ರಾಜೀವ ಅವತ್ತು ರಾತ್ರಿಯಾದರೂ ಬರಲಿಲ್ಲ. ಫೋನೂ ಮಾಡಲಿಲ್ಲ. ಮನೆಯಲ್ಲಿ ಅಮ್ಮ ಎಲ್ಲಿ ಅವರು ಎಲ್ಲಿ ಅವರು? ಎಂದು ಕೇಳಿದ್ದೇ ಕೇಳಿದ್ದು. ʻಅವರ ನಂಬರ್ ನಿಮ್ಮತ್ರವೇ ಇದ್ಯಲ್ಲ. ನೀವೇ ಫೋನ್ ಮಾಡಿ ವಿಚಾರಿಸಿಕೊಳ್ಳಿʼ ಎಂದು ರೇಗಿದ ಮೇಲೆಯೇ ಅಮ್ಮ ಸುಮ್ಮನಾಗಿದ್ದು. ಸುಮ್ಮನಾಗುವ ಮುಂಚೆ "ಗಂಡ ಹೆಂಡತಿ ಗಲಾಟೆ ಏನಾದ್ರೂ ಇರಲಿ. ಮಗಳು ಹುಷಾರಿಲ್ಲಾಂತನಾದ್ರೂ ಬರಬಾರದಾ?" ಎಂದು ಗೊಣಗಿಕೊಂಡರು.
ಬೆಳಿಗ್ಗೆ ಎದ್ದವಳೇ ಮೊಬೈಲ್ ಕೈಗೆತ್ತಿಕೊಂಡು ʻಮಗಳನ್ನು ನೋಡೋಕಂತೂ ಬರಲಿಲ್ಲ. ಕೊನೇ ಪಕ್ಷ ಬಂದು ಕೈಗೊಂದಷ್ಟು ದುಡ್ಡಾದರೂ ಕೊಟ್ಟು ಹೋಗಿ. ರಾಮ್‌ಪ್ರಸಾದ್‌ಗೆ ಹಣ ವಾಪಸ್ಸು ಮಾಡಬೇಕು. ಅಪ್ಪನಿಗೂ ದುಡ್ಡು ಕೊಡೋದಿದೆʼ ಎಂದು ಮೆಸೇಜು ಮಾಡಿದೆ. ಪ್ರತಿಕ್ರಿಯೆ ಬರಲಿಲ್ಲ. ಬರುವ ನಿರೀಕ್ಷೆಯೂ ಇರಲಿಲ್ಲ. ಹಣ ತೆಗೆದುಕೊಂಡೂ ಇವರು ಬರದೇ ಹೋದಲ್ಲಿ ಶಶಿ ಹತ್ರ ದುಡ್ಡು ತೆಗೆದುಕೊಂಡು ರಾಮ್‌ಪ್ರಸಾದ್‌ಗೆ ಕೊಟ್ಟುಬಿಡಬೇಕು ಎಂದುಕೊಂಡೆ. ಮಗಳು ಲವಲವಿಕೆಯಿಂದಿದ್ದಳು. ʻಡ್ಯೂಟಿಗೆ ಹೋಗ್ಲಾ ಪುಟ್ಟʼ ಎಂದಿದ್ದಕ್ಕೆ ಹು ಎಂಬಂತೆ ತಲೆಯಾಡಿಸಿದ್ದಳು. "ಇವತ್ತೊಂದಿನ ರಜಾ ಹಾಕಂಡಿದ್ರಾಗ್ತಿರಲಿಲ್ಲವಾ" ಎಂಬ ಅಮ್ಮನ ಸಲಹೆಗೆ ಅಪ್ಪ "ಅವಳಿಗೆಂಗಿದ್ರೂ ಮಗು ನೋಡ್ಕೊಳ್ಳೋಕ್ ಬರಲ್ವಲ್ಲೇ. ಅವಳಿದ್ದು ಏನಾಗಬೇಕಿದೆ. ನೀನಿದೀಯಲ್ಲ ಎಕ್ಸ್ಪರ್ಟು" ಎಂದು ನಗಾಡಿದ್ದರು. "ನಾನು ಅಂದ್ರೆ ನಿಮ್ಮಲ್ರಿಗೂ ಸಸಾರ" ಅಮ್ಮ ನಕ್ಕು ನುಡಿದಿದ್ದಳು. ತಿಂಡಿ ತಿನ್ನುವ ಹೊತ್ತಿಗೆ ರಾಜೀವ ಮನೆಗೆ ಬಂದು ಮಗಳ ಬಳಿ ಹೋಗಿ ಹೆಸರಿಗೊಮ್ಮೆ ಮಾತನಾಡಿಸಿ ಅಲ್ಲೇ ಟೀಪಾಯಿಯ ಮೇಲೆ ದುಡ್ಡಿಟ್ಟು ಹೊರಟುಹೋದರು. ನನ್ನ ಜೊತೆ ಒಂದು ಮಾತಿಲ್ಲದೆ, ತಿಂಡಿ ತಿನ್ನಿ ಅಂದ ಅಮ್ಮನ ಮಾತಿಗೂ ಉತ್ತರ ನೀಡದೆ ಹೊರಟು ಹೋದರು. ಕೋಪದಲ್ಲಿ ನನ್ನ ಡೆಬಿಟ್ ಕಾರ್ಡನ್ನೂ ಇಟ್ಟುಬಿಟ್ಟಿದ್ದಾರೋ ಏನೋ ಎಂದುಕೊಂಡು ಟೀಪಾಯಿಯ ಕಡೆಗೆ ಕಣ್ಣಾಡಿಸಿದೆ. ಇರಲಿಲ್ಲ. ಹಣ ಮಾತ್ರವಿತ್ತು.