ಭಾನುವಾರ ಹತ್ತೂವರೆಗೆಲ್ಲ ರೆಡಿಯಾಗಿರಲು ಹೇಳಿದ್ದರು ರಾಮ್. ಅವರ ಕಾರಿನಲ್ಲೇ ಹುಡುಗಿ ಮನೆಗೆ ಹೊರಟೆವು. ನಮ್ಮ ಮನೆಯಿಂದ ಒಂದಿಪ್ಪತ್ತು ನಿಮಿಷದ ಹಾದಿ ಹುಡುಗಿಯ ಮನೆ. ಟೆರಿಶಿಯನ್ ಕಾಲೇಜಿನ ಬಳಿಯಿತ್ತು ಅವರ ಮನೆ. ಸ್ವಂತ ಮನೆ; ಮೊದಲ ಫ್ಲೋರಿನಲ್ಲಿ ಅವರಿದ್ದರು, ಕೆಳಗೊಂದು ಮನೆ ಬಾಡಿಗೆಗೆ ಕೊಟ್ಟಿದ್ದರು.
ʻಇನ್ನೇನು ಮದುವೆಯಾದ ಮೇಲೆ ಕೆಳ್ಗಡೆ ಮನೇಲೇ ಇರ್ಬೋದು ಬಿಡ್ರಿʼ ಅಂತ ರೇಗಿಸಿದೆ ಮನೆಯೊಳಗೋಗುವಾಗ.
"ಸುಮ್ನಿರಿ. ಮೊದಲು ಹುಡುಗಿ ನೋಡೋ ಶಾಸ್ತ್ರ ಮುಗಿಸಿ ಪಟ್ಟಂತ ಹೊರಟುಬಿಡುವ. ಫುಲ್ ಟೆನ್ಶನ್ ಆಗ್ತಿದೆ. ಯಾರಿಗ್ ಬೇಕ್ ಈ ಕರ್ಮವೆಲ್ಲ" ಎಂದೇಳುತ್ತಾ ಪ್ಯಾಂಟಿನ ಎಡಜೇಬಿನಲ್ಲಿದ್ದ ಕರ್ಚೀಫು ಹೊರತೆಗೆದು ಹಣೆ ಒರೆಸಿಕೊಂಡು ಬೆವೆತುಹೋಗಿದ್ದ ಹಸ್ತ ಒರೆಸಿಕೊಂಡರು. ನಮ್ಮಿಂದೆಯೇ ರಾಜೀವ್ ರಾಧಳನ್ನು ಎತ್ತಿಕೊಂಡು ಒಳಬಂದರು. ಬನ್ನಿ ಬನ್ನಿ ಕೂತ್ಕೊಳ್ಳಿ ಕೂತ್ಕೊಳ್ಳಿ ಅನ್ನೋ ಶಾಸ್ತ್ರವೆಲ್ಲ ಮುಗಿದು ನಾವು ಕುಳಿತುಕೊಂಡ ನಂತರ ಇವರ್ಯಾರು ಅನ್ನುವಂತ ಪ್ರಶ್ನೆಯನ್ನು ರಾಮ್ ಕಡೆಗೆಸೆದರು. ನನ್ನೆಡೆಗೆ ಕೈತೋರುತ್ತಾ "ಇವರು ನನ್ ಫ್ರೆಂಡ್ಸು. ಇವ್ರು ಧರಣಿ ಅಂತ, ನಮ್ ಆಸ್ಪತ್ರೆಯಲ್ಲೇ ಮಕ್ಕಳ ಡಾಕ್ಟರ್ರು. ಇವರವರ ಹಸ್ಬೆಂಡು, ರಾಜೀವ್ ಅಂತ. ಅವರ ಮಗಳು ರಾಧ ಪುಟ್ಟಿ". ಸರಿ ಸರಿಯೆಂಬಂತೆ ತಲೆಯಾಡಿಸಿದರು ಎಲ್ಲರೂ.
"ನೀವೆಲ್ಲಿ ಕೆಲಸ ಮಾಡೋದು" ಎಂದವರು ಹುಡುಗಿಯ ಚಿಕ್ಕಪ್ಪನೋ ಮಾವನೋ ಇರಬೇಕು.
ʻನಾನು ಇಲ್ಲೇ ಫಸ್ಟ್ ಹೆಲ್ತ್‌ನಲ್ಲಿದ್ದೀನಿʼ ಮಕ್ಕಳ ಡಾಕ್ಟರ್ ಆಗಿಲ್ಲ ಇನ್ನೂ ಓದ್ತಿದ್ದೀನಿ ಅಂತೆಲ್ಲ ಹೇಳಬೇಕೆಂದುಕೊಂಡವಳು ಅಷ್ಟೆಲ್ಲ ಪುರಾಣ ಇಲ್ಯಾಕೆ ಎಂದು ಸುಮ್ಮನಾದೆ.
"ನೀವೇನ್ ಮಾಡ್ಕಂಡಿದ್ದೀರಾ ಸರ್" ಎಂದು ರಾಜೀವನೆಡೆಗೆ ತೂರಿಬಂದ ಪ್ರಶ್ನೆ ಅವರಲ್ಲೊಂದಷ್ಟು ಮುಜುಗರ ಮೂಡಿಸಬಹುದೇನೋ ಅಂತ ನಿರೀಕ್ಷಿಸಿದ್ದು ತಪ್ಪಾಗಿತ್ತು.
ʻನಾನಿಲ್ಲೇ ಒಂದು ಫಾರ್ಮಸಿ ಕಂಪನಿಯಲ್ಲಿ ಚೀಫ್ ಎಕ್ಸಿಕ್ಯುಟೀವ್ ಆಗಿ ಕೆಲಸ ಮಾಡ್ತಿದ್ದೆ. ಈಗ ಸ್ವಂತದ್ದೇ ಬ್ಯುಸಿನೆಸ್ ಮಾಡುವ ಎಂದು ನಿರ್ಧರಿಸಿ ಕೆಲಸ ಬಿಟ್ಟಿದ್ದೀನಿ. ಬ್ಯುಸಿನೆಸ್ಸಿನ ರೂಪುರೇಷೆ ಮಾಡೋದ್ರಲ್ಲಿ ಬ್ಯುಸಿ ನೋಡಿ ಈಗ" ಎಂದು ನಕ್ಕರು. ಅಬ್ಬಬ್ಬ! ಇಷ್ಟು ಸಲೀಸಾಗಿ ಸುಳ್ಳೇಳುವುದನ್ಯಾವಾಗ ಕಲಿತರಿವರು. ಚೀಫ್ ಎಕ್ಸಿಕ್ಯುಟೀವ್ ಅಂತೆ! ಶಿವ ಶಿವಾ....
"ನಿಮ್ ತಂದೆ ತಾಯಿ ಬರಲಿಲ್ಲವೇನಪ್ಪ" ಹುಡುಗಿಯ ಅಪ್ಪ ಕೇಳಿದರು.
"ಇಲ್ಲಿಲ್ಲ. ಹೇಳಿದ್ನಲ್ಲ ಸರ್ ನಿಮಗಾಗಲೇ. ಹುಡುಗನ ಅಪ್ಪನಿಗೆ ಸಡನ್ನಾಗಿ ಪಾಪ ಹುಷಾರು ತಪ್ಪಿಬಿಟ್ಟಿದೆ. ಹಂಗಾಗಿ ಬರೋಕಾಗಲಿಲ್ಲ. ನಾನೇ ಬಲವಂತ ಮಾಡಿದೆ, ಬನ್ನಿ ನಿಮ್ಮ ಫ್ರೆಂಡ್ಸ್ ಜೊತೆ ಅಂತ. ಅದ್ರಲ್ಲೇನಿದೆ ಅಲ್ಲವ್ರಾ..." ಎಂದಿದ್ದು ಖಂಡಿತ ಬ್ರೋಕರ್ರೇ.
ಎಲ್ಲರೂ ಮುಖದ ಮೇಲೊಂದು ನಗು ತಂದುಕೊಂಡು ಹುಡುಗಿಯ ಬರುವಿಕೆಗಾಗಿ ಕಾಯುತ್ತಾ ಕುಳಿತೆವು.
ಹುಡುಗಿ ಮೂರು ರೌಂಡು ಬಂದು ಹೋದಳು. ಸ್ವೀಟು, ಖಾರ ಇದ್ದ ಪ್ಲೇಟುಗಳನ್ನಿಟ್ಟುಕೊಂಡೊಂದು ಸುತ್ತು, ಟೀಗೊಂದು ಸುತ್ತು, ಎಲ್ಲಾ ತಿಂದು ಕುಡಿದು ಮುಗಿದಾದ ಮೇಲೆ ವಾಪಸ್ಸು ತೆಗೆದುಕೊಂಡೋಗಲೊಂದು ಸುತ್ತು. ಮೂರು ಸುತ್ತಿನಲ್ಲೂ ಹುಡುಗ ಹುಡುಗಿಯ ನಡುವಿನ ದೃಷ್ಟಿಯುದ್ಧ ಪ್ರಯಾಸವಿಲ್ಲದೆ ನಡೆಯಿತು. ಕಣ್ಣುಗಳು ಎದುರಿಗಿರುವವರನ್ನು ಅಳೆಯುತ್ತಿರುವಾಗ ತುಟಿಗಳ ಮೇಲೊಂದು ಕಿರುನಗೆ ಮೂಡದೆ ಇರಲಿಲ್ಲ. ಇನ್ನೇನು ಫಿಕ್ಸೇ ಅಂದ್ಕೊಂಡೆ ಮನಸಲ್ಲಿ. ಇಬ್ರುದೂ ಹೈಟು ಪರ್ಸನಾಲಟಿ ಭರ್ಜರಿಯಾಗೇ ಇದೆ. ಒಳ್ಳೇ ಜೋಡಿಯಾಗ್ತದೆ.
ಮೂರು ಸುತ್ತಾದ ನಂತರ ಇನ್ನೇನು ಹೊರಡುವ ಎಂದುಕೊಳ್ಳುವ ಹೊತ್ತಿಗೆ ನಾಲ್ಕನೇ ಸುತ್ತಿಗೆ ಆಹ್ವಾನವಿತ್ತಿದ್ದು ಬ್ರೋಕರ್ ಮಹಾಶಯ. "ಕರೆಸಿ ಮಗಳನ್ನ. ಇಲ್ಲೇ ಕೂರಲಿ" ಎಂದವರ ಮಾತಿಗೆ ಒಪ್ಪದೇ ಇರುವುದೇಗೆ ಎಂದುಕೊಳ್ಳುತ್ತಲೇ ಒಲ್ಲದ ಮನಸ್ಸಿನಿಂದ ಕರೆದರು ಹುಡುಗಿಯ ಅಪ್ಪ. ಅವರಿಗ್ಯಾಕೋ ಮನೆಯವರ ಜೊತೆ ಬರದೆ ರಾಮ್‌ಪ್ರಸಾದ್ ಸ್ನೇಹಿತರ ಜೊತೆಗೆ ಬಂದಿದ್ದು ಸರಿಕಂಡಂತೆ ಕಾಣಲಿಲ್ಲ. ಹುಡುಗಿ ಬಂದು ಕೂತಳು. ಎಲ್ಲರೂ ಮೌನವಾಗುಳಿದಿದ್ದರು. ಇಂತಹ ಸನ್ನಿವೇಶದಲ್ಲಿ ಮೌನ ಹುಡುಗಿಗೆ ಯಮಹಿಂಸಾರೂಪಿ. ನೀವು ಎಲ್ಲಿ ಓದಿದ್ದು, ಯಾವ ಬ್ಯಾಚು ಅಂತ ಒಂದಷ್ಟು ಮಾತು ಶುರು ಮಾಡದೆ ಬೇರೆ ದಾರಿಯಿರಲಿಲ್ಲ ನನಗೆ. ಆ ಮಾತುಗಳನ್ನಾದರೂ ಎಷ್ಟು ಸಮಯವಂತ ಎಳೆಯುವುದಕ್ಕಾಗುತ್ತದೆ? ಸರಿ ಇನ್ನೇನು ಹೊರಡುವ ಎಂದು ಎರಡನೇ ಸಲ ಅಂದುಕೊಳ್ಳುವಾಗಲೇ ಬ್ರೋಕರ್ ಮಹಾಶಯ ಬಾಯ್ತೆರೆದ "ಹೋಗಿ ಹುಡುಗ ಹುಡುಗಿ ಒಂದಷ್ಟು ಮಾತಾಡ್ಕಂಡ್ ಬರೋಗಿ". ಥೂತ್ತೇರಿಕೆ! ಇನ್ನೂ ಒಂದಷ್ಟು ಹೊತ್ತು ಇಲ್ಲೇ ಕುಳಿತುಕೊಳ್ಳಬೇಕಲ್ಲಪ್ಪ ಅಂತ ಬಯ್ದುಕೊಂಡೆ. ಸೇಮ್ ಹಿಯರ್ ಅಂತ ರಾಜೀವ್ ಕಿಸಿದು ಕುಳಿತರು.
ದಾರೀಲಿ ಬರುವಾಗ ʻಮತ್ತೆ ಹುಡುಗಿ ಜೊತೆ ಏನೇನು ಮಾತಾಡ್ಬೇಕು ಅಂತೆಲ್ಲ ಪ್ರಶ್ನೆ ಉತ್ತರ ರೆಡೀನಾʼ ಅಂತ ಕೇಳಿದ್ದಕ್ಕೆ. "ಛೇ ಛೇ. ಇಲ್ಲಪ್ಪ. ಮಾತಾಡೋದೆಲ್ಲ ಏನೂ ಇಲ್ಲ ಇವತ್ತು. ಸುಮ್ನೆ ಹಿಂಗ್ ಹೋಗ್ ಹಂಗ್ ನೋಡ್ಕಂಡು ಬಂದುಬಿಡೋದು ಅಷ್ಟೇ" ಅಂತೇಳಿದ್ದ ರಾಮ್ ಹುಡುಗಿಯ ಜೊತೆ ಮಾತು ಶುರು ಮಾಡಿ ಐದು ನಿಮಿಷವಾಯಿತು, ಹತ್ತು ನಿಮಿಷವಾಯಿತು, ಹದಿನೈದು ನಿಮಿಷವಾಯಿತು ಪತ್ತೇನೇ ಇಲ್ಲ ಆಸಾಮಿ. ಅವರಿಬ್ಬರು ಏನೆಲ್ಲ ಮಾತಾಡ್ತಿರಬಹುದು ಎಂದು ಮನದಲ್ಲೇ ಲೆಕ್ಕ ಹಾಕುತ್ತಾ ಹಾಲಿನಲ್ಲಿ ಕುಳಿತಿದ್ದ ನಾವೆಲ್ಲರೂ ಉದಯ ಮೂವೀಸ್‌ನಲ್ಲಿ ಬರುತ್ತಿದ್ದ ಯಾವುದೋ ಒಂದು ಸಿನಿಮಾದ ಕಡೆ ಕಣ್ನೆಟ್ಟು ಸಲಾ ಸಲಾ ಟಿವಿಯ ಮೇಲಿದ್ದ ಗಡಿಯಾರದ ಕಡೆಗೋ, ಕೈಗಡಿಯಾರದ ಕಡೆಗೋ, ಮೊಬೈಲಿನ ಕಡೆಗೋ ಪದೇ ಪದೇ ನೋಡುತ್ತಾ ಇನ್ನೆಷ್ಟೊತ್ತು ಇನ್ನೆಷ್ಟೊತ್ತು ಅಂತ ಅಂದುಕೊಳ್ಳುತ್ತಿದ್ದೊ. ಹುಡುಗಿಯ ಮನೆಯಲ್ಲಿನ ನಮ್ಮ ಸಮಯವನ್ನು ಸುದೀರ್ಘಗೊಳಿಸಿದ ಕೀರ್ತಿಯನ್ನು ಗಳಿಸಿದ ಬ್ರೋಕರ್ರೇ ಕೊನೆಗೆ "ಸಾಕು ಬನ್ರಪ್ಪ. ಮುಂದಕ್ಕೂ ಒಂದಷ್ಟು ಮಾತಾಡೋಕ್ ವಿಷಯ ಉಳಿಸ್ಕಳ್ಳಿ" ಎಂದು ಜೋರಾಗಿ ಹೇಳಿದ ಮೇಲೆಯೇ ರೂಮಿನಿಂದ ಇಬ್ಬರೂ ಹೊರಬಂದಿದ್ದು. ಬರೋಬ್ಬರಿ ಮೂವತ್ತೈದು ನಿಮಿಷಗಳಾಗಿತ್ತು. ಇಬ್ಬರ ಮೊಗದಲ್ಲೂ ಒಪ್ಪಿಗೆಯ ನಗುವಿತ್ತಾ? ಇದ್ದಿರಬೇಕು. ಮೊದಲು ಇಲ್ಲಿಂದ ಹೋದರೆ ಸಾಕು ಎಂದು ಕಾಯುತ್ತಿದ್ದ ನನಗೆ ಆ ನಗುವಿನ ಅರ್ಥ ಭೇದಿಸುವ ಉತ್ಸಾಹವಿರಲಿಲ್ಲ ಅಷ್ಟೇ. ಬರ್ತೀವಿ ಬರ್ತೀವಿ ಅಂತೇಳಿ ಕೊನೆಗೂ ಹೊರಟೆವು.
"ಧರು... ವಿಷ್ಯ ಗೊತ್ತಾ.... ಇವತ್ ಬೆಳಿಗ್ಗೆ ಒಬ್ರು..... ಹುಡುಗಿ ಜೊತೆ ಮಾತಾಡೋದೇ ಇಲ್ಲಪ್ಪ ಅಂತ ಹೇಳ್ತಿದ್ರು" ಎಂದು ರೇಗಿಸಿದರು ರಾಜೀವ್.
ʻಓ! ನಿಮಗೂ ಹಂಗೇ ಕೇಳಿಸ್ತಾ? ಅದ್ ಹಂಗಲ್ವಂತೆ ಹುಡುಗಿ ಜೊತೆ ಮಾತಾಡದೆ ಬರೋದೇ ಇಲ್ಲಪ್ಪ ಅಂತ ಹೇಳಿರ್ಬೇಕು. ನಾವಿಬ್ರೇ ತಪ್ಪು ತಪ್ಪಾಗಿ ಕೇಳಿಸ್ಕೊಂಡಿರಬೇಕುʼ ಒಗ್ಗರಣೆ ಹಾಕದೆ ಇರಲಿಲ್ಲ ನಾನು.
"ಗಂಡ ಹೆಂಡತಿ ಇಬ್ರೂ ರೇಗ್ಸೋ ಚೆಂದ ನೋಡ್ರಪ್ಪ! ನಾನೇನ್ ನಾನಾಗಿ ಹೋದ್ನಾ? ಆ ಬ್ರೋಕರ್ ಕಳ್ಸಿದ್ದಕ್ಕೆ ಹೋಗಿದ್ದಪ್ಪ"
ʻಮ್. ಮ್. ಬ್ರೋಕರ್ ಬಲವಂತಕ್ಕೆ ಹೋಗಿದ್ರೆ ಐದು ನಿಮಿಷದಲ್ಲಿ ಬಂದುಬಿಡಬೇಕಿತ್ತಪ್ಪ!ʼ
"ಹ....ಹ......" ಎಂದು ನಕ್ಕು "ಊಟಕ್ಕೆ ಎಲ್ಲಿಗಾದರೂ ಹೋಗೋಣ್ವ?" ಮಾತು ಬದಲಿಸಲು ಪ್ರಯತ್ನಪಟ್ಟರು. ನಾವ್ ಗಂಡ ಹೆಂಡತಿ ಬಿಡಬೇಕಲ್ಲ.
"ಊಟ ಆಮೇಲೆ"
ʻಹೌದೌದು. ಊಟ ಆಮೇಲೆ. ಮೊದಲು ಹುಡುಗಿ ಜೊತೆ ಏನ್ ಮಾತಾಡಿದ್ರಿ ಹೇಳಿʼ
"ಇನ್ನೇನ್ರೀ ಮಾಮೂಲಿ"
"ಮಾಮೂಲಿ ಅಂದ್ರೆ"
"ಮಾಮೂಲಿ ಅಂದ್ರೆ ಮಾಮೂಲಿ. ನೀವಿಬ್ರು ಮೊದಲು ನೋಡ್ದಾಗ ಏನ್ ಮಾತಾಡಿದ್ರೋ ಅಷ್ಟೇ"
ʻರೀ...ನಮ್ದು ಲವ್ ಮ್ಯಾರೇಜು. ಅರೇಂಜ್ಡ್ ಮ್ಯಾರೇಜಲ್ಲ. ಹಂಗಾಗಿ ಏನೇನ್ ಮಾತಾಡ್ತಾರೋ ಗೊತ್ತಿಲ್ಲಪ್ಪ ನಮಗೆ. ಅಲ್ವೇನ್ರೀʼ
"ಹೌದೌದು"
"ಅಯ್ಯೋ ಮಾಮೂಲೀರಿ. ಎಲ್ಲೋದಿದ್ದು, ಏನೇನ್ ಹವ್ಯಾಸ ಮಣ್ಣು ಮಸಿ ಅಷ್ಟೇ"
"ಮಣ್ಣು ಮಸಿ ಅಂದ್ರೆ"
"ಅಯ್ಯೋ ಬಿಟ್ಬಿಡಿ ಬಾಸ್. ಅಷ್ಟೆಲ್ಲ ನೆನಪಿಲ್ಲ"
ʻಹ ಹ... ಹೋಗ್ಲಿ ಬಿಡಿ. ಇಷ್ಟವಾದ್ಲು ಅನ್ನಿ ಹುಡುಗಿʼ
"ಹು. ನನಗೇನೋ ಓಕೆ ಅನ್ಸುತ್ತಪ್ಪ. ಹುಡುಗೀನೂ ಒಪ್ಪಬೇಕಲ್ಲ"
ʻಹುಡುಗಿ ಒಪ್ಪಿದಂಗೇ ಕಾಣ್ತದೆ ನನಗೆʼ
"ನಂಗೂ ಹಂಗೇ ಅನ್ನಿಸ್ತದೆ. ಹುಡುಗ ಹುಡುಗಿ ಒಪ್ಪಿದ್ರೆ ಎಲ್ಲಿ ಮುಗೀತದೆ. ಇನ್ನೂ ನಿಮ್ಮ ಮನೆಯವರು ಒಪ್ಪಬೇಕು, ಅವರ ಮನೆಯವರು ಒಪ್ಪಬೇಕು. ನೀವೆಲ್ಲ ಒಪ್ಪಿ ದಬಾಕಿದ್ರೂ ಅದ್ಯಾವುದೋ ಗಣ, ಕೂಟ ಎಲ್ಲ ಒಪ್ಪಿಗೆ ಕೊಟ್ಟು ಸಾಯಬೇಕು. ಅದಾದ ಮೇಲಷ್ಟೇ ಮದುವೆ ಬಿಡಿ"
ʻಥೂ ನಿಮ್ಮ. ಇದ್ಯಾಕ್ರೀ ಅಪಶಕುನ ಮಾತಾಡ್ತೀರ. ಆಗ್ತದೆ ಬಿಡಿ ಅವೆಲ್ಲ ಅದರದರ ಪಾಡಿಗೆʼ ಎನ್ನುವಷ್ಟರಲ್ಲಿ ಕಾರಿನ ಎಸಿಗೆ ಸಿಕ್ಕಿಸಿದ್ದ ಮೊಬೈಲ್ ಹೋಲ್ಡರಿನಲ್ಲಿದ್ದ ರಾಮ್‌ಪ್ರಸಾದರ ಮೊಬೈಲಿಗೆ "ಇಟ್ ವಾಸ್ ನೈಸ್ ಟಾಕಿಂಗ್ ಟು ಯು" ಅಂತೊಂದು ಮೆಸೇಜಿನ ನೋಟಿಫಿಕೇಶನ್ ಬಂತು. ಮೆಸೇಜಿನ ಮೇಲೆ ವಿದ್ಯಾ ಎಂಬ ಹೆಸರಿತ್ತು. ಅಲ್ಲಿಗೆ ಮದುವೆ ಫಿಕ್ಸಾದಂತೆಯೇ. ಮೆಸೇಜು ನೋಟಿಫಿಕೇಶನ್ನಿನ ಮೇಲೆ ಕಣ್ಣಾಡಿಸಿದ್ದನ್ನು ರಾಮ್‌ಗೆ ಹೇಳಲೋಗಲಿಲ್ಲ. ಕದ್ದು ಮೆಸೇಜ್ ಓದೋ ಚಟ ಇದೆ ಅಂತ ತೋರಿಸ್ಕೊಳ್ಳೋದು ಚೆಂದದ ಸಂಗತಿಯೇನಲ್ಲವಲ್ಲ!
ಮುಖಪುಟ ಚಿತ್ರ: ಚೇತನ ತೀರ್ಥಹಳ್ಳಿ.
ಮುಂದುವರೆಯುವುದು
No comments:
Post a Comment