ಡಾ. ಅಶೋಕ್. ಕೆ. ಆರ್.
ಓಪಿಡಿಯಲ್ಲಿ ಬಿಡುವಿನ ವೇಳೆಯಲ್ಲಿ ಓದುತ್ತಾ ಕುಳಿತಿದ್ದಾಗ ರಾಮ್‌ಪ್ರಸಾದ್ ಒಳಬರುವುದು ಕಾಣಿಸಿತು. ರಿತಿಕಾಳನ್ನು ವಾರ್ಡಿನಲ್ಲಿ ನೋಡಲೋಗುತ್ತಿದ್ದಾಗ ಆಗೊಮ್ಮೆ ಈಗೊಮ್ಮೆ ಎದುರಿಗೆ ಸಿಕ್ಕು ಹಾಯ್ ಬಾಯ್ ಹೇಳಿದ್ದರು. ಇವತ್ತೇನು ಓಪಿಡೀಗೆ? ಅದೂ ನಿನ್ನೆ ರಿತಿಕಾ ಡಿಸ್ಚಾರ್ಜ್ ಆಗಿದ್ದಳಲ್ಲ? ಅವರ ಬೆನ್ನ ಹಿಂದೆಯೇ ರಿತಿಕಾ ಅಮ್ಮನ ಜೊತೆ ಪುಟ್ಟ ಪುಟ್ಟ ಹೆಜ್ಜೆಹಾಕುತ್ತಾ ನಡೆದು ಬರುತ್ತಿದ್ದರು. ಹೆಜ್ಜೆ ಎತ್ತಿಡುವುದರಲ್ಲಿ ಸುಸ್ತಿರುವುದು ಎದ್ದು ಕಾಣಿಸುತ್ತಿತ್ತಾದರೂ ಮುಖದಲ್ಲಿ ಉತ್ಸಾಹದ ಲೇಪನವಿತ್ತು, ಹತ್ತು ದಿನದ ಆಸ್ಪತ್ರೆವಾಸ ಮೂಡಿಸಿದ ಬೇಸರದ ಮೇಲೆ. ಎರಡ್ಮೂರು ದಿನ ಅಥವಾ ನಾಲ್ಕೈದು ದಿನಕ್ಕೆ ಡಿಸ್ಚಾರ್ಜ್ ಮಾಡುವ ಎಂದಿದ್ದರು ಮೋಹನ್ ಸರ್. ಆದರೆ ಹೊಟ್ಟೆ ನೋವು ಕಡಿಮೆಯಾಗುವುದಕ್ಕೇ ವಾರ ತೆಗೆದುಕೊಂಡಿತ್ತು. ಪುಣ್ಯಕ್ಕೆ ಕಿಡ್ನಿಗೇನೂ ಹಾನಿಯಾಗಿರಲಿಲ್ಲ. ಹೆಚ್ಚೇ ರಿಸ್ಕಿದೆ ಅನ್ನಿಸಿದರೂ ಹೆಚ್ಚಿನ ಪ್ರಮಾಣದ ಸ್ಟಿರಾಯ್ಡ್ ಮಾತ್ರೆಗಳನ್ನು ಕೊಡಲಾರಂಭಿಸಿದ ಮೇಲಷ್ಟೇ ಹೊಟ್ಟೆ ನೋವು ಕಡಿಮೆಯಾಗಿದ್ದು. ರಕ್ತ ಪರೀಕ್ಷೆಗೆ ಬ್ಲಡ್ ತೆಗೆದುಕೊಳ್ಳಲು ಚುಚ್ಚುವ ಸೂಜಿ, ಡ್ರಿಪ್‌ಗಾಗಿ ಹಾಕಲಾದ ವ್ಯಾಸೋಫಿಕ್ಸ್ ಮೂರು ದಿನಕ್ಕೊಮ್ಮೆ ಬ್ಲಾಕ್ ಆಗುತ್ತಿತ್ತು, ಹೊಸ ವ್ಯಾಸೋಫಿಕ್ಸ್ ಹಾಕುವಾಗಾಗುತ್ತಿದ್ದ ನೋವೇ ಮಕ್ಕಳಿಗೆ ಆಸ್ಪತ್ರೆಯೆಂದರೆ ಭಯ.…… ಭಯಕ್ಕಿಂತ ಹೆಚ್ಚಾಗಿ ವಾಕರಿಕೆ ಮೂಡಿಸಿಬಿಡುತ್ತದೆ. ನೋವಾಗದಂತೆ ವ್ಯಾಸೋಫಿಕ್ಸ್ ಹಾಕುವಂತ, ಸೂಚಿ ಚುಚ್ಚುವಂತ ಔಷಧವ್ಯಾಕಿನ್ನೂ ಕಂಡುಹಿಡಿದಿಲ್ಲವೋ?
ಫಾಲೋ ಅಪ್‌ಗೆ ಬಂದಿರಬೇಕೇನೋ, ಮೋಹನ್ ಸರ್ ಬರ ಹೇಳಿರಬೇಕೇನೋ ಅಂದುಕೊಂಡು ಪುಸ್ತಕದಲ್ಲಿ ತಲೆತಗ್ಗಿಸಿದೆ. ಉಹ್ಞೂ.. ಅವರು ನಾನಿದ್ದ ಕೊಠಡಿಗೇ ಬಂದರು. ನೋಡಿ ನಕ್ಕು ಮೇಲೆದ್ದೆ. ಎಷ್ಟೇ ಆಗ್ಲಿ ಹೆಚ್.ಆರ್ ಮ್ಯಾನೇಜರ್ರು. ಮುಂದೆ ನಾ ಡಿ.ಎನ್.ಬಿ ಮುಗಿಸಿ ಕೆಲಸಕ್ಕೆ ಸೇರಿದಾಗ ಇವರ ಸಹಾಯವೆಲ್ಲ ಆಗೀಗ ಬೇಕೇ ಆಗ್ತದಲ್ಲ ಅಂತ ನಿಂತೆನೋ ಏನೋ.
“ಹಲೋ ಡಾಕ್ಟರ್ ಡಿಸ್ಟರ್ಬ್ ಮಾಡಿದ್ನಾ.…”
ʼಹಂಗೇನಿಲ್ಲ ಸರ್. ಓಪಿಡಿ ಬಿಡುವಾಗಿತ್ತಲ್ಲ. ಓದ್ತಿದ್ದೆʼ
ಓದ್ತಿರೋದು ನನ್ನ ಕಣ್ಣಿಗೂ ಕಾಣಿಸಿತ್ತಲ್ಲ ಎನ್ನುವಂತೆ ನಕ್ಕು ರಿತಿಕಾ ಕಡೆಗೆ ನೋಡಿದರು. ರಿತಿಕಾ ತನ್ನ ಕೈಯಲ್ಲಿದ್ದ ಕವರನ್ನು ತಂದು ನನ್ನ ಕೈಗಿತ್ತಳು. ಕವರ್ ತೆಗೆದುಕೊಳ್ಳುತ್ತಾ ʼಏನಿದು?ʼ ಎಂದು ರಾಮ್‌ಪ್ರಸಾದ್ ಕಡೆಗೆ ನೋಡಿದೆ.
"ನಮ್ಮಕ್ಕ ನಿಮಗೊಂದು ಬಾಕ್ಸ್ ಸ್ವೀಟ್ ಕೊಡಲೇಬೇಕೆಂದು ಹೇಳಿದರು. ನಿನ್ನೆ ಡಿಸ್ಚಾರ್ಜ್ ಆಗೋದು ತಡವಾಯ್ತು. ಇನ್ಶೂರೆನ್ಸ್ ಇತ್ತಲ್ಲ. ಹಾಗಾಗಿ ತಡವಾಯ್ತು. ಆಗಲೇ ನೀವಿದ್ದೀರ ಹೆಂಗೆ ಅಂತ ವಿಚಾರಿಸಿದೆ. ಹೊರಟೋಗಿದ್ರಿ ಮನೆಗೆ”
ʼಅಯ್ಯೋ ಸ್ವೀಟೆಲ್ಲ ಯಾಕ್ ತರೋಕೋದ್ರಿʼ ರಿತಿಕಾಳ ಅಮ್ಮನ ಕಡೆಗೆ ನೋಡುತ್ತಾ ಕೇಳಿದೆ. ಮೇಲ್ಮೇಲ್ ಹಂಗ್ ಹೇಳಿದ್ರೂ ಒಳಗೊಳಗೇ ಖುಷಿಯಾಗಿತ್ತು. ಏನೋ ಸ್ವಲ್ಪ ಅಪರೂಪದ ರೋಗವನ್ನು ಶೀಘ್ರವಾಗಿ ಕಂಡುಹಿಡಿದದ್ದಕ್ಕೆ ಇಷ್ಟಾದರೂ ಪುರಸ್ಕಾರ ಸಿಕ್ಕಿತಲ್ಲ ಎಂದು. ಅದನ್ನೆಲ್ಲಾ ತೋರಿಸಿಕೊಳ್ಳಲಾದೀತೇ. ʼತಗೊಳಿ ತಗೊಳಿ. ಮಗಳಿಗೇ ಕೊಡಿʼ ಎಂದು ವಾಪಸ್ಸು ರಿತಿಕಾಳ ಕೈಗೇ ಕವರನ್ನು ಕೊಡಲೆತ್ನಿಸಿದೆ. ತನ್ನೆರಡೂ ಕೈಗಳನ್ನು ತಟ್ಟಂತ ಬೆನ್ನಹಿಂದೆ ಕಟ್ಟಿಕೊಂಡ ರಿತಿಕಾ “ಇಲ್ಲ ಆಂಟಿ. ಇದು ನಿಮಗೇಂತಲೇ ತಂದಿದ್ದು. ನೀವೇ ತಿನ್ನಬೇಕು. ಮೇಲಾಗಿ ನೀವ್ ನಂಗ್ ವಾಪಸ್ ಕೊಟ್ರೂ ನಾನಿದನ್ನ ತಿನ್ನೋ ಹಂಗಿಲ್ಲ" ಎಲಾ ಚುರುಕ್ ಮೆಣಸಿನಕಾಯಿ ಅಂದ್ಕೋತಾ ʼಯಾಕ್ ತಿನ್ನಂಗಿಲ್ವೋ ಮೇಡಮ್ಮೋರುʼ ಎಂದಾಕೆಯ ಕೆನ್ನೆ ಚಿಗುಟಿದೆ. ಹತ್ತು ದಿನದ ಖಾಯಿಲೆಯಿಂದ ಪಾಪ ಕೆನ್ನೆಯೆಲ್ಲ ಒಳಗೋಗಿಬಿಟ್ಟಿತ್ತು.
“ಬೇಕರಿ ಐಟಮ್ಸು, ಐಸ್‌ಕ್ರೀಮು, ತುಪ್ಪ, ಬೆಣ್ಣೆ – ಎಣ್ಣೆ, ಮೊಟ್ಟೆ – ಮೀನು – ಮಾಂಸ ಏನೂ ತಿನ್ನಬಾರದು ಅಂತ ಹೇಳಿದ್ದಾರಲ್ಲ. ತಿಂದ್ರೆ ಮತ್ತೆ ಹುಷಾರು ತಪ್ತೀನಂತಲ್ಲ. ಮತ್ತೆ ಹುಷಾರು ತಪ್ಪಿ ಅಷ್ಟೆಲ್ಲ ಹೊಟ್ಟೆ ನೋವಾಗೋದಕ್ಕಿಂತ ತಿನ್ನದೇ ಇರೋದೇ ಗುಡ್ ಅಲ್ವ ಅಮ್ಮ”. ಹು ಮಗಳೆ ಅಂತ ಅವರಮ್ಮ ತಲೆಯಾಡಿಸಿದರು.
ಅಮ್ಮನ ಕಡೆಗೆ ತಿರುಗಿದವಳ ತಲೆ ಸವರುತ್ತಾ ʼಸರಿ ಪುಟ್ಟ. ನಾನೇ ತಕೋತೀನಿ. ನೀ ಪೂರ್ತಿ ಹುಷಾರಾದ ಮೇಲೊಂದು ದಿನ ಬರ್ಬೇಕು. ಆಗ ನೀ ಹೇಳಿದ್ದೆಲ್ಲ ಕೊಡಿಸ್ತೀನಿʼ
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.