Jan 20, 2020

ಒಂದು ಬೊಗಸೆ ಪ್ರೀತಿ - 49

ಡಾ. ಅಶೋಕ್.‌ ಕೆ. ಆರ್.‌
ಮದುವೆಯಾದ ಮೇಲೆ ಲವ್ವಾಗಲ್ವ ಅಂತ ಸುಮ ಕೇಳಿದ ಪ್ರಶ್ನೆಯಿಂದ ಸಾಗರನ ನೆನಪು ಬಹಳ ದಿನಗಳ ನಂತರ ಕಾಡುತ್ತಿತ್ತು. ಮನೆಗೆ ಹೊರಡುವ ಮುನ್ನ ʼಹೇಗಿದ್ದೀಯೋʼ ಅಂತೊಂದು ಮೆಸೇಜು ಹಾಕಿದೆ. ಇನ್ನೇನು, ಇಷ್ಟು ದಿನದ ನಂತರ ಮೆಸೇಜು ಮಾಡಿದ್ದಕ್ಕೆ ವಿಪರೀತದಷ್ಟು ವ್ಯಂಗ್ಯ ಮಾಡಿ ನನಗೆ ಬಯ್ದು ಅವನನ್ನೂ ಬಯ್ದುಕೊಂಡು ಇಬ್ಬರಿಗೂ ನೋವುಂಟುಮಾಡುವಂತಹ ಕೆಟ್ಟ ಕೆಟ್ಟ ಪದಗಳನ್ನು ಬಳಸಿಯೇ ಬಳಸುತ್ತಾನೆ. ಮೆಸೇಜೇ ಮಾಡ್ಬಾರ್ದಿತ್ತೋ ಏನೋ ಅಂತಂದುಕೊಳ್ಳುತ್ತಾ ಮನೆ ತಲುಪಿದೆ. 

ಅಮ್ಮ ಮತ್ತೊಂದು ಸುತ್ತು ಸುಸ್ತಾಗಿ ಕುಳಿತಿದ್ದಳು. ರಾಧಳಿಗಲ್ಲ, ಅಮ್ಮನಿಗೇ ಈಗ ಆರೈಕೆಯ ಅಗತ್ಯವಿದೆ. ಮಲಗೋಗಿ ಅಂತವರಿಗೆ ಹೇಳಿ ಮಗಳನ್ನೂ ಮಲಗಿಸಿ ಅಡುಗೆ ಕೆಲಸ ಮಾಡಿ ಮುಗಿಸಿದೆ. ಒಂದಾದರೂ ಅಮ್ಮ ಎದ್ದೇಳಲಿಲ್ಲ. ಎದ್ದಾಗ ಊಟ ಮಾಡ್ತಾರೆ ಬಿಡು ಅಂದ್ಕೊಂಡು ನಾ ಒಂದಷ್ಟು ತಿಂದು ರೂಮಿಗೆ ಬಂದು ಅಡ್ಡಾದೆ. ರಾತ್ರಿ ಸರಿ ನಿದ್ರೆ ಮಾಡಿರಲಿಲ್ಲವೋ ಏನೋ ರಾಧ ಅತ್ತಿತ್ತ ಮಿಸುಕಾಡದಂತೆ ನಿದ್ರೆ ಹೋಗಿದ್ದಳು. ನಿನ್ನೆ ಆಸ್ಪತ್ರೆಯಲ್ಲಿ ಎಚ್ಚರವಿಲ್ಲದೆ ಮಲಗಿದ್ದಕ್ಕೊ ಏನೋ ನನಗೆ ನಿದ್ರೆ ಹತ್ತಲಿಲ್ಲ. ಫೋನೆಲ್ಲ ನೋಡಿ ಎಷ್ಟು ದಿನಗಳಾಗಿ ಹೋಯ್ತಲ್ಲ ಅಂತ ಫೋನೆತ್ತಿಕೊಂಡು ಎಫ್.ಬಿ ತೆರೆದೆ. ಒಂದೈವತ್ತು ಫ್ರೆಂಡ್‌ ರಿಕ್ವೆಷ್ಟ್‌ಗಳಿದ್ದವು. ಅದರಲ್ಲಿ ಗೊತ್ತಿರೋರನ್ನ ಒಪ್ಪಿಕೊಳ್ತಿರಬೇಕಾದರೆ ಮತ್ತೊಂದು ರಿಕ್ವೆಷ್ಟ್‌ ಬಂತು. ರಾಮ್‌ಪ್ರಸಾದ್‌ದು. ʼಓಯ್!‌ ಆಗ್ಲೇ ನನ್ನೆಸ್ರು ಹುಡುಕಿ ರಿಕ್ವೆಷ್ಟ್‌ ಕಳಿಸಿಬಿಟ್ರಾ? ಅಥವಾ ಫ್ರೆಂಡ್‌ ಸಜೆಷನ್ಸ್‌ ಅಲ್ಲಿ ತೋರಿಸಿರಬೇಕು. ಅಥವಾ ಸುಮ ಹೇಳಿದಂಗೆ ನನ್‌ ಫ್ಯಾನೇ ಇರಬಹುದೇನೋಪʼ ಅಂತಂದುಕೊಂಡು ಒಪ್ಪಿಕೊಂಡೆ. ಎಫ್.ಬಿ ಸ್ಕ್ರಾಲ್‌ ಮಾಡ್ತಾ ಒಂದಷ್ಟು ಲೈಕುಗಳನ್ನೊತ್ತುತ್ತಿರಬೇಕಾದರೆ ಸಾಗರನ ಮೆಸೇಜು ಬಂದ ನೋಟಿಫೀಕೇಷನ್‌ ಕಾಣಿಸಿತು. ಒಟ್ಟೊಟ್ಟಿಗೇ ಮೂರು ಮೆಸೇಜು ಕಳಿಸಿದ್ದ. ತೆರೆಯಲು ಕೌತುಕ, ಜೊತೆಗೊಂದಷ್ಟು ಭಯ. ತೆರೆಯದೇ ಇರಲಾದೀತೆ! ತೆರೆದೆ. 

“ನಂದೇನಿದೆಯೇ. ಮಾಮೂಲಿ ನಡೀತಿದೆ” 

“ನೀ ಹೇಗಿದ್ದಿ” 

“ಮಗಳೇಗಿದ್ದಾಳೆ” 

ಕುಹಕವಿಲ್ಲದೆ, ವ್ಯಂಗ್ಯವಿಲ್ಲದೆ ಸಾಗರ ಮೆಸೇಜು ಮಾಡಬಲ್ಲ ಎನ್ನುವುದೇ ಮರೆತು ಹೋಗಿತ್ತು.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.
ʼನಂದೂ ಅಷ್ಟೇ ಕಣೋ. ಮಾಮೂಲಿ ನಡೀತಿದೆ. ಕೆಲಸ ಕೆಲಸ ಕೆಲಸ ಅಷ್ಟೇʼ 

ʼಮಗಳು ಚೆನ್ನಾಗಿದ್ದಾಳೆʼ 

“ಮ್.‌ ಅದೇನು ಅಷ್ಟೊಂದು ಕೆಲಸ? ಮತ್ತೆ ಆಸ್ಪತ್ರೆಗೆ ಹೋಗ್ತಿದ್ದೀಯೋ ಹೆಂಗೆ" 

ʼಹು. ಹೋಗೋಕ್‌ ಶುರು ಮಾಡಿ ಎರಡು ತಿಂಗಳಾಗ್ತ ಬಂತುʼ 

“ಅದ್ಯಾಕ್‌ ಅಷ್ಟು ಬೇಗ ಹೋದೆ? ಮಗಳಿಗಾರು ತುಂಬೋವರೆಗಾದ್ರೂ ಮನೇಲಿರೋದಲ್ವಾ” 

ʼಏನ್‌ ಮಾಡ್ತೀಯಪ್ಪ. ನನಗೂ ಅದೇ ಮನಸ್ಸಲ್ಲಿದ್ದಿದ್ದು. ಆರೇನು, ಒಂದು ವರ್ಷ ತುಂಬೋವರೆಗೂ ಮನೆಯಲ್ಲೇ ಇರಬಯಸಿದ್ದೆ. ಆಸ್ಪತ್ರೆಯಿಂದ ಫೋನ್‌ ಬಂದಿತ್ತು. ಈಗ ಸೇರದೇ ಹೋದರೆ ಒಂದು ಅಕಾಡೆಮಿಕ್‌ ಇಯರ್‌ ಹೋಗ್ತದೆ ಅಂತʼ 

“ಹೋಗಿದ್ರೆ ಹೋಗ್ತಿತ್ತು. ಮಗಳಿಗಿಂತ ಹೆಚ್ಚಾ” 

ʼಮ್.‌ ರಾಜೀವ ಹಿಂಗ್‌ ಯೋಚಿಸಲಿಲ್ವೇ. ಹೆಂಗೋ ಬೆಳ್ಕೋತಾಳೆ ಮಗಳು. ಹೋಗಿ ಸೇರ್ಕೋ. ಒಂದ್‌ ವರ್ಷ ಯಾಕೆ ದಂಡ ಮಾಡಿಕೊಳ್ತಿ ಅಂತ ಬಯ್ದರುʼ 

“ಅಯ್ಯ. ದಂಡ ಆಗ್ತಿದ್ದಿದ್ದು ನಿನ್ನ ಒಂದು ವರ್ಷ ತಾನೆ? ಅವರಿಗೇನಂತೆ” 

ʼನಾ ಬೇಗ ಮುಗಿಸಿದರಲ್ವೇನಪ್ಪ ನನಗೆ ಜಾಸ್ತಿ ಸಂಬಳ ಸಿಗೋದುʼ 

“ಮಗಳಿಗಿಂತ ದುಡ್ಡೆಚಾಗೋಯ್ತ! ನೀ ಬರೋಕ್‌ ಮುಂಚೆ ಅವರೇ ನೋಡ್ಕೋತಾರಾ?” 

ʼಹ…..ಹ……ಚೆನ್ನಾಗ್‌ ಹೇಳ್ದೆ. ಹೆಂಗೋ ಅಮ್ಮನ ಮನೆಗೆ ಹತ್ರ ಮನೆ ಮಾಡಿಕೊಂಡಿರೋದಕ್ಕೆ ಬಚಾವು. ನೋಡ್ಕೊಳ್ಳೋದೆಲ್ಲ ಅಪ್ಪ ಅಮ್ಮಾನೇ. ಇವರು ಹೋಟೆಲ್ಲಿಗೆ ಬರೋ ಹಾಗೆ ಬೆಳಿಗ್ಗೆ ತಿಂಡಿಗೆ ರಾತ್ರಿ ಊಟಕ್ಕೆ ಬರ್ತಾರೆ ಅಷ್ಟೇ. ಎಲ್ಲೋ ಅಪರೂಪಕ್ಕೆ ರಾತ್ರಿ ಬಂದಾಗ ಮಗಳನ್ನು ಎತ್ತಿ ಆಡಿಸಿದರಷ್ಟೇ ಪುಣ್ಯʼ 

“ಮಗಳನ್ನು ಆಡಿಸೋದೂ ಇಲ್ವ?” 

ʼಕಡಿಮೆʼ 

“ಮತ್ತಿನ್ಯಾವ ಸಂಭ್ರಮಕ್ಕಂತೆ ಮಕ್ಳು ಮಾಡಿಕೊಂಡಿದ್ದು?” 

ʼಅಯ್ಯೋ ಅದಕ್ಕೂ ನನಗೇ ಅನ್ತಾರೆ. ಮಗು ಮಗು ಅಂತ ಬಡ್ಕಂಡಿದ್ದು ನೀನು. ಅನುಭವಿಸ್ಕೊ ಅಂತಾರೆʼ 

“ಛೀ……ಅದ್ಯಾಕ್‌ ಹಂಗೆ? ರಾಜೀವ್‌ ಹಂಗೆಲ್ಲ ಇರಲಿಲ್ಲ ಅಲ್ವಾ" 

ʼಮಕ್ಕಳು ಅಂದ್ರೆ ಅವರಿಗೂ ಇಷ್ಟಾನೇ ಇತ್ತು. ನಾನೇ ನೋಡಿದ್ನಲ್ಲ ಅವರ ಅಕ್ಕನ ಮಕ್ಕಳನ್ನ, ಸ್ನೇಹಿತರ ಮಕ್ಕಳನ್ನ ಚೆನ್ನಾಗೇ ಮುದ್ದು ಮಾಡ್ತಾ ಆಡಿಸೋರು. ಅದರಲ್ಲಿದ್ದ ಹತ್ತು ಪರ್ಸೆಂಟ್‌ ಅಕ್ಕರೆಯೂ ರಾಧಳ ಕುರಿತು ತೋರಿಸಲ್ಲ. ಏನು ಕಾರಣವೋ ಗೊತ್ತಿಲ್ಲʼ 

“ಸರಿಹೋಗಬಹುದು ಮುಂದಕ್ಕೆ. ಹುಟ್ಟಿದ ಮಗು ನನ್ನನ್ನು ಹೆಂಡತಿಯಿಂದ ದೂರ ಮಾಡಿದೆ ಅಂತ ಕೆಲವರಿಗೆ ಅಸೂಯೆ ಇರ್ತದಂತೆ. ಹೋಗ್ತಾ ಹೋಗ್ತಾ ಸರಿ ಹೋಗ್ತದಂತೆ” 

ʼಏನ್‌ ಸರಿ ಹೋಗ್ತದೋ ಏನೋ. ಎಲ್ಲಾ ನಾ ಮಾಡಿದ ತಪ್ಪುಗಳ ಫಲ ಅಷ್ಟೇ. ಅನುಭವಿಸಬೇಕುʼ 

“ಲವ್‌ ಮಾಡೋದೆಲ್ಲ ತಪ್ಪಲ್ಲ ಬಿಡೆ” 

ʼಹಂಗಂತ ಹೇಳ್ಕೊಂಡು ಸುಳ್ಳು ಸುಳ್ಳೇ ಸಮಾಧಾನ ಮಾಡಿಕೋಬೇಕಷ್ಟೇ. ತಿರುಗಿ ನಿಂತು ನೋಡಿದರೆ ಎಲ್ಲಾ ಕೊನೆಗೆ ಅಲ್ಲಿಗೇ ಹೋಗಿ ತಲುಪೋದಂತೂ ನಿಜಾನೇ ಅಲ್ವ. ನಾ ಪರಶುನನ್ನು ಲವ್‌ ಮಾಡದೇ ಹೋಗಿದ್ದರೆ ರಾಜೀವನನ್ನೂ ಮದುವೆಯಾಗೋ ಸಾಧ್ಯತೆ ತುಂಬಾ ಕಡಿಮೆಯಿರ್ತಿತ್ತು. ಬಂದಿದ್ದ ಡಾಕ್ಟರ್‌ ಗಂಡುಗಳಲ್ಲೇ ಒಬ್ಬನನ್ನು ಮದುವೆಯಾಗ್ತಿದ್ದೆ. ಹೋಗ್ಲಿ ಪುರುಷೋತ್ತಮನನ್ನೇ ಕಟ್ಟಿಕೊಂಡಿದ್ದರೂ ಅಷ್ಟು ವರ್ಷದ ಪ್ರೀತಿಗಾದರೂ ಒಂದು ಬೆಲೆ ಇರ್ತಿತ್ತು. ಹೋಗ್ಲಿ ಬಿಡು. ಎಷ್ಟ್‌ ಮಾತಾಡಿದ್ರೂ ಅಷ್ಟೇ ಉಪಯೋಗವೇನಿದೆʼ 

‌“ಮ್. ಅದೂ ಸತ್ಯಾನೇ. ಆಗೋದ್‌ ಆಗ್ತದೆ ಬಿಡು. ಅದೇನಿವತ್ತು ಅಪರೂಪಕ್ಕೆ ನನ್ನ ನೆನಪಿಸಿಕೊಂಡು ಮೆಸೇಜ್‌ ಮಾಡಿದ್ದು" 

ʼನೀನಂತೂ ಮೆಸೇಜು ಮಾಡಲ್ವಲ್ಲಪ್ಪʼ 

“ನಂಗೇನೋ ಮಾಡಬೇಕನ್ಸುತ್ತೆ. ನಿಂಗ್‌ ಡಿಸ್ಟರ್ಬ್‌ ಆಗ್ತದೇನೋ.…..ಮೊಬೈಲ್‌ ಯಾರತ್ರ ಇರ್ತದೋ ಅಂತ.….” 

ʼಮ್.‌ ಮಾಮೂಲಿ ಮೆಸೇಜು ಕಳಿಸೋಕೂ ಮುಹೂರ್ತ ನೋಡಬೇಕೇನೋ? ಅದ್ಸರಿ, ಮುಹೂರ್ತ ಅಂದಾಗ ನೆನಪಾಯ್ತು ಮದ್ವೆ ಗಿದ್ವೆ ಮಾಡ್ಕೋಬಿಟ್ಯೇನೋ ನನಗೇಳದೆ….ʼ 

“ಲೇ ಇಂತ ಡವ್‌ ಮಾಡ್ಬೇಡ. ಒಂದೊಂದ್ಸಲ ಅನ್ಸಿದೆ ಇವಳನ್ನ ಕರೀಲೇಬಾರ್ದು ನನ್ನ ಮದುವೆಗೆ ಅಂತ. ಆದ್ರೆ ಅದಾಗ್ತದಾ ಹೇಳು? ಎಷ್ಟೇ ಸಿಟ್ಟಿದ್ರೂ ನೀ ನನ್ನ ಸೋಲ್‌ಮೇಟೇ ಅಲ್ವ..." 

ʼಅಲ್ವಾ ಮತ್ತೆ! ಸಿಟ್ಯಾಕೋ…..ʼ 

“ಗೊತ್ತಿಲ್ವೇನೋ…..” 

ʼಗೊತ್ತು….ನಿನ್‌ ಬಾಯಲ್‌ ಕೇಳೋಕ್‌ ಆಸೆʼ 

"ನೀ ನಂಗ್‌ ಸಿಗಲಿಲ್ಲ ಅಂತ ಸಿಟ್ಟು ಬೇಸರ” 

ʼಬಿಡೋ ಒಳ್ಳೇದೇ ಆಯ್ತು. ನನ್ನ ಕಟ್ಕಂಡ್ರೆ ನೀನೂ ಏನೇನು ಅನುಭವಿಸುವಂತಾಗುತ್ತಿತ್ತೋ ಏನೋʼ 

“ಏನೇನ್‌ ಅನುಭವಿಸಿದ್ರೂ ಜೊತೇಲಿರ್ತಿದ್ವಲ್ಲಾ. ಅಷ್ಟು ಸಾಕಿತ್ತು. ಬಿಟ್ಟಾಕು.. ಬರೀ ನಿಂದೇ ಆಯ್ತು. ಮಗಳೇಗಿದ್ದಾಳೆ? ಒಂದ್‌ ಫೋಟೋ ಕಳಿಸು" 

ʼನನ್‌ ಮಗಳ ಫೋಟೋ ನಿಂಗ್ಯಾಕೋ?ʼ 

“ನಾ ಕೇಳಿದ್ದು ನಮ್ಮ ಮಗಳ ಫೋಟೋ” 

ಖುಷಿಯಾಯಿತು. ಮಲಗಿದ್ದ ರಾಧ ಏನನ್ನೋ ನೆನಪಿಸಿಕೊಂಡು ನಗಾಡುತ್ತಿದ್ದಳು. ಪಟ್ಟಂತ ಎರಡು ಫೋಟೋ ತೆಗೆದು ಕಳುಹಿಸಿದೆ. ಒಂದು ಸಾಲಿಡೀ ಹಾರ್ಟ್‌ ಸ್ಮೈಲಿ ಕಳುಹಿಸಿದ. 

ʼಹುಡುಗಿ ನೋಡೋಕೆ ಹೋಗಿಲ್ವೇನೋ ಇನ್ನʼ 

“ಅಯ್ಯೋ ಇನ್ನೂ ಇಲ್ವೇ. ನಮ್ಮಪ್ಪ ಜಾತಕ ಪಕ್ಷಿ! ಬರೋ ಹೆಣ್ಣುಗಳ ಜಾತಕ ನನ್‌ ಜಾತಕ ಹೊಂದಾಣಿಕೆಯಾದ್ರೆ ಮಾತ್ರ ನೋಡೋಕೋಗ್ಬೋದಂತೆ. ಜಾತಕ ಹೊಂದು ಬರದೇ ಹೋದ್ರೆ ಹುಡುಗಿ ಫೋಟೋನೂ ತೋರ್ಸಲ್ಲ ನಂಗೆ! ಅಲ್ಲ ನಾ ಯಾರನ್ನಾದ್ರೂ ಲವ್‌ ಗಿವ್‌ ಮಾಡಿಬಿಟ್ಟಿದ್ರೆ ಏನು ಮಾಡ್ತಿದ್ರಿ ಅಂದರೆ ʼಆಗ ಇನ್ನೇನು ತಾನೇ ಮಾಡೋಕಾಗ್ತಿತ್ತಪ್ಪ. ಒಪ್ಪದೇ ಹೋದ್ರೂ ಮದುವೆಯಾಗ್ತೀವಿ ಅಂತ ಹೇಳೋರಿ. ಇವರ ಮಕ್ಕಳು ಓಡಿಹೋಗಿ ಮದುವೆಯಾದರು ಅನ್ನೋ ಮಾತು ಕೇಳೋ ಅವಮಾನಕ್ಕಿಂತ ಒಪ್ಪಿಗೆ ಕೊಟ್ಟು ಮರ್ಯಾದಸ್ಥರಾಗೋದೇ ಮೇಲಲ್ವಾʼ ಅಂತಾರೆ. ಅದೇನ್‌ ಹೆಂಗಿದ್ರೂ ಇವನು ಲವ್‌ ಮಾಡಿಲ್ಲ ಅನ್ನೋ ಕಾರಣಕ್ಕೆ ಹೇಳಿದ ಡೈಲಾಗು ಮಾತ್ರಾನೋ ಗೊತ್ತಾಗಲಿಲ್ಲ. ಹಿಂಗಾಗಿ ಇನ್ನೂ ಹುಡುಗೀನ ನೋಡಿಲ್ಲ. ಈ ಭಾನುವಾರವಲ್ಲ, ಮುಂದಿನ ಭಾನುವಾರ ಒಂದೇ ದಿನ ಮೂರ್ಮೂರ್‌ ಹುಡುಗಿ ಮನೇಗ್‌ ಹೋಗೋ ಪ್ಲ್ಯಾನಿದೆ. ಒಂಥರಾ ಟಾರ್ಚರ್‌ ಆಗ್ತದೇನೋ" 

ʼಏನೂ ಮಾಡೋಕಾಗಲ್ಲ. ಅರೆಂಜ್ಡ್‌ ಮ್ಯಾರೇಜಲ್ಲಿ. ಹುಡುಗಂಗೂ ಟಾರ್ಚರ್ರು. ಹುಡುಗಿಗೂ ಟಾರ್ಚರ್ರುʼ 

“ಹು” 

ʼಫೋಟೋ ಕಳ್ಸು ನೋಡುವʼ 

ಮೂವರ ಫೋಟೋಗಳನ್ನು ಕಳಿಸಿದ. ಫೋಟೋ ಕೆಳಗೆ ಹೆಸರುಗಳಿತ್ತು. ಮಾನ್ವಿ, ಸೌಮ್ಯ, ಭೂಮಿ…… ಮೂರನೇ ಹುಡುಗಿ ಇವನಿಗೆ ಸರಿ ಹೋಗ್ತಾಳೆ ಮುಖಲಕ್ಷಣದ ಲೆಕ್ಕದಲ್ಲಿ ಅನ್ನಿಸಿತು. ಅದನ್ನೇ ಅವನಿಗೆ ಹೇಳಿದೆ. 

“ನಿಂಗಾ ಹುಡುಗಿ ಯಾಕ್‌ ಇಷ್ಟ ಆದ್ಲು ಅಂತ ಗೊತ್ತು ನನಗೆ. ಅವಳೆಸರು ಭೂಮಿ ಅಂತ ತಾನೆ” 

ʼಭೂಮಿ ಅಂತಿದ್ರೇನಾಯ್ತು?ʼ 

“ಧರಣಿ = ಭೂಮಿ” 

ʼಅಲ್ವಾ! ನಂಗೆ ಹೊಳೀಲೆ ಇಲ್ಲ ನೋಡು…ʼ 

“ಮ್”‌ 

ʼಏನ್‌ ಮಾಡ್ಕಂಡಿದಾರೆ ಹುಡುಗೀರುʼ 

“ಮಾನ್ವಿ ಎಂಬಿಬಿಎಸ್‌ ಮುಗ್ಸಿದ್ದಾಳೆ. ಪೀಜಿಗ್‌ ಓದ್ತಿದ್ದಾಳಂತೆ. ಇನ್ನಿಬ್ರು ಸಾಫ್ಟ್‌ವೇರ್‌ ಇಂಜಿನಿಯರ್ಸು" 

ʼಮ್.‌ ನಿಂಗ್ಯಾರ್‌ ಇಷ್ಟವಾದ್ರೋʼ 

“ಫೋಟೋ ನೋಡ್ಬಿಟ್‌ ಏನ್‌ ಇಷ್ಟಪಡೋದು" 

ʼಅಂದ್ರೂ ಒಂದ್‌ ಗಟ್‌ ಫೀಲಿಂಗ್‌ ಅಂತ ಇರ್ತದಲ್ಲʼ 

“ಹು….ಹೇಳ್ಬೇಕೂ ಅಂದ್ರೆ ನಂಗೂ ಭೂಮೀನೇ ಇಷ್ಟವಾಗಿದ್ದು!” 

ʼಹ….ಹ…..ನನ್ ಸೋಲ್‌ಮೇಟ್‌ ಮನ್ಸು ನಂಗ್‌ ಗೊತ್ತಾಗ್ದೇ ಇರ್ತದಾʼ 

“ಸಾಕು ಸಾಕು ಕೊಚ್ಕೋಬೇಡ” 

ʼಹೆ ಹೆ…. ಹುಡುಗಿ ನೋಡೋಕ್‌ ಹೋದಾಗ ಎಲ್ಲಾ ಸರೀಗ್‌ ಮಾತಾಡು…. ಹುಡುಗಿ ಜೊತೆʼ 

“ಅಯ್ಯ! ಅಷ್ಟು ಕಮ್ಮಿ ಮಾತಲ್ಲಿ ಏನ್‌ ಅರ್ಥವಾಗುತ್ತೊ" 

ʼಕಮ್ಮಿ ಏನೋ! ಒಬ್ಬೊಬ್ರಂತೂ ಎರಡ್ಮೂರ್‌ ಘಂಟೆ ಮಾತಾಡ್ತಾರಂತೆ!ʼ 

“ಅಯ್ಯಪ್ಪ ಅಷ್ಟಲ್ಲ ಮಾತಾಡೋಕಾಗ್ತದಾ?” 

ʼಹ್ಞೂ ಮತ್ತೆ. ಅರ್ಥ ಮಾಡ್ಕಂಡ್‌ ಮದುವೆಯಾಗೋಕೆ ಅಷ್ಟೆಲ್ಲ ಮಾತನಾಡಲೇಬೇಕಪ್ಪʼ 

“ಸುಮ್ನಿರವ್ವ. ಎರಡ್‌ ಮೂರ್‌ ಘಂಟೆ ಮಾತನಾಡಿಬಿಟ್ರೆ ಎಲ್ಲಾ ಅರ್ಥವಾಗಿಬಿಡೋ ಹಂಗಿದ್ದಿದ್ರೆ ಡೈವೋರ್ಸುಗಳೇ ಆಗ್ತಿರಲಿಲ್ಲಪ್ಪ. ನಿನ್ನ ಜೊತೆ ಅಷ್ಟೆಲ್ಲ ಸಮಯ ಕಳೆದೇ ನೀ ಏನಂತ ಗೊತ್ತಾಗಿಲ್ಲ. ಇನ್‌ ಹೊಸ ಹುಡುಗಿ ಜೊತೆ ಒಂದಷ್ಟೊತ್ತು ಮಾತನಾಡಿಬಿಟ್ರೆ ಎಲ್ಲಾ ಗೊತ್ತಾಗೋಗ್ತದಂತೆ!” 

ʼಹೇ ಹಂಗಲ್ವೋ. ಅರ್ಥ ಮಾಡ್ಕಂಡು ಅಂದ್ರೆ ಪೂರ್ತಿ ವ್ಯಕ್ತಿತ್ವ ಅರ್ಥ ಮಾಡ್ಕಂಡು ಅಂತಲ್ಲ. ಈಗ ನೀನು ಆ ಇಂಜಿನಿಯರ್‌ ಹುಡುಗಿ.….ಆ ಭೂಮೀನೆ ಒಪ್ಕಂಡೆ ಅನ್ಕೋ. ಅವಳಿಗೆ ಆನ್‌ಸೈಟ್‌ ಹೋಗೋದ್ರಲ್ಲಿ ಹೆಚ್ಚಿನ ಆಸಕ್ತಿ ಇದ್ರೆ ಸರಿ ಹೋಗ್ತದಾ? ನೀನಂತೂ ಫಾರಿನ್‌ಗೆ ಹೋಗೋದಿಲ್ವಲ್ಲ. ಒಬ್ಬೊಬ್ಬರಿಗೆ ಬೆಂಗಳೂರಲ್ಲೇ ಇರಬೇಕು ಅಂತಿರುತ್ತೆ, ಕೆಲವರಿಗೆ ಬೆಂಗಳೂರಲ್‌ ಇರೋಕೆ ಸುತಾರಾಂ ಇಷ್ಟವಿರೋದಿಲ್ಲ. ಅಂತವುನ್‌ ಮಾತಾಡ್ಬೇಕು ಅಂದಿದ್ದು ನಾನುʼ 

“ಮ್.‌ ಹಂಗೆ. ಅಂದ್ರೂ ನಾ ಭೂಮೀನ್‌ ಮದ್ವೆಯಾಗಿಬಿಟ್ರೆ ನಿಂಗ್‌ ಹೊಟ್ಟೆ ಉರೀತದಲ್ಲ” 

ʼಭೂಮೀನಷ್ಟೇ ಅಲ್ಲ. ನೀ ಯಾರನ್ನೇ ಮದುವೆಯಾದ್ರೂ ನಂಗ್‌ ಹೊಟ್ಟೆ ಉರ್ದೇ ಉರೀತದೆʼ 

“ಯಾಕೋ?!!” 

ʼಅದಂಗೆ. ಯಾಕೆ ಅಂತೆಲ್ಲ ಕೇಳಬಾರದುʼ ರಾಧ ಎದ್ದಳು. ಏಳುತ್ತಲೇ ಅತ್ತಳು. ನೈಟಿಯ ಗುಂಡಿ ತೆಗೆಯುತ್ತಾ ಮೊಲೆಗವಳ ಬಾಯಿ ಕಚ್ಚಿಸಿದೆ. 

ʼಸರಿ ಕಣೋ. ಮಗಳು ಎದ್ದಳುʼ 

“ಓಕೆ ಓಕೆ. ಬಾಯ್”‌ 

ಕ್ಷಣದ ನಂತರ “ಧರೂ………” ಅಂತೊಂದು ಮೆಸೇಜ್‌ ಕಳಿಸಿದ. 

ʼಹೇಳೋ.......ʼ 

“ಮಿಸ್ಡ್‌ ಯೂ ಕಣೇ.….ಲವ್‌ ಯೂ” 

ʼಲವ್‌ ಯೂ ಟೂ ಕಣೋ.…ʼ 

“ಮ್.‌ ಎಷ್ಟೊಂದು ದಿನವಾಗಿತ್ತಲ್ಲ ನಾನಿಷ್ಟೊಂದು ತಾಳ್ಮೆಯಿಂದ ಮಾತನಾಡಿ. ನೀ ನನಗೆ ಸಿಗಲಿಲ್ಲವಲ್ಲ ಅನ್ನೋ ಕೋಪಕ್ಕೆ ಆ ತರ ಎಲ್ಲಾ ಕೆಟ್ಟದಾಗಿ ವರ್ತಿಸ್ತೀನೋ ಏನೋ” 

ʼಹೋಗ್ಲಿ ಬಿಡೋ. ನಂದೂ ತಪ್ಪಿದೆ. ಇಲ್ಲ ಅನ್ನೋಲ್ಲ. ಜೊತೆಗೆ ನೀ ಯಾಕ್‌ ಹಂಗ್‌ ಆಡ್ತಿ ಅಂತಾನೂ ಗೊತ್ತಲ್ಲ. ಎಲ್ಲಾ ಹಣೆಬರಹ ಅಷ್ಟೇʼ 

“ಮ್.‌ ಸರಿ ಕಣೆ. ಮಗಳು ಎದ್ಲು ಅಂತಿ. ಟೇಕ್‌ ಕೇರ್.‌ ಬಾಯ್”

ಮುಖಪುಟ ಚಿತ್ರ: ಚೇತನ ತೀರ್ಥಹಳ್ಳಿ. 
ಮುಂದುವರೆಯುವುದು

No comments:

Post a Comment