May 10, 2020

ಒಂದು ಬೊಗಸೆ ಪ್ರೀತಿ - 64

ರಾಧ ಬೇಗ ಚೇತರಿಸಿಕೊಂಡಳು. ವಾಂತಿ ಪೂರ್ತಿ ನಿಂತು ಹೋಗಿತ್ತು. ಚೂರ್‌ ಚೂರ್‌ ಭೇದಿಯಾಗುತ್ತಿತ್ತು. ಅಮ್ಮ ತಂದ ಅಷ್ಟೂ ಗಂಜಿಯನ್ನು ತಿಂದು ಮುಗಿಸಿದ್ದಳು. ಜೊತೆಗೊಂದು ಸೇಬಿನಹಣ್ಣು ತಿಂದಳು. ಸಾಕಷ್ಟು ನೀರು ಕುಡಿದಳು. ಪ್ರಶಾಂತ್‌ ಡಾಕ್ಟರ್‌ ಹನ್ನೊಂದರಷ್ಟೊತ್ತಿಗೆ ರೌಂಡ್ಸಿಗೆ ಬಂದವರು. "ಆರಾಮಿದ್ದಾಳಲ್ಲ ಮಗಳು. ಸಾಕಿನ್ನು ಆಸ್ಪತ್ರೆ. ನಿಮಗೇ ಗೊತ್ತಿರುತ್ತಲ್ಲ. ಆಸ್ಪತ್ರೆಯಲ್ಲೇ ಅರ್ಧ ಹೊಸ ಹೊಸ ಖಾಯಿಲೆ ಶುರುವಾಗಿಬಿಡ್ತವೆ ಈಗೆಲ್ಲ. ಡಿಸ್ಚಾರ್ಜ್‌ ಮಾಡಿಸಿಕೊಂಡು ಹೋಗಿ. ಬೇಕಿದ್ರೆ ಇವತ್ತೊಂದಿನ ವ್ಯಾಸೋಫಿಕ್ಸ್‌ ಇರಲಿ. ಜಾಸ್ತಿ ಏನೂ ತಿನ್ನಲಿಲ್ಲ ಕುಡಿಯಲಿಲ್ಲ ಅಂದ್ರೆ ಮನೆಯಲ್ಲೇ ಒಂದು ಐ.ವಿ ಹಾಕೊಳ್ಳಿ. ಬೇಕಾಗಲ್ಲ. ಇರಲಿ ಒಂದು ದಿನದ ಮಟ್ಟಿಗೆ" ಎಂದೇಳಿ ಹೋದರು. 

ಅಪ್ಪ ಹೋಗಿ ಉಳಿಕೆ ಬಿಲ್ಲು, ಫಾರ್ಮಸಿಯ ಬಿಲ್ಲನ್ನು ಕಟ್ಟಿ ಬರುವಷ್ಟರಲ್ಲಿ ಡಿಸ್ಚಾರ್ಜ್‌ ಸಮ್ಮರಿ ತಯಾರಾಗಿತ್ತು. ಹನ್ನೆರಡರಷ್ಟೊತ್ತಿಗೆ ಆಸ್ಪತ್ರೆಯಿಂದ ಹೊರಟೆವು. 

"ನಿಮ್ಮ ಮನೆಗ್ಯಾಕೆ ನಮ್ಮಲ್ಲೇ ಇರಲಿ. ನಿನಗೆಲ್ಲಿ ಗಂಜಿ ಅಂಬಲಿ ಎಲ್ಲಾ ನೆಟ್ಟಗೆ ಮಾಡೋಕೆ ಬರ್ತದೆ" ಅಮ್ಮನ ಮಾತಿಗೆ ನಾನು ಅಪ್ಪ ನಕ್ಕೆವು. ಅಮ್ಮನ ಮನೆಗೇ ಮಗಳನ್ನು ಕರೆದುಕೊಂಡು ಹೋದೆ. ಮಗಳ ಬಟ್ಟೆ ಬರೆ ವಗೈರೆಗಳೆಲ್ಲವೂ ನಮ್ಮ ಮನೆಯಲ್ಲೇ ಇದ್ದುವಲ್ಲ. ಮಗಳು ಇನ್ನೊಂದು ಸ್ವಲ್ಪ ಗಂಜಿ ಕುಡಿದು ಮಲಗಿದ ಮೇಲೆ ಮನೆ ಕಡೆ ಹೋಗಿ ಬರ್ತೇನೆ ಎಂದ್ಹೇಳಿ ಹೊರಟೆ. ಮನೆ ತಲುಪಿ ನಿನ್ನೆ ಮಾಡಿದ್ದ ಅಡುಗೆಯ ಪಾತ್ರೆಗಳನ್ನೆಲ್ಲ ತೊಳೆದಿಡುವಾಗ ರಾಜೀವನ ಫೋನು ಬಂತು "ಎಲ್ಲಿದ್ದೀಯಾ? ಯಾವ ರೂಮು?" 

ʻರೂಮಾ?! ನಾವಾಗಲೇ ಡಿಸ್ಚಾರ್ಜ್‌ ಮಾಡಿಸಿಕೊಂಡು ಮನೆಗೆ ಬಂದೊ!ʼ 

"ಡಿಸ್ಚಾರ್ಜ್‌ ಮಾಡಿಸಿಕೊಂಡೋದ್ರ..... ಎಲ್ಲಿದ್ದೀರಾ ಈಗ?" 

ʻಅಮ್ಮನ ಮನೆಗೆ ಹೋದೆವು. ರಾಧ ಅಲ್ಲೇ ಮಲಗಿದ್ದಾಳೆ. ನಾ ಮನೆಗೆ ಬಂದೆ, ಒಂದಷ್ಟು ಬಟ್ಟೆ ಬರೆ ಮಾತ್ರೆಗಳನ್ನೆಲ್ಲ ತೆಗೆದುಕೊಂಡು ಹೋಗಬೇಕಿತ್ತುʼ 

"ಸರಿ ಬರ್ತೀನಿರು ಅಲ್ಲಿಗೇ" 

ಪಾತ್ರೆ ತೊಳೆದಿಟ್ಟು ಸ್ಟೌವ್‌ ಒರೆಸಿ ಮಗಳ ಬಟ್ಟೆ, ನನ್ನವೊಂದೆರಡು ಜೊತೆ ಬಟ್ಟೆ ಜೋಡಿಸಿಕೊಳ್ಳುವಾಗ ರಾಜೀವ ಮನೆಗೆ ಬಂದರು. ಬಾಗಿಲು ತೆಗೆದು ಒಂದೂ ಮಾತನಾಡದೆ ರೂಮಿನೊಳಗೋದೆ. 

ಸಿಗರೇಟ್‌ ಸೇದಿ ಬಂದಿದ್ರೋ ಏನೋ. ಬಚ್ಚಲಿಗೆ ಹೋಗಿ ಮುಖ ತೊಳೆದುಕೊಂಡು ರೂಮಿಗೆ ಬಂದರು. ಮುಖ ಒರೆಸಿಕೊಳ್ಳುತ್ತಾ "ಒಂದ್‌ ಮಾತ್‌ ಫೋನ್‌ ಮಾಡಿ ಹೇಳೋಕಾಗಲಿಲ್ವ ನಿನಗೆ..... ಸುಮ್ನೆ ನಾನು ಆಸ್ಪತ್ರೆಯ ಹತ್ತಿರವೆಲ್ಲ ಸುತ್ತಾಡಿದ್ದಾಯ್ತು" 

ʻಅಪ್ಪ ಅನ್ನಿಸಿಕೊಂಡವರು ಮುಂಚೆಯೇ ಬಂದಿರಬೇಕಿತ್ತು....ʼ 

"ಹೇಳಿದ್ನಲ್ಲ ಕುಡಿದು ಬಿಟ್ಟಿದ್ದೆ ಅಂತ. ಹಂಗಾಗಿ ಬರೋಕೆ ಆಗಲಿಲ್ಲ" 

ʻಇಲ್ಲ ಕಡೇಪಕ್ಷ ಮಧ್ಯೆ ಮಧ್ಯೆ ಫೋನು ಮಾಡಾದರೂ ವಿಚಾರಿಸಿಕೊಳ್ಳುವಷ್ಟಾದರೂ ಪ್ರೀತಿ ಇರಬೇಕಿತ್ತುʼ 

"ಹೇಳಿದ್ನಲ್ಲ ನನ್ನ ಫ್ರೆಂಡ್ಸಿಗೆ. ರಾಮ್‌ಪ್ರಸಾದ್‌ ಬಂದು ದುಡ್ಡೆಲ್ಲ ಕಟ್ಟಿರಬೇಕಲ್ಲ" 

ʻರಾಧಾಳ ಅಪ್ಪ ನೀವುʼ 

"ಆಯ್ತಾಯ್ತು. ಬರ್ತಿದ್ದಂಗೆಯೇ ಶುರು ಮಾಡಬೇಡ ನೀನು. ಈಗೇನು ತಲೆ ಮೇಲೆ ತಲೆ ಬಿದ್ದೋಯ್ತ. ಇಲ್ಲವಲ್ಲ" 

ʻಎಷ್ಟು ಕೇರ್‌ಲೆಸ್‌ ಆಗಿ ಮಾತಾಡ್ತೀರ.... ಮಗಳು ಅನ್ನೋ ಮಮಕಾರ ಚೂರಾದರೂ ಬೇಡವ....ʼ 

"ಒಳ್ಳೆ ಕತೆ ನಿಂದು. ಯಾರಿಗೂ ಇಲ್ಲದಿರೋ ಮಗಳಾ ಇವಳು. ನಾನೇನ್‌ ಬೇಕು ಬೇಕು ಅಂತ ಬಡ್ಕೊಂಡಿದ್ನ. ಬೇಕಿದ್ದಿದ್ದು ನಿನಗೆ. ಅನುಭವಿಸ್ಕೋ. ವಾಂತಿ ಭೇದಿ ಆಗದೇ ಮಕ್ಕಳು ಬೆಳೆದುಬಿಡ್ತಾವ? ಏನೋ ಸತ್ತೇ ಹೋದ್ಲು ಅನ್ನೋ ರೇಂಜಿಗೆ ಮಾತಾಡ್ತಿ" 

ʻನಾನ್‌ ಸೆನ್ಸ್‌ ಎಲ್ಲಾ ಮಾತಾಡ್ಬೇಡ ರಾಜೀವ್ʼ ಸಿಟ್ಟು ಬರಲಿಲ್ಲ. ಬೇಸರ ಮೂಡಿತು. ಕಣ್ಣಲ್ಲಿ ನೀರು. ಹೆತ್ತ ಮಗಳ ಬಗ್ಗೆ ಇಷ್ಟು ಕಠೋರವಾಗಿ ವರ್ತಿಸುವುದಕ್ಕಾದರೂ ಇವರಿಗೆ ಮನಸ್ಸೇಗೆ ಬರ್ತದೆ. ಮಗಳು ಅನ್ನೋ ಮಮಕಾರ ಇಲ್ಲದೇ ಹೋದರೆ ಅಷ್ಟೇ ಹೋಯಿತು. ಒಂದು ಮಗು - ಯಾರದೋ ಒಂದು ಮಗುವಿನ ಬಗ್ಗೆಯಾದ್ರೂ ಹೀಗೆ ಯೋಚಿಸುವಷ್ಟು ರಾಜೀವ ಕೆಟ್ಟವರಾಗಿದ್ದಾದರೂ ಯಾವಾಗ? ನಾ ಅಮ್ಮನ ಮನೆಗೆ ಸೇರಿದ್ದೇ ಸೇರಿದ್ದು ಪೂರ್ತಿ ಬದಲಾಗೇ ಹೋದರಲ್ಲ ಇವರು. 

"ಈಗ ಕಣ್ಣೀರ್‌ ಹಾಕಂಡ್ ಕೂತ್ಕೋಬೇಡ. ಎದ್ದು ಬೇಗ ರೆಡಿಯಾಗು. ನಾನೂ ಅಲ್ಲಿಗೆ ಬಂದು ಆ ಪೀಡೇನ ನೋಡ್ಕಂಡ್ ಹೋಗ್ತೀನಿ" 

ʻಯಾರ್ರೀ ಪೀಡೆ. ನಿಮ್‌ ಯೋಗ್ಯತೆಗಿಷ್ಟು ಬೆಂಕಿ ಹಾಕ. ಇನ್ನೊಂದ್ಸಲ ನನ್ನ ಮಗಳನ್ನ ಪೀಡೆ ಗೀಡೆ ಅಂದ್ರೆ ಸಿಗಿದಾಕಿ ಬಿಡ್ತೀನಿ. ನೀವು ಪೀಡೆ.... ನನ್ನ, ನನ್ನ ಮಗಳ ಜೀವನಕ್ಕೆ ಒಕ್ಕರಿಸಿಕೊಂಡಿರೋ ದೊಡ್ಡ ಪೀಡೆ ನೀವುʼ ಮಾತನಾಡಬಾರದಿತ್ತು. ಆಡದೆ ಇರಲಾಗಲಿಲ್ಲ. ಆಡಿ ಮುಗಿಸುವಷ್ಟರಲ್ಲಿ ಅವರ ಬಲಗೈ ನನ್ನ ಬೆನ್ನಿನ ಮೇಲೆ ಜೋರಾಗಿ ಗುದ್ದಿತು. ನನ್ನ ಮೇಲೆ ಕೈಮಾಡುವಷ್ಟು ರಾಜೀವ ಕೆಟ್ಟವರಾಗಿಬಿಟ್ಟರು. ಥೇಟು ಪುರುಷೋತ್ತಮನ ಹೊಡೆತದಂತೆಯೇ ಇತ್ತು. ರಾಜೀವನ ಹಿಂದೆ ನಿಂತು ಪುರುಷೋತ್ತಮ ನಕ್ಕಂತಾಯಿತು. ಹಿಂದೆ ತಿರುಗಿ ಹೊಡೆದವನ ಮುಖವನ್ನು ನೋಡಿದೆ. ಸಿಟ್ಟಿತ್ತಲ್ಲಿ. ನನ್ನ ಮುಖದ ಮೇಲೆ ಮೂಡಿದ ಅಸಹ್ಯ ಅವರ ಸಿಟ್ಟನ್ನು ಪಾಪಪ್ರಜ್ಞೆಯನ್ನಾಗಿ ಬದಲಿಸಿತು. 

"ಸಾರಿ ಸಾರಿ ಸಾರಿ" ಕೈ ಹಿಡಿಯಲು, ತಬ್ಬಿಕೊಳ್ಳಲು ಬಂದರು. ಮೈಯಲ್ಲಿದ್ದ ಬಲವನ್ನೆಲ್ಲ ಕೈಗಳಿಗೆ ವರ್ಗಾಯಿಸಿಕೊಂಡು ಅವರನ್ನು ದೂರ ತಳ್ಳಿದೆ. ಅನಿರೀಕ್ಷಿತವಾಗಿತ್ತಿದು ಅವರಿಗೆ. ಗೋಡೆಗೋಗೆ ಒರಗಿದರು. ಆಘಾತವಾಗಿತ್ತವರಿಗೆ. ಅವರು ಮತ್ತೊಂದು ಮಾತನಾಡುವ ಮುನ್ನ ನನ್ನ, ಮಗಳ ಬಟ್ಟೆಯ ಬ್ಯಾಗಿನೊಂದಿಗೆ ಮನೆಯಿಂದ ಹೊರಬಿದ್ದೆ. ಹಿಂದೆ ಬಂದು ಸಮಾಧಾನಿಸುವ ಧೈರ್ಯ ಅವರಲ್ಲಿರಲಿಲ್ಲ. 

ಇದೆಲ್ಲ ಎಲ್ಲಿಗೆ ಹೋಗಿ ಮುಟ್ತದೋ ಅನ್ನೋ ಭಯವಾಯಿತು. ಹೇಳಿಕೊಳ್ಳೋಣವೆಂದರೆ ಸಾಗರನಿನ್ನು ಸಿಗುವುದಿಲ್ಲ. ಮದುವೆಯಾದ ಮಾರನೇ ದಿನವೇ ನನ್ನನ್ನು ಎಫ್.ಬಿಯಲ್ಲಿ ಅನ್‌ಫ್ರೆಂಡ್‌ ಮಾಡಿದ್ದ. ಅನ್‌ಫ್ರೆಂಡ್‌ ಮಾಡುವಂತದ್ದೇನೂ ಇತ್ತೀಚೆಗೆ ನಡೆದಿರಲಿಲ್ಲ. ಫೋನು ಮಾಡುವುದಾ? ಬೇಡ, ಮೊನ್ನೆಯಷ್ಟೇ ಮದುವೆಯಾಗಿದ್ದಾನೆ. ಈಗ್ಯಾಕೆ ಅವನಿಗೆ ತೊಂದರೆ ಎಂದು ಸುಮ್ಮನಾದೆ. ಕಷ್ಟ ಹೇಳಿಕೊಳ್ಳಲ್ಯಾರೂ ಇಲ್ಲವಲ್ಲ ನನಗೆ ಎಂದು ಬೇಸರವಾಯಿತು. ನಿನ್ನ ಕಷ್ಟ ಹೇಳ್ಕೊಳ್ಳೋಕಷ್ಟೇ ನನ್ನ ಅವಶ್ಯಕತೆ ನಿನಗೆ ಅಲ್ವ ಅಂತ ಮಧ್ಯೆ ಮಧ್ಯೆ ಹೇಳುತ್ತಿದ್ದ ಸಾಗರ. ಇರಬಹುದೇನೋ. 

ಅಮ್ಮನ ಮನೆ ತಲುಪಿದಾಗ ಮಗಳೆದ್ದು ಲವಲವಿಕೆಯಿಂದ ಆಟವಾಡುವುದನ್ನು ಕಂಡು ರಾಜೀವನ ಮಾತುಗಳು ಮನದಲ್ಲಿ ಮೂಡಿಸಿದ ನೋವನ್ನು ಮರೆಯಲೆತ್ನಿಸಿದೆ. ಬೆನ್ನು ಸಣ್ಣಗೆ ನೋಯುತ್ತಿತ್ತು.

ಮುಖಪುಟ ಚಿತ್ರ: ಚೇತನ ತೀರ್ಥಹಳ್ಳಿ. 
ಮುಂದುವರೆಯುವುದು

2 comments: