ತಿಂಗಳು ಕಳೆಯಿತು ಜಗಳವಾಗಿ, ಅವಮಾನಿತಳಾಗಿ. ಎಲ್ಲ ಕಡೆಯಲ್ಲೂ ಒಂದಷ್ಟು ಶಾಂತಿ ನೆಲೆಸಿತ್ತು. ಅಮ್ಮ ನಿಧಾನಕ್ಕಾದರೂ ಮಾತಿಗೆ ತೊಡಗಿಕೊಂಡಿದ್ದಳು. ಅಮ್ಮನ ಮನೆಯೊಳಗೆ ನಾಲ್ಕೈದು ನಿಮಿಷ ಇದ್ದು ಬರುವುದನ್ನು ನಾನೂ ರೂಢಿಸಿಕೊಂಡೆ. ಎದುರಿಗೆ ಸಿಕ್ಕಾಗ ಮುಖ ತಿರುಗಿಸಿಕೊಳ್ಳುತ್ತಿದ್ದ ಸೋನಿಯಾ ಕಾಟಾಚಾರಕ್ಕಾದರೂ ಸರಿಯೇ ಒಂದು ನಗು ಬಿಸಾಕುವಷ್ಟು ಮೃದುವಾಗಿದ್ದಳು. ಶಶಿ ಅಪ್ಪ ಆರಾಮಾಗೇ ಇದ್ದರು ನನ್ನ ಜೊತೆ. ರಾಜೀವನದೇ ಭಯ ನನಗೆ. ಅಚ್ಚರಿಯೆಂಬಂತೆ ಎಲ್ಲರಿಗಿಂತ ಮುಂಚಿತವಾಗೆ ನನ್ನೊಂದಿಗೆ ರಾಜಿ ಮಾಡಿಕೊಂಡವರಂತೆ ಬದಲಾದದ್ದು ಅವರೇ. ಅಫ್‌ಕೋರ್ಸ್ ಒಂದದಿನೈದು ದಿನ ಮಾತುಕತೆಯೇನೂ ಇರಲಿಲ್ಲ. ಆ ಹೂ ಉಹ್ಞೂ ಅಂತ ಶುರುವಾದ ಮಾತುಗಳು ಮತ್ತೊಂದು ವಾರ ಕಳೆಯುವಷ್ಟರಲ್ಲಿ ತೀರ ಮೊದಲಿನಷ್ಟು ಅಲ್ಲವಾದರೂ ಮೊದಲಿದ್ದ ಮಾತುಗಳಲ್ಲಿ ಅರ್ಧಕ್ಕೆ ಬಂದು ನಿಂತಿತ್ತು. ಕಳೆದೆರಡು ದಿನಗಳಿಂದಂತೂ ವಿಪರೀತವೆನ್ನಿಸುವಷ್ಟೇ ಮಾತನಾಡುತ್ತಿದ್ದರು. ಅವರ ಮಾತುಗಳಲ್ಲೆಲ್ಲ ಬೆಂಗಳೂರಿಗೆ ಹೋಗಿದ ನಂತರದ ಜೀವನಗಳ ಕುರಿತೇ ಇರುತ್ತಿತ್ತು. ಇನ್ನೇನು ರಿಸಲ್ಟ್ ಬರ್ತದೆ ಈ ತಿಂಗಳೋ ಮುಂದಿನ ತಿಂಗಳೋ. ಹೆಚ್ಚು ಕಮ್ಮಿ ಪಾಸ್ ಆಗೋದ್ರಲ್ಲಿ ಅನುಮಾನವೇನಿಲ್ಲ. ಈಗಾಗಲೇ ಒಂದು ತಿಂಗಳ ಬಾಂಡ್ ಮುಗಿದೇ ಹೋಗಿದೆ. ಇನ್ನೊಂದು ಹತ್ತು ತಿಂಗಳು ಕಳೆದುಬಿಟ್ಟರೆ ಮುಗೀತು, ಆರಾಮು ಬೆಂಗಳೂರಿಗೆ ಹೋಗಿಬಿಡಬಹುದು. ಮಗಳ ನೋಡಿಕೊಳ್ಳುವುದೊಂದು ಸಮಸ್ಯೆಯಾಗಬಹುದು. ಅಷ್ಟರಲ್ಲಿ ಮಗಳೂ ದೊಡ್ಡವಳಾಗಿರ್ತಾಳಲ್ಲ? ನಡೀತದೆ. ಬೆಂಗಳೂರಿನಲ್ಲೇನು ಹೆಜ್ಜೆಗೊಂದು ಡೇ ಕೇರ್‌ಗಳಿವೆಯಂತೆ. ಒಂದಷ್ಟು ಖರ್ಚಾಗ್ತದೆ ಹೌದು, ಆದರೂ ಹೆಂಗೋ ನಿಭಾಯಿಸಬಹುದು. ರಾಜೀವ ಒಂದಷ್ಟು ನೆಮ್ಮದಿ ಕಂಡುಕೊಂಡರೆ ಮಿಕ್ಕಿದ್ದೆಲ್ಲ ಸಲೀಸಾಗಿ ನಡೆದು ಹೋಗ್ತದೆ.
ಆದ್ರೂ ಮೈಸೂರು ಬಿಟ್ಟು ಬೆಂಗಳೂರಿಗೆ ಸೆಟಲ್ ಆಗಲು ಹೋಗುವುದು ಬಾಲಿಶ ನಿರ್ಧಾರದಂತೇ ತೋರ್ತದೆ. ಅದೂ ಮೈಸೂರಿನಲ್ಲೇ ಕೈ ತುಂಬಾ ಸಂಬಳ ಸಿಗುವ ಕೆಲಸ ದಕ್ಕುವಾಗ. ಮಗಳನ್ನು ನೋಡಿಕೊಳ್ಳಲು ಅಪ್ಪ ಅಮ್ಮ ಇದ್ದಾರೆ. ಜೊತೆಗೆ ಫಸ್ಟ್ ಹೆಲ್ತ್ ಒಂಥರಾ ಎರಡನೇ ಮನೆಯಂತೆಯೇ ಆಗಿ ಹೋಗಿದೆ. ಎಲ್ಲರೊಡನೆಯೂ ಒಗ್ಗಿ ಹೋಗಿದ್ದೇನೆ. ಕಷ್ಟ ಸುಖ ಹಂಚಿಕೊಂಡು ಕಿತ್ತಾಡೋಕೆ ಸುಮ ಇದ್ದಾಳೆ. ರಾಮ್‌ನಂತಹ ಒಳ್ಳೆ ಗೆಳೆಯ ಕೂಡ ಇದ್ದಾನೆ. ಇರೋದ್ರಲ್ಲಿ ನಮ್ ಡಿಪಾರ್ಟ್‌ಮೆಂಟೇ ಕಿರಿಕಿರಿ ಇಲ್ಲದೆ ನಡೀತಿರೋದು. ಇಷ್ಟೆಲ್ಲ ಸೌಕರ್ಯಗಳಿರುವಾಗ ಮೈಸೂರು ಬಿಟ್ಟು ಹೋಗಲು ಮನಸ್ಸಾಗುವುದಾದರೂ ಹೇಗೆ? ಸುಮ್ಮನೆ ಕ್ಲಿನಿಕ್ ಮಾಡಿಕೊಂಡು ಇವರಿಗೊಂದು ಫಾರ್ಮಸಿ ಇಟ್ಟುಕೊಟ್ಟರೆ ಆಗ್ತದೋ ಏನೋ? ಅಂತನ್ನಿಸ್ತದೆ. ಆದರೆ ಕ್ಲಿನಿಕ್ ಇಡೋದಂದ್ರೆ ಭಯ. ಕ್ಲಿನಿಕ್ಕು ಚೆನ್ನಾಗಿ ನಡೆಯುವಂತಾಗಲು ವರುಷ ಎರಡು ವರುಷವಾದರೂ ಕಾಯಬೇಕು. ಅಷ್ಟು ಕಾದರೂ ಕ್ಲಿಕ್ ಆಗೇ ಆಗ್ತದೆ ಅಂತೇನೂ ಇಲ್ಲ. ಕ್ಲಿಕ್ ಆದರೂ ಬೇರೆಯವರು ಎಲ್ಲಿ ಹೊಸ ಕ್ಲಿನಿಕ್ ತೆಗೆದು ಸ್ಪರ್ಧೆ ನೀಡಿಬಿಡ್ತಾರೋ ಅನ್ನೋ ಭಯ ಇದ್ದೇ ಇದೆ. ಇನ್ನು, ಕ್ಲಿನಿಕ್ ನಿರೀಕ್ಷೆಗೂ ಮೀರಿ ಗೆದ್ದು ಬಿಟ್ಟರೆ ಮನೆಯ ಕಡೆಗೆ, ಮಗಳ ಕಡೆಗೆ ಗಮನವೇ ಕೊಡದಷ್ಟು ಕೆಲಸವಾಗಿಬಿಡ್ತದೆ. ರಜಾ ಹಾಕೋಕಾಗಲ್ಲ, ಅಯ್ಯೋ ಇವತ್ ಯಾಕೋ ಬೋರು ಮನೇಲೇ ಇದ್ದು ಬಿಡುವ ಅನ್ನುವಂಗಿಲ್ಲ, ಜನ ಬರಲಿ ಬರದೇ ಹೋಗಲಿ ಘಂಟೆ ಹೊಡೀತಿದ್ದಂಗೇ ಹೋಗಿ ಕ್ಲಿನಿಕ್ಕಿನ ಬಾಗಿಲು ತೆರೆದು ಕುಳಿತುಕೊಳ್ಳಲೇಬೇಕು. ಯಪ್ಪ! ಬೆಂಗಳೂರಿಗೆ ಹೋಗಿ ಯಾವುದಾದರೂ ಆಸ್ಪತ್ರೆಯಲ್ಲಿ ನೆಲೆ ಕಂಡುಕೊಳ್ಳುವುದು ಉತ್ತಮ, ಕ್ಲಿನಿಕ್ ಗ್ಲಿನಿಕ್ ಆಟ ನನಗಲ್ಲ.