️ಹರ್ಷಿತ.ಕೆ. ಟಿ
ಬೆಳಕಿನ ದಾರಿಗೆಂದೂ
ಅಡ್ಡಗಾಲು ಹಾಕದು
ಬೆಳಕು ನುಗ್ಗಿಬಂದೊಡನೆ
ತಲೆಬಾಗಿ ಹಿನ್ನೆಡೆದು ದಾರಿ ಕೊಡುವುದು
ನುಂಗಿ ತೇಗಿದರೂ ಬೆಳಕು
ಗಂಟಲಲಿ ಸಿಕ್ಕಿ ಬಿಕ್ಕಳಿಕೆಯಾಗದು
ನೈಜವಾದರೂ ಕತ್ತಲ ಕಪ್ಪು
ಬೆಳಕಿನ ಬದಲಾಗುವ ಬಣ್ಣಗಳಿಗಿಂತ
ನಂಬಲು ಹಿಂಜರಿದಿದ್ದೇಕೆ?
ಸಹಜವಾದರೂ ಬೆಳಕಿನಷ್ಟೇಯೇ
ಕಲ್ಪನೆಯ ಕುಂಚದಲಿ
ಕತ್ತಲೆಗೆ ಕಪ್ಪು ಬಳಿದು
ಕೋರೆ ಬರೆದು ಬೆಚ್ಚಿದ್ದೇಕೆ?
ಹೀಗೇಕೆ ಕತ್ತಲೆಂದರೆ
ಹುಬ್ಬುಗಳು ಗಂಟಾಗುವವು?
ನಾಡಿಯಲಿ ಭೀತಿಗಳು
ಹೆಪ್ಪಾಗುವವು?
ಹೌದು..ಕತ್ತಲನು ಕತ್ತಲೆನ್ನುವುದರಿಂದಲೇ!
ತುಂಬಾ ಚೆನ್ನಾಗಿದೆ ಮೇಡಂ….ಅಭಿನಂದನೆಗಳು….
ReplyDeleteGreat reading your blog post
ReplyDelete