ಡಾ. ಅಶೋಕ್. ಕೆ. ಆರ್.
ಆಸ್ಪತ್ರೆಗೋಗಲಾರಂಭಿಸಿ ಎರಡು ತಿಂಗಳು ಕಳೆದಿತ್ತು. ಈ ತಿಂಗಳಿಂದ ನೈಟ್ ಡ್ಯೂಟಿ ಹಾಕೋದೇನಮ್ಮ ಅಂತ ಕೇಳಿದ್ದಕ್ಕೆ ಒಲ್ಲದ ಮನಸ್ಸಿನಿಂದಲೇ ಹ್ಞೂಗುಟ್ಟಿದ್ದೆ. ಹೂ ಎನ್ನದೆ ಬೇರೆ ದಾರಿಯೂ ಇರಲಿಲ್ಲವಲ್ಲ. ಎರಡು ತಿಂಗಳಿಂದ ನನ್ನ ಎಂಟು ನೈಟ್ ಡ್ಯೂಟಿಗಳನ್ನು ಪಾಪ ನನ್ನ ಜೊತೆಗಿದ್ದ ಪಿ.ಜಿಗಳೇ ಮಾಡಿದ್ದರು. ಎಷ್ಟೂಂತ ಅವರ ಸಹಾಯ ಬಯಸುವುದು, ಎಷ್ಟಂತ ಮಾಡುವುದಿವಳಿಗೆ ಅಂತ ಅವರು ಗೊಣಗುವುದಕ್ಕೆ ಮುಂಚಿತವಾಗಿಯೇ ನೈಟ್ ಡ್ಯೂಟಿ ಒಪ್ಪಿಕೊಳ್ಳುವುದು ಸೂಕ್ತವೆಂದು ನನಗೂ ಅನಿಸಿತು. ಐದಕ್ಕೆ ಮನೆಗೆ ಹೋಗಿ ಮತ್ತೆ ಏಳೂವರೆಯ ಸುಮಾರಿಗೆ ಹೊರಟುಬರ್ತೀನಿ, ಅಲ್ಲಿಯವರೆಗೂ ಸ್ವಲ್ಪ ನೋಡ್ಕೊ ಪ್ಲೀಸ್ ಎಂದು ಗೆಳತಿ ಸುಮಾಳಿಗೇಳಿದ್ದೆ. "ಏಳೂವರೆ ಇಲ್ಲದೇ ಹೋದರೆ ಎಂಟೂವರೆಗೇ ಬಾ. ತೊಂದರೆಯೇನಿಲ್ಲ” ಎಂದ್ಹೇಳಿ ಕಳುಹಿಸಿಕೊಟ್ಟಿದ್ದಳು. ಉತ್ತಮ ಸಹೋದ್ಯೋಗಿಗಳು ದೊರಕೋದು ಸಹಿತ ಒಂದು ಅದೃಷ್ಟವೇ ಸರಿ. ಅವಳ ಒಳ್ಳೇತನವನ್ನು ದುರುಪಯೋಗಪಡಿಸಿಕೊಳ್ಳುವುದು ತಪ್ಪಾಗ್ತದಲ್ಲ, ಏಳೂವರೆಗೆ ಐದು ನಿಮಿಷವಿರುವಂತೆಯೇ ಆಸ್ಪತ್ರೆ ತಲುಪಿ ಅವಳನ್ನು ಕಳುಹಿಸಿಕೊಟ್ಟೆ.
ರಾತ್ರಿ ಹೊತ್ತು ಆಸ್ಪತ್ರೆಯಲ್ಲಿ ವೈದ್ಯರು ಸಿಕ್ತಾರೆ ಅನ್ನೋ ಕಾರಣಕ್ಕೆ ಬಿಡುವಾಗಿದ್ದರೂ ಬೆಳಗಿನ ಸಮಯ ಬಾರದೆ ಈಗ ಬರುವವರ ಸಂಖೈ ದಿನೇ ದಿನೇ ಹೆಚ್ತಿದೆ. ಬೆಳಿಗ್ಗೆ ಬಂದ್ರೆ ಓಪಿಡಿಯಲ್ಲಿ ಜನ ಜಾಸ್ತಿಯಿದ್ದರೆ ಕಾಯಬೇಕು, ಸೀದಾ ಕ್ಯಾಷುಯಾಲ್ಟಿಗೆ ಬಂದರೆ ಕೆಲಸ ಸಲೀಸು ಎಂಬ ಭಾವನೆ ಹಲವರಿಗೆ. ನಾಲ್ಕು ದಿನದಿಂದ ಇರುವ ಹೊಟ್ಟೆ ನೋವಿಗೆ, ಮೈಕೈ ನೋವಿಗೆ, ಕಿವಿನೋವಿಗೆ, ಜ್ವರಕ್ಕೆ ಮಧ್ಯರಾತ್ರಿ ಬಂದು ಆಸ್ಪತ್ರೆಯ ಕದ ಬಡಿಯುತ್ತಾರೆ. ಆಸ್ಪತ್ರೆ ಅಂದ ಮೇಲೆ ಜನ ಎಷ್ಟೊತ್ತಿಗಾದರೂ ಬರಬಹುದು ಎನ್ನುವುದೇನೋ ಸತ್ಯವೇ ಆದರೂ ಬೆಳಿಗ್ಗೆ ಬಂದು ತೋರಿಸುವಂತಹ ಖಾಯಿಲೆಗಳಿಗೆ ರಾತ್ರಿ ಬಂದು ನಿಜಕ್ಕೂ ತುರ್ತು ಗಮನ ಅಗತ್ಯವಿರುವವರಿಗೆ ಅನ್ಯಾಯ ಮಾಡುತ್ತಾರೆ. ಬಹಳ ತಿಂಗಳುಗಳ ನಂತರ ನಾ ಮಾಡ್ತಿದ್ದ ನೈಟ್ ಡ್ಯೂಟಿಯಿದು. ಎನ್.ಐ.ಸಿ.ಯುನಲ್ಲಿದ್ದ ರೋಗಿಗಳನ್ನು ನೋಡುವಾಗಲೂ ಮನಸ್ಸೆಲ್ಲ ರಾಧಳ ಬಗ್ಗೆಯೇ ಯೋಚಿಸುತ್ತಿತ್ತು. ಮಧ್ಯರಾತ್ರೀಲಿ ಎಚ್ಚರವಾದಾಗ ಕುಡಿಸಿ ಅಂತ ಹಾಲು ತೆಗೆದಿಟ್ಟು ಬಂದಿದ್ದೆ. “ಮಗಳಿಗೆ ಐದು ತಿಂಗಳು ತುಂಬ್ತಲ್ಲ. ಸೆರೆಲ್ಯಾಕೋ ಮೇಲ್ ಹಾಲೋ ಕೊಡೋಣ ಬಿಡು” ಅಂತ ಅಮ್ಮ ಹೇಳುತ್ತಲೇ ಇದ್ದಳು. ಇಲ್ಲಿ ಆಸ್ಪತ್ರೆಯಲ್ಲಿ ದಿನಂಪ್ರತಿ ʼಆರು ತಿಂಗಳವರೆಗೆ ಮಗುವಿಗೆ ತಾಯಿ ಹಾಲು ಬಿಟ್ಟು ಬೇರೇನನ್ನೂ ಕೊಡಬೇಡಿʼ ಅಂತ ಮಗುವಿನ ತಾಯಿಗೆ ಬೇಸರವಾಗುವಷ್ಟು ಸಲ ಹೇಳಿ ನನ್ನ ಮಗುವಿಗೇ ಮೇಲ್ ಆಹಾರ ಕೊಡಲು ಹೇಗೆ ಒಪ್ಪಲಿ? ʼಇನ್ನೊಂದು ತಿಂಗಳು ತಡ್ಕೋ. ಆಮೇಲೆ ನಿನ್ನಿಷ್ಟದಂತೆ ಮಾಡುವೆಯಂತೆʼ ಎಂದು ಸುಮ್ಮನಾಗಿಸುತ್ತಿದ್ದೆ.
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.
ನಮ್ ಆಸ್ಪತ್ರೆಯಲ್ಲಿ ನೈಟ್ ಡ್ಯೂಟಿಯೆಂದರೆ ಬರುವ ಎಲ್ಲಾ ಮಕ್ಕಳನ್ನು ನಾವೇ ನೋಡಬೇಕೆಂದೇನಿಲ್ಲ. ಎಮರ್ಜೆನ್ಸಿ ಸ್ಪೆಷಲಿಷ್ಟ್ ಡಾಕ್ಟರ್ರೇ ಒಬ್ಬರಿರ್ತಾರೆ. ಬರುವ ಎಲ್ಲಾ ಕೇಸುಗಳನ್ನು ಅವರೇ ನೋಡುತ್ತಾರೆ. ಬಹಳಷ್ಟಕ್ಕೆ ಅವರೇ ಚಿಕಿತ್ಸೆ ನೀಡಿ ಕಳುಹಿಸುತ್ತಾರೆ. ಅಗತ್ಯ ಬಿದ್ದಾಗ ಸ್ಪೆಷಲಿಷ್ಟ್ ವೈದ್ಯರಿಗೆ ಕರೆ ನೀಡುತ್ತಾರೆ. ಮುಂಚೆ ನೈಟ್ ಡ್ಯೂಟಿಯನ್ನು ಕೂಡ ಸೀನಿಯರ್ ಡಾಕ್ಟರುಗಳೇ ಮಾಡುತ್ತಿದ್ದರು. ಡಿ.ಎನ್.ಬಿ ಸೀಟುಗಳು ಬಂದ ಬಳಿಕ ನೈಟ್ ಡ್ಯೂಟಿಯ ಜವಾಬ್ದಾರಿ ನಮ್ಮದು. ನಮಗೂ ತಿಳಿಯದೆ ಹೋದಲ್ಲಿ ಸೀನಿಯರ್ ಡಾಕ್ಟರಿಗೆ ಫೋನ್ ಮಾಡಿದರೆ ಒಂದೋ ಫೋನಿನಲ್ಲೇ ಇಂತಿಂತದ್ದು ಮಾಡಿ ಎಂದು ಹೇಳುತ್ತಿದ್ದರು, ಇಲ್ಲ ಆಸ್ಪತ್ರೆಗೇ ಒಂದು ಸುತ್ತು ಬಂದು ಪರೀಕ್ಷಿಸಿ ಹೋಗುತ್ತಿದ್ದರು. ವಾರ್ಡಿನಲ್ಲಿ ಯಾರಾದರೂ ಕರೆದರೂ ಹೋಗಿಬರಬೇಕಿತ್ತು. ಎಲ್ಲಿಂದಲೂ ಕರೆ ಇಲ್ಲವೆಂದರೆ ಡ್ಯೂಟಿ ಡಾಕ್ಟರ್ಸ್ ರೂಮಿನಲ್ಲಿ ವಿರಾಮ.
ಡ್ಯೂಟಿ ಡಾಕ್ಟರ್ಸ್ ರೂಮಿನಲ್ಲಿ ಕುಳಿತು ಓದಿಕೊಳ್ಳುತ್ತಿದ್ದೆ, ನಾಳೆಯಿದ್ದ ಸೆಮಿನಾರಿನ ವಿಷಯವನ್ನು. ಅಮ್ಮನಿಗೊಂದು ಫೋನ್ ಮಾಡಿ ವಿಚಾರಿಸಿಕೊಳ್ಳೋಣವೆಂದುಕೊಂಡೆ. ಫೋನಿನ ಶಬ್ದಕ್ಕೇ ಮಗಳು ಎದ್ದುಬಿಟ್ಟರೆ? ಸುಮ್ಮನಾದೆ. ರಾಜೀವನಿಗೆ ಫೋನ್ ಮಾಡಿದೆ. ಗೆಳೆಯರೊಟ್ಟಿಗೆ ಹೊರಗೆ ಹೋಗಿದ್ದರು. ಎಲ್ಲಿಲ್ಲದ ಸಿಟ್ಟು ಬಂತು. ನಿನ್ನೇನೇ ಹೇಳಿದ್ದೆ ನಾಳೆ ನನ್ನ ನೈಟ್ ಡ್ಯೂಟಿ ಇದೆ ಮನೆಗೋಗಿ ಮಗಳನ್ನು ನೋಡಿಕೊಳ್ಳಿ ಎಂದು. ಹು ಎಂದು ತಲೆಯಾಡಿಸಿದ್ದವರಿಗೆ ಇವತ್ತಾ ವಿಷಯವೇ ನೆನಪಿರಲಿಲ್ಲ. “ಓ! ಮರ್ತೇಬಿಟ್ಟೆ ನೋಡು. ನಡೀತದಲ್ಲ ಹೋಗದೆ ಇದ್ದರೆ” ಎಂದು ನಗಾಡಿದ್ದರು. ಮರುಮಾತನಾಡದೆ ಫೋನ್ ಕಟ್ ಮಾಡಿದೆ. ಮನೆಯಲ್ಲಿ ಅಪ್ಪ ಅಮ್ಮನಿಗೂ ಅಳಿಯನ ವರ್ತನೆಯ ಬಗ್ಗೆ ಮುನಿಸಿದೆ. ನಾನೆಲ್ಲಿ ಬೇಸರಿಸಿಕೊಳ್ಳುತ್ತೀನೋ ಅಂತ ಸುಮ್ಮನಿರುತ್ತಾರಷ್ಟೇ. ಪ್ರಕೃತಿ ಲೆಕ್ಕದಲ್ಲಿ ಗಂಡಿಗೆ ವೀರ್ಯ ಟ್ರಾನ್ಸ್‌ಫರ್ ಮಾಡುವುದರಲ್ಲಷ್ಟೇ ಆಸಕ್ತಿ ಎಂದೇಳುತ್ತಿದ್ದ ಸಾಗರನ ಮಾತು ನಿಜವೋ ಏನೋ. ಹೆಣ್ಣಿಗೆ ವಂಶದ ಮುಂದುವರಿಕೆಯಷ್ಟೇ ಮುಖ್ಯ ಅಂತ ಕೂಡ ಹೇಳುತ್ತಿದ್ದ. ಒಂದ್ ಲೆಕ್ಕದಲ್ಲಿ ಹೌದಲ್ಲ, ಮಗಳು ಹುಟ್ಟಿದ ಮೇಲೆ ನಾ ರಾಜೀವನೆಡೆಗೆ ತೋರುತ್ತಿರುವ ಆಸಕ್ತಿ ಅಷ್ಟಕಷ್ಟೇ ಅಲ್ಲವೇ.
ಸಂಸಾರ ತಾಪತ್ರಯಗಳತ್ತ ಹರಿದು ಹೋಗುತ್ತಿದ್ದ ಮನಸ್ಸನ್ನು ಪುಸ್ತಕದಾಳೆಗಳ ಅಕ್ಷರಗಳತ್ತಿರಕ್ಕೆ ಎಳೆದು ತರುವುದೇ ದೊಡ್ಡ ಸಾಹಸ. ಮಗು ಇಟ್ಕಂಡ್ ಓದೋದು ಕಷ್ಟದ ಕೆಲಸವೇ ಸೈ. ಸುಸ್ತಿಗೆ ಕಣ್ಣುಗಳು ಬೇರೆ ಎಳೆಯುತ್ತಿದ್ದೊ. ಅಯ್ಯೋ, ಓದೋದ್ ನಂತರ ನೋಡ್ಕೊಳ್ಳುವ, ಮೊದಲು ಮಲಗುವ ಎಂದು ಪುಸ್ತಕ ಮುಚ್ಚಿಡುತ್ತಿದ್ದಂತೆಯೇ ನರ್ಸ್ ರೂಮಿನ ಕದ ತಟ್ಟಿದರು. ಸ್ಪೆಷಲ್ ವಾರ್ಡಿನಿಂದ ಕರೆ ಬಂದಿತ್ತು. ಸರ್ಜರಿ ವಿಭಾಗದಲ್ಲಿ ಅಡ್ಮಿಟ್ ಆಗಿದ್ದ ಮಗು, ಪೀಡಿಯಾಟ್ರಿಕ್ಸ್ ರೆಫರೆನ್ಸ್ ಹಾಕಿದ್ದರು. "ಎಮರ್ಜೆನ್ಸಿ ಅಂತೆ” ಅಂದರು ನರ್ಸ್. ʼಎಮರ್ಜೆನ್ಸಿ ಅಂದರೆ ಎಮರ್ಜೆನ್ಸಿ ವಾರ್ಡಿಗೆ ಕಳಿಸೋಕೇಳಿʼ ಅಂತ ನಗುತ್ತಾ ಹೇಳಿ ವಾರ್ಡಿನ ಕಡೆಗೆ ನಡೆದೆ. ಕಾರ್ಪೊರೇಟ್ ಆಸ್ಪತ್ರೆಯ ಸ್ಪೆಷಲ್ ವಾರ್ಡಿನಲ್ಲಿ ಇದ್ದಾರೆ ಅಂದ ಮೇಲೆ ಮುತುವರ್ಜಿಯಿಂದ ನೋಡಿಕೊಳ್ಳಲೇಬೇಕು. ಅಲ್ಲಿನವರು ಕಂಪ್ಲೇಂಟ್ ಕೊಟ್ಟುಬಿಟ್ಟರೆ ಆಸ್ಪತ್ರೆಯ ಮೇಲಧಿಕಾರಿಗಳು ಗಂಭೀರವದನರಾಗಿಬಿಡುತ್ತಾರೆ. ಅವರ ವದನ ಗಂಭೀರವಾಯಿತೆಂದರೆ ಯಾರಿಗೋ ಏನೋ ಗ್ರಹಚಾರ ವಕ್ಕರಿಸಿಕೊಂಡಿತೆಂದೇ ಅರ್ಥ. ಹಿಂಗಾಗಿ ಇಷ್ಟವಿದ್ಯೋ ಇಲ್ವೋ ಕಷ್ಟವಾಗ್ತದೋ ಇಲ್ವೋ ಅಂತೆಲ್ಲ ಯೋಚಿಸದೆ ಮುಖದ ಮೇಲೆ ಸದಾ ಒಂದಿಂಚು ನಗುವನ್ನಂಟಿಸಿಕೊಂಡೇ ಎಲ್ಲರೂ ಓಡಾಡ್ತಿರ್ತಾರೆ. ಬಹಳಷ್ಟು ಸಲ ಅದು ಸಹಜ ನಗು, ಹಲವಷ್ಟು ಸಲ ಕೃತಕ ನಗು. ಈಗ ನನ್ನ ಮೊಗದ ತುಂಬೆಲ್ಲ ತುಂಬಿ ತುಳುಕುತ್ತಿರುವುದು ಕೃತಕ ನಗು! ಮಗಳ ಯೋಚನೆ, ಮುಚ್ಚಲವಣಿಸುತ್ತಿರುವ ರೆಪ್ಪೆಗಳನ್ನೊತ್ತುಕೊಂಡು ಸಹಜ ನಗು ಮೂಡಿಸಿಕೊಳ್ಳುವುದಾದರೂ ಹೇಗೆ?
ವಾರ್ಡಿಗೆ ತಲುಪಿದರೆ ಏಳೆಂಟು ವರ್ಷದ ಹುಡುಗಿ ಅಪಾರ ಹೊಟ್ಟೆ ನೋವಿನಿಂದ ಒದ್ದಾಡುತ್ತಿದ್ದಳು. ತಂದೆಯ ಮುಖದಲ್ಲಿ ದುಗುಡ, ತಾಯಿಯ ಕಣ್ಣಲ್ಲಿ ಮಗಳ ನೋವಿನ ಪ್ರತಿಫಲನ. ರಾಜೀವ ಒಂದು ದಿನಕ್ಕಾದರೂ ಹೀಗೆ ದುಗುಡಗೊಂಡಿದ್ದುಂಟಾ? ನರ್ಸು ಕೇಸ್ ತೆಗೆದುಕೊಟ್ಟಳು. ರಿತಿಕಾ, ಹುಡುಗಿಯ ಹೆಸರು. ಒಂದು ದಿನದಿಂದ ಹೊಟ್ಟೆ ನೋವು, ಜ್ವರ, ಮೂರು ಸಲ ವಾಂತಿ ಎಂದಿತ್ತು. ಇವತ್ತು ಬೆಳಿಗ್ಗೆಯೇ ಅಡ್ಮಿಟ್ ಆಗಿರೋದು. ಅಪೆಂಡಿಸೈಟಿಸ್ ಇರಬಹುದೆಂದು ಅನುಮಾನಿಸಿ ಸ್ಕ್ಯಾನ್ ಮಾಡಿಸಿದ್ದರು. ಆಪರೇಷನ್ನಿಗೆ ತೆಗೆದುಕೊಳ್ಳಬೇಕೆಂದು ನಿರ್ಧರಿಸಿದ್ದರು. ನಿರ್ಧಾರ ಬದಲಾಗಿದ್ದು ಸ್ಕ್ಯಾನಿನಲ್ಲಿ ಅಪೆಂಡಿಸೈಟಿಸ್‌ನ ಯಾವುದೇ ಕುರುಹುಗಳಿಲ್ಲ ಎಂದು ವರದಿ ಬಂದಾಗ. ಸ್ಕ್ಯಾನ್ ಮಾಡಿ ಮುಗಿಸುವಷ್ಟರಲ್ಲಿ ರಿತಿಕಾಳ ಹೊಟ್ಟೆ ನೋವು ಚೂರು ತಹಬದಿಗೆ ಬಂದಿತ್ತು. ಸರಿ ಒಂದ್ ದಿನ ನೋಡುವ, ಇನ್ನೂ ಹೊಟ್ಟೆ ನೋವಿದ್ದರೆ ಒಂದು ಸಿಟಿ ಸ್ಕ್ಯಾನ್ ಮಾಡಿಸುವ ಎಂದು ಕೇಸ್ ಶೀಟಿನಲ್ಲಿ ಬರೆದಿದ್ದರು. ʼಈ ಸರ್ಜರಿ ಕೇಸಿಗೆ ನಮ್ಮನ್ಯಾಕೆ ಕರೆಸಿದರುʼ ಎನ್ನುವಂತೆ ನರ್ಸಿನ ಕಡೆಗೆ ನೋಡಿದೆ. "“ಟ್ಟೆ ನೋವು ಮತ್ತೆ ಜಾಸ್ತಿಯಾಗಿಬಿಟ್ಟಿದೆ, ತಡೆಯೋಕ್ ಆಗ್ತಿಲ್ಲವಂತೆ. ಇಂಜಿಕ್ಷನ್ ಕೊಡಲೇಳಿದ್ದರು. ಕೊಟ್ಟರೂ ಕಡಿಮೆಯಾಗಲಿಲ್ಲ. ಸರ್ಜರಿಯವರು ಬಂದು ನೋಡಿ ಯಾವುದಕ್ಕೂ ಒಂದು ಪೀಡಿಯಾಟ್ರಿಕ್ಸ್ ರೆಫರೆನ್ಸ್ ಹಾಕಲು ಹೇಳಿದರು" ನರ್ಸ್ ಮಾತಿಗೆ ತಲೆದೂಗುತ್ತಾ ಅವರಿಗೆ ತಿಳಿಯಲಿಲ್ಲ ಅಂತ ನಮ್ಮ ತಲೆಗೆ ಕಟ್ಟುವ ಪ್ರಯತ್ನವಿದು ಎಂದುಕೊಳ್ಳುತ್ತಾ ರಿತಿಕಾಳ ಬಳಿ ಹೋದೆ. ಹೊಟ್ಟೆ ನೋವಿನಿಂದ ನರಳುತ್ತಿದ್ದರು.
ʼಏನ್ ಊಟ ಮಾಡಿದ್ಯೋ ಪುಟ್ಟʼ ತಲೆ ಸವರುತ್ತಾ ಕೇಳಿದ ಪ್ರಶ್ನೆಗೆ ರಿತಿಕಾ ನೋವಿನಲ್ಲೇ ʼಮಾಡಿಲ್ಲ…..ನೋವು….ʼ ಎಂದು ಹೊಟ್ಟೆಯ ಮೇಲ್ಭಾಗವನ್ನು ತೋರಿಸುತ್ತಾ ಹೇಳುವ ಹೊತ್ತಿಗೆ ರೂಮಿಗೆ ಮತ್ತೊಬ್ಬ ವ್ಯಕ್ತಿಯ ಆಗಮನವಾಯಿತು. ಅವರನ್ನೆಲ್ಲೋ ಇಲ್ಲೇ ನಮ್ಮ ಆಸ್ಪತ್ರೆಯಲ್ಲಿ ಕಂಡ ನೆನಪಿದೆ, ಎಲ್ಲಿ ಅಂತ ನೆನಪಾಗಲೊಲ್ಲದು. ಬೇರೆ ಡಿಪಾರ್ಟ್‌ಮೆಂಟ್ ಪಿಜೀನಾ? ಇಲ್ಲ, ಪಿಜಿಯಾಗಿದ್ರೆ ಗೊತ್ತಾಗಿರೋದು. ಯಾರೋ ಆಫೀಸ್ ಸ್ಟಾಫ್ ಇರ್ಬೇಕು. ನಾ ಡೆಲಿವರಿಗೇಂತ ರಜೆ ಮಾಡ್ದಾಗ ಬಹಳಷ್ಷು ಜನ ಸೇರಿದ್ದಾರಿಲ್ಲಿ. ಅವರಲ್ಲೊಬ್ಬರಿರಬೇಕು. ನೀವು? ಅಂತ ಕಣ್ಣಿನಲ್ಲೇ ಕೇಳಿದ ಪ್ರಶ್ನೆಗೆ “ಹಲೋ ಮೇಡಂ. ನಾನು ರಾಮಪ್ರಸಾದ್ ಅಂತ. ನೀವ್ ನೋಡಿಲ್ಲ ಅಂತ ಕಾಣ್ತದೆ. ಇಲ್ಲಿಗೆ ಸೇರಿ ಹೆಚ್ಚು ದಿನಗಳಾಗಿಲ್ಲ ಬಿಡಿ. ಹೆಚ್.ಆರ್ ಮ್ಯಾನೇಜರ್”
ʼಓ. ಹಾಯ್. ನಾನೂ ಬಹಳಷ್ಟು ದಿನ ರಜೆಯಲ್ಲಿದ್ದೆ. ಹಂಗಾಗಿ ನೋಡಿಲ್ಲ ಅಂದ್ಕೋತೀನಿ. ನಿಮಗೇನಾಗ್ಬೇಕು ಇವರುʼ
“ನನ್ನಕ್ಕನ ಮಗಳು ಡಾಕ್ಟರ್” ಓ! ಹೆಚ್.ಆರ್ ಮ್ಯಾನೇಜರ್ ಅಕ್ಕನ ಮಗಳೆಂದರೆ ಒಂದಷ್ಟು ಹೆಚ್ಚೇ ಮುತುವರ್ಜಿ ವಹಿಸಬೇಕಲ್ಲ. ಅದಿಕ್ಕೆ ಈ ಸರಹೊತ್ತಲ್ಲಿ ಪೀಡಿಯಾಟ್ರಿಕ್ಸ್ ರೆಫರೆನ್ಸು. ಇರಲಿ, ನಂಗೇನು. ಮಗೂನ ಪರೀಕ್ಷಿಸಿ ಹೋಗುವ. ರಿತಿಕಾಳನ್ನು ಮಲಗಿಸಿ ಹೊಟ್ಟೆಯ ಭಾಗಗಳನ್ನು ಮುಟ್ಟಿ ಮುಟ್ಟಿ ಪರೀಕ್ಷಿಸಿದೆ. ಸಾಮಾನ್ಯವಾಗಿ ಅಪೆಂಡಿಸೈಟಿಸ್ ಇದ್ದಾಗ ಹೊಟ್ಟೆಯ ಬಲ ಕೆಳಭಾಗದಲ್ಲಿ ಮುಟ್ಟಿದಾಗ ರೋಗಿಗ ಅಸಾಧ್ಯ ನೋವಾಗ್ತದೆ. ಅಂತದ್ದೇನೂ ಇಲ್ಲಿ ಇದ್ದಂತಿಲ್ಲ. ಆ ಚಿಹ್ನೆಯೇ ಇಲ್ಲದ ಮೇಲೆ ಅದೆಂಗೆ ಅಪೆಂಡಿಸೈಟಿಸ್ ಅಂತ ತೀರ್ಮಾನ ಮಾಡಿಬಿಟ್ಟರು? ಪುಣ್ಯಕ್ಕೆ ಆಪರೇಷನ್ ಮಾಡಿ ಅಪೆಂಡಿಕ್ಸ್ ತೆಗೆದು ಬಿಸಾಕಿಲ್ಲ! ಹೊಟ್ಟೆ ಮತ್ತು ಎದೆಯ ಭಾಗದಲ್ಲಿ ಕಿರುಬೆರಳಿನ ತುದಿಯಷ್ಟು ಗಾತ್ರದ ಜಾಗದಲ್ಲಿ ಚಿಕ್ಕ ಚಿಕ್ಕ ಕೆಂಪು ಕಲೆಗಳು. ಎಲ್ಲೋ ಏನೋ ಮಿಸ್ ಹೊಡೀತಿದ್ಯಲ್ಲ ಅಂತನ್ನಿಸಿ ರಿತಿಕಾಳ ಅಮ್ಮನ ಕಡೆಗೆ ತಿರುಗಿ
ʼಇವಳಿಗೆ ಏನೇನಾಯ್ತು ಸ್ವಲ್ಪ ವಿವರವಾಗಿ ಹೇಳೀಮ್ಮʼ ಅಂತ ಕೇಳಿದೆ.
“ಅದೇ ಡಾಕ್ಟರ್ ನಿನ್ನೆ ಬೆಳಗ್ಗೆಯಿಂದ ವಿಪರೀತದಷ್ಟು ಜ್ವರ, ಆಮೇಲೆ ಹೊಟ್ಟೆನೋವೆಂದು ಅಳಲಾರಂಭಿಸಿದಳು, ಒಂದ್ ಮೂರು ಸಲ ವಾಂತಿ ಕೂಡ ಆಯಿತು” ಜ್ವರ ಹೊಟ್ಟೆನೋವು ವಾಂತಿ ಅಪೆಂಡಿಸೈಟಿಸ್‌ನ ಎಲ್ಲಾ ಲಕ್ಷಣಗಳೂ ಇದ್ದಾವಲ್ಲ. ಅಂದ್ರೂ ಎಲ್ಲೋ ಏನೋ ಸರಿ ಕಾಣ್ತಿಲ್ಲ.
ʼನಿನ್ನೆಗಿಂತ ಮುಂಚೆ ಏನೂ ತೊಂದರೆಯಿರಲಿಲ್ಲವಾ?ʼ
“ಇಲ್ಲ”
ʼಸ್ವಲ್ಪ ಸರಿ ನೆನಪಿಸಿಕೊಳ್ಳಿʼ
“ಮ್…..ಹತ್ತು ದಿನದ ಕೆಳಗೆ ಒಂದು ಪಾರ್ಟಿ ಇತ್ತು. ಐಸ್ ಕ್ರೀಂ ಎಲ್ಲಾ ಜಾಸ್ತಿ ತಿಂದಿದ್ಲು. ಹಂಗಾಗಿ ಎರಡು ಮೂರು ದಿನ ಗಂಟಲು ನೋವು ಕಾಣಿಸಿಕೊಂಡಿತ್ತು. ಉಪ್ಪು ನೀರು ಮುಕ್ಕಳಿಸಿದ್ಲು. ಕಡಿಮೆಯಾಗಿತ್ತು”
“ಪೂರ್ತಿ ಎಲ್ಲೇ ಕಡಿಮೆಯಾಗಿತ್ತು? ಮೊನ್ನೆ ಕೂಡ ಚೂರ್ ಗಂಟ್ಲು ನೋವಿದೆ ಅಂತ ಹೇಳ್ತಾನೇ ಇದ್ದಳಲ್ಲ?" ರಿತಿಕಾಳ ಅಪ್ಪ ಮಧ್ಯೆ ಬಾಯಿಹಾಕಿದರು.
“ಹೂ. ಚೂರ್ ಚೂರ್ ಇದೆ ಅಂತಿದ್ಲು. ತೀರ ಜಾಸ್ತಿಯೇನು ಇರಲಿಲ್ಲ”
ʼಮ್. ಜ್ವರ ಏನಾದ್ರೂ ಇರ್ತಿತ್ತಾ? ಗಂಟಲು ನೋವಿನ ಜೊತೆಗೆ?ʼ
“ಜ್ವರ ಅಂತೇನಿಲ್ಲ. ಚೂರ್ ಮೈ ಬೆಚ್ಚಗಾಗೋದಷ್ಟೇ. ಒಂದ್ ಪ್ಯಾರಾಸಿಟಮಾಲ್ ಕೊಟ್ರೆ ಸರಿಹೋಗೋದು”
ʼಮೈ ಬೆಚ್ಚಗಾಗೋದಿಕ್ಕೇ ಅಲ್ವ ಜ್ವರ ಅನ್ನೋದುʼ ಅಂದೆ ನಗುತ್ತಾ. ನೋವಿನಲ್ಲೂ ನಕ್ಕರವರು. ʼಗಂಟಲು ನೋವು ಜ್ವರ ಬಿಟ್ಟರೆ ಬೇರೇನೂ ಇರಲಿಲ್ಲವಾ?ʼ
“ಇಲ್ಲ ಇನ್ನೇನೂ ಇಲ್ಲ. ಆ….. ಒಂದ್ ಸಲ ಸ್ಕಿನ್ ಡಾಕ್ಟರ್ ಹತ್ರ ಹೋಗಿದ್ದೊ"
ʼಏನಾಗಿತ್ತು?ʼ
“ಮಂಡಿ ಕೆಳಗುದ್ದಕ್ಕೆ, ಮೊಣಕೈ ಹತ್ರ ಚೂರು ರ್ಯಾಷಸ್ ಆಗಿತ್ತು. ಅದಿಕ್ಕೆ ಹೋಗಿದ್ದೊ. ಆಟಾಡೋ ಮಕ್ಳಿಗೆ ಎಲ್ಲೋ ಅಲರ್ಜಿ ಆಗಿರ್ತದೆ ಅಂತೇಳಿ ಒಂದ್ ಕ್ರೀಮ್ ಬರೆದುಕೊಟ್ರು. ನಿಧಾನಕ್ಕೆ ಕಡಿಮೆಯಾಯಿತು”
ʼರ್ಯಾಷಸ್ ಅಂದ್ರೆ ಇಲ್ಲಾಗಿದ್ಯಲ್ಲಾ ಈ ತರನಾ ನೋಡಿʼ ಎಂದು ನಾನಾಗ ನೋಡಿದ ಕೆಂಪು ಕಲೆಗಳನ್ನು ತೋರಿಸಿದೆ.
"ಹು. ಹೌದೌದು. ಇದೇ ತರ ಆಗಿತ್ತು. ಇಲ್ಲಾಗಿರೋದು ನೋಡ್ಕೊಂಡೇ ಇರಲಿಲ್ಲ ನೋಡಿ. ಕ್ರೀಮೂ ತಂದಿಲ್ಲ….” ಎಂದು ಪೇಚಾಡಿಕೊಂಡರು.
ಇದು ಕ್ರೀಮಿಗೆ ಕಡಿಮೆಯಾಗೋ ರ್ಯಾಷಸ್ ಅಲ್ಲ ಬಿಡಿ ಎಂದುಕೊಳ್ಳುತ್ತಾ ಆ ರ್ಯಾಷಸ್ ಫೋಟೋ ತೆಗೆದುಕೊಂಡೆ. ನನಗೇನೋ ರೋಗದ ಇತಿಹಾಸ ಕೇಳಿದರೆ ಹೆನಾಕ್ ಶಾನ್ಲೀನ್ ಪರ್ಪ್ಯೂರಾದ ತರ ಅನ್ನಿಸ್ತಿತ್ತು. ಒಂದಷ್ಟು ಅಪರೂಪವೇ ಅನ್ನಬಹುದಾದ ಖಾಯಿಲೆ. ಎರಡು ಕೇಸು ನೋಡಿದ್ದೀನಷ್ಟೇ. ಆದರೆ ರ್ಯಾಷಸ್ ಇಷ್ಟು ಬೇಗ ಮಾಯವಾಗಿಬಿಡೋದಿಲ್ಲವಲ್ಲ ಅಂದ್ಕೋತಾ ರಿತಿಕಾಳ ಅಪ್ಪ ಮತ್ತು ರಾಮ್‌ಪ್ರಸಾದರನ್ನು ಹೊರಗೆ ಕಳಿಸಿ ರಿತಿಕಾಳ ಬಟ್ಟೆ ಪೂರ್ತಿ ತೆಗೆಯುವಂತೆ ನರ್ಸಿಗೇಳಿದೆ. ಅಲ್ಲಿತ್ತಲ್ಲ ದಂಡಿ ದಂಡಿ ರ್ಯಾಷಸ್ಸು ಕುಂಡೆಯ ಮೇಲೆ! ಅದನ್ನು ನೋಡಿ ರಿತಿಕಾಳ ಅಮ್ಮನಿಗೂ ಅಚ್ಚರಿ, ಜೊತೆಗೆ ಗಾಬರಿ.
“ಮೊನ್ನೆ ಸ್ನಾನ ಮಾಡಿಸಬೇಕಾದ್ರೂ ಇದಿರಲಿಲ್ಲ” ತಪ್ಪಿತಸ್ಥ ಭಾವದಿಂದ ಹೇಳಿದರು.
ʼಇರಲಿ ಬಿಡಿ. ನಿನ್ನೆ ಜ್ವರವಿದೆ ಅಂತ ಸ್ನಾನ ಮಾಡ್ಸಿರಲ್ಲ. ಮಾಡ್ಸಿದ್ರೆ ಗೊತ್ತಾಗಿರೋದು. ಅದಕ್ಯಾಕ್ ಬೇಜಾರು ಮಾಡ್ಕೋತೀರಾ?ʼ ಸಮಾಧಾನದ ಮಾತುಗಳನ್ನೇಳಿ ರಿತಿಕಾಳಿಗೆ ಬಟ್ಟೆ ಹಾಕಿ ಮುಗಿಸಿದ ನಂತರ ಅಮ್ಮನನ್ನೂ ಕರೆದುಕೊಂಡು ಹೊರಬಂದೆ. ರಾಮ್‌ಪ್ರಸಾದ್, ಹುಡುಗಿಯ ಅಪ್ಪ ದುಗುಡದಿಂದಲೇ ಕಾಯುತ್ತಿದ್ದರು. ರಾಮ್‌ಪ್ರಸಾದ್ ಕಡೆಗೆ ತಿರುಗಿ ʼಸರ್ ಇದು ಅಪೆಂಡಿಸೈಟಿಸ್ ತರ ಕಾಣ್ತಿಲ್ಲ. ಮೇಲ್ನೋಟಕ್ ಹಂಗೇ ಅನ್ಸುತ್ತೆ. ಆದರೂ ಅದಿರೋ ಸಾಧ್ಯತೆ ಕಡಿಮೆ ಅನ್ನಿಸ್ತಿದೆ. ಗಂಟ್ಲು ನೋವು ಜ್ವರ ರ್ಯಾಷಸ್ ಹೊಟ್ಟೆ ನೋವೆಲ್ಲ ನೋಡಿದರೆ ಇದು ಹೆಚ್.ಎಸ್.ಪಿ ಅಂದ್ರೆ ಹೆನಾಕ್ ಶಾನ್ಲೀನ್ ಪರ್ಪ್ಯೂರಾದ ತರ ಕಾಣ್ತಿದೆʼ ನಾಲಿಗೆ ಹೊರಳಿಸಲೇ ಕಷ್ಟವಾದ ಪದವನ್ನು ಕೇಳಿ ʼಹಂಗಂದ್ರೆʼ ಅನ್ನೋ ಪ್ರಶ್ನೆ ಮೂವರನ್ನೂ ಕಾಡಿತು.
ʼಇದೂ ಒಂದು ರೀತಿಯ ಇನ್ಫೆಕ್ಷನ್ನೇ. ಚಿಕ್ಕ ಚಿಕ್ಕ ರಕ್ತನಾಳಗಳಲ್ಲಿ ಇನ್ಫೆಕ್ಷನ್ ಆಗೋಗ್ತದೆ. ಚರ್ಮದ ಮೇಲೆಲ್ಲ ರ್ಯಾಷಸ್ ಕಾಣಿಸಿಕೊಂಡಿದ್ದಕ್ಕೆ……ʼ ನನ್ನ ಫೋನ್ ರಿಂಗಣಿಸಿತು. ಅವತ್ತು ಡ್ಯೂಟಿಯಲ್ಲಿದ್ದ ನಮ್ಮ ಸೀನಿಯರ್ ಡಾಕ್ಟರ್ ಮೋಹನ್ ಸರ್ ಫೋನು ಮಾಡಿದ್ದರು. ಅವರಿಗಾಗಲೇ ರ್ಯಾಷಸ್‌ನ ಫೋಟೋ ಕಳಿಸಿದ್ದೆ. ಫೋನು ಮಾಡಿದರೆ ಬ್ಯುಸಿ ಬಂದಿತ್ತಾಗ. ʼಒಂದ್ನಿಮಿಷ ನಮ್ ಸೀನಿಯರ್ ಡಾಕ್ಟರ್ ಫೋನ್ ಮಾಡ್ತಿದ್ದಾರೆʼ ಎಂದ್ಹೇಳಿ ರಿಸೀವ್ ಮಾಡಿದೆ.
“ನಿನಗೇನನ್ಸುತ್ತಮ್ಮ ರ್ಯಾಷಸ್ ನೋಡಿ"
ʼಹಿಸ್ಟರಿ, ಪರ್ಪ್ಯೂರಾ ರ್ಯಾಷಸ್ ನೋಡಿದ್ರೆ ಅನುಮಾನವೇ ಇಲ್ಲ ಸರ್. ಹೆಚ್.ಎಸ್.ಪೀನೆʼ
“ಹ್ಞೂ. ನಂಗೂ ಹಂಗೇ ಕಾಣ್ತದೆ. ಒಂದ್ಕೆಲಸ ಮಾಡು. ಬ್ಲಡ್ ಯೂರಿಯಾ ಕ್ರಿಯಾಟಿನಿನ್ ಮಾಡ್ಸಿಲ್ಲದಿದ್ರೆ ಕಳಿಸು. ಹೊಟ್ಟೆ ನೋವು ತುಂಬಾ ಇದ್ಯಾ"
ʼಹು. ಸರ್. ತುಂಬಾ ಇದೆʼ
“ಒಂದು ಪೇಯ್ನ್ ಕಿಲ್ಲರ್ ಹಾಕು. ಅದಕ್ಕೂ ಕಮ್ಮಿ ಆಗಲ್ಲ ನೋವು, ಅವರಪ್ಪ ಅಮ್ಮನಿಗೆ ಸಮಾಧಾನವಾಗಬೇಕಲ್ಲ. ಜೊತೆಗೆ ಸದ್ಯ ಲೋ ಡೋಸ್ ಸ್ಟಿರಾಯ್ಡ್ ಶುರು ಮಾಡು. ಕ್ರಿಯಾಟಿನಿನ್ ರಿಪೋರ್ಟ್ ಬಂದ ಮೇಲೆ ಅಥವಾ ಹೊಟ್ಟೆ ನೋವಿನ್ನೂ ಜಾಸ್ತಿಯಾದ್ರೆ ಸ್ಟಿರಾಯ್ಡ್ ಜಾಸ್ತಿ ಮಾಡ್ಕೊಳ್ಳೋಣ"
ʼಸರಿ ಸರ್ʼ
“ನಮ್ ಹೆಚ್.ಆರ್ ರಾಮ್‌ಪ್ರಸಾದ್ ಅಕ್ಕನ ಮಗಳಮ್ಮ”
ʼಹು ಸರ್. ಗೊತ್ತಾಯ್ತು. ಇಲ್ಲೇ ಇದ್ದಾರೆʼ
“ಕೊಡು ಫೋನು ಅವರಿಗೆ”
ʼನಿಮ್ ಜೊತೆ ಮಾತಾಡ್ತರಂತೆ ನೋಡಿ ಸರ್ʼ ಎಂದ್ಹೇಳುತ್ತಾ ಫೋನ್ ನೀಡಿದೆ. ಒಂದೈದು ಸಲ ರಾಮ್‌ಪ್ರಸಾದ್ ”ಸರಿ ಸರ್” ಅಂತ್ಹೇಳಿ ಫೋನಿನ ಸ್ಕ್ರೀನನ್ನು ಶರ್ಟಿಗೊಮ್ಮೆ ಒರೆಸಿ ನನ್ನ ಕೈಗೆ ಕೊಟ್ಟರು. ಮೋಹನ್ ಸರ್ ಇನ್ನೂ ಲೈನಿನಲ್ಲಿದ್ದರು.
"ಕಾಂಪ್ಲಿಕೇಷನ್ಸೆಲ್ಲಾ ಸ್ವಲ್ಪ ವಿವರವಾಗಿ ಹೇಳಿಬಿಡಮ್ಮ. ಈ ಹೆಚ್.ಎಸ್.ಪಿ ಹೆಂಗೆಂಗ್ ತಿರುಗ್ತದೋ ಹೇಳೋಕಾಗಲ್ಲ. ನಾ ಬಂದ್ ಹೋಗ್ಲಾ ಒಂದ್ ಸಲ?" ಕೊನೆಯ ಸಾಲು ಸುಮ್ಮನೆ ಫಾರ್ಮ್ಯಾಲಿಟಿಗೆ ಅಂತ ಇಬ್ಬರಿಗೂ ಗೊತ್ತಿತ್ತು.
ʼಏನ್ ಪರವಾಗಿಯಲ್ಲ ಸರ್. ತೀರ ಬೇಕೆನ್ನಿಸದರೆ ಹೇಳ್ತೀನಿʼ ನಾನು ಫಾರ್ಮ್ಯಾಲಿಟಿಗೆ ಹೇಳಿದೆ.
“ಗುಡ್. ಅವರ ಜೊತೆ ಮಾತನಾಡಿ ಮುಗಿಸಿದ ಮೇಲೆ ಕೇಸ್ ಯಾರ್ದಿದ್ಯೋ ಅವರಿಗೊಂದು ಸಲ ಫೋನ್ ಮಾಡಿ ವಿಷಯ ತಿಳಿಸಿಬಿಡಮ್ಮ” ಎಂದ್ಹೇಳಿ ಫೋನಿಟ್ಟರು.
ʼಸರ್ ಕೂಡ ಅದನ್ನೇ ಹೇಳಿದರು. ಟ್ರೀಟ್ಮೆಂಟ್ ಶುರು ಮಾಡುವʼ
“ರ್ಯಾಷಸ್ ಏನೋ ಸರಿ ಡಾಕ್ಟ್ರೇ. ಆದ್ರೆ ಹೊಟ್ಟೆ ನೋವ್ಯಾಕೆ?" ರಿತಿಕಾಳ ಅಪ್ಪ ಕೇಳಿದರು.
ʼಹಾಂ. ಅದೇ ಹೇಳ್ತಿದ್ನಲ್ಲ ಆಗ. ಸಾರಿ. ರಕ್ತನಾಳಗಳು, ಅದರಲ್ಲೂ ಚಿಕ್ಕ ಚಿಕ್ಕ ರಕ್ತನಾಳಗಳಲ್ಲಿ ಇನ್ಫೆಕ್ಷನ್ ಆಗಿ ರ್ಯಾಷಸ್ ಆಗ್ತವೆ. ಆ ಥರ ರ್ಯಾಷಸ್ ಚರ್ಮದಲ್ಲೂ ಆಗಬಹುದು. ಹೊಟ್ಟೆಯೊಳಗಿನ ರಕ್ತನಾಳಗಳಲ್ಲೂ ಆಗಬಹುದು. ರಿತಿಕಾಗೆ ವಿಪರೀತವೆನ್ನಿಸುವಷ್ಟು ಹೊಟ್ಟೆ ನೋವು ಬಂದಿರೋದ್ರಿಂದ ಜಠರದೊಳಗೂ ರ್ಯಾಷಸ್ ಆಗಿದೆ ಅಂತ ತೀರ್ಮಾನಿಸಬಹುದುʼ
“ಸ್ಕ್ಯಾನಿಂಗಲ್ ಮತ್ತೆ ಎಲ್ಲಾ ನಾರ್ಮಲ್ ಬಂದಿತ್ತಲ್ಲ" ರಾಮ್‌ಪ್ರಸಾದ್ ಪ್ರಶ್ನೆ.
ʼಇಲ್ಲ. ಅಲ್ಟ್ರಾ ಸೌಂಡಲ್ ರ್ಯಾಷಸ್ ಇರೋದು ತಿಳಿಯೋದಿಲ್ಲ. ಒಂದೊಂದ್ಸಲ ಕರುಳ ಮೇಲೆ ಕರುಳು ಕೂತ್ಬಿಡುತ್ತೆ. ಆಗ ತಿಳೀಬೋದಷ್ಟೇ. ಇವಳಿಗೆ ಚರ್ಮದ ಮೇಲೂ ರ್ಯಾಷಸ್ ಆಗಿರೋದಕ್ಕೆ ಇಷ್ಟು ಬೇಗ ತಿಳೀತು. ಬಹಳಷ್ಟು ಕೇಸುಗಳಲ್ಲಿ ಅಪೆಂಡಿಸೈಟಿಸ್‌ಗಂತ ಆಪರೇಷನ್ ಮಾಡಿದ ಮೇಲೇ ತಿಳಿಯೋದುʼ
“ಏನೂ ತೊಂದರೆ ಇಲ್ಲ ಅಲ್ವಾ?” ಯಾವ ಖಾಯಿಲೇನೋ ಯಾವ ರ್ಯಾಷಸ್ಸೋ ಕಟ್ಕಂಡು ನನಗೇನಾಗಬೇಕು ಮಗಳಿಗೇನೂ ತೊಂದರೆಯಾಗದೆ ಬೇಗ ವಾಸಿಯಾದರೆ ಸಾಕು ಎನ್ನುವಂತಿತ್ತು ಅಮ್ಮನ ಪ್ರಶ್ನೆ.
ʼತೊಂದರೆ ಇಲ್ಲಾಂತ ಹೇಳೋದಿಕ್ಕಾಗಲ್ಲʼ ಎನ್ನುತ್ತಿದ್ದಂತೆ ಅವರು ಅಳಲಾರಂಭಿಸಿದಳು.
ʼಅಯ್ಯೋ ತೀರ ಗಾಬರಿಯಾಗುವಂತದ್ದೂ ಹೆಚ್ಚಿಲ್ಲʼ ಎಂದು ಸಮಾಧಾನಿಸಲು ಪ್ರಯತ್ನಿಸಿದೆ.
“ಅದೇನಂತ ಪುಸುಕ್ಕಂತ ಅಳ್ತಿ….ಅವರೇನೇಳ್ತಾರೋ ಮೊದಲದನ್ನು ಕೇಳಿಸಿಕೋ” ಗಂಡ ರೇಗಿದರು. ಅಮ್ಮ ಅಳುತ್ತಿದ್ದರೇನೋ ಹೌದು. ಆದರೂ ಗಾಬರಿ ದುಗುಡ ಅಪ್ಪನ ಮುಖದಲ್ಲೇ ಹೆಚ್ಚಿತ್ತು.
ʼಕರುಳಿನಲ್ಲಿ ಇನ್ಫೆಕ್ಷನ್ ಆಗಿದೆ ಸದ್ಯ. ಸ್ಟಿರಾಯಿಡ್ಸ್ ಶುರು ಮಾಡಿದ ಮೇಲೆ ಸ್ವಲ್ಪ ದಿನಕ್ಕೆ ಇನ್ಫೆಕ್ಷನ್ ಎಲ್ಲಾ ಕಡಿಮೆಯಾಗ್ತದೆ. ನೋವು ಬೇಗ ಕಡಿಮೆಯಾಗೋದಿಲ್ಲ ಅನ್ನೋದನ್ನ ನೆನಪಿಡಿ. ಕೆಲವೊಮ್ಮೆ......ಎಲ್ರಿಗೂ ಅಲ್ಲ ಎಲ್ಲೋ ಕೆಲವರಿಗೆ ಒಮ್ಮೊಮ್ಮೆ ಕಿಡ್ನಿಯಲ್ಲಿರುವ ರಕ್ತನಾಳಗಳಲ್ಲೂ ಇನ್ಫೆಕ್ಷನ್ ಆಗೋಗ್ತದೆ. ಅದಾದರೆ ಇನ್ನೂ ಹೆಚ್ಚು ಜಾಗರೂಕತೆಯಿಂದ ನೋಡಿಕೊಳ್ಳಬೇಕು ಅಷ್ಟೇʼ
ಅಷ್ಟೇ ಅಂತ ಎಷ್ಟು ಸುಲಭವಾಗಿ ಹೇಳಿಬಿಡ್ತಾರೆ ಈ ಡಾಕ್ಟ್ರುಗಳು ಎಂಬ ವ್ಯಂಗ್ಯದ ನಗೆ ನಕ್ಕು ರಿತಿಕಾಳ ಅಮ್ಮ “ಕಿಡ್ನಿಗೆ ಇನ್ಫೆಕ್ಷನ್ ಹರಡದಂತೆ ಇಂಜೆಕ್ಷನ್ ಎಲ್ಲಾ ಕೊಡೋದಿಕ್ಕಾಗಲ್ವ?” ಎಂದು ಕೇಳಿದರು.
ʼUnfortunately ಈ ಖಾಯಿಲೆಯನ್ನು ಸಂಪೂರ್ಣ ವಾಸಿ ಮಾಡಿಬಿಡುವಂತಹ ಯಾವುದೇ ಔಷಧಿಯಿಲ್ಲ. ಚರ್ಮದಲ್ಲಷ್ಟೇ ರ್ಯಾಷಸ್ ಇದ್ದರೆ ಸ್ಟಿರಾಯಿಡ್ಸ್ ಎಲ್ಲಾ ಕೋಡೋದಿಲ್ಲ. ಒಂದಷ್ಟು ಪ್ಯಾರಾಸಿಟಮಾಲು ಒಂದಷ್ಟು ಪೇಯ್ನ್ ಕಿಲ್ಲರ್ರು ಸಾಕಾಗ್ತದೆ. ಹೊಟ್ಟೆ ನೋವು ಹೆಚ್ಚಿದ್ರೆ, ವಾಂತಿ ಜಾಸ್ತಿ ಸಲ ಆಗ್ತಿದ್ರೆ ಅಥವಾ ಕಿಡ್ನಿಯಲ್ಲಿ ತೊಂದರೆಯಾಗಿದೇಂತ ರಿಪೋರ್ಟಲ್ ಬಂದ್ರೆ ಸ್ಟಿರಾಯಿಡ್ಸ್ ಕೊಡಬೇಕಾಗ್ತದೆ. ಸ್ಟಿರಾಯಿಡ್ಸ್ ಕೊಡೋದ್ರಿಂದ ಕೂಡ ಕಿಡ್ನಿಗೆ ಹಾನಿಯಾಗೋದನ್ನ ತಪ್ಪಿಸಬಹುದುʼ
“ಸ್ಟಿರಾಯಿಡ್ಸ್ ಇಂದ ಏನೇನೋ ತೊಂದರೆ ಅಂತಾರಲ್ಲ"
ʼಅಫ್‌ಕೋರ್ಸ್ ಸ್ಟಿರಾಯ್ಡ್‌ಗಳ ಕಾಂಪ್ಲಿಕೇಷನ್ಸ್ ಇದ್ದೇ ಇರ್ತವೆ. ಅದರಿಂದಾಗೋ ಅಪಾಯಗಳೆಷ್ಟು ಉಪಯೋಗಗಳೆಷ್ಟು ಅಂತ ಲೆಕ್ಕ ಹಾಕಿ ಕೊಡ್ಬೇಕು. ರಿಸ್ಕ್ ಬೆನಿಫಿಟ್ ರೇಷಿಯೋ ಅಂತೀವಿ. ಬೆನಿಫಿಟ್ಸ್ ಜಾಸ್ತಿ ಇದ್ದಾಗ ಕೊಡಲೇಬೇಕಾಗ್ತದೆʼ
“ಒಂದ್ಸಲ ಬಂದ್ ಹೋದ್ರೆ ಮತ್ತೆ ಬರೋದಿಲ್ಲ ಅಲ್ವಾ?" ಪ್ರಶ್ನೆಯಲ್ಲಿ ಆಸೆಯಿತ್ತು.
ʼUnfortunately ಹಿಂಗಿಂಗೇ ಆಗ್ತದೆ ಅಂತ ಹೇಳೋದು ಕಷ್ಟ. ಕೆಲವ್ರಿಗೆ ಒಂದೇ ಸಲಕ್ಕೆ ನಿಂತೋಗ್ತದೆʼ ಅವರ ಸಮಾಧಾನಕ್ಕೆಂದು ಹೇಳಿದ ಮಾತು. ಒಂದೇ ಸಲಕ್ಕೆ ನಿಂತೋಗೋದು ಅಪರೂಪ. ʼಇನ್ನೂ ಕೆಲವರಿಗೆ ವರ್ಷಕ್ಕೊಂದು ಸಲವೋ ಎರಡು ಸಲವೋ ಬಂದು ಬಂದು ಹೋಗ್ತದೆ. ಬಹಳಷ್ಟು ಸಲ ಬರೀ ಚರ್ಮದ ರ್ಯಾಷಸ್ ಅಷ್ಟೇ ಆಗೋದು. ಹೊಟ್ಟೆ ನೋವು ಕಾಣಿಸಿಕೊಂಡರೆ ಆಸ್ಪತ್ರೆಗ್ ಬರಬೇಕು. ರೆಗ್ಯುಲರ್ರಾಗಿ ಯೂರಿನ್ ಟೆಸ್ಟ್ ಮಾಡಿಸಬೇಕು. ಲೆಟ್ಸ್ ಹೋಪ್ ಫಾರ್ ದಿ ಬೆಸ್ಟ್ ಅಷ್ಟೇʼ ಮತ್ತೆ ಅಷ್ಟೇ! ರೋಗಿಗಳತ್ರ ಇನ್ಮೇಲೆ ಈ ಅಷ್ಟೇ ಪದವನ್ನು ಆದಷ್ಟು ಕಡಿಮೆ ಬಳಸಬೇಕಪ್ಪ.
ಸದ್ಯಕ್ಕೆ ಅವರ ಪ್ರಶ್ನೆಗಳು ಮುಗಿದಂತಿದ್ದವು. ಕೇಸ್ ಶೀಟಿನಲ್ಲಿ ಏನೇನು ಮಾಡಬೇಕೆಂಬುದನ್ನು ಬರೆದು, ಆ ಕೇಸ್ ಅಡ್ಮಿಟ್ ಮಾಡಿಕೊಂಡಿದ್ದ ಡಾಕ್ಟರಿಗೆ ಫೋನ್ ಮಾಡಿ ವಿಷಯ ತಿಳಿಸಿ ನರ್ಸಿಗೆ ಬರೆದದ್ದನ್ನೇ ಮತ್ತೊಮ್ಮೆ ಹೇಳಿ ಹೊರಬಿದ್ದೆ. ರಿತಿಕಾಳ ಅಮ್ಮ ಅಪ್ಪ ರೂಮಿನೊಳಗೆ ಉಳಿದರು. ರಾಮ್‌ಪ್ರಸಾದ್ ನನ್ನ ಜೊತೆ ಹೆಜ್ಜೆ ಹಾಕಿದರು. “ಅಕ್ಕ ಇದ್ದಾಗ ಕೇಳೋದು ಬೇಡ ಅಂತ ಸುಮ್ಮನಿದ್ದೆ. ಜೀವಕ್ಕೇನೂ ಅಪಾಯವಿಲ್ಲ ಅಲ್ವ ಡಾಕ್ಟರ್”
ʼತೀರ ಜೀವ ಹೋಗಿಬಿಡುವಷ್ಟೇನೂ ಆಗೋದಿಲ್ಲ. ಆದರೂ ತುಂಬಾ ಕಾಂಪ್ಲಿಕೇಷನ್ಸ್ ಇದಾವೆ. ಹಿಂಗಿಂಗೇ ಆಗ್ತದೆ ಅಂತ ನಮಗೂ ಹೇಳೋಕಾಗಲ್ಲ. ಕಿಡ್ನಿಗೆ ತೊಂದರೆಯಾಗದಿದ್ರೆ ಆಯಿತು. ಮಗುವಿಗೆ ತುಂಬಾ ಸ್ಟ್ರೆಸ್ ಕೊಡಬಾರದು, ಊಟ ತಿಂಡಿಯಲ್ಲಿ ಕಟ್ಟುನಿಟ್ಟಾಗಿರಬೇಕು. ರೆಗ್ಯುಲರ್ರಾಗಿ ಪರೀಕ್ಷೆಗಳನ್ನು ಮಾಡಿಸಬೇಕು. ಸಾಮಾನ್ಯವಾಗಿ ದೊಡ್ಡೋರಾಗ್ತಾ ಆಗ್ತಾ ಸರಿ ಹೋಗ್ತಾರೆʼ ರಾಮ್‌ಪ್ರಸಾದ್ ಮುಖ ಸಣ್ಣದಾಯಿತು. ʼಬೋಲ್ಡಾಗಿರಿ. ಎಲ್ಲಾ ಒಳ್ಳೇದಾಗ್ತದೆʼ ಅಂತ್ಹೇಳಿ ಡ್ಯೂಟಿ ಡಾಕ್ಟರ್ ರೂಮಿಗೋದೆ. ಸುಸ್ತೇನೋ ಬಹಳಷ್ಟಾಗಿತ್ತು. ಅಪರೂಪದ ಖಾಯಿಲೆಯನ್ನು ತಟ್ಟಂತ ಕಂಡುಹಿಡಿದೆನಲ್ಲ ʼಪರವಾಗಿಲ್ಲ ಧರಣಿ ನೀನು. ಸೀನಿಯರ್ ಸರ್ಜನ್‌ಗೇ ತಿಳಿಯದೆ ಇರೋದನ್ನ ಕಂಡುಹಿಡಿದಿದ್ದೀಯ. ಭೇಷ್ ಭೇಷ್ʼ ಎಂದು ಬೆನ್ನು ತಟ್ಟಿಕೊಳ್ಳುತ್ತಾ ಹಾಸಿಗೆಯ ಮೇಲೆ ಉರುಳಿದೆ. ಅಮ್ಮನ ಫೋನು ಬಂದೇ ಇಲ್ಲ. ಅಮ್ಮ ಮಗಳಿಬ್ಬರೂ ಮಲಗಿಬಿಟ್ಟಿರಬೇಕು.
ಮುಖಪುಟ ಚಿತ್ರ: ಚೇತನ ತೀರ್ಥಹಳ್ಳಿ.
ಮುಂದುವರೆಯುವುದು
No comments:
Post a Comment