Apr 26, 2020

ಒಂದು ಬೊಗಸೆ ಪ್ರೀತಿ - 62

ಪ್ರಶಾಂತ್‌ ನರ್ಸಿಂಗ್‌ ಹೋಮ್‌ ತಲುಪುವಷ್ಟರಲ್ಲಿ ರಾಜೀವ ಆಸ್ಪತ್ರೆಯ ಫಾರ್ಮಸಿಯಲ್ಲಿದ್ದ ತನ್ನ ಗೆಳೆಯನಿಗೆ ನಾ ಬರುವ ವಿಷಯ ತಿಳಿಸಿದ್ದರು. ನಾ ಅಡ್ಮಿಶನ್‌ ಮಾಡಿಸುವಾಗ ಆದರ್ಶ್‌ ಹೆಸರಿನ ಆ ವ್ಯಕ್ತಿ ಬಂದು "ಔಷಧಿ ದುಡ್ಡೆಲ್ಲ ಆಮೇಲ್‌ ಕೊಡೂರಿ ಮೇಡಂ. ಸದ್ಯ ಅಡ್ಮಿಷನ್‌ ದುಡ್ಡು ಕೊಟ್ಟುಬಿಡಿ. ಇಲ್ಲಾಂದ್ರೆ ಸುಮ್ನೆ ತರ್ಲೆ ಮಾಡ್ತಾರೆ ಇಲ್ಲಿ" ಎಂದು ಬಿಟ್ಟಿ ಸಲಹೆ ನೀಡಿದರು. ಅಡ್ಮಿಷನ್ನಿಗೆ ಐದು ಸಾವಿರ ಕಟ್ಟಬೇಕೆಂದರು. ನನ್ನ ಪರ್ಸಿನಲ್ಲಿದ್ದಿದ್ದು ಒಂದೂವರೆ ಸಾವಿರ ರುಪಾಯಿ ಮಾತ್ರ. ಹಿಂಗಿಂಗೆ, ನಾನೂ ಡಾಕ್ಟರ್ರೇ. ಅರ್ಜೆಂಟಲ್ಲಿ ಕಾರ್ಡೆಲ್ಲ ತರೋದು ಮರೆತೆ. ನನ್ನ ಹಸ್ಬೆಂಡು ಬಂದು ಕಟ್ತಾರೆ ಅಂದೆ. ಡಾಕ್ಟರ್‌ ಅಂತ ತಿಳಿದ ಮೇಲೆ ಮುಖದ ಮೇಲೆ ನಗು ತಂದುಕೊಂಡು "ಓಕೆ ಮೇಡಂ. ಟ್ರೀಟ್ಮೆಂಟ್‌ ಹೇಗಿದ್ರೂ ಶುರುವಾಗಿದ್ಯಲ್ಲ. ಆಮೇಲ್‌ ಬಂದ್‌ ಕಟ್ಟಿ. ಸದ್ಯ ಇರೋದನ್ನ ಕಟ್ಟಿರಿ ಸಾಕು ಎಂದರು" 

ರಾಧಳ ಕೈಯಿಗೆ ವ್ಯಾಸೋಫಿಕ್ಸ್‌ ಹಾಕಿ ಐ.ವಿ ಫ್ಲೂಯಿಡ್ಸ್‌ ಶುರು ಮಾಡಿದರು. ಇನ್ನೇನು ವಾಂತಿ ಭೇದಿಗೆ ಹೆಚ್ಚು ಔಷಧಿಯಿಲ್ಲವಲ್ಲ. ದೇಹದ ನೀರಿನಂಶ ಅಪಾಯ ಮಟ್ಟಕ್ಕೆ ಕುಸಿಯದಂತೆ ನೋಡಿಕೊಂಡರೆ ಸಾಕು. ಜ್ವರ ಇದ್ದಿದ್ದರಿಂದ ಒಂದು ಯಾಂಟಿಬಯಾಟಿಕ್‌, ವಾಂತಿಗೊಂದು ಇಂಜೆಕ್ಷನ್‌ ನೀಡಿದರು. ಸುಸ್ತಿನಿಂದ ನಿದ್ರೆ ಹೋಗಿದ್ದಳು ರಾಧ. ಅಲ್ಲಿಂದಲೇ ರಾಜೀವನಿಗೊಂದು ಫೋನು ಮಾಡಿದೆ ಸುಮಾರೊತ್ತು ರಿಂಗಾದ ಬಳಿಕ ಫೋನೆತ್ತಿಕೊಂಡರು. 

ʼಎಲ್ಲಿದ್ದೀರಾ?ʼ 

"ಇಲ್ಲೇ" 

ʼಬಂದ್ರಾʼ 

"ಇಲ್ಲ" 

ʼಯಾಕೆ?ʼ 

"ಯಾಕೋ ಕುಡಿದಿದ್ದು ಜಾಸ್ತಿ ಆದಂಗಿದೆ. ಬರೋಕಾಗಲ್ಲ" 

ʼಹೋಗಬೇಕಾದರೇ ಹೇಳಿದೆ. ಹುಷಾರಿಲ್ಲ ಮಗಳಿಗೆ. ಇಲ್ಲೇ ಇರಿ ಅಂತʼ 

"ನನ್‌ ಸಂತೋಷ ಕಿತ್ಕೋಳ್ಳೋಕೇ ಹುಟ್ಟಿದ್ದೀರಾ ಇಬ್ರು. ಈಗೇನಾಯ್ತು? ಹೋಗಿದ್ದೀಯಲ್ಲ ಆಸ್ಪತ್ರೆಗೆ. ಸರಿ ಹೋಗ್ತಾಳೆ" 

ʼಇಲ್ಲಿ ಆಸ್ಪತ್ರೆಗೆ ದುಡ್ಡು ಕಟ್ಟಬೇಕುʼ 

"ನನ್ನ ಫ್ರೆಂಡಿಗೆ ಹೇಳಿದ್ದೀನಲ್ಲ. ಸಿಕ್ಕಿರಲಿಲ್ಲವಾ ಅವರು?" 

ʼಸಿಕ್ಕಿದ್ರು. ಔಷಧಿ ದುಡ್ಡು ಆಮೇಲೆ ಕೊಡಿ ಅಂದ್ರು. ಅಡ್ಮಿಶನ್‌ ಚಾರ್ಜಸ್‌ ಕಟ್ಟಲೇಬೇಕಂತೆ. ಐದು ಸಾವಿರ ಕಟ್ಟಬೇಕಿತ್ತು. ಒಂದೂವರೆ ಸಾವಿರ ಕಟ್ಟಿದ್ದೀನಿ. ನನ್ನ ಬಳಿ ಇನ್ನಿರೋದು ಇನ್ನೂರು ಚಿಲ್ಲರೆ ರುಪಾಯಿ ಮಾತ್ರ. ನಿಮ್ಮ ಫ್ರೆಂಡ್‌ ಯಾರನ್ನಾದ್ರೂ ಕರೆದುಕೊಂಡು ಬೇಗ ಬನ್ನಿ ಇಲ್ಲಿಗೆ. ನನಗೊಬ್ಬಳಿಗೇ ಗಾಬರಿ ಆಗ್ತಿದೆʼ 

"ನೀನೇ ಡಾಕ್ಟ್ರು. ಗಾಬ್ರಿ ಯಾಕೆ. ಬೆಳಿಗ್ಗೆ ಬಂದು ಕಟ್ತಾರೆ ಅಂತ ಹೇಳು" 

ʼನೀವ್‌ ಬರದೇ ಹೋದ್ರೆ ಹೋಗ್ಲಿ. ನಿಮ್ಮ ಮನೆಯವರಿಗಾದರೂ ಹೇಳಿ. ಬಂದು ಸ್ವಲ್ಪ ಹೊತ್ತು ಇದ್ದರೆ ನನಗೂ ಧೈರ್ಯʼ 

"ಅದ್ಯಾಕ್‌ ಬಂದ್‌ ಬಿಡು. ನಿಮ್ಮ ಮನೆಯವರು ಮಾತ್ರ ಟ್ರಿಪ್‌ ಹೊಡ್ಕಂಡು ಕೂತಿರ್ಬೇಕು. ನಮ್ಮ ಮನೆಯವರು ಬಂದು ನಿನ್ನ ಮಗಳ ಸೇವೆ ಮಾಡಬೇಕಾ?" 

ಬೇರೆ ಸಮಯದಲ್ಲಾಗಿದ್ದರೆ ಜೋರು ಜಗಳವಾಗುತ್ತಿತ್ತು. ಇದು ಜಗಳ ಮಾಡುವ ಸಮಯವಲ್ಲ. ʼಸರಿ. ನಿಮಗೆ ಅಷ್ಟೊಂದು ಜನ ಫ್ರೆಂಡ್ಸ್‌ ಇದ್ದಾರಲ್ಲ. ಅವರಲ್ಲಿ ಯಾರಿಗಾದರೂ ವಿಷಯ ತಿಳಿಸಿ ಇಲ್ಲಿಗೆ ಬಂದು ದುಡ್ಡು ಕೊಟ್ಟು ಹೋಗುವಂತೆ ಹೇಳಿ. ಆಸ್ಪತ್ರೆಯವರು ʼಎಲ್ಲಿ ನಿಮ್ಮ ಗಂಡ ಬರಲೇ ಇಲ್ಲ ದುಡ್ಡು ಕಟ್ಟೋಕೆʼ ಅಂತ ಕೇಳೋಕೆ ಮುಂಚೆ ಇಲ್ಲಿಗೆ ಬಂದು ನನ್ನ ಕೈಗೆ ದುಡ್ಡು ತಲುಪಿಸಲಿʼ 

"ದುಡ್ಡು ದುಡ್ಡೂ ಅಂತ ಸಾಯ್ತೀಯಲ್ಲ" 

ʼಇಲ್ಲಿ ಮಗಳು ಸಾಯೋ ಹಂಗ್‌ ಆಗಿರುವಾಗ ಇನ್ನೇನು ಮಾಡಲಿʼ 

"ಇಬ್ರೂ ಸತ್ತೋದ್ರೆ ನೆಮ್ದಿ ನಂಗೆ" 

ʼಅದು ಮುಂದಕ್‌ ಆಗುತ್ತೆ. ಯಾರನ್ನಾದ್ರೂ ಕಳಿಸಿ ಈಗ. ಇಲ್ಲ ಬನ್ನಿʼ ಎಂದ್ಹೇಳಿ ಫೋನ್‌ ಕಟ್‌ ಮಾಡಿದೆ. ಅವರೇನೂ ಬರುವವರಲ್ಲ, ಇಲ್ಲ ಅವರ ಸ್ನೇಹಿತರನ್ನೂ ಕಳಿಸುವವರಲ್ಲ. ನಾಳೆ ಬೆಳಗ್ಗೆವರೆಗೇನೂ ಆಸ್ಪತ್ರೆಯವರು ದುಡ್ಡಿಗಾಗಿ ನನ್ನನ್ನು ಕೇಳುವುದಿಲ್ಲ ಅಂತ ಗೊತ್ತಿತ್ತು. ಆದರೆ ಒಬ್ಬಳೇ ಮಗಳ ಜೊತೆ ಇದ್ದು, ಮಗಳ ನರಳಾಟ ನೋಡುವುದು ಸಂಕಟದ ಕೆಲಸ. ರಾಜೀವ್‌ ಸುಮ್ಮನೆ ಪಕ್ಕದಲ್ಲಿ ಕುಳಿತಿದ್ದರೂ ಒಂದಷ್ಟು ಧೈರ್ಯವಿರುತ್ತಿತ್ತು. ಮಗಳು ಅಂತ ಬೇಡ, ಒಂದು ಚಿಕ್ಕ ಹುಡುಗಿ ಹುಷಾರು ತಪ್ಪಿದೆ ಅಂತಾದರೂ ಅವರಲ್ಲಿ ಕರುಣೆ ಹುಟ್ಟುವುದಿಲ್ಲವಲ್ಲ. ಹಿಂಗೂ ಇರ್ತಾರ? 

ರಾಧಳ ಪಕ್ಕ ಕುಳಿತು ಹಂಗೇ ಕಣ್ಣು ಮುಚ್ಚಿದೆ. ಅರೆ ಬರೆ ನಿದ್ರೆ. ನಿದ್ರೆಯಲ್ಲಿ ಚಿತ್ರ ವಿಚಿತ್ರ ಕನಸುಗಳು. ಮಗಳು ಸತ್ತಂತೆ, ನಾ ಅಳುತ್ತಿರುವಂತೆ, ನಾ ಸತ್ತಂತೆ, ಮಗಳು ಅಳುತ್ತಿರುವಂತೆ, ನಾವಿಬ್ಬರೂ ಸತ್ತಂತೆ, ರಾಜೀವ ಅಳುತ್ತಿರುವಂತೆ, ರಾಜೀವ ಸತ್ತಂತೆ, ನಾವಿಬ್ಬರೂ ಅತ್ತಂತೆ ಮರುಕ್ಷಣ ನಕ್ಕಂತೆ ಮರುಕ್ಷಣ ಅತ್ತಂತೆ.... ಯಾರೋ ಭುಜ ಅಲ್ಲಾಡಿಸಿದಂತೆ.... ಇಲ್ಲ, ಭುಜ ಅಲ್ಲಾಡಿಸಿದ್ದು ಕನಸಲ್ಲ ನನಸು. ನಿದ್ರೆ ಮಂಪರಿನಿಂದ ಎದ್ದು ಕಣ್ಣು ತೆರೆದರೆ ರಾಮ್‌ಪ್ರಸಾದ್.‌ ಕನಸಿನಿಂದ ಹೊರಬಂದು ʼಏನ್‌ ನೀವಿಲ್ಲಿ?ʼ ಅಂತ ಕೇಳುವಷ್ಟರಲ್ಲಿ ಕ್ಷಣಗಳು ಉರುಳಿದ್ದವು. 

"ರಾಜೀವ್‌ ಫೋನ್‌ ಮಾಡಿದ್ದರು. ಮಗಳಿಗೇನೋ ಹುಷಾರಿಲ್ಲದೆ ಆಸ್ಪತ್ರೆಗೆ ಹೋಗಿದ್ದಾರೆ. ನಾನೆಲ್ಲೋ ಹೊರಗೆ ಬಂದಿದ್ದೆ. ಗಾಡಿ ಕೆಟ್ಟಿದೆ. ಬರಲಾಗುತ್ತಿಲ್ಲ. ಸ್ವಲ್ಪ ನೋಡ್ತೀರಾ ಅಂತ. ಅದಕ್ಕೆ ಬಂದೆ" 

ಯಾರಿಗೂ ಇಲ್ಲದೆ ಇವರಿಗೇ ಫೋನ್‌ ಮಾಡ್ಬೇಕಿತ್ತಾ ರಾಜೀವ! ಯಾರಾದ್ರೂ ಫ್ರೆಂಡನ್ನ ಕಳಿಸಿ ಅಂತ ನಾ ಸಿಟ್ಟಿನಲ್ಲಿ ಹೇಳಿದ್ದು, ಮೂರೊತ್ತೂ ಫ್ರೆಂಡ್ಸು ಫ್ರೆಂಡ್ಸು ಅಂತಾರಲ್ಲ ಅಂತ. ತೀರ ನಮ್ಮಾಸ್ಪತ್ರೆ ಸ್ಟಾಫನ್ನೇ ಕಳಿಸುತ್ತಾರೆ ಅಂತ ಕನಸು ಬಿದ್ದಿತ್ತಾ ನನಗೆ! 

ʼಅಯ್ಯೋ. ಏನೂ ತೊಂದರೆ ಇಲ್ಲ. ನೀವ್ಯಾಕೆ ಬರೋ ಶ್ರಮ ತೆಗೆದುಕೊಂಡಿರಿ. ಥ್ಯಾಂಕ್ಸ್‌ ಫಾರ್‌ ಕಮಿಂಗ್‌ʼ 

"ತೊಂದರೆ ಏನಿದೆ. ಫ್ರೆಂಡ್ಸ್‌ ಅಂದ್ರೆ ಅಷ್ಟೂ ಮಾಡದೇ ಇರೋಕಾಗ್ತದಾ?" 

ʼಥ್ಯಾಂಕ್ಸ್‌ʼ 

"ಅದೇನೋ ಆಸ್ಪತ್ರೆ ದುಡ್ಡು ಒಂದಷ್ಟು ಕಟ್ಟೋದಿದೆ ಅಂತಿದ್ರು..." 

ʼಹೇ ಪರವಾಗಿಲ್ಲ. ಬೆಳಿಗ್ಗೆ ಅವರು ಬರ್ತಾರಲ್ಲ. ಆವಾಗ ಕಟ್ಟಿದ್ರಾಯ್ತುʼ 

"ಅಯ್ಯೋ ಇರ್ಲಿ ಬಿಡಿ ಮೇಡಂ. ನಾಳೆ ನನಗೆ ಕೊಡೋರಂತೆ. ಆಸ್ಪತ್ರೆಗಳ ವಿಷಯ ನಮಗೇ ಗೊತ್ತಿರ್ತದಲ್ಲ. ದುಡ್ಡು ಕಟ್ಟೋವರೆಗೂ ತಲೆ ತಿಂತಾರೆ. ಎಷ್ಟು ಕೊಡಲಿ ಎಂದರು" 

ʼಇದ್ರೆ ಒಂದೈದು ಕೊಟ್ಟಿರಿʼ 

ಜೇಬಿನಿಂದ ದುಡ್ಡು ತೆಗೆದು ನನ್ನ ಕೈಗೆ ಕೊಡುತ್ತಾ "ಆರಿದೆ ಇದರಲ್ಲಿ. ಇನ್ನೇನಾದರೂ ಬೇಕಾದರೆ ಮುಜುಗರ ಇಲ್ಲದೆ ಕೇಳಿ. ಕೊಟ್ಟಿರ್ತೀನಿ" 

ʼಇಲ್ಲ ಸಾಕಾಗ್ತದೆ. ನಾಳೆ ಕೊಟ್‌ಬಿಡ್ತೀನಿ ಇದನ್ನʼ ಎಂದೆ. ಮುಜುಗರದಲ್ಲಿ ತೋಯ್ದು ತೊಪ್ಪೆಯಾಗಿದ್ದೆ. 

"ಅಯ್ಯೋ. ಕೊಡೂರಂತೆ ನಡೀರಿ. ಕೊಡದೇ ಹೋದರೆ ನಿಮ್ಮಾಸ್ಪತ್ರೆಯ ಸಂಬಳದಲ್ಲಿ ಮುರಿಸಿಕೊಳ್ತೀನಿ ಬಿಡಿ ಮೇಡಂ" ಎಂದು ನಕ್ಕರು. ನಾನೂ ಅವರ ನಗುವಿನಲ್ಲಿ ಭಾಗಿಯಾಗದೇ ಇರಲಿಲ್ಲ. 

ʼಒಂದ್ನಿಮಿಷ ಇಲ್ಲೇ ಇರಿ ಸರ್.‌ ನಾನೋಗಿ ದುಡ್ಡು ಕಟ್ಟಿ ಬರುವೆʼ 

"ಅಯ್ಯೋ ಅದೇನ್‌ ಮೇಡಂ ಸರ್‌ ಅನ್ಕೊಂಡು. ರಾಮ್‌ಪ್ರಸಾದ್‌ ಅನ್ನಿ ಸಾಕು" 

ʼನೀವೂ ಧರಣಿ ಅನ್ನಿ ಸಾಕು!ʼ 

"ಹ ಹ ... ಸರಿ. ನೀವಿಲ್ಲೇ ಇರಿ ಮಗಳ ಜೊತೆಗೆ. ನಾ ಹೋಗಿ ಕಟ್ಟಿ ಬರ್ತೀನಿ" 

ʼಪರವಾಗಿಲ್ಲ. ನಾನೇ ಹೋಗಿ ಬರ್ತೀನಿ. ಹಂಗೇ ವಾಶ್‌ರೂಮಿಗೆ ಹೋಗಬೇಕಿದೆʼ 

"ಹಂಗಾದ್ರೆ ಸರಿ. ಹೋಗಿ ಬನ್ನಿ. ಇರ್ತೀನಿಲ್ಲಿ" 

ರಿಸೆಪ್ಶನ್ನಿಗೆ ಹೋಗಿ ಉಳಿಕೆ ಮೂರೂವರೆ ಸಾವಿರ ಕಟ್ಟಿ ಟಾಯ್ಲೆಟ್ಟಿಗೆ ಹೋಗಿ ಬಂದೆ. ರಾಮ್‌ಪ್ರಸಾದ್‌ ರಾಧಳ ಪಕ್ಕದಲ್ಲೇ ಕುಳಿತುಕೊಂಡು ಮೆಲ್ಲನೆ ಅವಳ ತಲೆಸವರುತ್ತಾ ಕುಳಿತಿದ್ದರು. ಅವರ ಮುಖದಲ್ಲಿ ತುಂಬಿ ತುಳುಕುತ್ತಿದ್ದ ಅಂತಃಕರಣದ ಒಂದಂಶವನ್ನೂ ರಾಜೀವನ ಮುಖದಲ್ಲಿ ಇಲ್ಲಿಯವರೆಗೆ ಕಂಡಿರಲಿಲ್ಲ ನಾನು. ರಾಜೀವನಿಗೆ ಮಕ್ಕಳೆಂದರೆ ಇಷ್ಟವೇ. ಆದರೂ ಯಾಕೆ ರಾಧಳನ್ನು ಕಂಡರೆ ಅಸಡ್ಡೆ? ಇರಲಿ. ಮಗಳು ಹುಷಾರಾದ ಮೇಲೆ ಖಂಡಿತವಾಗಿ ಅವರನ್ನು ಕೂರಿಸಿಕೊಂಡು ಇದರ ಬಗ್ಗೆ ಮಾತನಾಡಬೇಕು. 

ರಾಮ್‌ಪ್ರಸಾದ್‌ ಇನ್ನೊಂದರ್ಧ ಘಂಟೆ ಜೊತೆಯಲ್ಲೇ ಕುಳಿತಿದ್ದರು. ನನಗೂ ಹೊಸ ಪರಿಚಯ ಅವರದು. ಹೆಚ್ಚು ಮಾತನಾಡಲು ವಿಷಯಗಳಿರಲಿಲ್ಲ. ಮಧ್ಯೆ ಮಧ್ಯೆ ಆಸ್ಪತ್ರೆಯ ಕುರಿತು, ಮಗಳ ಕುರಿತು ಒಂದೊಂದು ಸಾಲು ಮಾತುಗಳನ್ನಾಡಿದವು. ʼನೀವ್‌ ಹೊರಡಿ. ನಿಮಗೂ ತಡವಾಯ್ತುʼ ಎಂದೆ. 

"ನಿಮ್ಮದು ಊಟ ಆಯ್ತಾ" ಆಗಿರಲಿಲ್ಲ. ಹೊಟ್ಟೆ ಹಸಿಯುತ್ತಿತ್ತು. ʼಹು. ಸಂಜೆ ಸುಮಾರ್‌ ಏನೇನೋ ತಿಂದಿದ್ದೆ. ಹಸಿವಿಲ್ಲʼ ಎಂದೆ. 

"ಸರಿ ಆಗಿದ್ರೆ" ಎಂದು ಹೊರಟರು. ಮತ್ತೊಮ್ಮೆ ಥ್ಯಾಂಕ್ಸ್‌ ಹೇಳಿದೆ. ಹೋದವರು ಹತ್ತು ನಿಮಿಷದಲ್ಲಿ ವಾಪಸ್ಸು ಬಂದರು. ಕೈಯಲ್ಲೊಂದು ಕವರಿತ್ತು. "ತಗೊಳ್ಳಿ ಎರಡ್‌ ಇಡ್ಲಿ ಒಂದ್‌ ವಡೆ ತಂದಿದ್ದೀನಿ" ಎಂದರು. 

ʼಅಯ್ಯೋ ಬೇಕಿರಲಿಲ್ಲʼ ಎಂದೆ. 

"ಸುಮ್ಮನೆ ತಗೊಳ್ಳಿ ಧರಣಿ. ನಿಮ್ಮ ಮುಖ ನೋಡಿದ್ರೆ ಗೊತ್ತಾಗಲ್ವ, ಸಂಜೆ ಅಲ್ಲ ಬೆಳಿಗ್ಗೆಯಿಂದಾನೂ ನೀವು ಸರಿಯಾಗಿ ಏನನ್ನೂ ತಿಂದಿಲ್ಲ ಅಂತ" 

ಮೆಲುನಗುವಿನೊಂದಿಗೆ ಕವರ್‌ ಕೈಗಿಟ್ಟುಕೊಂಡು ಪ್ಯಾಕೆಟ್‌ ತೆರೆದು ಗಬಗಬನೆ ತಿಂದ ನಂತರ ರಾಮ್‌ಪ್ರಸಾದ್‌ ತಿಂದಿದ್ರೋ ಇಲ್ವೋ ಅಂತ ಪ್ರಶ್ನೆ ಮೂಡಿತು! ʼನಿಮ್ಮದು?ʼ ಎಂದೆ. 

"ನಾ ಅಲ್ಲೇ ತಿಂದು ಬಂದೆ" ನಗುತ್ತಾ ಹೇಳಿದರು. 

ನಾ ತಿಂದು ಮುಗಿಸುವುದನ್ನೇ ಕಾಯುತ್ತಿದ್ದಂತೆ ಮಗಳು ನಿದ್ರೆಯಿಂದ ಎದ್ದಳು. ಏಳುತ್ತಿದ್ದಂತೆ ಇನ್ನೆರಡು ಸಲ ವಾಂತಿ ಮಾಡಿ, ಎರಡು ಸಲ ಭೇದಿ ಹೋದಳು. ಸಿಸ್ಟರ್‌ ಬಂದು ಕ್ಲೀನ್‌ ಮಾಡಿಕೊಟ್ಟು ಮತ್ತೊಂದು ಐ.ವಿ ಫ್ಲ್ಯೂಯಿಡ್‌ ಹಾಕಿ ಹೋದರು. ಘಂಟೆ ಒಂಭತ್ತೂವರೆಯಾಗಿತ್ತು. 

ಮಗಳ ಪರಿಸ್ಥಿತಿ ನೋಡಿದ ರಾಮ್‌ಪ್ರಸಾದ್‌ "ಇರ್ತೀನಿ ಬಿಡಿ ಇನ್ನೂ ಸ್ವಲ್ಪ ಹೊತ್ತು. ಯಾಕೋ ತುಂಬಾ ಸುಸ್ತಾಗಿದೆ ಮಗು" ಎನ್ನುತ್ತಾ ಅಲ್ಲೇ ಕುಳಿತರು. ʼಪರವಾಗಿಲ್ಲ ಹೋಗಿರಿ ನೀವು. ನಿಮಗ್ಯಾಕೆ ತೊಂದರೆʼ ಎಂದು ಬಾಯುಪಚಾರಕ್ಕೆ ಹೇಳಿದೆನಾದರೂ ಮನಸಲ್ಲಿ ಹೋಗಬೇಡಿ ಎಂದು ಕೇಳಿಕೊಂಡೆ. 

"ಅದ್ರಲ್ಲೇನಿದೇರಿ. ನೀವ್‌ ಸುಮ್ನೆ ರೆಸ್ಟ್‌ ಮಾಡಿ" ಎಂದರು. 

ನಾ ಮಗಳ ಪಕ್ಕದಲ್ಲಿ ಕುರ್ಚಿ ಹಾಕಿಕೊಂಡು ಹಾಸಿಗೆಯ ಮೇಲೆ ತಲೆಯಿಟ್ಟು ಮಗಳ ಕೈಯ ಮೇಲೊಂದು ಕೈಯನ್ನಿಟ್ಟು ಕಣ್ಣು ಮುಚ್ಚಿದೆ. ಹಂಗೇ ನಿದ್ರೆ ಹೋದವಳಿಗೆ ಎಚ್ಚರವಾಗಿದ್ದು ಡ್ರಿಪ್‌ ಬಾಟಲ್‌ ಬದಲಿಸಲು ಸಿಸ್ಟರ್‌ ಒಳಬಂದಾಗ. ಸಮಯ ಒಂದಾಗಿತ್ತು. ರಾಮ್‌ಪ್ರಸಾದ್‌ ಕಾಣಿಸಲಿಲ್ಲ. 

ʼಇಲ್ಲಿದ್ರಲ್ಲ ಆಗ. ಅವರೆಲ್ಲಿ ಹೋದ್ರುʼ ಸಿಸ್ಟರ್‌ಗೆ ಕೇಳಿದೆ. 

"ಓ. ನಿಮ್‌ ಹಸ್ಬೆಂಡಾ. ಅವರು ಹೊರಗೆ ಕುಳಿತಿದ್ದಾರೆ. ಇಲ್ಲೇ ಬೆಡ್ಡಿತ್ತಲ್ಲ. ಇಲ್ಲೇ ಮಲಗಬಹುದಿತ್ತಲ್ಲ" 

ʼಅಯ್ಯೋ. ಹಸ್ಬೆಂಡಲ್ಲ ಅವರು. ನನ್ನ ಫ್ರೆಂಡುʼ ಎಂದೆ. ಇಬ್ಬರ ಮುಖದಲ್ಲೂ ನಗುವಿತ್ತು.

ಮುಖಪುಟ ಚಿತ್ರ: ಚೇತನ ತೀರ್ಥಹಳ್ಳಿ. 
ಮುಂದುವರೆಯುವುದು

No comments:

Post a Comment