May 4, 2020

ಒಂದು ಬೊಗಸೆ ಪ್ರೀತಿ - 63

ಸಿಸ್ಟರ್‌ ಹೋದ ಮೇಲೆ ಹೊರಗೆ ಬಂದು ನೋಡಿದೆ. ರಾಮ್ ಪ್ರಸಾದ್‌ ಅಲ್ಲೇ ಹೊರಗಿದ್ದ ಬೆಂಚಿನಂತ ಕುರ್ಚಿಯ ಮೇಲೆ ಕುಳಿತು ನಿದ್ರೆ ಹೋಗಿದ್ದರು. ಅಯ್ಯೋ ಪಾಪ, ಇವರ ಬಗ್ಗೆ ಸುಖಾಸುಮ್ಮನೆ ಮುನಿಸು ಬೆಳೆಸಿಕೊಂಡಿದ್ನಲ್ಲ. ರಾಜೀವನ ಜೊತೆ ಒಂದಷ್ಟು ಕುಡಿದಿರುವುದು ಬಿಟ್ಟರೆ ನಮಗಿರುವ ಪರಿಚಯ ಅಷ್ಟಕಷ್ಟೇ. ಆಸ್ಪತ್ರೆಯಲ್ಲಿ ಅಪರೂಪಕ್ಕೆ ಸಿಕ್ಕಾಗ ಒಂದು ನಗು, ಒಂದು ಹಾಯ್‌ ಹೊರತುಪಡಿಸಿದರೆ ಮಾತನಾಡಿದ್ದೂ ಇಲ್ಲ. ತೀರ ಇತ್ತೀಚೆಗೆ ನಮ್ಮ ಮನೆಯಲ್ಲೇ ಕುಳಿತು ಕುಡಿಯುತ್ತಿದ್ದುದನ್ನು ನೋಡಿ ಸಿಟ್ಟು ಬಂದ ಮೇಲೆ ಎದುರಿಗೆ ಸಿಕ್ಕಾಗ ಪರಿಚಯದ ನಗು ನಗುವುದನ್ನೂ ಕಡಿಮೆ ಮಾಡಿಬಿಟ್ಟಿದ್ದೆ. ಹತ್ತಿರ ಹೋಗಿ ʼರಾಮ್‌ಪ್ರಸಾದ್‌ʼ ಎಂದು ಕೂಗಿದೆ. ಅರೆನಿದ್ರೆಯಲ್ಲಿದ್ದರೆನ್ನಿಸುತ್ತೆ ಪಟ್ಟಂತ ಎದ್ದು ಬಿಟ್ಟರು. 

"ಈಸ್‌ ಎವೆರಿತಿಂಗ್‌ ಓಕೆ" ಎಂದವರ ದನಿಯಲ್ಲಿ ರಾಧಳ ಕುರಿತು ಕಾಳಜಿಯಿತ್ತು. 

ʼಹು. ಮಗಳು ಮಲಗಿದ್ದಾಳೆ. ಸಿಸ್ಟರ್‌ ಈಗಷ್ಟೇ ಮತ್ತೊಂದು ಡ್ರಿಪ್‌ ಬದಲಿಸಿ ಹೋದರು. ಪುಣ್ಯಕ್ಕೆ ಆಗಿಂದ ವಾಂತಿ ಭೇದಿಯಾಗಿಲ್ಲ. ಅಷ್ಟರಮಟ್ಟಿಗೆ ಹುಷಾರಾದಂತಿದ್ದಾಳೆʼ 

"ಗುಡ್‌ ಗುಡ್.‌ ಹೆಂಗೋ ಸರಿ ಹೋದರೆ ಸಾಕು. ಚಿಕ್ಕ ಮಕ್ಕಳು ಹುಷಾರು ತಪ್ಪಿದರೆ ವಿಪರೀತ ಗಾಬರಿಯಾಗ್ತದೆ" 

ʼಅದ್‌ ಹೌದು. ನೀವ್ಯಾಕೆ ಮನೆಗೆ ಹೋಗದೆ ಇಲ್ಲೇ ಕುಳಿತುಬಿಟ್ರಿʼ 

"ಅಯ್ಯೋ. ನೀವೂ ಒಬ್ಬರೇ ಇದ್ರಲ್ಲ. ಏನಾದ್ರೂ ಬೇಕಾದರೆ ಅಂತ ಇಲ್ಲೇ ಉಳಿದೆ" 

ʼಒಳಗೇ ಇನ್ನೊಂದು ಮಂಚವಿತ್ತಲ್ಲ. ಅಲ್ಲೇ ಮಲಗೋದಲ್ವʼ 

"ಹೇ ಇರಲಿ. ಪರವಾಗಿಲ್ಲ" 

ʼಈಗೇನು ಹುಷಾರಾಗಿದ್ದಾಳಲ್ವ. ನೀವ್‌ ಹೋಗಿ ಮನೆಗೆ. ವೃಥಾ ತೊಂದರೆಯಾಯಿತು ನಮ್ಮಿಂದ ನಿಮಗೆʼ 

"ಅಯ್ಯೋ. ತೊಂದರೆ ಏನಿದೆ. ಮನೆ ಎಲ್ಲಿದೆ. ನಾ ರೂಂ ಮಾಡಿಕೊಂಡಿರೋದು ಇಲ್ಲಿ" 

ʼಓʼ 

ಸಮಯ ನೋಡಿದರು. ಒಂದೂವರೆಯಾಗಿತ್ತು. "ಸರಿ ಆಗಿದ್ರೆ. ನಾ ರೂಮಿಗೆ ಹೋಗಿ ಬರ್ತೀನಿ. ಹೇಗೂ ಹುಷಾರಾಗಿದ್ದಾಳಲ್ಲ. ಏನಾದ್ರೂ ಇದ್ರೆ ಫೋನ್‌ ಮಾಡಿ. ಇಲ್ಲೇ ಕಾಲು ಘಂಟೆ ನನ್ನ ರೂಮಿರೋದು. ಪಟ್ಟಂತ ಬಂದುಬಿಡ್ತೀನಿ" 

ʼಖಂಡಿತ. ತುಂಬಾ ಥ್ಯಾಂಕ್ಸ್.‌ ತುಂಬಾ ಸಹಾಯವಾಯಿತು ನಿಮ್ಮಿಂದ ಇವತ್ತುʼ 

"ಬಿಡ್ರೀ! ಅದೆಷ್ಟ್‌ ಸಲ ಥ್ಯಾಂಕ್ಸ್‌ ಹೇಳ್ತೀರ!" 

ಹೋಗುವ ಮುಂಚೆ ರೂಮಿನೊಳಗೊಮ್ಮೆ ಬಂದು ರಾಧಳ ತಲೆ ಸವರಿ ಮುದ್ದಿಸಿ ಮತ್ತೊಮ್ಮೆ ಏನಾದ್ರೂ ಇದ್ರೆ ಫೋನ್‌ ಮಾಡಿ ಎಂದು ಹೇಳಿ ಹೊರಟರು. 

ಬೇಡ ಬೇಡ ಅಂದರೂ ರಾಜೀವನ ನೆನಪಾಯಿತು. ಬರಲೇ ಇಲ್ಲವಲ್ಲ. ಹೋಗ್ಲಿ, ಕುಡಿದುಬಿಟ್ಟಿದ್ರು…ಅಲ್ಲಿದ್ದೋರೆಲ್ಲ ಕುಡಿದು ಬಿಟ್ಟಿದ್ರು ಅಂದ್ಕೊಂಡ್ರು ಒಂದು ಫೋನ್‌ ಮಾಡಿ ವಿಚಾರಿಸೋದಕ್ಕೂ ಆಗಲಿಲ್ಲವಾ? ಅವರ ಮನೆಯವರಿಗೆ ಫೋನ್‌ ಮಾಡಿ ಹಿಂಗಿಂಗೆ ಅಂತ ಹೇಳಿದ್ದರೆ ಬರದೇ ಇರುತ್ತಿದ್ದರಾ? ನಾನೇ ಫೋನ್‌ ಮಾಡಬಹುದಿತ್ತಾ? ಸರಿಯಾಗಿ ನೋಡಿದರೆ ಮಾಡಬೇಕಿತ್ತು. ಮೊಮ್ಮಗಳಿಗೆ ಹುಷಾರಿಲ್ಲದ ವಿಷಯವನ್ನು ಅವರಜ್ಜ ಅಜ್ಜಿಗೆ ತಿಳಿಸುವುದು ನನ್ನ ಕರ್ತವ್ಯವೂ ಹೌದೇ ಅಲ್ಲವಾ? ಹೌದು, ಆದರೆ ಅವರು ಅದೆಷ್ಟು ಆಸ್ಥೆಯಿಂದ ನನ್ನ ಮಗಳನ್ನು ನೋಡಿಕೊಂಡಿದ್ದಾರೆ? ಬಾಯಿಮಾತಿಗೂ ಅಮ್ಮನ ಮನೆಯಲ್ಲೇ ಎಷ್ಟು ದಿನ ಇರ್ತೀರಾ? ಇಲ್ಲೇ ಬನ್ನಿ, ನಾವಿದ್ದೀವಲ್ಲ ನೋಡಿಕೊಳ್ಳೋಕೆ ಅಂತ ಹೇಳಲಿಲ್ಲ. ಇಲ್ಲಿಗೆ ಬಂದಾಗಲೂ ಇವಳನ್ನು ಎತ್ತಿ ಮುದ್ದಾಡಿಸಿದ್ದು ಅಷ್ಟರಲ್ಲೇ ಇದೆ. ಮುಂಚೆಯೆಲ್ಲ ಮಗು ಆಗಲಿಲ್ಲ ಮಗು ಆಗಲಿಲ್ಲ ಅಂತ ಗೊಣಗಾಟ ಇರುತ್ತಿತ್ತು. ಈಗ ಮಗ ಆಗಲಿಲ್ಲ ಮಗ ಆಗಲಿಲ್ಲ ಅಂತ ಗೊಣಗಾಟ. ಒಂದೆರಡು ಸಾರಿ ನನ್ನ ಕಿವಿಗೇ ಬಿದ್ದಿತ್ತಲ್ಲ ಇವರಮ್ಮ ಇವರಕ್ಕ ಮಗಳು ಹುಟ್ಟಿದ್ದಕ್ಕೆ ಆಡಿಕೊಂಡಿದ್ದು. ನೇರವಾಗಿ ಹೇಳಿರಲಿಲ್ಲವೆಂದು ನಾನೂ ಜಗಳಕ್ಕೆ ಹೋಗಲಿಲ್ಲ. ಇನ್ನೊಂದು ವರುಷದ ನಂತರ ಮತ್ತೆ ಇವರುಗಳ ವರಾತ ಶುರುವಾಗುತ್ತದೆ. ಬರೀ ಹೆಣ್‌ಮಗು ಸಾಕಾ? ಒಂದ್‌ ಗಂಡ್‌ ಮಾಡ್ಕಳ್ಳಿ ಅಂತ. ಒಂದ್‌ ಮಗು ಆಗೋಕೇ ಇಷ್ಟು ಶ್ರಮ ಬಿದ್ದಿದ್ದಾಯ್ತು. ಇನ್ನು ಇನ್ನೊಂದು ಮಗು ಮಾಡ್ಕೊಳ್ಳೋ ಸಹವಾಸವೇ ಬೇಡಪ್ಪ. 

ಮತ್ತೆ ನಿದ್ರೆ ಹತ್ತಲಿಲ್ಲ. ಸುಮ್ಮನೆ ಯೋಚನೆಗಳು ಕರೆದುಕೊಂಡು ಹೋದತ್ತ ಹೋಗುತ್ತ ಬೆಳಕು ಹರಿಯುವುದನ್ನು ಕಾದೆ. ಇವತ್ತು ಮತ್ತೆ ರಜೆ ಕೇಳಿಕೊಳ್ಳಬೇಕು. ಹೆಂಗೋ ರಾತ್ರಿಯಿಂದ ವಾಂತಿ ಭೇದಿ ಕಡಿಮೆಯಾಗಿದೆ. ಇವತ್ತೊಂದಷ್ಟು ತಿನ್ನಲು ಶುರುಮಾಡಿದರೆ ಸಾಕು, ಹುಷಾರಾಗೋಗ್ತಾಳೆ. ಘಂಟೆ ಆರಾಗಿತ್ತು. ರಾಜೀವ್‌ ಎದ್ದಿರ್ತಾರೇನೋ, ಒಂದು ಫೋನ್‌ ಮಾಡಿದರೆ ಹೇಗೆ ಎಂದು ಫೋನೆತ್ತಿಕೊಂಡವಳು..... ಅವರಿಗೇ ಆಸ್ಥೆಯಿಲ್ಲದ ಮೇಲೆ ನಾನ್ಯಾಕೆ ಫೋನ್‌ ಮಾಡಲಿ ಎಂದುಕೊಳ್ಳುತ್ತಾ ಅಮ್ಮನಿಗೆ ಫೋನ್‌ ಮಾಡಿದೆ. ಬೆಳಗಿನ ಜಾವಕ್ಕೆಲ್ಲ ಮನೆ ತಲುಪಿರಬಹುದು ಅವರು. ನಿನ್ನೆಯೇ ಫೋನ್‌ ಮಾಡುವವಳಿದ್ದೆ. ದಾರೀಲ್‌ ಬರ್ತಿರ್ತಾರೆ. ಸುಮ್ಮನೆ ಯಾಕೆ ಅವರಿಗೆ ವಿಷಯ ತಿಳಿಸಿ ಆತಂಕಕ್ಕೊಳಪಡಿಸುವುದು ಅಂತ ಮಾಡಲಿಲ್ಲ. 

ನಿದ್ರೆಯಲ್ಲಿದ್ದಳೇನೋ ಅಮ್ಮ. ಗೊಣಗಿಗೊಳ್ಳುತ್ತಲೇ ಫೋನ್‌ ಎತ್ತಿಕೊಂಡಿರುತ್ತಾಳೆ. 

"ಹೇಳೇ ಅಂದರು" 

ಹಿಂಗಿಂಗಾಯ್ತು. ಪ್ರಶಾಂತ್‌ ನರ್ಸಿಂಗ್‌ ಹೋಮಿನಲ್ಲಿದ್ದೀನಿ ಅಂದೆ. ನಿದ್ರೆ ಹಾರಿ ಹೋಗಿತ್ತು. "ಅಯ್ಯೋ ನಿನ್ನ. ಫೋನ್‌ ಮಾಡೋದಲ್ವ ಮತ್ತೆ ನಿನ್ನೇನೆ. ನಾವು ಬೇಗ ಹೊರಟೋ ಸಿಗಂದೂರಿನಿಂದ. ಹನ್ನೊಂದು ಹನ್ನೊಂದೂವರೆಗೆಲ್ಲ ಮನೆಗೆ ಬಂದುಬಿಟ್ಟಿದ್ದೊ. ತಡಿ. ಪಟ್ಟಂತ ಬರ್ತೀನಿ" 

ʻಸರಿ ಬನ್ನಿ. ಆರಾಮಾಗೇ ಬನ್ನಿ. ಈಗ ಹುಷಾರಾಗಿದ್ದಾಳೆ. ಆತುರವೇನು ಇಲ್ಲ" 

"ರಾಜೀವ ಅಲ್ಲೇ ಇದ್ದಾರಾ?" 

ʻಇಲ್ಲʼ 

"ಸರಿ. ಇವರಿಗೆ ತಿಂಡಿ ಮಾಡಿಟ್ಟು, ನಿನಗೂ ತಕಂಡು ಬರ್ತೀನಿ. ರಾಧಂಗೆ ಗಂಜಿಯೇನಾದ್ರೂ ತರ್ಲಾ?" 

ʻಹು. ತಗಂಡ್‌ ಬನ್ನಿ. ಸ್ವಲ್ಪ ತನ್ನಿ ಸಾಕುʼ 

ಆರೂವರೆಯಷ್ಟೊತ್ತಿಗೆ ಮತ್ತೊಂದು ಪ್ಯಾಕೆಟ್‌ ತಿಂಡಿಯನ್ನಿಟ್ಟುಕೊಂಡು ರಾಮ್‌ಪ್ರಸಾದ್‌ ಬಂದರು. 

ʻಅಯ್ಯೋ! ಇದ್ಯಾಕ್‌ ತರೋಕೋದ್ರಿ. ಅಮ್ಮ ಬರೋರಿದ್ರು ಈಗʼ 

"ಹೌದಾ. ನಾನೆಲ್ಲೋ ಅವರಿರಲಿಲ್ಲ ಅಂದುಕೊಂಡು ತಂದೆ. ಇದು ನಮ್‌ ಮೆಸ್ದು. ಮನೆ ತಿಂಡಿ ತರಾನೇ ಇರುತ್ತೆ ತಗೊಳಿ" 

ʻಇಲ್ಲ. ಇರಲಿಲ್ಲ ಅವರು. ಎಲ್ಲಾ ಊರಿಗೆ ಹೋಗಿದ್ದರು. ಬೆಳಿಗ್ಗೆ ಬಂದಿದ್ದಾರೆ. ಬರ್ತಾರೆ ಈಗʼ 

"ಹಂಗಾದ್ರೆ ಒಳ್ಳೇದು. ರಾಜೀವ್‌ ಬಂದ್ರಾ?" 

ʻಬರೋದಾ? ಬರೋದ್‌ ಹಾಳಾಗ್‌ ಹೋಗ್ಲಿ. ಒಂದ್‌ ಫೋನ್‌ ಕೂಡ ಮಾಡಿ ವಿಚಾರ್ಸಿಲ್ಲ ನಿಮ್‌ ಫ್ರೆಂಡುʼ ಸಿಟ್ಟು ತೋರಿಸಿಕೊಳ್ಳದೆ ಇರೋದಿಕ್ಕಾಗಲಿಲ್ಲ. 

"ಸಾರಿ. ಕೇಳ್ಬಾರ್ದಿತ್ತೇನೋ" 

ʻಪರವಾಗಿಲ್ಲ. ಅದರಲ್ಲೇನಿದೆ. ಫ್ರೆಂಡ್‌ ಹತ್ರ ಕಷ್ಟ ಹೇಳ್ಕೊಳ್ಳದೆ ಇನ್ಯಾರತ್ರ ಹೇಳ್ಕೋಳ್ಳೋಕ್‌ ಆಗುತ್ತೆ ಹೇಳಿʼ ಫ್ರೆಂಡ್‌ ಅಂದಿದ್ದಕ್ಕೆ ಖುಷಿ ಪಟ್ಟರು. 

"ಎಲ್ಲೋ ಬ್ಯುಸಿ ಆಗಿಬಿಟ್ಟರೇನೋ. ಬರ್ತಾರೆ ಬಿಡಿ" 

ʻಎಲ್ಲೋ ಬ್ಯುಸಿ ಆಗಿಲ್ಲ. ಕುಡಿತದಲ್ಲಿ ಬ್ಯುಸಿ ಆಗಿದ್ದಾರೆ ಅಷ್ಟೇ. ನಿಮ್ಮ ಗಂಡಸರಿಗೆ ಇನ್ನೇನು ಕೆಲಸ ಹೇಳಿʼ 

"ಹೆ ಹೆ. ನಾನಷ್ಟೆಲ್ಲ ಕುಡಿಯೋದಿಲ್ಲ ರೀ. ಏನೋ ಅಪರೂಪಕ್ಕಷ್ಟೇ" 

ʻಮತ್ತೆ ಯಾರ್ಯಾರ್ದೋ ಮನೆಯಲ್ಲಿ ಕುಳಿತು ಕುಡೀತಿದ್ರಿʼ 

ಮುಖ ಚಿಕ್ಕದಾಯಿತು. ʻಸಾರಿ. ಟು ಬಿ ಫ್ರ್ಯಾಂಕ್‌ ಅವತ್ತು ನಿಮ್ಮನ್ನು ಮತ್ತೆ ಅದ್ಯಾರೋ ನಿಮ್ಮ ಕೊಲೀಗನ್ನು ನಮ್ಮ ಮನೆಯಲ್ಲಿ ಕಂಡು ನಿಜಕ್ಕೂ ಇರಿಟೇಟ್‌ ಆಗಿತ್ತು ನನಗೆʼ 

"ಗೊತ್ತು. ಅದಾದ ಮೇಲೆ ನನ್ನ ಕಡೆಗೆ ನೋಡುತ್ತಲೂ ಇರಲಿಲ್ಲ ನೀವು ಆಸ್ಪತ್ರೆಯಲ್ಲಿ" 

ʻಮ್‌ʼ 

"ನಿಮ್ಮದೇನೂ ತಪ್ಪಿಲ್ಲ ಬಿಡಿ. ನೀವ್‌ ನಿಮ್ಮ ಹಸ್ಬೆಂಡ್ಗೆ ಹೇಳಬಾರದು. ಅವತ್ತು ನಿಮ್ಮ ಮನೆಗೆ ಬರೋಕೆ ನನಗಂತೂ ಸುತಾರಾಂ ಇಷ್ಟವಿರಲಿಲ್ಲ. ಮನೇಗ್‌ ಯಾಕೆ, ಬನ್ನಿ ನನ್ನದೇ ರೂಮಿದೆ, ಅಲ್ಲಿಗೇ ಹೋಗೋಣ ಅಂತ ಸುಮಾರು ಸಲ ಕೇಳಿಕೊಂಡೆ. ಒಪ್ಪಲಿಲ್ಲ. ನಡೀರಿ ಮನೆಗೆ ನಡೀರಿ ಮನೆಗೆ ಅಂತ ಬಲವಂತದಿಂದ ಕರೆದುಕೊಂಡು ಹೋದರು" 

ʻಅದ್‌ ಗೊತ್ತು ಬಿಡಿ ನನಗೆ. ಅಂದ್ರೂ ಅದೆಂಗೆ ನೀವೂ ರಾಜೀವು ಅಷ್ಟು ಬೇಗ ಹತ್ತಿರದವರಾಗಿ ಹೋದಿರಿʼ 

"ಅದ್‌ ಹಂಗೆ. ರಾಜೀವ್‌ ಡೌನ್‌ ಟು ಅರ್ಥ್‌ ಮನುಷ್ಯ. ತುಂಬಾ ಸಿಂಪಲ್‌ ವ್ಯಕ್ತಿ. ತುಂಬಾ ಬೇಗ ಸುತ್ತಲಿರುವವರನ್ನ ಹತ್ತಿರದವರನ್ನಾಗಿ ಮಾಡಿಕೊಂಡುಬಿಡ್ತಾರೆ" 

ಮೂರೊತ್ತೂ ದುಡ್ಡು ದುಡ್ಡು ಅನ್ನೋರು ಸಿಂಪಲ್ಲಾ?! ಹತ್ತಿರದವರಾದ ನಮ್ಮನ್ನೇ ದೂರ ಮಾಡ್ತಿದ್ದಾರೆ.... ಇವರ ಬಾಯಲ್ಲಿ ನೋಡಿದ್ರೆ ಇಂತ ಹೊಗಳಿಕೆ! ಏನೇನ್‌ ನಾಟಕಾನಪ್ಪ ಜನಗಳದ್ದು! 

ʻನೋಡಿ. ನಿಮ್‌ ಡೌನ್‌ ಟು ಅರ್ಥ್‌ ಮನುಷ್ಯ ಮಗಳಿಗೆ ಹಿಂಗಾಗಿದ್ರೂ ಇನ್ನೂ ಪತ್ತೇನೇ ಇಲ್ಲʼ 

"ಇಲ್ಲ ರೀ. ನನಗೆ ಫೋನ್‌ ಮಾಡಿದಾಗ ವಿಪರೀತ ಗಾಬರಿಯಲ್ಲಿದ್ದರು. ಏನೋ ಪಾಪ ಕುಡಿದು ಬಿಟ್ಟಿದ್ರಂತೆ. ಅಲ್ಲಿದ್ದವರೆಲ್ಲ ಕುಡಿದಿದ್ದರಂತೆ. ಗಾಡಿ ಓಡಿಸುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲವಂತೆ. ಹಂಗಾಗಿ ಬರೋಕಾಗ್ತಿಲ್ಲ. ನೀವ್‌ ಹೋಗಿ ನೋಡ್ತೀರಾ ಅಂತ ಕೇಳ್ಕಂಡರು. ನಾನೇ ಬಂದು ಕರ್ಕಂಡ್‌ ಬರ್ಲಾ ಹೆಂಗೆ ಅಂದಿದ್ದಕ್ಕೆ ʻಬೇಡ ಬೇಡ. ಅಲ್ಲಿ ಯಾರಾದ್ರೂ ಇರೋದು ಇಂಪಾರ್ಟೆಂಟು. ನಮ್ಮಪ್ಪ ಅಮ್ಮ, ನಮ್ಮತ್ತೆ ಮಾವ ಎಲ್ರೂ ಹೊರಗೆ ಟ್ರಿಪ್ಪಿಗೆ ಹೋಗಿಬಿಟ್ಟಿದ್ದಾರೆ. ಇಲ್ಲಾಂದ್ರೆ ನಿಮಗೆ ತೊಂದರೆ ಕೊಡುತ್ತಿರಲಿಲ್ಲʼ ಅಂದರು ಪಾಪ" 

ʼಅವರಪ್ಪ ಅಮ್ಮ ಕೂಡ ಟ್ರಿಪ್ಪಿಗೆ ಹೋಗಿದ್ದರಂತʼ 

"ಹು" 

ʻಸರಿ ಸರಿʼ ಎಂದು ಮುಗುಳ್ನಕ್ಕೆ. ನಗುವಿನ ಅರ್ಥ ಅವರಿಗೂ ಆಗಿರಬೇಕು. 

"ಹೋಗ್ಲಿ ಬಿಡಿ. ಮನೆ ಅಂದ ಮೇಲೆ ಸಾವಿರ ಸಂಗತಿ ಇರ್ತವೆ" ಎಂದವರೇ ಸಮಾಧಾನ ಮಾಡಿದರು. 

ನಮ್ಮ ಮಾತುಕತೆ ಮುಗಿಯುವಷ್ಟರಲ್ಲಿ ಅಪ್ಪ ಅಮ್ಮ ಬಂದರು. ಒಂದಷ್ಟು ಉಪ್ಪಿಟ್ಟು ರವೆ ಗಂಜಿ ತಂದಿದ್ದರು. ರಾಮ್‌ಪ್ರಸಾದ್‌ ಅನ್ನು ಪರಿಚಯಿಸಿದೆ. "ಗೊತ್ತಲ್ಲ! ಬಂದಿದ್ರಲ್ಲ ರಾಧಳ ನಾಮಕರಣಕ್ಕೆ" ಎಂದರು ಅಪ್ಪ. ಅಮ್ಮನಿಗೆ ನೆನಪಿರಲಿಲ್ಲ. ನೆನಪಿಸಿಕೊಳ್ಳುವಷ್ಟು ವ್ಯವಧಾನವೂ ಅವರಿಗಿರಲಿಲ್ಲ. ನನ್ನ ಕೈಗೆ ಬುಟ್ಟಿಯನ್ನು ಕೊಟ್ಟಿದ್ದೇ ರಾಧಳತ್ತ ಅಕ್ಷರಶಃ ನುಗ್ಗಿದರು. ಆಗಷ್ಟೇ ನಿದ್ರೆಯಿಂದೆದ್ದಿದ್ದ ರಾಧ ಅಜ್ಜಿಯ ಮುಖವನ್ನು ಕಂಡು ಮುಖದ ತುಂಬಾ ನಗು ತುಂಬಿಕೊಂಡಳು. ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿದ್ದ ಮಗುವಿನ ಮುಖದಲ್ಲಿ ನಗು ಮೂಡಿತೆಂದರೆ ಖಾಯಿಲೆ ವಾಸಿಯಾಗುತ್ತಿದೆಯೆಂದೇ ಅರ್ಥ. 

"ಸರಿ ಧರಣಿ. ನಾನಿನ್ನು ಹೊರಡ್ತೀನಿ. ಆಸ್ಪತ್ರೆಯಲ್ಲಿ ಒಂದಷ್ಟು ಹೆಚ್ಚು ಕೆಲಸಗಳಿದೆ ಇವತ್ತು. ನೀವು ರಜೆ ಹೇಳಿದ್ರಾ?" 

ʻಹು. ಸರ್‌ಗೆ ಮೆಸೇಜ್‌ ಮಾಡ್ದೆ. ಓಕೆ ಅಂತಂದ್ರುʼ 

"ಗುಡ್" ಅಪ್ಪ ಅಮ್ಮನಿಗೆ ಕೇಳದಂತೆ ಮೆಲ್ಲಗೆ "ದುಡ್ಡೇನಾದ್ರೂ ಕೊಟ್ಟಿರ್ಲಾ? ಇಲ್ಲಾ ಕಾರ್ಡ್‌ ಕೊಟ್ಟಿರ್ಲಾ?" ಎಂದರು. 

ʻತುಂಬಾ ಥ್ಯಾಂಕ್ಸ್‌ ರಾಮ್‌. ಅಪ್ಪ ಅಮ್ಮ ಬಂದ್ರಲ್ಲ. ಇನ್ನು ಇವರೂ ಬರ್ತಾರೆʼ 

"ಹಾಗಿದ್ರೆ ಸರಿ. ಏನಾದ್ರು ಇದ್ರೆ ಫೋನ್‌ ಮಾಡಿ. ಬರ್ತೀನಿ ನಾನು" ಅಪ್ಪ ಅಮ್ಮನಿಗೊಂದು ಬಾಯ್‌ ಹೇಳಿ ರಾಧಳಿಗೊಂದು ಬಾಯ್‌ ಹೇಳಿ ಹೊರಟರು. ಅವರು ಹೊರಡುವುದನ್ನೇ ಕಾಯುತ್ತಿದ್ದಂತೆ ಅಮ್ಮನ ಬಾಯ್ದೆರಿಯಿತು "ಬಡ್ಕಂಡೆ ಅಷ್ಟು ದೂರ ಮಗಳನ್ನು ಕರ್ಕಂಡು ಹೋಗ್ಬೇಡಿ ಅಂತ. ನಿಮ್ಮಿಬ್ಬರ ಟ್ರಿಪ್‌ ಚಟಕ್ಕೆ ಪಾಪ ಮಗು ಅನುಭವಿಸುವಂಗಾಯ್ತು. ಅಷ್ಟು ದಿನದಿಂದ ನೋಡ್ಕಂಡಿದ್ದೀನಿ ನಾನು. ಒಂದು ದಿನಕ್ಕಾದ್ರೂ ಆಸ್ಪತ್ರೆ ಮುಖ ತೋರಿಸುವಂತೆ ಮಾಡಿದ್ನ. ಟ್ರಿಪ್‌ ಮುಗಿಸಿ ಬಂದ್‌ ಮೇಲೆ ಇಳಿ ತೆಗ್ದಾ? ತೆಗ್ದಿರಲ್ಲ. ಅಷ್ಟು ಜನರ ಕಣ್‌ ಬಿದ್ದ ಮೇಲೆ ಹಿಂಗ್‌ ಹುಷಾರ್‌ ತಪ್ದೆ ಇರ್ತದಾ? ಒಂದ್‌ ಮಗು ನೋಡ್ಕೊಳ್ಳೋಕ್‌ ಬರಲ್ಲ. ಅದ್ಯಾವ್‌ ಸೀಮೆ ಮಕ್ಳು ಡಾಕ್ಟ್ರಾಗ್ತೀಯೋ ನೀನು. ಪಾಪ ಮಗ ಅದೆಷ್ಟು ಸೊರಗೋಗದೆ ಎರಡೇ ಎರಡು ದಿನಕ್ಕೆ......" ಇನ್ನೂ ಮುಂದುವರಿಯುತ್ತಿತ್ತೇನೋ ಅಪ್ಪ "ಇದ್‌ ಆಸ್ಪತ್ರೆ ಅಂತಾನೂ ನೋಡ್ದೇ ಕುಯ್ತಾ ಇದ್ದೀಯಲ್ಲ. ಸಾಕ್‌ ಮಾಡು. ಏನ್‌ ನಿನ್‌ ಮಕ್ಳು ಒಂದ್‌ ದಿನಕ್ಕೂ ಹುಷಾರು ತಪ್ಪಿ ಮಲಗೇ ಇರಲಿಲ್ವ" ಅಂತ ರೇಗದೇ ಹೋಗಿದ್ದರೆ. 

"ನಾನ್‌ ಮಾತಾಡುದ್ರೆ ಆಗಲ್ಲ ನಿಮ್ಗಳಿಗೆ" ಎಂದು ಮುಖ ತಿರುಗಿಸಿಕೊಂಡರು. 

ಅಮ್ಮನ ಬಳಿ ಹೋಗಿ ಅವರ ತೋಳು ತಬ್ಬಿ ʻಹೋಗ್ಲಿ ಬಿಡಮ್ಮ. ಸಾರಿ. ನಿನ್ನಷ್ಟು ಚೆನ್ನಾಗೆಲ್ಲ ಮಗಳನ್ನು ನೋಡಿಕೊಳ್ಳೋಕೆ ಬರಲ್ಲ ನಂಗೆ. ಕ್ಷಮಿಸಿಬಿಡು ತಾಯಿʼ ಅಂತ ನಾಟಕೀಯವಾಗಿ ಹೇಳಿದೆ. 

"ಥೂ ಹೋಗತ್ಲಾಗೆ. ಅದೇನ್‌ ನಾಟ್ಕ ಮಾಡ್ತಿ" ಅಮ್ಮ ನಕ್ಕು ಕಣ್ಣೊರೆಸಿಕೊಂಡರು. ರಾಧ ಕೂಡ ನಗುತ್ತಿದ್ದಳು. 

"ಎಲ್ಲಮ್ಮ ರಾಜೀವು?" ಅಪ್ಪನ ಪ್ರಶ್ನೆಗೆ ನನ್ನ ಮೌನವೇ ಉತ್ತರವಾಗಿತ್ತು.

ಮುಖಪುಟ ಚಿತ್ರ: ಚೇತನ ತೀರ್ಥಹಳ್ಳಿ. 
ಮುಂದುವರೆಯುವುದು

No comments:

Post a Comment