ಭಾನುವಾರ ಹತ್ತೂವರೆಗೆಲ್ಲ ರೆಡಿಯಾಗಿರಲು ಹೇಳಿದ್ದರು ರಾಮ್. ಅವರ ಕಾರಿನಲ್ಲೇ ಹುಡುಗಿ ಮನೆಗೆ ಹೊರಟೆವು. ನಮ್ಮ ಮನೆಯಿಂದ ಒಂದಿಪ್ಪತ್ತು ನಿಮಿಷದ ಹಾದಿ ಹುಡುಗಿಯ ಮನೆ. ಟೆರಿಶಿಯನ್ ಕಾಲೇಜಿನ ಬಳಿಯಿತ್ತು ಅವರ ಮನೆ. ಸ್ವಂತ ಮನೆ; ಮೊದಲ ಫ್ಲೋರಿನಲ್ಲಿ ಅವರಿದ್ದರು, ಕೆಳಗೊಂದು ಮನೆ ಬಾಡಿಗೆಗೆ ಕೊಟ್ಟಿದ್ದರು.
ʻಇನ್ನೇನು ಮದುವೆಯಾದ ಮೇಲೆ ಕೆಳ್ಗಡೆ ಮನೇಲೇ ಇರ್ಬೋದು ಬಿಡ್ರಿʼ ಅಂತ ರೇಗಿಸಿದೆ ಮನೆಯೊಳಗೋಗುವಾಗ.
"ಸುಮ್ನಿರಿ. ಮೊದಲು ಹುಡುಗಿ ನೋಡೋ ಶಾಸ್ತ್ರ ಮುಗಿಸಿ ಪಟ್ಟಂತ ಹೊರಟುಬಿಡುವ. ಫುಲ್ ಟೆನ್ಶನ್ ಆಗ್ತಿದೆ. ಯಾರಿಗ್ ಬೇಕ್ ಈ ಕರ್ಮವೆಲ್ಲ" ಎಂದೇಳುತ್ತಾ ಪ್ಯಾಂಟಿನ ಎಡಜೇಬಿನಲ್ಲಿದ್ದ ಕರ್ಚೀಫು ಹೊರತೆಗೆದು ಹಣೆ ಒರೆಸಿಕೊಂಡು ಬೆವೆತುಹೋಗಿದ್ದ ಹಸ್ತ ಒರೆಸಿಕೊಂಡರು. ನಮ್ಮಿಂದೆಯೇ ರಾಜೀವ್ ರಾಧಳನ್ನು ಎತ್ತಿಕೊಂಡು ಒಳಬಂದರು. ಬನ್ನಿ ಬನ್ನಿ ಕೂತ್ಕೊಳ್ಳಿ ಕೂತ್ಕೊಳ್ಳಿ ಅನ್ನೋ ಶಾಸ್ತ್ರವೆಲ್ಲ ಮುಗಿದು ನಾವು ಕುಳಿತುಕೊಂಡ ನಂತರ ಇವರ್ಯಾರು ಅನ್ನುವಂತ ಪ್ರಶ್ನೆಯನ್ನು ರಾಮ್ ಕಡೆಗೆಸೆದರು. ನನ್ನೆಡೆಗೆ ಕೈತೋರುತ್ತಾ "ಇವರು ನನ್ ಫ್ರೆಂಡ್ಸು. ಇವ್ರು ಧರಣಿ ಅಂತ, ನಮ್ ಆಸ್ಪತ್ರೆಯಲ್ಲೇ ಮಕ್ಕಳ ಡಾಕ್ಟರ್ರು. ಇವರವರ ಹಸ್ಬೆಂಡು, ರಾಜೀವ್ ಅಂತ. ಅವರ ಮಗಳು ರಾಧ ಪುಟ್ಟಿ". ಸರಿ ಸರಿಯೆಂಬಂತೆ ತಲೆಯಾಡಿಸಿದರು ಎಲ್ಲರೂ.
"ನೀವೆಲ್ಲಿ ಕೆಲಸ ಮಾಡೋದು" ಎಂದವರು ಹುಡುಗಿಯ ಚಿಕ್ಕಪ್ಪನೋ ಮಾವನೋ ಇರಬೇಕು.
ʻನಾನು ಇಲ್ಲೇ ಫಸ್ಟ್ ಹೆಲ್ತ್‌ನಲ್ಲಿದ್ದೀನಿʼ ಮಕ್ಕಳ ಡಾಕ್ಟರ್ ಆಗಿಲ್ಲ ಇನ್ನೂ ಓದ್ತಿದ್ದೀನಿ ಅಂತೆಲ್ಲ ಹೇಳಬೇಕೆಂದುಕೊಂಡವಳು ಅಷ್ಟೆಲ್ಲ ಪುರಾಣ ಇಲ್ಯಾಕೆ ಎಂದು ಸುಮ್ಮನಾದೆ.