Feb 25, 2020

ಒಂದು ಬೊಗಸೆ ಪ್ರೀತಿ - 54

ಡಾ. ಅಶೋಕ್.‌ ಕೆ. ಆರ್.‌
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

‘ಇಷ್ಟು ಬೇಗ ಮದುವೆ ಬಂದ್ಬಿಡ್ತೇನೆ ನಿಂದು! ನಿನ್ನೆ ಮೊನ್ನೆ ಫಿಕ್ಸ್ ಆದಂಗ್ ಇತ್ತು’ ಸುಮ ಮದುವೆಯ ಮೊದಲ ಕಾರ್ಡನ್ನು ಕೊಟ್ಟಾಗ ಅಚ್ಚರಿಯಿಂದ ಹೇಳಿದೆ. 

“ಅಲ್ವ! ಇನ್ ಇಪ್ಪತ್ ದಿನ ಇದೆ ಅಷ್ಟೇ. ಶಾಪಿಂಗ್ ಮಾಡಿಲ್ಲ. ಬಟ್ಟೆ ತಗಂಡಿಲ್ಲ……. ಒಡವೆ ತಗೋಬೇಕು. ಉಫ್ ಇನ್ನೂ ಎಷ್ಟೊಂದು ಕೆಲಸ ಬಾಕಿ ಇದೆ! ಅದಿಕ್ಕೆ ಮದುವೆಗೆ ಹತ್ ದಿನ ಇರೋವಾಗ್ಲೇ ರಜಾ ಹಾಕ್ತಿದ್ದೀನಿ” ಸುಮಳ ತಲೆಯಲ್ಲಿ ಥರಾವರಿ ಬಣ್ಣದ ಸೀರೆಗಳು ವಿವಿಧ ಡಿಸೈನಿನ ಒಡವೆಗಳೇ ಸುಳಿದಾಡುತ್ತಿದ್ದವು. 

‘ಮದ್ವೆ ಆದ ಮೇಲೆ ಜಾಸ್ತಿ ದಿನ ರಜಾ ಹಾಕೋಬೇಕು ಕಣೇ' ಕಣ್ಣು ಮಿಟುಕಿಸಿದೆ. 

“ಆಗ್ಲೂ ಹಾಕಿದ್ದೀನ್ ಬಿಡು” ಕೀಟಲೆಯ ದನಿಯಲ್ಲಿ ಹೇಳುತ್ತಾ “ಲೇ ಬಾಸು. ನಿನ್ ಹಬ್ಬಿ ಎಷ್ಟ್ ಘಂಟೆಗ್ ಬರ್ತಾರೆ ನಿಮ್ಮಮ್ಮನ ಮನೆಗೆ” 

‘ಆಗ್ತದೆ ಏಳು ಎಂಟರ ಮೇಲೆ. ಯಾಕೆ’ 

“ಸರಿ ಹಾಗಿದ್ರೆ. ಇವತ್ ರಾತ್ರಿ ಫೋನ್ ಮಾಡ್ಕಂಡ್ ಬರ್ತೀನಿ ಬಿಡು. ನಾನ್ ವೆಜ್ ಏನಾದ್ರೂ ಮಾಡ್ಸಿರು. ನಿಮ್ಮ ಮನೆಯವರನ್ನೆಲ್ಲ ಕರಿಯೋಕ್ ಬರ್ತೀನಿ” 

‘ಅಲ್ಲಿಗೆಲ್ಲ ಬಂದು ಏನ್ ಕೊಡೋದ್ ಬಿಡೆ. ನನಗ್ ಕೊಟ್ಟಿದ್ದೀಯಲ್ಲ ಸಾಕು. ನಾನು ನನ್ ಗಂಡ ಬರ್ತೀವಿ. ನೋಡುವ, ಅಮ್ಮ ಒಪ್ಪಿದ್ರೆ ಮಗಳನ್ನೂ ಕರ್ಕಂಡ್ ಬರ್ತೀವಿ’ ರಾಜೀವ ಬರಲ್ಲವೆಂದು ಗೊತ್ತಿತ್ತು. 

“ಅಲ್ಲ ಏನೋ ಇನ್ವಿಟೇಶನ್ ಕೊಡೋ ನೆಪದಲ್ಲಿ ಒಂದ್ ನಾನ್ ವೆಜ್ ಊಟ ಬಾರ್ಸೋಣ ಅಂದ್ಕಂಡ್ರೆ ಮನೆಗೇ ಬರ್ಬೇಡ ಅನ್ನೋರೆಲ್ಲ ನಮ್ ಫ್ರೆಂಡ್ಸು….. ಕರ್ಮ" 

‘ಹೆ... ಹೆ…. ಹಂಗಲ್ವೇ! ಬಾ ಬಾ. ನಿನಗ್ ಊಟ ಇಲ್ಲ ಅನ್ನೋಕಾಗ್ತದಾ…..’ 

ಆ ಕೂಡಲೆ ಅವಳ ಮುಂದೆಯೇ ಅಪ್ಪನಿಗೆ ಫೋನ್ ಮಾಡಿ ಸಂಜೆ ಚಿಕನ್ನೋ ಮಟನ್ನೋ ಅಥವಾ ಎರಡೂ ತಗಂಡ್ ಬನ್ನಿ ಮನೆಗೆ ಬರುವಾಗ ಅಂತೇಳಿ ಸುಮಳ ಕಡೆಗೆ ತಿರುಗಿ ‘ಹ್ಯಾಪಿ’ ಎಂದೆ. ಮುಖ ಊರಗಲವಾಗಿತ್ತು. 

ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.

ನನ್ನ ಸ್ನೇಹಿತೆಯರ ಮದುವೆಗೆಲ್ಲ ರಾಜೀವ ಉತ್ಸಾಹದಿಂದ ಬರುತ್ತಿರಲಿಲ್ಲ. ಸಾಧ್ಯವಾದಷ್ಟು ತಪ್ಪಿಸಿಕೊಳ್ಳುತ್ತಿದ್ದರು. ಅವರ ಗೆಳೆಯರ ಮದುವೆಗೆ ಮಾತ್ರ ನಾ ತಪ್ಪಿಸುವಂತಿರಲಿಲ್ಲ. ಸುಮ ಬಂದು ಕರೆದು ಊಟ ಮಾಡಿ ಹೊರಟ ಮೇಲೆ ‘ಏನೋ ಫಾರ್ಮ್ಯಾಲಿಟಿಗೆ ಕರೆದಿದ್ದಾಳೆ. ನೀವ್ ಬರಲೇಬೇಕು ಅಂತೇನಿಲ್ಲ. ನಮ್ ಆಸ್ಪತ್ರೆಯವರೆಲ್ಲ ಮಿನಿ ಬಸ್ ಮಾಡ್ತಿದಾರೆ. ಸಂಜೆ ಹೊರಟು ರಾತ್ರಿ ರಿಸೆಪ್ಶನ್ ಮುಗಿಸಿ ಅದೇ ದಿನ ವಾಪಸ್ಸಾಗೋದು ಅಂದಿದ್ದಾರೆ’ ಎಂದು ಹೇಳಿದ್ದಕ್ಕೆ ಕೆಂಡಾಮಂಡಲವಾದರು. 

“ಅಲ್ಲ ಪಾಪ ನಿನ್ ಫ್ರೆಂಡು ಅಷ್ಟು ಕಾಳಜಿಯಿಂದ ಬಂದು ಕರೆದಾಗ ನಾನು ಬರದೇ ಇರೋದಾ! ಸರಿ ಹೋಗ್ತದಾ? ಹೆಂಗಿದ್ರೂ ಶನಿವಾರ ಭಾನುವಾರ ಅಲ್ವ. ಶನಿವಾರ ಡ್ಯೂಟಿ ಮುಗಿಸ್ಕಂಡ್ ಹೊರಟ್ರೂ ಸಾಕು. ರಾತ್ರಿ ಅಲ್ಲೆ ಹಾಲ್ಟ್ ಮಾಡುವ. ನಿನ್ನ ಕ್ಲೋಸ್ ಫ್ರೆಂಡು ತಾಳಿ ಕಟ್ಟಿಸ್ಕೋಬೇಕಾದ್ರೆ ನೀ ಇರೋದು ಬೇಡವಾ? ಬೆಳಿಗ್ಗೆ ಮದುವೆ ಮುಗಿಸಿಕೊಂಡು ಒಂದಷ್ಟು ಮಡಿಕೇರಿ ಸುತ್ತಾಡಿಕೊಂಡು ರಾತ್ರಿ ಅಷ್ಟೊತ್ತಿಗೆ ವಾಪಸ್ಸಾದ್ರೆ ಸಾಕಲ್ಲ” 

ರಾಜೀವನ ಕಡೆಗೆ ಅನುಮಾನದಿಂದ ನೋಡಿದೆ. ನನ್ನ ಸ್ನೇಹಿತೆಯ ಮದುವೆಗೆ ಇವರ್ಯಾಕೆ ಇಷ್ಟೊಂದು ಉತ್ಸಾಹ ತೋರಿಸುತ್ತಿದ್ದಾರೆ? ಉಹೂ…. ಇದಿವರ ಸಹಜ ಸ್ವಭಾವವಂತೂ ಅಲ್ಲ. ಮಡಿಕೇರಿ ನೋಡಿಕೊಂಡು ಬರಬಹುದು ಅಂತಾನಾ? ಅದೂ ಇರಲಾರದು. ಮಡಿಕೇರಿಗೆ ಬಹಳ ಸಲ ಹೋಗಿ ಬಂದಿದ್ದೀವಿ. ಇದ್ದಕ್ಕಿದ್ದಂತೆ ಹೆಂಡತಿಯ ಬಗ್ಗೆ ಇಷ್ಟೊಂದು ಕಾಳಜಿ ಮೂಡಿಬಿಡ್ತಾ? ಸಾಧ್ಯವೇ ಇಲ್ಲ! 

‘ಏನೋ ಮಿಸ್ ಹೊಡೀತಿದೆಯಲ್ಲ. ನಿಜ ಹೇಳಿ ಏನ್ ಪ್ಲ್ಯಾನು….’ 

“ಏನೂ ಇಲ್ಲಪ್ಪ…. ಪಾಪ ನಿನ್ ಕ್ಲೋಸ್ ಫ್ರೆಂಡು ಅಂತ” 

‘ರೀ! ಮೂರು ವರ್ಷದಿಂದ ನೋಡಿದ್ದೀನಿ ನಿಮ್ಮನ್ನ. ಹೇಳಿ ಏನು ಅಂತ’ ಸಿಕ್ಕಿಬಿದ್ದ ಮಳ್ಳನಂತೆ ನಾಚಿಕೊಳ್ಳುತ್ತಾ “ಕುಶಾಲನಗರದ ಮದುವೆ ಅಲ್ವ….. ಗುಂಡು ತುಂಡು ಎಲ್ಲಾ ಜಾಸ್ತಿ ಇರ್ತದಂತ ಕೇಳಿದ್ದೆ. ನೋಡೋ ಅವಕಾಶ ಸಿಕ್ಕಾಗ ಬಿಡೋದುಂಟಾ…." ಎಂದರು. 

‘ಇದು ಯಜಮಾನ್ರು ಪ್ಲ್ಯಾನು. ಅದನ್ನೇ ಹೇಳೋದು ಬಿಟ್ಟು ಕ್ಲೋಸ್ ಫ್ರೆಂಡು ಲೊಟ್ಟೆ ಲೊಸಕು ಅಂತ ಡೈಲಾಗ್ ಬೇರೆ!’ 

‘ರೀ ಹಂಗಾದ್ರೆ ಹೇಗೂ ಕಾರಲ್ ಹೋಗೋದಲ್ವಾ…. ಮಗಳನ್ನೂ ಕರ್ಕಂಡ್ ಹೋಗೋಣ. ಅವಳಿಗೂ ಮೊದಲ ಟ್ರಿಪ್ ಆಗ್ತದೆ’ 

“ಅದೊಂದ್ಯಾಕೆ ಸುಮ್ನೆ. ನಿಮ್ಮದಿಯಾಗ್ ತಿರುಗಾಡ್ಕಂಡ್ ಬರೋಣ ಅಂದ್ರೆ…….” 

‘ನನಗದಿದ್ರೆ ನೆಮ್ಮದಿ ಜಾಸ್ತಿ……. ಕರಕಂಡ್ ಹೋಗದೆ ಇದ್ರೆ ಮಗಳ ಚಿಂತೇನೇ ಕಾಡ್ತದೆ……’ ಹೊರಗೆ ಬಚ್ಚಲುಮನೆಯಲ್ಲಿ ಅಂಚಿ ಕಡ್ಡಿ ಚಿಟ್ ಪಟಾರ್ ಅಂತ ಸಿಡಿಯುತ್ತಿತ್ತು. 

“ಅಲ್ಲ ನಿಮ್ಮಮ್ಮ ಮನೆಗೊಬ್ರು ಬರಂಗಿಲ್ಲ ಮಗಳನ್ನೆತ್ತಿಕೊಂಡೋಗಿ ಒಂದಿಡೀ ಅಂಚಿ ಕಡ್ಡಿ ಬರ್ಲು ಮುಗಿಸಿಬಿಡ್ತಾರೆ. ಇನ್ನು ಮಡಿಕೇರಿಗ್ ಕರ್ಕಂಡ್ ಹೋದ್ರೆ ಬರುವಾಗ ನಾವೇ ಒಂದ್ ಲಾರಿ ಲೋಡ್ ಅಂಚಿ ಕಡ್ಡಿ ಹೊತ್ಕಂಡ್ ಬರ್ಬೇಕೇನೋ……” ನಗಾಡಿದರು. 

ನಾನೂ ನಗುತ್ತಾ 'ಅಮ್ಮನ ಕತೆ ಬಿಡಿ. ಕರ್ಕಂಡ್ ಹೋಗೋಣ ಕಣ್ರಿ’ ಬೇಡಿದೆ. 

“ಸರಿ ಡಾರ್ಲಿಂಗ್. ಕರ್ಕಂಡ್ ಹೋಗೋಣ…..” ಮಗಳು ಹುಟ್ಟಿದ ಮೇಲೆ ಇವರ ಬಾಯಲ್ಲಿ ಡಾರ್ಲಿಂಗ್ ಅನ್ನೋ ಪದ ಕೇಳಿದ್ದಿವತ್ತೆ. ಖುಷಿಯಾಯಿತು. ಖುಷಿಗೆ ತುಟಿಗೊಂದು ಮುತ್ತು ಕೊಟ್ಟೆ. ಅವರ ಕಣ್ಣೆಲ್ಲ ತೆರೆದಿದ್ದ ಬಾಗಿಲೆಡೆಗೇ ಇತ್ತು. ಯಾರೋ ಬರುವ ಸಪ್ಪಳ ಕೇಳಿದಂತಾಯಿತೋ ಏನೋ ತುಟಿ ಬಿಡಿಸಿಕೊಂಡರು. 

‘ರೀ…..’ ಎಂದೆ. 

“ಹೇಳು" ಅವರ ಕಣ್ಣಿನ್ನೂ ಬಾಗಿಲ ಮೇಲೇ ನೆಟ್ಟಿತ್ತು. ಯಾರೂ ಬರಲಿಲ್ಲ. 

'ಎಷ್ಟೊಂದು ತಿಂಗಳು...... ತಿಂಗಳೇನು ವರುಷದ ಮೇಲೇ ಆಗಿಹೋಯ್ತಲ್ಲ ನಾವಿಬ್ರೂ ಸೇರಿ. ಇವತ್ತಿಲ್ಲೆ ಇರಿ. ಏನಾದ್ರೂ ಮಾಡುವ’ 

“ಸರೀ ಹೇಳ್ದೆ. ನಾನೊಂದು ದಿನಕ್ಕೂ ಇಲ್ಲಿ ರಾತ್ರಿ ಉಳ್ಕಂಡಿಲ್ಲ. ಈಗ ಇದ್ರೆ ನಿಮ್ಮ ಮನೆಯವರು ಸೋನಿಯಾ ಏನ್ ಅನ್ಕೋಬೇಕು” 

‘ಅಯ್ಯೋ.... ಅವರೂ ಎಲ್ಲಾ ಮದ್ವೆ ಆದವ್ರೆ ಅಲ್ವ! ಸೆಕ್ಸ್ ಮಾಡೋಕ್ ಉಳ್ಕಂಡ್ರು ಅನ್ಕೋತಾರೆ ಬಿಡಿ. ಯಾರಿಗ್ಗೊತ್ತು ನಮ್ಮಿಂದ ಅವರಿಗೂ ಮೂಡು ಬಂದು........ ಸೋನಿಯಾಗಾದ್ರೂ ಬೇಗ ಮಗುವಾಗಲಿ ಬಿಡಿ……' 

“ಥೋ ಥೋ..... ನಾಚಿಕೆ ಇಲ್ದೆ ಮಾತಾಡ್ತೀಯಪ್ಪ. ಗಡದ್ದಾಗಿ ಮಾಂಸ ತಿಂದಾದ ಮೇಲೆ ಸೆಕ್ಸ್ ಮಾಡು ಅಂದ್ರೆ ಎಲ್ಲಿಂದಾಗ್ತದೆ? ಹೆಂಗಿದ್ರೂ ಇನ್ನೆರಡು ವಾರಕ್ಕೆ ಮಡಿಕೇರಿಗೆ ಹೋಗ್ತೀವಲ್ಲ ಅಲ್ಲೇ ಸೆಕೆಂಡ್ ಹನಿಮೂನ್ ಮಾಡಿಕೊಳ್ಳೋಣ ಬಿಡು” ಎಂದರು. ಅಲ್ಲಿ ಕುಡಿದು ಚಿತ್ತಾಗಿರ್ತೀರ. ಇನ್ಯಾವ ಸೆಕೆಂಡು ಹನಿಮೂನೋ ಅಂತ ಮನದಲ್ಲೇ ಅಂದುಕೊಂಡೆ. ಬಾಯಿಬಿಟ್ಟು ಹೇಳಲಿಲ್ಲ. ಅಪರೂಪಕ್ಕೆ ಒಳ್ಳೆ ಲಹರಿಯಲ್ಲಿದ್ದವರ ಮೂಡು ಕೆಡಿಸುವ ಮನಸ್ಸಾಗದೆ ಹೇಳಲಿಲ್ಲ. 

“ಹುಷಾರು ಹುಷಾರು. ಅಲ್ಲಿ ಇಲ್ಲಿ ನೀರು ಕುಡಿಸಬೇಡ. ಊಟ ತಿಂಡಿ ಹುಷಾರು. ಅವರಿವರ ಕೈಗೆ ಮಗು ಕೊಟ್ಟಾಗ ಹುಷಾರು. ಗಾಡಿ ನಿಧಾನಕ್ ಓಡಿಸ್ಕಂಡ್ ಹೋಗಿ. ಹುಷಾರು. ಅವಳನ್ನ ನಾನೇ ನೋಡ್ಕೋತಿದ್ದೆ. ಹೇಳಿದ ಮಾತು ಕೇಳಲ್ಲ ನೀವ್ಗಳು. ಹುಷಾರು” ಅಮ್ಮ ಅದೆಷ್ಟು ಸಲ ಹುಷಾರು ಎಂದರು ಅಂತ ಲೆಕ್ಕ ಹಾಕ್ತಾ 'ನಂಗೂ ಮಗಳೇ ಬಿಡಮ್ಮ. ನೋಡ್ಕೋತೀನಿ’ ಅಂತಂದಿದ್ದಕ್ಕೆ ಮುಖ ಉಪ್ ಮಾಡಿಕೊಂಡರು. ಅವರಿಗೆ ಸಮಾಧಾನಿಸದೇ ಹೊರಡಲೂ ಮನಸ್ಸಾಗದ ಕಾರಣಕ್ಕೆ ಹೊರಡುವುದು ಅರ್ಧ ಘಂಟೆ ತಡವಾಯಿತು. “ಹೋಟ್ಲು ಗೀಟ್ಲು ಮಾಡ್ಬೇಡಿ. ಇಲ್ಲೇ ನಮ್ಮ ಮನೇಲೇ ಬಂದಿರಿ" ಎಂದು ಸುಮ ಹೇಳಿದ್ದಳು. ಅವರ ನೆಂಟರ ನಡುವೆ ನಾವ್ಯಾಕೆ ಅಂತಂದುಕೊಂಡು ಹೋಟೆಲ್ ಬುಕ್ ಮಾಡಿದ್ದೆವು. ಕುಶಾಲನಗರದ ಹೊರವಲಯದಲ್ಲಿರುವ ನಿಸರ್ಗಧಾಮದ ಸಮೀಪ. 'ಇವರಿಗೆ ಮುಜುಗರವಾಗ್ತದಂತೆ ಕಣೇ. ಹೋಟೆಲಲ್ಲಿದ್ದು ಬರ್ತೀವಿ ಬಿಡು’ ಎಂದೊಂದು ಸುಳ್ಳೇಳೀದ್ದೆ. ಬಹಳ ದಿನಗಳ ನಂತರ ಎರಡೂ ಎರಡೂವರೆ ಘಂಟೆಗಳ ಕಾಲ ಕಾರು ಚಲಾಯಿಸಿದ್ದಕ್ಕೋ ಏನೋ ಇವರಿಗೆ ಪೂರ್ತಿ ಸುಸ್ತು. ಹೋಟೆಲ್ಲು ತಲುಪುತ್ತಿದ್ದಂತೆ ಒಂದ್ ಕಾಲು ಘಂಟೆ ಮಲಗ್ತೀನಿ ಎಂದು ಅಡ್ಡಾದವರು ಒಂದು ಘಂಟೆಯಾದರೂ ಎದ್ದೇಳುವ ಸೂಚನೆ ನೀಡಲಿಲ್ಲ. ಇನ್ನೇನು ಎದ್ದುಬಿಡ್ತಾರೆ ಅಂದುಕೊಂದು ನಾನು ತಯಾರಾಗಿ ಮಗಳಿಗೂ ಬಟ್ಟೆ ತೊಡಿಸಿ ವಾಚು ನೋಡಿದರೆ ಎಂಟಾಗಿ ಐದು ನಿಮಿಷವಾಗಿತ್ತು. ಈಗಲೂ ಎಬ್ಬಿಸದಿದ್ದರೆ ಛತ್ರಕ್ಕೋಗಿ ಕ್ಲೀನ್ ಮಾಡ್ಬೇಕಾಗ್ತದೆ ಅಷ್ಟೆ….. ಅವರು ಹಾ…..ಹೂ......ಇನ್ನೈದು ನಿಮಿಷ ಅಂತ ನೆಪದ ಮೇಲೆ ನೆಪ ಹೇಳಿದರೂ ಬಿಡದೆ ಎಬ್ಬಿಸಿದೆ. ಗೊಣಗಿಕೊಳ್ಳುತ್ತಲೇ ಎದ್ದು ತಯಾರಾದರು. ಛತ್ರಕ್ಕೆ ಹೋದಾಗ ಎಂಟೂ ಮುಕ್ಕಾಲು. ಜನರೇನು ಹೆಚ್ಚಿರಲಿಲ್ಲ. ಅದೇನು ಬಂದು ಹೊರಟುಹೋದರೋ, ಇನ್ನೂ ಬರಬೇಕೋ ಅಥವಾ ಇತ್ಲಾಕಡೆ ಮದುವೆಗೆ ಬರೋದೇ ಇಷ್ಟು ಜನರೋ ತಿಳಿಯಲಿಲ್ಲ. ನಮ್ ಆಸ್ಪತ್ರೆಯವರ್ಯಾರೂ ಇನ್ನೂ ಬಂದಿರಲಿಲ್ಲ. ಸ್ಟೇಜಿನಲ್ಲಿ ಸುಮ ಮಿಂಚುತ್ತಿದ್ದಳು. ‘ಜನರೂ ಹೆಚ್ಚಿಲ್ಲ. ನಡೀರಿ ಸ್ಟೇಜ್ ಮೇಲೆ ಹೋಗಿ ಬರೋಣ’. “ನಾನ್ಯಾಕೆ ಸ್ಟೇಜ್ ಮೇಲೆ” ಅಂತನ್ನುತ್ತಲೇ ಹಿಂದಿಂದೆ ಬಂದರು. 

“ಇಷ್ಟೊತ್ತೇನವ್ವಾ ಬರೋದು. ನಾನೆಲ್ಲೋ ಬಂದು ನನ್ನ ರೆಡಿ ಮಾಡ್ತಾಳೆ ಅಂದ್ಕಂಡಿದ್ರೆ ಮಾರಾಣಿ ಥರ ಬಂದಿರೋದ್ ನೋಡು” ಎಂದು ಕಿಚಾಯಿಸುತ್ತಾ ಪಕ್ಕದಲ್ಲಿ ನಿಂತಿದ್ದ ಗಂಡಿನ ಕಡೆಗೆ ನೋಡಿ “ಇವ್ರು …… ಅಫ್ ಕೋರ್ಸ್ ನಾಳೆ ನನ್ನ ಗಂಡನಾಗೋರು….. ಪ್ರದೀಪ್ ಅಂತ. ಇವಳು ಸದ್ಯಕ್ಕೆ ಮೈಸೂರಿನಲ್ಲಿರುವ ನನ್ನ ಏಕೈಕ ಬೆಸ್ಟ್ ಫ್ರೆಂಡು ಧರಣಿ. ಅವಳ ಮಗು ರಾಧ. ಅವಳ ಹಸ್ಬೆಂಡ್ ರಾಜೀವ್” ಹಲೋ ಕಂಗ್ರಾಟ್ಸ್ ಥ್ಯಾಂಕ್ಸ್ ಗಳೆಲ್ಲ ವಿನಿಮಯವಾಯಿತು. 

ನಾವು ಸ್ಟೇಜಿನಿಂದ್ ಇಳಿಯುವಷ್ಟರಲ್ಲಿ ನಮ್ ಆಸ್ಪತ್ರೆಯಿಂದ ಮಿನಿಬಸ್ಸಿನಲ್ಲಿ ಹೊರಟವರು ಛತ್ರದ ಒಳಬಂದರು. ಅವರಲ್ಲೊಂದಷ್ಟು ಜನರನ್ನು ಶಶಿಯ ಮದುವೆಗೆ ಕರೆದಿದ್ದೆ. ಅವರ ಪರಿಚಯ ರಾಜೀವನಿಗಿತ್ತು. ಇನ್ನೊಂದಷ್ಟು ಜನರಿಗೆ ರಾಜೀವನನ್ನು ಪರಿಚಯಿಸಿದೆ, ರಾಮ್‌ಪ್ರಸಾದ್‌ರನ್ನು ಸೇರಿಸಿ. ಇನ್ನೊಂದು ಸುತ್ತು ಹಲೋ ಹಾಯ್ ವಿನಿಮಯವಾಯಿತು. ರಾಧಳನ್ನು ಎತ್ತಿಕೊಳ್ಳುವುದಕ್ಕೆ ಪೈಪೋಟಿ. ಒಬ್ಬೊಬ್ಬರತ್ರ ಹೋಗೋಳು. ಒಬ್ಬೊಬ್ಬರತ್ರ ಹೋಗೋಕೆ ಒಲ್ಲೆ ಅನ್ನೋಳು. ಮಕ್ಕಳೀತರ ಆಯ್ಕೆ ಮಾಡಲು ಕಾರಣವೇನಿರಬಹುದು? ಸ್ಟೇಜಿನ ಕಡೆಗೆ ಅವರೆಲ್ಲ ತೆರಳುವಾಗ ರಾಮ್‌ಪ್ರಸಾದ್ “ನೀವೂ ಬನ್ನಿ ಡಾಕ್ಟರ್. ಆಸ್ಪತ್ರೆಯವರೆಲ್ಲ ಒಟ್ಟಿಗೇ ನಿಂತು ಫೋಟೋ ತೆಗೆಸಿಕೊಂಡಂತಾಗ್ತದೆ” ಎಂದರು. ಸರಿ ಎಂದು ಮಗಳನ್ನ ರಾಜೀವನ ಕೈಗಿತ್ತು ಹೊರಟೆ. ರಾಜೀವನನ್ನೂ ಅವರು ಕರೆದರು. ಪರವಾಗಿಲ್ಲ ನೀವ್ ಹೋಗಿ ಬನ್ನಿ ಎಂದಲ್ಲೇ ಉಳಿದರು. "ಎರಡೆರಡ್ ಸಲ ಫೋಟೋ ತೆಗಿಸ್ಕೊಂಡ್ರೆ ದುಡ್ಡಾಗ್ತದೆ” ಸುಮಾ ರೇಗಿಸಿದಳು. ಥೂ! ಇವಳದೇ ಮದುವೆ ರಿಸೆಪ್ಶನ್ನಿನಲ್ಲೂ ಈ ಹುಡುಗಿ ಕೀಟಲೆ ಮಾಡೋದ್ ಬಿಡಲ್ವಲ್ಲ. 

ಊಟದ ಹಾಲಿನ ಕಡೆಗೆ ಹೋದಾಗಲೇ ಅರಿವಾಗಿದ್ದು ರಾಜೀವ ಯಾಕೆ ಇಷ್ಟೊಂದು ಅತ್ಯುತ್ಸಾಹದಿಂದ ಈ ಮದುವೆಗೆ ಬಂದರೆಂದು!

ಮುಖಪುಟ ಚಿತ್ರ: ಚೇತನ ತೀರ್ಥಹಳ್ಳಿ. 
ಮುಂದುವರೆಯುವುದು

No comments:

Post a Comment