ರಾಜೀವ್‌ಗೆ ಡೈವೋರ್ಸ್ ಬಗ್ಗೆ ತಿಳಿಸಿ, ರಾಮ್‌ಪ್ರಸಾದ್‌ಗೂ ವಿಷಯ ತಿಳಿಸಿ ಸುಮಾ ಜೊತೆ ಹಂಚಿಕೊಂಡು ಮಾರನೇ ದಿನ ಸಾಗರನಿಗೂ ವಿಷಯ ತಿಳಿಸಿದ ಮೇಲೆ ಮನಸ್ಸಿಗೊಂದು ನಿರಾಳತೆ ಮೂಡಿತ್ತು. ಬಹಳ ದಿನಗಳ ನಂತರ ಮೂಡಿದ ನಿರಾಳತೆಯದು. ಈ ನಿರಾಳ ಮನಸ್ಸಿನೊಂದಿಗೆ ಒಂದು ದಿನದ ಮಟ್ಟಿಗಾದರೂ ನಾನು ನಾನಾಗಷ್ಟೇ ಉಳಿದುಕೊಳ್ಳಬೇಕು. ಡ್ಯೂಟಿಗೆ ರಜೆ ಹಾಕಿದೆ. ರಜಾ ಹಾಕಿದ ವಿಷಯ ಅಮ್ಮನಿಗೆ ತಿಳಿಸಿದರೆ ಮಗಳನ್ನು ಕೈಗೆ ಕೊಟ್ಟುಬಿಡುತ್ತಾರೆ. ಉಹ್ಞೂ, ಇವತ್ತಿನ ಮಟ್ಟಿಗೆ ಮಗಳೂ ಬೇಡ. ಮೊಬೈಲಂತೂ ಬೇಡವೇ ಬೇಡ ಎಂದುಕೊಂಡು ಮನೆಯಲ್ಲೇ ಮೊಬೈಲು ಬಿಟ್ಟು ಅಮ್ಮನ ಮನೆಗೋಗಿ ಮಗಳನ್ನು ಬಿಟ್ಟು ಮೊಬೈಲ್ ಮನೇಲೇ ಮರೆತೆ. ಸಂಜೆ ಬರೋದು ಸ್ವಲ್ಪ ತಡವಾಗ್ತದೆ ಅಂತೇಳಿ ಹೊರಟೆ. ಎಲ್ಲಿಗೆ ಹೋಗುವುದೆಂದು ತಿಳಿಯಲಿಲ್ಲ ಮೊದಲಿಗೆ. ಜೆ.ಎಸ್.ಎಸ್ ಹತ್ರ ಹೊಸ ಮಾಲ್ ಒಂದು ಶುರುವಾಗಿದೆಯಲ್ಲ, ಅಲ್ಲಿಗೇ ಹೋಗುವ ಎಂದುಕೊಂಡು ಹೊರಟೆ. ಜೆ.ಎಸ್.ಎಸ್ ದಾಟುತ್ತಿದ್ದಂತೆ ಚಾಮುಂಡವ್ವ ಕರೆದಂತಾಗಿ ಗಾಡಿಯನ್ನು ಸೀದಾ ಬೆಟ್ಟದ ಕಡೆಗೆ ಓಡಿಸಿದೆ. ಮೊದಲೆಲ್ಲ ಪ್ರಶಾಂತವಾಗಿರುತ್ತಿದ್ದ ಚಾಮುಂಡಿ ಬೆಟ್ಟದಲ್ಲೀಗ ಜನರ ಕಲರವ ಹೆಚ್ಚು. ಶನಿವಾರ, ಭಾನುವಾರ, ರಜಾ ದಿನಗಳಲ್ಲಂತೂ ಕಾಲಿಡಲೂ ಜಾಗವಿರುವುದಿಲ್ಲ. ಇವತ್ತೇನೋ ವಾರದ ಮಧ್ಯೆಯಾಗಿರುವುದರಿಂದ ಜನರ ಸಂಚಾರ ಕಮ್ಮಿ. ಮುಂಚೆಯೆಲ್ಲ ಭಾನುವಾರ ಎಷ್ಟು ಜನರಿರುತ್ತಿದ್ದರೋ ಇವತ್ತು ಅಷ್ಟಿದ್ದಾರೆ. ಹೆಚ್ಚಿನಂಶ ಕಾಲೇಜು ಬಂಕು ಮಾಡಿ ಜೋಡಿಯಾಗಿ ಬಂದವರೇ ಹೆಚ್ಚು.
ದೇಗುಲದ ಒಳಗೋಗಿ ಕೈಮುಗಿದು ಹೊರಬಂದು ದೇವಸ್ಥಾನದ ಹಿಂದಿರುವ ಬೆಂಚುಗಳ ಮೇಲೆ ಕುಳಿತುಕೊಂಡೆ. ಎದುರಿಗೆ ವಿಶಾಲವಾಗಿ ಚಾಚಿಕೊಳ್ಳುತ್ತಿರುವ ಮೈಸೂರು. ಬೆಂಗಳೂರಿನ ಟ್ರಾಫಿಕ್ಕು ಜಂಜಾಟದಿಂದ ಬಂದವರು ಮೈಸೂರು ಚೆಂದವಪ್ಪ, ಎಷ್ಟು ಕಡಿಮೆ ಟ್ರಾಫಿಕ್ಕು ಅಂತ ಲೊಚಗುಟ್ಟುತ್ತಾರೆ. ಮೈಸೂರಲ್ಲೇ ಹುಟ್ಟಿ ಬೆಳೆದವಳಿಗೆ ಇಲ್ಲಿನ ಟ್ರಾಫಿಕ್ಕು ಎಷ್ಟೆಲ್ಲ ಜಾಸ್ತಿಯಾಗಿಬಿಟ್ಟಿದೆ ಅನ್ನುವುದು ಅರಿವಿಗೆ ಬರ್ತಿದೆ. ಎಷ್ಟೊಂದು ಕಡೆ ಹೊಸ ಹೊಸ ಟ್ರಾಫಿಕ್ ಸಿಗ್ನಲ್ಲುಗಳಾಗಿಬಿಟ್ಟಿದ್ದಾವಲ್ಲ ಈಗ.
ಬೆಟ್ಟದ ಮೇಲೆ ಬಂದು ಕುಳಿತವಳಿಗೆ ಪುರುಷೋತ್ತಮನ ನೆನಪಾಗದೇ ಇರುವುದು ಸಾಧ್ಯವೇ? ಹೊಸ ಬಡಾವಣೆಗಳನ್ನು ಬಿಟ್ಟರೆ ಇನ್ನೆಲ್ಲ ರಸ್ತೆಗಳಲ್ಲೂ ಪುರುಷೋತ್ತಮನ ನೆನಪುಗಳಿವೆ. ನನ್ನಿವತ್ತಿನ ಪರಿಸ್ಥಿತಿಗೆ ಪುರುಷೋತ್ತಮನೇ ಕಾರಣನಲ್ಲವೇ? ಪುರುಷೋತ್ತಮ ಕಾರಣನೆಂದರೆ ನನ್ನ ತಪ್ಪುಗಳನ್ನೂ ಅವನ ಮೇಲೊರಸಿ ತಪ್ಪಿಸಿಕೊಳ್ಳುವ ನಡೆಯಾಗ್ತದೆ. ಅವನ ಪ್ರೀತಿಯನ್ನು ಒಪ್ಪಿದ್ದು ತಪ್ಪೋ, ಅವನು ನನ್ನ ಮೇಲೆ ಹೊರಿಸಿದ ಅಭಿಪ್ರಾಯಗಳನ್ನು ನಗುನಗುತ್ತಾ ಒಪ್ಪಿಕೊಂಡದ್ದು ತಪ್ಪೋ, ದೈಹಿಕ ದೌರ್ಜನ್ಯವನ್ನೂ ಪ್ರೀತಿಯ ಭಾಗ ಎಂದುಕೊಂಡದ್ದು ತಪ್ಪೋ, ಅವನು ಅಷ್ಟೆಲ್ಲ ಕೇಳಿಕೊಂಡರೂ ಓಡಿಹೋಗದೇ ಇದ್ದದ್ದು ತಪ್ಪೋ, ಅವನನ್ನು ಬಿಟ್ಟು ಬೇರೆಯವರನ್ನು ಮದುವೆಯಾಗಿದ್ದು ತಪ್ಪೋ..... ಭೂತದಲ್ಲಿ ಮಾಡಿದ ತಪ್ಪುಗಳನ್ನು ಈ ರೀತಿ ನಿಕಷಕ್ಕೊಳಪಡಿಸುವುದು ಎಷ್ಟರಮಟ್ಟಿಗೆ ಸರಿ? ಪುರುಷೋತ್ತಮನ ನೆನಪುಗಳನ್ನು ದೂರ ಮಾಡಬೇಕೆಂದು ಅತ್ತಿತ್ತ ನೋಡಿದಷ್ಟೂ ಎಲ್ಲೆಡೆಯೂ ಜೋಡಿಗಳೇ ಕಂಡರು. ನೆನಪುಗಳು ಮತ್ತಷ್ಟು ಹೆಚ್ಚಾಯಿತಷ್ಟೇ! ಇಲ್ಲಿರೋ ಜೋಡಿಗಳಲ್ಲಿ ಇನ್ನೆಷ್ಟು ಜೋಡಿಗಳ ಕನಸುಗಳು ಮುರಿದು ಬೀಳ್ತವೋ ಏನೋ... ಜಾತಿ ಧರ್ಮ ಅಂತಸ್ತುಗಳ ಬೃಹತ್ ಗೋಡೆಗಳನ್ನು ಎಷ್ಟು ಮಂದಿ ದಾಟಲು ಸಾಧ್ಯವಿದೆಯೋ... ಅವನ್ನೆಲ್ಲ ದಾಟುವ ಉತ್ಸಾಹವಿದ್ದರೂ ಮಕ್ಕಳ ಮೇಲೆ ಪ್ರಭುತ್ವ ಸಾಧಿಸಲು ಹಾತೊರೆಯುವ ಅಪ್ಪ ಅಮ್ಮನನ್ನು ಎದುರು ಹಾಕಿಕೊಳ್ಳಲು ಎಷ್ಟು ಜನಕ್ಕೆ ಸಾಧ್ಯವಿದೆಯೋ... ದಾಟುವ ಉಮ್ಮಸ್ಸು ನನಗೂ ಇತ್ತು ಪುರುಷೋತ್ತಮನಿಗೂ ಇತ್ತು... ಸುಖಾಂತ್ಯಗೊಳಿಸುವಷ್ಟು ಉಮ್ಮಸ್ಸಿರಲಿಲ್ಲ... ಪುರುಷೋತ್ತಮನ ಪ್ರೀತಿ ಉಸಿರುಗಟ್ಟಿಸುವ ಹಂತ ತಲುಪದೇ ಹೋಗಿದ್ದರೆ ಓಡಿ ಹೋಗುತ್ತಿದ್ದೆನಾ? ಸ್ಪಷ್ಟ ಉತ್ತರ ನನ್ನಲ್ಲೇ ಇಲ್ಲ.