Sep 12, 2020

ಒಂದು ಬೊಗಸೆ ಪ್ರೀತಿ - 79

ಒಂದರ್ಧ ಘಂಟೆ ಕಾಲ ಮಾತ್ರ ಯೋಚನೆಗಳು ಬಿಡುವು ಕೊಟ್ಟಿತ್ತು. 

ನನ್ನ ರಾಮ್‌ಪ್ರಸಾದ್‌ ಮಧ್ಯೆ ಯಾವುದೇ ಸಂಬಂಧವಿಲ್ಲವೆಂದು ರಾಜೀವನಲ್ಲಿ ನಂಬುಗೆ ಮೂಡಿಸುವುದೇಗೆ? ಯಾರೋ ಯಾವ ಕಾರಣಕ್ಕೋ ನಮ್ಮಿಬ್ಬರ ಮಧ್ಯೆ ಸಂಬಂಧವಿದೆ ಎಂದು ಸುಳ್ಳುಸುಳ್ಳೇ ಆರೋಪ ಮಾಡಿಬಿಟ್ಟರು. ಅದು ನಿಜವಲ್ಲ ಎಂದು ಸಾಬೀತುಪಡಿಸುವ ಅನಿವಾರ್ಯ ಕರ್ಮ ನನ್ನ ಹೆಗಲೇರಿಬಿಟ್ಟಿದೆ. ರಾಮ್‌ಪ್ರಸಾದ್‌ ಜೊತೆ ಹಿಂಗಿಂಗೆ ಅಂತೇಳಿ ಅವರೇ ಸಮಜಾಯಿಷಿ ಕೊಡುವಂತೆ ಹೇಳಲಾ? ಪಾಪ! ಅವರಿಗಾದರೂ ಈ ರೀತಿಯೆಲ್ಲ ನಮ್ಮ ಬಗ್ಗೆ ಆಸ್ಪತ್ರೆಯಲ್ಲಿ ಮಾತನಾಡಿಕೊಳ್ಳುತ್ತಾರೆ ಎನ್ನುವುದು ಗೊತ್ತೋ ಇಲ್ಲವೋ.... ಒಂದು ವೇಳೆ ಗೊತ್ತಿದ್ದರೂ ಸುಮ್ಮನಿದ್ದುಬಿಟ್ಟಿದ್ದರೆ? ಆ ಮಾತುಗಳೇ ಅವರಿಗೂ ಪ್ರಿಯವಾಗಿಬಿಟ್ಟಿದ್ದರೆ? ಅವರೇ ಈ ಗಾಳಿ ಸುದ್ದಿಗಳನ್ನು ಹಬ್ಬಿಸಿದ್ದರೆ? ಇಲ್ಲಿಲ್ಲ. ಅವರ ವರ್ತನೆ ಒಂದು ದಿನಕ್ಕೂ ನನಗೆ ಅನುಮಾನ ಮೂಡಿಸಿಲ್ಲ. ಆದರೂ ಅವರ ಮೂಲಕ ರಾಜೀವನಿಗೆ ಸಮಜಾಯಿಷಿ ಕೊಡುವುದು ಸರಿಯಾಗಲಾರದು. ನಮ್ಮಿಬ್ಬರ ನಡುವಿನ ವಿಷಯ, ನಮ್ಮ ಮನೆಯಲ್ಲಿ ನಡೆದ ವಿಷಯಗಳನ್ನೆಲ್ಲ ಅವನತ್ರ ತಗೊಂಡು ಹೋಗಿ ಹೇಳ್ಕೋತೀಯ ಅಂತ ಮತ್ತೊಂದು ಸುತ್ತು ಜಗಳ ಶುರುವಾಗಿಬಿಡಬಹುದು. ಅಲ್ಲ, ನನಗೆ ನಿಜಕ್ಕೂ ಒಂದು ಅನೈತಿಕ.... ಅನೈತಿಕವಲ್ಲ.... ಮದುವೆಯಾಚೆಗಿನ ಸಂಬಂಧ ಅಂಥ ಇದ್ದದ್ದು ಸಾಗರನೊಟ್ಟಿಗೆ ಮಾತ್ರ. ಸಾಗರ ನಮ್ಮ ಮನೆಗೆ ಬಂದು ರಾಜೀವನನ್ನು ಭೇಟಿಯಾದಾಗ, ನಾವವನ ಮದುವೆಗೆಂದು ಹೋಗಿದ್ದಾಗ ನಮ್ಮಿಬ್ಬರ ಮುಖಚರ್ಯೆಯನ್ನು ಗಮನಿಸಿಬಿಟ್ಟಿದ್ದರೇ ಸಾಕಿತ್ತು ಇಬ್ಬರ ನಡುವೆ ಸಂಬಂಧವಿದೆ ಎನ್ನುವುದು ತಿಳಿದು ಹೋಗುತ್ತಿತ್ತು. ನನ್ನ ಸಾಗರನ ಸಂಬಂಧವನ್ನು ಸ್ನೇಹವೆಂದೇ ಇವತ್ತಿಗೂ ನಂಬಿರುವ - ಆ ಸ್ನೇಹ ಸತ್ತು ಎಷ್ಟು ತಿಂಗಳುಗಳಾಯಿತು? - ರಾಜೀವ ನನ್ನ ರಾಮ್‌ನ ಸ್ನೇಹವನ್ನು, ಅದೂ ಅವರಿಂದಾಗಿಯೇ ಬಲವಂತವಾಗೆಂಬಂತೆ ಹುಟ್ಟಿದ ಸ್ನೇಹವನ್ನು ಅನುಮಾನಿಸುತ್ತಿದ್ದಾರಲ್ಲ? ಸಾಗರನ ಜೊತೆಗಿದ್ದಾಗಲೇ ಈ ಅನುಮಾನ ಇವರಲ್ಲಿ ಬಂದುಬಿಟ್ಟಿದ್ದರೆ ಅಚ್ಚುಕಟ್ಟಾಗಿ ಡೈವೋರ್ಸ್‌ ತೆಗೆದುಕೊಂಡು ಸಾಗರನನ್ನು ಮದುವೆಯಾಗಿಬಿಡಬಹುದಿತ್ತು. ಸಾಗರ ಕೂಡ ಒಂದಷ್ಟು ಪೊಸೆಸಿವ್ವೇ ಹೌದು. ತೀರ ಪುರುಷೋತ್ತಮನಷ್ಟಲ್ಲ, ಆದರೂ ಪೊಸೆಸಿವ್ವೇ. ಜೊತೆಗೆ ನನ್ನ ಮೇಲೆ ಬೆಟ್ಟದಷ್ಟು ಅನುಮಾನ ಬೇರೆ ಇದೆ ಅವನಿಗೆ. ಮದುವೆಯಾಗಿ ಬೇರೆ ಕಡೆ ಸಂಬಂಧ ಬೆಳೆಸುವವರ ಮೇಲೆ ಇಂತಹ ಅನುಮಾನ ಸಹಜವೋ ಏನೋ. ಯೋಚನೆಗಳಿಗೆ ತಡೆಹಾಕಿದ್ದು ಶಶಿಯ ಆಗಮನ. ಮನೆಯಲ್ಲಿನ ಮೌನದಲ್ಲಿದ್ದ ಅಸಹಜತೆಯ ವಾಸನೆ ಅವನಿಗೂ ಬಡಿಯಲೇಬೇಕಲ್ಲ. 

"ಏನಾಯ್ತು? ಎಲ್ಲಿ ಎಲ್ಲ" 

ʻಎಲ್ರೂ ಅವರವರ ರೂಮುಗಳಲ್ಲಿ ಸೇರಿಕೊಂಡಿದ್ದಾರೆʼ 

"ನೀನ್ಯಾಕ್‌ ಹಿಂಗ್‌ ಇದ್ದಿ. ಅತ್ತಂಗೂ ಕಾಣ್ತದೆ" 

ʻಮ್.‌ ಕಂಡಕಂಡೋರ ಜೊತೆ ಮಲಗೋಳು ಹಿಂಗೇ ಇರ್ತಾಳೆ ಬಿಡುʼ 

"ಛೀ! ಅದೇನ್‌ ಹಂಗ್‌ ಮಾತಾಡ್ತಿ. ಮಗಳ ಮುಂದೆ" 

ʻಮಗಳ ಕಣ್ಣಲ್ಲಿ ಚಿಕ್ಕವಳಾಗಬಾರದು ಅಂತಿತ್ತು. ಅದೂ ನಡೆದು ಹೋಯಿತು ಇವತ್ತು. ಪುಣ್ಯಕ್ಕೆ ಮಗಳಿಗೆ ಇನ್ನೂ ತುಂಬಾ ತಿಳುವಳಿಕೆ ಬಂದಿರುವುದಿಲ್ಲ ಅಲ್ವಾ?ʼ ಪ್ರಶ್ನೆಯನ್ನು ನನಗೇ ಕೇಳಿಕೊಂಡೆ. ಉತ್ತರ ದೊರಕದೆ ಅಸಮಾಧಾನವಾಯಿತು. 

"ಅವಳಿಗಷ್ಟು ಹೇಳಿದ್ದೆ ಭಾವನಿಗೆ ಹೇಳಬೇಡ. ʻನಾ ವಿಚಾರಿಸಿದೆ ನನ್ನ ಗೆಳೆಯರಲ್ಲಿ. ಅಂತದ್ದೇನೂ ಇಲ್ವಂತೆ. ಸುಮ್ನೆ ಗಾಸಿಪ್‌ ಮಾತಷ್ಟೇ ಅಂತಂದ್ರುʼ ಅಂತೇಳಿದ್ದೆ ಅವಳಿಗೆ. ಅಂದ್ರೂ ಹೇಳಿಬಿಟ್ಟಳಾ...." 

ʻಕೊನೆ ಪಕ್ಷ ನೀನಾದ್ರೂ ನಂಬ್ತೀಯ ನನ್ನ ರಾಮ್‌ ಮಧ್ಯೆ ಸ್ನೇಹ ಬಿಟ್ಟು ಏನೂ ಇಲ್ಲ ಅಂತʼ 

"ಹು ನಂಬ್ತೀನಿ. ಸಾರಿ ಅವತ್ತು ಕೆಟ್ಟದಾಗಿ ಮಾತನಾಡಿದ್ದಕ್ಕೆ" 

ʻನೀ ಹೇಳಿದ್ರಲ್ಲಿ ತಪ್ಪೇನಿಲ್ಲವಲ್ಲ. ಅಷ್ಟು ವರ್ಷ ಪ್ರೀತಿಸಿದವನನ್ನೇ ಬಿಟ್ಟು ಬಿಟ್ಟವಳಿಗೆ ರಾಜೀವ್‌ ಯಾವ ಲೆಕ್ಕ ಬಿಡುʼ 

"ಇಲ್ಲ. ನಾ ಮಾತಾಡಿದ್ದು ತಪ್ಪೇ ಅಲ್ವ. ನಿಮ್ಮಿಬ್ಬರ ನಡುವಿನ ಮದುವೆ ನಿಲ್ಲುವುದಕ್ಕೆ ನೀ ಕಾರಣ ಅಲ್ಲ ಅನ್ನೋದು ಗೊತ್ತಿದ್ದರೂ ನಾ ಆ ರೀತಿ ಮಾತನಾಡಬಾರದಿತ್ತು. ಸೋನಿಯಾ ಅದೆಷ್ಟು ಕೇಳಿಸಿಕೊಂಡಳು, ನನ್ನಲ್ಲಿ ಅದೇನು ಹೇಳಿದಳೋ.... ಅವಳು ಹಿಂಗಿಂಗೆ ಅಂತ ಹೇಳುತ್ತಿದ್ದಂತೆ ನನಗೆ ಎಲ್ಲಿಲ್ಲದ ಕೋಪ ಬಂತು. ಅದು ಸಹಜವೋ ಅಸಹಜವೋ ನಾ ಕಾಣೆ. ಆಮೇಲ್‌ ಕುಂತು ಯೋಚಿಸಿದಾಗ ತಪ್ಪಾಗಿ ಮಾತನಾಡಿದೆ ಎನ್ನೋದು ಗೊತ್ತಾಯಿತು. ಸಾರಿ" 

ʻಮ್.‌ ಹೋಗ್ಲಿ ಬಿಡು. ಅದ್ಯಾಕಷ್ಟು ಸಲ ಸಾರಿ ಕೇಳ್ತಿʼ 

"ಭಾವ ಎಲ್ಲಿ?" 

ʻಜಗಳವಾಡಿದರು. ಸೋನಿಯಾ ಅಮ್ಮ ಎಲ್ಲಾ ಕೆಟ್ಟದಾಗಿ ಮಾತನಾಡಿದರು. ಆಶ್ಚರ್ಯ ಅಂದ್ರೆ ಅಪ್ಪ ಬಂದು ನನ್ನ ಬೆಂಬಲಕ್ಕೆ ನಿಂತು ಅವರೆಲ್ಲರಿಗೂ ಬಯ್ದರು. ಬಯ್ಯಿಸಿಕೊಂಡವರು ಬಯ್ದವರೆಲ್ಲರೂ ನನ್ನನ್ನೊಬ್ಬಳನ್ನೇ ಬಿಟ್ಟು ಹೊರನಡೆದರು. ನಾ ಇದ್ದೀನಿ ಇಲ್ಲಿ ದಂಡವಾಗಿ ಮಗಳ ಜೊತೆʼ 

"ನಾ ಸೋನಿಯಾ ಜೊತೆ ಮಾತನಾಡ್ತೀನಿ ಬಿಡು" 

ʻಏನುಪಯೋಗ? ಆಗೋ ಡ್ಯಾಮೇಜ್‌ ಎಲ್ಲಾ ಆಗಿ ಹೋಯ್ತಲ್ಲ. ನೀ ಮತ್ತೆ ಈ ವಿಷಯ ಅವಳ ಬಳಿ ಮಾತನಾಡೋಕೆ ಹೋಗಬೇಡ. ಏನೇ ಅಂದ್ರೂ ಅವಳು ಪ್ರೆಗ್ನೆಂಟ್‌ ಅಲ್ವ. ಅವಳು ಸ್ಟ್ರೆಸ್‌ ತಗಂಡ್ರೆ ಮಗುವಿಗೂ ತೊಂದರೆಯಾಗ್ತದಲ್ಲʼ 

"ಮ್.‌ ಸರಿ. ಭಾವನ ಜೊತೆ ಮಾತನಾಡಲಾ?" 

ʻಅವರದೇನು ಸುಮ್ಮನೆ ಈ ಕ್ಷಣದ ಸಿಟ್ಟೋ ಅಥವಾ ಇನ್ನೂ ಯಾವುದ್ಯಾವುದೋ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಈ ರೀತಿ ಆಡಿಕೊಂಡರೋ ಗೊತ್ತಿಲ್ಲ. ನಾ ಮಾತಾಡಿ ನೋಡ್ತೀನಿ ಮೊದ್ಲು. ಸರಿ ನಾ ಇನ್ನು ಹೊರಡ್ತೀನಿ ಕೆಲಸವಿದೆʼ ಎಂದು ಮೇಲೇಳುವಾಗ ಹೊರಬಂದರು ಅಪ್ಪ. 

"ಎಲ್ಲಿಗೆ ಹೊರಟೆ?" 

ʻಮನೆಗೆʼ 

"ಮನೆಗ್ಯಾಕೆ?" 

ʻಹೋಗಬೇಕಲ್ಲ ಮತ್ತೆʼ 

"ಇವತ್ತಿಲ್ಲೇ ಇರು" 

ʻಬೇಡ. ಮನಸ್ಸು ಸರಿಯಿಲ್ಲ. ಮನೆಗೆ ಹೋಗ್ತೀನಿʼ 

"ಹೋಗಿಬಿಟ್ಟು? ಮತ್ತೆ ಬರೋದಿಲ್ವಾ ಇಲ್ಲಿಗೆ" 

ʻಮ್.‌ ನನಗೆ ಬೇಡ ಅನ್ನಿಸಿದರೂ ಮಗಳಿಗೋಸ್ಕರ ಬರಲೇಬೇಕಲ್ಲ. ಜೊತೆಗೆ ಇಂತ ಮಾತುಗಳನ್ನು, ಬೇಡದ ಮಾತುಗಳನ್ನು ಕೇಳುವುದು ನನಗೇನು ಹೊಸತಲ್ಲವಲ್ಲʼ ಬೆಂಬಲ ಕೊಟ್ಟ ಅಪ್ಪನಿಗೆ ನೋವಾಗುವಂತಹ ಮಾತುಗಳನ್ನಾಡಬಾರದಿತ್ತು. ತಲೆತಗ್ಗಿಸಿದರು ಅಪ್ಪ. 

"ಅಂದ್ರೂ ಇವತ್ತು ಹೋಗೋದು ಬೇಡ ಧರು. ಮನೆಯಲ್ಲಿ ಮತ್ತೊಂದು ಸುತ್ತು ಜಗಳವಾಗ್ತದೆ. ನಿಮ್ಮ ಜಗಳವನ್ನೆಲ್ಲ ನೋಡಿ ಕೂರುವ ಕರ್ಮ ಪಾಪುಗ್ಯಾಕೆ" 

ಅಪ್ಪ ಹೇಳಿದ್ದೇನೋ ಸರಿ. ಆದರೆ ಇಲ್ಲಿದ್ದು ಅಮ್ಮನ, ಸೋನಿಯಾಳ ಮತ್ತಷ್ಟು ಮಾತುಗಳನ್ನು ಕೇಳುವ ಕರ್ಮ ಎದುರಾದರೆ? 

ʻಇರ್ಲಿ ಬಿಡಿ ಅಪ್ಪ. ಯಾವತ್ತಿದ್ರೂ ಎದುರಿಸಲೇಬೇಕಲ್ಲ. ಏನೇನಾಗಬೇಕೋ ಆಗಿ ಹೋಗಲಿ ಇವತ್ತೇ' ಎಂದೇಳಿದವಳ ಮನಸಿನಲ್ಲಿ ಅಪ್ಪ ಮತ್ತೊಂದು ಬಾರಿ ನಾ ಹೋಗಬಾರದೆಂದು ಹೇಳಿ ಇಲ್ಲೇ ಉಳಿಸಿಕೊಳ್ಳುತ್ತಾರೆ ಎನ್ನುವ ಭರವಸೆಯಿತ್ತು. 

"ಮ್. ನೀನೇಳೋದೂ ಸರೀನೇ. ಸರಿ ಹೋಗಿ ಬಾ. ಏನೇ ಇದ್ರೂ ಫೋನ್ ಮಾಡು. ನಾಲ್ಕೆಜ್ಜೆ ಅಲ್ವ ಮನೆ" ಎಂದುಬಿಟ್ಟರು. ಬೇಡದ ಮಾತುಗಳನ್ನಾಡಬಾರದು ಎಂದು ಎಷ್ಟೇ ಅಂದುಕೊಂಡರೂ ಬೇಡದ ಸಮಯದಲ್ಲೇ ಆಡಿಬಿಟ್ಟು ಆಮೇಲೆ ಹಂಗೇಳಬಾರದಿತ್ತು ಅಂತ ಗೋಳಾಡುವುದು. 

ಮಗಳನ್ನು ಕರೆದುಕೊಂಡು ಮನೆಗೆ ಹೋಗುವಾಗ ನೆನಪಾಗಿದ್ದು, ನಾ ಏನನ್ನೂ ತಿನ್ನಲೇ ಇಲ್ಲವೆಂದು. ಮನಸಿಗ್ ಏನೇ ಕಷ್ಟವಾದರೂ ದೇಹ ಕೇಳಬೇಕಲ್ಲ! ಅದಕ್ಕಾಗುವ ಹಸಿವು ಆಗೇ ಆಗ್ತದೆ. ಮನೆಯಿಂದ ಆಚೆಗಿರುವ ಅಂಗಡಿಗೋಗಿ ನಾಲ್ಕು ನೂಡಲ್ಸ್ ಪ್ಯಾಕೆಟ್ಟು, ಎರಡು ಬಿಸ್ಕೆಟ್ಟು, ಮಗಳಿಗೊಂದು ಚಾಕ್ಲೇಟು, ನಾಲ್ಕು ಬಾಳೆಹಣ್ಣು ತೆಗೆದುಕೊಂಡು ಮನೆ ಸೇರಿದೆ. ಪುಣ್ಯಕ್ಕೆ ರಾಜೀವ ಮನೆಯಲ್ಲಿರಲಿಲ್ಲ. ಅಷ್ಟರಮಟ್ಟಿಗಂತೂ ನೆಮ್ಮದಿಯೇ ಆಯಿತಲ್ಲ ಇಲ್ಲಿಗೆ ಬಂದು. 

ಎಗ್ ನೂಡಲ್ಸ್ ಮಾಡಿದೆ. ಬೇಡ ಬೇಡವೆನ್ನುತ್ತಿದ್ದ ಮಗಳಿಗೆ ನಾಲ್ಕು ತುತ್ತು ತಿನ್ನಿಸಿ ಉಳಿದಿದ್ದನ್ನು ಬಾಯಿಗಾಕಿಕೊಂಡು ಮಗಳ ಜೊತೆ ಮನಸಿಲ್ಲದ ಮನಸಿಂದ ಆಟವಾಡುತ್ತಿದ್ದವಳಿಗೆ ನಿದ್ರೆ ಯಾವಾಗ ಹತ್ತಿತೋ ತಿಳಿಯಲೇ ಇಲ್ಲ. ಎಚ್ಚರವಾದಾಗ ಘಂಟೆ ಏಳಾಗಿತ್ತು. ಮಗಳು ಅವಳ ಪಾಡಿಗವಳು ಆಟವಾಡುತ್ತಿದ್ದಳು. ಅದೇನು ಮಲಗಿದ್ದಳೋ, ಆಟವಾಡಿಕೊಂಡೇ ಇದ್ದಳೋ ಗೊತ್ತಿಲ್ಲ. ಇವರದಿನ್ನೂ ಪತ್ತೆಯಿಲ್ಲ. ಎಲ್ಲೋ ಕುಡಿಯಲು ಕೂತಿರಬೇಕು. ಖುಷಿಗೂ ಕುಡಿತ, ದುಃಖಕ್ಕೂ ಕುಡಿತ. ಕುಡಿಯಲೊಂದು ನೆಪ. ಇವತ್ತು ಕಂಠಮಟ್ಟ ಕುಡಿದು ಬಂದು ಮಾತನಾಡುವುದಕ್ಕೂ ಸಾಧ್ಯವಾಗದಷ್ಟು ಕುಡಿದು ಬಂದು ಮಲಗಿಬಿಟ್ಟರೆ ಸಾಕು. ರಾತ್ರಿಗೂ ಮತ್ತೊಂದು ಸುತ್ತು ನೂಡಲ್ಸ್ ಮಾಡಿಕೊಂಡರೆ ಸಾಕೆಂದುಕೊಳ್ಳುವಾಗ ರಾಜೀವ ಮನೆಗೆ ಬಂದರು. ನಾ ಮನೆಗೆ ಬಂದಿರುವುದು ಅವರು ಮತ್ತಷ್ಟು ದುಮುಗುಡುವಂತೆ ಮಾಡಿತು. 

ಒಳಗೆ ಬರುತ್ತಲೇ "ಯಾಕೆ ಬಂದೆ ಇಲ್ಲಿಗೆ" ಎಂದು ರೇಗಿದರು. ಅವರ ದನಿಗೇ ರಾಧ ಬೆಚ್ಚಿ ಅಳಲಾರಂಭಿಸಿದಳು. 

ʻನೋಡಿ ನೀವು ನನ್ನ ಜೊತೆ ಬೇಕಾದಷ್ಟು ಜಗಳವಾಡಿ, ನಿಜಕ್ಕೂ ನನ್ನದೇನಾದರೂ ತಪ್ಪಿದ್ದರೆ ಒಂದೆರಡ್ ಏಟೂ ಕೊಟ್ಟುಬಿಡಿ. ನನಗೇನು ಬೇಸರವಿಲ್ಲ. ಆದರೆ ಅವೆಲ್ಲವೂ ಮಗಳು ಮಲಗಿದ ಮೇಲೆ. ಮಗಳ ಮುಂದೆ ಜಗಳವಾಡಿ ಚೀಪ್ ಅನ್ನಿಸಿಕೊಳ್ಳೋದು ಬೇಡ' ದನಿಯಲ್ಲಿದ್ದ ದೃಡತೆಗೆ ರಾಜೀವನಂತ ರಾಜೀವೂ ಬೆಚ್ಚಿ ಸುಮ್ಮನಾದರು. ಒಬ್ಬರಿಗೊಬ್ಬರು ಮಾತಿಲ್ಲದೆ ಮಗಳು ಊಟ ಮಾಡಿ ಮಲಗುವವರೆಗೆ ಅವಳೊಡನೆ ಸರದಿಯ ಮೇಲೆ ಆಟವಾಡಿದೆವು. 

ಮಗಳನ್ನು ಮಲಗಿಸಿ ಹೊರಬಂದಾಗ ಮೊಬೈಲಿನಲ್ಲಿ ಯಾವುದೋ ವೀಡಿಯೋ ನೋಡುವುದರಲ್ಲಿ ನಿರತರಾಗಿದ್ದರು. 

ʻಹು. ಹೇಳಿ' 

"ಏನ್ ಹೇಳಲಿ?" 

ʻಆವಾಗೇನೋ ಮಾತಾಡ್ತಿದ್ರಲ್ಲ ಮುಂದುವರೆಸಿ ಅಂದೆ' 

"ನಿನ್ನಂತವಳ ಜೊತೆ ಇನ್ನೇನು ಮಾತನಾಡುವುದು ಬಿಡು. ನನಗೆ ಮೂಡಿಲ್ಲ ನಿನ್ನ ಜೊತೆ ಕಿತ್ತಾಡೋಕೆ" 

ʻಕಿತ್ತಾಡಿ ಅಂತ ನಾನೆಲ್ಲಿ ಹೇಳಿದೆ?! ಮಾತನಾಡಿ ಅಂತ ಕೇಳಿದ್ದು' 

"ಕೇಳಿದ್ರೆ ಸುಮ್ಮನೆ ಜಗಳವಾಗ್ತವೆ ಬಿಡು" 

ʻಪರವಾಗಿಲ್ಲ ಕೇಳಿ' ನನ್ನ ದನಿಯಲ್ಲಿನ ಶುಷ್ಕತನ ನನಗೇ ಅಚ್ಚರಿಯುಂಟುಮಾಡುತ್ತಿತ್ತು! 

"ಎಷ್ಟು ದಿನದಿಂದ ನಡೀತಿದೆ ನಿಮ್ಮಿಬ್ಬರ ಲವ್ವಿ ಡವ್ವಿ. ಬರೀ ಮಾತುಕತೆಯ ಹಂತದಲ್ಲಿದೆಯೋ ಅಥವಾ ಫಿಸಿಕಲ್ಲೂ ಶುರು ಮಾಡ್ಕಂಡಿದೀರಾ ಹೆಂಗೆ?" 

ʻನಿಮಗೆ ನಿಜಕ್ಕೂ ನಮ್ಮಿಬ್ಬರ ನಡುವೆ ಲವ್ವಿ ಡವ್ವಿ ಇದೆ ಅಂತ ಅನ್ನಿಸುತ್ತಾ?' 

"ಯಾಕೆ? ಅನ್ನಿಸಬಾರದಾ?" 

ʻಅನ್ನಿಸಬಾರದು ಅಂತಲ್ಲ. ಯಾರಿಗೆ ಏನು ಬೇಕಾದರೂ ಅನ್ನಿಸಬಹುದು. ಅನ್ನಿಸುತ್ತಿರುವುದು ಸತ್ಯವೋ ಅಲ್ಲವೋ ಅಂತ ಯೋಚಿಸುವಷ್ಟು ವಿವೇಚನೆ ಇರಬೇಕಲ್ಲವೇ?' 

"ವಿವೇಕ ಕೂಡ ಇಲ್ಲದವನಾಗಿಬಿಟ್ಟೆನಾ ಇವತ್ತು ನಾನು" 

ʻಹೌದು. ಅದರಲ್ಲೇನೂ ಅನುಮಾನವಿಲ್ಲ' 

"ಅವಿವೇಕತನದಿಂದ ಅಫೇರ್ ಇಟ್ಕಂಡಿರೋಳು ನೀನು. ಈಗ ವಿವೇಕ ಕಳೆದುಹೋಗಿರುವುದು ನನಗಾ?" 

ʻನೀವು ನನ್ನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ನಿಮಗೆ ನಿಜಕ್ಕೂ ನಮ್ಮಿಬ್ಬರ ನಡುವೆ ಲವ್ವಿ ಡವ್ವಿ ಇದೆ ಅಂತ ಅನ್ನಿಸುತ್ತಾ?' 

"ಮ್. ನಿಜ ಹೇಳ್ಬೇಕಂದ್ರೆ ನನಗೆ ಹಂಗೆ ಅನ್ನಿಸೋದಿಲ್ಲ" 

ʻಯಾಕೆ ಅನ್ನಿಸೋಲ್ಲ?' 

"ಮದುವೆಯಾದ ಮೇಲಂತೂ ನೀ ನನ್ನ ಬಿಟ್ಟು ಬೇರೆಯವರ ಕಡೆಗೆ ಆಸಕ್ತಿ ತೋರಿದಂತೆ ನನಗಂತೂ ಅನ್ನಿಸಿಲ್ಲ" ಸಾಗರ ನೆನಪಾಗಿ ಮನಸಾಕ್ಷಿ ಚುಚ್ಚಿತು. 

ʻನಿಮಗೆ ಹಂಗೆಲ್ಲ ಅನ್ನಿಸಿಲ್ಲ ನನ್ನ ಬಗ್ಗೆ ಅಂತಂದ ಮೇಲೆ ಅದ್ಯಾಕೆ ಅಪ್ಪ ಅಮ್ಮನ ಮುಂದೆ ಸೋನಿಯಾಳ ಮುಂದೆ ಎಲ್ಲಕ್ಕಿಂತ ಹೆಚ್ಚಾಗಿ ಮಗಳ ಮುಂದೆ ಅಷ್ಟು ಕೆಟ್ಟದಾಗಿ ನಡೆದುಕೊಂಡಿರಿ' 

"ಮದುವೆಗೆ ಮುಂಚಿನ ನಿನ್ನ ಕತೆಗಳೂ ಒಂದಷ್ಟು ಗೊತ್ತಿದ್ದವಲ್ಲ ನನಗೆ. ಆಗಲೇ ಹಂಗಿದ್ದವಳು ಈಗ ಹಿಂಗೂ ಇರಬಹುದಲ್ವಾ ಅನ್ನಿಸಿತು. ಜೊತೆಗೆ ಹಿಂಗಿರಬಹುದು ಅಂತ ವಿಷಯ ತಿಳಿಸಿದವರು ಯಾರೋ ಮೂರನೆಯವರಾದರೆ ನಾನು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಹೇಳಿದ್ದು ಸೋನಿಯಾ. ನಿನ್ನ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದ ಸೋನಿಯಾಳೇ ಹೇಳಿದಾಗ ನಂಬದೇ ಇರುವುದು ನನ್ನಿಂದ ಕಷ್ಟವಾಯಿತು" 

ʻಮ್' 

"ಬೇಸಿಕಲಿ ತಪ್ಪು ನಿಂದೇ. ನಾ ಅವತ್ತೇ ಕೇಳಿದೆ ಸೋನಿಯಾಗೂ ನಿಂಗೂ ಜಗಳವಾಯ್ತ? ಯಾಕಂಗೆ ಆಡ್ತಿದ್ದಾಳೆ ನಿನ್ನ ಜೊತೆಗೆ ಅಂತ. ನೀನೇ ಹೇಳಬಹುದಿತ್ತಲ್ಲ ಹಿಂಗಿಂಗಾಯ್ತು ಅಂತ" 

ಹೇಳದ್ದಕ್ಕೆ ಕಾರಣ ನನ್ನೊಳಗೇ ಚುಚ್ಚುತ್ತಿದ್ದ ಸಾಗರ ಎನ್ನುವುದನ್ನೇಳದೆ ʻತೀರ ಅವಳು ಇಷ್ಟೆಲ್ಲ ಸೀರಿಯಸ್ಸಾಗಿ ಆ ಗಾಳಿ ಸುದ್ದಿಗಳನ್ನು ನಂಬುತ್ತಾಳೆ ಅಂತ ನನಗನ್ನಿಸಿರಲಿಲ್ಲ. ಏನೋ ಕೇಳಿದ ಕ್ಷಣಕ್ಕೆ ಕೆಟ್ಟದಾಗಿ ವರ್ತಿಸಿದಳು ಅಂದುಕೊಂಡಿದ್ದೆ. ತೀರ ನನ್ನ ವೈಯಕ್ತಿಕ ಜೀವನವನ್ನೇ ಹಾಳುಗೆಡವಲು ಪ್ರಯತ್ನಿಸುತ್ತಾಳೆ ಅನ್ನುವ ಅನುಮಾನ ಮೂಡಿದ್ದರೂ ಹೇಳಿಬಿಡುತ್ತಿದ್ದೆ ನಿಮ್ಮಲ್ಲಿ' 

"ಮ್. ಅಂದ್ರೂ ನಿಮ್ಮಿಬ್ಬರ ಮಧ್ಯೆ ಸಂಬಂಧ ಬೆಳೆದಿದೆ ಅನ್ನುವಷ್ಟರ ಮಟ್ಟಿಗೆ ಸ್ನೇಹ ಯಾಕೆ ಬೆಳೆಸಿಕೊಂಡೆ ರಾಮ್ ಜೊತೆಗೆ?" 

ನಗು ಬಂತು. ʻರಾಮ್ ಜೊತೆ ನನ್ನ ಸ್ನೇಹ ಹೇಗೆ ಬೆಳೀತು ಅನ್ನೋದನ್ನ ಮತ್ತೆ ದೂಳೊಡೆದು ಬಿಡಿಸಿ ವಿವರಿಸಿ ಹೇಳಬೇಕಾ?' 

"ಹೋಗ್ಲಿ ಬಿಡು" ಎಂದೇಳಿ ಸುಮ್ಮನಾದರು. ಇದು ತಾತ್ಕಾಲಿಕವೆಂದವರ ಮುಖಚರ್ಯೆಯೇ ಸಾರಿ ಹೇಳುತ್ತಿತ್ತು.

ಮುಖಪುಟ ಚಿತ್ರ: ಚೇತನ ತೀರ್ಥಹಳ್ಳಿ. 
ಮುಂದುವರೆಯುವುದು

No comments:

Post a Comment