"ಯಾಕ್ ನಿಂಗೂ ಸೋನಿಯಾಗೂ ಏನಾದ್ರೂ ಜಗಳ ಆಯ್ತಾ ಅವಳು ಆಸ್ಪತ್ರೆಯಲ್ಲಿದ್ದಾಗ?" ಬೆಳಿಗ್ಗೆ ಶೇವ್ ಮಾಡಿಕೊಳ್ಳುವಾಗ ರಾಜೀವ್ ಕೇಳಿದ ಪ್ರಶ್ನೆ ಕೈಲ್ಲಿದ್ದ ಕಾಫಿ ಲೋಟ ಕೆಳಕ್ಕೆ ಬೀಳುವಂತೆ ಮಾಡಿತು. ಪುಣ್ಯಕ್ಕೆ ನಿನ್ನೆ ಸಂಜೆಯ ಪಾತ್ರೆಗಳನ್ನು ತೊಳೆದಿರದ ಕಾರಣ ಗಾಜಿನ ಲೋಟ ಸಿಂಕಿನಲ್ಲೇ ಇತ್ತು, ಕೈಯಲ್ಲಿದ್ದ ಸ್ಟೀಲಿನ ಲೋಟದ ಕಾಫಿ ಚೆಲ್ಲಿತಷ್ಟೆ. ʻಹೇಳೇಬಿಟ್ಟಳಾ ಸೋನಿಯಾ?' ಎಂಬ ಅನುಮಾನ ಮೂಡದೆ ಇರಲಿಲ್ಲ. ರಾಜೀವ ತುಂಬಾ ಸಹಜವಾಗಿ ಕೇಳಿದಂತಿತ್ತೇ ಹೊರತು ಅವರ ದನಿಯಲ್ಲಿ ಕೋಪ ಅಸಹನೆಗಳು ಕಾಣಲಿಲ್ಲ. ಯಾರಿಗೆ ಗೊತ್ತು ನಿಧಾನಕ್ಕೆ ತಮಾಷೆಯಾಗೇ ಕೇಳಿ ಜಗಳಕ್ಕೊಂದು ಬುನಾದಿ ಹಾಕುತ್ತಿದ್ದಾರೋ ಏನೋ?
ʻಹಂಗೇನಿಲ್ಲವಲ್ಲ ಯಾಕೆ?' ಮನದ ಉದ್ವೇಗ ಆದಷ್ಟು ದನಿಯಲ್ಲಿ ಪ್ರತಿಫಲನಗೊಳ್ಳದಂತೆ ಪ್ರಯತ್ನಿಸಿದೆ.
"ಓ ಓ! ಏನ್ ದಡ್ಡನ ತರ ಕಾಣಿಸ್ತೀನೇನು! ನನ್ ಕಣ್ಣಿಗ್ ಏನೂ ಗೊತ್ತಾಗೋದಿಲ್ಲ ಅಂತ ಎಣಿಸಿದ್ದೀಯೇನು?"
ಕನ್ಫರ್ಮ್! ಹೇಳಿಬಿಟ್ಟಿದ್ದಾಳೆ ಸೋನಿಯಾ...ಅನುಮಾನವೇ ಇಲ್ಲ.
ʻಅಂತದ್ದೇನ್ ಕಾಣಿಸ್ತು ನಿಮಗೆʼ ಆದಷ್ಟು ನಗುಮುಖವನ್ನು ಆರೋಪಿಸಿಕೊಳ್ಳುವ ಪ್ರಯತ್ನ ಮುಂದುವರೆದಿತ್ತು.
"ಕಾಣೋದಿಲ್ಲೇನು! ನಾನೂ ನೋಡ್ತಾನೇ ಇದ್ದೀನಲ್ಲ ಕಳೆದ ಹದಿನೈದು ದಿನದಿಂದ. ಬೆಳಿಗ್ಗೆಯಿಂದ ನನ್ನ ಜೊತೆ, ರಾಧ ಜೊತೆ, ನಿಮ್ಮಮ್ಮನ ಜೊತೆ ಅಚ್ಚುಕಟ್ಟಾಗೇ ಮಾತಾಡಿಕೊಂಡು ಇರ್ತಾಳೆ. ನಿಮ್ಮಪ್ಪನ ಜೊತೆ ಮಾತು ಕಮ್ಮೀನೇ ಅನ್ನು. ಸಂಜೆ ನೀ ಬರ್ತಿದ್ದ ಹಾಗೆ ಮುಗುಮ್ಮಾಗಿಬಿಡ್ತಾಳೆ. ಅದೂ ನೀ ಅಲ್ಲೇ ಹಾಲಲ್ಲೇ ಕುಳಿತುಬಿಟ್ಟರಂತೂ ನಮ್ಮಗಳ ಜೊತೆಗೂ ಮಾತಾಡಲ್ಲಪ್ಪ"
ಉಫ್! ಸೋನಿಯಾ ಇನ್ನೂ ಹೇಳಿಲ್ಲ ಅನ್ನೋದು ತಿಳಿದೇ ಅರ್ಧ ಜೀವ ವಾಪಸ್ಸಾದಂತಾಯ್ತು.
ʻಹೌದಾ? ನನಗೇನು ಹಂಗ್ ಅನ್ನಿಸಿಲ್ಲಪ್ಪʼ
"ನಿನಗ್ ಅನ್ನಿಸಿರೋಲ್ವ? ಮುಂಚೆಯಿಂದಾನೂ ಇಬ್ಬರ ನಡುವೆ ಮಾತು ಕಡಿಮೆ ಅಂದ್ರೆ ಬೇರೆ ಪ್ರಶ್ನೆ. ಮುಂಚೆ ತಲೆಚಿಟ್ಟಿಡಿಯುವಷ್ಟು ಮಾತನಾಡುತ್ತಿದ್ದವರು ಇದ್ದಕ್ಕಿದ್ದಂತೆ ಮಾತು ನಿಲ್ಲಿಸಿಬಿಟ್ಟಂತೆ ಕಾಣಿಸ್ತದೆ ನಂಗೆ. ಅದೂ ಕರೆಕ್ಟಾಗಿ ಅವಳು ಆಸ್ಪತ್ರೆಯಲ್ಲಿ ಸೇರಿದ ಮೇಲೆ"
ʻಹೌದಾ? ನನಗೇನು ಹಂಗ್ ಅನ್ನಿಸಿಲ್ಲಪ್ಪʼ
"ಹೋಗ್ಲಿ ಬಿಡು. ನಿನಗ್ ಹೇಳೋಕ್ ಇಷ್ಟವಿಲ್ವೋ ಏನೋ"