Aug 15, 2020

ಒಂದು ಬೊಗಸೆ ಪ್ರೀತಿ - 75

"ನೀವ್‌ ಹೋಗಿ ಅಕ್ಕ. ಇವರಿರ್ತಾರೆ ರಾತ್ರಿಗೆ" ಸೋನಿಯಾಳ ದನಿ ಎಂದಿನಂತಿರಲಿಲ್ಲ ಎನ್ನುವುದೇನೋ ಅರಿವಿಗೆ ಬಂತು. ಆಸ್ಪತ್ರೆ ವಾಸ, ಅದರಲ್ಲೂ ಗರ್ಭ ನಿಲ್ಲದೇ ಹೋದರೆ ಅನ್ನೋ ಟೆನ್ಶನ್ನು ಎಲ್ಲಾ ಸೇರಿದಾಗ ದನಿ ಮಾಮೂಲಿನಂತಿರಲು ಸಾಧ್ಯವಿಲ್ಲವಲ್ಲ. ಗಂಡ ಇದ್ರೆ ಧೈರ್ಯ ಜಾಸ್ತಿಯಿರ್ತದೋ ಏನೋ. 

ʻಪರವಾಗಿಲ್ಲ ಬಿಡು ಸೋನಿಯಾ. ನಾನೇ ಇರ್ತೀನಿʼ 

"ಹೇಳಿದ್ನಲ್ಲಕ್ಕ. ಇವರಿರ್ತಾರೆ ಅಂತ. ನೀವಿದ್ದು ನನ್ನ ನೋಡೋದೇನು ಬೇಡ. ನೀವ್‌ ದಯವಿಟ್ಟು ಹೋಗಿ" ಎಂದವಳು ಖಂಡತುಂಡವಾಗಿ ಹೇಳಿದಾಗ ಎಲ್ಲೋ ಏನೋ ತಪ್ಪಾಗಿದೆ, ಏನಂತ ಗೊತ್ತಾಗದ ಪರಿಸ್ಥಿತಿಯಲ್ಲಿ ನಾನಿದ್ದೀನಿ ಅನ್ನುವುದರ ಅರಿವಾಯಿತು. ಅವಳಿಷ್ಟು ಕಟುವಾಗಿ ಹೇಳಿದ ಮೇಲೆ ಮತ್ತೆ ಅಲ್ಲಿ ನಿಲ್ಲುವ ಮನಸ್ಸಾಗಲಿಲ್ಲ ನನಗೆ. ʻಟೇಕ್‌ ಕೇರ್‌ʼ ಎಂದ್ಹೇಳಿದಾಗಲೂ ಅವಳ ಮುಖದಲ್ಲೊಂದು ನಗು ಮೂಡಲಿಲ್ಲ. ಹೊರಬಿದ್ದೆ. ನಿನ್ನೆ ರಾತ್ರಿಯೆಲ್ಲ ಚೆಂದವಾಗಿ ಮಾತನಾಡುತ್ತಾ ಗರ್ಭದ ದಿನಗಳ ಭಯ ಸಂತಸ ಖುಷಿ ಆತಂಕದ ಬಗ್ಗೆಯೆಲ್ಲ ಲವಲವಿಕೆಯಿಂದ ಮಾತನಾಡುತ್ತಿದ್ದವಳಿಗೆ ಒಂದೇ ದಿನದಲ್ಲಿ ನನ್ನ ಮೇಲೆ ಸಿಟ್ಟು ಮಾಡಿಕೊಳ್ಳುವಂತದ್ದೇನಾಯಿತು? ತಿಳಿಯಲಿಲ್ಲ. ನನ್ನಿಂದೇನಾದರೂ ತಪ್ಪಾಯಿತಾ? ನನ್ನ ಪ್ರಜ್ಞೆಗೆ ಬಂದಂತೆ ಯಾವ ತಪ್ಪೂ ಆಗಿಲ್ಲ. ರಾತ್ರಿ ಮಾತನಾಡುತ್ತಾ ಮಲಗಿದ್ದು ಹನ್ನೊಂದೂವರೆಯ ಮೇಲಾಗಿತ್ತು. ಬೆಳಿಗ್ಗೆ ಎದ್ದಾಗ ಮತ್ತೊಂದಷ್ಟು ರಕ್ತಸ್ರಾವವಾಗಿತ್ತು. ಜಯಂತಿ ಮೇಡಮ್ಮಿಗೆ ಫೋನ್‌ ಮಾಡಿದ್ದೆ. "ತೊಂದರೆಯೇನಿರಲ್ಲಮ್ಮ. ಕೆಲವರಿಗೆ ವಾರದವರೆಗೆ ರಕ್ತ ಹೋಗ್ತದೆ. ಬಂದು ನೋಡ್ತೀನಿ. ನೋಡುವ. ಬೇಕಿದ್ರೆ ನಿಮ್ಮ ಸಮಾಧಾನಕ್ಕೆ ಮತ್ತೊಂದು ಸ್ಕ್ಯಾನ್‌ ಮಾಡಿಸುವ" ಎಂದರು. 

ಶಶಿ ರಜಾ ಮಾಡಿ ಬೆಳಿಗ್ಗೆ ಏಳೂವರೆಯಷ್ಟೊತ್ತಿಗೆಲ್ಲ ಆಸ್ಪತ್ರೆಗೆ ಬಂದಿದ್ದ. ನಾ ಮನೆಗೆ ಹೋಗಿ ದಡಬಡನೆ ಸ್ನಾನ ತಿಂಡಿ ಮುಗಿಸಿ ಮಗಳನ್ನೊಂದಷ್ಟು ಮುದ್ದಿಸಿ ಡ್ಯೂಟಿಗೆ ಬಂದೆ. ಓಪಿಡಿ ಇದ್ದಿದ್ದರಿಂದ ಮಧ್ಯಾಹ್ನ ಊಟದ ಸಮಯದಲ್ಲಷ್ಟೇ ವಾರ್ಡಿಗೆ ಹೋಗಲು ಸಾಧ್ಯವಾಗಿದ್ದು. ಆಗಲೂ ಅಚ್ಚುಕಟ್ಟಾಗೇ ಮಾತನಾಡಿದ್ದಳು. ಬೆಳಿಗ್ಗೆಯಿಂದ ಬ್ಲೀಡಿಂಗ್‌ ಇರಲಿಲ್ಲ. ಇವತ್ತೊಂದಿನ ಇದ್ದು, ಸಂಜೆ ಮತ್ತೊಂದು ಸ್ಕ್ಯಾನ್‌ ಮಾಡಿಸಿಕೊಂಡು ನಾಳೆ ಮನೆಗೆ ಹೋಗಿ ಎಂದಿದ್ದರಂತೆ ಜಯಂತಿ ಮೇಡಂ. ಜಯಂತಿ ಮೇಡಂ ಹಂಗೇನೆ. ಅನಿವಾರ್ಯ ಇದ್ದರಷ್ಟೇ ಆಸ್ಪತ್ರೆಯಲ್ಲಿರಬೇಕು, ಇಲ್ಲವಾದರೆ ಮನೆಗೋಗಬೇಕು. ಆಸ್ಪತ್ರೆಯಲ್ಲಿ ಸುಖಾಸುಮ್ಮನೆ ಇರುವುದು ಒಳ್ಳೆಯದಲ್ಲವೇ ಅಲ್ಲ ಎಂದು ನಂಬಿರುವವರು. ಆಸ್ಪತ್ರೆಯಲ್ಲೇ ಇರುವ ಥರಾವರಿ ರೋಗಾಣುಗಳಿಂದ ಹೊಸ ರೋಗ ಹತ್ತಿಕೊಳ್ಳಬಹುದು, ಜೊತೆಗೆ ಆಸ್ಪತ್ರೆಯಲ್ಲಿ ರೋಗಿಗಳ ಯೂನಿಫಾರ್ಮ್‌ ಹಾಕಿಕೊಂಡು ಮಲಗುವುದು ಬೇಡದ ಮಾನಸಿಕ ಕ್ಷೋಭೆಗೆ ದೂಡಿಬಿಡುತ್ತದೆ ಎಂದವರ ಅನಿಸಿಕೆ. "ನೀವ್‌ ತುಂಬಾ ಬೇಗ ಡಿಸ್ಚಾರ್ಜ್‌ ಮಾಡಿಬಿಡ್ತೀರ. ಒಂದು ಅಥವಾ ಎರಡು ದಿನ ಹೆಚ್ಚು ಉಳಿಸಿಕೊಂಡರೆ ಒಳ್ಳೆಯದಿತ್ತು" ಎಂದು ಮ್ಯಾನೇಜ್‌ಮೆಂಟ್‌ನವರು ಕೇಳಿಕೊಂಡಾಗ. "ಡಾಕ್ಟ್ರು ನಾನೋ ನೀವೋ? ನನ್ನ ಪೇಶೆಂಟ್ಸುಗಳನ್ನ ಎಷ್ಟು ದಿನದವರೆಗೆ ಆಸ್ಪತ್ರೆಯಲ್ಲಿಟ್ಟುಕೊಳ್ಳಬೇಕೆಂದು ನನಗೆ ಗೊತ್ತು. ಅದನ್ನು ನೀವು ನನಗೆ ತಿಳಿ ಹೇಳುವ ಅಗತ್ಯವಿಲ್ಲ" ಎಂದು ಕಡ್ಡಿ ಮುರಿದಂತೆ ಹೇಳಿದ್ದರಂತೆ. ಬೇರೆಯವರು ಈ ರೀತಿ ಹೇಳಿದ್ದರೆ ಎರಡು ದಿನಕ್ಕೇ ಅವರಿಗೆ ನೋಟೀಸು ನೀಡಿ ಕಳಿಸಿಕೊಡುತ್ತಿದ್ದರೇನೋ. ಹೇಳಿದ್ದು ಜಯಂತಿ ಮೇಡಮ್ಮು. ಅವರನ್ನು ಹುಡುಕಿಕೊಂಡು ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಅಧಿಕ. ಅಂತವರನ್ನು ಕಳೆದುಕೊಳ್ಳುವ ಇಚ್ಛೆಯಿಲ್ಲದೆ ಮುಗುಳ್ನಕ್ಕು ಸುಮ್ಮನಾಗಿದ್ದರಂತೆ ಮ್ಯಾನೇಜ್‌ಮೆಂಟಿನವರು. ಜಯಂತಿ ಮೇಡಂ ಬಳಿ ಬರುವ ರೋಗಿಗಳ ಸಂಖೈ ಕಡಿಮೆಯಾದ ದಿನವೇ ಅವರನ್ನು ಹೊರಕಳಿಸುವುದಕ್ಕೆ ಹಿಂದು ಮುಂದು ನೋಡುವುದಿಲ್ಲ ಇವರು. 

ಓಪಿಡಿ ಮುಗಿಸಿಕೊಂಡು ಸಂಜೆಯೊಂದು ಸುತ್ತು ವಾರ್ಡಿನೊಳಗಿದ್ದ ರೋಗಿಗಳನ್ನು ನೋಡಿಕೊಂಡು, ಹೊಸತಾಗಿ ಅವತ್ತು ಅಡ್ಮಿಶನ್‌ ಆದವರನ್ನು ಮತ್ತೊಂದು ಬಾರಿ ಪರೀಕ್ಷಿಸಿ ಅಗತ್ಯವಿದ್ದ ಪರೀಕ್ಷೆಗಳಿಗೆ ಕಳಿಸುವಂತೆ ನರ್ಸಿಗೆ ತಿಳಿಸಿ ಸೋನಿಯಾಳ ರೂಮಿಗೆ ಬರುವಷ್ಟರಲ್ಲಿಯೇ ಅವಳ ವರ್ತನೆಯಲ್ಲಿ ಬದಲಾವಣೆಯಾಗಿದ್ದು ಗಮನಕ್ಕೆ ಬಂತು. ಸೋನಿಯಾಳ ಜೊತೆಯಿದ್ದ ರಾಮೇಗೌಡ ಅಂಕಲ್‌ ಎಂದಿನಂತೆಯೇ ಮಾತನಾಡಿಸಿದರಾದರೂ ʻಹೇಗಿದ್ದಿ ಸೋನಿಯಾ ಈಗ. ಮತ್ತೇನೂ ಬ್ಲೀಡಿಂಗ್‌ ಇಲ್ಲ ತಾನೇʼ ಎಂದು ಕೇಳಿದ್ದಕ್ಕೆ "ಮ್"‌ ಎಂದು ಮುಗುಮ್ಮಾಗಿ ಉತ್ತರಿಸಿದಳು. ಏನೋ ಪಾಪ ಟೆನ್ಶನ್ನು ಹುಡುಗಿಗೆ, ಮೂಡ್‌ ಅತ್ತಿತ್ತ ತೊಯ್ದಾಡ್ತದಲ್ಲ ಇಂತಹ ಸಂದರ್ಭದಲ್ಲಿ ಎಂದರಿವಿದ್ದವಳಿಗೆ ಅವಳ ಮುಗುಮ್ಮಾದ ಉತ್ತರ ಅಂತ ದೊಡ್ಡ ಅಚ್ಚರಿ ಉಂಟು ಮಾಡಲಿಲ್ಲ. ಅಂಕಲ್‌ ಜೊತೆ ಮಾತನಾಡಿಕೊಂಡಿರಲಿ ಎಂದು ಹೊರಬಂದು ಶಶಿಯನ್ನು ಕರೆದುಕೊಂಡು ಹೋಗಿ ಒಂದು ಕಾಫಿ ಕುಡಿದು ʻನಾ ಸ್ವಲ್ಪ ಮನೆಗೆ ಹೋಗಿ ಬರ್ತೀನಿ ಕಣೋ. ರಾಧಳನ್ನು ನೋಡಿಕೊಂಡು ನೋಡಿಕೊಂಡು ಅಮ್ಮನೂ ಸುಸ್ತಾಗಿರ್ತಾಳೆ. ಅವರಿಗೊಂದಷ್ಟು ಬಿಡುವು ಕೊಟ್ಟು ಏಳು ಎಂಟರ ಸುಮಾರಿಗೆ ಬರ್ತೀನಿ. ಊಟ ಮಾಡ್ಕಂಡೇ ಬಂದುಬಿಡ್ತೀನಿ. ನೀ ಆಮೇಲ್‌ ಮನೆಗೋಗುವಂತೆʼ ಎಂದು ಹೇಳಿದ್ದಕ್ಕೆ ಶಶಿ ತಲೆಯಾಡಿಸಿದ್ದ. ಸೋನಿಯಾಳ ಮುನಿಸಿನ ವಾಸನೆಯಿನ್ನೂ ಅವನಿಗೆ ಬಡಿದಂತಿರಲಿಲ್ಲ. ಅಥವಾ ನಾಟಕವಾಡಿದನೋ ಏನೋ. 

ತಲೆಸಿಡಿಸುವ ಯೋಚನೆಗಳೊಂದಿಗೆ ಮನೆ ತಲುಪಿದವಳಿಗೆ "ಇದ್ಯಾಕಮ್ಮ ಬಂದ್ಬಿಟ್ಟೆ?" ಎಂಬ ಅಮ್ಮನ ಪ್ರಶ್ನೆ ಎದುರಾಗಿ ಮತ್ತಷ್ಟು ತಲೆಬೇನೆಯುಂಟಾಯಿತು. ʻಇಲ್ಲಮ್ಮ. ಏನೋ ಶಶೀನೇ ಇರ್ತೀನಿ, ನೀ ಹೋಗು ಮಗಳಿದ್ದಾಳಲ್ಲ ಅಂದ. ಅದಿಕ್ಕೇ ಬಂದೆʼ ಎಂದೊಂದು ಸುಳ್ಳು ಹೇಳಿದೆ. 

"ಅದೂ ಸರಿ ಬಿಡು. ಈಗೇನು ಆರಾಮಾಗಿ ಇದ್ದಾಳಲ್ವ?" 

ʻಹು. ಏನೂ ತೊಂದರೆ ಇಲ್ಲ ಅಂದಿದ್ದಾರಂತೆ. ಇವತ್ತಿನ ಸ್ಕ್ಯಾನ್‌ ಕೂಡ ನಾರ್ಮಲ್ಲೆಂದೇ ಬಂದಿದೆ. ನಾಳೆ ಡಿಸ್ಚಾರ್ಜ್‌ ಮಾಡ್ತಾರೆ. ಕಡೇ ಪಕ್ಷ ಒಂದು ತಿಂಗಳ ಮಟ್ಟಿಗೆ ಕೆಲಸಕ್ಕೆ ರಜಾ ಹಾಕಿ ಮನೆಯಲ್ಲಿ ರೆಸ್ಟ್‌ ಮಾಡಲಿ ಎಂದಿದ್ದಾರಂತೆʼ 

"ಅಯ್ಯೋ... ಮಗೂಗಿಂತ ಹೆಚ್ಚಾ ಕೆಲಸ.... ಬಿಟ್ಟೇ ಬಿಟ್ರಾಗ್ತದೆ ಬಿಡು. ಆಮೇಲೆ ಬೇಕೆನ್ನಿಸಿದಾಗ ಮತ್ತೊಂದು ಕೆಲಸ ಹುಡುಕಿಕೊಂಡರಾಯಿತು. ಶಶಿಗೆ ಬಂದ್‌ ಊಟ ಮಾಡ್ಕಂಡ್‌ ಹೋಗು ಅನ್ಬೇಕಿತ್ತು" 

ʻಹೇಳಿದೆ. ಅಲ್ಲೇ ಮಾಡ್ತೀನಿ ಅಂದʼ ಮತ್ತೊಂದು ಸುಳ್ಳೇಳಿದೆ. 

ಅಷ್ಟೊತ್ತಿಗಾಗಲೇ ನಿದ್ರೆ ಹೋಗಿದ್ದ ರಾಧಳನ್ನು ಎಬ್ಬಿಸಿಕೊಂಡು ಮನೆಗೆ ಹೋಗುವುದಕ್ಕೂ ಮನಸ್ಸಾಗಲಿಲ್ಲ. ಹಿಂಗಿಂಗೆ, ನಾನೂ ರಾಧ ಇಲ್ಲೇ ಅಮ್ಮನ ಮನೆಯಲ್ಲಿ ಮಲಗ್ತೀವಿ ಎಂದು ರಾಜೀವನಿಗೆ ಮೆಸೇಜು ಟೈಪಿಸಿದೆ. ನಾ ಆಸ್ಪತ್ರೆಯಲ್ಲೆ ಮಲಗೋದು ಎಂದವರು ಅಂದುಕೊಂಡಿರುತ್ತಾರಲ್ಲ, ಮತ್ತೇನಕ್ಕೆ ಮೆಸೇಜು ಮಾಡಿ ವಿಷಯ ತಿಳಿಸುವ ತೊಂದರೆ ಎಂದು ಮೆಸೇಜ್‌ ಡಿಲೀಟ್‌ ಮಾಡಿದೆ. ಸೋನಿಯಾಳ ವರ್ತನೆ ಅರ್ಥವೇ ಆಗದೆ ಗೊಂದಲ ಉಂಟಾಯಿತು. ಹಿಂದೆ ಮುಂದೆ, ಮುಂದೆ ಹಿಂದೆ ಯಾವ ರೀತಿ ಯೋಚಿಸಿದರೂ ನನ್ನ ತಪ್ಪೇನಿರಬಹುದೆಂಬುದು ಅಂದಾಜಿಗೆ ಸಿಗದಾಯಿತು. ನಾನೇ ಏನೇನೋ ಯೋಚಿಸಿಕೊಂಡು ಕೊರಗುವುದೇಕೆ... ಸೋನಿಯಾಳನ್ನೇ ಕೇಳಿಬಿಟ್ಟರೆ.... ಬೇಡ.... ಅವಳು ಪಾಪ ಮಲಗಿರ್ತಾಳೆ. ಏತಕ್ಕೆ ಕೋಪವೋ ಏನೋ... ಅವಳಿಗ್ಯಾಕೆ ತೊಂದರೆ. ನನ್ನ ಬಳಿ ಹೇಳದೇ ಹೋದರೂ ಶಶಿಗಂತೂ ವಿಷಯ ತಿಳಿಸಿಯೇ ಇರುತ್ತಾಳೆ ಎಂದುಕೊಳ್ಳುತ್ತಾ 

ʻಆಯ್ತೇನೋ ಊಟʼ ಎಂದು ಶಶಿಗೆ ಮೆಸೇಜು ಹಾಕಿದೆ. 

"ಹು. ಆಯ್ತು. ನಿಂದು" 

ʻನಾ ಆಗ್ಲೇ ಮಾಡಿಯೇ ಬಂದಿದ್ನಲ್ಲ ಆಸ್ಪತ್ರೆಗೆʼ 

"ಓ ಹೌದಲ್ಲ" 

ʻಸೋನಿಯಾ ಆರಾಮಿದ್ದಾಳಾʼ 

"ಹು. ಟಿವಿ ನೋಡ್ತಾ ಸುಮ್ಮನೆ ಮಲಗಿದ್ದಾಳೆ" 

ʻನನ್ನಿಂದೇನಾದ್ರೂ ತಪ್ಪಾಯ್ತ ಶಶಿʼ 

"ಅಂದ್ರೆ" 

ʻನಿನ್ನೆಯಿಂದ ಆಸ್ಪತ್ರೆಯಲ್ಲಿ ನಾನೇನಾದ್ರೂ ತಪ್ಪಾಗಿ ನಡ್ಕೊಂಡ್ನಾ?ʼ 

"ಸೋನಿಯಾ ಜೊತೆಗಾ?" 

ʻಹುʼ 

"ಅಂತದ್ದೇನಿಲ್ಲವಲ್ಲ. ಯಾಕೆ?" 

ʻಯಾಕೂ ಇಲ್ಲ ಬಿಡುʼ 

"ಏನಾಯ್ತು ಹೇಳಕ್ಕ" 

ʻಏನಿಲ್ಲ. ಯಾಕೋ ಸೋನಿಯಾ ಇವತ್ತು ಮಧ್ಯಾಹ್ನದ ಮೇಲೆ ನನ್ನ ಜೊತೆ ಮುನಿಸಿಕೊಂಡವಳಂತೆ ಮಾತನಾಡಿದಂತೆ ತೋರಿತಪ್ಪʼ 

"ಹೌದಾ? ನನಗೇನೋ ಆ ರೀತಿಯೇನು ಅನ್ನಿಸಲಿಲ್ಲವಲ್ಲ" 

ʻಮ್.‌ ನನ್ನ ಭ್ರಮೆಯೂ ಇದ್ದಿರಬಹುದೇನೋ ಗೊತ್ತಿಲ್ಲ. ತುಂಬಾ ಕಟುವಾಗಿ ನೀವಿರೋದು ಬೇಡ ಇಲ್ಲಿ ಹೋಗಿ ಅಂತ ಓಡಿಸಿದಂತಾಯಿತು ನನಗೆʼ 

"ಹೌದಾ! ನಾನೆಲ್ಲೋ ಗಂಡನ ಜೊತೆ ಕಾಲ ಕಳೀಬೇಕಂತ ನಿನ್ನನ್ನ ಕಳಿಸಿದಳು ಅಂತ ಖುಷಿಯಾಗಿದ್ರೆ ನಿನ್ನ ಮೇಲಿನ ಕೋಪಕ್ಕೆ ನನ್ನನ್ನು ಉಳಿಸಿಕೊಂಡಿದ್ದಾ! ಕೇಳ್ತೀನಿರು, ಏನಾಯ್ತು ಅಂತ" 

ʻನಾ ಚಾಡಿ ಚುಚ್ಚಿದಂತೆ ಕೇಳಿಬಿಡಬೇಡ. ಇವೆಲ್ಲ ಸೂಕ್ಷ್ಮ ವಿಷಯಗಳು. ನಿನಗರ್ಥವಾಗಲ್ಲʼ 

"ಹು ಕಣಕ್ಕ. ಎಲ್ಲ ನಿನ್ನೊಬ್ಬಳಿಗೇ ಅರ್ಥವಾಗೋದು. ಕೇಳಿ ಮೆಸೇಜ್‌ ಹಾಕ್ತೀನಿರು" ಎಂದ. ನಿನ್ನೆ ರಾತ್ರಿ ಆಸ್ಪತ್ರೆಯಲ್ಲೂ ನಿದ್ರೆ ನೆಟ್ಟಗೆ ಆಗಿರಲಿಲ್ಲ. ಇವತ್ತು ಬೆಳಿಗ್ಗೆಯಿಂದಲೂ ಕೆಲಸ ಕೆಲಸ. ಜೊತೆಗೆ ಸೋನಿಯಾ ಉಡುಗೊರೆಯಾಗಿ ಕೊಟ್ಟ ಮಾನಸಿಕ ಸುಸ್ತು. ಕಣ್ಣು ನಿದ್ರೆಯೆಡೆಗೆ ಎಳೆಯುತ್ತಿತ್ತು. ಮನಸ್ಸು ಸೋನಿಯಾಳ ವರ್ತನೆಗೆ ಕಾರಣವೇನಿರಬಹುದೆಂದು ಲೆಕ್ಕವಾಕುತ್ತಿತ್ತು. ಶಶಿ ಮೆಸೇಜು ಮಾಡುವಾಗ ನಾ ನಿದ್ರೆ ಹೋಗಿರಬಾರದಲ್ಲ. ಕಷ್ಟಪಟ್ಟು ಕಣ್ಣು ತೆರೆದುಕೊಂಡು ಕೆಲಸಕ್ಕೆ ಬಾರದ ಹಲವು ವಾಟ್ಸಪ್‌ ಗ್ರೂಪುಗಳಲ್ಲಿದ್ದ ಮೆಸೇಜುಗಳ ಮೇಲೆ ಕಣ್ಣಾಡಿಸುತ್ತಿದ್ದೆ. ಅರ್ಧ ಘಂಟೆಯಾದರೂ ಶಶಿಯ ಮೆಸೇಜ್ಯಾವುದೂ ಬರಲೇ ಇಲ್ಲ. ಮಲಗಿಬಿಟ್ನೋ ಏನೋ. 

ʻಮಲಗಿಬಿಟ್ಯಾ?ʼ ಎಂದು ಮೆಸೇಜು ಕಳಿಸಿದೆ. 

"ಇನ್ನೂ ಇಲ್ಲ" 

ʻಮತ್ತೆ ಮೆಸೇಜೇ ಇಲ್ಲʼ 

"ಬಿಡು. ನಾಳೆ ಮಾತನಾಡುವ". 

"ಏನಿಲ್ವಂತೆ ಕಣಕ್ಕ. ಅವಳೇನೋ ಯಾವ್ದೋ ಕೆಟ್ಟ ಮೂಡಲ್ಲಿ ಹಂಗ್‌ ಆಡಿದಳಂತೆ ಅಷ್ಟೇ" ಎಂಬ ಮೆಸೇಜು ನಿರೀಕ್ಷಿಸುತ್ತಿದ್ದವಳಿಗೆ "ಬಿಡು. ನಾಳೆ ಮಾತನಾಡುವ" ಎಂಬ ಸಾಲುಗಳು ಬರಲಿರುವ ಯಾವುದೋ ದುರಂತದ ಮುನ್ನುಡಿಯಂತೆ ಕಂಡಿದ್ದರಲ್ಲಿ ತಪ್ಪೇನಿದೆ. 

ʻಅದೇನ್‌ ಹೇಳೋ ಪರವಾಗಿಲ್ಲʼ 

"ನಿದ್ರೆ ಬರ್ತಿದೆ ಕಣಕ್ಕ. ನಾಳೆ ಮಾತನಾಡುವ ಬಿಡು" 

ʻಈಗ ನೀ ಏನಕ್ಕೆ ಸೋನಿಯಾ ನನ್ನ ಮೇಲೆ ಸಿಟ್ಟಾಗಿದ್ದಾಳೆ ಅಂತ ಹೇಳದೆ ಹೋದರೆ ತಕ್ಷಣವೇ ಆಸ್ಪತ್ರೆಗೆ ಬಂದುಬಿಡ್ತೀನಿ ನೋಡುʼ 

ಹೇಳಿದ್ದನ್ನು ನಾ ಮಾಡುವವಳೇ ಅಂತವನಿಗೆ ಗೊತ್ತೇ ಇತ್ತಲ್ಲ. "ಒಳ್ಳೇ ಚಿಕ್ಕ ಮಕ್ಕಳ ತರ ತಲೆ ತಿಂತೀಯಲ್ಲಕ್ಕ. ಅಂತದ್ದೇನಿಲ್ಲ ಅಂದ್ನಲ್ಲ. ನಾಳೆ ಬೆಳಿಗ್ಗೆಯವರೆಗೂ ಕಾದರಾಗದೆ" ಎಂದು ಬೇಡಿಕೊಂಡ. 

ʻಅಂತದ್ದೇನಿಲ್ಲದ ವಿಷಯವನ್ನ ಹೇಳಿಬಿಡೋಕೆ ಇಷ್ಟೆಲ್ಲ ಸತಾಯಿಸ್ತಿರೋದ್ಯಾಕೆ? ಹೇಳಿಬಿಡು ಈಗ್ಲೇʼ ಒಂದೆರಡು ನಿಮಿಷ ಅತ್ತ ಕಡೆಯಿಂದ ಯಾವುದೇ ಮೆಸೇಜು ಬರಲಿಲ್ಲ. ನನ್ನಲ್ಯಾಕೋ ಹೇಳತೀರದ ಚಡಪಡಿಕೆ. ಇನ್ನೊಂದೆರಡು ನಿಮಿಷ ನೋಡಿ ಫೋನ್‌ ಮಾಡೋದು. ಫೋನ್‌ ಕೂಡ ರಿಸೀವ್‌ ಮಾಡದೇ ಹೋದರೆ? ರಿಸೀವ್‌ ಮಾಡದೇ ಹೋದರೆ ಸೀದಾ ಎದ್ದು ʻಆಸ್ಪತ್ರೆಯಲ್ಲೊಂದು ಕೇಸಿನ ಸಲುವಾಗಿ ಹೋಗಿ ಬರ್ತೀನಿʼ ಅಂತ ಅಮ್ಮನಿಗಿನ್ನೊಂದು ಸುಳ್ಳು ಹೇಳಿ ಹೋಗಿ ಅದೇನು ಸಮಾಚಾರ ಅಂತ ವಿಚಾರಿಸಿಕೊಂಡು ಬರೋದು. ಈ ಸರಿ ಹೊತ್ತಿನಲ್ಲಿ ಅವರಿಬ್ಬರಿಗೆ ತೊಂದರೆ ಕೊಡುವುದು ಸರಿಯಾ? ಎಂಬ ಕಾಮನ್‌ ಸೆನ್ಸಿನ ಪ್ರಶ್ನೆ ಮನದಲ್ಲುಟ್ಟುತ್ತಲೇ ಮಣ್ಣು ಮಾಡಿಬಿಟ್ಟೆ. 

ಮತ್ತೆರಡು ನಿಮಿಷ ಕಳೆಯಿತು. ಇನ್ನೇನು ಫೋನ್‌ ಮಾಡೇಬಿಡುವುದೆಂದು ಕೊಂಡಾಗ ಶಶಿಯ ಮೆಸೇಜು ಬಂತು. 

"ರಾಮ್‌ಪ್ರಸಾದ್‌ ಯಾರು?" ಎಂದಷ್ಟೇ ಇತ್ತು ಪ್ರಶ್ನೆ. 

ʻನಿನಗೂ ಗೊತ್ತಲ್ಲ ಅವರು? ಮನೆಗೊಂದೆರಡು ಸಲ ಬಂದಿದ್ದೂ ಉಂಟಲ್ಲ. ರಾಜೀವ್‌ ಫ್ರೆಂಡು, ನನ್ನ ಕೊಲೀಗುʼ ಎಂದು ಟೈಪಿಸಿ ಕಳುಹಿಸಿದ ಮೇಲೆ ʻಅರೆರೆ ಇವನ್ಯಾಕೆ ಈ ಸರೊತ್ತಿನಲ್ಲಿ ಅದೂ ಸೋನಿಯಾಳ ಕೋಪದ ಕಾರಣವನ್ನೇಳುವ ಸಮಯದಲ್ಲಿ ರಾಮ್‌ಪ್ರಸಾದ್‌ ಬಗ್ಗೆ ಕೇಳ್ತಿದ್ದಾನೆ?ʼ ಎಂದನ್ನಿಸಿತು. 

"ಅಷ್ಟೇನಾ?" 

ʻಅಷ್ಟೇನಾ ಅಂದ್ರೆ?ʼ 

"ಬರೀ ನಿನ್ನ ಕೊಲೀಗ್‌ ಅಷ್ಟೇನಾ ಅಂದೆ" 

ʻಹೌದು. ಕೊಲೀಗು ಹೌದು. ಒಳ್ಳೇ ಫ್ರೆಂಡೂ ಹೌದುʼ 

"ಅಷ್ಟೇನಾ?" 

ʻಮತ್ತೇನು ಅಷ್ಟೇನಾ? ಏನಂತ ಸರಿ ಹೇಳಬಾರದಾ. ಈ ಒಗಟೊಗಟು ಮಾತುಗಳ್ಯಾಕೆ?ʼ 

"ಬರೀ ಫ್ರೆಂಡ್‌ ಅಷ್ಟೇನಾ ಅಂತ" 

ʻಹೌದು ಕಣಪ್ಪ. ಬರೀ ಫ್ರೆಂಡ್‌ ಅಷ್ಟೇʼ 

"ನಿಮ್ಮಾಸ್ಪತ್ರೆಯವರ್ಯಾಕೋ ನೀವಿಬ್ರು ಫ್ರೆಂಡ್ಸ್‌ ಅಷ್ಟೇ ಅಂತ ಅಂದ್ಕಂಡಿಲ್ಲ" 

ಓ! ಆಸ್ಪತ್ರೆಯಲ್ಲಿ ನಮ್ಮಿಬ್ಬರ ನಡುವೆ ಸಂಬಂಧವಿದೆ ಅನ್ನೋ ಮಾತುಗಳು ಹುಟ್ಟಿಕೊಂಡ ಸುದ್ದಿ ನನಗೂ ಗೊತ್ತೇ ಇತ್ತಲ್ಲ. ಸುಮಾಳೇ ಒಮ್ಮೆ ರೇಗಿಸಲೋಗಿ ಬಯ್ಯಿಸಿಕೊಂಡಿದ್ದಳಲ್ಲ ನನ್ನ ಕೈಲಿ. ಆ ವಿಷಯ ಇವರಿಗೇಗೆ? 

ʻಅಂದ್ರೆʼ 

"ರಾಮ್‌ ಬಂದಿದ್ರಂತೆ ಮಧ್ಯಾಹ್ನ ಸೋನಿಯಾಳನ್ನ ನೋಡಿಕೊಂಡು ಹೋಗೋಕೆ" 

ʻಹೌದಾ.... ಬೆಳಿಗ್ಗೆ ಸಿಕ್ಕಾಗೊಮ್ಮೆ ಹೇಳಿದ್ರು ಹೋಗಿ ಬರ್ತೀನಿ ಬಿಡುವಾದಾಗ ಅಂತ. ಅದರಲ್ಲೇನಿದೆʼ 

"ಅದರಲ್ಲೇನೂ ಇಲ್ಲ. ಅವರು ಹೋದ ಮೇಲೆ ಪಕ್ಕದ ಪೇಶೆಂಟ್‌ ಬಳಿ ಇದ್ದ ನರ್ಸು ʻಇವರ್ಯಾಕೆ ಬಂದಿದ್ದು?ʼ ಅಂತ ಮತ್ತೊಬ್ಬ ನರ್ಸನ್ನ ಕೇಳಿದಳಂತೆ. ʻಅವರುಡಿಗೆ ಧರಣಿ ಕಡೆಯೋರಲ್ವʼ ಅಂತ ಇನ್ನೊಂದು ನರ್ಸು ಕಿಸಿದಳಂತೆ. ʻಶ್‌ ಶ್.‌ ಮೆಲ್ಲಗೆ. ಪಕ್ಕದಲ್ಲಿ ಕೇಳಿಸೀತು ಮತ್ತೆʼ ಎಂದು ಎಚ್ಚರಿಕೆ ನೀಡಿದಳಂತೆ ಮೊದಲ ನರ್ಸು" 

ʻಅಯ್ಯೋ ಅಷ್ಟೇನಾ! ಅದನ್ನ ನನ್ನ ಬಳಿಯೇ ಕೇಳಬಹುದಿತ್ತಲ್ಲ ಸೋನಿಯಾನೇ! ಅಷ್ಟರಮಟ್ಟಿಗೆ ನಾನೂ ಸೋನಿಯಾ ಫ್ರೆಂಡ್ಸು ಅಂತ ನಂಬಿದ್ದೆ ನಾನುʼ 

"ಅಷ್ಟೇನಾ?" 

ʻನಾನೂ ನೀನೂ ಜೊತೇಲ್‌ ಹೋದ್ರೂ ಲವರ್ಸ್‌ ಇರಬಹುದೇನೋ ಅಂತಂದುಕೊಳ್ಳೋ ಸಮಾಜ ನಮ್ಮದು. ಬೇಸಿಕಲಿ ರಾಮ್‌ ರಾಜೀವನ ಫ್ರೆಂಡು. ಅವರ ಮುಖಾಂತರ ನನ್ನ ಫ್ರೆಂಡು. ಜೊತೆಗೊಂದು ಕಾಫಿ, ಸಿಕ್ಕಾಗ ಜೊತೇಲಿ ಕುಳಿತು ಕ್ಯಾಂಟೀನಿನಲ್ಲಿ ಊಟ ಮಾಡೋದಕ್ಕಷ್ಟೇ ನಮ್ಮ ಸ್ನೇಹವಿರೋದುʼ 

"ಮ್"‌ 

ʻಯಾಕಪ್ಪ ನಿಂಗೂ ನನ್ನ ಮೇಲೆ ಅನುಮಾನಾನ?ʼ 

"ಪೂರ್ತಿ ನಂಬೋದೇಗೆ ನಿನ್ನನ್ನ?" 

ʻಅಂದ್ರೆʼ 

"ಆರೇಳು ವರ್ಷ ಲವ್‌ ಮಾಡಿದ್ದ ಪುರುಷೋತ್ತಮನನ್ನೇ ಪೂರ್ಣ ಮರೆತುಬಿಟ್ಟು ಮತ್ತೊಬ್ಬನನ್ನು ಮದುವೆಯಾದವಳನ್ನು ಪೂರ್ತಿ ನಂಬುವುದಾದರೂ ಹೇಗೆ?" 

ʻಥ್ಯಾಂಕ್ಯುʼ ಎಂದೇಳುವುದನ್ನೊರತುಪಡಿಸಿ ಮತ್ತೇನನ್ನೂ ಹೇಳಲು ತೋಚಲಿಲ್ಲ. 

ನನ್ನ ತಮ್ಮ, ಮೊದಲ ದಿನದಿಂದ ನನ್ನ ಪರಶುವಿನ ಪ್ರೀತಿ, ಅವನ ಉನ್ಮಾದ, ಅವನ ಸಿಟ್ಟು, ಅವನು ನಡೆದುಕೊಳ್ಳುತ್ತಿದ್ದ ರೀತಿ, ನಮ್ಮಪ್ಪ ಅಮ್ಮನ ಸಿಟ್ಟು, ನಮ್ಮ ಮನೆಯಲ್ಲಿ ನನ್ನ ಮದುವೆಗೆ ಮುಂಚೆ ನಡೆದ ಪ್ರತಿ ಘಟನೆಯ ಬಗ್ಗೆಯೂ ಸವಿವರವಾಗಿ ತಿಳಿದುಕೊಂಡಿದ್ದ ನನ್ನ ತಮ್ಮನಿಗೇ ನನ್ನ ಮೇಲೆ ನಂಬಿಕೆಯಿಲ್ಲವೆಂದಾದ ಮೇಲೆ ನನ್ನನ್ನು ಕೆಲವು ವರುಷಗಳಿಂದ ಮೇಲ್ಮೇಲಾಗಿ ಅರಿತುಕೊಂಡಿರುವ ಸೋನಿಯಾಳಿಗೆ ನನ್ನ ಮೇಲೆ ನಂಬುಗೆಯ ಲವಲೇಶವಾದರೂ ಮೂಡುವುದು ಹೇಗೆ ಸಾಧ್ಯ? ಆರೂ ಚಿಲ್ಲರೆ ವರುಷದ ಪ್ರೀತಿಯನ್ನೇ ಮರೆತುಬಿಟ್ಟವಳು, ರಾಜೀವನ ಜೊತೆಗಿನ ಹೆತ್ತವರು ನಿರ್ಧರಿಸಿದ ಗಂಡಿನ ಜೊತೆಗಿನ ಸಂಬಂಧವನ್ನು ಮರೆಯದಿರುವಳೇ ಅಂತೆಲ್ಲ ಯೋಚಿಸುವಷ್ಟು ʻದೊಡ್ಡʼ ಮನುಷ್ಯನಾಗಿಬಿಟ್ಟನಾ ಶಶಿ? ಗಂಡು ಹೆಣ್ಣು ಸ್ನೇಹಿತರಾಗಿರುವುದೇ ಸಾಧ್ಯವಿಲ್ಲವಾ? ಕಣ್ಣೆವೆ ಮುಚ್ಚಿದರೆ ನಗುತ್ತಿದ್ದ ಸಾಗರನ ಮುಖವೆದುರಾಯಿತು. ಉಹ್ಞೂ... ನನ್ನನ್ನು ಕಂಡಾಗ ಮೂಡಿದ ಸಂತಸದ ನಗುವಲ್ಲವದು..... ನನ್ನ ಪರಿಸ್ಥಿತಿಯ ವ್ಯಂಗ್ಯಕ್ಕೆ ಹುಟ್ಟಿದ ನಗುವದು. ʻಒಂದು ಹುಡುಗ ಹುಡುಗಿ ಸ್ನೇಹಿತರಾಗಿರೋದು ಸಾಧ್ಯವೇ ಇಲ್ಲʼ ಸಾಗರನ ಮಾತು. ಅರೆ! ಇದೇನಿದು ತುಟಿ ಚಲನೆಯೆಲ್ಲ ಸಾಗರನದ್ದೇ ಹೌದು, ಆದರೆ ಧ್ವನಿ ಮಾತ್ರ ನನ್ನದು. ಹೌದು.... ನನ್ನದೇ ಧ್ವನಿ ಸಾಗರನ ಬಾಯಿಂದ. ಎಷ್ಟೋ ಸಹಸ್ರ ವರ್ಷಗಳ ಹಿಂದೆ ನಾನೇ ಸಾಗರನಿಗೆ ಹೇಳಿದ್ದ ಮಾತುಗಳಲ್ಲವೇ ಅವು....

ಮುಖಪುಟ ಚಿತ್ರ: ಚೇತನ ತೀರ್ಥಹಳ್ಳಿ. 
ಮುಂದುವರೆಯುವುದು

No comments:

Post a Comment