Jan 14, 2020

ಒಂದು ಬೊಗಸೆ ಪ್ರೀತಿ - 48

ಡಾ. ಅಶೋಕ್.‌ ಕೆ. ಆರ್.‌
ಪುಣ್ಯಕ್ಕೆ ಬೆಳಗಿನವರೆಗೂ ವಾರ್ಡಿನಿಂದಾಗಲೀ ಕ್ಯಾಷುಯಾಲ್ಟಿಯಿಂದಾಗಲೀ ಯಾವುದೇ ಕರೆ ಬರಲಿಲ್ಲ. ಮಗಳು ಹುಟ್ಟಿದ ಮೇಲೆ ಎಚ್ಚರವಿಲ್ಲದಂತೆ ನಿದ್ರೆ ಮಾಡಿದ್ದಿವತ್ತೇ! ಬೆಳಿಗ್ಗೆ ಐದೂವರೆಗೆ ಎಚ್ಚರವಾಗಿತ್ತು, ಅಲಾರಾಂ ಇಲ್ಲದೆ ಎಚ್ಚರವಾಗಿತ್ತು. ಸೊಂಪಾದ ನಿದ್ರೆ ಹೊಡೆದು ಎದ್ದ ಕಾರಣ ಮನಸ್ಸೂ ಉತ್ಸಾಹದಿಂದಿತ್ತು. ಅಭ್ಯಾಸಬಲವೆಂಬಂತೆ ಬಲಕ್ಕೆ ಕೈ ಹಾಕಿ ಮಗಳನ್ನು ಮುಟ್ಟಿ ನೋಡಿದ್ದೆ. ಮಗಳಿರಲಿಲ್ಲ. ಅರೆಕ್ಷಣ ಗಾಬರಿಯಾಗಿ ಡ್ಯೂಟಿ ಡಾಕ್ಟರ್‌ ರೂಮಲಲ್ಲವಾ ನಾ ಇರೋದು ಅಂತ ನೆನಪಾಗಿ ನಕ್ಕೆ. ಮಗಳು ರಾತ್ರಿ ಮಲಗಿದ್ಲೋ ಇಲ್ವೋ? ಅಮ್ಮನಿಗೆ ನಿದ್ರೆ ಆಯ್ತೋ ಇಲ್ವೋ? ಇಷ್ಟೊತ್ತಿಗೆ ಮಗಳು ಎದ್ದುಬಿಟ್ಟಿರುತ್ತಾಳೋ ಏನೋ? ಸಾಮಾನ್ಯ ಅವಳು ಬೆಳಿಗ್ಗೆ ಏಳೋದು ಆರೂವರೆ ಏಳರ ನಂತರವೇ. ಹಂಗಾಗಿ ಪರವಾಗಿಲ್ಲ. 

ನೈಟ್‌ ಡ್ಯೂಟಿ ಇದ್ದಾಗ ಮಾರನೇ ಬೇಳಿಗ್ಗೆ ರೌಂಡ್ಸ್‌ ಮುಗಿಯುವವರೆಗೆ ಇರಬೇಕಾಗ್ತದೆ. ಅಂದಾಜು ಹನ್ನೊಂದು ಹನ್ನೆರಡರವರೆಗೆ. ಇನ್ನೂ ಹೆಚ್ಚೇ ಸಮಯವಾದರೂ ಅಚ್ಚರಿಯೇನಿಲ್ಲ. ಅಲ್ಲಿವರೆಗೂ ಇಲ್ಲೇ ಇದ್ದುಬಿಟ್ಟರೆ ಮಗಳಿಗೆ ಹಾಲುಣಿಸೋದೇಗೆ? ಹಂಗಾಗಿ ಸುಮಾಳಿಗೆ ಆರೂವರೆಯಷ್ಟೊತ್ತಿಗೆ ಬರುವಂತೆ ಕೇಳಿಕೊಂಡಿದ್ದೆ. ಹೋಗಿ ರಾಧಳಿಗಾಲು ಕುಡಿಸಿ ರೆಡಿಯಾಗಿ ಎಂಟರ ಮೇಲೆ ಬಂದರೆ ಸಾಕಿತ್ತು. “ಅದಕ್ಕೇನ್‌ ಅಷ್ಟೊಂದ್‌ ಕೇಳ್ಕೋತಿ? ಬರ್ತೀನಿ ಬಿಡು" ಅಂದಿದ್ದಳು ಸುಮ. 

ಆರುಮುಕ್ಕಾಲಷ್ಟೊತ್ತಿಗೆ ಸುಮ ಬಂದಳು. “ಸಾರಿ ಧರಣಿ. ಎಚ್ಚರವಾಗೋದೊಂದಷ್ಟು ತಡವಾಯ್ತು” 

ʼಅಯ್ಯೋ ಅದಕ್ಯಾಕ್‌ ಸಾರಿ ಕೇಳ್ತಿ. ಲೆಕ್ಕ ನೋಡೋದಾದ್ರೆ ನಾ ಸಾರಿ ಕೇಳ್ಬೇಕು. ನಿನಗೆ ಇಷ್ಟೆಲ್ಲ ತೊಂದರೆ ಕೊಡ್ತಿರೋದಿಕ್ಕೆʼ 

“ಓಹೋ! ಬಹಳ ದೊಡ್‌ ತೊಂದರೆ ಕೊಡ್ತಿದ್ದಿ ಬಿಡಪ್ಪ"

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ʼನಿಜ್ಜಾನೇ! ನಿನ್ನ ತರ ಕೊಲೀಗ್ಸ್‌ ಸಿಗದೇ ಹೋಗಿದ್ರೆ ನಾ ಬಂದು ಇಷ್ಟು ಬೇಗ ಡ್ಯೂಟಿಗೆ ಸೇರೋಕಾಗ್ತಿತ್ತಾ? ನನ್ನ ಒಂದ್‌ ವರ್ಷ ಉಳಿಯೋದಿಕ್ಕೆ ನೀವೇ ಕಾರಣʼ 

“ಅಮ್ಮಾ ತಾಯಿ. ಸಾಕು ಹೊಗ್ಳಿದ್ದು. ನಾನೇನ್‌ ಬಿಟ್ಟಿ ಮಾಡ್ಕೊಡ್ತಿಲ್ಲಮ್ಮ. ನಾಕ್‌ ತಿಂಗಳಾದ ಮೇಲೆ ನನ್ನ ಮದುವೆ ಟೈಮಲ್ಲಿ ನಾ ಬೇಕಾಬಿಟ್ಟಿ ರಜೆ ಹಾಕ್ತೀನಲ್ಲ ಆಗ ನೀನೇ ಮಾಡಿಕೊಡಬೇಕು ನನ್ನ ಡ್ಯೂಟಿಗಳನ್ನೆಲ್ಲ” 

ʼಹೆ ಹೆ. ಮಾಡಿಕೊಡದೆ ಇರ್ತೀನಾ. ಮಗಳಿಗೆ ಆರು ತುಂಬ್ತದೆ ಮುಂದಿನ ತಿಂಗಳು. ಅಷ್ಟಾಗಿ ಅವಳಿಗೆ ಮೇಲ್‌ ಆಹಾರ ಕೊಡೋಕೆ ಶುರು ಮಾಡಿದರಾಯ್ತು. ನನಗೂ ಸ್ವಲ್ಪ ಬಿಡುವಾಗ್ತದೆ. ಗಡಿಬಿಡಿ ಇರೋದಿಲ್ಲ. ನಮ್ಮಮ್ಮನಿಗೆ ಚೂರ್‌ ಕಷ್ಟವಾಗ್ಬೋದಷ್ಟೇ. ಅಂದ ಹಾಗೆ ಎಷ್ಟು ದಿನ ರಜಾ ಮದುವೆಗೆʼ 

“ದಿನಾನ…… ಚೆನ್ನಾಗೇಳ್ದೆ. ನಾ ಎಷ್ಟು ತಿಂಗ್ಳು ರಜೆ ಹಾಕೋದು ಅಂತ ಯೋಚಿಸ್ತಿದೀನಿ” 

ʼಮದುವೆಗೆ ತಿಂಗಳಾನುಗಟ್ಲೆ ರಜೆ ಹಾಕಿ ಏನೇ ಮಾಡ್ತಿ!ʼ 

“ನಮ್ದು ಲಾಂ………ಗ್‌ ಪ್ಲ್ಯಾನ್‌ ಇದೆ" 

ʼಅಷ್ಟೆಲ್ಲ ಲಾಂ………ಗ್‌ ಏನಿರಲ್ವೇ. ಅಬ್ಬಬ್ಬಾ ಅಂದ್ರೆ ಐದಾರ್‌ ನಿಮಿಷ ಅಷ್ಟೇ!ʼ 

"ಥೂ ಥೂ…. ಒಂದ್‌ ಮಗುವಿನ ತಾಯಿಯಾದ್ರೂ ಪೋಲ್ಪೋಲಿ ಮಾತಾಡ್ತೀಯಪ್ಪ ನಾಚಿಕೆ ಇಲ್ದೆ” ಮುಖ ಕಿವುಚಿಕೊಂಡು ನಗುತ್ತಾ ಹೇಳಿದಳು. 

ʼಪೋಲಿ ವಿಷಯ ಏನ್‌ ಹೇಳ್ದೆ? ಇಟ್ಸ್‌ ಬಯಾಲಾಜಿಕಲ್‌ ಇಷ್ಯೂ ಐ ಸೇʼ ಕಣ್ಣು ಮಿಟುಕಿಸಿ ಹೇಳಿದ್ದಕ್ಕೆ ಎರಡೂ ಕೈ ಎತ್ತಿ ಮುಗಿಯುತ್ತಾ “ಆಯ್ತು ಮೇಡಮ್ಮೋರೆ. ಇಟ್ಸ್‌ ಕಂಪ್ಲೀಟ್ಲಿ ಬಯಾಲಾಜಿಕಲ್.‌ ಈಗ ಮನೇಗ್‌ ಬೇಗ ಹೊರಡಿ. ಅಲ್ಲಿ ನಿಮ್ಮ ಬಯಾಲಾಜಿಕಲ್‌ ಬೇಬಿ ನ್ಯಾಚುರಲ್‌ ಮಿಲ್ಕಿಗೆ ಕಾಯ್ತಿರ್ತದೆ. ಮೋಹನ್‌ ಸರ್‌ ಬರೋ ಮುಂಚೆ ಬರ್ಬೇಕು. ಇಲ್ಲಾಂದ್ರೆ ಸುಮ್ನೆ ನಮ್ ಬ್ಯಾಂಡ್‌ ಬಜಾಯ್ಸುತ್ತೆ ಆಯಪ್ಪ" 

ʼಹು ಹು. ನನಗ್‌ ಪೋಲಿ ಮಾತಾಡ್ಬಾರ್ದು ಅಂತೇಳಿ ನೀನೇ ಮಾತಾಡ್ತಿದ್ದೀಯಪ್ಪʼ 

“ನಾನೇನೇ ಹೇಳ್ದೆ!?!” 

ʼಏನಿಲ್ಲ ಏನಿಲ್ಲ. ಬಾಯ್‌ʼ ಎಂದ್ಹೇಳಿ ಹೊರಟೆ. 

ಸುಮ ಕುಶಾಲನಗರದತ್ತಿರದವಳು. ಪಿರಿಯಾಪಟ್ಟಣ ಕುಶಾಲನಗರ ಮಧ್ಯೆ ಯಾವುದೋ ಒಂದು ಊರು. ಎಂಬಿಬಿಎಸ್‌ ಲೆಕ್ಕದಲ್ಲಿ ನನಗೊಂದು ವರ್ಷ ಜೂನಿಯರ್ರು. ಡಿ.ಎನ್.ಬಿ ಸೇರಿದ ಲೆಕ್ಕದಲ್ಲಿ ಕ್ಲಾಸ್‌ಮೇಟು. ಹಂಗ್‌ ನೋಡಿದ್ರೆ ನಾನು ಅವಳು ಅಫೀಶಿಯಲ್ಲಾಗ್‌ ಎಷ್ಟು ಬೇಕೋ ಅಷ್ಟನ್ನು ಬಿಟ್ಟರೆ ಮತ್ತೇನನ್ನೂ ಮಾತನಾಡಿದವಳೇ ಅಲ್ಲ. ಕೊಲೀಗ್ಸ್‌ ಆಗಿದ್ದೆವಷ್ಟೇ, ಸ್ನೇಹವಿರಲಿಲ್ಲ. ನನಗೆ ಡಿಲಿವರಿ ಆದಾಗೊಮ್ಮೆ ಬಂದು ಹೋಗಿದ್ದಳು. ಫೋನು ಮೆಸೇಜೂ ಏನೂ ಇರ್ತಿರಲಿಲ್ಲ. ನಾ ಮತ್ತೆ ಬರಲಾರಂಭಿಸಿದ ಮೇಲೆ ಅದೇಕೋ ನನ್ನ ಬಗ್ಗೆ ಸುಮಾಳಿಗೆ ವಿಪರೀತ ಪ್ರೀತಿ ಬೆಳೆದುಬಿಟ್ಟಿತ್ತು. ಮನೇಲಿ ಚಿಕ್ಕ ಮಗೂನ ನೋಡ್ಕಂಡು ಇಲ್ಲೂ ಕೆಲಸ ಮಾಡ್ತಾ ಒದ್ದಾಡೋ ನನ್ನ ಪರಿಸ್ಥಿತಿಯೇ ಆ ಪ್ರೀತಿ ಬೆಳೆಸಿತೋ ಏನೋ. ಇಬ್ಬರೂ ಜೊತೆಯಾಗಿರುತ್ತಿದ್ದೆವು. ನನ್ನ ಕೆಲಸವನ್ನು ಆದಷ್ಟು ಕಡಿಮೆ ಮಾಡಿಸಿದ ಶ್ರೇಯ ಸುಮಾಳಿಗೇ ಸಲ್ಲಬೇಕು. ಮುಂಚಿಗಿಂತ ಹೆಚ್ಚು ಮಾತನಾಡುತ್ತಿದ್ದೆವು. ಮನೆಗೂ ಒಮ್ಮೊಮ್ಮೆ ಅಪರೂಪಕ್ಕೆ ಬರೋಳು. ಅದೊಂದಿನ ಅವಳಿಗೇ ನೇರವಾಗಿ ಕೇಳಿದ್ದೆ: ʼಅದೇನು ಸಡನ್ನಾಗಿ ನನ್ನ ಮೇಲೆ ಇಷ್ಟೊಂದು ಲವ್ವು ಅಂತʼ. ಅವಳಕ್ಕನಿಗೆ ಡೆಲಿವರಿಯಾದಾಗ ಇವಳು ಫೈನಲ್‌ ಇಯರ್‌ ಪರೀಕ್ಷೆ ಬರೆದು ಮುಗಿಸಿ ಮನೆಯಲ್ಲಿದ್ದಳಂತೆ. ಆ ಮಗು ಭಯಂಕರ ಗಲಾಟೆಯಂತೆ. ಮಗು ನೋಡ್ಕೊಳ್ಳೋದು ಇಷ್ಟೊಂದು ಕಷ್ಟದ ಕೆಲಸವೆಂದರಿವಾಗಿದ್ದೇ ಆಗ. ಇಡೀ ಮನೆಯವರೆಲ್ಲ ಒಂಥರಾ ಮಂಕು ಬಡಿದವರಂತಾಗಿಬಿಟ್ಟಿದ್ದರಂತೆ ಮೊದಲ ಎರಡ್ಮೂರು ತಿಂಗಳು. ಆಮೇಲೆ ರೂಢಿ ಆಗೋಯ್ತು. ಆಗಿಂದ ನನಗೆ ಆಗಷ್ಟೇ ಡೆಲಿವರಿ ಆಗಿ ಬಂದವರ ಮೇಲೆ ಹೆಚ್ಚು ಕರುಣೆ, ಪ್ರೀತಿ ಅಂದಿದ್ದಳು. 

“ನೀನೂ ಒಂಥರಾ ನನಗೆ ಅಕ್ಕ ಇದ್ದಂಗಲ್ವ. ಹಿರಿಯೋಳು. ಅದಿಕ್ಕೇ ಲವ್ವು” ನನಗೇನೋ ಮುಪ್ಪು ತಗುಲಿರೋ ಹಾಗೆ ಹಿರಿಯೋಳು ಅಂತಾಳಲ್ಲ! 

ʼಹಲೋ. ನಿನಗಿಂತ ಒಂದೇ ವರ್ಷಕ್ಕೆ ದೊಡ್ಡೋಳು, ಹಿರಿಯೋಳು ಅಂತೆಲ್ಲ ಕರಿಯಂಗಿಲ್ಲ. ನಾವಿನ್ನೂ ಯಂಗುʼ ಎಂದು ಸಿಡುಕುತ್ತಿದ್ದೆ. ಇಬ್ಬರೂ ನಗಾಡುತ್ತಿದ್ದೆವು. 

ʼಅಲ್ಲ ಒಂದ್‌ ಮಗೂನ ನೋಡ್ಕೊಳ್ಳೋದನ್ನ ಕಂಡೇ ಕಷ್ಟ ಅನ್ನಿಸಿದವಳ್ಯಾಕೆ ಪೀಡಿಯಾಟ್ರಿಕ್ಸ್‌ ತಗಂಡ್ಬಂದೆʼ 

“ಅದೇನೋಪ. ಮೆಡಿಕಲ್‌ಗೆ ಸೇರುವಾಗಲೇ ಮಕ್ಕಳ ಡಾಕ್ಟರ್‌ ಆಗಬೇಕೆಂದನ್ನಿಸಿಬಿಟ್ಟಿತ್ತು. ಅಕ್ಕನ ಮಗನನ್ನು ಕಂಡಾಗ ʼಅಯ್ಯಪ್ಪ ಇಂಥ ಅಳೋ ಮಕ್ಕಳ ಜೊತೆ ಲೈಫ್‌ ಲಾಂಗು ಕಾಲ ಕಳೀಬೇಕಾ?ʼ ಅಂತ ಬೆಚ್ಚಿದ್ದುಂಟು. ಬಟ್‌ ಫೈನಲಿ ನನಗಿದೇ ಬೇಕಿತ್ತು, ಬಂದೆ. ಎಂ.ಡಿ ಮಾಡಬೇಕೂಂತಿದ್ದೆ. ಯಾಕೋ ಸರಿ ಓದೋಕಾಗದೆ ರ್ಯಾಂಕಿಂಗ್‌ ಸರಿ ಬರಲಿಲ್ಲ. ಡಿ.ಎನ್.ಬೀನೇ ಸಾಕು ಅನ್ನಿಸಿ ಇಲ್ಲಿಗೆ ಬಂದೆ" ಅನ್ನೋಳು. 

ಮನೆ ತಲುಪಿದಾಗ ಹಾಲಿನಲ್ಲಿ ರಾಧಳನ್ನೆತ್ತಿಕೊಂಡು ಕುಳಿತಿದ್ದ ಅಮ್ಮನನ್ನು ನೋಡಿ ನಗು ಬಂತು, ನಗಲಿಲ್ಲ. ನಕ್ಕರೆಲ್ಲಿ ಅಮ್ಮ ಮಗಳನ್ನು ಕುಕ್ಕಿ ಎದ್ದೋಗಿಬಿಡುತ್ತಾಳೋ ಅನ್ನೋ ಭಯಕ್ಕೆ ನಗಲಿಲ್ಲ. ನಿದ್ರೆಯಾಗಿಲ್ಲ ಎನ್ನುವುದನ್ನು ಕೆಂಪಾಗಿದ್ದ ಅವರ ಕಣ್ಣುಗಳೇ ಸಾರಿ ಹೇಳುತ್ತಿದ್ದವು. ಕೂದಲು ಕೆದರಿತ್ತು, ಕೆದರಿದ ಕೂದಲನ್ನು ಕೈಯಿಂದ ಬಾಚಿಕೊಂಡು ಒಂದು ಕ್ಲಿಪ್ಪು ಹಾಕಿಕೊಳ್ಳುವುದಕ್ಕೂ ಮಗಳು ಅನುವು ಮಾಡಿಕೊಟ್ಟಿರಲಿಲ್ಲ. ಕೂದಲೆಲ್ಲ ಮುಖದ ಆಜುಬಾಜು ಕಾಲಡಿ ಚಾಚಿಕೊಂಡಿತ್ತು. ಅಮ್ಮನದು ಮೊದಲೇ ಗುಂಗುರು ಕೂದಲು. ಪುಟ್ಟಪರ್ತಿ ಸಾಯಿಬಾಬಾನ ಹೆಣ್ಣುರೂಪದಂತೆ ಕಾಣುತ್ತಿದ್ದರು ಅಮ್ಮ. ನನ್ನ ಕಡೆ ಸಿಟ್ಟಿನಿಂದ ನೋಡಿ ಹೆಗಲ ಮೇಲೆ ಮಲಗಿಸಿಕೊಂಡಿದ್ದ ರಾಧಳನ್ನು ಮಡಿಲಿಗಾಕಿಕೊಳ್ಳಲು ಯತ್ನಿಸಿದರಷ್ಟೇ. ಕಿಟಾರೆಂದು ಕಿರುಚಿದ ರಾಧಳ ದನಿಗೆ ಬೆಚ್ಚಿ “ಯಾಕೋ ಪುಟ್ಟ….ಓನಮ್ಮ…..ಮಲಗು ಮಲಗು” ಎನ್ನುತ್ತಾ ಮತ್ತೆ ಹೆಗಲ ಮೇಲಾಕಿಕೊಂಡರು. ರಾತ್ರಿ ಪೂರಾ ಇದೇ ಅವಸ್ಥೆಯೋ ಏನೋ ಪಾಪ ಎಂದುಕೊಳ್ಳುತ್ತಾ ಹೋಗಿ ಮಗಳನ್ನೆತ್ತಿಕೊಂಡು ಹಾಲುಣಿಸಲು ರೂಮಿಗೆ ಕರೆದುಕೊಂಡು ಹೋದೆ. ನಾನಿನ್ನೂ ರೂಮಿನ ಬಾಗಿಲು ತಲುಪಿರಲಿಲ್ಲ, ಅಮ್ಮ ಅಲ್ಲೇ ಸೋಫಾದ ಮೇಲೆ ಮಲಗಿ ಕಣ್ಣು ಮುಚ್ಚಿದರು. ಕಣ್ಣು ಮುಚ್ಚಿದಷ್ಟೇ ವೇಗವಾಗಿ ನಿದ್ರೆ ಹೋಗಿರ್ತಾರೆ. 

ಕೊನೆಯ ಹನಿಯನ್ನೂ ಬಿಡದಂತೆ ಹಾಲೀರಿದ ರಾಧ ಮೊಲೆ ತೊಟ್ಟನ್ನು ಚೀಪುತ್ತಲೇ ನಿದ್ರೆ ಹೋದಳು. ಅವಳನ್ನು ಜಾಗರೂಕ ಮಲಗಿಸಿ ಅಡುಗೆ ಮನೆಗೋಗಿ ಆತುರಕ್ಕಾಗುವ ಅವಲಕ್ಕಿ ಉಪ್ಪಿಟ್ಟನ್ನು ಮಾಡಿ ಸ್ನಾನಕ್ಕೋದೆ. ಅಪ್ಪ – ತಮ್ಮ ಕೂಡ ಇನ್ನೂ ಎದ್ದಿರಲಿಲ್ಲ. ಅವರಿಗೂ ರಾತ್ರಿ ನಿದ್ರೆ ಆಗಿಲ್ಲವೋ ಏನೋ. ಗಡದ್ದಾಗಿ ತಿಂದು ನಿದ್ರೆ ಮಾಡಿದ್ದು ರಾಜೀವನೊಬ್ಬನೇ ಇರಬೇಕು. ಸಮಯ ಎಂಟಾದರೂ ಅಮ್ಮ ಏಳುವ ಸೂಚನೆಯಿಲ್ಲ! ಎಬ್ಬಿಸದೇ ವಿಧಿಯಿರಲಿಲ್ಲ. ಯಾವುದೋ ದೂರದ ಸ್ವಪ್ನಲೋಕದಲ್ಲಿದ್ದವರನ್ನು ವಾಸ್ತವಕ್ಕೆ ಕರೆತರಲೊಂದಷ್ಟು ಸಮಯ ಹಿಡಿಯದೆ ಇರಲಿಲ್ಲ. ʼತಿಂಡಿ ಮಾಡಿದ್ದೀನಿ. ಹಾಲು ತೆಗೆದಿಟ್ಟಿದ್ದೀನಿ. ಮಧ್ಯಾಹ್ನ ಅಡುಗೆಗೇನೂ ಮಾಡಿಲ್ಲ. ನಾನೇ ಬರ್ತೀನಿ ಹನ್ನೊಂದರಷ್ಟೊತ್ತಿಗೆ. ಬಂದ್‌ ಅಡುಗೆ ಮಾಡ್ತೀನಿʼ ಎಂದ್ಹೇಳುತ್ತಾ ಅವರ ಹ್ಞಾಂ ಹ್ಞೂಂಗೆ ಕಾಯದೆ ಹೊರಟುಬಿಟ್ಟೆ. ಅಪ್ಪ – ತಮ್ಮ ಇನ್ನೂ ಎದ್ದಿರಲಿಲ್ಲ. 

ಎಂಟೂವರೆಯಾಗಿತ್ತು ಆಸ್ಪತ್ರೆ ತಲುಪಿದಾಗ. ದಡಬಡಾಯಿಸಿ ವಾರ್ಡಿಗೋಡಿದೆ. ಸದ್ಯ ಇನ್ನೂ ಮೋಹನ್‌ ಸರ್‌ ಬಂದಿರಲಿಲ್ಲ. ಹೋಗುತ್ತಿದ್ದಂತೆ ಸುಮ "ಏನೇ ರಾತ್ರೋರಾತ್ರಿ ಫೇಮಸ್‌ ಆಗಿಬಿಟ್ಟಿದ್ದೀಯ" ಅಂತ ಕಿಚಾಯಿಸಿದಳು. ಏನು ಸಮಾಚಾರ, ಎಂತದದು ಫೇಮು ಅಂತ ಪ್ರಶ್ನಾರ್ಥಕವಾಗಿ ಅವಳೆಡೆಗೆ ನೋಡಿದೆ. 

“ರಿತಿಕಾ ಅನ್ನೋ ಮಗು ಅಡ್ಮಿಟ್‌ ಆಗಿದ್ಯಲ್ಲ. ಅಲ್ಲಿಗೋಗಿದ್ದೆ. ಕಾಲ್‌ ಬಂದಿತ್ತು. ಸರ್ಜರಿಯವರ ನೋಟ್ಸ್‌, ನೀ ಬರೆದಿದ್ದ ನೋಟ್ಸುಗಳನ್ನೆಲ್ಲ ನೋಡಿದೆ. ಗುಡ್‌ ಡಯಾಗ್ನೋಸಿಸ್.‌ ಈ ಸರ್ಜರಿಯವರು ಕುಯ್ಯೋದಿಕ್ಕಷ್ಟೇ ಸರಿ. ನೆಟ್ಟಗ್‌ ಒಂದ್‌ ಹಿಸ್ಟರಿ ತಗೋಳೋಕ್‌ ಬರಲ್ಲ ಮುಂಡೇವಕ್ಕೆ. ಅಲ್ಲಿದ್ದ ನರ್ಸುಗಳು, ರಿತಿಕಾಳ ಅಪ್ಪ ಅಮ್ಮ ಎಲ್ಲಾ ನಿನ್ನ ಹೊಗಳಿದ್ದೇ ಹೊಗಳಿದ್ದು. ಎಲ್ಲಿ ಆ ಡಾಕ್ಟ್ರು ಬರಲ್ವ ಇವತ್ತು ಅಂತ ಕೇಳ್ತಿದ್ದರು. ಇಲ್ಲ ಅವ್ರು ದೊಡ್‌ ಡಾಕ್ಟ್ರು ಆಮೇಲ್‌ ಬರ್ತಾರೆ ಅಂತಂದು ಬಂದೆ.…” 

ʼಓ! ಸಾಕು ಸಾಕು. ಅದೇನಂತಾ ದೊಡ್ಡ ವಿಷಯ ಬಿಡು. ನನ್ನ ಜಾಗದಲ್ಲಿ ನೀನಿದ್ದಿದ್ದರೂ ಹಂಗೇ ಹಿಸ್ಟರಿ ಕೇಳಿ ಡಯಾಗ್ನೋಸಿಸ್‌ ಮಾಡ್ತಿದ್ದೆ ಬಿಡುʼ 

“ಓ! ನಾನಷ್ಟೆಲ್ಲ ಬುದ್ವಂತೆ ಅಲ್ಲ ಬಿಡಮ್ಮ” 

ʼಸರಿ ಸರಿʼ 

“ಮತ್ತಿನೊಬ್ರು ಸಿಕ್ಕಿದ್ರಪ್ಪ. ನಿನ್‌ ದೊಡ್‌ ಫ್ಯಾನಾಗೋಗಿದ್ದಾರವರು" 

ʼಅದ್ಯಾರಪ್ಪ ನನ್ನ ಫ್ಯಾನು ಸಿಕ್ಕಿದ್ದು ನಿನಗೆʼ 

“ನಮ್‌ ಹೆಚ್.ಆರ್‌ ಸ್ಮಾರ್ಟಿ ರಾಮ್‌ಪ್ರಸಾದ್‌ ಸಿಕ್ಕಿದ್ರೂ. ನಿನ್ನ ಹೊಗಳಿದ್ದೂ ಹೊಗಳಿದ್ದೇ. ಅವರ ಕೈಲಿ ಅಧಿಕಾರ ಇದ್ದಿದ್ರೆ ರಾತ್ರೋರಾತ್ರಿ ನೀ ಪೀಡಿಯಾಟ್ರಿಕ್ಸ್‌ ಹೆಡ್‌ ಆಗಿಬಿಡ್ತಿದ್ದೇನೋಪ” 

ʼಸಾಕ್‌ ಮಾಡೇ ಅದೆಷ್ಟ್‌ ಕಾಲೆಳೀತಿ. ಅದೇನದು ಸ್ಮಾರ್ಟಿ ರಾಮ್‌ಪ್ರಸಾದುʼ 

“ಹ್ಞೂ ಮತ್ತೆ. ನೋಡಲಿಲ್ವ ಮತ್ತೆ ನೀನು. ನಮ್‌ ಆಸ್ಪತ್ರೇಲಿರೋ ಸ್ಮಾರ್ಟ್‌ ಫೆಲೋಸಲ್‌ ಟಾಪಲ್‌ ಬರ್ತಾರೆ" 

ʼಹೌದಾ. ನನಗೇನೋ ಅನ್ನಿಸಲಿಲ್ಲಪ್ಪʼ 

“ಮದ್ವೆಯಾಗಿ ಒಂದ್‌ ಮಗು ಆದ ಮೇಲ್‌ ನಿಂಗ್ಯಾಕ್‌ ಅನ್ನಿಸಬೇಕು ಬಿಡು" 

ʼಹಲೋ ಮೇಡಂ. ನಿಂಗೂ ಮದುವೆ ಫಿಕ್ಸ್‌ ಆಗಿದೆ ನೆನಪಿರಲಿʼ 

“ಫಿಕ್ಸ್‌ ತಾನೇ ಆಗಿರೋದು ಇನ್ನೂ ಆಗಿಲ್ಲವಲ್ಲ" 

ʼಓಹೋ ಹಂಗೆʼ 

“ಮದ್ವೆಯಾಗಿದ್ರೂ ಏನಂತೆ? ಇನ್ನೊಬ್ಬರನ್ನ ಲವ್‌ ಮಾಡಬಾರದಾ? ಲವ್‌ ಆಗಬಾರದಾ?" 

ಯಾವ ಬಾಯಲ್ಲಿ ಮಾಡಬಾರದು ಆಗಬಾರದು ಅಂತ ಹೇಳಲಿ? ನನಗೇ ಆಗಿತ್ತಲ್ಲ ಸಾಗರನ ಮೇಲೆ. ಈಗೇನೋ ಲವ್‌ ಇದೆ ಅಂತ ಅನ್ನಿಸೋಲ್ಲ. ಅವನ ಜೊತೆ ಮಾತಾಡಬೇಕು, ಇನ್ನೂ ಹರಟಬೇಕು, ಅವನ ಸಮೀಪದಲ್ಲಿ ಸಾಂಗತ್ಯದಲ್ಲಿರಬೇಕು ಅಂತ ಅನ್ನಿಸೋಲ್ಲ ಈಗ. ಯಾಕೆ ಅನ್ನಿಸೋಲ್ಲವೋ ಗೊತ್ತಿಲ್ಲ. ವರುಷದ ಹಿಂದೆ ತೀವ್ರವಾಗಿ ಕಾಡ್ತಿದ್ದ ಸಂಗತಿಗಳೇ ಅಲ್ಲವೇ ಅವೆಲ್ಲ. ಒಂದ್‌ ಮೆಸೇಜ್‌ ಇಲ್ಲ, ಒಂದ್‌ ಫೋನ್‌ ಇಲ್ಲ. ಅದೆಲ್ಲಿ ಹೋದನೋ ಏನೋ ಮದುವೆ ಆಗೋಯ್ತ ಅವನಿಗೆ? ಹೊಟ್ಟೆಯಲ್ಲಿ ಉರಿದಂತಾಯಿತು. ಉರಿಯನ್ನು ಉಪ್ಪಿಟ್ಟು ಶಮನ ಮಾಡಿತು. ಅಲ್ಲ, ಅವನ ಮೇಲೆ ಲವ್‌ ಇಲ್ಲ ಅಂದಮೇಲೆ ಇದ್ಯಾಕಿಂಗೆ ಅವನ ಮದುವೆ ಬಗ್ಗೆ ಯೋಚನೆ ಬಂದಾಗ ಉರಿ ಕಿತ್ಕೋತಿದೆ. ಲವ್‌ ಇಲ್ಲ ಅಂದಾಕ್ಷಣ ಇರೋದೇ ಇಲ್ವ? ಇದ್ದೇ ಇರ್ತದೆ ಅದೆಲ್ಲಿಗೋಗ್ತದೆ! ನನಗೇಳದೆ ಮದುವೆಯಾಗಿಬಿಡ್ತಾನಾ ಅವನು? 

“ಹಲೋ ಬಾಸ್‌. ಎಲ್ಲಿ ಕಳದೋದ್ರಿ? ಯಾರೋ ನೆನಪಾದಂಗಿದೆ!" 

ʼಅಯ್ಯೋ ಗೂಬೆ. ಅಂತದ್ದೇನಿಲ್ವೇ. ಮದುವೆಯಾದ್ಮೇಲೂ ಲವ್‌ ಆಗ್ಬೂದು. ಯಾಕಾಗಬಾರದು. ಸಮಾಜದ ಲೆಕ್ಕದಲ್ಲಿ ತಪ್ಪಾಗ್ತದೆ ಅಷ್ಟೇʼ 

“ಸಮಾಜದ ಲೆಕ್ಕದಲ್ಲಿ ಎಲ್ಲಾ ತಪ್ಪೇ ಬಿಡೆ. ಸೊಂಟ ಕಾಣ್ವಂಗ್‌ ಸೀರೆ ಹಾಕಿದ್ರೂ ತಪ್ಪು, ಮೈಮುಚ್ವಂಗ್‌ ಪ್ಯಾಂಟ್‌ ಶರ್ಟಾಕಿದ್ರೂ ತಪ್ಪು, ಬ್ಲೌಸ್‌ ಹಿಂದೆ ಡೀಪಿದ್ರೂ ತಪ್ಪು, ಮುಂದೆ ಡೀಪಿದ್ರೂ ತಪ್ಪು, ಸೀರೆ ತೆಳುವಾಗಿದ್ರೂ ತಪ್ಪು, ದುಬಾರಿ ರೇಷ್ಮೆ ಸೀರೆ ಹಾಕಿದ್ರೂ ತಪ್ಪು. ತಪ್ಪು ತಪ್ಪು ಅನ್ನುತ್ತಲೇ ಜೊಲ್‌ ಸುರಿಸ್ಕಂಡ್‌ ನೋಡ್ತಾವೆ ಗಂಡು ಮುಂಡೇವು" 

ʼಹೋಲ್‌ಸೇಲಾಗಿ ಎಲ್ಲಾ ಗಂಡಸ್ರಿಗೂ ಬಯ್ಬೇಡಮ್ಮ. ಅದ್ರಲ್‌ ನಿನ್ನ ಗಂಡಾನೂ ಇರ್ತಾನೆʼ 

“ಅಯ್ಯೋ ಅವನೂ ಅದನ್ನೇ ಮಾಡಿರ್ತಾನೆ ಕಣ್‌ ಬಿಡು" 

ʼಉಶ್ಶಪ್ಪಾ….ನಿನ್ನ ಜೊತೆ ವಾದ ಮಾಡೋಕಾಗಲ್ಲಮ್ಮ. ಎಲ್ಲಿ ಮೋಹನ್‌ ಸರ್‌ ಬರಲೇ ಇಲ್ಲ ಇನ್ನು. ಬೇಗ ರೌಂಡ್ಸ್‌ ಮುಗಿಸಿ ಮನೆಗೋಡಬೇಕು, ಅಮ್ಮ ಸುಸ್ತಾಗಿಬಿಟ್ಟಿದ್ದಾರೆʼ 

“ಅವರು ಬರೋದೆ ಒಂಭತ್ತರ ಮೇಲಲ್ವ. ಬರಲಿ ಬಿಡು ನಿಧಾನಕ್ಕೆ. ಅವರ ಕೈಲಿ ಬಯ್ಯಿಸಿಕೊಳ್ಳೋದಷ್ಟು ತಡವಾದ್ರೆ ಕಳ್ಕೊಳ್ಳೋದೇನಿದೆ” 

ʼಅಲ್ವಾ. ಯಾವಾಗ್ಲೂ ಬಯ್ಯೋದೆ ಕೆಲಸ ಅವರಿಗೆʼ 

“ಹು. ಅದೇನೋಪ. ಹುಡುಗರಿಗೂ ಬಯ್ತಾರೆ. ಹುಡುಗೀರಿಗೂ ಬಯ್ತಾರೆ. ಸಿಸ್ಟರಿಗೂ ಬಯ್ತಾರೆ. ಬ್ರದರ್‌ಗೂ ಬಯ್ತಾರೆ. ಕೊನೆಗೆ ಅಡ್ಮಿನಿಷ್ಟ್ರೇಷನ್‌ನಲ್ಲಿರೋರಿಗೂ ನೀರಿಳಿಸ್ತಾರೆ” 

ʼಕಾರ್ಪೊರೇಟ್‌ ಆಸ್ಪತ್ರೇಲಿ ಅವರ ಥರ ಡೇರ್‌ ಡೆವಿಲ್‌ ಇರೋರು ಕಡಿಮೆಯೇ ಬಿಡುʼ 

“Knowledge ಚೆನ್ನಾಗಿದೆ. ಜೊತೆಗೆ ಅವರನ್ನು ಹುಡುಕಿಕೊಂಡು ಬರೋರು ಜಾಸ್ತಿ. ನಮ್ಮೂರಿಂದಷ್ಟೇ ಯಾಕೆ, ಕೂರ್ಗು, ಕೂರ್ಗಿನಾಚೆ ಇರೋ ಸುಳ್ಯದಿಂದ ಕೂಡ ಅವರನ್ನುಡುಕಿಕೊಂಡು ಬರ್ತಾರೆ. ಅಷ್ಟೊಂದ್‌ ಪೇಷೆಂಟ್ಸು, ಆ ಪೇಷೆಂಟ್ಸ್‌ ತರೋ ದುಡ್ಡಿನ ಮುಖ ನೋಡಿಕೊಂಡು ಆಸ್ಪತ್ರೆಯವರು ಸುಮ್ಮನಿದ್ದಾರೆ. ಇಲ್ಲಾಂದ್ರೆ ಕಾರ್ಪೊರೇಟ್‌ ಆಸ್ಪತ್ರೆಯವರು ಇಷ್ಟು ದಿನಾ ಇಟ್ಕೋತಿದ್ರಾ ಇವರನ್ನ” 

ಅದೂ ನಿಜಾನೇ ಎಂಬ ಸಮ್ಮತಿಯಿಂದ ತಲೆಯಾಡಿಸುವಾಗ ಮೋಹನ್‌ ಸರ್‌ ವಾರ್ಡಿನ ಒಳಗೆ ಬಂದರು. ನಾನು, ಸುಮ ಮತ್ತೊಬ್ಬಳು ಹೊಸ ನರ್ಸು ಅವರ ಬಳಿ ಅಕ್ಷರಶಃ ಓಡಿದೆವು. ರೋಗಿಗಳತ್ರ ಮೋಹನ್‌ ಸರ್‌ ಮಾತಾಡೋದೆ ಒಂದು ಸೊಗಸು. ಮಕ್ಕಳಿಗಂತೂ ಅವರಂದ್ರೆ ಪಂಚಪ್ರಾಣ. ಅಪ್ಪ ಅಮ್ಮ ಘಂಟೆಯಿಂದ ಬಲವಂತ ಮಾಡಿದರೂ ಒಂದು ತುತ್ತು ಅನ್ನವನ್ನು ಗಂಟಲೊಳಗೆ ಇಳಿಸಲೊಲ್ಲದ ಮಕ್ಕಳೆಲ್ಲ ಮೋಹನ್‌ ಸರ್‌ ಮಾತಿಗೆ ಮರುಳಾಗಿ ಅವರಾಗೇ ತಿನ್ನಲು ಪ್ರಾರಂಭಿಸಿಬಿಡುತ್ತಿದ್ದರು. ʼನಮ್‌ ಹೊಟ್ಟೇಲ್‌ ಹುಟ್ದವು ನಮ್‌ ಮಾತೇ ಕೇಳಲ್ಲ. ಇವರ ಮಾತಿಗೆ ತಲೆದೂಗೋದು ನೋಡ್ದಾʼ ಅಂತ ಅಪ್ಪ ಅಮ್ಮ ಮೋಹನ್‌ ಸರ್‌ ಕಡೆಗೊಂದು ಅಸೂಯೆಯ ನೋಟ ಬಿಸಾಕುತ್ತಿದ್ದರು. ʼಹೆಂಗೋ ಮಗು ತಿಂತಲ್ಲʼ ಅಂತ ತಮಗೆ ತಾವೇ ಸಮಾಧಾನ ಮಾಡ್ಕಂಡು ಮಗು ದೊಡ್ಡದಾಗುವವರೆಗೂ ಏನೇ ಹುಷಾರು ತಪ್ಪಿದರೂ ಮೋಹನ್‌ ಸರ್‌ರನ್ನೇ ಹುಡುಕಿಕೊಂಡು ಬರುತ್ತಿದ್ದರು. ಸುಮಾರು ಜನರಂತೂ ಹದಿನೆಂಟು ದಾಟಿದ ʼಮಕ್ಕಳನ್ನೂʼ ಮೋಹನ್‌ ಸರ್‌ ಹತ್ತಿರಾನೇ ತೋರಿಸೋರು! ಈ ಕಾರಣಕ್ಕೇ ಫಿಸಿಶಿಯನ್ಸಿಗೂ ಮೋಹನ್‌ ಸರ್‌ಗೂ ಆವಾಗವಾಗ ಮುಸುಕಿನ ಗುದ್ದಾಟ ನಡೆಯುತ್ತಿತ್ತು. ಆದರೆ ಮೋಹನ್‌ ಸರ್‌ ತರ ಪೀಡಿಯಾಟ್ರೀಷಿಯನ್ನಾಗಬೇಕು ಅಂತ ನಾವುಗಳು ಮಾತನಾಡಿಕೊಳ್ಳುವುದುಂಟು. 

ಜೆನರಲ್‌ ವಾರ್ಡ್‌ ರೌಂಡ್ಸು ಮುಗಿಸಿ, ಸೆಮಿಸ್ಪೆಶಲ್‌ ವಾರ್ಡುಗಳಲ್ಲಿದ್ದ ಇಬ್ಬರನ್ನು ನೋಡಿಕೊಂಡು ಸ್ಪೆಶಲ್‌ ವಾರ್ಡ್‌ ಕಡೆಗೆ ಹೋದೆವು. ಸ್ಪೆಶಲ್‌ ವಾರ್ಡಿನಲ್ಲಿದ್ದಿದ್ದು ರಿತಿಕಾ ಒಬ್ಬಳೇ. ರಾತ್ರಿ ಪೂರಾ ಹೊಟ್ಟೆ ನೋವಿತ್ತಂತೆ. ಮಧ್ಯೆ ಮಧ್ಯೆ ನೋವು ಕಡಿಮೆಯಾದ ಹೊತ್ತಿನಲ್ಲಿ ಚೂರ್ಚೂರು ನಿದ್ರೆ ಮಾಡಿದಳಂತೆ. ನಾವುಗಳು ವಾರ್ಡಿಗೆ ಹೋದಾಗ ನಿದ್ರೆ ಹೋಗಿದ್ದಳು. ಬಟ್ಟೆ ಮೇಲೆ ಸರಿಸಿ ರ್ಯಾಷಸ್‌ ಅನ್ನು ಗಮನಿಸಿ ನನ್ನೆಡೆಗೊಮ್ಮೆ ನೋಡಿ ʼಗುಡ್‌ ಡಯಾಗ್ನೋಸಿಸ್ ಕಣಮ್ಮʼ ಅಂತ ಕಣ್ಣಲ್ಲೇ ಮೆಚ್ಚುಗೆ ಸೂಚಿಸಿದರು. ಬಾಯ್ಬಿಟ್‌ ಹೇಳೋಕೇನ್‌ ರೋಗ ಅಂತ ಮನಸ್ಸಲ್‌ ಅಂದುಕೊಳ್ಳುತ್ತಾ ʼಥ್ಯಾಂಕ್ಸ್‌ ಸರ್‌ʼ ಅಂತ ಕಣ್ಣಲ್ಲೇ ವಂದನೆ ಸೂಚಿಸಿದೆ. 

"ಸ್ಟಿರಾಯಿಡ್‌ ಡೋಸ್‌ ಜಾಸ್ತಿ ಮಾಡಿ” ಅಂತ ನಮಗೆ ಹೇಳಿ ರಿತಿಕಾಳ ಅಮ್ಮನ ಕಡೆಗೆ ತಿರುಗಿ “ನೋಡೀಮ್ಮ. ನಿಮ್ಮ ಮಗಳನ್ನಿನ್ನು ಹೆಚ್ಚು ಜಾಗರೂಕತೆಯಿಂದ ನೋಡಿಕೊಳ್ಳಬೇಕು. ಗಂಟಲು ನೋವು, ಜ್ವರ ಬರದಂತೆ ಕಾಪಾಡಬೇಕು. ಶಾಲೇಲಿ ಸರಿ ಓದದಿದ್ದರೆ ಗದರದೆ ಇರಬೇಕು. ಸ್ಟ್ರೆಸ್‌ ಇಂದಾನೇ ಇದು ಮತ್ತೆ ಮತ್ತೆ ಬರೋ ಸಾಧ್ಯತೆ ಇರ್ತದೆ. ಹೊರಗಡೆ ಊಟ ಬೇಡ. ಎಣ್ಣೆ, ಹಾಲು, ಮೊಟ್ಟೆ, ಮಾಂಸ, ಮೀನು ಇನ್ನೊಂದು ತಿಂಗಳು ಕಳೆಯುವವರೆಗೆ ಬೇಡ. ಯಾವ್ದಾದ್ರೂ ಹಣ್ಣು ತಿಂದಾಗ ಇವಳಿಗೆ ಗಂಟಲು ನೋವು ಬರ್ತದೆ ಅಂದ್ರೆ ಅದನ್ನೂ ಕೊಡಬೇಡಿ. ತಿಂಗಳ ನಂತರ ಆರಾಮವಾಗಿದ್ರೆ ಮೊಟ್ಟೆ ಮಾಂಸ ಶುರುಮಾಡಬಹುದು. ಸದ್ಯಕ್ಕೆ ಬಂದಿರೋ ರಿಪೋರ್ಟ್ಸ್‌ ಪ್ರಕಾರ ಕಿಡ್ನಿಗೆಲ್ಲಾ ಏನೂ ತೊಂದರೆಯಾಗಿಲ್ಲ. ಆದ್ರೂ ತಿಂಗಳು ಎರಡು ತಿಂಗಳಿಗೊಮ್ಮೆ ಯೂರಿನ್‌ ರೊಟೀನ್‌ ಪರೀಕ್ಷೆ ಮಾಡಿಸುತ್ತಿರಬೇಕು ಅಷ್ಟೇ" 

“ಇನ್ಮುಂದಕ್ಕೇನೂ ಬರೋದಿಲ್ವಾ ಡಾಕ್ಟರ್”‌ 

“ಹಂಗೆಲ್ಲ ಹೆಂಗಮ್ಮ ಗ್ಯಾರಂಟಿ ಕೊಡೋದು? ಮಕ್ಳು ಅಂದಮೇಲೆ ಅದೂ ಇದೂ ತಿನ್ನದೇ ಇರ್ತಾರಾ? ಅಲ್ಲಿ ಇಲ್ಲಿ ಆಡವಾಡದೆ ಇರ್ತಾರಾ? ಗಂಟ್ಲು ನೋವು ಜ್ವರ ಬರದೇ ಇರ್ತದಾ? ಎಲ್ಲೂ ಕಳಿಸದೆ ಮನೇಲೇ ಇಟ್ಕಂಡ್ರೂ ಬರಬಹುದಲ್ಲ. Lets hope for the best ಅಷ್ಟೇ” 

ಸರ್‌ ಕೂಡ ನನ್ನ ತರಾನೇ ವಾಕ್ಯದ ಕೊನೆಗೊಂದು ಅಷ್ಟೇ ಉಪಯೋಗಿಸ್ತಾರಲ್ಲ! 

“ಮನೆಗ್‌ ಯಾವಾಗ್‌ ಹೋಗಬಹುದು ಸಾರ್”‌ 

“ನೋಡುವ. ಮೊದಲು ಹೊಟ್ಟೆ ನೋವು ಕಡಿಮೆಯಾಗಲಿ. ಸರ್ಜರಿಯವರ ಜೊತೆಗೂ ಮಾತಾಡ್ತೀನಿ. ಇನ್ನೊಂದು ನಾಲ್ಕೈದು ದಿನ ಇರಬೇಕಾಗ್ತದೆ ಅನ್ಸುತ್ತೆ. ನೋಡುವ” ರೂಮಿನಿಂದ ಹೊರಬಂದೆವು. ನರ್ಸಿಂಗ್‌ ಸ್ಟೇಷನ್ನಿನಲ್ಲಿ ಕೈಯಿಗೆ ಸ್ಟೆರಿಲಿಯಮ್‌ ಹಾಕಿಕೊಳ್ಳುತ್ತ ಮೋಹನ್‌ ಸರ್‌ “ಸಿಸ್ಟರ್.‌ ನನ್ನ ಕನ್ಸಲ್ಟೇಷನ್‌ ಫೀಸ್‌ ಹಾಕ್ಬೇಡಿ" ಅಂತೇಳಿದರು. 

ಸರ್‌ ಹೊರಡುವ ಸಮಯದಲ್ಲಿ ಎದುರಿನಿಂದ ರಾಮ್‌ಪ್ರಸಾದ್‌ ಬಂದರು. ಹ್ಞೂ. ಸುಮ ಹೇಳಿದಂತೆ ಸ್ಮಾರ್ಟಿಯೇ! ಮೋಹನ್‌ ಸರ್‌ ರಾಮ್‌ಪ್ರಸಾದ್‌ ಜೊತೆ ಎರಡು ನಿಮಿಷ ಮಾತನಾಡಿ ಹೊರಟರು. ಒಂದಷ್ಟು ನೋಟ್ಸ್‌ ಬರೆಯುವ ಸಲುವಾಗಿ ನಾನು ಸುಮ ಅಲ್ಲೇ ಉಳಿದೆವು. ರಾಮ್‌ಪ್ರಸಾದ್‌ ನನ್ನ ಬಳಿ ಬಂದು "ಥ್ಯಾಂಕ್ಸ್‌ ಮೇಡಂ" ಎಂದರು. 

ʼಅಯ್ಯೋ ಥ್ಯಾಂಕ್ಸ್‌ ಎಲ್ಲಾ ಯಾಕೆ. ನನ್ನ ಡ್ಯೂಟಿ ನಾ ಮಾಡಿದೆʼ ಎಂಬ ಪುರಾತನ ಕಾಲದ ಡೈಲಾಗ್‌ ಹೊಡೆದೆ. ಮುಗುಳ್ನಕ್ಕು ವಾರ್ಡಿನ ಕಡೆಗೆ ಎರಡೆಜ್ಜೆ ಹಾಕಿ ತಿರುಗಿ ನೋಡಿ “ಮೇಡಂ ರಾತ್ರಿ ಟೆನ್ಶನ್ನಿನಲ್ಲಿ ನಿಮ್ಮ ಹೆಸರು ಕೇಳೋಕೆ ಮರೆತೆ” 

ʼಧರಣಿʼ ಮತ್ತೊಮ್ಮೆ ಮುಗುಳ್ನಕ್ಕು ವಾರ್ಡಿಗೆ ಹೋದರು. ನೋಟ್ಸ್‌ ಬರೆದು ಮುಗಿಸಿ ನಾ ಮನೆಗೊರಡುವವರೆಗೂ ʼಥ್ಯಾಂಕ್ಸ್‌ ಮೇಡಂʼ ʼಥ್ಯಾಂಕ್ಸ್‌ ಮೇಡಂʼ ಅಂತ ಕಾಲೆಳೆಯುತ್ತಿದ್ದಳು ಸುಮ.

ಮುಖಪುಟ ಚಿತ್ರ: ಚೇತನ ತೀರ್ಥಹಳ್ಳಿ. 
ಮುಂದುವರೆಯುವುದು

No comments:

Post a Comment