ಸುಮ ಮೂಡಿಸಿದ ಬೇಸರವನ್ನು ಮರೆಯಲನುವು ಮಾಡಿಕೊಟ್ಟದ್ದು ಮಗಳೊಂದಿಗಿನ ಒಡನಾಟ. ಮಗಳೊಂದಿಗೆ ನೆಟ್ಟಗೆ ಮಾತನಾಡಿ, ಆಟವಾಡಿ ತಿಂಗಳ ಮೇಲಾಗಿತ್ತು. ತಿಂಗಳ್ಯಾಕೆ, ಎರಡು ತಿಂಗಳೇ ಆಗಿಹೋಯಿತು. ಮಾತನಾಡಿ ಆಟವಾಡಿದರೂ ಅದೆಲ್ಲಾ ಯಾಂತ್ರಿಕತೆಯಿಂದ ಕೂಡಿತ್ತಷ್ಟೆ. ಎರಡ್ ತಿಂಗಳಲ್ಲಿ ಮಗಳು ಎಷ್ಟೊಂದೆಲ್ಲ ಹೊಸ ಹೊಸ ಪದ ಕಲಿತುಬಿಟ್ಟಿದ್ದಾಳೆ ಅಂತ ಅಚ್ಚರಿ. ಅಮ್ಮ, ಅಪ್ಪ, ಪಪ್ಪ, ಮಮ್ಮ, ತಾತ, ಅಜ್ಜಿ, ಮಾಮ, ಅತ್ತೆ ಎಲ್ಲಾ ಸಲೀಸು ಪದಗಳೀಗ. ಇಷ್ಟು ದಿನ ಅವಳನ್ನು ನೋಡಿಕೊಂಡಿದ್ದೇ ಒಂದು ತೂಕವಾದರೆ ಈಗ ಪುಟಪುಟನೆ ಹೆಜ್ಜೆ ಮೇಲೆ ಹೆಜ್ಜೆ ಹಾಕುತ್ತಾ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಚಿಮ್ಮುವ ಅವಳ ಉತ್ಸಾಹದ ಸರಿಸಮಕ್ಕೆ ನಾವು ದೊಡ್ಡವರು ನಿಲ್ಲುವುದಕ್ಕೆಲ್ಲಿ ಸಾಧ್ಯ! ಮಗಳ ಆಟೋಟಗಳನ್ನು ನೋಡುತ್ತಾ ಒಂದು ಒಂದೂವರೆ ಘಂಟೆ ಕಳೆದಿದ್ದೇ ತಿಳಿಯಲಿಲ್ಲ. ಫೋನು ರಿಂಗಣಿಸಿತು. ರಾಮ್ ಫೋನ್ ಮಾಡಿದ್ರು. ಮಗಳನ್ನು ಅವರಪ್ಪನ ಕೈಗೊಪ್ಪಿಸಿ ಫೋನ್ ಎತ್ತಿಕೊಂಡು ಹೊರಬಂದೆ.
ʻಹೇಳಿ ರಾಮ್'
"ಏನ್ರೀ ಹೇಗಾಯ್ತು ಎಕ್ಸಾಮ್ಸ್ ಎಲ್ಲ?"
ʻಏನೋ ತಕ್ಕಮಟ್ಟಿಗೆ ಆಗಿದೆ. ನೋಡ್ಬೇಕು ರಿಸಲ್ಟ್ಸ್ ಏನಾಗುತ್ತೋ'
"ನಿಮ್ಮಂತೋರೇ ಪಾಸಾಗದಿದ್ದರೆ ಇನ್ಯಾರು ಪಾಸಾಗ್ತಾರೆ ಹೇಳಿ...."
ʻಬೇರೆ ಡೈಲಾಗ್ ಹೇಳೀಪ. ಈ ಡೈಲಾಗ್ ಕೇಳಿ ಕೇಳಿ ಸಾಕಾಗಿದೆ'
"ಹ ಹ.... ಹೊಸ ಕಾರ್ ತಗಂಡೆ ರೀ"
ʻಓ ಸೂಪರ್ ಅಲ್ಲ…. ಕಂಗ್ರಾಟ್ಸ್'
"ಥ್ಯಾಂಕ್ಯು ಥ್ಯಾಂಕ್ಯು"
ʻಬರೀ ಥ್ಯಾಂಕ್ಸ್ ಹೇಳಿಬಿಟ್ರೆ! ಪಾರ್ಟಿ ಗೀರ್ಟಿ ಕೊಡ್ಸಿ'
"ನಿಜ ಹೇಳ್ಬೇಕು ಅಂದ್ರೆ ಅದಿಕ್ಕೇ ಫೋನ್ ಮಾಡಿದ್ದು"
ʻಆಹಾ! ಪಟ್ಟಂತ ಚೆನ್ನಾಗಿ ಸುಳ್ಳೇಳ್ತೀರ'
"ಇಲ್ಲ ರೀ ನಿಜವಾಗ್ಲೂ. ರಾಜೀವ್ ಹೇಳಲಿಲ್ವ?"
"ನೀವೇ ಫೋನ್ ಮಾಡ್ ಹೇಳಿ ನಾ ಹೇಳಿದ್ರೆ ಇವತ್ ಪರೀಕ್ಷೆ ಮುಗಿದಿದೆ, ರೆಸ್ಟ್ ಮಾಡ್ಬೇಕು ಅಂದುಬಿಡ್ತಾಳೆ ಅಂದ್ರು. ಹೋಗ್ಲಿ ಬಿಡಿ. ಈಗ ನಿಮ್ಮನೆಗೆ ಬರ್ತೀನಿ. ನೀವು ರಾಜೀವು ಮಗಳು ರೆಡಿಯಾಗಿ. ನನ್ನ ಕಾರಲ್ಲೇ ಊಟಕ್ಕೆ ಹೋಗಿ ಬರುವ"
ಇಲ್ಲ ಅನ್ನೋದಿಕ್ಕೆ ಕಾರಣಗಳೇನು ಹೊಳೆಯಲಿಲ್ಲ. ಸರಿ ಎಂದ್ಹೇಳಿ ಫೋನಿಟ್ಟೆ.
ʻಸರಿ ಇದೀರಾ ರೀ ನೀವೂನು. ಮುಂಚೇನೇ ಹೇಳಿದ್ರೆ ನಾನಿಷ್ಟೊತ್ಗೆ ರೆಡಿ ಆಗಿರ್ತಿರಲಿಲ್ಲವಾ?' ಎಂದು ದಬಾಯಿಸಿದೆ.
"ಅಯ್ಯೋ ಸುಮ್ನಿರು ನಾನೊಂದೇಳೋದು, ನೀನೊಂದರ್ಥ ಮಾಡ್ಕೊಳ್ಳೋದು. ಆಮೇಲೆ ಜಗಳ ಆಡೋದು. ಅದೆಲ್ಲಾ ಯಾಕೆ ಅಂತ ರಾಮ್‌ಗೇ ನಿನ್ನನ್ನು ಒಪ್ಪಿಸೋ ಕೆಲಸ ವಹಿಸಿ ಬಿಟ್ಟೆ. ಅವನೇಳಿದ್ರೆ ಕೊನೇಪಕ್ಷ ಫಾರ್ಮ್ಯಾಲಿಟೀಸ್ಗಾದ್ರೂ ಒಪ್ಪಿಕೊಂಡೇ ಒಪ್ಕೋತಿ ಅಂತ ಗೊತ್ತಿತ್ತಲ್ಲ" ಎಂದು ಹಲ್ಲು ಕಿಸಿದರು. ಅವರ ತಲೆ ಮೇಲೊಂದು ಮೊಟಕಿ ಬಟ್ಟೆ ಬದಲಿಸಲು ಒಳಗೋದೆ.
ಅರ್ಧ ಘಂಟೆಯಲ್ಲಿ ರಾಮ್ ಬಂದರು. ಅಷ್ಟರೊಳಗೆ ನಾವೂ ತಯಾರಾಗಿದ್ದೆವು. ಕಾರು ಚೆಂದಿತ್ತು. ಮೈಸೂರಿನ ಹೊರವಲಯದಲ್ಲಿರೋ ಹೋಟೆಲೊಂದಕ್ಕೆ ಹೋದೆವು. ರಾಜೀವ್ ತಮಗೊಂದು ಬಿಯರ್ ಹೇಳುತ್ತಾ "ನೀನೇನು ತಗೋತೀಯ ರಾಮ್" ಎಂದರು.
"ಹೇ. ಇಲ್ಲ. ನನಗೇನೂ ಬೇಡ. ಗಾಡಿ ಓಡಿಸ್ಕೊಂಡು ಹೋಗ್ಬೇಕಲ್ಲ"
"ಅಯ್ಯೋ. ಪರವಾಗಿಲ್ಲ ತಗೊಳಿ. ಇವಳಿದ್ದಾಳಲ್ಲ, ಓಡಿಸ್ತಾಳೆ" ಎಂದರು ರಾಜೀವ್. ಅಲಲಾ! ಇವರೇನು ಇಬ್ಬರೂ ಪ್ಲಾನ್ ಮಾಡಿಕೊಂಡೇ ನನ್ನನ್ನು ಕರೆದುಕೊಂಡು ಬಂದಂಗಿದೆ.
ʻಓ! ನೀವಿಬ್ರೂ ಹೊಸ ಕಾರಿನ ನೆಪದಲ್ಲಿ ಕುಡಿಯೋಕೆ ನನ್ನನ್ನು ಡ್ರೈವರ್ ಆಗಿ ಕರ್ಕಂಡ್ ಬಂದಂಗಿದೆʼ
"ಛೇ ಛೇ. ಎಲ್ಲಾದ್ರೂ ಉಂಟಾ. ಹಂಗೇನಿಲ್ಲಪ್ಪ. ಸಡನ್ನಾಗ್ ರಾಮ್ ಫೋನ್ ಮಾಡಿ ಹೋಗುವ ಅಂದ್ರು. ನಿಂದೂ ಪರೀಕ್ಷೆಗಳು ಮುಗಿದಿತ್ತಲ್ಲ. ಸರಿ ಎಂದೆ. ಅಷ್ಟೇ. ನಿಂಗ್ ಬೇಡ ಅಂದ್ರೆ ಹೇಳು, ರಾಮ್ ಅಷ್ಟೇ ಅಲ್ಲ. ನಾನೂ ಕುಡಿಯಲ್ಲ ಇವತ್ತು ಬೇಕಿದ್ರೆ. ಮಗಳು ಬೇರೆ ಇದ್ದಾಳಲ್ಲ. ಅವಳ ಮುಂದೆ ಕುಡಿಯೋದು ಸರೀನೂ ಅಲ್ವೇನೋ"
ʻಇಂತ ನಾಟಕವೆಲ್ಲ ಬೇಡಿ ಬಾಸ್. ಕುಡೀರಿ ಕುಡೀರಿ. ಇಬ್ರೂ ಕುಡೀರಿ. ನಂಗೇನ್ ಪ್ರಾಬ್ಲಮ್ ಇಲ್ಲ. ಮಗಳು ಅಳೋವರ್ಗೂ ಕುಡೀರಿ. ಗಾಡೀವರ್ಗೂ ನಡ್ಕೋ ಬರೋವಷ್ಟು ಶಕ್ತಿ ಉಳಿಸಿಕೊಂಡು ಕುಡೀರಿʼ ವ್ಯಂಗ್ಯವಾಗೇ ಹೇಳಿದೆ.
"ಹೇ. ಬೇಡ ಬಿಡಿ" ಎಂದರು ರಾಮ್.
ʻಪರವಾಗಿಲ್ಲ ರಾಮ್. ಸುಮ್ನೆ ರೇಗಿಸ್ದೆ ಅಷ್ಟೇ. ತಗೊಳಿ ತೊಂದ್ರೆಯಿಲ್ಲʼ ಎಂದು ಹೇಳಿ ನಕ್ಕೆ. ಅವರೂ ಒಂದು ಬಿಯರ್ ಹೇಳಿದರು. ನನಗೂ ಮಗಳಿಗೂ ಸೇರಿಸಿ ಒಂದು ಕಲ್ಲಂಗಡಿ ಜ್ಯೂಸ್ ಹೇಳಿದೆ, ಐಸ್ ಹಾಕದೆ ತೆಗೆದುಕೊಂಡು ಬನ್ನಿ ಎಂದ್ಹೇಳಲು ಮರೆಯಲಿಲ್ಲ. ಮಗಳಿಗೆ ಹೊಸ ಜಾಗವನ್ನು ಓಡಾಡಿ ಹೊಸ ಹೊಸ ಸಂಗತಿಗಳನ್ನು ಅರಿಯುವ ಕುತೂಹಲ. ಅವಳಿಂದಿಂದೆ ನಾನು. ಇಬ್ಬರೂ ನೆಮ್ಮದಿಯಿಂದ ಆರಾಮಾಗಿ ಒಂದೊಂದು ಬಿಯರ್ ಮುಗಿಸೋವರೆಗೂ ಓಡಿ ಓಡಿ ಮಗಳು ನನಗೆ ಸುಸ್ತು ಮಾಡಿಸಿಬಿಟ್ಟಳು.
ರಾಜೀವ್ ಮುಖದಲ್ಲಿ ಅಷ್ಟೆಲ್ಲ ನಗು ಮೂಡುವ ಸಾಧ್ಯತೆಯಿದೆ ಎನ್ನುವುದೇ ನನಗೆ ಮರೆತುಹೋದಂತಾಗಿತ್ತು! ರಾಮ್‌ಪ್ರಸಾದ್ ಜೊತೆ ಕುಳಿತು ನಗುಮುಖವನ್ನೇರಿಕೊಂಡಿದ್ದ ರಾಜೀವನನ್ನು ಯಾರಾದರು ಕಂಡಿದ್ದರೆ ಈ ಧರಣಿ ಸುಮ್ನೆ ರಾಜೀವ್ ಬಗ್ಗೆ ಸುಳ್ಳು ಸುಳ್ಳೇ ಹೇಳ್ತಾಳೆ. ಪಾಪ ಎಷ್ಟು ಒಳ್ಳೆಯವರಿದ್ದಾರೆ ಇವರು ಅಂತ ನನ್ನನ್ನೇ ದೂರದೆ ಇರುತ್ತಿರಲಿಲ್ಲ. ಹೆಂಡತಿಯಂತೂ ಒಳ್ಳೇ ಗೆಳತಿಯಾಗಲಿಲ್ಲ, ಕೊನೆಪಕ್ಷ ರಾಮ್‌ಪ್ರಸಾದ್ ರೂಪದಲ್ಲಾದರೂ ಒಬ್ಬ ಗೆಳೆಯ ಇವರಿಗೆ ಸಿಕ್ಕಿದರಲ್ಲ. ಇವರ ಕೆಲವು ವರ್ತನೆಗಳನ್ನು ರಾಮ್‌ಪ್ರಸಾದ್ ಆದ್ರೂ ಒಂದಷ್ಟು ಬದಲಿಸಬಲ್ಲರೇ? ಅಷ್ಟರಮಟ್ಟಿಗಾದರೂ ಇವರ ಸ್ನೇಹ ಬೆಳೆದು ಗಟ್ಟಿಗೊಳ್ಳಲಿ. ಅಲ್ಲ ರಾಮ್‌ಪ್ರಸಾದ್ ಇವರಿಗೆ ಜಾಸ್ತಿ ಫ್ರೆಂಡು, ನನಗೆ ಚೂರ್ಚೂರಷ್ಟೇ ಫ್ರೆಂಡು. ಅಂತದ್ರಲ್ಲಿ ನಮ್ಮಾಸ್ಪತ್ರೆಯಲ್ಲಿ ನಮ್ಮಿಬ್ಬರ ಮಧ್ಯೆ ಸಂಬಂಧ ಇದೆ ಅಂತ ಹಬ್ಬಿಸಿ ಮಾತಾಡ್ತಾರಲ್ಲ. ಕೊನೆಗೆ ಸುಮಾ ಕೂಡ ಹಂಗೇ ಮಾತಾಡಿಬಿಟ್ಟಳಲ್ಲ....
"ಏನ್ರೀ.... ಏನೋ ಯೋಚನೇಲಿ ಕಳೆದುಹೋಗಿದ್ದೀರಲ್ಲ.... ಪಾಪು ಟಿಶ್ಶ್ಯೂ ಪೇಪರ್ ಬಾಯಿಗಾಕಂಡಿದ್ದೂ ನಿಮುಗ್ ಗೊತ್ ಆದಂತಿಲ್ಲ" ಎಂದು ರಾಮ್‌ಪ್ರಸಾದ್ ನಗಾಡಿದಾಗಲೇ ಯೋಚನೆಗಳಿಂದ ಹೊರಬಂದಿದ್ದು.
ʻಹೆ ಹೆ.... ಹಂಗೇನಿಲ್ಲ. ಹಿಂಗೇ ಏನೋ ಪರೀಕ್ಷೆಗಳ ಬಗ್ಗೆ ಯೋಚಿಸ್ತಿದ್ದೆ ಅಷ್ಟೇʼ
"ಅಬ್ಬ.... ಮೂರೊತ್ತು ಓದು ಪರೀಕ್ಷೆ ಅಂತ ಗೋಳಪ್ಪ ಇವಳದ್ದು" ಎಂದು ರಾಗ ಎಳೆದರು ರಾಜೀವ್.
ʻಓ! ಸಾಕ್‌ಸಾಕು. ಹೆಂಡ್ತೀನ ಆಡ್ಕೊಳ್ಳೋಕೆ ಸಿಗೋ ಯಾವ ಅವಕಾಶಾನೂ ಬಿಡಲ್ಲ ನೀವು ಅಂತ ಗೊತ್ತುʼ
"ಮತ್ತೆ! ಅದೂ ಇನ್ನೊಬ್ರಿದ್ದಾಗ್ಲೇ ಆಡ್ಕೋಬೇಕು. ಮನೇಲ್ ಇಬ್ರೇ ಇದ್ದಾಗ್ ಆಡ್ಕೊಂಡ್ರೆ ಬಿಡ್ತೀರಾ ನೀವ್ಗಳು. ಹುರಿದು ಮುಕ್ಬಿಡ್ತೀರ"
ʻರೀ ಸುಮ್ನಿರಿ. ಏನ್ ಹುರಿದು ಮುಕ್ಬಿಟ್ಟಿರೋದು! ಮೊದಲೇ ರಾಮ್‌ಗೆ ಮದುವೆಯಾಗಿಲ್ಲ. ಹಿಂಗೆಲ್ಲ ಹೆದರಿಸಿ ಅವರು ಮದುವೇನೇ ಆಗದಂತೆ ಮಾಡ್ಬಿಟ್ಟೀರಾ ಮತ್ತೆʼ
"ಕರೆಕ್ಟು ರಾಮ್. ಸುಮ್ನೆ ಮದ್ವೆ ಗಿದ್ವೆ ಆಗ್ಬೇಡಿ. ಆರಾಮಾಗ್ ಒಬ್ರೇ ಇದ್ಬಿಡಿ" ರಾಮ್ ಮೆಲ್ಲಗೆ ನಕ್ಕರು.
ʻಶುರು ಮಾಡಿದ್ರಲ್ಲʼ
"ಮ್...ಆದರೂ ರಾಮ್. ಮದುವೆ ಆಗಿ. ಒಂಥರಾ ಚೆನ್ನಾಗಿರುತ್ತೆ"
"ಏನೋಪ ಮದುವೆಯಾದವ್ರೆಲ್ಲ ಹಿಂಗೇ ಹೇಳ್ತಾರೆ. ಮದ್ವೆಯಾಗ್ಬೇಡಿ ಅಂತ ಮೊದಲೇಳಿ ನಿಧಾನಕ್ಕೆ ಆಗಿ ಆಗಿ ಚೆನ್ನಾಗಿರುತ್ತೆ ಅಂತಾರೆ. ಅದೇನು ಸರ್ಕ್ಯಾಸಮ್ಮೋ ಏನೋ ಗೊತ್ತಾಗಲ್ಲ ನನಗೆ"
ʻಒಂಥರಾ ಸರ್ಕ್ಯಾಸಮ್ಮೇ. ಜೊತೆಗೆ ಸತ್ಯ ಕೂಡ. ಏನೇನೋ ತೊಂದರೆ ಕಿತ್ತಾಟ ಜಗಳಗಳಿದ್ರೂ ಮದುವೆ ಅನ್ನೋದು ಚೆಂದದ ಸಂಗತಿಯೇ ಹೌದು. ನೀವೇನ್ರೀ ಹೇಳ್ತೀರʼ ರಾಜೀವ್ ಕಡೆಗೆ ನೋಡಿದೆ.
"ಈ ತರ ದುರುಗುಟ್ಕಂಡ್ ನೋಡ್ತಾ ಏನ್ ಹೇಳ್ತೀರ ಅಂದ್ರೆ ಇನ್ನೇನ್ ಹೇಳೋಕಾಗುತ್ತೆ ಹೌದೌದು ಅಂತ ತಲೆಯಾಡಿಸಲೇಬೇಕು"
ʻಹ ಹ.... ಮತ್ತೆ. ನಾವಂದ್ರೆ ಸುಮ್ನೇನಾ.... ರೀ ಪಾಪ ಅವ್ರು ಕಾರ್ ಪಾರ್ಟಿ ಕೊಡ್ಸುವ ಅಂತ ಬಂದ್ರೆ ನಮ್ ಗಲಾಟೇನೇ ಜಾಸ್ತಿಯಾಯ್ತು. ಮತ್ತೆ ರಾಮ್ ಹೆಣ್ ನೋಡೋಕೋಗಲಿಲ್ವ ಎಲ್ಲಿಗೂʼ
"ಹೋಗ್ಬೇಕ್ರೀ. ಮೈಸೂರ್ದೇ ಒಂದ್ ಹುಡುಗಿ ಇದೆ ಅಂತ ಹೇಳಿದ್ದಾರೆ. ಅಕ್ಕ ಭಾವ ಟ್ರಿಪ್ಪಿಗೆ ಹೋಗಿಬಿಟ್ಟಿದ್ದಾರೆ. ಅಪ್ಪನಿಗೆ ಸ್ವಲ್ಪ ಬ್ಯಾಕ್ ಪೇನ್ ಜಾಸ್ತಿಯಾಗಿದೆ. ಓಡಾಡಬೇಡಿ ಅಂದಿದ್ದಾರಂತೆ. ʻನೀನೇ ಒಂದ್ಸಲ ನೋಡ್ಕಂಡ್ ಬಾ ಫ್ರೆಂಡ್ಸ್ ಯಾರ್ನಾದ್ರೂ ಕರ್ಕಂಡ್ ಹೋಗಿ. ಬ್ರೋಕರ್ ಆತುರ ಮಾಡ್ತಿದ್ದಾರಂತೆ. ಸುಮಾರ್ ಜನ ನೋಡೋಕ್ ಬರ್ತಿದ್ದಾರೆ ಆಮೇಲೆ ಆ ಹುಡುಗಿಗೆ ಬೇರೆ ಕಡೆ ಮದುವೆಯಾಗಿಬಿಟ್ಟರೆ ನನ್ನನ್ನು ಕೇಳಬೇಡಿ ಅಂತ ಬೆದರಿಕೆ ಬೇರೆ ಆ ಬ್ರೋಕರ್ದುʼ ಅಂತ ಅಮ್ಮನದು ಒಂದೇ ವರಾತ"
ʻಅದ್ರಲ್ಲೇನಿದೆ. ಹೋಗ್ ಬನ್ನಿ ಈ ಭಾನುವಾರʼ
"ಯಾರ್ ಜೊತೆ ಹೋಗೋದು? ಹೇಳ್ಕೊಳ್ಳುವಂತಹ ಫ್ರೆಂಡ್ಸ್ ಯಾರೂ ಇಲ್ಲ ನನಗಿಲ್ಲಿ"
“ಕೇಳಿದ್ಯಾ ಧರು? ಹೇಳ್ಕೊಳ್ಳುವಂತ ಫ್ರೆಂಡ್ಸ್ ಯಾರೂ ಇಲ್ವಂತೆ ರಾಮ್‌ಗೆ ಇಲ್ಲಿ. ಮತ್ ನಾವ್ ಯಾಕ್ ಬಂದು ಇವರ ಕಾಸಲ್ಲಿ ತಿಂದ್ಕಂಡ್ ಕುಡ್ಕಂಡ್ ಕೂತಿದ್ದೀವಿ?”
"ಛೆ... ಛೇ ನಾನಂಗೇಳಲಿಲ್ಲ"
ʻಮತ್ತಿನ್ನೆಂಗೋʼ
ಬಾಟಲಿಯಲ್ಲಿದ್ದ ಚೂರು ಬಿಯರನ್ನು ಮುಗಿಸಿ "ಅದೇ ಮತ್ತಿನ್ನೆಂಗ್ ಹೇಳಿದ್ದು? ನಾವಿದ್ದೀವಲ್ಲ ಇಬ್ರೂ ಇಲ್ಲೇ. ಭಾನುವಾರ ಪುರುಸೊತ್ತಾಗೂ ಇರ್ತೀವಿ. ಇವಳಿಗೆ ಡ್ಯೂಟಿ ಇದ್ದರೂ ಮಧ್ಯಾಹ್ನಕ್ಕೆಲ್ಲ ಬಂದುಬಿಡ್ತಾಳೆ. ನಾವೇ ಹೋಗುವ ನಡೀರಿ ಈ ಭಾನುವಾರ. ಆಗಿದ್ದಾಗೋಗ್ಲಿ ನಿಮ್ ಮದ್ವೆ ಮಾಡ್ಸೇಬಿಡುವ" ಎಂದು ಕಣ್ ಹೊಡೆದರು. ಮತ್ತೊಂದು ಸುತ್ತು ಮೂರು ಮಂದಿಯೂ ನಕ್ಕು ಟೇಬಲ್ಲಿಗೆ ಬಂದ ಆಹಾರವನ್ನೆಲ್ಲ ತಿಂದು ಮುಗಿಸುವಷ್ಟರಲ್ಲಿ ರಾಧ ನಿದ್ರೆ ಹೋಗಿದ್ದಳು.
ಮುಖಪುಟ ಚಿತ್ರ: ಚೇತನ ತೀರ್ಥಹಳ್ಳಿ.
ಮುಂದುವರೆಯುವುದು
No comments:
Post a Comment