ಡಾ. ಅಶೋಕ್. ಕೆ. ಆರ್.
ಪ್ರಶಾಂತ್ ನರ್ಸಿಂಗ್ ಹೋಮ್ ತಲುಪುವಷ್ಟರಲ್ಲಿ ರಾಜೀವ ಆಸ್ಪತ್ರೆಯ ಫಾರ್ಮಸಿಯಲ್ಲಿದ್ದ ತನ್ನ ಗೆಳೆಯನಿಗೆ ನಾ ಬರುವ ವಿಷಯ ತಿಳಿಸಿದ್ದರು. ನಾ ಅಡ್ಮಿಶನ್ ಮಾಡಿಸುವಾಗ ಆದರ್ಶ್ ಹೆಸರಿನ ಆ ವ್ಯಕ್ತಿ ಬಂದು "ಔಷಧಿ ದುಡ್ಡೆಲ್ಲ ಆಮೇಲ್ ಕೊಡೂರಿ ಮೇಡಂ. ಸದ್ಯ ಅಡ್ಮಿಷನ್ ದುಡ್ಡು ಕೊಟ್ಟುಬಿಡಿ. ಇಲ್ಲಾಂದ್ರೆ ಸುಮ್ನೆ ತರ್ಲೆ ಮಾಡ್ತಾರೆ ಇಲ್ಲಿ" ಎಂದು ಬಿಟ್ಟಿ ಸಲಹೆ ನೀಡಿದರು. ಅಡ್ಮಿಷನ್ನಿಗೆ ಐದು ಸಾವಿರ ಕಟ್ಟಬೇಕೆಂದರು. ನನ್ನ ಪರ್ಸಿನಲ್ಲಿದ್ದಿದ್ದು ಒಂದೂವರೆ ಸಾವಿರ ರುಪಾಯಿ ಮಾತ್ರ. ಹಿಂಗಿಂಗೆ, ನಾನೂ ಡಾಕ್ಟರ್ರೇ. ಅರ್ಜೆಂಟಲ್ಲಿ ಕಾರ್ಡೆಲ್ಲ ತರೋದು ಮರೆತೆ. ನನ್ನ ಹಸ್ಬೆಂಡು ಬಂದು ಕಟ್ತಾರೆ ಅಂದೆ. ಡಾಕ್ಟರ್ ಅಂತ ತಿಳಿದ ಮೇಲೆ ಮುಖದ ಮೇಲೆ ನಗು ತಂದುಕೊಂಡು "ಓಕೆ ಮೇಡಂ. ಟ್ರೀಟ್ಮೆಂಟ್ ಹೇಗಿದ್ರೂ ಶುರುವಾಗಿದ್ಯಲ್ಲ. ಆಮೇಲ್ ಬಂದ್ ಕಟ್ಟಿ. ಸದ್ಯ ಇರೋದನ್ನ ಕಟ್ಟಿರಿ ಸಾಕು ಎಂದರು"
ರಾಧಳ ಕೈಯಿಗೆ ವ್ಯಾಸೋಫಿಕ್ಸ್ ಹಾಕಿ ಐ.ವಿ ಫ್ಲೂಯಿಡ್ಸ್ ಶುರು ಮಾಡಿದರು. ಇನ್ನೇನು ವಾಂತಿ ಭೇದಿಗೆ ಹೆಚ್ಚು ಔಷಧಿಯಿಲ್ಲವಲ್ಲ. ದೇಹದ ನೀರಿನಂಶ ಅಪಾಯ ಮಟ್ಟಕ್ಕೆ ಕುಸಿಯದಂತೆ ನೋಡಿಕೊಂಡರೆ ಸಾಕು. ಜ್ವರ ಇದ್ದಿದ್ದರಿಂದ ಒಂದು ಯಾಂಟಿಬಯಾಟಿಕ್, ವಾಂತಿಗೊಂದು ಇಂಜೆಕ್ಷನ್ ನೀಡಿದರು. ಸುಸ್ತಿನಿಂದ ನಿದ್ರೆ ಹೋಗಿದ್ದಳು ರಾಧ. ಅಲ್ಲಿಂದಲೇ ರಾಜೀವನಿಗೊಂದು ಫೋನು ಮಾಡಿದೆ ಸುಮಾರೊತ್ತು ರಿಂಗಾದ ಬಳಿಕ ಫೋನೆತ್ತಿಕೊಂಡರು.
ʼಎಲ್ಲಿದ್ದೀರಾ?ʼ
"ಇಲ್ಲೇ"
ʼಬಂದ್ರಾʼ
"ಇಲ್ಲ"
ʼಯಾಕೆ?ʼ
"ಯಾಕೋ ಕುಡಿದಿದ್ದು ಜಾಸ್ತಿ ಆದಂಗಿದೆ. ಬರೋಕಾಗಲ್ಲ"