Mar 22, 2020

ಒಂದು ಬೊಗಸೆ ಪ್ರೀತಿ - 57

ನಾಮಕರಣ ಹುಟ್ಟಿದ ಹಬ್ಬ ಮುಗಿದ ಮೇಲೆ ಹೆಚ್ಚು ದಿನ ಕಾಯದೆ ನಮ್ಮ ಪುಟ್ಟ ಮನೆಗೆ ಸಾಮಾನು ಸಾಗಿಸಿದೆ. ಮಗಳ ಸಾಮಾನೇ ರಾಶಿಯಾಗಿತ್ತು. ಅರ್ಧ ನಮ್ಮ ಮನೆಗೆ ಸಾಗಿಸಿ ಇನ್ನರ್ಧ ಅಮ್ಮನ ಮನೆಯಲ್ಲೇ ಇಟ್ಟೆ. ಅಮ್ಮನ ಮನೆಯಲ್ಲಿ ದಿನಕ್ಕರ್ಧ ದಿನ ಇರ್ತಾಳಲ್ಲ ಮಗಳು. ರಾಜೀವನಿಗೆ ನಾ ಮನೆಗೆ ಹಿಂದಿರುಗುವುದು, ಇಷ್ಟು ಬೇಗ ಹಿಂದಿರುಗುವುದು ನೆಚ್ಚಿನ ಸಂಗತಿಯೇನಾಗಿರಲಿಲ್ಲ. ʼಇಷ್ಟು ಬೇಗ ಯಾಕೆ? ಇನ್ನಷ್ಟು ದಿನ ಕಳೀಲಿ ಬಿಡುʼ ಎಂದು ಪದೇ ಪದೇ ಹೇಳುತ್ತಲೇ ಇದ್ದರು. ಎಲ್ಲ ಕಾರಣವನ್ನೂ ಅವರಿಗೆ ಬಿಡಿಸಿ ಬಿಡಿಸಿ ಹೇಳುವುದಕ್ಕಾಗ್ತದಾ? ಒಂದಷ್ಟು ಜಗಳ ಮಾಡಿಕೊಂಡೇ ಮನೆಗೆ ಬಂದೆ. ಅಮ್ಮ ನಾ ಹೋಗೋದನ್ನೇ ಕಾಯ್ತಿದ್ದಿದ್ದೇನೋ ಹೌದು, ಆದರೆ ಹೊರಟ ಮೊದಲ ದಿನ ರಾತ್ರಿ ನನಗೆ ನಿದ್ರೆ ಬರುವವರೆಗೂ ಐದೈದು ನಿಮಿಷಕ್ಕೊಮ್ಮೆ ಫೋನು ಮಾಡಿ ವಿಚಾರಿಸಿಕೊಳ್ಳುತ್ತಿದ್ದರು. “ಬೆಳಿಗ್ಗೆ ಬೇಗ ಕರೆತಂದುಬಿಡು, ಪಾಪ ರಾಧ, ನಮಗೆಲ್ಲ ಒಗ್ಗಿ ಹೋಗಿದ್ದಳು. ಈಗ ನಾವ್ಯಾರೂ ಕಾಣದೇ ಹೋದರೆ ಬೇಸರಿಸಿಕೊಳ್ತದೆ” ಎಂದರು. ʼಸರಿ ಅಮ್ಮ. ಫೋನ್‌ ಇಡು. ನಿದ್ರೆ ಬರ್ತಿದೆʼ ಎಂದು ಫೋನಿಟ್ಟ ಮರುಕ್ಷಣವೇ ಮತ್ತೆ ಫೋನ್‌ ರಿಂಗಣಿಸಿತು “ತಿಂಡಿ ಎಲ್ಲ ಮಾಡಿಕೊಳ್ಳೋಕ್‌ ಹೋಗ್ಬೇಡ. ಇಲ್ಲೇ ಬಂದ್ಬಿಡಿ”. ನಾನೆಲ್ಲಿ ತಿಂಡಿ ಎಲ್ಲಾ ಮಾಡ್ಕೋತೀನಿ ಅಂದಿದ್ದೆ? ಮನೇಲ್ಯಾವ ಸಾಮಾನೂ ಇಲ್ಲ ತಿಂಡಿ ಮಾಡಬೇಕೆಂದರೆ. ಒಂದಷ್ಟು ಹಣ್ಣು ತರಕಾರಿ ತಂದಿಡಿ ಅಂತ ಇವರಿಗೆ ಹೇಳಿದ್ದೇ ಬಂತು. ಏನೂ ತಂದಿರಲಿಲ್ಲ. ಕೊನೆಗೆ ಮಗಳು ಮಧ್ಯರಾತ್ರಿ ಎದ್ದರೆ ಕುಡಿಸಲೊಂದಷ್ಟು ಹಾಲಾದರೂ ತೆಗೆದುಕೊಂಡು ಬನ್ನಿ ಎಂದ್ಹೇಳಿದ್ದಾಯಿತು. ಇರೋ ಹಾಲಲ್ಲಿ ತಿಂಡಿ ಏನ್‌ ಮಾಡ್ಕೋತಿದ್ದೆ ಬೆಳಿಗ್ಗೆ ಬೆಳಿಗ್ಗೆ? ಇನ್ನೂ ಒಂದಷ್ಟು ತಿಂಗಳು ಅಮ್ಮನ ಮನೆಯಲ್ಲೇ ತಿಂಡಿ ಊಟ, ಕೊನೇ ಪಕ್ಷ ಸಾರಂತೂ ಅಮ್ಮನ ಮನೆಯದ್ದೇ ಹೌದು. 

ಈ ಮನೆಯೇನೋ ನಮ್ಮದೇ – ಬಾಡಿಗೆ ಮನೆ – ಬಾಡಿಗೆ ಕೊಡುವವರೆಗಂತೂ ನಮ್ಮದೇ ಅಲ್ಲವೇ…. ಈ ಮನೆಯಲ್ಲಿ ನಾ ಹೆಚ್ಚು ದಿನ ಇದ್ದವಳೇ ಅಲ್ಲ. ಅಮ್ಮನ ಮನೆಗೆ ಹತ್ತಿರವಿದ್ದ ಮನೆ, ಅಮ್ಮನ ಮನೆಯಲ್ಲೇ ಇದ್ದುಬಿಟ್ಟಿದ್ದೆನಲ್ಲ. ಮಾರನೇ ಬೆಳಿಗ್ಗೆ ಅಮ್ಮನ ಮನೆಯಲ್ಲಿ ತಿಂಡಿ ತಿಂದು ಮಗಳನ್ನಲ್ಲೇ ಬಿಟ್ಟು ಮನೆಗೆ ವಾಪಸ್ಸಾದೆ. ರಜೆ ಹಾಕಿದ್ದೆ. ಮನೆಯನ್ನೊಂದಷ್ಟು ಕ್ಲೀನ್‌ ಮಾಡಿ ನನ್ನನುಕೂಲಕ್ಕೆ ತಕ್ಕಂತೆ ಸಾಮಾನು ಸರಂಜಾಮುಗಳನ್ನು ಜೋಡಿಸಿಕೊಳ್ಳೋಣವೆಂಬ ಯೋಚನೆಯೊಂದಿಗೆ. ರಾಜೀವ ತಿಂಡಿ ತಿಂದು ಅಮ್ಮನ ಮನೆಯಿಂದಲೇ ಕೆಲಸಕ್ಕೆ ಹೊರಟರು. ಬೆಳಿಗ್ಗೆ ಬೆಳಿಗ್ಗೆ ಎದ್ದಾಗ “ಯಾಕೋ ಈ ಕೆಲಸ ಸರಿ ಹೋಗ್ತಿಲ್ಲ. ಬಿಟ್ಟು ಬಿಡೋಣ ಅಂದುಕೊಂಡಿದ್ದೀನಿ” ಎಂದು ಹೇಳಿ ಬೆಚ್ಚಿ ಬೀಳಿಸಿದ್ದರು. ʼಮ್‌ʼ ಅಂದಷ್ಟೇ ಹೇಳಿ ಮಾತು ನಿಲ್ಲಿಸಿದೆ. ಈಗ ಬರೋ ಸ್ಟೈಫೆಂಡಿನಲ್ಲಿ ಇವರೂ ಕೆಲಸ ಬಿಟ್ಟುಬಿಟ್ಟರೆ ಖರ್ಚು ವೆಚ್ಚ ಎಲ್ಲ ಹೆಂಗೆ ಅನ್ನೋ ಯೋಚನೆಯೊಂದಿಗೆ ಮನೆಗೆ ಹಿಂದಿರುಗಿದೆ. ರಾಜೀವ ಮನೇನ ನನಗಿಂತ ಕ್ಲೀನಾಗ್‌ ಇಟ್ಕೋತಾರೆ. ದೂಳು, ಕಸ ಎಲ್ಲೂ ಇರಲಿಲ್ಲ. ನನಗೆ ಅವರಷ್ಟು ಒಪ್ಪವಾಗಿ ಕಸ ಗುಡಿಸಿ ನೆಲ ಸಾರಿಸಲು ಬರುವುದಿಲ್ಲ. ಅಡುಗೆ ಮನೆಗೊಂದಷ್ಟು ಸಾಮಾನು ಖರೀದಿಸಿ ತಂದು ಜೋಡಿಸಿ ಮುಗಿಸಿ ಕಪಾಟಿನಲ್ಲಿ ನನ್ನ ಹಳೆಯವೊಂದಷ್ಟು ಬಟ್ಟೆ ತೆಗೆದು ಚೀಲಕ್ಕೆ ತುಂಬಿ ಮಗಳ ಬಟ್ಟೆಗಳನ್ನು ಜೋಡಿಸಿಡುವಷ್ಟರಲ್ಲಿ ಹನ್ನೆರಡಾಗಿತ್ತು. ಇನ್ನೇನು ಅಮ್ಮನ ಮನೆಗೆ ಹೋಗುವ ಅಂದುಕೊಂಡೆನಾದರೂ ಎಷ್ಟೋ ದಿನದ ಮೇಲೆ ಒಬ್ಬಳೇ ಕೆಲಸದ ತಾಪತ್ರಯ, ಮಗಳನ್ನು ನೋಡಿಕೊಳ್ಳುವ ಕೆಲಸ, ಆಸ್ಪತ್ರೆಯಲ್ಲಿ ದಡಬಡ ಅಂತ ಓಡಾಡುವ ತುರ್ತಿಲ್ಲದೇ ಆರಾಮವಾಗಿದ್ದೀನಿ. ಇನ್ನೊಂದೆರಡು ಘಂಟೆ ಈ ಆರಾಮುತನವನ್ನು ಮುಂದುವರೆಸಿದರೆ ತಪ್ಪೇನಿಲ್ಲವಲ್ಲ. ಹೊಟ್ಟೆಗೊಂದಷ್ಟು ತಣ್ಣಗಿನ ಬಾದಾಮಿ ಹಾಲು ಸುರುವಿಕೊಂಡು ಮೊಬೈಲಿಡಿದು ಕುಳಿತೆ. ವಿರಾಮವಾಗಿ ಮೊಬೈಲ್‌ ಹಿಡಿದು ಫೇಸ್‌ಬುಕ್ಕು ವಾಟ್ಸಪ್ಪು ನೋಡಿ ಅದೆಷ್ಟು ಕಾಲವಾಯಿತು? ಫೇಸ್‌ಬುಕ್‌ ತೆರೆದು ನೋಡಿದರೆ ಕಾಲವೇ ಚಲಿಸಿಲ್ಲವೇನೋ ಎನ್ನುವ ಭಾವ. ಅವವೇ ಗೆಳೆಯರ ಸುತ್ತಾಟದ ಫೋಟೋಗಳು, ಒಂದಷ್ಟು ಜನರ ಹೊಸ ಕಾರು, ಹೊಸ ಮನೆ, ಒಂದಷ್ಟು ಜನರ ಪಿಜಿ ಸೀಟು, ಒಂದಷ್ಟು ಜನರ ಮದುವೆ, ಮಕ್ಕಳು. ನನ್ನ ಪ್ರೊಫೈಲಲ್ಲೂ ಅವೇ ಇರ್ತವಲ್ಲ….. ಒಂಚೂರು ಸ್ಕ್ರಾಲ್‌ ಮಾಡಿದಾಗ ಸಜೆಸ್ಟೆಡ್‌ ಫ್ರೆಂಡ್‌ ಲಿಸ್ಟು ಕಾಣಿಸಿತು. ಮೆಡಿಕಲ್‌ ಕ್ಲಾಸ್ ಮೇಟ್‌ ಒಬ್ಬಳ ಹೆಸರು ಕಾಣಿಸಿತು…. ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿದೆ. ಅವಳ ಫೋಟೋ ಮರೆಯಾಗಿ ಮತ್ತೊಂದು ಸಜೆಸ್ಟೆಡ್‌ ಫ್ರೆಂಡ್‌ ಹೆಸರು ಕಾಣಿಸಿತು. ಅಯ್ಯೋ ಇನ್ಯಾರಿಗೆ ಕಳುಹಿಸೋದು ಅಂತಂದುಕೊಂಡು ಸ್ಕ್ರಾಲ್‌ ಮಾಡಲೊರಟವಳಿಗೆ ಸಜೆಸ್ಟೆಡ್‌ ಫ್ರೆಂಡ್‌ ಹೆಸರಿನಲ್ಲಿ ಸಾಗರ್‌ ವಿಶಾಲನ ಹೆಸರು ಕಾಣಿಸಿಬಿಡೋದಾ?! ಅರೆ ಇದೇನಿದು ಇವನು ನನ್ನ ಫ್ರೆಂಡ್‌ ಲಿಸ್ಟಲ್ಲೇ ಇದ್ದನಲ್ಲ. ಅಕೌಂಟ್‌ ಏನಾದ್ರೂ ಪ್ರಾಬ್ಲಂ ಆಗಿ ಡಿಲೀಟ್‌ ಆಗಿ ಹೊಸ ಅಕೌಂಟ್‌ ತೆಗೆದನೋ ಏನೋ ಎಂದು ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿ ವಾಟ್ಸಪ್‌ ತೆರೆದು ʼಎಫ್.ಬೀಲಿ ಹೊಸ ಅಕೌಂಟ್‌ ತೆಗೆದ ಮೇಲೆ ನನಗೊಂದು ಫ್ರೆಂಡ್‌ ರಿಕ್ವೆಷ್ಟ್‌ ಕಳುಹಿಸಬೇಕೆಂದೂ ಅನ್ನಿಸಲಿಲ್ಲವೇನೋ?ʼ ಎಂದು ಮೆಸೇಜಿಸಿದೆ. 

“ನಾನ್ಯಾವ ಹೊಸ ಅಕೌಂಟೂ ತೆಗೆದಿಲ್ಲವಲ್ಲ” 

ʼಮತ್ತೆ ನಿನ್ನ ಹೆಸರು ಸಜೆಸ್ಟೆಡ್‌ ಫ್ರೆಂಡ್ಸ್‌ ಅಲ್ಲಿ ತೋರಿಸ್ತಲ್ಲ?ʼ 

“ಮ್….” ಎಂದಾತ ರಿಪ್ಲೈ ಮಾಡಿದ ಮೇಲೆ ನನ್ನ ಮೊದ್ದು ತಲೆಗೆ ಹೊಳೆದಿದ್ದು ಅವ ನನ್ನ ಅನ್‌ಫ್ರೆಂಡ್‌ ಮಾಡಿದ್ದಾನೆ ಅಂತ! 

ʼಈಗ ಹೊಳೀತು ನೋಡು. ಅನ್‌ಫ್ರೆಂಡ್‌ ಯಾಕ್‌ ಮಾಡಿದ್ದೆ ಅಂತ ಕೇಳಬಹುದಾ?ʼ 

“ಇನ್ನೇನಿದೆ ಇಬ್ಬರ ಮಧ್ಯೆ ಅಂತ ಅನ್‌ಫ್ರೆಂಡ್‌ ಮಾಡಿದೆ” 

ʼಏನೂ ಇಲ್ಲ ಅಂತೀಯಾ?ʼ 

“ಏನಾದ್ರೂ ಇದೆ ಅಂತೀಯಾ?” 

ʼಮುಂಚಿನ ತರ ಇಲ್ಲದೇ ಇರಬಹುದು. ಸ್ನೇಹ ಅಂತೂ ಇದ್ದೇ ಇರ್ತದಲ್ಲʼ 

“ಪ್ರೀತಿ ಹುಟ್ಟಿದ ಮೇಲೆ ಸಂಬಂಧವೇರ್ಪಟ್ಟ ಮೇಲೆ ಬರೀ ಸ್ನೇಹ ಎಲ್ಲ ಇಟ್ಕಂಡು ಇರೋದು ಸುಳ್ಳು ಅಂತ ನೀನೇ ಹೇಳಿದ್ದಲ್ಲ?” 

ʼಮ್‌ʼ 

“ಮ್”‌ 

ʼಹೋಗ್ಲಿ ಬಿಡುʼ 

“ಸರಿ” 

ʼಯಾಕ್‌ ಅನ್‌ಫ್ರೆಂಡ್‌ ಮಾಡ್ದೆ?ʼ 

“ನನ್ನತ್ರ ಬ್ಯುಸಿ ಅಂತಿದ್ದೆ. ಹಂಗೇಳಿ ನಿಮಿಷವೂ ಆಗಿರ್ತಿರಲಿಲ್ಲ. ಎಫ್.ಬಿಯಲ್ಲಿ ಯಾವ್ದೋ ಕಿತ್ತೋದ ಸ್ಟೇಟಸ್ಸೋ, ಇಲ್ಲ ಮಗಳ ಫೋಟೋನೋ ಹಾಕಂಡು ಅದಕ್ಕೆ ಬರೋ ಕಮೆಂಟ್ಸಿಗೆ ರಿಪ್ಲೈ ಮಾಡ್ಕಂಡಿರ್ತಿದ್ದೆ. ನನ್ನ ಮೆಸೇಜಿಗೆ ರಿಪ್ಲೈ ಮಾಡೋದಿಕ್ಕೆ ಮಾತ್ರ ಟೈಂ ಇರ್ತಿರಲಿಲ್ಲ. ಇರಿಟೇಟ್‌ ಆಗೋದು. ಎಫ್.ಬಿಯಲ್ಲಿ ನೋಡಿದ್ರೆ ತಾನೇ ಇರಿಟೇಟ್‌ ಆಗೋದು ಅಂತ ಅನ್‌ಫ್ರೆಂಡ್‌ ಮಾಡಿದೆ" 

ʼಮ್.‌ ಅನ್‌ಫ್ರೆಂಡ್‌ ಮಾಡಿದ ಮೇಲೆ ನನ್ನ ಅಕೌಂಟನ್ನೇ ನೋಡಲಿಲ್ಲವಾ?ʼ 

“ನೋಡ್ತಿದ್ದೆ. ದಿನಕ್ಕೆರಡು ಬಾರಿ” 

ನಗು ಬಂತು. ʼಮತ್ತೆ ಅನ್‌ಫ್ರೆಂಡ್‌ ಮಾಡಿದ ಉದ್ದೇಶವೆಲ್ಲಿ ಈಡೇರಿತುʼ 

“ಅಂತ ಪಾಪಿ ನೀನು. ಎಲ್ಲೋದ್ರೂ ಬಿಡಲ್ಲ” 

ʼಹು. ಪಾಪೀನೇ ನಾನುʼ 

“ಅದ್ಯಾಕಂಗ್‌ ಹೇಳ್ತಿ" 

ʼನೀನೇ ಹೇಳಿದ್ದಲ್ವ ಪಾಪಿ ಅಂತʼ 

“ನಾನು ನನ್ನ ದೇವತೆಗೆ ಪಾಪಿ ಅಂತನಾದ್ರೂ ಅಂತೀನಿ. ಏನಾದ್ರೂ ಅಂತೀನಿ. ನೀನ್ಯಾರು ಹಂಗೆಲ್ಲ ನನ್ನ ದೇವತೇನ ಕರಿಯೋದಿಕ್ಕೆ” 

ʼನಾನ್ಯಾವ ಸೀಮೆ ದೇವತೇನೋ?! ಕೊನೆಗೆ ಮಗಳ ಕೈಲೂ ಅನ್ನಿಸಿಕೊಳ್ಳದಿದ್ದರೆ ಸಾಕು ಅಷ್ಟೇʼ 

“ಹಂಗೆಲ್ಲ ಮಾತನಾಡಬೇಡ್ವೇ ಧರು….. ನನಗೂ ಅರ್ಥವಾಗ್ತದೆ ನೀ ಮಗಳನ್ನು ನೋಡಿಕೊಳ್ಳೋದರಲ್ಲಿ ಪಿಜಿ ಕೆಲಸ ಕಾರ್ಯದಲ್ಲಿ ಬ್ಯುಸಿ ಇದ್ದೇ ಇರ್ತೀಯಾ ಅಂತ. ಆದರೂ ವಿನಾಕಾರಣ ಇರಿಟೇಷನ್‌ ತಪ್ಪಿದ್ದಲ್ಲ. ಸಿಟ್ಟು ಬರ್ತದೆ ಬೇಸರವೂ ಆಗ್ತದೆ….” 

ʼಸಿಟ್ಟು ಓಕೆ. ಬೇಸರ ಯಾಕೆ?ʼ 

“ನೀ ನನಗೆ ಸಿಗಲಿಲ್ಲವಲ್ಲ ಅಂತ” 

ʼಸುಮ್ನಿರಪ್ಪ ನಾ ಸಿಕ್ಕಿದ್ರೆ ನಿನ್ನ ಲೈಫೂ ದುಃಖದಿಂದ ತುಂಬಿಹೋಗ್ತಿತ್ತುʼ 

“ಮ್”‌ 

ʼಮತ್ತೆ ನಿನ್ನ ಲೈಫ್‌ ಹೆಂಗ್‌ ನಡೀತಿದೆ?ʼ 

“ನಡೀತಿದೆ ಮಾಮೂಲಿ. ವಿಶೇಷ ಏನಿಲ್ಲ” 

ʼಮ್‌ʼ 

‌“ಮ್” 

ಅಷ್ಟೆಲ್ಲ ಘಂಟೆಗಟ್ಟಲೆ ಮಾತನಾಡುತ್ತಿದ್ದವರಿಗೀಗ ಐದು ನಿಮಿಷ ಮೆಸೇಜು ವಿನಿಮಯಿಸಲೂ ವಿಷಯ ಸಿಗುತ್ತಿಲ್ಲವಲ್ಲ. ಇವಳ ಜೊತೆ ಏನು ಮಾತಾಡೋದು ದ್ರೋಹಿ ತಕಂಬಂದು ಅಂತ ಅವನಿಗೆ ಅನ್ನಿಸಿರಬೇಕು. ಅವನೇ ಹೇಳ್ತಿದ್ದ ಹಾಗೆ ನಮ್ಮ ಮಾತುಕತೆ ಜಲ್ದಿ ಜಲ್ದಿ ಸೆಕ್ಸ್‌ ಕಡೆಗೆ ಹೊರಳಿಬಿಡ್ತಿತ್ತು. ಸೆಕ್ಸ್‌ ಚಾಟಿಂಗ್‌ ಬಗ್ಗೆ ನನಗೀಗ ಆಸಕ್ತಿಯಿಲ್ಲ. ಅದು ಬಿಟ್ಟು ಬೇರೆ ಏನು ಮಾತನಾಡೋದು! 

ʼಹುಡುಗಿ ನೋಡೋಕ್‌ ಏನಾದ್ರೂ ಹೋಗಿದ್ಯ?ʼ 

“ಹು” 

ʼಹೌದಾ! ಹೇಳಲೇ ಇಲ್ಲ ಮತ್ತೆʼ 

“ಯಾವಾಗ ಹೇಳಬೇಕಿತ್ತು?” 

ಮ್.‌ ಸೂಕ್ತವಾದ ಪ್ರಶ್ನೆ. ಅವನ ಹಾಯ್‌, ಹಾಯ್‌ ಹೇಗಿದ್ದೀಯಾ ಮೆಸೇಜುಗಳಿಗೆ ನಾ ಪ್ರತಿಕ್ರಿಯೆ ನೀಡಿ ಎಷ್ಟು ತಿಂಗಳಾಯಿತು. ಮಗಳ ಕಣ್ಣಲ್ಲಿ ಕೆಟ್ಟವಳಾಗಬಾರದೆಂಬ ಹಂಬಲದಿಂದ ಇದ್ದ ಒಬ್ಬ ಸ್ನೇಹಿತನನ್ನೂ ಕಳೆದುಕೊಂಡೆ. 

ʼಅದೂ ಸರೀನೇ ಬಿಡು. ಎಷ್ಟು ಹುಡುಗಿಯರನ್ನು ನೋಡಿದೆʼ 

"ನೋಡಿದೆ ಒಂದು ನಾಲ್ಕೈದು ಜನರನ್ನ" 

ʼಇನ್ನೂ ಯಾರೂ ಓಕೆ ಆಗಲಿಲ್ಲವಾ?ʼ 

ಒಂದಷ್ಟು ಸಮಯ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. 

ಏನೋ ಈ ವಿಷಯದ ಕುರಿತು ನನ್ನೊಡನೆ ಮಾತನಾಡಲು ಇಷ್ಟವಿಲ್ಲ ಅವನಿಗೆ. 

"ಓಕೆ ಆಗಿದೆ" 

ಈ ಮೆಸೇಜು ಓದಿದ ನಂತರ ನಿಜಕ್ಕೂ ಸಿಟ್ಟು ಬಂತು. ಸಿಟ್ಟು ಬಂದಷ್ಟೇ ವೇಗದಲ್ಲಿ ಅದರ ದುಪ್ಪಟ್ಟು ಬೇಸರವಾವರಿಸಿತು. ಮದುವೆ ನಿಕ್ಕಿಯಾಗಿರೋದನ್ನೂ ನನಗೆ ತಿಳಿಸದಷ್ಟು ದೂರದವಳಾಗಿಬಿಟ್ಟೆನಾ? 

ʼಸರಿʼ 

"ಏನ್‌ ಸರಿ" 

ʼಏನೂ ಇಲ್ಲ. ಥ್ಯಾಂಕ್ಯುʼ 

"ಥ್ಯಾಂಕ್ಸ್‌ ಏನಕ್ಕೆ?" 

ʼವಿಷಯ ತಿಳಿಸದೇ ಇದ್ದಿದ್ದಕ್ಕೆʼ 

"ಈಗ ತಿಳಿಸಿದೆನಲ್ಲ" 

ʼಸರಿʼ 

"ಇನ್ಯಾವಾಗ ತಿಳಿಸಬೇಕಿತ್ತು?" 

ʼಫಿಕ್ಸ್‌ ಆದಾಗಲೇʼ 

"ಮೆಸೇಜಿಗೆ ರಿಪ್ಲೈ ಮಾಡಲ್ಲ, ಫೋನ್‌ ಮಾಡಿದ್ರೆ ರಿಸೀವ್‌ ಮಾಡಲ್ಲ. ಹೇಗೆ ತಿಳಿಸಲಿ" 

ʼಸರಿ ಅಂದ್ನಲ್ಲʼ 

"ಹೋಗ್ಲಿ ಬಿಡು. ಸಾರಿ" 

ʼನೀ ಯಾಕ್‌ ಸಾರಿ ಕೇಳ್ತಿ ಬಿಡು. ನೀನೇ ಹೇಳ್ತಿರ್ತೀಯಲ್ಲ - ಐ ಯಾಮ್‌ ಬ್ಯಾಡ್‌ ಇನ್‌ ಮೇಂಟೇನಿಂಗ್‌ ರಿಲೇಶನ್ಸ್‌ ಅಂತʼ 

"ಅದರಲ್ಲೇನೂ ಸುಳ್ಳಿಲ್ಲವಲ್ಲ" 

ʼಮ್‌ʼ 

ʼಹೋಗ್ಲಿ ಬಿಡು. ಏನ್‌ ಮಾಡ್ತಿದ್ದಾಳೆ ಹುಡುಗಿʼ 

"ಎಂಬಿಬಿಎಸ್‌ ಮುಗಿದಿದೆ. ಪಿಜಿ ಎಕ್ಸಾಂ ತಗಂಡಿದ್ದಾಳೆ. ಯಾವುದಾದರೂ ಸೀಟು ಈ ವರ್ಷಾನೇ ಸಿಗುತ್ತೆ ಅಂತಿದ್ಲು" 

ʼಗುಡ್‌ ಗುಡ್‌. ಫೋಟೋ ಕಳ್ಸೋ ನೋಡ್ತೀನಿʼ ನಾ ಕೇಳೋದನ್ನೇ ಕಾಯ್ತಿದ್ದನೇನೋ ಪಟ್ಟಂತ ಕಳುಹಿಸಿದ. ಆಹಾ! ಚೆಂದದ ಹುಡುಗಿ. ಭಲೇ ಜೋಡಿ ನನ್ನ ಸಾಗರನಿಗೆ. ಖುಷಿಯಾಯಿತು. ಚಳ್ಳಂತ ಹೊಟ್ಟೆ ಉರಿಯಿತು. 

ʼಜೆಲಸಿಗೆ ಹೊಟ್ಟೆ ಉರೀತಿದೆʼ 

"ಯಾಕೋ?" 

ʼಸವತಿ ನೋಡಿದ್ರೆ ಹೊಟ್ಟೆ ಉರಿಯಲ್ವʼ 

"ಇಂತ ನಾಟಕದ ಡೈಲಾಗ್‌ ಎಲ್ಲ ಬೇಡ ಬಿಡು" 

ʼಓಹೋ... ನನ್ನ ಮಾತುಗಳೆಲ್ಲ ಈಗ ನಾಟಕೀಯವಾಗಿ ಹೋಯ್ತʼ 

"ಅಲ್ವ ಮತ್ತೆ? ನೀ ನನ್ನ ಜೊತೆ ಆಗ ಇದ್ದ ರೀತಿ ನಿಜವಾ ಈಗ ಇರುವ ರೀತಿ ನಿಜವಾ ಅಂತ ಗೊಂದಲವಾಗ್ತದೆ ನಂಗೆ" 

ʼಎರಡೂ ನಿಜವೇ. ಆಗಲೂ ನನಗನ್ನಿಸಿದಂತಿದ್ದೆ. ಈಗಲೂ ಅಷ್ಟೇ. ಅವತ್ತೂ ನಾಟಕವಿರಲಿಲ್ಲ, ಇವತ್ತೂ ಇಲ್ಲʼ 

"ಅದು ಸರಿ. ನೀ ಯಾವಾಗಲೂ ನಿನಗನ್ನಿಸಿದಂತೆಯೇ ಇರೋದು... ಅನ್ಯರಿಗೆ ಏನು ಅನ್ನಿಸ್ತದಂತ ಯೋಚನೆ ಮಾಡೋಳಲ್ಲ ನೀನು" 

ʼನೋಡು ಸಾಗರ. ಅವತ್ತು ನಿನ್ನ ಮೇಲೆ ಎಷ್ಟು ಪ್ರೀತಿ ಇತ್ತೋ ಇವತ್ತಿಗೂ ಅಷ್ಟೇ ಇದೆ. ಹೇಳಿದ್ನಲ್ಲ ನಿನಗೆ. ಮಗಳ ಕಣ್ಣಲ್ಲಿ ಚಿಕ್ಕವಳಾಗೋಕೆ ನನಗಿಷ್ಟವಿಲ್ಲ. ಅದಿಕ್ಕೇ...ʼ 

"ನಾನೇನಾದ್ರೂ ಮಗು ಆಯ್ತಲ್ಲೇ. ಸಿಗು ಎಲ್ಲಾದ್ರೂ ಸೆಕ್ಸ್‌ ಮಾಡುವ ಅಂತ ಕೇಳಿದ್ನಾ? ಹೊಕ್ಕೊಳ್ಳಿ ಸೆಕ್ಸ್‌ ಚಾಟ್‌ ಮಾಡುವ ಅಂತೇನಾದ್ರೂ ಕೇಳಿದ್ನಾ? ಇಲ್ಲವಲ್ಲ. ಹೋಗ್ಲಿ ಬಿಡು. ಎಷ್ಟು ಮಾತನಾಡಿ ಜಗಳವಾಡಿದ್ರೂ ಅಷ್ಟೇ. ಉಪಯೋಗವೇನಿಲ್ಲ" 

ʼಮ್.‌ ಮದುವೆಗೆ ಕರೀತಿಯೋ ಇಲ್ಲವೋ….ʼ 

"ನೀ ನಂಗೆ ಮಾಡಿರೋ ಮರ್ಯಾದೆಗೆ ಕರಿಯಬಾರದು ಅಂತಲೇ ಇದ್ದೆ. ಏನ್‌ ಮಾಡ್ತಿ. ಏನೇ ಕಿತ್ತಾಡಿ ಬಯ್ಕಂಡ್ರೂ ನೀ ನನ್ನ ಸೋಲ್‌ಮೇಟು, ಕರೀದೆ ಇರೋಕ್ಕಾಗುತ್ತಾ. ಬಂದು ನೇರವಾಗಿ ನನ್ನ ಹುಡುಗೀನ ನೋಡಿ ಹೊಟ್ಟೆ ಉರ್ಕಂಡ್‌ ಹೋಗುವಂತೆ" 

ʼಆಹಾ! ನೋಡ್ದಾ! ಹೊಟ್ಟೆ ಉರಿಯುತ್ತೆ, ನಿನ್ನ ಅವಳ ಪಕ್ಕ ನೋಡಿದಾಗ. ಒಂದೆರಡು ಪ್ಯಾನ್‌ ೪೦ ನುಂಗೇ ಬರ್ತೀನಿ ಬಿಡು!ʼ 

"ಸೀರಿಯಸ್ಲಿ ಬರ್ತೀಯಾ ನನ್ನ ಮದುವೆಗೆ?!" 

ʼಇದೇನೋ ಹಿಂಗ್‌ ಕೇಳ್ತಿ! ಬರದೇ ಇರೋಕಾಗ್ತದಾ?ʼ 

"ಮ್"‌ 

ʼಸರಿ ಕಣೋ. ಮಗಳತ್ತಿರ ಹೋಗಬೇಕು. ಆಮೇಲ್‌ ಮೆಸೇಜ್‌ ಮಾಡ್ತೀನಿʼ 

"ಆಮೇಲೆ ಅಂದ್ರೆ ಎಷ್ಟು ತಿಂಗಳು" 

ʼತರ್ಲೆʼ 

"ಲವ್‌ ಯೂ ಕಣೇ ಧರು...." 

ʼಲವ್‌ ಯು ಟೂ ಕಣೋ... ಬಾಯ್‌ʼ 

"ಬಾಯ್" 

ಯಾವಾಗ್ಲೂ ನಾವಿಬ್ಬರ್ಯಾಕೆ ಹಿಂಗೇ ಸಮಾಧಾನದಿಂದ ಮಾತನಾಡಿಕೊಂಡಿರಬಾರದು ಎಂದು ಯೋಚಿಸುತ್ತ ಅಮ್ಮನ ಮನೆಗೆ ನಡೆದೆ.

ಮುಖಪುಟ ಚಿತ್ರ: ಚೇತನ ತೀರ್ಥಹಳ್ಳಿ. 
ಮುಂದುವರೆಯುವುದು

2 comments:

  1. ಮುಂದಿನ ಭಾಗ ಎಲ್ಲಿದೆ ಹಾಕಿ

    ReplyDelete
    Replies
    1. ಎಲ್ಲಾ ಭಾಗಗಳೂ ಈ ಲಿಂಕಿನಲ್ಲಿ ಲಭ್ಯವಿದೆ. http://www.hingyake.in/search/label/%E0%B2%95%E0%B2%BE%E0%B2%A6%E0%B2%82%E0%B2%AC%E0%B2%B0%E0%B2%BF?m=0

      Delete