Feb 17, 2020

ಒಂದು ಬೊಗಸೆ ಪ್ರೀತಿ - 53

ಡಾ. ಅಶೋಕ್.‌ ಕೆ. ಆರ್.‌
ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
ಮದುವೆಯ ಸಂಭ್ರಮವೆಲ್ಲ ಮುಗಿಸಿ ಮನೆಗೆ ಬಂದಾಗ ಐದೂವರೆ. ಶಶಿ – ಸೋನಿಯಾ ಇಬ್ಬರೂ ಹಿಂದಿನ ರಾತ್ರಿ ರಿಸೆಪ್ಶನ್‌ ಬೇಡ, ಹೇಗಿದ್ರೂ ಭಾನುವಾರ ಅಲ್ವ ಮದುವೆ, ಮುಹೂರ್ತ ಕೂಡ ಬೆಳಿಗ್ಗೆ ಏಳಕ್ಕೇ ಇದೆ. ರಾತ್ರಿ ರಿಸೆಪ್ಶನ್‌ ಮುಗಿಸಿ ಬೆಳಿಗ್ಗೆ ಅಷ್ಟೊತ್ತಿಗೆ ಏಳೋದು ಎಲ್ಲರಿಗೂ ತಲೆ ನೋವು. ಭಾನುವಾರವೇ ಹತ್ತೂವರೆಯಿಂದ ಹನ್ನೆರಡು ಒಂದರವರೆಗೆ ರಿಸೆಪ್ಶನ್‌ ಇಟ್ಟುಕೊಂಡರೆ ಸಾಕು ಅಂದಿದ್ದರು. ಇರೋ ಒಬ್ಬಳು ಮಗಳ ಮದುವೆಯಲ್ಲಿ ರಾತ್ರಿ ರಿಸೆಪ್ಶನ್‌ ಇಟ್ಟುಕೊಳ್ಳದಿದ್ದರೆ ಹೇಗೆಂದು ಮೊದಮೊದಲಿಗೆ ರಾಮೇಗೌಡ ಅಂಕಲ್‌ ಗೊಣಗಾಡಿದರು…. ಕೊನೆಗೆ ಒಪ್ಪಿಕೊಂಡರು. ಬೆಳಿಗ್ಗೆ ಮುಹೂರ್ತ ಏಳಕ್ಕಿದ್ದಿದ್ದರಿಂದ ಐದೂವರೆಗೆಲ್ಲ ಎದ್ದು ತಯಾರಾಗಿ ಧಾರೆ ಮುಗಿದ ನಂತರ ಮತ್ತೊಂದು ಸುತ್ತು ಬಟ್ಟೆ ಬದಲಿಸಿ ರಿಸೆಪ್ಶನ್ನಿನಲ್ಲಿ ನಿಂತು ಓಡಾಡಿ ಮಾತನಾಡಿ ಎಲ್ಲರಿಗೂ ಸುಸ್ತಾಗಿತ್ತು. ಮಧ್ಯೆ ಮಧ್ಯೆ ಮಗಳನ್ನು ಎತ್ತಿಕೊಂಡು ಸಮಾಧಾನಿಸಿ ಹಾಲುಣಿಸಲು ಖಾಲಿಯಿದ್ದ ರೂಮಿಗೆ ಓಡಾಡಿ……ನನಗಂತೂ ಉಳಿದವರಿಗಿಂತ ಒಂದು ಕೈ ಜಾಸ್ತಿಯೇ ಸುಸ್ತಾಗಿತ್ತು. ಸೋನಿಯಾ ಕಡೆ ಜನರು ಜಾಸ್ತಿ. ʼಲವ್‌ ಮ್ಯಾರೇಜಂತೆ, ಹುಡುಗ ಎಸ್ಸಿಯಂತೆʼ ಅನ್ನುವ ಗುಸುಗುಸುಗಳ ನಡುವೆಯೂ ಜನರು ಜಾಸ್ತಿಯೇ ಇದ್ದರು. "ಹುಡುಗ ನಮ್ಮೋನೆ ಅಂದ್ರೆ ಇದರ ನಾಲ್ಕು ಪಟ್ಟು ಜನ ಇರ್ತಿದ್ರು” ಅಂತ ಸೋನಿಯಾಳ ಸಂಬಂಧಿಕೊಬ್ಬರು ಹೇಳಿದ ಮಾತು ಕಿವಿಗೆ ಬಿದ್ದರೂ ಬೀಳದಂತೆ ನಟಿಸಿದೆ. ಸೋನಿಯಾರ ಮನೆಯವರಿರಲಿ, ಮದುವೆಗೆ ಮುನ್ನ ನಮ್ಮತ್ತೆ ಮನೆಯವರನ್ನು ಸಂಭಾಳಿಸುವುದೇ ಶ್ರಮದ ಕೆಲಸವಾಗಿಬಿಟ್ಟಿತ್ತು. ಮದುವೆಗೆ ಕರೆಯುವುದರಿಂದಲೇ ಕೊಂಕು ಮಾತು ಶುರುವಾಗಿತ್ತು. “ಯಾಕ್‌ ನಮ್‌ ಪೈಕಿ ಯಾರೂ ಇರಲಿಲ್ವೇನೋ” ಎಂದು ಮದುವೆಗೆ ಕರೆಯಲು ಹೋಗಿದ್ದ ನಮ್ಮಮ್ಮ ಮುಖಕ್ಕೆ ಹೊಡೆದಂತೆ ಹೇಳಿಬಿಟ್ಟಿದ್ದರಂತೆ. ಅಪ್ಪನಿಗೆ ಅಮ್ಮ ಈ ವಿಷಯ ತಿಳಿಸಿರಲಿಲ್ಲ. ತಿಳಿದ ಮೇಲೆ ಇವರೊಂದು ಹೇಳಿ ಅದಕ್ಕವರೊಂದು ಹೇಳಿ…..ಜಗಳವಾಗೋದ್ಯಾಕೆ. ʼಅವರಿರೋದೇ ಹಂಗೆ ಬಿಡಮ್ಮʼ ಅಂತ ಸಮಾಧಾನಿಸಿದ್ದೆ. ಅವರನ್ನು ಸಮಾಧಾನಿಸಿದ್ದೆ. ನನ್ನಲ್ಲಿ ಕೋಪ ಮೂಡಿತ್ತು. ರಾಜೀವ ರಾತ್ರಿ ಊಟಕ್ಕೆ ಬಂದಾಗ ಆ ವಿಷಯವನ್ನೆತ್ತಿಕೊಂಡು ಕೆಣಕದೆ ಇರಲಿಲ್ಲ.

ʼಲಗ್ನಪತ್ರಿಕೆ ಕೊಡೋಕ್‌ ಹೋದವರತ್ರ ಎಷ್ಟ್‌ ಬೇಕೋ ಅಷ್ಟ್‌ ಮಾತಾಡೋದ್‌ ಬಿಟ್ಟು ಅದೇನಲ್ಲ ಅಧಿಕಪ್ರಸಂಗ ಮಾಡಿದ್ದಾರೆ ನಿಮ್ಮಮ್ಮʼ ಸಿಟ್ಟಲ್ಲೇಳಬೇಕೆಂದುಕೊಂಡವಳು ವ್ಯಂಗ್ಯಕ್ಕೆ ದನಿಯನ್ನು ಸೀಮಿತಗೊಳಿಸಿಕೊಂಡೆ.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

“ನಮ್‌ ಜಾತಿಯವರನ್ನೇ ಮದುವೆಯಾಗಿದ್ರೆ ಒಳ್ಳೇದಿತ್ತು ಅಂದ್ರೇನು ತಪ್ಪಿದೆ ಬಿಡು”

ʼನೋಡ್ದಾ! ನೀವೇ ಅಲ್ವ ಮುಂದಾಳತ್ವ ವಹಿಸಿಕೊಂಡು ಹೋಗಿ ಮದುವೆಗೆ ಮಧ್ಯಸ್ಥಿಕೆ ಮಾಡಿದ್ದುʼ

“ಎದೆ ಮೇಲ್‌ ಕುಂತು ನಿಮ್‌ ಮನೆಯವರು ಹೋಗಿ ಅಂದಾಗ ಹೋಗ್ದೆ ಇರೋಕಾಗ್ತದಾ?”

ʼನಿಮಗೂ ಈ ಮದುವೆ ಇಷ್ಟ ಇರಲಿಲ್ಲ ಅನ್ನಿʼ

“ನನ್‌ ಇಷ್ಟ ಕಷ್ಟ ನಿನಗೇ ಬೇಕಿಲ್ಲ. ಇನ್ನು ನಿಮ್ಮ ಮನೆಯವರಿಗ್ಯಾಕೆ ಬಿಡು”

ʼಮ್.‌ ಅಂದ್ರೂ ನಿಮ್ಮಮ್ಮ ಮುಂಚೆ ಹೇಳಿದ್ರೆ ಪರವಾಗಿಲ್ಲ. ಇಲ್ಲಿಗ್‌ ನನ್ನ ನೋಡೋಕ್‌ ಬರುವಾಗ್ಲೇ ಅವರಿಗೆ ಗೊತ್ತಿತ್ತಲ್ಲ ಮದುವೆ ನಿಶ್ಚಯವಾಗಿದ್ದೆಲ್ಲ. ಆಗೆಲ್ಲ ಸುಮ್ಮನಿದ್ದು ಈಗ ಹೇಳೋದೇನಿತ್ತು?ʼ

“ಅವರೇನೋ ಹೇಳಿದ್ದಕ್ಕೆ ನನ್ನ ತಲೆ ಯಾಕೆ ತಿಂತೀಯಾ? ನಿನ್ನ ಮೇಲಿನ ಕೋಪಾನ ನಿಮ್ಮಮ್ಮನ ಮೇಲೆ ತೀರಿಸಿಕೊಂಡಿರಬೇಕು”

ʼನನ್ನ ಮೇಲೇನಂತೆ ಹೊಸ ಕೋಪʼ

“ಲಗ್ನಪತ್ರಿಕೆ ಕೊಡೋದಿಕ್ಕೆ ನೀನೂ ಹೋಗಬೇಕಿತ್ತಂತೆ. ಹೋಗ್ಲಿ ಫೋನ್‌ ಮಾಡಾದ್ರೂ ಕರಿ"

ʼನಾನಾ?! ರೀ ನಾನವರ ಮನೆ ಸೊಸೆ. ನಾನೂ ಆ ಮನೆಗೇ ಸೇರಿದವಳು. ಮುಖ್ಯವಾಗಿ ಬೀಗರು ಕರೀಬೇಕು. ಹೋಗಿ ಕರೆದಿದ್ದಾರೆ. ಇನ್ನು ನಿಮ್ಮ ಅಕ್ಕಂದರಿಗೆಲ್ಲ ನಾನೂ ಫೋನ್‌ ಮಾಡಬೇಕು, ಸರಿ. ಅತ್ತೆ ಮಾವಂಗೂ ನಾನೇ ಸ್ವತಃ ಕರೀಬೇಕಾ?ʼ

“ಹ್ಞೂ ಮತ್ತೆ. ನಾವವರ ಜೊತೆ ಇದ್ದಿದ್ರೆ ಬೇರೆ ಪ್ರಶ್ನೆ. ಜೊತೇಲಿಲ್ಲವಲ್ಲ”

ʼಮ್.‌ ಒಂದ್‌ ಲೆಕ್ಕದಲ್ಲಿ ಸರೀನೆ. ಮಾಡ್ತೀನಿ ಬಿಡಿ. ಫೋನ್ಯಾಕೆ? ಆಸ್ಪತ್ರೆ ಮುಗಿಸಿ ಬರಬೇಕಾದರೆ ಹೋಗೇ ಬರ್ತೀನಿ ಒಂದು ದಿನʼ ರಾಜೀವ ಸಮಾಧಾನಗೊಂಡರು. ಖುದ್ದು ಹೋಗಿ ಕರೆದ ಮೇಲೆ ಅತ್ತೆಯೂ ಒಂದಷ್ಟು ಖುಷಿಯಾದರು.

ಸಂಬಂಧಿಕರ ಜೊತೆ ಇಂತ ಚಿಕ್ಕಪುಟ್ಟ ಮುನಿಸು ಬಿಟ್ಟರೆ ಮದುವೆ ಸಂಭ್ರಮದಿಂದ ಜರುಗಿತು. ಊಟ ಚೆನ್ನಾಗಿತ್ತು. ಎಲ್ಲಕ್ಕಿಂತ ಶಶಿ – ಸೋನಿಯಾ ಖುಷಿಖುಷಿಯಾಗಿದ್ದರು. ಅಪ್ಪ ಅಮ್ಮನ ಮುಖದಲ್ಲೂ ಸಂತಸದ ಚಿಲುಮೆ. ಗಳಿಗೆಗೊಮ್ಮೆ ನನಗೆ ಪುರುಷೋತ್ತಮನ ನೆನಪಾಗದೆ ಇರಲಿಲ್ಲ. ಜಾತಿ ಕಾರಣಕ್ಕೆ ಅವನನ್ನು ಬೇಡವೆಂದು ಅಪ್ಪ ನಿಶ್ಚಯಿಸಿದ್ದರು. ಈಗ ಅದೇ ಪುರುಷೋತ್ತಮನ ಜಾತಿಯ ಸೋನಿಯಾಳನ್ನು ಅಪ್ಪಿ ಮುದ್ದಾಡುತ್ತಿದ್ದಾರೆ. ನನ್ನ ಮದುವೆಗೂ ಒಪ್ಪಿದ್ದರೆ ನಾನು – ಪರಶು ಇದೇ ರೀತಿ ಖುಷಿಖುಷಿಯಾಗಿ ಸ್ಟೇಜಿನ ಮೇಲೆ ಫೋಟೋಗೆ ನಿಲ್ಲುತ್ತಿದ್ದೆವಲ್ಲವೇ? ಮ್.‌ ನಮ್ಮಪ್ಪ ಅಮ್ಮನನ್ನು ಬಯ್ಯುವುದೂ ತರವಲ್ಲ. ನೋಡಲು ಬಂದ ಗಂಡುಗಳೊಟ್ಟಿಗೆ ನಾ ನಡೆದುಕೊಳ್ಳುತ್ತಿದ್ದ ರೀತಿ ನೋಡಿ ಗಾಬರಿಬಿದ್ದು ಇಷ್ಟವಿಲ್ಲದೆ ಹೋದರೂ ಪುರುಷೋತ್ತಮನನ್ನು ಒಪ್ಪಿಕೊಂಡಿದ್ದರು. ಅವರಮ್ಮ ರಾಮೇಗೌಡ ಅಂಕಲ್‌ ತರ ಒಂದಷ್ಟು ಯೋಚಿಸಿದ್ದರೂ.....ಯೋಚನೆಗಳ ಸರಣಿಗೆ ಬ್ರೇಕು ಬಿದ್ದಿದ್ದು ಆಸ್ಪತ್ರೆಯ ಸ್ನೇಹಿತರು ಬಂದಾಗ. ಹೋಗಿ ಸುಮಳನ್ನು ತಬ್ಬಿ ಬರಮಾಡಿಕೊಂಡೆ. “ಏನೇ ಮಿಂಚ್ತಿದ್ದಿ” ಅಂತ ಕಣ್ಣೊಡೆದಳು. ನಮ್ಮ ಮೆಡಿಕಲ್‌ ಕ್ಲಾಸ್‌ಮೇಟ್ಸೂ ಒಂದಿಬ್ಬರು ನಮ್ಮಾಸ್ಪತ್ರೆಯಲ್ಲೇ ಕೆಲಸ ಮಾಡುತ್ತಿದ್ದರು. ಅಲ್ಲೇ ಇದ್ದ ಕಾರಣಕ್ಕೆ ಅವರನ್ನು ಕರೆದಿದ್ದೆ. ಇನ್ಯಾರನ್ನೂ ಕರೆಯಬೇಕೆನ್ನಿಸಲಿಲ್ಲ. ತಮ್ಮನ ಮದುವೆಗೆ ಕರೆಸಿಕೊಳ್ಳುವಷ್ಟು ಆತ್ಮೀಯರೂ ಯಾರೂ ಇರಲಿಲ್ಲ, ಒಬ್ಬ ಸಾಗರನ ಹೊರತಾಗಿ. ಘಂಟೆ ಹನ್ನೆರಡಾದರೂ ಸಾಗರನ ಸುಳಿವಿರಲಿಲ್ಲ. ನಿನ್ನೆಯ ಗಡಿಬಿಡಿಯ ನಡುವೆಯೇ ʼಮರೀಬೇಡ ಕಣೋ ನಾಳೆʼ ಎಂದು ಮೆಸೇಜಿಸಿದ್ದೆ. “ಬೇಗಾನೇ ಬರ್ತೀನಿ ಕಣೇ” ಅಂದಿದ್ದ. ಸುಳ್ಳೇಳಿದ್ದನೋ ಏನೋ. ನಾ ಅವನನ್ನು ಕಡೆಗಣಿಸಿದ್ದಕ್ಕೆ ಪ್ರತಿಕ್ರಿಯೆ ಇರಬೇಕು. ಏನೇ ಗಲಾಟೆಗಳಿದ್ರೂ ನಾನವನನ್ನು ಎಷ್ಟೇ ದೂರ ಮಾಡಲು ಪ್ರಯತ್ನಿಸಿದರೂ ತಮ್ಮನ ಮದುವೆಗೆ ಅವನು ನಿಜ್ಜ ಬರಬೇಕೆಂದಿತ್ತು. ಸಾಗರನ ಪರಿಚಯವಾದ ಮೇಲೆ ನಡೀತಿರೋ ಮೊದಲ ಫಂಕ್ಷನ್ನು. ಸಾಗರ ಬರಬೇಕು.

ಕೊನೆಗೂ ಒಂದರಷ್ಟೊತ್ತಿಗೆ ಬಂದ. ಅವ ಒಳ ಬಂದಾಗ ನಾ ಸ್ಟೇಜಿನ ಬಳಿ ಇದ್ದೆ. ಸಾಗರನ ಮುಖದಲ್ಲಿದ್ದ ವಿಷಣ್ಣತೆಯ ಭಾವ ಅಷ್ಟು ದೂರದಿಂದಲೇ ನನ್ನನ್ನು ತಟ್ಟಿತು. ಬಾಗಿಲಿನ ಬಳಿಯೇ ಇದ್ದ ರಾಜೀವ ಸಾಗರನನ್ನು ಮಾತನಾಡಿಸಿದ. ಯಾಕೋ ಗೊತ್ತಿಲ್ಲ, ಆ ಕ್ಷಣದಲ್ಲಿ ಇವರೀರ್ವರ ಜೊತೆ ಮಾತನಾಡುತ್ತಾ ಪುರುಷೋತ್ತಮನೂ ನಿಂತಿರಬೇಕಿತ್ತು ಅನ್ನಿಸಿತು. “ಇಲ್ಲೇ ಎಲ್ಲೋ ಇದ್ಲು ಧರಣಿ” ಎನ್ನುತ್ತಾ ಅತ್ತಿತ್ತ ತಿರುಗಿ ನೋಡಿ ನಂತರ ಸ್ಟೇಜಿನ ಮೇಲಿದ್ದ ನನ್ನತ್ತ ನೋಡಿ ಕೈಬೀಸಿದರು. ಆಗಷ್ಟೇ ಅವರ ಕಡೆಗೆ ನೋಡಿದವಳಂತೆ ಮುಗುಳ್ನಕ್ಕು ಸಾಗರನನ್ನು ಸ್ಟೇಜಿನ ಬಳಿ ಬರುವಂತೆ ಕೈಸನ್ನೆ ಮಾಡಿದೆ. ರಾಜೀವನ ಜೊತೆ ಮಾತನಾಡುತ್ತಿದ್ದಾಗ ಮುಖದ ಮೇಲೆ ಮೂಡಿದ್ದ ನಗುವನ್ನು ಅಲ್ಲೇ ಬಿಸುಟಿ ಮೊದಲಿದ್ದ ವಿಷಣ್ಣತೆಯನ್ನು ಹೊತ್ತುಕೊಂಡು ಬಳಿ ಬಂದ. ʼಏನೋ ಇಷ್ಟು ಬೇಗ ಬಂದು ಬಿಟ್ಟಿದ್ದೀಯಾ?ʼ ಒಂಚೂರು ಗೇಲಿ ಮಾಡಿ ಅವನ ಮೂಡು ಸರಿಮಾಡೋಣವೆಂದುಕೊಂಡು ಹೇಳಿದೆ.

“ಬಂದಿದ್ದೇ ಹೆಚ್ಚು. ಇನ್ನೆಷ್ಟು ಬೇಗ ಬರಬೇಕಿತ್ತು” ಅವನ ದನಿಗೆ ಬೆಚ್ಚಿಬಿದ್ದೆ. ಇನ್ನೇನು ಮಾತನಾಡಿದರೂ ಅವ ಸ್ಪೋಟಗೊಳ್ಳುವಂತಿದ್ದ. ಇವನೇನಾದ್ರೂ ಜೋರು ಮಾತಾಡಿ ಅದನ್ಯಾರಾದರೂ ಕೇಳಿಸಿಕೊಂಡು ಯಾಕೆ ಬೇಕು ಸಹವಾಸ ಎಂದುಕೊಂಡು ʼನಡೀ ತಮ್ಮನ್ನ ಪರಿಚಯ ಮಾಡಿಸ್ತೀನಿʼ ಅಂತ್ಹೇಳಿ ಕರೆದುಕೊಂಡು ಹೋದೆ. ಅಲ್ಲೆಲ್ಲೋ ಬಾಗಿಲ ಬಳಿ ಬಿಸುಟಿ ಬಂದಿದ್ದ ನಗುವನ್ನು ಮತ್ಯಾವ ಮಾಯದಲ್ಲೋ ಧರಿಸಿಕೊಂಡು ಇಬ್ಬರಿಗೂ ವಿಶ್‌ ಮಾಡಿದ. ವಿಶ್‌ ಮಾಡಿ ಫೋಟೋ ತೆಗೆದು ಮುಗಿದ ಮೇಲೆ ಮತ್ತದೇ ವಿಷಣ್ಣತೆಯ ಭಾವ. ನಮ್ಮಿಂದೆಯೇ ಸೋನಿಯಾಳ ಸ್ನೇಹಿತೆಯರು ಬಂದರು. “ಅಕ್ಕ ಒಂದ್ನಿಮಿಷ ಬನ್ನಿ ಇಲ್ಲಿ” ಸೋನಿಯಾ ಕರೆದಳು. ʼಬಂದೆʼ ಎಂದವಳಿಗನ್ನುತ್ತಾ ಸಾಗರನ ಕಡೆಗೆ ತಿರುಗಿ ʼಒಂದ್ನಿಮಿಷ ಕೂತಿರೋ ಬರ್ತೀನಿ. ಮಗಳು ಅಮ್ಮನ ಹತ್ತಿರ ಇದ್ದಾಳೆ. ಕರ್ಕಂಡ್‌ ಬರ್ತೀನಿʼ ಎಂದಾಗ. “ಪರವಾಗಿಲ್ಲ. ಕ್ಯಾರಿ ಆನ್.‌ ಸಿಗುವ ಮತ್ತೊಮ್ಮೆ" ಎಂದ್ಹೇಳಿದವನು ಮತ್ತೊಂದೇ ಒಂದು ಸಲಕ್ಕೂ ತಿರುಗಿ ನೋಡದೆ ಹೊರಟುಬಿಟ್ಟ. ತನ್ನ ವಿಷಣ್ಣತೆಯ ಭಾವವನ್ನು ನನಗೆ ವರ್ಗಾಯಿಸಿ ಹೊರಟುಬಿಟ್ಟ. ಯಾಕಾದರೂ ಕರೆದೆ ಇವನನ್ನ ಅನ್ನಿಸಿದ್ದು ಸುಳ್ಳಲ್ಲ. ಸೋನಿಯಾಳ ಬಳಿ ಬಂದೆ. ಸೋನಿಯಾ ಅವಳ ಸ್ನೇಹಿತರಿಗೆ ನನ್ನನ್ನು ಪರಿಚಯಿಸುತ್ತಾ “ನಾ ಹೇಳಿರಲಿಲ್ವ. ನನ್ನ ಮದುವೆ ನಡೆಯೋದಿಕ್ಕೆ ಶಶಿಯ ಅಕ್ಕನೇ ಕಾರಣ ಅಂತ. ಅವರೇ ಇವರು ಧರಣಿ ಅಕ್ಕ” ಎಂದು ಹೊಗಳಿದಳು. ʼನಾನೇನ್‌ ಮಾಡ್ದೆ ಸುಮ್ನಿರುʼ ಎಂದು ಪ್ರೀತಿಯಿಂದ ಗದರುತ್ತಾ ಅವಳ ಸ್ನೇಹಿತೆಯರ ಕೈ ಕುಲುಕಿದೆ. ಕಣ್ಣು ಮಾತ್ರ ಸಾಗರನನ್ನೇ ಹಿಂಬಾಲಿಸುತ್ತಿತ್ತು. ಕೊನೇ ಪಕ್ಷ ಛತ್ರದ ಬಾಗಿಲಿನಿಂದ ಹೊರಗೆ ಕಾಲಿಡಬೇಕಾದಾಗಲಾದರೂ ಒಮ್ಮೆ ತಿರುಗಿ ನೋಡ್ತಾನಾ ಅಂತ, ತಿರುಗಲಿಲ್ಲ. ಸಾಗರ ಮೂಡಿಸಿದ ಬೇಸರವನ್ನು ಬದಿಗೆ ಸರಿಸಿ ಮದುವೆಯ ಸಡಗರದಲ್ಲಿ ಮುಳುಗಿಹೋದೆ. ಸಡಗರ ಸಂಕಟವನ್ನು ಮರೆಮಾಚಿತು.

ಮುಖಪುಟ ಚಿತ್ರ: ಚೇತನ ತೀರ್ಥಹಳ್ಳಿ. 
ಮುಂದುವರೆಯುವುದು

No comments:

Post a Comment