ಡಾ. ಅಶೋಕ್. ಕೆ. ಆರ್.
ಬಹಳ ದಿನಗಳ ನಂತರ ಆಸ್ಪತ್ರೆಯಲ್ಲಿ "ಭಾನುವಾರ ರಜೆ ತಕೋ ಹೋಗಮ್ಮ" ಅಂದಿದ್ರು. ಅಮ್ಮನ ಮನೆಯಲ್ಲಿದ್ದು ಕೂಡ ತುಂಬಾ ದಿನವಾಗಿತ್ತಲ್ಲ ಎಂದು ಶನಿವಾರವೇ ಅಮ್ಮನ ಮನೆಗೆ ಹಾಜರಾಗಿಬಿಟ್ಟೆ. ಏನೇ ಅಮ್ಮನ ಮನೆ ಅಂದ್ರೂ ಅಪರೂಪಕ್ಕೆ ಹೋದಾಗ ಸಿಗೋ ಮರ್ಯಾದೆಯೇ ಬೇರೆ! ರಾಜೀವನಿಗೂ ʼಬನ್ರೀ ಹೋಗುವʼ ಎಂದಿದ್ದೆ. "ಇಲ್ಲ, ನನಗೆ ಕೆಲಸವಿದೆ. ನೀ ಹೋಗಿರು" ಎಂದು ಸಾಗ ಹಾಕಿದ್ದರು. ಇನ್ನೇನು ಕೆಲಸ? ಗೆಳೆಯರೊಟ್ಟಿಗೆ ಸೇರಿ ಕುಡಿಯೋದು ಅಷ್ಟೇ! ಬಹಳ ದಿನಗಳ ನಂತರ ಮಗಳು ಮನೆಯಲ್ಲುಳಿಯುತ್ತಿದ್ದಾಳೆಂದು ಅಪ್ಪ ಒಂದೆರಡು ಕೆಜಿ ಚಿಕನ್ ತಂದಿದ್ದರು. ಹೆಚ್ಚು ಕಡಿಮೆ ನಾ ಹೋಗುವಷ್ಟೊತ್ತಿಗೆ ಸೋನಿಯಾ ಅಮ್ಮ ಸೇರಿಕೊಂಡು ಒಂದು ಕೆಜಿಯಷ್ಟು ಚಿಕನ್ನನ್ನು ಚಾಪ್ಸ್ ಮಾಡಿದ್ದರು. ಇನ್ನುಳಿದ ಒಂದು ಕೆಜಿ ಚಿಕನ್ ನನ್ನ ಬರುವಿಕೆಗಾಗಿ ಕಾಯುತ್ತಿತ್ತು. ಬಿರಿಯಾನಿಯಾಗಲು ಬಿರಿಯಾನಿ ಸ್ಪೆಷಲಿಸ್ಟ್‌ಗೆ ಕಾಯುತ್ತಿತ್ತು. "ಫ್ರೈ ಏನಾದ್ರೂ ಮಾಡಿ. ಬಿರಿಯಾನಿ ಮಾತ್ರ ನನ್ನ ಮಗಳೇ ಬಂದು ಮಾಡಬೇಕು" ಎಂದು ತಾಕೀತು ಮಾಡಿದ್ದರಂತೆ. ʼಏನೋ ಅಪ್ರೂಪಕ್ಕೆ ಅಮ್ಮನ ಮನೆಗೆ ಬಂದರೆ ನನ್ನ ಬಿರಿಯಾನಿ ಮಾಡೋಳನ್ನಾಗಿ ಮಾಡ್ಬಿಟ್ರಲ್ಲʼ ಎಂದು ನಗಾಡುತ್ತಾ ಮಗಳನ್ನೆತ್ತಿ ಮುತ್ತಿಟ್ಟು ಅಪ್ಪನ ಬಳಿ ಬಿಟ್ಟು ಅಡುಗೆ ಮನೆಗೆ ಹೋದೆ. ಅಮ್ಮ ಅವರ ದೂರದ ನೆಂಟರ ವಿಷಯಗಳೇನನ್ನೋ ಹೇಳುತ್ತಿದ್ದರು. ಅವರಲ್ಲರ್ಧ ಜನ ಯಾರ್ಯಾರು ಅಂತ ನನಗೆ ಗೊತ್ತೇ ಇರಲಿಲ್ಲ. ಆದರೂ ಎಲ್ಲಾ ಗೊತ್ತಾದವಳಂತೆ ಹೂ ಹೂ ಎಂದು ತಲೆದೂಗುತ್ತಿದ್ದೆ. ನನಗೇ ಅರ್ಥವಾಗದ ಮೇಲೆ ಇನ್ನು ಸೋನಿಯಾಗೇನು ಅರ್ಥವಾಗಬೇಕು! ಸುಮ್ನೆ ತಲೆತಗ್ಗಿಸಿಕೊಂಡು ಮೊಸರುಬಜ್ಜಿಗೆ ಈರುಳ್ಳಿ ಟೊಮೋಟೊ ಕತ್ತರಿಸುತ್ತಿದ್ದಳು. "ಈ ಅತ್ತೆ ಏನ್ ಹಿಂಗ್ ತಲೆ ತಿಂತಾರೆ" ಅಂತ ಮನಸ್ಸಲ್ಲೇ ಅಂದುಕೊಳ್ಳುತ್ತಿದ್ದಳೋ ಏನೋ. ಅತ್ತೆಯಷ್ಟೇ ಯಾಕೆ? ನಮ್ಮ ಮನೆಯಲ್ಲಿ ನಾನು, ಅಮ್ಮ, ಅಪ್ಪ ಎಲ್ಲಾ ಮಾತೋ ಮಾತು. ಶಶೀನೇ ಮುಂಚಿಂದಾನೂ ಗೂಬೆ ತರ, ಮಾತಿರಲ್ಲ, ಕತೆ ಇರಲ್ಲ ಅವನದು. ಹೂ, ಸರಿ, ಇಲ್ಲ, ಆಯ್ತುಗಳಲ್ಲೇ ದಿನ ದೂಡಿಬಿಡ್ತಾನೆ! ಕುಕ್ಕರ್ ಮುಚ್ಚಳ ಮುಚ್ಚಿ ವಿಷಲ್ ಮೇಲಿಟ್ಟು ʼಏನ್ ಇವತ್ತು ಇಷ್ಟೊತ್ತಾದರೂ ಆಸ್ಪತ್ರೆಯಿಂದ ಯಾರೂ ಯಾವುದಕ್ಕೂ ಫೋನೇ ಮಾಡಲಿಲ್ಲವಲ್ಲʼ ಎಂದುಕೊಳ್ಳುತ್ತಾ ವ್ಯಾನಿಟಿ ಬ್ಯಾಗ್ ತೆರೆದು ನೋಡಿದರೆ ಎಲ್ಲಿದೆ ಫೋನು? ಎಲ್ಲೋ ಬಿಟ್ಟು ಬಂದುಬಿಟ್ಟಿದ್ದೀನಿ. ಎಲ್ಲಿ? ಆಸ್ಪತ್ರೆಯಿಂದ ಬರುವಾಗ ತಂದಿದ್ದೆ. ಮನೆಗೆ ತಲುಪಿ ಹತ್ತು ನಿಮಿಷದಲ್ಲಿ ಆಸ್ಪತ್ರೆಯಿಂದ ಫೋನು ಬಂದಿತ್ತು. ಫೋನು ರಿಸೀವ್ ಮಾಡಿದ ಮೇಲೆ ಬ್ಯಾಟರಿ ಕಡಿಮೆಯಾಗಿದೆ ಎನ್ನುವುದರಿವಾಗಿ ಚಾರ್ಜಿಗೆ ಇಟ್ಟೆ. ಚಾರ್ಜಿಗೆ ಇಟ್ಟವಳು ಅಲ್ಲೇ ಬಿಟ್ಟು ಬಂದೆ! ಶಶಿ ಫೋನ್ ತೆಗೆದುಕೊಂಡು ರಾಜೀವನಿಗೆ ಫೋನ್ ಮಾಡಿದೆ, ಒಂದು ಸಲ, ಎರಡು ಸಲ, ಮೂರು ಸಲ. ಫೋನ್ ರಿಸೀವೇ ಮಾಡಲಿಲ್ಲ. ಎಲ್ಲೋ ಹೊರಗೆ ಗಾಡಿ ಓಡಿಸ್ತಿದ್ದಾರೋ ಏನೋ.