ಬಿಡುವಿನ ಭಾನುವಾರ ವಾರ್ಡುಗಳಲ್ಲಿ ರೋಗಿಗಳೆಚ್ಚಿರಲಿಲ್ಲ. ಓಪಿಡಿ ಡ್ಯೂಟಿ ಕೂಡ ನನ್ನದಿರಲಿಲ್ಲ. ರೌಂಡ್ಸು ಮುಗಿಸಿ ಹತ್ತು ಘಂಟೆಗೆಲ್ಲ ಮನೆ ಸೇರಿಬಿಟ್ಟಿದ್ದೆ. ಕೆಲಸ ಓದು ಮಗಳು ಕೆಲಸ ಓದು ಮಗಳು… ದಿನಚರಿ ಏಕತಾನತೆ ಮೂಡಿಸಿಬಿಟ್ಟಿತ್ತು. ಇವತ್ತು ಸುಮ್ಮನೆ ಮಗಳನ್ನು ಹಾಲಿನಲ್ಲಿ ಸೋಫಾದ ಮೇಲೆ ಮಲಗಿಸಿಕೊಂಡು ದಿನಪೂರ್ತಿ ಟಿವಿ ನೋಡ್ತಾ ಕೂತುಬಿಡಬೇಕು. ಎಷ್ಟು ದಿನವಾಗೋಯ್ತು ಟಿವಿ ಎಲ್ಲಾ ನೋಡಿ ಅಂದ್ಕೊಂಡು ಮಗಳಿಗೆ ರೂಮಿನಲ್ಲಿ ಹಾಲು ಕುಡಿಸುತ್ತಿರುವಾಗ ಗೇಟು ತೆರೆದ ಸದ್ದಾಯಿತು. ಇಷ್ಟೊತ್ತಿಗ್ಯಾರು? ರಾಜೀವನೇ ಇರಬೇಕು. ಭಾನುವಾರ ಅವರು ಎದ್ದೇಳೋದು ಲೇಟು. ತಿಂಡಿಗೆ ಬಂದ್ರೂ ಬಂದ್ರೆ ಇಲ್ಲಾಂದ್ರೆ ಇಲ್ಲ. ಇವತ್ತೇನೋ ಅಪರೂಪಕ್ಕೆ ತಿಂಡಿಗೆ ಬಂದುಬಿಟ್ಟಿದ್ದಾರೆ. ನಿನ್ನೆ ಪಾರ್ಟಿ ಮಾಡಿರಲಿಲ್ಲವೇನೋ. ಏನ್ ಗಂಡಸರೋ ಏನೋಪ, ದಿನಾ ಇಲ್ಲೇ ಇದ್ದು, ಕೊನೇಪಕ್ಷ ರಾತ್ರಿ ಇಲ್ಲೇ ಇದ್ದು ಕಷ್ಟಪಟ್ಟು ಹುಟ್ಟಿರೋ ಮಗಳನ್ನ ಇಷ್ಟಪಟ್ಟು ನೋಡಿಕೊಳ್ಳೋದು ಬಿಟ್ಟು ಪುಸಕ್ಕಂತ ಉಂಡು ವಾಪಸ್ಸಾಗಿಬಿಡುತ್ತಾರೆ. ಹೋಗಲ್ಲೇನ್ ಮಾಡ್ತಾರೆ. ಹೋಗ್ತಾ ದಾರೀಲೊಂದು ಸಿಗರೇಟು ಸೇದ್ಕಂಡು ಫ್ರೆಂಡ್ಸ್ ಜೊತೆ ಒಂದಷ್ಟು ಹರಟೆ ಹೊಡ್ಕಂಡು ಮನೆಗೋಗಿ ಹನ್ನೆರಡರವರೆಗೆ ಯಾವ್ದಾದ್ರೂ ಇಂಗ್ಲೀಷ್ ಪಿಚ್ಚರ್ ನೋಡ್ಕಂಡು ಮಲಗಿಬಿಡ್ತಾರೆ.
ಸೀದಾ ರೂಮಿಗೇ ಬಂದರು. ʼತಿಂಡಿ ತಿನ್ನೋಗಿʼ ಎಂದೆ.
“ಇಲ್ಲ. ಮನೆಯತ್ರ ಒಂದ್ಕಡೆ ಮಲ್ಲಿಗೆ ಇಡ್ಲಿ ಚಟ್ನಿ ಚೆನ್ನಾಗ್ ಮಾಡ್ತಾರೆ. ಅಲ್ಲೇ ತಿಂದ್ಕಂಡ್ ಬಂದೆ"
ʼನಂಗೂ ತರೋದಲ್ವ! ಮಲ್ಲಿಗೆ ಇಡ್ಲಿ ಅಂದ್ರೆ ಇಷ್ಟ ನಂತೆ ಅಂತ ಗೊತ್ತಲ್ಲ. ಎರಡ್ ವರ್ಷದಿಂದೆ ಎಕ್ಸಿಬಿಷನ್‌ನಲ್ಲಿ ತಿಂದದ್ದೇ ಕೊನೆʼ
“ತರೋಣ ಅಂತಾನೇ ಹೋಗಿದ್ದು. ಇದೇ ಕೊನೇ ಒಬ್ಬೆ. ಪಾರ್ಸೆಲ್‌ಗಿಲ್ಲ ಸರ್. ಇಲ್ಲಿ ಬರೋರಿಗೆ ಮಾತ್ರ ಅಂದ್ಬಿಟ್ಟ"
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.
ʼಹೋಗ್ಲಿ ಬಿಡಿʼ ಎಂದವಳಿಗೆ ಇವರು ನಿಜಾ ಹೇಳಿದರೋ ಇಲ್ಲ ಸಮಯಕ್ಕೆಂದು ಸುಳ್ಳು ಹೇಳಿದ್ರೋ ಕಂಡುಹಿಡಿಯುವುದಕ್ಕಾಗಲಿಲ್ಲ. ನಿಜಾನೇ ಆದ್ರೆ ಅಪರೂಪಕ್ಕೆ ನನಗಿಷ್ಟವಾಗಿದ್ದು ತರೋಕೆ ಹೋಗಿದ್ದಾರೆ ಅಂದ್ರೆ ಏನೋ ಕೆಲಸವಾಗಬೇಕಿದೆ ನನ್ನಿಂದ ಅಂತ ಕಾಣ್ತದೆ. ಏನಿರಬಹುದು? ಮತ್ತದೇ ಕೆಲಸ ಬ್ಯುಸಿನೆಸ್ಸು ಕ್ಲಿನಿಕ್ಕಾ?.... ಅಯ್ಯೋ! ಅಪರೂಪಕ್ ಒಂದ್ ಭಾನುವಾರ ಬಿಡುವಾಗಿರೋಣ ಅಂದ್ರೆ ಯಾಕೋ ಇವರು ಕಲ್ಲು ಹಾಕ್ವಂಗ್ ಕಾಣ್ತದೆ.
"ಮತ್ತೆ ಹೆಂಗ್ ನಡೀತಿದೆ ಡಿ.ಎನ್.ಬಿ”
ʼಪರವಾಗಿಲ್ಲ ರೀ. ನಮ್ ಆಸ್ಪತ್ರೇಲಿ ಬೇರೆ ಡಿಪಾರ್ಟ್‌ಮೆಂಟುಗಳಿಗೆ ಹೋಲಿಸಿದರೆ ನಮ್ಮಲ್ಲೆ ಕಡಿಮೆ ಪೇಶೆಂಟ್ಸು. ಹಂಗಾಗಿ ಸ್ವಲ್ಪ ಆರಾಮೇ. ಎಲ್ಲಾ ತರದ ಕಾಂಪ್ಲಿಕೇಟೇಡ್ ಕೇಸ್‌ಗಳೂ ಬರ್ತವೆ. ಕಡಿಮೆ ಕೇಸುಗಳಾದರೂ ಕಲಿಯೋದಿಕ್ಕೆ ಸಾಕಷ್ಟಿದೆʼ
“ಗುಡ್ ಗುಡ್. ಇನ್ನೂ ಒಂದ್ ವರ್ಷ ಅಷ್ಟೇ ಅಲ್ವ"
ʼಹ್ಞೂ. ನೋಡ್ತಾ ನೋಡ್ತಾ ಪರೀಕ್ಷೆಗಳು ಬಂದೇ ಬಿಟ್ವು. ಎಷ್ಟೊಂದ್ ಓದೋದಿದೆ. ಡಿ.ಎನ್.ಬಿ ಯಲ್ಲಿ ಮೊದಲ ಅಟೆಂಪ್ಟ್‌ನಲ್ಲಿ ಪಾಸಾಗೋದೆ ಕಷ್ಟ ಅಂತಾರೆ. ಏನಾಗ್ತದೋ ನೋಡ್ಬೇಕುʼ
“ನೀನೇ ಪಾಸಾಗ್ದೇ ಹೋದ್ರೆ ಇನ್ಯಾರ್ ಪಾಸ್ ಆಗ್ತಾರೆ ಬಿಡು"
ಈ ಡೈಲಾಗ್ ಅನ್ನು ಹತ್ತನೇ ಕ್ಲಾಸಿನಿಂದ ಹಿಡಿದು ಮೆಡಿಕಲ್ ಕೊನೇ ವರ್ಷದವರೆಗೂ ಕೇಳ್ತಾನೇ ಬೆಳೆದೆ. ಫ್ರೆಂಡ್ಸು, ಅಪ್ಪ ಅಮ್ಮ, ತಮ್ಮ, ಪರಶು ಪದೇ ಪದೇ ಹೇಳುತ್ತಿದ್ದ ಮಾತು.
ʼಹಂಗಲ್ರೀ. ಥಿಯರಿ ಪಾಸಾಗ್ತೀನಿ ಬಿಡಿ. ಅನುಮಾನ ಬೇಡ. ಕ್ಲಿನಿಕಲ್ ಪರೀಕ್ಷೆ ಇಲ್ಲಿರೋದಿಲ್ಲ. ಬೇರೆ ಕಡೆ ಇರುತ್ತೆ. ಸಾಮಾನ್ಯವಾಗಿ ಬೇರೆ ರಾಜ್ಯಾನೇ. ಪಕ್ಕದ ತಮಿಳುನಾಡಿಗೂ ಹಾಕಬಹುದು. ದೂರದ ದೆಹಲಿಗೂ ಹಾಕಬಹುದು. ಅದೇ ಕಷ್ಟ. ಭಾಷೆ ಸಮಸ್ಯೆ. ಹೊಸ ಆಸ್ಪತ್ರೆ. ಆ ಟೆನ್ಶನ್‌ಗೇ ಅರ್ಧ ಸೋತಂತಾಗ್ತದೆʼ
“ಮ್. ಎಲ್ಲಾ ಆರಾಮ್ ಆಗ್ತದೆ ಬಿಡು"
ʼಹೋಪ್ ಸೋʼ
“ನಿನ್ನತ್ರ ಒಂದ್ ವಿಷಯ ಮಾತನಾಡಬೇಕಿತ್ತು" ಇದನ್ನು ಶುರು ಮಾಡೋದಿಕ್ಕೆ ಇಷ್ಷೆಲ್ಲ ಪೀಠಿಕೆಯಾ!
ʼಅದಕ್ಕೇನ್ ಪರ್ಮಿಷನ್ ತಗೋಬೇಕಾ?ʼ
“ಹೇಗಿದ್ರೂ ನಿನ್ನ ಕೋರ್ಸು ಮುಗೀತದೆ ಮುಂದಿನ ವರ್ಷಕ್ಕೆ. ಬರೀ ಎಂಬಿಬಿಎಸ್ ಇಟ್ಕಂಡು ಬೆಂಗಳೂರಿಗೆ ಹೋದ್ರೆ ಬೆಲೆ ಇಲ್ಲ ಅಂತ ಇಷ್ಟು ದಿನ ಹೇಳ್ತಿದ್ದೆ. ಈಗ ಡಿಗ್ರೀನೂ ಆಗ್ತದೆ. ಒಳ್ಳೆ ಸಂಬಳವೂ ಸಿಗ್ತದೆ. ಸೋ, ಮುಂದಿನ ವರ್ಷ ಆರಾಮಾಗಿ ಬೆಂಗಳೂರಿಗೆ ಹೋಗಬಹುದಲ್ಲ. ಸಡನ್ನಾಗಿ ಬೆಂಗಳೂರಿಗೆ ಹೋದ್ರೆ ಕಷ್ಟಾನೇ ಅಂತ ನಂಗೂ ಗೊತ್ತಿದೆ. ಅದಕ್ಕೆ ನಾ ಈಗಲೇ ಬೆಂಗಳೂರಲ್ಲಿ ಕೆಲಸ ಹುಡುಕಿಕೊಳ್ತೀನಿ. ಒಂದಿಬ್ರು ಫ್ರೆಂಡ್ಸಿಗೇಳಿಟ್ಟಿದ್ದೀನಿ. ಸಿಗ್ತದೆ ಆರಾಮಾಗೇ” ಅಂತಂದಿದ್ದಾರೆ. ಇವರಿಗೇನ್ ತಿಕ್ಲಾ ಅಂತನ್ನಿಸಿಬಿಡ್ತು.
ʼರೀ! ಏನ್ ಮಾತಾಡ್ತಿದೀರ. ಮುಂದಿನ ವರ್ಷ ನನ್ನ ಡಿ.ಎನ್.ಬಿ ಮುಗೀತದೇನೋ ಹೌದು. ಪಾಸೂ ಆಗ್ತೀನಿ ಅಂದಿಟ್ಟುಕೊಳ್ಳಿ. ಆದರೆ ವಿಷಯ ಮರೆತ್ರಿ ನೀವು ಅಂತ ಕಾಣ್ತದೆ. ಒಂದು ವರ್ಷದ ಬಾಂಡ್ ಇದೆ.
"ಯಾರನ್ ಕೇಳಿ ಬಾಂಡ್ ಒಪ್ಕಂಡೆ?"
ʼಒಳ್ಳೇ ಕತೆಯಲ್ಲ! ಆಗಲೇ ಮಾತನಾಡಿದ್ದೆವಲ್ಲ. ಬಾಂಡ್‌ಗೆ ಒಪ್ಪಿದ್ದಕ್ಕೆ ತಾನೇ ಅವರು ಜಾಸ್ತಿ ಸ್ಟೈಪೆಂಡ್ ಕೊಡೋದಿಕ್ಕೆ, ಫೀಸು ದುಡ್ಡು ಕಡಿಮೆ ಮಾಡೋದಿಕ್ಕೆ ಒಪ್ಪಿಕೊಂಡದ್ದು?ʼ
“ಅದನ್ನೇ ಯಾಕ್ ಒಪ್ಕಂಡೆ ಅಂತ ಕೇಳಿದ್ದು?"
ʼಒಳ್ಳೇ ಕತೆಯಲ್ಲ ನಿಮ್ದು! ಒಪ್ಪಿಕೊಳ್ಳದೇ ಹೋಗಿದ್ರೆ ಮನೆ ಖರ್ಚು ಹೇಗೆ ನಿಭಾಯಿಸಲಿಕ್ಕಾಗ್ತಿತ್ತು?ʼ
“ಏನೋ ಇಡೀ ಮನೆ ಜವಾಬ್ದಾರಿ ನೀನೇ ಹೊತ್ಕಂಡ್ ಮೆರೆಯೋಳಂಗೆ ಆಡ್ಬೇಡ. ನಾನೆಂಗೋ ದುಡ್ ತಂದು ಮ್ಯಾನೇಜ್ ಮಾಡ್ತಿದ್ದೆ"
ʼಸಾಲ ತರೋದನ್ನು ಮ್ಯಾನೇಜ್ ಮಾಡೋದು ಅಂತಾರೇನ್ರಿ?ʼ
"ನಾನು ಸಾಲನಾದ್ರೂ ತರ್ತೀನಿ ತಲೆನಾದ್ರೂ ಹೊಡೀತೀನಿ ನಿನಗೇನಾಗಬೇಕುʼ ದನಿ ಜೋರಾಗಿತ್ತು. ಹಾಲಿನಲ್ಲಿದ್ದವರಿಗೆ ಕೇಳಿಸಿಯೇ ಇರ್ತದೆ.
ʼರೀ ಮೆತ್ತಗೆ ಮಾತಾಡಿ. ಮಗಳು ಮಲಗಿದ್ದಾಳೆ. ಹಾಲಿನಲ್ಲಿ ಅಪ್ಪ ಅಮ್ಮ ಇದ್ದಾರೆʼ
“ಇರ್ಲಿ ಬಿಡು. ಅವರಿಗೂ ಗೊತ್ತಾಗಲಿ ನೀ ಎಂತ ಕಿತ್ತೋದೋಳು ಅಂತ” ಅಂದರಾದರೂ ದನಿ ತಗ್ಗಿತ್ತು.
ʼಏನೇನೋ ಮಾತನಾಡಬೇಡಿ. ನಿಮಗೂ ಬಾಂಡ್ ವಿಷಯವೆಲ್ಲಾ ಮುಂಚೇನೇ ಗೊತ್ತಿತ್ತು. ಗೊತ್ತಿಲ್ಲದವರಂತೆ ನಾಟಕವಾಡಬೇಡಿ. ಬಾಂಡ್ ಮುಗಿಸ್ಕಂಡು ಬೆಂಗಳೂರಿಗೋಗೋಣ ಬಿಡಿʼ ವಾಸ್ತವದಲ್ಲಿ ನಂಗೇನೋ ಮೈಸೂರೇ ಇಷ್ಟ. ಇಲ್ಲಿಲ್ಲದ್ದು ಅಲ್ಲೇನಿದೆ ಅನ್ನಿಸಿಬಿಡೋದು. ರಾಜೀವ್ ಹೇಳೋದ್ರಲ್ಲಿರೋ ಒಂದೇ ಸತ್ಯ ಅಂದ್ರೆ ಅವರ ಓದಿಗೆ ಮೈಸೂರಿಗಿಂತ ಬೆಂಗಳೂರಿನಲ್ಲಿ ಕೆಲಸದ ಅವಕಾಶಗಳು ಹೆಚ್ಚಿವೆ ಅನ್ನೋದು.
“ಮುಂಚೆ ಪಿಜಿ ಮಾಡಿಲ್ಲ ಪಿಜಿ ಮುಗೀಲಿ ಅಂತ ಬೆಂಗಳೂರಿಗೆ ಹೋಗೋದನ್ನ ತಳ್ಳಿ ಬಿಡ್ತೀಯ. ಒಟ್ನಲ್ಲಿ ನಿನ್ನ ಕಟ್ಕಂಡಿದ್ದಕ್ಕೆ ಮೈಸೂರಲ್ಲೇ ಈ ಚಿಕ್ಕ ಪುಟ್ಟ ಬಾಡಿಗೆ ಮನೇಲೇ ಸತ್ತೋಗ್ಬೇಕು. ಅದೇನಿಟ್ಟಿದ್ದೀಯೋ ಈ ಹಾಳು ಮೈಸೂರಲ್ಲಿ. ನಿನ್ ಹಳೇ ಬಾಯ್‌ಫ್ರೆಂಡ್‌ನ ಮೀಟ್ ಆಗ್ಬೇಕೇನೋ.….” ಇಷ್ಟು ವರ್ಷದ ದಾಂಪತ್ಯದಲ್ಲಿ ಇದೇ ಮೊದಲ ಬಾರಿಗೆ ಪುರುಷೋತ್ತಮನ ನೆಪದಲ್ಲಿ ನನ್ನ ಮೇಲೆ ಹರಿಹಾಯ್ದಿದ್ದು. ಎಲ್ಲೋ ವರುಷಕ್ಕೊಂದು ಸಲ ಕಾಲೆಳಿಯೋರು ಸರಸದಲ್ಲಿದ್ದಾಗ; ಕೋಪದಲ್ಲಿದ್ದಾಗ ಪುರುಷೋತ್ತಮನ ಹೆಸರಿಡಿದು ಹಂಗಿಸಿದ್ದು ಇದೇ ಮೊದಲು. ಭವಿತವ್ಯದ ಭಯಾನಕತೆ ಕಣ್ಮುಂದೆ ಸುಳಿದು ಮರೆಯಾಯಿತು.
ʼಅದೆಲ್ಲ ಸುಳ್ಳು ಅಂತ ಗೊತ್ತಿದ್ರೂ ಯಾಕಿಂತ ಮಾತಾಡ್ತೀರʼ ಕಣ್ಣಲ್ಲೆರಡನಿ ನೀರು. ʼಈಗೇನು ಬೆಂಗಳೂರಿಗೆ ಹೋಗಲೇ ಬೇಕು ಅಂತನ್ನೋದೆ ನಿಮ್ಮ ತೀರ್ಮಾನವಾದರೆ ಸರಿ. ನಾಳೇನೇ ನಾನು ಈ ಬಾಂಡ್ ಮುರಿಯೋದಿಕ್ಕೆ ಎಷ್ಟು ಹಣ ಕಟ್ಟಬೇಕು ಅಂತ ವಿಚಾರಿಸ್ತೀನಿ. ಸರಿಯಾ?ʼ
“ಅಷ್ಟೆಲ್ಲ ಯಾಕೆ ಸುಮ್ನೆ? ಪರೀಕ್ಷೆ ಮುಗಿದು ರಿಸಲ್ಟ್ ಬಂದ ಮೇಲೆ ಹೇಳದೆ ಕೇಳದೆ ಹೊರಟು ಹೋದರಾಗುವುದಿಲ್ಲವೇ?”
ʼಚೆನ್ನಾಗ್ ಹೇಳಿದ್ರೆ! ಕಾರ್ಪೋರೇಟ್ ಆಸ್ಪತ್ರೆ ನಮ್ದು. ಫಸ್ಟ್ ಹೆಲ್ತ್ ಅಲ್ಲ ಫಸ್ಟ್ ಡಾಕ್ಯುಮೆಂಟ್ಸ್ ಅನ್ನೋ ಆಸ್ಪತ್ರೆ. ನನ್ನೆಲ್ಲಾ ಒರಿಜಿನಲ್ಲನ್ನೂ ಅವರೇ ಇಟ್ಕಂಡಿದಾರೆ. ಆ ಡಾಕ್ಯುಮೆಂಟ್ಸ್ ಇಲ್ಲದೆ ಡಿ.ಎನ್.ಬಿ ರಿಜಿಷ್ಟ್ರೇಶನ್ನೂ ಆಗಲ್ಲ, ಕೆಎಂಸಿ ರಿಜಿಷ್ಟ್ರೇಶನ್ನೂ ಆಗಲ್ಲ. ಹಂಗೂ ಬಾಂಡ್ ಬ್ರೇಕ್ ಮಾಡಿ ಹೇಳದೆ ಕೇಳದೆ ಹೋದರೆ ಕೋರ್ಟು ಕೇಸಾಕ್ತಾರೆ ಅಷ್ಟೆʼ
“ಮ್. ಒಟ್ನಲ್ಲಿ ಇಲ್ಲೇ ಸಾಯಿ ಅಂತಿ"
ʼಹಂಗೇಳಿದ್ನಾ? ಸ್ವಲ್ಪ ತಾಳ್ಮೆ ಇರಲಿ ಅಂದೆ. ಇಲ್ಲ ಬಾಂಡ್ ದುಡ್ಡು ಕಟ್ಟಿ ಹೋಗುವಾ?ʼ
“ಎಷ್ಟ್ ತಾಳ್ಮೆ? ಇನ್ನೆಷ್ಟು ವರ್ಷ?”
ʼರೀ. ಬರೀ ನನ್ ಬಾಂಡ್ ವಿಷಯಾನೇ ಯೋಚಿಸ್ತಿದ್ದೀವಲ್ಲ. ವರುಷದ ನಂತರ ಇಬ್ರೂ ಬೆಂಗಳೂರಿಗೆ ಹೋಗಿಬಿಟ್ಟರೆ ಎರಡು ವರ್ಷದ ಮಗಳನ್ನಲ್ಲಿ ನೋಡಿಕೊಳ್ಳೋರ್ಯಾರು?ʼ ಇದರ ಬಗ್ಗೆ ಯೋಚಿಸಿಯೇ ಇರಲಿಲ್ಲ ಎಂಬ ಭಾವ ಅವರ ಮುಖದಲ್ಲಿ ಮೂಡಿತು.
“ಇಲ್ಲೇ ಬಿಟ್ಟೋದ್ರಾಯ್ತು. ಮೂರ್ ವರ್ಷ. ಆಮೇಲೆ ಸ್ಕೂಲಿಗೆ ಸೇರಿಸೋಕೆ ಕರ್ಕಂಡ್ ಹೋದರಾಯಿತು”
ʼಅಷ್ಟೆಲ್ಲ ಕಷ್ಟಪಟ್ಟು ಹುಟ್ಟಿದ ಮಗಳನ್ನ ಇಲ್ಲೇ ಬಿಟ್ಟು ಹೋಗೋದಾ? ನನ್ನ ಕೈಲಾಗಲ್ಲಪ್ಪʼ
“ನಾನೇನ್ ಹುಟ್ಸು ಹುಟ್ಸು ಅಂತ ನಿನ್ ಕುತ್ಗೆ ಹಿಸುಕಿದ್ನಾ?”
ʼಅದ್ಯಾಕ್ರೀ ಮಗಳ ಬಗ್ಗೆ ಹಿಂಗಾಡ್ತೀರಾ? ನಿಮಗೂ ಮಗಳೇ ತಾನೇ ಅವಳು. ಒಂಚೂರು ಪ್ರೀತಿಯಿಲ್ಲ ನಿಮಗೆ. ಕಂಡೋರ ಮಕ್ಕಳನ್ನೆಲ್ಲಾ ಅಷ್ಟ್ ಮುದ್ದು ಮಾಡಿ ಆಡ್ಸೋರಿ. ನಿಮಗೇ ಹುಟ್ಟಿದ ಮಗಳ ಬಗ್ಗೆ ಯಾಕ್ ಇಷ್ಟೊಂದ್ ತಾತ್ಸಾರʼ
“ಮಗಳಾ ಇವಳು….. ಪೀಡೆ ಬಂದಂಗ್ ಬಂದಿದ್ದಾಳೆ"
ʼಸ್ಟಾಪ್ ಇಟ್ ರಾಜೀವ್. ಇಂತ ನಾನ್ಸೆನ್ಸ್ ಮಾತಾಡೋದಾದ್ರೆ ಇನ್ನೊಂದ್ಸಲ ಇಲ್ಲಿಗ್ ಬರಲೇಬೇಡಿ. ಸ್ವಂತ ಮಗಳನ್ನ ಪೀಡೆ ಅನ್ನುವಷ್ಟು ಕೆಟ್ಟೋರ್ ನೀವು ಅಂತ ಗೊತ್ತಿರಲಿಲ್ಲ. ಈಗೇನ್ ನಿನಗೆ ಬೆಂಗಳೂರಿಗೆ ಹೋಗ್ಬೇಕು ಅಷ್ಟೇ ತಾನೇ. ಹೋಗಿ ನಮ್ಮತ್ತೆಗೆ ಅಂದ್ರೆ ನಿಮ್ಮಮ್ಮನಿಗೆ ಬೆಂಗಳೂರಿಗೆ ಬಂದು ನಮ್ ಜೊತೆ ಇದ್ದು ಮಗು ನೋಡ್ಕೊಳ್ಳೋಕೆ ಒಪ್ಪಿಸು. ಬಾಂಡ್ ದುಡ್ಡು ನಾನೇ ಸಾಲಮಾಡಿ ಕಟ್ತೀನಿ. ಹೋಗೋಣ ಬೆಂಗಳೂರಿಗೆ. ಮುದ್ದಿನ ವಂಶದಕುಡಿಯನ್ನು ನಿಮ್ಮಮ್ಮನೇ ಬಂದು ನೋಡಿಕೊಳ್ಳಲಿʼ ನನ್ನ ಮಾತುಗಳಲ್ಲಿದ್ದ ವ್ಯಂಗ್ಯ ರಾಜೀವನಲ್ಲಿ ಇನ್ನಿಲ್ಲದ ಸಿಟ್ಟು ತರಿಸಿತು. ಮನೆಯಲ್ಯಾರೂ ಇಲ್ಲದಿದ್ದರೆ ನಾಲ್ಕೇಟು ಬಿಗಿದು ಬಿಡುತ್ತಿದ್ದರೋ ಏನೋ. “ಲೋಫರ್ ತಗಂಬಂದು" ಅಂತ ಬಯ್ಯುತ್ತಾ ಹೊರಟುಹೋದರು. ಆದ ಅವಮಾನ ನೋವುಗಳನ್ನು ಅಳುವುದರ ಮೂಲಕವಷ್ಟೇ ಹೊರಹಾಕಬಹುದಿತ್ತು. ಅಳುತ್ತಾ ಮಲಗಿದವಳನ್ನು ಸಮಾಧಾನಿಸಲು ಅಪ್ಪ ಅಮ್ಮ ತಮ್ಮ ಉಹ್ಞೂ ಒಬ್ಬರೂ ಬರಲಿಲ್ಲ.
ಇವಳಿದಕ್ಕೆ ಅರ್ಹಳು ಎಂದವರ ಅಭಿಪ್ರಾಯವೋ ಏನೋ…….
ಮುಖಪುಟ ಚಿತ್ರ: ಚೇತನ ತೀರ್ಥಹಳ್ಳಿ.
ಮುಂದುವರೆಯುವುದು
No comments:
Post a Comment