
ಗೊಂದಲದ ಬದುಕಿಗೆ ಪಟ್ಟಂತ ಪರಿಹಾರ ಸೂಚಿಸಿದ್ದು ಸುಮ. ಅವಳಂತ ಪರಿಹಾರ ಸೂಚಿಸುವಂತೆ ಮಾಡಿದ್ದು ರಾಜೀವೇ. ಹಿಂಗಿಂಗಾಯ್ತು ಕಣೇ ಅಂತಂದಾಗ "ಅಯ್ಯೋ ಹೌದಾ. ಬಿಡು ಸರಿಹೋಗ್ತದೆ ಒಂದತ್ತು ದಿನ ಅಷ್ಟೇ" ಎಂದಿದ್ದಳು. ಅವಳಿಗೂ ನಂಬಿಕೆಯಿತ್ತು ಇದೇನು ತಲೆ ಬಿದ್ದುಹೋಗುವ ವಿಷಯವಲ್ಲವೆಂದು. ಅವಳ ಜೊತೆ ಇದ್ದಾಗಲೇ ರಾಜೀವ ಫೋನ್ ಮಾಡಿ ಸುರಿಸುತ್ತಿದ್ದ ಬಯ್ಗುಳಗಳನ್ನ ಕೇಳಿದ ಮೇಲೆ ಸರಿ ಹೋಗೋದು ಅಷ್ಟರಲ್ಲೇ ಇದೆ ಅಂತ ಅವಳಿಗೂ ಅನ್ನಿಸಿತ್ತು. ಆದರೂ ಪರವಾಗಿಲ್ಲ ಕಾದು ನೋಡುವ ಎಂದಿದ್ದಳು. ವಾರದ ಹಿಂದೆ ನಾನೂ ಅವಳು ಮಧ್ಯಾಹ್ನ ಊಟಕ್ಕೆಂದು ಹೊರಗೋಗಿದ್ದವು. ಅವಳೇ ಕರೆದುಕೊಂಡು ಹೋಗಿದ್ದಳು, "ಬಾ ಮೂರೊತ್ತು ಮುಖ ಗುಬ್ರಾಕೊಂಡು ಕೂರ್ಬೇಡ" ಅಂತ ಬಯ್ದೇ ಕರೆದುಕೊಂಡು ಹೋಗಿದ್ದಳು.
"ರಾಮ್ ಪ್ರಸಾದ್ ಜೊತೆ ಮಾತನಾಡಿದ್ಯ"
ʻಹು. ಎದುರಿಗೆ ಸಿಕ್ಕಾಗ, ಕಾಫಿಗೆ ಸಿಕ್ಕಾಗ ಕುಶಲೋಪಚಾರ ಮಾತಾಡ್ತೀವಲ್ಲ'
"ಜಗಳದ ವಿಷಯ ಮಾತನಾಡಿದ್ಯ ಅಂದಿದ್ದು"
ʻಮ್. ಅವರೇ ಒಂದು ದಿನ ಊಟದ ಸಮಯದಲ್ಲಿ ವಿಷಯ ಎತ್ತಿ ಸಾರಿ ಕೇಳಲು ಬಂದರು. ನೀವ್ಯಾಕ್ ಸಾರಿ ಕೇಳ್ತೀರಾ? ರಾಜೀವನಿಗೆ ನೀವೊಂದು ನೆಪವಾಗಿ ಸಿಕ್ಕಿದ್ದಷ್ಟೇ. ನೀವಿಲ್ಲದಿದ್ದರೂ ಜಗಳಕ್ಕೆ ಮತ್ತೊಂದು ನೆಪವನ್ನವರು ಹುಡುಕಿಕೊಳ್ಳುತ್ತಿದ್ದರು ಎಂದು ನಕ್ಕೆ. ಮತ್ತೇನೋ ಹೇಳಲು ಬಂದರು. ನೋಡಿ ರಾಮ್. ದಯವಿಟ್ಟು ಆ ವಿಷಯ ಮಾತನಾಡಬೇಡಿ. ಪದೇ ಪದೇ ಅದನ್ನೇ ಎಳೆದೆಳೆದು ಮಾತನಾಡಿದರೆ ಪ್ರಯೋಜನವಿಲ್ಲ. ಸರಿ ಹೋದಾಗ ನಾನೇ ತಿಳಿಸ್ತೀನಿ ಎಂದೆ. ಸುಮ್ಮನಾದರು'
"ಮ್"
ಬಿಡೇ ಆ ವಿಷಯ. ನನಗೂ ಸಾಕಾಗಿದೆ'
"ಏನಾದ್ರೂ ಪರಿಹಾರ ಹುಡುಕಬೇಕಲ್ಲ"
ʻನನ್ನ ಕಣ್ಣ ಮುಂದಂತೂ ಯಾವ ರೀತಿಯ ಪರಿಹಾರವೂ ಕಾಣಿಸುತ್ತಿಲ್ಲಪ್ಪ. ಹೆಂಗ್ ಸರಿ ಮಾಡೋದು ಇದನ್ನೆಲ್ಲಾ ಅನ್ನೋದೂ ತಿಳಿಯುತ್ತಿಲ್ಲ. ಬುದ್ಧಿಗೆ ಮಂಕು ಕವಿದಂತಾಗಿರುವುದು ಹೌದು. ಕವಿದ ಮಂಕು ಸರಿದ ಮೇಲೆ ಯಾವುದಾದರೂ ಪರಿಹಾರ ಗೋಚರಿಸ್ತದೆ. ಆಗ ನೋಡ್ಕೊಳ್ಳುವ' ಎನ್ನುವ ಸಮಯಕ್ಕೆ ಸರಿಯಾಗಿ ರಾಜೀವ ಅವನ ಗೆಳೆಯನೊಟ್ಟಿಗೆ ಹೋಟೆಲ್ಲು ಪ್ರವೇಶಿಸಿದ. ನಾ ಬಾಗಿಲಿಗೆ ಬೆನ್ನು ಹಾಕಿ ಕುಳಿತಿದ್ದೆ. ರಾಜೀವನನ್ನು ನೋಡಿದ ಸುಮಾ "ಶಿಟ್" ಎಂದಳು. ʻಏನಾಯ್ತೇʼ ಎನ್ನುತ್ತ ಬಾಗಿಲ ಕಡೆಗೆ ನೋಡಿದವಳಿಗೆ ರಾಜೀವ್ ಕಂಡ. ಜೊತೆಗೆ ಅವನ ಸ್ನೇಹಿತ, ಅವನ ಹೆಸರೇನು? ಅಭಿಯೋ ಅವಿಯೋ ಇರಬೇಕು. ಮೂರು ವಾರದ ನಂತರ ನಾನೂ ರಾಜೀವು ಒಬ್ಬರನ್ನೊಬ್ಬರು ಕಂಡಿದ್ದು. ನನ್ನ ನೋಡಿದವರು ಮುಗುಳ್ನಕ್ಕರು. ಅಬ್ಬ! ಸರಿ ಹೋದಂತಿದ್ದಾರೆ! ಎಷ್ಟೇ ಅಂದರೂ ನನ್ನನ್ನು ಹತ್ತನೇ ತರಗತಿಯಿಂದ ಇಷ್ಟಪಟ್ಟವರಲ್ಲವೇ! ಪ್ರತಿಯಾಗಿ ನಗುವುದೋ ಬೇಡವೋ ಅಂದುಕೊಳ್ಳುತ್ತಾ ಮೆಲ್ಲನೆ ನಕ್ಕೆ.
ನೇರ ನಾವು ಕುಳಿತಿದ್ದ ಕಡೆಯೇ ಬಂದವರು ಸುಮಾಳನ್ನುದ್ದೇಶಿಸಿ "ಏನ್ರೀ ಹೇಗಿದ್ದೀರ?" ಎಂದರು.
"ಹು ಆರಾಮು" ಎಂದು ನಕ್ಕಳು ಸುಮಾ. ನಗುವುದೋ ಬೇಡವೋ ಗೊತ್ತಾಗದೆ ನಕ್ಕಳು.
"ಏನ್ ನಿಮ್ ಫ್ರೆಂಡ್ ಇವತ್ತು ನಿಮ್ ಜೊತೆ ಬಂದ್ ಬಿಟ್ಟಿದ್ದಾಳೆ. ಅವಳ ಮಿಂಡನನ್ನು ಬಿಟ್ಟು" ಎಂದು ನಗುತ್ತಲೇ ಹೇಳಿದ ರಾಜೀವನ ಮಾತುಗಳು ಸುಮಾಳ ಮುಖದಲ್ಲಿದ್ದ ನಗುವನ್ನೆಲ್ಲ ಹಿಂಗಿ ಹಾಕಿತು.
ನಾವಿಬ್ಬರೂ ಏನಾದರೂ ಪ್ರತಿಕ್ರಿಯಿಸುವುದಕ್ಕೂ ಮುಂಚಿತವಾಗಿಯೇ ಮತ್ತೆ ಬಾಯಲ್ಲಿನ ಹೊಲಸನ್ನು ಸಾರ್ವಜನಿಕವಾಗಿ ಬಿಸುಟುತ್ತಾ "ಹುಷಾರು ಕಣ್ರೀ. ರಾಮ್ ಕೂಡ ಇವಳಿಗೆ ಒಂದಷ್ಟು ದಿನಕ್ಕೆ ಮಾತ್ರಕ್ಕೆ. ಜಾಸ್ತಿ ಜೊತೇಲ್ ಸೇರ್ಬೇಡಿ, ನಿಮ್ ಗಂಡನನ್ನಂತೂ ಪರಿಚಯ ಕೂಡ ಮಾಡಿಸ್ಬೇಡಿ. ಸೆಕ್ಸ್ ಪಿಶಾಚಿ ಇವಳು. ನಿಮ್ ಗಂಡನನ್ನೂ ಬುಟ್ಟಿಗೆ ಹಾಕಿಕೊಂಡುಬಿಡ್ತಾಳೆ. ಅಂತ ದೊಡ್ ಚಿನಾಲಿ ಮುಂಡೇ ಇವ್ಳು. ಯಾರೂ ಸಿಗದೇ ಹೋದ್ರೆ ಕೊನೆಗ್ ಅಪ್ಪ ತಮ್ಮನಿಗೆ ಕೂಡ ಸೆರಗು ಹಾಸಿಬಿಡ್ತಾಳೆ. ಹುಷಾರು ನೀವು" ಎಂದರು. ನನ್ನ ಕಣ್ಣುಗಳಿಗೆ ನೀರು ಸುರಿಸುವುದೂ ಮರೆತುಹೋಗಿತ್ತು. ರಾಜೀವನ ಮಾತುಗಳುಟ್ಟಿಸಿದ ಆಘಾತದಿಂದ ಪಟ್ಟಂತ ಚೇತರಿಸಿಕೊಂಡಿದ್ದು ಸುಮಾ.
"ಓ! ನಿಮಗೆ ವಿಷ್ಯ ಎಲ್ಲಾ ಪೂರ್ತಿ ಗೊತ್ತಿಲ್ಲ ಅನ್ಸುತ್ತೆ. ನಿಮ್ ಹೆಂಡತಿಗೆ ಸಂಬಂಧ ಇದ್ದಿದ್ದು ರಾಮ್ ಜೊತೆಗಲ್ಲ. ನನ್ನ ಜೊತೆಗೆ. ನಾವಿಬ್ರೂ ಲೆಸ್ಬಿಯನ್ಸು" ಎಂದು ನಗುತ್ತಾ ಹೇಳಿದಳು. ಗಾಬರಿಯಾಗಿ ಮುಜುಗರಗೊಳ್ಳುವ ಸರದಿ ಈಗ ರಾಜೀವನದ್ದು. ಬುಸುಗುಡುತ್ತಾ ಹೊರಟುಬಿಟ್ಟ, ಎರಡು ಟೇಬಲ್ಲಿನಾಚೆ ಕುಳಿತಿದ್ದ ಗೆಳೆಯನನ್ನು ಅಲ್ಲೇ ಕೂರಲು ಬಿಟ್ಟು ಹೊರಟುಬಿಟ್ಟ.
ರಾಜೀವ ಹೋಟೆಲ್ಲಿನ ಬಾಗಿಲು ದಾಟುತ್ತಿದ್ದಂತೆ ನನ್ನ ಕಡೆ ತಿರುಗಿದ ಸುಮಾ "ಇಷ್ಟೆಲ್ಲ ಅಸಹ್ಯದ ಮನುಷ್ಯ ಅಂತ ಗೊತ್ತಿರಲಿಲ್ಲ ಕಣೇ. ಇನ್ನೂ ಯಾಕ್ ಇವನ ಜೊತೆ ಇದ್ದಿ. ಡೈವೋರ್ಸ್ ತಗೊ. ಯು ಡಿಸರ್ವ್ ಎ ಬೆಟರ್ ಲೈಫ್" ಎಂದೇಳಿ ನನ್ನ ಮನಸ್ಸಿನ ಅಷ್ಟೂ ಗೊಂದಲಗಳಿಗೆ, ಮುಂದೇನು ಎನ್ನುವ ಅಸ್ಪಷ್ಟತೆಗೆ ಉತ್ತರ ಕೊಟ್ಟುಬಿಟ್ಟಳು.
ಉತ್ತರ ದಕ್ಕಿದ ಮೇಲೆ ತಡ ಮಾಡುವುದಕ್ಕೇನೂ ಉಳಿದಿರಲಿಲ್ಲ. ಮನೆಯಲ್ಲಿ ನಿರ್ಧಾರ ತಿಳಿಸಿದೆ. ಅಮ್ಮ ಮೂಗು ಮುರಿದರು. ಶಶಿ ನಿನಗೆ ಸರಿ ಅನ್ನಿಸಿದ್ದು ಮಾಡಕ್ಕ ಎಂದ. ಅಪ್ಪ "ನಾನೀ ನಿರ್ಧಾರ ಅವತ್ತೇ ಮಾಡಿದ್ದೆ. ಹೇಳುವುದು ಸರಿಯಾಗ್ತದೋ ಇಲ್ಲವೋ ಅಂತ ಸುಮ್ಮನಿದ್ದೆ" ಎಂದು ಸಂತಸ ವ್ಯಕ್ತಪಡಿಸಿದರು. ಸೋನಿಯಾ ಅಭಿಪ್ರಾಯ ನನಗೂ ಬೇಕಿರಲಿಲ್ಲ. ಅಪ್ಪನ ಸ್ನೇಹಿತರೇ ವಕೀಲರಿದ್ದರು. ಹೋಗಿ ಮಾತನಾಡಿದೆವು.
"ಮ್ಯೂಚುಯಲ್ ಆದ್ರೆ ಬೇಗ ಸಿಗುತ್ತೆ ಇಲ್ಲಾಂದ್ರೆ ಸ್ವಲ್ಪ ತಡವಾಗ್ತದೆ. ಮುಖ್ಯವಾಗಿ ಮಗಳು ಯಾರ ಜೊತೆ ಇರಬೇಕು ಅನ್ನೋದೇ ಹೆಚ್ಚಿನಂಶ ಎಳೆದಾಡುವ ಅಂಶ. ಅವರಿಗೆ ನಿಯಮಿತವಾಗಿ ಕೆಲಸವಿಲ್ಲದೇ ಇರುವುದು, ನೀ ಅವರಿಗಿಂತ ಹೆಚ್ಚು ದುಡೀತಿರೋದೆಲ್ಲ ನಿನಗೇ ಫೇವರಬಲ್ ಮಾಡ್ತದೆ. ಅದನ್ನು ಬಿಟ್ಟು ನೋಡಿದರೂ ಕಾನೂನು ಚಿಕ್ಕ ಮಗುವನ್ನು ಅಮ್ಮನ ಮಡಿಲಿಗೇ ಹಾಕುವುದು ಸಾಮಾನ್ಯ. ತಿಂಗಳಿಗೊಂದು ಸಲವೋ ಮತ್ತೊಂದೋ ಮಗುವನ್ನು ಅವರಪ್ಪನ ಬಳಿಗೆ ಕರೆದುಕೊಂಡು ಬಿಡಲು ಹೇಳುತ್ತೆ ಕೋರ್ಟು"
ʻಅದನ್ನೂ ತಪ್ಪಿಸೋದಿಕ್ಕಾಗಲ್ವ?'
"ಇಲ್ಲ. ಕಷ್ಟ. ನೀವ್ ನೀವ್ ಏನೇ ಜಗಳವಾಡಿಕೊಂಡು ಮನಸ್ತಾಪ ಬೆಳೆಸಿಕೊಂಡು ಡೈವೋರ್ಸ್ ಪಡೆದುಕೊಂಡರೂ ಅವರೇ ಬಯಾಲಾಜಿಕಲ್ ಫಾದರ್ ಅಲ್ವ?"
ʻಮ್'
"ಆದಷ್ಟೂ ಅವರನ್ನು ಒಪ್ಪಿಸಿ ಮ್ಯೂಚುಯಲ್ ತೆಗೆದುಕೊಳ್ಳೋಕೆ. ಆಗ ಇಲ್ಲಸಲ್ಲದ ಮಾತು ವಾದ ಎಲ್ಲಾ ಕೇಳಬೇಕಾಗಿರೋದಿಲ್ಲ" ಎಂದೇಳಿ ಕಳಿಸಿದರು.
ಮನೆಗೆ ಬರುತ್ತಿದ್ದಂತೆ ರಾಜೀವನಿಗೆ ಫೋನಾಯಿಸಿದೆ.
"ಏನೇ ಚಿನಾಲಿ. ಯಾರೂ ಸಿಕ್ಕಲಿಲ್ವ ಡಾರ್ಲಿಂಗ್? ಬರ್ಬೇಕಾ ಡಾರ್ಲಿಂಗ್ ಸೆಕ್ಸ್ ಮಾಡೋಕೆ" ಎಂದ. ಅಸಹ್ಯ. ಕುಡಿದಿದ್ದಾನೆ. ಕುಡಿದಾಗಷ್ಟೇ ಅಲ್ವ ಡಾರ್ಲಿಂಗ್ ಅಂತ ಹೆಚ್ಚು ಬಳಸೋದು.
ಒಂದು ಕ್ಷಣ ತಾಳ್ಮೆ ತೆಗೆದುಕೊಂಡು ʻನೋಡಿ ರಾಜೀವ್. ತೀರ ಅಸಹ್ಯದ ಸ್ಥಿತಿಯಲ್ಲಿದ್ದೀವಿ ನಾವು. ಇರೋ ಚೂರು ಪಾರು ಸವಿನೆನಪುಗಳನ್ನೂ ಸಾಯಿಸಿಬಿಡಲು ನನಗಿಷ್ಟವಿಲ್ಲ. ಲಾಯರ್ ಹತ್ರ ಮಾತಾಡಿದ್ದೀನಿ. ಮ್ಯೂಚುಯಲ್ ಡೈವೋರ್ಸ್ ತಗೊಳ್ಳೋಣ' ಎಂದೆ.
ಆಘಾತವಾಯಿತೇನೋ ಅವನಿಗೆ. "ಏನು ಡೈವೋರ್ಸಾ? ಡೈವೋರ್ಸ್ ಯಾಕೆ?" ದನಿ ತೊದಲುತ್ತಿತ್ತು.
ʻಜೊತೆಯಲ್ಲಿರೋಕಾಗಲ್ಲ ಅಂದ ಮೇಲೆ ತೀರ ಅಸಹ್ಯವಾಗಿ ವರ್ತಿಸಿಕೊಂಡು ಅಗೌರವದಿಂದ ಇರೋ ಬದಲು ಡೈವೋರ್ಸ್ ತಗಂಡು ಗೌರವ ಉಳಿಸಿಕೊಳ್ಳೋಣ. ಬದುಕು ನಮ್ಮಿಬ್ಬರ ನಾನ್ ಸೆನ್ಸುಗಳಿಗಿಂತ ದೊಡ್ಡದು'
"ಮಗಳು?"
ʻಮಗಳು ನನ್ನ ಜೊತೆಯಲ್ಲೇ ಇರುತ್ತಾಳೆ'
"ಹೋಗ್ ಹೋಗು. ಮಗಳನ್ನ ನನ್ನ ಜೊತೆ ಕಳಿಸಿದರೆ ಮಾತ್ರ ಮ್ಯೂಚುಯಲ್ಗೆ ಒಪ್ಪೋದು ನಾನು"
ʻಆ ಪಾಪಿ ಪಿಂಡ ನಿಮಗ್ಯಾಕೆ ಬಿಡಿ'
"ಕರ್ಕೊಂಡ್ ಹೋಗ್ ಬಾವಿಗ್ ನೂಕ್ತೀನಿ. ಅದೆಲ್ಲ ನಿನಗ್ಯಾಕೆ? ಮಗಳನ್ನು ನನಗೆ ಒಪ್ಪಿಸೋದಿಕ್ಕೆ ನಿನ್ನ ಅಭ್ಯಂತರವಿಲ್ಲದಿದ್ದರೆ ಮಾತ್ರ ಮ್ಯೂಚುಯಲ್ಲು"
ʻಸರಿ ಆಗಿದ್ರೆ. ನೋಟೀಸ್ ಕಳಿಸಿಕೊಡ್ತೀನಿ ನಮ್ ಲಾಯರ್ಗೆ ಹೇಳಿ. ಸಿಗುವ ಕೋರ್ಟಿನಲ್ಲಿ ಎಂದೇಳಿ ಫೋನಿಟ್ಟುಬಿಟ್ಟೆ' ತಿರುಗಿ ಫೋನ್ ಮಾಡಿದ. ಸ್ವೀಕರಿಸಲಿಲ್ಲ.
ಮಾರನೇ ದಿನ ಕ್ಯಾಂಟೀನಿಗೆ ಊಟಕ್ಕೆ ಹೋದಾಗ ಸುಮಾಳಿಗೆ ವಿಷಯ ತಿಳಿಸಿ ಥ್ಯಾಂಕ್ಸ್ ಹೇಳಿದೆ. ಖುಷಿಯಿಂದ ಅಪ್ಪಿಕೊಂಡು ಮುದ್ದು ಮಾಡಿದಳು. ʻಲೇ ಯಾಕೋ ನಿಜವಾಗ್ಲೂ ಲೆಸ್ಬೋಗಳಾಗಿಬಿಡ್ತೀವೇನೋ ಕಣೇ' ಎಂದು ನಗಾಡಿದೆ.
"ಈ ಗಂಡುಸ್ರು ಜೊತೆ ಏಗೋದಕ್ಕಿಂತ ಅದೇ ಬೆಟರ್ರು ಬಿಡು" ಎಂದು ಕಣ್ಣೊಡೆದಳು. ಅವತ್ ಹೋಟೆಲ್ಲಿನಲ್ಲಿ ರಾಜೀವ ಸುಮಾಳ ಮಾತು ಕೇಳಿ ಗಾಬರಿಯಾದದ್ದನ್ನು ನೆನಪಿಸಿಕೊಂಡು ನಗಾಡಿದೆವು.
"ಏನ್ರೀ ಇಬ್ರೂ ಇಷ್ಟೊಂದು ನಗ್ತಿದ್ದೀರ! ಅದೂ ಧರಣಿ ಮೇಡಮ್ಮೋರಂತೂ ಈ ತರ ನಕ್ಕು ಎಷ್ಟೋ ವಾರಗಳೇ ಕಳೆದು ಹೋಗಿತ್ತಪ್ಪ" ಎನ್ನುತ್ತಾ ಬಂದು ಜೊತೆಯಾದರು ರಾಮ್ ಪ್ರಸಾದ್.
ʻಹಿಂಗೇ ಏನೋ ನಮ್ ಹುಡ್ಗೀರ್ ಹುಡ್ಗೀರ್ ವಿಷಯ' ಎಂದೆ.
ಡೈವೋರ್ಸ್ ವಿಷಯ ಹೇಳೋದೋ ಬೇಡವೋ ರಾಮ್ಗೆ ಅಂತ ಗೊಂದಲ. ಇವತ್ತು ಹೇಳದಿದ್ದರೂ ಮುಂದೊಮ್ಮೆ ಗೊತ್ತಾಗಲೇಬೇಕಲ್ಲ. ಆಗಲೇ ಗೊತ್ತಾಗಲಿ ಬಿಡು ಈಗ್ಯಾಕೆ ಅಂತೆಲ್ಲ ಯೋಚಿಸುತ್ತಿರುವಾಗ ಸುಮಾ "ಯಾವ್ ಹುಡ್ಗೀರ್ ಹುಡ್ಗೀರ್ ವಿಷ್ಯಾನೂ ಅಲ್ಲ ರಾಮ್. ಧರಣಿ ವಿಷಯ. ಡೈವೋರ್ಸಿಗೆ ಹಾಕ್ತಿದ್ದಾಳೆ. ಆ ಖುಷಿಗೆ ನಗಾಡುತ್ತಿದ್ದೊ" ಎಂದುಬಿಟ್ಟಳು.
"ಓ! ಗೊತ್ತಿರಲಿಲ್ಲ. ಇಷ್ಟು ಬೇಗ...." ಏನೇಳಬೇಕೆಂದು ಗೊತ್ತಾಗಲಿಲ್ಲ ಅವರಿಗೆ.
"ಬೇಗಾನಾ! ಇಷ್ಟು ದಿನ ಅವನೊಂದಿಗೆ ಇವಳಿದ್ದಿದ್ದೇ ಹೆಚ್ಚು. ನಾನಾಗಿದ್ದಿದ್ದರೆ ಯಾವತ್ತೋ ಬಿಟ್ಟು ಹೊರಡುತ್ತಿದ್ದೆ" ಎಂದಳು ಸುಮಾ.
"ಸಾರಿ ಧರಣಿ. ನನ್ನಿಂದ ಇಷ್ಟೆಲ್ಲ ಅವಾಂತರವಾಯಿತು. ಬಾಯ್" ಎಂದವರು ನೀವ್ಯಾಕ್ ಸಾರಿ ಕೇಳ್ತೀರಾ ಅಂತ ಹೇಳಲೂ ನನಗೆ ಅವಕಾಶ ಕೊಡದೆ ಹೊರಟುಬಿಟ್ಟರು.
ನಾನೂ ಸುಮಾ ಒಬ್ಬರನ್ನೊಬ್ಬರು ನೋಡಿ ನಕ್ಕೆವು.
ಸುಮಾ ರಾಮ್ ಕಡೆಗೇ ನೋಡುತ್ತಾ "ಅಲ್ಲ. ನೀನ್ಯಾಕೆ ಇವನನ್ನೇ ಮದುವೆಯಾಗಬಾರದು" ಎಂದಳು. ನಕ್ಕು ಪ್ರತಿಕ್ರಿಯಿಸುವಷ್ಟರಲ್ಲಿ ಮೊಬೈಲು ಸದ್ದು ಮಾಡಿತು. ಸಾಗರನ ಮೆಸೇಜು!
"ಅಲ್ಲಾ ನಾನೇನೋ ಗೂಬ್ ನನ್ಮಗ.... ಸರಿ ಇಲ್ಲ. ನೀ ಆದ್ರೂ ಸರಿ ಇದ್ದೀಯಲ್ಲ.... ಬದುಕಿದ್ದೀನೋ ಸತ್ತಿದ್ದೀನೋ ಅಂತಾದ್ರೂ ವಿಚಾರಿಸ್ಬೇಕು ಅಂತ ಕೂಡ ಅನ್ನಿಸಲಿಲ್ಲವಲ್ಲ ನಿನಗೆ..... ಯಾವ್ದೋ ಸಿಟ್ಟಲ್ಲಿ ಬೇಸರದಲ್ಲಿ ನಿನ್ ನಂಬರ್ ಕೂಡ ಡಿಲೀಟ್ ಮಾಡ್ಬಿಟ್ಟಿದ್ದೀನಿ ಕಣವ್ವ.... ಮುಚ್ಕಂಡ್ ಫೋನ್ ಮಾಡು ಬಿಡುವಾದಾಗ".
ಮುಖಪುಟ ಚಿತ್ರ: ಚೇತನ ತೀರ್ಥಹಳ್ಳಿ.
ಮುಂದುವರೆಯುವುದು
No comments:
Post a Comment