ಡಾ. ಅಶೋಕ್. ಕೆ. ಆರ್.
“ಎಲ್ಲಿಗೆದ್ದೋಗ್ತಿ.....ಮುಚ್ಕಂಡ್ ಕೂತ್ಕೊಳ್ಳೇ ಚಿನಾಲಿ" ಪುರುಷೋತ್ತಮನ ದನಿಗೆ ಬೆಚ್ಚಿ ಬಿದ್ದೆ. ಪುರುಷೋತ್ತಮನ ಪೊಸೆಸಿವ್ನೆಸ್ ಅನುಭವಿಸಿದ್ದೀನಿ. ಅವನು ಸಿಟ್ಟಿಗೆ ಬಂದು ನನಗೆ ಹೊಡೆದಿದ್ದೂ ಇದೆ. ಆದರೆ ಇವತ್ತಿನ ದನಿಯಲ್ಲವನು ಹಿಂದೆಂದೂ ಮಾತನಾಡಿರಲಿಲ್ಲ. ಇಲ್ಲಿ ಕುಳಿತಿರುವವನು ನಿಜ್ಜ ಅವನೇನಾ ಅಂತೆಲ್ಲ ಅನುಮಾನ ಮೂಡಿಬಿಟ್ಟಿತು. ಎದ್ದೋಗುವ ಮನಸ್ಸಾಗಲಿಲ್ಲ ಈ ಚಿನಾಲಿಗೆ. ಕುಳಿತುಕೊಂಡೆ. ಜೋರಾಗಿ ಉಸಿರು ಬಿಡುತ್ತಿದ್ದ. ಸಿಗರೇಟಿನ ಘಮದ ಜೊತೆಗೆ ಮತ್ತೊಂದು ದುರ್ವಾಸನೆಯೂ ಸೇರಿಕೊಂಡಿತ್ತು. ಮೊದಲಿಗದು ಏನೆಂದು ತಿಳಿಯಲಿಲ್ಲ. ತೀರ ಅಪರಿಚಿತ ವಾಸನೆಯೂ ಆಗಿರಲಿಲ್ಲ. ಕ್ಷಣದ ನಂತರ ಮನೆಯಲ್ಲಿ ಅಪ್ಪ ಕುಡಿಯುವಾಗ ಬರುತ್ತಿದ್ದ ವಾಸನೆಯದು ಎಂದು ತಿಳಿಯಿತು. ಅಲ್ಲಿಯವರೆಗೂ ಒಂದು ತೊಟ್ಟನ್ನೂ ಬಾಯಿಗೆ ಬಿಟ್ಟುಕೊಳ್ಳದ ನನ್ನ ಪುರುಷೋತ್ತಮ ಕುಡಿದು ಬಂದಿದ್ದ.... ಅವನು ಕುಡಿದಿರೋದಕ್ಕೆ ನಾನೇ ಕಾರಣ.....ಪಾಪವೆನ್ನಿಸಿತ್ತು ಅವನ ಬಗ್ಗೆ. ಆದರೆ ನಿಜ ಹೇಳ್ತೀನಿ ಸಾಗರ ಅಷ್ಟೆಲ್ಲ ಪಾಪವೆಂಬ ಭಾವ ಅವನ ಬಗ್ಗೆ ಮೂಡಿದ ಕ್ಷಣದಲ್ಲೂ ನಾ ಬೇರೆಯವರನ್ನ ಮದುವೆಯಾಗೋ ನಿರ್ಧಾರ ತೆಗೆದುಕೊಂಡಿರೋದು ತಪ್ಪು.... ನಾ ಪ್ರೀತಿಸಿರೋದು ಪುರುಷೋತ್ತಮನನ್ನು..... ಅವನನ್ನು ಬಿಟ್ಟು ಬೇರೆಯವರನ್ನು ಮದುವೆಯಾಗಬಾರದು ನಾನು..... ಇವನಲ್ಲೀಗ ಕ್ಷಮೆ ಕೇಳಿ ಇವನನ್ನೇ ಮದುವೆಯಾಗಬೇಕು..... ಉಹ್ಞೂ.... ಈ ರೀತಿಯ ಒಂದೇ ಒಂದು ಯೋಚನೆಯೂ ನನ್ನಲ್ಲಿ ತೇಲಿಹೋಗುವ ಮೋಡದಂತೆಯೂ ಮೂಡಲಿಲ್ಲ. ಅವನ ಮೇಲಿನ ಪ್ರೀತಿ ಸತ್ತೋಯ್ತ..... ಇಲ್ಲ..... ಇವತ್ತಿಗೂ ಅವನ ಮೇಲೆ ನನಗೆ ಪ್ರೀತಿ ಇದ್ದೇ ಇದೆ. ಅವನಷ್ಟು ಉತ್ಕಟವಾಗಿ ನನ್ನನ್ನು ಪ್ರೀತಿಸೋಕೆ ಯಾರಿಂದಲೂ ಸಾಧ್ಯವಿಲ್ಲ....... ಆ ಕ್ಷಣದಲ್ಲಿ..... ನನ್ನ ಪುರುಷೋತ್ತಮ ನನ್ನಿಂದಾಗಿ ಕುಡಿದು ಬಂದಿದ್ದಾನೆ ಅನ್ನೋ ಸತ್ಯ ಅರಿವಾದ ಸಂದರ್ಭದಲ್ಲಿ ಅವನ ಮೇಲಿನ ಪ್ರೀತಿ ಹೆಚ್ಚಾಗಲಿಲ್ಲ..... ನನ್ನ ನಿರ್ಧಾರವನ್ನು ಪುನರ್ ಪರಿಶೀಲಿಸುವ ಯೋಚನೆಯೂ ಹತ್ತಿರದಲ್ಲಿ ಸುಳಿಯಲಿಲ್ಲ.... ಅವನು ಇನ್ನೂ ಏನೇನು ಮಾಡಬಹುದು ಎನ್ನುವುದನ್ನು ಕಲ್ಪನೆಯೂ ಮಾಡಿಕೊಳ್ಳದ ನಾನು ಇನ್ನೂ ಅನೇಕನೇಕ ತಪ್ಪುಗಳನ್ನು ಅವತ್ತು ಮಾಡಿದೆ. ಅದನ್ನೆಲ್ಲ ಕೇಳಿ ನೀ ನಗದೇ ಹೋದರೆ ಹೇಳ್ತೀನಿ....'
“ಪಾಪ ಇಷ್ಟೊಂದು ಗಂಭೀರದ ವಿಷಯಗಳನ್ನೇಳುವಾಗ ನಗೋಕಾಗ್ತದಾ? ಹೇಳು"
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.
'ಕಾಫಿ ಶಾಪಲ್ಲಿ ಸತತವಾಗಿ ಒಂದು ಘಂಟೆ ಬಯ್ದ. ನೀನಂತೋಳು ಇಂತೋಳು. ನನ್ನ ಫ್ರೆಂಡ್ಸ್ ಹೇಳಿದ್ದೇ ಸರಿ..... ಇನ್ನೂ ಏನೇನು ಬಯ್ದ್ನೋ ನೆನಪಿಲ್ಲ. ನೆನಪಿಲ್ಲ ಅನ್ನೋದಕ್ಕಿಂತ ಜಾಣಗಿವುಡಳಾಗಿಬಿಟ್ಟೆ. ಅವನು ಎರಡು ಸಿಪ್ ಕುಡಿದು ಕೆಳಗಿಟ್ಟಿದ್ದ ಕಾಫಿ ಲೋಟವನ್ನು ಕೈಗೆತ್ತಿಕೊಂಡೆ. ಮೊದಲ ಸಲ ಪುರುಷೋತ್ತಮ ಪ್ರಪೋಸ್ ಮಾಡಿದ ದಿನ ನೆನಪಾಯಿತು. ಅವತ್ತೂ ಅಷ್ಟೇ ಅವನು ಮಾತನಾಡುತ್ತಿದ್ದ ನಾನು ಐಸ್ಕ್ರೀಂ ತಿನ್ನುವುದರಲ್ಲಿ ಬ್ಯುಸಿಯಾಗಿದ್ದೆ. ಅವನು ಸತತವಾಗಿ ಬಯ್ದು ಮುಗಿಸಿದ ನಂತರ ಹೊರಡೋಣ್ವ ಅಂದೆ. ಸಿಟ್ಟು ಬರ್ದೇ ಇರ್ತದಾ... ಬಂತು. ಕಾಫಿ ಶಾಪಿನಲ್ಲಿ ಕುಳಿತಿದ್ದ ಕಾರಣಕ್ಕೆ ಕೆನ್ನೆಗೊಂದು ಏಟು ಬೀಳಲಿಲ್ಲ'
“ನಿನ್ನ ಮನಸ್ಸಲ್ಲಿ ಏನಿದೆ. ಅದನ್ನಾದ್ರೂ ಹೇಳ್ಬಿಟ್ಟು ಸಾಯಿ" ಎಂದ.
'ನೋಡು ಪುರುಷೋತ್ತಮ' ಗಂಭೀರವಾಗಿ ಹೇಳಿದೆ. ನಾ ಅವನ ಹೆಸರನ್ನು ಪೂರ್ತಿಯಾಗಿ ಕರೆದು ಎಷ್ಟೋ ವರ್ಷಗಳಾಗಿಹೋಗಿತ್ತು. ಹೊಸಬಳ ಬಾಯಲ್ಲಿ ಹೆಸರು ಕೇಳಿದವನಂತೆ ನನ್ನನ್ನು ನೋಡಿದ, ಇವಳು ಧರಣೀನೇನಾ ಅನ್ನೋ ಗೊಂದಲವಿತ್ತು. ನನ್ನಲ್ಲಿ ಗೊಂದಲವಿರಲಿಲ್ಲ.
'ನೋಡು ಪುರುಷೋತ್ತಮ. ನೀನು ನನ್ನನ್ನು ಅವಕಾಶವಾದಿ ಅನ್ನು ಸ್ವಾರ್ಥಿ ಅನ್ನು ಚಿನಾಲಿ ಅನ್ನು ಸೂಳೆ ಅನ್ನು ಬಿಚ್ ಅನ್ನು ಇನ್ನೂ ಏನು ಬೇಕಾದ್ರೂ ಅನ್ನು ನನಗೆ ಬೇಸರವಿಲ್ಲ. ಈಗ್ಲೂ ಹೇಳ್ತಿದ್ದೀನಿ. ನೀ ನಿಮ್ಮ ಅಮ್ಮನನ್ನು ಒಪ್ಪಿಸಿ ನಮ್ಮ ಮನೆಗೆ ಕರೆದು ತಾ. ನಾ ನಿನ್ನೇ ಮದುವೆಯಾಗ್ತೀನಿ. ನಿನ್ನ ಕೈಲಿ ಅದಾಗಲ್ಲ ಅಂದ್ರೆ ನಾನೇನ್ ಮಾಡ್ಲಿ? ಲೆಕ್ಕಕ್ಕೆ ನೋಡಿದ್ರೆ ನಾ ಬಂದು ನಿನ್ನ ಜೊತೆ ಜಗಳವಾಡಬೇಕಿತ್ತು. ನಿನ್ನಮ್ಮ ಹಂಗೆಲ್ಲ ಮಾತನಾಡಿದಾಗ, ಹಂಗಿಸಿದಾಗ.... ನೀ ಅವರ ಮಾತಿಗೆಲ್ಲ ಸುಮ್ಮನೆ ತಲೆಯಾಡಿಸುತ್ತ ಕುಳಿತಾಗ.... ನಮ್ಮಾರು ವರ್ಷದ ಪ್ರೀತಿ ಮದುವೆಯಲ್ಲಂತ್ಯವಾಗದೇ ಮುಗಿದೋಗ್ತದೆ ಅಂತಿದ್ರೆ ಅದಕ್ಕೆ ಇಬ್ಬರೂ ಜವಾಬ್ದಾರರೇ.... ಆದರೆ ಹೆಚ್ಚಿನ ತಪ್ಪು ನಿನ್ನದೇ ಹೊರತು ನನ್ನದಲ್ಲ' ಎಂದ್ಹೇಳಿ ಮೇಲೆದ್ದವಳನ್ನು ಮತ್ತೆ ಹಿಡಿದು ಕೂರಿಸಿದ್ದು ಅವನ ಕಣ್ಣೀರು.
'ಅಳುವಂತದ್ದು ಏನಾಯ್ತು ಈಗ' ಕೇಳಿದವಳ ದನಿಯಲ್ಲಿ ಸುಸ್ತಿತ್ತು. ಪ್ರೀತಿಯ ಅಂತ್ಯ ಮೂಡಿಸಿದ್ದ ಸುಸ್ತು.
“ಇನ್ನೇನ್ ಮಾಡ್ಲಿ. ನೀ ಇಲ್ಲದ ಜೀವನ ಕಲ್ಪಿಸಿಕೊಂಡೂ ಗೊತ್ತಿಲ್ಲ ನಂಗೆ"
'ನಾನೇನೋ ಮಾಡ್ಲಿ. ನೀನೇ ಹೇಳು. ಈಗ್ಲೂ ಏನು ಕಾಲ ಮಿಂಚೋಗಿಲ್ಲವಲ್ಲ. ನನ್ನ ಮದುವೆಯೇನು ಫಿಕ್ಸ್ ಆಗಿಲ್ಲವಲ್ಲ. ಮನೆಯಲ್ಲಿ ಮಾತನಾಡಿ ಒಪ್ಪಿಸು'
“ಅವರು ಒಪ್ಪೋದಿಲ್ಲ ಅಂತ ಗೊತ್ತಿಲ್ವ ನಿನಗೆ?” ದನಿಯಲ್ಲಿ ಸಿಟ್ಟಿತ್ತು. ಸಿಟ್ಟು ನನ್ನೆಡೆಗೊ ಅವರಮ್ಮನೆಡೆಗೊ ಗೊತ್ತಾಗಲಿಲ್ಲ. ಅವನ ಕಣ್ಣೀರು ಕಂಡು ಕರಗಿ ಕುಳಿತಿದ್ದೇ ತಪ್ಪಾಯ್ತ ಎಂದೆನಿಸಿತು. “ಅವರು ಒಪ್ಪೋದಿಲ್ಲ ಅಂತ ಮುಂಚಿನಿಂದಾನೂ ನಾ ಬಡ್ಕೋತಾನೇ ಇದೀನಲ್ಲ. ಓಡಿ ಹೋಗಿ ಮದುವೆಯಾಗೋ ಆಯ್ಕೆ ಬಿಟ್ಟು ಬೇರೆ ಆಯ್ಕೆಗಳಿಲ್ಲ ನಮ್ಮ ಬಳಿ"
'ಓಡಿಹೋಗೋದಕ್ಕೆ ನಾ ಸುತಾರಾಂ ಒಪ್ಪೋದಿಲ್ಲ ಅಂತ ಎಷ್ಟು ಸಲ ಹೇಳಿದ್ದೀನಿ ನಿನಗೆ. ಕೊನೆಗೆ ನಾನು ಓಡಿ ಬರಲು ಒಪ್ಪಲಿಲ್ಲ ಅನ್ನೋ ಕಾರಣ ಇಟ್ಕಂಡು ಇನ್ನಷ್ಟು ಕುಡ್ಕಂಡು ನೋಡ್ರಪ್ಪ ಇವಳನ್ನ ಲವ್ ಮಾಡಿ ಕುಡುಕನಾಗಿಬಿಟ್ಟೆ ಅಂತ ಹೇಳ್ಕಂತ ನಮ್ ಮದುವೆ ಮುರಿದ ಪೂರ್ತಿ ಕಾರಣಾನ ನನ್ನ ತಲೆ ಮೇಲೆ ಎತ್ತಾಕೋ ಪ್ಲಾನ್ ತಾನೇ ನಿಂದು. ಸರಿನಪ್ಪ. ನಂಗೇನೂ ಬೇಸರವಿಲ್ಲ. ನಮ್ಮ ಪ್ರೀತಿ ಹಾಳಾಗೋಕೆ ನಾನೇ ಕಾರಣ. ಸಮಾಧಾನಾನ.....ನಾನಿನ್ನು ಬರ್ತೀನಿ' ಎಂದ್ಹೇಳಿದವಳೇ ಮೇಲೆದ್ದೆ. ಅವನ ಕಡೆಗೆ ನೋಡಲಿಲ್ಲ. ಮತ್ತೆಲ್ಲಿ ಕಣ್ಣೀರಿಗೋ ಅವನ ಮುಖದ ಭಾವನೆಗೋ ಕರಗಿಬಿಟ್ರೆ ಅನ್ನೋ ಭಯದ ಕಾರಣಕ್ಕೆ ಅವನ ಕಡೆಗೆ ನೋಡಲಿಲ್ಲ.
ಗೇಟಿನಿಂದ ಹೊರಬರುವಷ್ಟರಲ್ಲಿ ಅವನು ಬಂದು ಪಕ್ಕದಲ್ಲಿ ನಡೆಯುತ್ತಿದ್ದ. ಇಬ್ಬರೂ ನಮ್ಮ ನಮ್ಮ ಗಾಡಿಯಲ್ಲಿ ಹೊರಟೆವು. ಎಂದಿನಂತೆ ಅಕ್ಕಪಕ್ಕದಲ್ಲಿ ಗಾಡಿ ಓಡಿಸಿಕೊಂಡು ಮಾತನಾಡುತ್ತಾ.
“ನಿನ್ ಮಾತೆಲ್ಲ ಒಪ್ತೀನಿ. ಹೆಂಗಾದ್ರೂ ಮಾಡಿ ಕೊನೆಗೆ ಒಂದಷ್ಟು ವಿಷ ಕುಡಿಯೋ ನಾಟಕ ಮಾಡಾದ್ರೂ ನಮ್ಮಮ್ಮನ್ನ ಒಪ್ಪಿಸಿಯೇ ತೀರ್ತೀನಿ" ಮಧ್ಯಾಹ್ನದಿಂದ ನನಗೆ ನೆಮ್ಮದಿ ಕೊಟ್ಟ ಮಾತಿದು! ಹುಕ್ ಆರ್ ಕುಕ್ ಒಪ್ಪಿಸಿಯೇ ಒಪ್ಪಿಸ್ತೀನಿ ಅಂತ ಇದೇ ಮೊದಲ ಬಾರಿಗೆ ಅವನು ಹೇಳಿದ್ದ.
'ಅಪ್ಪ ಮಾರಾಯ. ವಿಷ ಕುಡಿಯೋ ನಾಟಕ ಮಾಡಕ್ಕೋಗಿ ಒಂದಕ್ಕೆರಡು ಮಾಡಿಕೊಂಡೀಯ ಮತ್ತೆ. ಈಗಾಗಿರೋ ಸಂಗತಿಗಳೇ ಸಾಕು ಈ ಜನ್ಮಕ್ಕೆ. ಬೇಕಾದರೆ ಅವಳಿಲ್ಲದೆ ನಾ ಸತ್ತು ಹೋಗ್ತೀನಿ ಅಂತ ಬಾಯಿ ಮಾತಿಗೆ ಹೆದರಿಸು ಸಾಕು. ನಿಮ್ಮಮ್ಮನಿಗೆ ಮೊದಲೇ ನಿನ್ನ ಕಂಡರೆ ಪ್ರೀತಿ ಉಕ್ಕಿ ಹರೀತಿರ್ತದೆ. ನಿನ್ನ ಕಳ್ಕೋಳೋಕಿಂತ ನನ್ನಂತ ಹೊಲೆಯಳನ್ನ ಸೊಸೆಯಾಗಿ ಸ್ವೀಕರಿಸಿದ್ರೂ ಸ್ವೀಕರಿಸಬಹುದು' ನಗುತ್ತಲೇ ಹೇಳಿದ ಮಾತು ಅವನಲ್ಲಿ ಮೂಡಿಸಿದ ಬೇಸರವನ್ನು ಗಮನಿಸಿದೆ. ಪಿಚ್ಚೆನ್ನಿಸಿತು. ಗಕ್ಕನೆ ಗಾಡಿ ನಿಲ್ಲಿಸಿದ.
“ಹಂಗೆಲ್ಲ ಮಾತಾಡ್ಬೇಡ್ವೇ. ಅಲ್ಲ ಧರಣಿ ಒಂದ್ ಮಾತ್ ಕೇಳ್ಲಾ"
'ಕೇಳು'
“ನೀನ್ಯಾಕೆ ನಿನ್ನ ಮನೆಯಲ್ಲಿ ಸಾಯ್ತೀನಿ ಅಂತ ಹೆದರಿಸಿ ಈ ಮದುವೆಗೆ ಒಪ್ಪದೆ ಇರಬಾರದು...... ನಮ್ ಮದುವೆ ಆಗುತ್ತೋ ಬಿಡುತ್ತೋ ನೀ ಬೇರೆಯವರನ್ನ ಮದುವೆಯಾಗುವುದನ್ನಾದರೂ ತಪ್ಪಿಸಬಹುದಲ್ಲ....”
'ಈ ಪ್ರಶ್ನೆಗೆ ನಿಜದುತ್ತರ ಬೇಕೇ ಬೇಕಾ ನಿನಗೆ'
“ಹು" ಉತ್ತರ ಹೇಳುವುದೋ ಬಿಡುವುದೋ ಎಂದು ಅತ್ತಿತ್ತ ತಿರುಗಿದವಳಿಗೆ ಕಂಡಿದ್ದು ರಾಜೀವನ ಮನೆ. ಅವರ ಮನೆಯ ಹತ್ತಿರವೇ ನಿಂತು ಮಾತನಾಡುತ್ತಿದ್ದೀವೆಂಬ ವಾಸ್ತವ ಅಲ್ಲಿಯವರೆಗೂ ನನ್ನರಿವಿಗೆ ಹೋಗಿರಲಿಲ್ಲ. ಮುಂದಿರುವ ಗಾರ್ಡನ್ನಿನ ಜಾಗದಲ್ಲೇ ಇಪ್ಪತ್ತು ಮೂವತ್ತು ಸೈಟಿನ ಮನೆ ಕಟ್ಟಬಹುದು. ಎರಡಂತಸ್ತಿನ ವಿಶಾಲ ಮನೆಯೆನ್ನುವುದು ಹೊರನೋಟಕ್ಕೇ ಗೊತ್ತಾಗುತ್ತಿತ್ತು.
“ಇದ್ಯಾಕೆ ಆ ಮನೇನೆ ನೋಡ್ತಾ ನಿಂತುಬಿಟ್ಟೆ. ನಾ ಕೇಳಿದ್ದಕ್ಕೆ ಉತ್ತರ ಕೊಡಲಿಲ್ಲ ನೀನು. ಯಾರ್ ಮನೆ ಅದು"
'ನಾ ಮದುವೆಗೆ ಒಪ್ಪಿಗೆ ಕೊಟ್ಟಿದ್ದೀನಲ್ಲ. ರಾಜೀವ್. ಅವರ ಮನೆಯದು' ನನ್ನ ದೃಷ್ಟಿಯಿನ್ನೂ ಮನೆಯತ್ತಲೇ ಇತ್ತು. ಇಕ್ಕಟ್ಟು ರಸ್ತೆಯಲ್ಲಿರುವ ಒಂದಸ್ತಿನ ಔಟ್ ಹೌಸಿನ ತನ್ನ ಮನೆಯ ನೆನಪಾಗಿರಬೇಕು ಪುರುಷೋತ್ತಮನಿಗೆ.
“ಉತ್ತರ ಸಿಕ್ತು ಕಣೇ. ಬೈ" ಎಂದವನು ನಾ ತಿರುಗುವುದಕ್ಕೂ ಮೊದಲೇ ತನ್ನ ಆರ್.ಎಕ್ಸ್ 100 ಸ್ಟಾರ್ಟ್ ಮಾಡಿಕೊಂಡು ಹೊರಟುಬಿಟ್ಟಿದ್ದ. ಅವನ ಯೋಚನೆಯ ಮಟ್ಟಕ್ಕೆ ನಗು ಬಂತು. ನಕ್ಕು ಮನೆ ಸೇರಿದೆ.'
ಬೆನ್ನು ಸವರುತ್ತಾ ನಾ ಹೇಳುತ್ತಿದ್ದುದನ್ನು ತನ್ಮಯತೆಯಿಂದ ಕೇಳಿಸಿಕೊಳ್ಳುತ್ತಿದ್ದ ಸಾಗರನ ಮುಖದಲ್ಲಿ ನಗುವಿತ್ತು.
'ಯಾಕೋ ಗೂಬೆ ನಗ್ತಾ ಇದ್ದೀಯ' ಅವನ ಪುಟ್ಟ ಮೊಲೆತೊಟ್ಟನ್ನು ಕಚ್ಚುತ್ತಾ ಹೇಳಿದೆ.
“ಹೊಯ್" ಎಂದು ಮೆಲ್ಲನೆ ಕಿರುಚುತ್ತಾ "ಏನ್ ಮಾಡ್ತಾ ಇದ್ದೀಯ! ಹಂಗೆಲ್ಲ ಮಾಡ್ಬಾರ್ದು. ನಗದೇ ಇನ್ನೇನು ಮಾಡ್ಲಿ ನಿನ್ನ ದಡ್ಡತನಕ್ಕೆ. ಅಲ್ವೇ ಹೋಗಿ ಹೋಗಿ ಪುರುಷೋತ್ತಮನಿಗೆ ರಾಜೀವನ ಮನೆ ತೋರಿಸಿದ್ಯಲ್ಲ. ಅದೂ ಅವನೆಂಗೆ ಅಂತ ಗೊತ್ತಿದ್ದು!”
'ಅಲ್ವ. ಅಂತ ದಡ್ಡಿ ಕಣೋ ನಾನು. ಪುರುಷೋತ್ತಮ ನನ್ನನ್ನೆಷ್ಟು ಪ್ರೀತಿಸ್ತಾನೆ. ನಮ್ಮಿಬ್ಬರ ಮದುವೆ ತನ್ನ ಕಾರಣಕ್ಕೇ ಆಗ್ತಿಲ್ಲ ಅನ್ನೋದರ ಅರಿವಾದ ಮೇಲೆ ನನ್ನ ಹೊಸ ಬದುಕಿಗೆ ಹಾರೈಕೆ ನೀಡುತ್ತಾನೆ ಅಂತೆಲ್ಲ ನಂಬಿಬಿಟ್ಟಿದ್ದೆ ನಾನು. ಪ್ರೀತಿ ಮಧುರ ತ್ಯಾಗ ಅಮರ ಅನ್ನೋ ಮುಂಗಾರು ಮಳೆ ಡೈಲಾಗನ್ನು ಜಾಸ್ತೀನೇ ನಂಬ್ಕೋಬಿಟ್ಟಿದ್ದಂತಹ ದಡ್ಡಿ ನಾನು. ಅಮರವಾಗಿರೋಕೆ ಯಾರಿಗೂ ಅಂತ ಆಸೆ ಏನಿರಲ್ಲ ಅಂತ ಗೊತ್ತಾಗೋಕೆ ಹೆಚ್ಚು ತಡವೇನಾಗಲಿಲ್ಲ. ಅವತ್ತು ರಾತ್ರಿ ಮೆಸೇಜು ಮೇಲೆ ಮೆಸೇಜು ಕಳುಹಿಸಿದ.
"ಅವರ ದೊಡ್ಡ ಮನೆ ನೋಡಿಯೇ ನೀ ನನ್ನ ಮರೆತೆ" ಅನ್ನೋದನ್ನೇ ತಿರುಗಿಸಿ ಮುರುಗಿಸಿ ಹೇಳುತ್ತಿದ್ದ. ಹಣದ ಹಿಂದೆ ಬಿದ್ದು ಆರು ವರ್ಷದ ಪ್ರೀತೀನಾ ನಾ ಮರೆತೆ ಅನ್ನೋದನ್ನು ಪ್ರೂವ್ ಮಾಡುವ ಹಟಕ್ಕಾತ ಬಿದ್ದಿದ್ದ.
'ಇದಕ್ಕಿಂತ ದೊಡ್ಡ ಮನೆ ಇರೋರು, ರಾಜೀವನಿಗಿಂತ ತುಂಬಾ ತುಂಬಾ ಜಾಸ್ತಿ ಓದಿ ವಿಪರೀತ ದುಡ್ಡು ದುಡೀತಿದ್ದವರ ಸಂಬಂಧವೂ ನನಗೆ ಬಂದಿತ್ತು. ದುಡ್ಡು ಆಸ್ತಿ ಮನೇನೇ ಮುಖ್ಯವಾಗಿದ್ದರೆ ಆಗಲೇ ಮದುವೆಗೆ ಒಪ್ಪಿ ಇಷ್ಟೊತ್ತಿಗೆ ಮದುವೆಯಾಗಿಬಿಡಬಹುದಿತ್ತಲ್ಲ. ನೀ ಒಪ್ಪಿಸ್ತಿ ಅನ್ನೋ ನಂಬಿಕೆ ಇತ್ತು. ಆ ನಂಬಿಕೆ ನೀ ಉಳಿಸಿಕೊಳ್ಳಲಿಲ್ಲ. ರಾಜೀವ ಮತ್ತವನ ಮನೆಯವರು ನಮ್ಮ ಮನೆಯವರಿಗೆ ನನಗೆ ಮುಂಚಿನಿಂದಾನೂ ಪರಿಚಯ. ಹಂಗಾಗಿ ಈಗ ಒಪ್ಪಿದೆ. ಅವರ ಮನೆ ನಿನ್ನ ಮನೆಗಿಂತ ಚಿಕ್ಕದಾಗಿದ್ದರೂ ಒಪ್ಪಿಕೊಳ್ಳುತ್ತಿದ್ದೆ'
ಒಂದು ಕ್ಷಣ ಮಾತು ನಿಲ್ಲಿಸಿದೆ. ಸಾಗರ ಹೇಳಿದ್ದ ಮಾತು ನೆನಪಾಗುತ್ತಿತ್ತು. 'ನೀ ಹೇಳಿದ್ದು ಸರಿ ಸಾಗರ. ಬಹುಶಃ ಈ ರೀತಿ ವಾದ ಮಾಡಲೆಂದೇ ನಾ ಬಂದಿದ್ದ ಡಾಕ್ಟರುಗಳ ಸಂಬಂಧವನ್ನೆಲ್ಲ ಬಿಟ್ಟು ಫಾರ್ಮಸಿ ಮಾಡಿದ್ದ ರಾಜೀವನನ್ನು ಮದುವೆಯಾಗಲು ಒಪ್ಪಿಕೊಂಡಿದ್ದು. ಇಲ್ಲಾಂದರೆ ಒಂದು ಗಿಲ್ಟ್ - ಹೆಚ್ಚು ಓದಿದವನಿಗಾಗಿ ಪುರುಷೋತ್ತಮನನ್ನು ಬಿಟ್ಟುಬಿಟ್ಟೆ ಅನ್ನುವಂತಹ ಗಿಲ್ಟು ಜೀವನಪೂರ್ತಿ ಕಾಡುತ್ತಿತ್ತೇನೋ'
ಸಾಗರ ಮಾತನಾಡಲಿಲ್ಲ. ಮುಂದುವರೆಸು ಎನ್ನುವಂತೆ ನೋಡಿದ.
'ಅವನಿಗೆ ಆರೋಪವನ್ನು ನನ್ನ ತಲೆ ಮೇಲೆ ಹಾಕಿ ದೇವದಾಸನೆಂದೆನ್ನಿಸಿಕೊಳ್ಳುವ ಬಯಕೆ. ನನಗೆ ತಪ್ಪು ಇಬ್ಬರದೂ ಹೌದು, ವಿಷಯ ನಮ್ಮ ಕೈ ಮೀರಿ ಹೋಗಿದೆ. ಒಂದಷ್ಟು ಗೌರವದಿಂದ ಬೇರಾಗಿ ಕೊನೇ ಪಕ್ಷ ಸ್ನೇಹವನ್ನಾದರೂ ಉಳಿಸಿಕೊಳ್ಳಬೇಕೆನ್ನುವುದು ನನ್ನ ಬಯಕೆ.
“ಅಲ್ವೇ. ನಾವಿಬ್ರು ಅಷ್ಟು ಲವ್ ಮಾಡಿದ್ದು. ರೊಮ್ಯಾನ್ಸ್ ಮಾಡಿದ್ದು ಏನೂ ಲೆಕ್ಕಕ್ಕೇ ಇಲ್ವ"
'ಮತ್ತೆ ಮತ್ತೆ ನಿನ್ನದೇ ತಪ್ಪು ಅನ್ನೋ ರೀತಿ ಮಾತಾಡ್ಬೇಡ'
“ನಿನ್ನಂತ ಚಿನಾಲಿಗಳ ಜೊತೆ ಸೆಕ್ಸು ಮಾಡ್ದೇ ಬಿಟ್ಟೆ ನೋಡು ಅದೇ ನನ್ನ ತಪ್ಪು. ಮಜಾ ಮಾಡಿ ಬಿಟ್ಟುಬಿಡಬೇಕಿತ್ತೇನೋ ಥತ್"
'ನಾನ್ಯಾವತ್ತೂ ಸೆಕ್ಸಿಗೆ ಬೇಡ ಅಂದಿರಲಿಲ್ಲವಲ್ಲ. ನಿನಗೆ ಮನಸ್ಸು ಒಪ್ಪಿಸಿದ್ದವಳಿಗೆ ದೇಹವನ್ನೊಪ್ಪಿಸುವುದಕ್ಕೆ ನನ್ನದೇನೂ ಅಭ್ಯಂತರವೂ ಇರಲಿಲ್ಲವಲ್ಲ. ಸೆಕ್ಸ್ ಮಾಡೋದು ಮಜಾ ಅಲ್ಲ. ಒಬ್ಬರನ್ನೊಬ್ಬರು ಹಂಚಿಕೊಳ್ಳುವ ಒಂದು ವಿಧಾನ ಅಷ್ಟೇ'
“ಓಹೋ....ಬಂದುಬಿಟ್ಲು ಬುದ್ವಾದ ಹೇಳೋಕೆ. ಎಷ್ಟೇ ಆಗ್ಲಿ ನಂಗಿಂತ ಜಾಸ್ತಿ ಓದಿಕೊಂಡವಳಲ್ವ. ಆ ಕೊಬ್ಬು ನಿನಗೆ. ನನ್ ಬಾಡಿ ಬೇಜಾರಾಯ್ತೇನೋ ಅದಕ್ಕೆ ಇನ್ನೊಬ್ಬರಿಗೆ ಗಾಳ ಹಾಕಿದ್ದಿ"
'ಸರಿ ಹಂಗೇ ಅನ್ಕೋ. ಥ್ಯಾಂಕ್ಸ್'
“ಥ್ಯಾಂಕ್ಸ್ ಅಂತೆ ಸೂಳೆ ಮುಂಡೆ. ಇಷ್ಟಕ್ಕೇ ಬಿಟ್ಟುಬಿಡ್ತೀನಿ ಅಂದ್ಕೋಬೇಡ. ನಿನ್ನ ಜೀವನ ನರಕ ನರಕ ಮಾಡಿಬಿಡ್ತೀನಿ ಚಿನಾಲಿ ತಕಂಬಂದು"
ಅವಾಗಾಗಿದ್ದ ಭಯಕ್ಕೆ ಇವತ್ತಿಗೂ ಎದೆಬಡಿತ ಜೋರಾಗ್ತದೆ. ಪುರುಷೋತ್ತಮ ತಲೆ ಕೆಟ್ಟರೆ ಏನು ಬೇಕಾದರೂ ಮಾಡಿಬಿಡುತ್ತಾನೆನ್ನುವುದು ನನಗೆ ನೆನಪಾಗಿದ್ದೇ ಆಗ.
'ಖಂಡಿತವಾಗಿ ಇಷ್ಟಕ್ಕೇ ಬಿಡಬೇಡ ಪುರುಷೋತ್ತಮ. ನಿನ್ನ ಮನೆಯಲ್ಲಿ ಒಪ್ಪಿಸಿ ನಮ್ಮ ಮನೆಗೆ ಬಾ. ನಂದೂ ರಾಜೀವಂದೂ ಮದುವೆ ದಿನಾಂಕ ಗೊತ್ತಾಗೋಕೆ ಮುಂಚೆ ಬಾ. ನಾ ಕಾಯ್ತಿರ್ತೀನಿ ನಿನ್ನ ಜೊತೇನೆ ಮದುವೆಯಾಗಿ ಸುಖ ಸಂಸಾರ ನಡೆಸೋಕೆ' ಮೆಸೇಜಿನಲ್ಲಿದ್ದ ವ್ಯಂಗ್ಯ ಅವನರಿವಿಗೆ ಬರದೇ ಇರ್ತದಾ?'
“ಮ್. ಏನೇನು ಮಾಡ್ದ"
'ಒಂದಾ ಎರಡಾ ಸಾಗರ. ಮಾರನೇ ದಿನವೇ ಕಾಯ್ಕಂಡು ಕುಳಿತು ರಾಜೀವನನ್ನು ಭೇಟಿಯಾಗಿದ್ದ. ಹಿಂಗಿಂಗೆ ನಾವಿಬ್ರೂ ಲವರ್ಸು ಅಂತೇಳಿ ನಿನ್ನೆ ರಾತ್ರಿ ನಮ್ಮಿಬ್ಬರ ನಡುವೆ ನಡೆದಿದ್ದ ಸಂಭಾಷಣೆಯಷ್ಟನ್ನೂ ತೋರಿಸಿದ್ದ. ಮದುವೆಗೆ ಮುಂಚೆ ಲವ್ ಮಾಡೋದು ಅಪರೂಪವೇನಲ್ಲ ಅಂತ ಮಾತನಾಡಿ ಕಳುಹಿಸಿದ್ದ ರಾಜೀವ ಆತ ಹೋದ ನಂತರದಲ್ಲೇ ನನಗೆ ಫೋನ್ ಮಾಡಿ "ಅದ್ಯಾಕೆ ಹಂಗೆಲ್ಲ ಮೆಸೇಜ್ ಕಳಿಸಿದ್ದಿ ನೀನು" ಅಂತಷ್ಟೇ ಹೇಳಿದರೆ ಹೊರತು ಆತನಾಡಿದ ಯಾವ ಮಾತುಗಳನ್ನೂ ನನಗೆ ತಿಳಿಸಲಿಲ್ಲ. ರಾಜೀವನ ಬಳಿ ಕೆಲಸವಾಗದ್ದನ್ನು ಕಂಡ ಪುರುಷೋತ್ತಮ ರಾಜೀವನ ಮನೆಗೇ ಹೋಗಿ ಅವರಮ್ಮ ಅಕ್ಕನ ಬಳಿಯೂ ಅದೇ ಪುರಾಣವನ್ನು ಒದರಿದ್ದ. ಅದೇನು ಪುರಾಣ ಅನ್ನೋದು ನನಗಿವತ್ತಿನವರೆಗೂ ಗೊತ್ತಿಲ್ಲ. ಅವರಮ್ಮ ಅಕ್ಕ ರಾಜೀವನ ಬಳಿ ಏನು ಕೇಳಿದರು. ಅದಕ್ಕೆ ರಾಜೀವ ಏನು ಸಮಾಧಾನ ನೀಡಿದರು ಅನ್ನೋದೂ ನನಗೆ ಗೊತ್ತಿಲ್ಲ. ಯಾವಾಗ ರಾಜೀವ, ಅವನ ಮನೆಯವರು ಕೂಡ ಪುರುಷೋತ್ತಮನ ಮಾತಿಗೆ ಬೆಲೆ ಕೊಡದೆ ನನ್ನ ಜೊತೆಗಿನ ಮದುವೆ ಮಾತುಕತೆಯನ್ನು ಮುಂದುವರೆಸಿದರೋ ಅವತ್ತಿಗೆ ಪುರುಷೋತ್ತಮನ ಮೇಲಿದ್ದ ಅಳಿದುಳಿದ ಪ್ರೀತಿಯೂ ಮೂಲೆ ಸೇರಿಕೊಂಡುಬಿಟ್ಟಿತು. ಒಂದಾದ ಮೇಲೊಂದರಂತೆ ಮೆಸೇಜು ಕಳುಹಿಸುತ್ತಿದ್ದ. ರಿಪ್ಲೈ ಮಾಡುತ್ತಿರಲಿಲ್ಲ. ಆಸ್ಪತ್ರೆಯ ಬಾಗಿಲಲ್ಲೇ ನಿಂತಿರುತ್ತಿದ್ದ. ನೋಡಿದರೂ ನೋಡದಂತೆ ಹೋಗಿಬಿಡುತ್ತಿದ್ದೆ. ಒಂದು ದಿನ ನನ್ನ ಡ್ಯೂಟಿ ಇಲ್ಲದಾಗ ಆಸ್ಪತ್ರೆಯ ಒಳಗೂ ಹೋಗಿ ಗಲಾಟೆ ಮಾಡಿದ್ದ. ಕುಡಿದು ಹೋಗಿದ್ದ. ನಮ್ಮ ಸೂಪರಿಡೆಂಟ್ ಪಾಪ ಒಳ್ಳೆಯವರು. ಅವತ್ತು ಸಂಜೆಯೇ ನನಗೆ ಫೋನ್ ಮಾಡಿ "ಯಾಕೋ ಆ ಹುಡ್ಗ ಸ್ವಲ್ಪ ವಯಲೆಂಟ್ ಅನ್ನಿಸ್ತಾನಮ್ಮ. ಹುಷಾರು ಎಂದಿದ್ದರು”. ವಯಲೆಂಟ್ ಏನಲ್ಲ, ಪ್ರೀತಿ ಸೋಲ್ತಿದೆ ಅಂತ ಹಿಂಗೆ ಎಂದು ಮನದಲ್ಲೇ ಹೇಳಿಕೊಂಡೆ. ನನ್ನಸಿಕೆಗಳನ್ನೆಲ್ಲ ಪುರುಷೋತ್ತಮ ಅತಿ ವೇಗವಾಗಿ ಸುಳ್ಳು ಮಾಡುತ್ತಿದ್ದ. ಅವತ್ತು ರಾತ್ರಿಯೇ ಮನೆಗೆ ಬಂದ. ಇವತ್ತಿಗೂ ಆ ರಾತ್ರಿ ಕಣ್ಣಿಗೆ ಕಟ್ಟಿದಂತಿದೆ. ಘಂಟೆ ಎಂಟಾಗಿತ್ತು ಅವನು ಬಂದು ಬಾಗಿಲು ಬಡಿದಾಗ. ಕುಡಿದು ಬಂದಿದ್ದ. ನೆಟ್ಟಗೆ ನಡೆಯಲೂ ಕಷ್ಟಪಡುತ್ತಿದ್ದ. ಅಪ್ಪನಿಗೆ ನನ್ನ ಮೇಲೆ ಪೂರ್ಣ ಸಿಟ್ಟು ಬಂತು, ಸಿಟ್ಟಿನಲ್ಲೂ ತಾಳ್ಮೆಯಿಂದ ವರ್ತಿಸಿದರು. ಮನೆಬಾಗಿಲಿಗೆ ಬಂದವನನ್ನು ಕರೆದು ಒಳಗೆ ಕೂರಿಸಿದರು. ಬೀದಿಯಲ್ಲಿ ರಂಪಾಟವಾಗುವುದು ಬೇಡವೆನ್ನುವುದೂ ಕಾರಣವಿರಬಹುದು. ಬಾಗಿಲಲ್ಲೇ ಬಯ್ದು ಆಚೆಗಟ್ಟುತ್ತಾರೆ ಅಂದುಕೊಂಡಿದ್ದವನಿಗೆ ಮನೆಯೊಳಗೆ ಕರೆದು ಕೂರಿಸಿದ್ದು ಮುಜುಗರ ತರಿಸಿರಬೇಕು.
ಮುಖಪುಟ ಚಿತ್ರ: ಚೇತನ ತೀರ್ಥಹಳ್ಳಿ.
No comments:
Post a Comment