Apr 5, 2020

ಒಂದು ಬೊಗಸೆ ಪ್ರೀತಿ - 59

ʼಏನ್‌ ನಡೀತಿದೆ ಅಂತಲೇ ಗೊತ್ತಾಗ್ತಿಲ್ಲ ಕಣೋʼ ಸಾಗರನಿಗೆ ಬಹಳ ದಿನಗಳ ನಂತರ ನಾನೇ ಮೊದಲಾಗಿ ಮೆಸೇಜು ಮಾಡಿದೆ. ಬ್ಯುಸಿ ಇದ್ನೋ ಏನೋ ಸುಮಾರೊತ್ತು ಮೆಸೇಜಿಗೆ ಪ್ರತಿಕ್ರಿಯೆ ಬರಲಿಲ್ಲ. ಎರಡು ಮೂರು ಘಂಟೆಯೇ ಆಗಿಹೋಯಿತೇನೋ. ನಾ ಕೂಡ ಆಸ್ಪತ್ರೆಯ ಕೆಲಸದಲ್ಲಿ ತೊಡಗಿಕೊಂಡುಬಿಟ್ಟಿದ್ದೆ. ಊಟದ ಸಮಯದಲ್ಲಿ ಮೊಬೈಲು ಆಚೆ ತೆಗೆದಾಗ "ಏನಾಯ್ತೇ?" ಎಂದವನ ಮೆಸೇಜು ಬಂದಿತ್ತು. ಆನ್‌ ಲೈನ್‌ ಇದ್ದ. 

ರಾಜೀವ ಮಗಳ ಜೊತೆ ನಡೆದುಕೊಳ್ಳುವ ರೀತಿಯನ್ನೆಲ್ಲ ಹೇಳಿಕೊಂಡೆ. ಅವನಿಗೋ ಅಚ್ಚರಿ. "ಅಲ್ವೇ ಇಬ್ರೂ ಮಗು ಬೇಕು ಅಂತಂದುಕೊಂಡು ತಾನೇ ಮಕ್ಕಳು ಮಾಡಿಕೊಂಡಿದ್ದು, ಮಕ್ಕಳು ಮಾಡಿಕೊಳ್ಳಲು ಟ್ರೀಟ್ಮೆಂಟ್‌ ತೆಗೆದುಕೊಂಡಿದ್ದು. ಈಗೇನಂತೆ?" 

ʼಮ್.‌ ಏನಂತ ಹೇಳಲಿ. ಅವರಿಗೆ ಮೈಸೂರಲ್ಲಿರೋದೇ ಇಷ್ಟವಿಲ್ಲ. ಬೆಂಗಳೂರಿಗೆ ಹೋಗುವ ಬೆಂಗಳೂರಿಗೆ ಹೋಗುವ ಅಂತ ಒಂದೇ ಸಮನೆ ಗೋಳು ಮದುವೆಯಾದಾಗಿಂದʼ 

"ಅಲ್ಲಾ ಅವರಿಗೆ ಅಷ್ಟೊಂದು ಇಷ್ಟ ಇದ್ರೆ, ಬೆಂಗಳೂರಿಗೆ ಬರದೇ ಇರುವುದರಿಂದಲೇ ಈ ತೊಂದರೆ ಎಲ್ಲಾ ಅಂದರೆ ಬಂದೇ ಬಿಡಿ ಬೆಂಗಳೂರಿಗೆ" 

ʼಬರಬಾರದು ಅಂತ ನನಗೂ ಇಲ್ಲ ಕಣೋ. ಬರೀ ಎಂಬಿಬಿಎಸ್‌ ಡಿಗ್ರಿ ಇಟ್ಕಂಡು ಬರೋ ಮನಸ್ಸು ನನಗಿರಲಿಲ್ಲ. ಈಗ ಡಿ.ಎನ್.ಬಿ ಸೇರಾಗಿದೆ. ಇನ್ನೇನು ಮುಗಿದೇ ಹೋಗುತ್ತೆ. ಅದಾದ ಮೇಲೆ ಹೋಗುವ ಅಂತ ಹೇಳಿದ್ದೆ. ಸರಿ ಅಂತಲೂ ಅಂದಿದ್ದರು. ಈಗ ನೋಡಿದ್ರೆ ಹಿಂಗೆ. ಮೂರೊತ್ತೂ ಕುಡಿತ, ತುಂಬಾನೇ ಜಾಸ್ತಿ ಮಾಡ್ಕೊಂಡಿದ್ದಾರೆ ಕುಡಿಯೋದನ್ನ. ಅದೆಂಗಾದ್ರೂ ಹಾಳಾಗೋಗ್ಲಿ ಅಂದರೆ ಬಾಯಿಗೆ ಬಂದಂಗೆ ಮಾತುʼ 

"ಅಲ್ವೇ ಒಂದ್‌ ಪಕ್ಷ ನಿನ್‌ ಬಯ್ದ್ರೂ ಓಕೆ. ಏನೋ ನಿನ್‌ ಹಳೇ ಲವ್‌ ಸ್ಟೋರಿ ನೆನಪಿಸ್ಕೊಂಡು ಬಯ್ತಾರೇನೋ ಅಂದ್ಕೋಬೋದು. ಮಗಳನ್ಯಾಕೆ ಬಯ್ಯಬೇಕು" 

ʼನೀನೊಳ್ಳೆ! ತೀರ ನಾವ್‌ ಮದುವೆಯಾದ ಹೊಸತರಲ್ಲೂ ಅವರು ಯಾವತ್ತೂ ನನ್ನ ಪರಶು ವಿಷಯ ಎತ್ಕೊಂಡು ಗಲಾಟೆ ಮಾಡಿದವರಲ್ಲ. ಈಗಲೂ ಆ ಉದ್ದೇಶಕ್ಕೇನು ಅವರು ನನ್ನೊಡನೆ ಜಗಳವಾಡ್ತಿದ್ದಾರೆ ಅಂತ ನನಗನ್ನಿಸೋಲ್ಲ. ಏನ್‌ ಕೆಲಸದ ಒತ್ತಡವೋ ಏನೋ ಗೊತ್ತಿಲ್ಲ. ಅದೇನೋ ಗೊತ್ತಿಲ್ವೋ, ಅವರ ಮನೆಗೆ ಜಾಸ್ತಿ ಹೋಗೋಕೆ ಶುರು ಮಾಡಿದ ಮೇಲೇ ಈ ಎಲ್ಲಾ ಸಮಸ್ಯೆಗಳೂ ಶುರುವಾದಂತಿದೆʼ 

"ಮ್.‌ ಕಷ್ಟ ಕಷ್ಟ. ಒಂದ್ಸಲ ಕುಳಿತು ಮಾತನಾಡು, ಹಿಂಗೆಲ್ಲ ಮಾಡಿದ್ರೆ ಮಗಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರ್ತದೆ. ನಿಮ್ಮಿಂದ ದೂರ ಆಗೋಗ್ತಾಳೆ ಮಗಳು ಅಂತ ಹೆದರಿಸಿ ನೋಡು" 

ʼಖುಷಿಖುಷಿಯಾಗಿ ದೂರ ಹೋಗೇಬಿಡ್ತಾರೆ. ಅವರಿಗೇನಂತೆ!ʼ 

"ಮ್.‌ ಹೋಗ್ತಾ ಹೋಗ್ತಾ ಸರಿ ಹೋಗ್ತದೇನೋ ನೋಡುವ ಬಿಡು" 

ಪಾಪ ಇವನು ತಾನೇ ಇನ್ನೇನು ಹೇಳೋಕೆ ಸಾಧ್ಯ. ನಂಗಂತೂ ಹೋಗ್ತಾ ಹೋಗ್ತಾ ಪರಿಸ್ಥಿತಿ ಇನ್ನೂ ಬಿಗಡಾಯಿಸ್ತದೆ ಅಂತಲೇ ಅನ್ನಿಸ್ತಿದೆ. ಭಯ ಭವಿಷ್ಯದ ಕುರಿತು. 

ʼಏನೋ ನಿನ್‌ ಬಾಯ್‌ ಮಾತಿಂದ ಹಂಗೇ ಆಗಲಿ. ಮತ್ತೆ ಮದುವೆ ತಯಾರಿ ಎಲ್ಲಾ ಮುಗೀತೇನಪ್ಪʼ 

"ಹು ಕಣೇ. ಮುಗೀತು. ಇನ್ನೇನು ಎರಡು ವಾರ ಅಷ್ಟೇ ಅಲ್ವ. ಬರ್ತಿ ಅಲ್ವೇನೇ ಮದುವೆಗೆ?" 

ʼಅದ್ಯಾಕೋ ಅಷ್ಟೊಂದ್‌ ಅನುಮಾನ? ಬಂದೇ ಬರ್ತೀನಿ! ಮಗಳನ್ನೂ ಕರೆದುಕೊಂಡು ಬರ್ತೀನಿ. ಮತ್ತಲ್ಲಿ ನನ್ನ ನೋಡಿ ಸ್ಟೇಜ್‌ ಮೇಲಿಂದ ಓಡಿ ಬಂದು ಬಿಡಬೇಡ ಮತ್ತೆ!ʼ 

"ಹ...ಹ.... ಅಷ್ಟೆಲ್ಲ ಸೀನ್‌ ಇಲ್ಲ ಬಿಡೆ" 

ʼಮತ್ತೆ ಹುಡುಗಿ ಜೊತೆ ಮಾತುಕತೆ ಜೋರಾ...ʼ 

"ತುಂಬಾ ಏನಿಲ್ಲಪ್ಪ, ಮೆಸೇಜ್‌ ಮಾಡ್ಕೋತೀವಿ. ದಿನಕ್ಕೊಂದು ಕಾಲ್‌ ಘಂಟೆ ಅರ್ಧ ಘಂಟೆ ಮಾತು.... ಅಷ್ಟೇ" 

ʼಮ್‌ʼ 

"ಯಾಕೀ ಮ್"‌ 

ʼಯಾಕಿಲ್ಲ?ʼ 

"ಗೊತ್ತಾಯ್ತು ಬಿಡು" 

ʼಏನ್‌ ಗೊತ್ತಾಯ್ತೋ?ʼ 

"ಜೆಲಸಿ!" 

ʼಹುʼ 

"ಧರಣಿ...." 

ʼಹೇಳೋʼ 

"ನನಗವಳ ಜೊತೆ ಮಾತನಾಡುವಾಗ ಮೆಸೇಜು ಮಾಡುವಾಗ ಬಹಳಷ್ಟು ಸಲ ಗಿಲ್ಟ್‌ ಫೀಲ್‌ ಆಗ್ತದೆ ಕಣೇ. ಮೋಸ ಮಾಡ್ತಿದ್ದಿನೇನೋ ಅನ್ನಿಸೋಕೆ ಶುರುವಾಗ್ತದೆ" 

ʼಮ್.‌ ಸಾರಿ ಕಣೋ. ನಾ ಬರದೇ ಇದ್ದಿದ್ದರೆ ಸರಿ ಇರ್ತಿತ್ತೇನೋʼ 

"ನಾ ಏನೋ ಹೇಳಿದ್ರೆ ನೀ ಏನೋ ಅರ್ಥ ಮಾಡಿಕೊಳ್ತೀಯಪ್ಪ" 

ʼನಾ ಸರಿಯಾಗೇ ಅರ್ಥ ಮಾಡಿಕೊಂಡಿದ್ದೀನಿ ಕಣೋ. ನಾ ನಿನ್ನ ಲೈಫಲ್ಲಿ ಬರದೇ ಹೋಗಿದ್ದರೆ ನಿನಗೆ ನಿನ್ನ ಭವಿಷ್ಯದ ಹೆಂಡತಿಗೆ ಮೋಸ ಮಾಡೋ ಭಾವನೇನೇ ಹುಟ್ಟುತ್ತಿರಲಿಲ್ಲವಲ್ಲ? ಅಲ್ಲಿಗೆ ನಾನೇ ಕಾರಣ ಅಂತಾಯ್ತಲ್ಲ. ಒಟ್ಟಿನಲ್ಲಿ ಯಾರಿಗೂ ನೆಮ್ಮದಿ ಕೊಡೋ ಜೀವವಾಗಲಿಲ್ಲ ಇದುʼ 

"ಹಂಗಲ್ವೇ" 

ʼಮತ್ತಿನ್ನೆಂಗೋʼ 

"ಮ್.‌ ಒಂದ್‌ ರೀತಿ ಹಂಗೇನೇ. ಆದರೆ ನಮ್‌ ಜೀವನದ ಹಾದಿಯಲ್ಲಿ ಯಾರ್ಯಾರು ಬರ್ತಾರೆ ಹೋಗ್ತಾರೆ ಅಂತ ನಾವೆಂಗೇ ನಿರ್ಧರಿಸೋಕಾಗುತ್ತೆ. ಬರೋರ ಜೊತೆ ಹೋಗೋರ ಜೊತೆಗೆ ಹೆಂಗೆ ಇರಬೇಕು ಅಂತ ನಿರ್ಧರಿಸಬಹುದೇನೋ ಹೌದು. ಆದರೆ ಎಷ್ಟೋ ಸಲ ನಿರ್ಧಾರಗಳು ಆ ಕ್ಷಣದ್ದಾಗಿರ್ತದೆಯೇ ಹೊರತು ದೂರದೃಷ್ಟಿಯದ್ದಾಗಿರುವುದಿಲ್ಲವಲ್ಲ. ನೀ ನನಗೆ ಸಿಗಲಿಲ್ಲ .... ಪೂರ್ಣವಾಗಿ ಸಿಗಲಿಲ್ಲ ಅನ್ನೋ ಬೇಸರವಿದ್ದೇ ಇದೆ. ಆದರೆ ಸಿಗದೇ ಹೋಗಿದ್ದರೆ ಬದುಕಿನ ಸುಂದರತೆ ಮತ್ತಷ್ಟು ಕಡಿಮೆಯಾಗಿಬಿಡುತ್ತಿತ್ತೋ ಏನೋ" 

ಮುಂಚೆಯಾಗಿದ್ದರೆ ಸಾಲಿಡೀ ಕಿಸ್‌ ಸ್ಮೈಲಿ ಕಳುಹಿಸುತ್ತಿದ್ದೆ. ಈಗ ಒಂದೇ ಒಂದು ಮಾಮೂಲಿ ಸ್ಮೈಲಿಯನ್ನು ಕಳಿಸಿ ʼಬಹುಶಃ ನನ್ನ ಬಗ್ಗೆ ಒಳ್ಳೆ ಅಭಿಪ್ರಾಯ ಇಟ್ಕಂಡಿರೋ ಏಕೈಕ ವ್ಯಕ್ತಿ ನೀನೇ ಏನೋ ಕಣೋʼ 

"ಹಂಗ್ಯಾಕನ್ಕೋತೀ? ನಾನೂ ಪಾಪ ನಿನ್ನ ಬಗ್ಗೆ ಎಷ್ಟೆಲ್ಲ ಕೆಟ್ಟದಾಗಿ ಮಾತನಾಡಿದ್ದೀನಿ. ನಿಂಗೇ ಗೊತ್ತು ಅದೆಲ್ಲ" 

ʼನೀ ಯಾಕೆ ಹಂಗ್‌ ಮಾತಾಡ್ತಿ ಅಂತಲೂ ಗೊತ್ತಿರ್ತದಲ್ಲ. ಜೊತೆಗೆ ನೀ ಹಂಗೆ ಮಾತಾಡೋಕೆ ನಾನೂ ಕಾರಣಾನೇ ಅಲ್ವʼ 

"ಎಲ್ಲಾ ತಪ್ಪನ್ನೂ ನಿನ್ನ ತಲೆ ಮೇಲೇ ಹೊತ್ಕಂಡು ದೊಡ್ಡವಳಾಗಿ ಬಿಡೋ ಚಟ ಅಲ್ವ ನಿಂಗೆ! ಬೇರೆಯವರ ವಿಷಯದಲ್ಲಿ ಗೊತ್ತಿಲ್ಲಪ್ಪ. ನನ್ನ ವಿಷಯದಲ್ಲಂತೂ ನನ್ನದೇ ತಪ್ಪಿದೆ. ನಿನ್ನ ಪರಿಸ್ಥಿತಿ ಅರ್ಥ ಮಾಡಿಕೊಳ್ಳದೇ ತುಂಬಾ ಎಳಸೆಳಸಾಗಿ ವರ್ತಿಸಿದ್ದು ನನ್ನದೇ ತಪ್ಪು" 

ʼಸರಿ ಬಿಡಪ್ಪ. ಪೂರ್ತಿ ನಿನ್ನದೇ ತಪ್ಪುʼ 

"ಹಲೋ ಮೇಡಂ! ಪೂರ್ತಿ ನನ್ನದೇ ತಪ್ಪು ಅಂತ ನಾನೆಲ್ಲೇಳಿದೆ! ಜಾಸ್ತಿ ನಂದು, ಕಮ್ಮಿ ನಿಂದು" 

ʼಹ...ಹ....ಹ ಸರಿ ಕಣೋ. ಮಧ್ಯಾಹ್ನ ಜರ್ನಲ್‌ ಕ್ಲಬ್ಬಿದೆ. ಒಂಚೂರು ಲೈಬ್ರರಿಗೆ ಹೋಗಿ ಓದ್ಕಂಡ್‌ ಹೋಗ್ತೀನಿʼ 

"ಓಕೆ ಕಣೇ" 

ಲೈಬ್ರರಿಯ ಕಡೆಗೆ ಹೋದೆ. ಎಂಬಿಬಿಎಸ್‌ ಸಮಯದಲ್ಲಿ ಪರಶು ಜೊತೆ ಸುತ್ತಾಡ್ಕಂಡಿದ್ದಾಗ್ಲೂ, ಅವನಿಂದ ನಂತರದ ದಿನಗಳಲ್ಲಿ ಕಾಟ ಅನುಭವಿಸುವ ಸಮಯದಲ್ಲೂ, ಈಗ ಮಗಳ ಕೆಲಸ, ರಾಜೀವನಿಂದಾಗುತ್ತಿರುವ ತೊಂದರೆಗಳ ಮಧ್ಯೆಯೂ ಪುಸ್ತಕದ ಮುಂದೆ ಕೂತರೆ ಮುಗೀತು. ಮತ್ತೇನೂ ನೆನಪಾಗುವುದಿಲ್ಲ. ಡಿ.ಎನ್‌.ಬಿಗೆ ಸೇರಿದ ಮೊದಲಲ್ಲಿ ಚೂರು ಕಷ್ಟವಾಗ್ತಿದ್ದಿದ್ದು ಹೌದು, ಈಗ ಆ ಸಮಸ್ಯೆಯಿಲ್ಲ. ನಾನಾಯ್ತು ನನ್ನ ಓದಾಯ್ತು ಅಷ್ಟೇ. ಲೈಬ್ರರೀಲಿ ಪುಸ್ತಕ ತೆಗೆಯುವುಷ್ಟರಲ್ಲಿ ಸಾಗರನಿಂದ ಮತ್ತೊಂದು ಮೆಸೇಜು ಬಂದಿತ್ತು: "ಧರು. ಮದುವೆಯಾದ ಮೇಲೆ ನಿನ್ನ ಜೊತೆ ಫ್ರೆಂಡ್ಶಿಪ್ಪು ಮುಂದುವರಿಸೋಕೂ ನನಗೆ ಹಿಂಜರಿಕೆಯಾಗ್ತಿದೆ. ನಿನ್ನ ಜೊತೆ ಮುಂಚಿನ ತರದ ಆತ್ಮೀಯತೆಯಿಂದ ಮಾತನಾಡದೇ ಹೋದರೂ, ನೀನೂ ಮಾತನಾಡದೇ ಹೋದರೂ, ಎಲ್ಲೋ ಒಂದು ಕಡೆ ನಿನ್ನ ಜೊತೆ ನಡೆಸುವ ಮಾಮೂಲಿ ಮಾತುಕತೆಗಳು ಕೂಡ ನನ್ನ ಹೆಂಡತಿಗೆ ಬಗೆಯುವ ದ್ರೋಹದಂತೇ ಕಾಣಿಸ್ತದೆ ನನಗೆ. ಮದುವೆಯಾದ ಮೇಲೆ ನಿನ್ನ ಅವಾಯ್ಡ್‌ ಮಾಡ್ತೀನೋ ಏನೋ ಅಂತ ನನಗೇ ಅನ್ನಿಸೋಕೆ ಶುರುವಾಗಿದೆ..... ಮದುವೆಯಾದ ಮೇಲೆ ನಿನ್ನನ್ನೂ ಪ್ರೀತಿಸಿಕೊಂಡು ಹೆಂಡತಿಯನ್ನೂ ಪ್ರೀತಿಸಿಕೊಂಡು ಇರೋಕೆ ನನ್ನ ಕೈಲಿ ಆಗಲ್ವೇನೋ ಕಣೇ" 

ನನ್ನ ಕೈಲಿ ಹೆಂಗೆ ಸಾಧ್ಯವಾಯ್ತು ಒಟ್ಟಿಗೇ ಇಬ್ಬಿಬ್ಬರನ್ನು ಪ್ರೀತಿಸೋಕೆ? ʼಪರವಾಗಿಲ್ಲ ಕಣೋ. ಮಗಳು ಹುಟ್ಟಿದ ಮೇಲೆ ನಾ ನಿನ್ನ ಅರ್ಧ ದೂರ ಮಾಡಿದೆ. ಮದುವೆಯಾದ ಮೇಲೆ ನೀ ಇನ್ನರ್ಧ ದೂರ ಮಾಡು! ಅಲ್ಲಿಗಲ್ಲಿಗೆ ಸರಿಯಾಯ್ತಲ್ಲ! ಜೊತೆಗೆ ನಾವೆಷ್ಟೇ ವರ್ಷ ದೂರಾಗಿ ಆಮೇಲ್ಯಾವತ್ತೋ ಒಂದು ದಿನ ಮಾತನಾಡಿದರೂ ಇಬ್ಬರ ಮಾತುಗಳಲ್ಲಿ ಸುಳ್ಳುಗಳಂತೂ ಇರುವುದಿಲ್ಲ ಬಿಡು. ಅಷ್ಟಿದ್ದರೆ ಸಾಕಲ್ಲ ಸ್ನೇಹದಲ್ಲಿ. ನಿನ್ನ ಫ್ಯೂಚರ್‌ ವೈಫ್‌ ಬಗ್ಗೆ ನಂಗೆ ಇದಕ್ಕೇ ಜೆಲಸಿಯಾಗೋದು! ನೀ ತುಂಬಾ ಒಳ್ಳೆಯವನು ಕಣೋ. ಚೆನ್ನಾಗಿ ನೋಡ್ಕೋತೀ ಹೆಂಡ್ತೀನಾʼ 

"ಏನ್‌ ನೋಡ್ಕೋತೀನೋ ಏನೋ! ನಿನ್ನನ್ನ ಮನಸ್ಸಲ್‌ ಇಟ್ಕಂಡು ಅದೇನ್‌ ನೋಡ್ಕೋತೀನೊ" 

ʼನಾ ನಿನ್ನ ಮನಸ್ಸಲ್ಲಿ ಪೂರ್ತಿ ಇದ್ರೂ ನೀ ನಿನ್ನ ಹೆಂಡತಿಯನ್ನ ಇನ್ನೂ ಜಾಸ್ತಿ ಪ್ರೀತಿಸ್ತಿ. ಬೇಕಾದ್ರೆ ಬೆಟ್ಸ್‌ ಕಟ್ಟುʼ 

"ಹೇ ಹೋಗೆ. ಬೆಟ್ಸ್‌ ಅಂತೆ! ಸರಿ ಜರ್ನಲ್‌ ಕ್ಲಬ್ಬಿಗೆ ಓದ್ಕೋ ಹೋಗು. ನಾನೂ ರೌಂಡ್ಸಿಗೆ ಹೋಗಬೇಕು. ಸಿಗುವ ಮದುವೆಯಲ್ಲಿ. ಬಾಯ್"‌ 

ʼಬಾಯ್‌ʼ 

ಒಂದು ಕ್ಷಣ, ಒಂದೇ ಒಂದು ಕ್ಷಣ ರಾಜೀವನಿಗೆ ಡೈವೋರ್ಸ್‌ ಕೊಟ್ಟು ಸಾಗರನನ್ನು ಮದುವೆಯಾಗಿಬಿಟ್ಟಿದ್ದರೆ ಚೆನ್ನಾಗಿರ್ತಿತ್ತಾ? ಅನ್ನೋ ಯೋಚನೆ ಬಂದು ಗೊಂದಲವಾಯಿತು. ರಾಜೀವನ ಇತ್ತೀಚಿನ ವರ್ತನೆಗಳು ಇಂತಹ ಯೋಚನೆಗಳಿಗೆ ಮೂಲ. ಏನೇ ಅಂದ್ರೂ ಪರಶು ಅಷ್ಟೆಲ್ಲ ಗಲಾಟೆ ಮಾಡಿದ ನಂತರವೂ ರಾಜೀವನ ನನ್ನನ್ನು ಮದುವೆಯಾಗಿದ್ದಾನೆ, ಆ ವಿಷಯವನ್ನೆತ್ತಿಕೊಂಡು ಜಗಳವಾಡಿದ್ದೂ ಕಡಿಮೆ. ಏನೋ ಕೆಲಸ ಸರಿ ಸಿಗಲಿಲ್ಲ ಅಂತ ಹಿಂಗಾದ್ನೋ ಏನೋ. ನನ್ನ ಡಿ.ಎನ್.ಬಿ, ಅದಾದ ಮೇಲೆ ಆಸ್ಪತ್ರೆ ಜೊತೆಗಿರೋ ಬಾಂಡ್‌ ಮುಗಿಸಿಕೊಂಡು ಬೆಂಗಳೂರಿಗೆ ಹೊರಟು ಬಿಡುವ ಅಂತ ಹೇಳಬೇಕು ರಾಜೀವನಿಗೆ, ಅಷ್ಟರಮಟ್ಟಿಗಾದರೂ ನೆಮ್ಮದಿ ಸಿಗ್ತದೆ. ನನ್ನ ಮೇಲೆ ಪ್ರೀತಿ ಸುರಿಸದಿದ್ದರೆ ಹೋಗಲಿ, ಮಗಳ ಜೊತೆಗಾದರೂ ಒಂದಷ್ಟು ಮಮಕಾರದಿಂದ ವರ್ತಿಸಿದರೆ ಸಾಕೀಗ. ಹೆಂಗೂ ಎರಡು ವಾರದ ನಂತರ ಬೆಂಗಳೂರಿಗೆ ಹೋಗ್ತಿದ್ದೀವಲ್ಲ, ಹಂಗೇ ಒಂದೆರಡು ದಿನ ಎಲ್ಲಾದ್ರೂ ಸಣ್ಣ ಟ್ರಿಪ್‌ ಮುಗಿಸ್ಕಂಡು ಬಂದ್ರೆ ಹೆಂಗೆ? ನಮ್ಮ ಪ್ರೀತಿ ಪುನಶ್ಚೇತನಕ್ಕೆ?!?!

ಮುಖಪುಟ ಚಿತ್ರ: ಚೇತನ ತೀರ್ಥಹಳ್ಳಿ. 
ಮುಂದುವರೆಯುವುದು

No comments:

Post a Comment