Oct 7, 2019

ಒಂದು ಬೊಗಸೆ ಪ್ರೀತಿ - 34

ಡಾ. ಅಶೋಕ್.‌ ಕೆ. ಆರ್.‌
ರಾತ್ರಿ ಇವ್ರು ಎಷ್ಟು ಘಂಟೆಗೆ ಬಂದು ಮಲಗಿದರೋ ಗೊತ್ತಾಗದಷ್ಟು ನಿದ್ರೆ. ಬೆಳಿಗ್ಗೆ ಎದ್ದಾಗ ಅವರ ಬಾಯಿಂದಷ್ಟೇ ಅಲ್ಲ ಇಡೀ ದೇಹದಿಂದಲೇ ರಮ್ಮಿನ ವಾಸನೆ ಬರುವಂತಿತ್ತು. ನಾ ಡ್ಯೂಟಿಗೆ ಹೋಗಲು ತಯಾರಾಗುತ್ತಿರುವಾಗ ಎಚ್ಚರವಾಗಿದ್ದರು. 'ಇದ್ಯಾಕೆ ಮಲಗೇ ಇದ್ದೀರ. ಹೋಗಲ್ವ ಕೆಲಸಕ್ಕೆ' ಎಂದು ಕೇಳಿದೆ. 

“ಆ ದರಿದ್ರ ಕೆಲಸಕ್ಕೆ ಯಾರ್ ಹೋಗ್ತಾರೆ ಬಿಡು" ಮಲಗಿದ್ದಲ್ಲಿಂದಲೇ ಹೇಳಿದ. 

'ಮಾಡೋ ಕೆಲಸಾನ ದರಿದ್ರ ಅಂದ್ರೆ ಆಗ್ತದಾ?' 

“ಓಹೋ. ನನಗಿಂತ ಜಾಸ್ತಿ ದುಡೀತೀನಿ ಅನ್ನೋ ಅಹಂಕಾರದಲ್ಲಿ ಬುದ್ಧಿವಾದ ಹೇಳೋಕೆಲ್ಲ ಬರಬೇಡಿ ಮೇಡಂ. ನನಗ್ ಗೊತ್ತು ಯಾವುದು ಒಳ್ಳೇದು ಯಾವುದು ದರಿದ್ರದ್ದು ಅಂತ.....” 

'ಸರಿ ನಿಮ್ಮಿಷ್ಟ' ಬೆಳಿಗ್ಗೆ ಬೆಳಿಗ್ಗೆ ಜಗಳವಾಡುವ ಮನಸ್ಸಿರಲಿಲ್ಲ ನನಗೆ. ಇಡೀ ದಿನ ಹಾಳಾಗ್ತದೆ. 

“ಇಷ್ಟೇ ಅಲ್ವ ಜೀವನ. ಮೊದಲೆಲ್ಲ ಕೆಲಸದ ವಿಷಯಕ್ಕೆ ನಾ ಗೋಳಾಡ್ವಾಗ ಮುದ್ದುಗರೆದು ಸಮಾಧಾನ ಮಾಡ್ತಿದ್ದೆ. ಈಗ ಸರಿ ನಿಮ್ಮಿಷ್ಟ ಅಂತಂದು ಸುಮ್ಮನಾಗ್ತಿ" 

'ಬೆಳಿಗ್ಗೆ ಬೆಳಿಗ್ಗೆ ಮಾತಿಗೆ ಮಾತು ಬೆಳೆದು ಜಗಳವಾಡುವ ಮನಸ್ಸಿಲ್ಲ ರೀ...'

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.
“ನಂಗೇನ್ ನಿನ್ ಜೊತೆ ಜಗಳವಾಡೋದು ಖುಷಿಯ ಸಂಗತಿಯಾ? ಇಲ್ಲ. ಬಾ ಇಲ್ಲಿ" 

ಅವರ ಪಕ್ಕಕ್ಕೋಗಿ ಕುಳಿತುಕೊಂಡೆ. ನನ್ನ ಕೈ ಹಿಡಿದುಕೊಂಡರು. ಕಣ್ಣು ತುಂಬಿತ್ತು. “ನಿನ್ನೆ ನಡೆದುಕೊಂಡ ರೀತಿಗೆ ಸಾರಿ ಕಣೊ. ಸರಿಯಾದ ಕೆಲಸ ಸಿಗದ ಒತ್ತಡ, ನಮ್ಮ ಮನೆಯವರ ಮಾತುಗಳ ಒತ್ತಡವೆಲ್ಲ ಸೇರಿ ನಿನ್ನ ಮೇಲೆ ಕಾರಿಕೊಂಡೆ. ಆ ರೀತಿಯಾಗೆಲ್ಲ ನಾ ಮಾತನಾಡಬಾರದಿತ್ತು ಅಂತ ಗೊತ್ತು" 

ಇಷ್ಟೆಲ್ಲ ಆರ್ದ್ರ ಭಾವದಿಂದ ರಾಜೀವ ಕ್ಷಮೆ ಕೇಳೋದು ಅಪರೂಪದಲ್ಲೇ ಅಪರೂಪ. ನಿನ್ನೆಯಿಂದ ಅವರ ಮೇಲಿದ್ದ ಕೋಪವನ್ನೆಲ್ಲ ಅವರ ಮಾತುಗಳು ದೂರ ಮಾಡಿತು. 

'ಹೋಗ್ಲಿ ಬಿಡ್ರಿ. ಸಾರಿ ಎಲ್ಲ ಎಂತಕ್ಕೆ. ನಾನೂ ಸ್ವಲ್ಪ ಸಮಾಧಾನದಿಂದಿರಬೇಕಿತ್ತೇನೋ. ಸರಿ ಎದ್ದೇಳಿ ಈಗ ಕೆಲಸಕ್ಕೋಗೂರಂತೆ' 

“ಇಲ್ವೋ. ಕೆಲಸಕ್ ಹೋಗೋ ಮನಸ್ಸಿಲ್ಲ. ಕುಡಿದಿದ್ದು ಜಾಸ್ತಿ ಆಯ್ತು ಅನ್ನಿಸ್ತದೆ. ಇನ್ನೂ ತಲೆ ನೋಯ್ತಿದೆ. ಚೆನ್ನಾಗಿ ರೆಷ್ಟ್ ಮಾಡ್ತೀನಿ. ನೀ ಡ್ಯೂಟಿ ಮುಗಿಸಿ ಬೇಗ ಬಾ. ಕೆಲಸಗಳಿವೆ" 

'ಏನ್ ಕೆಲಸ?' 

“ಅದೇ ಮಕ್ಳು ಮಾಡ್ಕೊಳ್ಳೋ ಕೆಲಸ" ಮುಖದಲ್ಲಿ ನಗು ಮೂಡಿತ್ತು. ಅವನ ತಲೆಗೊಂದು ಮೊಟಕಿ 'ಅದು ಕೆಲಸ ಅಲ್ಲ ಪಾಪಿ....ಸುಖ' ನನ್ನಲ್ಲೂ ನಗು ಮೂಡಿತು. 

“ನೀನೇ ಹೇಳಿದ್ಯಲ್ಲ ಈ ಪರಿಸ್ಥಿತೀಲಿ ಅದನ್ನೊಂದು ಕರ್ತವ್ಯದ ಥರ ಮಾಡ್ಬೇಕು ಅಂತ" ಕಣ್ಣು ಮಿಟುಕಿಸಿದ. 'ಥೂ ನಿನ್ನ' ಅಂತ ಮತ್ತೊಂದು ಸಲ ಮೊಟಕಿ ನಾ ಕೆಲಸಕ್ಕೆ ಹೊರಟೆ. ಇಷ್ಟು ಬೇಗ ನಮ್ಮಿಬ್ಬರ ನಿನ್ನೆಯ ಜಗಳ ಮುಗಿದುಬಿಡುತ್ತದೆಂದು ನಿರೀಕ್ಷಿಸಿರಲಿಲ್ಲ. ಮನಸ್ಸು ಮುದಗೊಂಡಿತ್ತು. 

ಕೆಲಸ ಮುಗಿಸಿ ಮನೆಗೆ ಬೇಗ ಬಂದವಳಿಗೆ ರಾಜೀವ ಸ್ನಾನ ಕೂಡ ಮಾಡದೆ ದಿವಾನಿನ ಮೇಲೆ ಸೋಮಾರಿಯಂತೆ ಮಲಗಿಕೊಂಡು ಟಿವಿ ನೋಡುತ್ತಿರುವುದನ್ನು ಕಂಡು ಬೇಸರವಾಯಿತು. ಇವತ್ತೂ ಸೆಕ್ಸ್ ಇಲ್ಲ ಅಂದುಕೊಂಡೆ. ನನ್ನ ಮುಖ ಮನದ ಭಾವನೆಗಳನ್ನು ಗಾಢವಾಗೇ ಪ್ರತಿಫಲಿಸಿರಬೇಕು. “ಓ ಓ! ಮೇಡಮ್ಮೋರು ನಾ ಮೂಡಲ್ಲಿಲ್ಲ ಅಂತ ಬೇಸರ ಮಾಡಿಕೊಂಡಂಗಿದೆ! ಅಂತದ್ದೇನಿಲ್ವೇ. ನೀರು ಕಾಯಿಸಿಟ್ಟಿದ್ದೀನಿ. ಇಬ್ರೂ ಜೊತೆಗೆ ಸ್ನಾನ ಮಾಡ್ಕಂಡು ಆಮೇಲದೂ ಇದೂ ಮಾಡ್ಕಂಡು ಊಟ ಮಾಡಿ ತಾಚಿ ಮಾಡ್ಕೊಳ್ಳೋದಷ್ಟೇ ಇವತ್ತಿನ ಪ್ರೋಗ್ರಾಮು" 

ಬೇಸರ ದೂರ ದೂರ. 'ಹಂಗಾಂದ್ರೆ ಈಗ ಅಡುಗೆ ಮಾಡ್ಬೇಕಾ ಮೊದಲು!' 

“ಹನುಮಂತು ಮೆಸ್ಸಿಂದ ಎರಡ್ ಪಲಾವ್ ತಂದಿದ್ದೀನಿ. ನಿಂಗದು ಬೇಡ ಅಂದ್ರೆ ಅಡುಗೆ ಮಾಡ್ಕೋ" ಎಂದ್ಹೇಳಿ ನಕ್ಕರು. 

ಓಡಿ ಹೋಗಿ ತಬ್ಬಿಕೊಂಡೆ. 

“ನೋ ಡಿಯರ್. ಮೊದಲು ಸ್ನಾನ" ಎಂದ. ಮದುವೆಯಾದ ಹೊಸತರಲ್ಲಿ ವಾರಕ್ಕೆರಡು ಮೂರು ಬಾರಿಯಾದರೂ ಜೊತೆಯಲ್ಲಿ ಸ್ನಾನ ಮಾಡುತ್ತಿದ್ದೊ. ಪುಣ್ಯಕ್ಕೆ ಅವರ ಮನೆಯಲ್ಲಿ ಅಟ್ಯಾಚ್ಡ್ ಬಾತ್ರೂಂ ಇತ್ತು. ನಮ್ಮದೇ ಮನೆಗೆ ಬಂದ ಮೇಲೆ ಇನ್ನೇನು ದಿನಾ ಜೊತೇಲೇ ಸ್ನಾನ ಅಂದ್ಕಂಡಿದ್ದು ಸುಳ್ಳಾಗಿತ್ತು. ಅವರಿಗೋ ನನಗೋ ಸಮಯದ ಅಭಾವವಿರುತ್ತಿತ್ತು. ವಾರಕ್ಕೊಮ್ಮೆ ಹದಿನೈದು ದಿನಕ್ಕೊಮ್ಮೆ ತಿಂಗಳಿಗೊಮ್ಮೆ ಅಂತಾಗಿ ಈಗಂತೂ ಕಡೆಯದಾಗಿ ಯಾವಾಗ ಜೊತೆಯಲ್ಲಿ ಸ್ನಾನ ಮಾಡಿದ್ದು ಅಂತಲೇ ಮರೆತುಹೋಗಿದೆ! ಜೊತೆಯಲ್ಲಿ ಸ್ನಾನ ಮಾಡುವುದು ಸಂಗಾತಿಯ ದೇಹದೆಲ್ಲ ಭಾಗವನ್ನೂ ಚೆಂದ ರೀತಿಯಲ್ಲಿ ಪರಿಚಯಿಸ್ತದೆ. ಆತ್ಮೀಯತೆ ಹೆಚ್ಚಿಸುತ್ತದೆ. ಏಕತಾನತೆ ಮೂಡಿಸಬಹುದಾದ ಸೆಕ್ಸ್ ನಲ್ಲಿ ವೈವಿಧ್ಯತೆ ತರುತ್ತದೆ. ಎಷ್ಟೋ ತಿಂಗಳುಗಳ ನಂತರ ಜೊತೆಯಲ್ಲಿ ಸ್ನಾನ ಮಾಡಿದ್ದು ಇಬ್ಬರಲ್ಲೂ ಕಾಮದ ಭಾವನೆಗಳನ್ನು ತುಸು ಹೆಚ್ಚೇ ಎನ್ನಿಸುವಂತೆ ಬಡಿದೆಬ್ಬಿಸಿತ್ತು. ನಂಗಂತೂ ಬಚ್ಚಲುಮನೆಯಲ್ಲೇ ಮಾಡಿದರೆಂಗೆ ಅನ್ನಿಸಿಬಿಟ್ಟಿತು. ರಾಜೀವನ ಬಳಿ ಅದನ್ನೇ ಹೇಳಿದ್ದಕ್ಕೆ. “ಬಿದ್ದು ಕೈಕಾಲು ಮುರ್ಗಿರ್ಕೊಂಡೇವು ನಡಿ" ಎಂದು ನಗುತ್ತಾ ನನ್ನನ್ನು ಹಿಂದಿನಿಂದ ತಬ್ಬಿ ಹಿಡಿದು ರೂಮಿಗೆ ಕರೆತಂದರು. ಇಬ್ಬರು ದೇಹವನ್ನೊರೆಸಿಕೊಂಡಿರಲಿಲ್ಲ. ಮುಂದಿನ ಅರ್ಧ ಘಂಟೆಯ ಮಿಲನ ದೇಹದ ಮೇಲಿನ ನೀರನ್ನು ಆವಿಯಾಗಿಸಿ ನೀರಿನ ಜಾಗದಲ್ಲಿ ಬೆವರನ್ನು ಪ್ರತಿಷ್ಟಾಪಿಸಿತ್ತು. ತೃಪ್ತಿಯಾಗಿತ್ತು ನನಗಿವತ್ತು. ಮಿಲನದ ಏದುಸಿರಿನ ಸುಖವಿನ್ನೂ ಪೂರ್ತಿಯಾಗಿ ಇಳಿದಿರಲಿಲ್ಲ. ನನ್ನ ಫೋನ್ ರಿಂಗಣಿಸಿತು. ಅಪ್ಪನ ಕರೆ. ಮನಸ್ಸಿಲ್ಲದ ಮನಸ್ಸಿನಿಂದ ಕರೆ ಸ್ವೀಕರಿಸಿದೆ. ಅಪ್ಪ ಮಾತು ಕೇಳಿ 'ಸರಿ ಅಪ್ಪ. ಬರ್ತೀವಿ' ಎಂದ್ಹೇಳಿ ಫೋನಿಟ್ಟೆ. 

“ಏನಂತೆ?” ಮೊಲೆತೊಟ್ಟಿನೊಂದಿಗೆ ಆಟವಾಡುತ್ತಾ ಕೇಳಿದ ರಾಜೀವ. 

'ಬೆಳಿಗ್ಗೆ ರಾಮೇಗೌಡರು ವಾಕಿಂಗಿನಲ್ಲಿ ಸಿಕ್ಕಾಗ ಇವತ್ತು ಸಂಜೆ ಬರ್ತೀವಿ, ಮಾತಾಡೋದಿದೆ. ನಿಮ್ಮ ಮಗಳು ಅಳಿಯನನ್ನೂ ಬರೋದಿಕ್ಕೇಳಿ ಅಂದ್ರು. ಹು ಅಂದೆ' 

“ಓ ಹಂಗೆ. ಸರಿ. ನಡಿ ಬಿರಿಯಾನಿ ತಿನ್ನುವ" ಎಂದು ಮೇಲೆದ್ದ. ನಂಗಿನ್ನೂ ಒಂದಷ್ಟು ಹೊತ್ತು ಹಿಂಗೇ ತಬ್ಬಿ ಮಲಗಬೇಕಿತ್ತು. ಹಾಳಾದ್ ಅಪ್ಪ ಇನ್ನೊಂದರ್ಧ ಘಂಟೆ ಬಿಟ್ಟು ಫೋನ್ ಮಾಡಿದ್ರೆ ಆಗ್ತಿರಲಿಲ್ಲವಾ.... ಎಂದುಕೊಳ್ಳುತ್ತ ನಾನೂ ಮೇಲೆದ್ದೆ. 

* * * 

ಸಂಜೆ ಮನೆಗೆ ಹೋದರೆ ಅಲ್ಲಿನ ಸಂಭ್ರಮ ನೋಡಿ ಒಂದುಕ್ಷಣ ನನಗೆ ಹೊಟ್ಟೆಕಿಚ್ಚಾಗಿದ್ದೌದು. ನನ್ನ ಪರಶುವಿನ ವಿಷಯದಲ್ಲಿ ಅಪ್ಪ ಒಪ್ಪಿದಂತೆ ಮಾಡಿದರೂ ಒಪ್ಪಲಿಲ್ಲ, ಪರಶುವಿನ ಅಮ್ಮನಂತೂ ಸುತಾರಾಂ ಇಲ್ಲವೆನ್ನುವಂತೆ ನಡೆದುಕೊಂಡರು. ಶಶಿ ಸೋನಿಯಾನೇ ಅದೃಷ್ಟವಂತರು. ಇರಲಿ. ಪರಶು ಜೊತೆ ಮದುವೆಯಾಗಿದ್ರೂ ನಾ ಸುಖವಾಗೆಲ್ಲಿರ್ತಿದ್ದೆ. ಈಗ ಸುಖವಾಗಿದ್ದೀನಾ? ಸುಖ ದುಃಖ ಎಲ್ಲಾ ನಮ್ಮ ನಮ್ಮ ಗ್ರಹಿಕೆಗೆ ಸಿಕ್ಕಿದ್ದೆಷ್ಟೋ ಅಷ್ಟೇ. ನನಗೆ ಸುಖವೆನ್ನಿಸಿದ್ದೇ ಮತ್ತೊಬ್ಬರಿಗೆ ದುಃಖವೆನ್ನಿಸಬಹುದು; ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರೇಪಿಸುವ ಸಂಕಟದ ಸಂಗತಿಯೊಂದು ಅನ್ಯರಿಗೆ ಯಕಶ್ಚಿತ್ ಎಂಬಂತೆ ತೋರಬಹುದು. ಎಲ್ಲಾ ಅವರವರ ಭಾವಕ್ಕೆ …. ದಿಕ್ಕು ಕಂಡ ಕಡೆಗಳಿಗೆಲ್ಲ ತೂರಿಹೋಗುತ್ತಿದ್ದ ಆಲೋಚನೆಗಳಿಗೆ ತಡೆ ಬಿದ್ದಿದ್ದು ಸೋನಿಯಾ ತನ್ನಪ್ಪ ಅಮ್ಮನೊಂದಿಗೆ ಮನೆಯೊಳಗೆ ಬಂದಾಗ. ಸೋನಿಯಾಳ ಮುಖದಲ್ಲಿ ವಿಜಯೀ ಕಳೆಯಿತ್ತು. ಸಂಜೆ ಮನೆಗೆ ಬಂದಾಗ ಶಶಿಯ ಮೊಗದಲ್ಲೂ ಅದೇ ಉತ್ಸಾಹವಿತ್ತಲ್ಲ. ಮದುವೆ ದಿನಾಂಕ ಗೊತ್ತುಪಡಿಸುವುದೊಂದೇ ಬಾಕಿಯಿದೆ..... 

ಉಭಯ ಕುಶಲೋಪರಿಗಳೆಲ್ಲ ಮುಗಿದ ಮೇಲೆ ಒಂದ್ ರೌಂಡು ತಿಂಡಿಯ ಜೊತೆಗೆ ಮಾತುಕತೆ ಶುರುವಾಯಿತು. ಅಪ್ಪನೇ ಮೊದಲು ಮಾತನಾಡಿದ್ದು. 

“ನಮ್ಮನ್ನ ಕ್ಷಮಿಸಬೇಕು ನೀವು" ಶಶಿಯ ಕಡೆಗೆ ಕೈದೋರುತ್ತಾ "ಇವನನ್ನು ಕರೆದುಕೊಂಡು ನಾವೇ ನಿಮ್ಮ ಬಳಿಗೆ ಬರಬೇಕಿತ್ತು. ಧೈರ್ಯ ಸಾಲಲಿಲ್ಲವೋ ಇವರ ಪ್ರೀತಿ ತಪ್ಪೆಂದೆನ್ನಿಸಿತೋ ಗೊತ್ತಿಲ್ಲ ನಾ ಬರದೆ ಮಗಳು ಅಳಿಯನನ್ನು ಕಳಿಸಿಬಿಟ್ಟೊ. ಬೇಸರ ಮಾಡಬೇಡಿ ಅಂತ ಕೇಳ್ಕೋಳ್ತೀನಿ" 

“ಪರವಾಗಿಲ್ಲ ಬಿಡಿ. ನಿಮ್ಮಳಿಯ ಮಗಳು ಮಾತನಾಡಿದ ರೀತಿ ನೋಡಿಯೇ ನಾ ಒಪ್ಪಿದನೇನೋ ಅನ್ನಿಸುತ್ತೆ. ಇಲ್ಲಾಂದ್ರೆ …. ನಿಮಗೆ ಗೊತ್ತಲ್ಲ.....ನಾವ್ ಜಾತಿ ಬಿಡೋ ಮನಸ್ಸು ಮಾಡಿದರೂ ಸಮಾಜ ಬಿಡುವುದಕ್ಕೆ ಆಸ್ಪದ ಕೊಡುವುದಿಲ್ಲ. ನಾ ಈ ಮದುವೆಗೇನಾದರೂ ಒಪ್ಪಿದ್ದರೆ ಅದು ಸೋನಿಯಾಳ ಸಂತೋಷದ ಕಾರಣಕ್ಕಾಗಿ. ಜೊತೆಗೆ ಶಶಿ ಗೊತ್ತಿರೋ ಹುಡುಗ, ಒಳ್ಳೆ ಹುಡುಗ. ನಿಮ್ಮ ಕುಟುಂಬದವರೂ ಉತ್ತಮ ಶಿಕ್ಷಣ ಪಡೆದುಕೊಂಡು ಒಳ್ಳೊಳ್ಳೆ ಕೆಲಸದಲ್ಲಿದ್ದೀರಿ. ಜಾತಿ ವಿಷಯ ಇವತ್ತಿಗೂ ನನ್ನನ್ನು ಕಾಡ್ತಿದೆ. ಇಲ್ಲವೆನ್ನಲಾರೆ. ವಿಚಿತ್ರ ಅಂದ್ರೆ ಮೊದಲು ಬಂದ ಯೋಚನೆಯೇ ನಮ್ಮ ಜಾತ್ಯಸ್ಥರು ನಮ್ಮ ನೆಂಟರು ಹೆಂಗೆಲ್ಲ ಹೀಯಾಳಿಸಬಹುದು ಅಂತ. ಅದರರ್ಥ ಮದುವೆಗೆ ನನ್ನ ವಿರೋಧವಿರುವುದು ವೈಯಕ್ತಿಕ ನೆಲೆಗಿಂತ ಹೆಚ್ಚಾಗಿ ಸಂಬಂಧಿಗಳ ನೆಲೆಯಲ್ಲಿ ಸಮಾಜದ ನೆಲೆಯಲ್ಲಿ. ಇದರರಿವಾದ ಮೇಲೆಯೇ ನನ್ನ ಮನಸ್ಸು ಈ ಮದುವೆಗೆ ಒಪ್ಪಿದ್ದು. ಮನೆಯವಳು ಇವತ್ತಿಗೂ ಪೂರ್ತಿ ಒಪ್ಪಿಲ್ಲ. ನೀವಿಬ್ರು ಒಪ್ಪಾದ ಮೇಲೆ ನನ್ನದೇನಿದೆ ಅಂತಾಳೆ" ಆಂಟಿ ಮುಗುಮ್ಮಾಗೇ ಕುಳಿತಿದ್ದರು. “ಎಲ್ಲರನ್ನೂ ಒಪ್ಪಿಸಿ ಆಗುವಂತಹ ಮದುವೆ ಇದಲ್ಲ. ಮದುವೆ ದಿನ ಗೊತ್ತು ಮಾಡಿ. ಅಷ್ಟರೊಳಗೆ ನಮ್ಮಲ್ಲಿನ ಮತ್ತಷ್ಟು ಮಂದಿ ನಿಮ್ಮಲ್ಲಿನ ಇನ್ನಷ್ಟು ಜನ ಈ ಮದುವೆಗೆ ಒಪ್ಪಿ ಬಂದು ಹರಸಬಹುದು" ಎಂದ್ಹೇಳಿ ಮಾತು ನಿಲ್ಲಿಸಿದರು. 

ಬಂಡೆಯೆಂದು ಭಾವಿಸಿದ್ದು ಹೂವಾಗಿತ್ತು. ಅಮ್ಮನ ಮುಖದ ಮೇಲಿನ ಸಂತಸವನ್ನಳೆಯಲಾದೀತೆ! ಎಲ್ಲರಿಗೂ ಇನ್ನೊಂದು ಸುತ್ತು ತಿಂಡಿ ತಂದು ಕೊಟ್ಟರು. ಅಯ್ಯೋ ಸಾಕು ಹೊಟ್ಟೆ ತುಂಬೋಗಿದೆ ಎಂದವರಿಗೆ ಒಂದಿಡಿ ಹೆಚ್ಚೇ ಬಡಿಸಿದರು. ನಾನು ರಾಜಿ ಹೋಗಿ ಮಾತಾಡಿದ್ದು ಸುಸೂತ್ರವಾಗಿ ಮುಗಿಯಿತಲ್ಲ ಎಂದು ನನಗೂ ಸಮಾಧಾನ. ಅವತ್ತು ಅಷ್ಟೆಲ್ಲ ಮಾತನಾಡಿದ ರಾಜೀವ ಇವತ್ತು ಮೌನವೃತ ತೆಗೆದುಕೊಂಡವರಂತಿದ್ದರು. ಎರಡ್ಮೂರು ದಿನಾಂಕಗಳನ್ನು ಗುರುತಿಸಿಕೊಂಡು ಬರ್ತೀನಿ ಎಂದ ಻ಅಪ್ಪನ ಮಾತಿಗೆ ಆದಷ್ಟೂ ಭಾನುವಾರ ಮುಹೂರ್ತ ಬಿದ್ದರೆ ಒಳ್ಳೆಯದು ನೋಡಿ ಎಂದವರ ಅಪ್ಪ ಪ್ರತಿಕ್ರಿಯೆ ನೀಡುವುದರೊಂದಿಗೆ ಅಂದಿನ ಸಭೆಯು ಸಮಾಪ್ತಿಯಾಯಿತು. 

ನೋಡ್ತಾ ನೋಡ್ತಾ ಒಂದ್ ವಾರ ಕಳೆದೋಗಿದ್ದೇ ತಿಳೀಲಿಲ್ಲ. ಆಗಲೇ ಮಂಗಳವಾರ. ನಾಳೆ ಸಾಗರ ಬರ್ತಾನೆ. ಅವನನ್ನು ಭೇಟಿ ಮಾಡುತ್ತಿರುವುದು ನಿಜಕ್ಕೂ ಸತ್ಯವಾ ಅನ್ನುವ ಪ್ರಶ್ನೆಯನ್ನು ಬೆಳಿಗ್ಗೆಯಿಂದ ಕೇಳಿಕೊಳ್ಳುತ್ತಲೇ ಇದ್ದೀನಿ. ಬ಻ಸ್ ಬುಕ್ ಮಾಡ್ಸಿದ್ದೀನಿ ಕಣೇ ಅಂತ ಮೆಸೇಜು ಹಾಕಿದ್ದ. ತಲೇಲಿ ಅಷ್ಟೆಲ್ಲ ಯೋಚನೆ ಗೊಂದಲಗಳಿರುವವನು ಕೊನೆ ಕ್ಷಣದಲ್ಲಿ ಬಸ್ಸು ಹತ್ತದಿದ್ದರೆ? ಹತ್ತಿದ ನಂತರವೂ ದಾರಿ ಮಧ್ಯೆ ಇಳಿದು ಹೋಗಿಬಿಟ್ಟರೆ? ಇಲ್ಲ ಹಂಗೆಲ್ಲ ಆಗಬಾರದು. ಅವನು ಬರಬೇಕು ನಾವಿಬ್ಬರೂ ಭೇಟಿಯಾಗಬೇಕು ನಾವಿಬ್ಬರು ಸೇರಬೇಕು.....ಈ ಕೊನೆಯದರ ಬಗ್ಗೆ ನನಗೇನು ಹೆಚ್ಚು ನಂಬಿಕೆಯಿರಲಿಲ್ಲ. ವೈಯಕ್ತಿಕವಾಗಿ ನನಗೆ ಅವನೊಟ್ಟಿಗೆ ಸೆಕ್ಸ್ ಮಾಡಬೇಕೆನ್ನಿಸುತ್ತಿದ್ದುದು ಹೌದು. ಅವನಿಗೂ ಅನ್ನಿಸ್ತದೆ ಆದರೆ ನೈತಿಕ ಅನೈತಿಕ ಅಂತೆಲ್ಲ ಲೆಕ್ಕ ಹಾಕ್ತಾನೆ. ಪ್ರೀತಿ ಮೂಡೋದಿಕ್ಕಿಲ್ಲದ ಈ ಲೆಕ್ಕಾಚಾರ ಮನಸ್ಸು ಹಂಚಿಕೊಳ್ಳಲು ಇಲ್ಲದ ಈ ಲೆಕ್ಕಾಚಾರ ದೇಹ ಹಂಚಿಕೊಳ್ಳುವ ಸಮಯದಲ್ಲಿ ಮಾತ್ರ ಯಾಕೆ ಧುತ್ತೆಂದು ಎದುರಾಗ್ತದೆ? ಮನಸ್ಸಿಗಿಂತ ದೇಹಕ್ಕೆ ಶೀಲಕ್ಕೆ ಬೆಲೆ ಜಾಸ್ತಿ ಸಮಾಜದಲ್ಲಿ, ಯಾಕೀಗೆ? ಅವನು ತೀರ ಸೆಕ್ಸ್ ಬೇಡ ಅಂದರೆ ಹೆಚ್ಚು ಬಲವಂತ ಮಾಡಬಾರದು. ಉದ್ರಿಕ್ತಗೊಳಿಸಲು ಪ್ರಯತ್ನ ಪಡಲೂಬಾರದು, ಆಮೇಲವನು ಸೆಕ್ಸ್ ಗೋಸ್ಕರ ಅಷ್ಟೇ ಇವಳು ನನ್ನನ್ನು ಸೆಳೆದಿದ್ದು ಅಂದುಕೊಂಡುಬಿಟ್ಟರೆ ಕಷ್ಟ. ಇಷ್ಟೆಲ್ಲ ಗೊಂದಲಗಳನ್ನು ಅವನೊಡನೆ ಚರ್ಚಿಸಬೇಕೆಂದು ಆಸೇಯೇನೋ ಆಗ್ತದೆ ಆದರೆ ಅದನ್ನೇ ಅವನು ತಲೆಗಚ್ಚಿಕೊಂಡು ಬರದೇ ಹೋದರೆ? ಕೊನೇ ಪಕ್ಷ ಅವನೆದೆಗೆ ಒರಗಿ ಒಂದಷ್ಟು ಮಾತನಾಡಬೇಕಿದೆ ನನಗೆ. ಬಸ್ಸು ಹತ್ತಿದಾಗ "ಹೊರಟೆ" ಅಂತೊಂದು ಮೆಸೇಜು ಕಳುಹಿಸಿದ. 

'ಹು. ಎಷ್ಟೊತ್ತಿಗೆ ಬರ್ತಿ ಬೆಳಿಗ್ಗೆ' 

“ಎಷ್ಟೊತ್ತಿಗೆ ಬರ್ಲಿ?” 

'ಬಸ್ ಎಷ್ಟೊತ್ತಿಗೆ ಬರುತ್ತೋ ಅಷ್ಟೊತ್ತಿಗೆ ಬಾ' 

“ಹೇ ಹಂಗಲ್ವೇ. ಬಸ್ಸು ಬೆಳಿಗ್ಗೆ ಐದಕ್ಕೆಲ್ಲ ಬಂದುಬಿಡುತ್ತೆ" 

'ಐದಕ್ಕೇ ಬಾ ಹಂಗಾರೆ' 

“ನಿನ್ ಹಸ್ಬಂಡ್ ಇರಲ್ವ?” 
ನಿಮಗೀ ಕಾದಂಬರಿ ಮೆಚ್ಚುಗೆಯಾಗುತ್ತಿದ್ದಲ್ಲಿ 'ಹಿಂಗ್ಯಾಕೆ' ವೆಬ್ ಪುಟಕ್ಕೆ ಬೆಂಬಲವಾಗಿ ನಿಮ್ಮಿಂದ ಸಾಧ್ಯವಾದಷ್ಟು ಹಣವನ್ನು ಕಳಿಸಿಕೊಡಲು ಕೆಳಗಿರುವ ಲಿಂಕ್ ಕ್ಲಿಕ್ಕಿಸಿ.  ನಿಮ್ಮ ಬೆಂಬಲ ಮುಂದಿನ ದಿನಗಳಲ್ಲಿ ಕಾದಂಬರಿಯ - ಪುಸ್ತಕ ಉಚಿತವಾಗಿ ಲಭ್ಯವಾಗಿಸಲು ಸಹಕಾರಿಯಾಗಲಿದೆ.

'ಇರ್ತಾರೆ. ಇದ್ರೇನಂತೆ. ಹೆಂಗಿದ್ರೂ ಅದೂ ಇದೂ ಏನೂ ಮಾಡಲ್ಲ ಅಂತೇಳಿದ್ದೀಯಲ್ಲ' 

“ಹಂಗಲ್ವೇ" 

'ಇನ್ನೆಂಗೋ' 

“ನಂಗೂ ನಿನ್ ಗಂಡ ನಿನ್ ಹೆತ್ತೋರು ನಿನ್ ತಮ್ಮ ಎಲ್ಲರನ್ನೂ ಭೇಟಿಯಾಗಬೇಕಂತ ಆಸೆಯಿದೆ. ಆದರೆ ಮೊದಲ ಸಲ ಭೇಟಿಯಾದಾಗ ನಾವಿಬ್ರೇ ಇರ್ಬೇಕು. ಮಿಕ್ಕೋರನ್ನೆಲ್ಲ ಮುಂದಿನ ಸಲ ಭೆಟ್ಟಿಯಾಗಬಹುದು" 

'ಓ! ಹಂಗೆ. ಸೋ ಅದೂ ಇದೂ ಮಾಡಲ್ಲ ಅಂತಾಯ್ತು' ಮತ್ತಷ್ಟು ಕಾಲೆಳೆದೆ. 

“ಏನೋಪ್ಪ. ಗೊತ್ತಿಲ್ಲ. ಮಾಡಬೇಕು ಅನ್ನಿಸಿದ್ರೆ ಮಾಡುವ ಇಲ್ಲಾಂದ್ರೆ ಇಲ್ಲ" 

'ಅದನ್ನೇ ಅಲ್ವ ನಾನೂ ಅಷ್ಟು ದಿನದಿಂದ ಹೇಳ್ತಿರೋದು' ಎಂದ್ಹೇಳಿದವಳು ಇದ್ದಕ್ಕಿದ್ದಂತೆ 'ಲೋ ಸಾಗರ ನಿನ್ನ ಬ್ಲಡ್ ಗ್ರೂಪ್ ಯಾವ್ದೋ' ಎಂದು ಕೇಳಿಬಿಟ್ಟೆ. ಕೇಳಿದ ನಂತರ ತಪ್ಪು ಮಾಡಿದನೇನೋ ಅನ್ನಿಸಿಬಿಟ್ಟಿತು. 

“ಎ ಪಾಸಿಟಿವ್. ಯಾಕೀಗ ಕೇಳಿದೆ" 

'ಏನಿಲ್ಲ ಸುಮ್ನೆ ಕೇಳಬೇಕು ಅನ್ನಿಸ್ತು' ಸಡನ್ನಾಗಿ ಬ್ಲಡ್ ಗ್ರೂಪ್ ಕೇಳಿದ್ಯಾಕಂತ ನನ್ನ ಮನಸ್ಸಿಗೆ ಹೊಳೆದಿತ್ತು. ಅವನ ಮನಸ್ಸಿಗೆ ಹೊಳೆಯದಿರಲಪ್ಪ ದೇವರೇ ಅಂದುಕೊಂಡಿದ್ದು ಸುಳ್ಳಾಗಿತ್ತು. ಎಷ್ಟೇ ಆಗ್ಲಿ ಅವನೂ ಡಾಕ್ಟರ್ರೇ ಅಲ್ಲವೇ. 

“ಗೊತ್ತಾಯ್ತು ಬಿಡು" 

'ಮ್' 

“ಹೋಗ್ಲಿ ಬಿಡು ನಿನ್ನ ಯೋಚನೇಲೋ ತಪ್ಪೇನಿಲ್ಲ. 
ಅಕಸ್ಮಾತ್ ನಾವು ಸೆಕ್ಸ್ ಮಾಡಿ ಅಕಸ್ಮಾತ್ ನೀನು ನನ್ನಿಂದಾನೇ ಪ್ರೆಗ್ನೆಂಟ್ ಆಗಿಬಿಟ್ರೆ ಬ್ಲಡ್ ಗ್ರೂಪ್ ಆದ್ರೂ ಮ್ಯಾಚ್ ಆಗಬೇಕಲ್ಲ. ಇಲ್ಲಾಂದ್ರೆ ಅಬಾರ್ಷನ್ ಮಾಡಿಸಿಕೊಳ್ಳಲೇಬೇಕಾಗ್ತದೆ!” 

'ಹು' ಅಂದವಳೇ ಜೋರಾಗಿ ನಕ್ಕುಬಿಟ್ಟೆ. 

“ಯಾಕೀ ನಗು?” 

'ಇನ್ನೇನೋ ಮತ್ತೆ. ಎಲ್ಲಾ ಲೆಕ್ಕಾಚಾರ ಹಾಕಂಡು ಮಾತ್ರೆ ತಗಂಡು ಸೆಕ್ಸ್ ಮಾಡಿದ್ರೂ ನನಗಿನ್ನೂ ಮಕ್ಕಳಾಗಿಲ್ಲ. ಆಗ್ತವೆ ಅನ್ನೋ ನಂಬಿಕೇನೇ ಹೊರಟುಹೋಗಿದೆ. ಇನ್ನು ನಿನ್ ಜೊತೆ ಒಂದ್ ದಿನ ಸೆಕ್ಸ್ ಮಾಡಿದಾಕ್ಷಣ ಮಕ್ಕಳಾಗಿಬಿಡ್ತಾವ! ಅಫ್ ಕೋರ್ಸ್ ಆಗಬಾರದು ಅಂತೇನೂ ಇಲ್ಲ. ನನ್ ಗರ್ಭ ಅಷ್ಟೊಂದೆಲ್ಲ ಫಲವತ್ತಾಗೇನೂ ಇಲ್ಲ ಬಿಡು' ಬೇಸರದಿಂದ ಹೇಳಿದೆ. 

“ಅಯ್ಯ ನಿನ್ನ. ಹಂಗ್ಯಾಕೆ ಗೋಳಾಡ್ತಿ. ನೀನೇ ಹೇಳ್ತಿದ್ದೆಯಲ್ಲ ಸೆಕ್ಸ್ ಮಾಡೋದೆ ಅಪರೂಪ ಅಂತ. ಟ್ರೀಟ್ಮೆಂಟ್ ಅಂತೂ ತಗೊಳ್ತಿದ್ದೀಯ. ಕರೆಕ್ಟಾಗಿ ಸೆಕ್ಸ್ ಮಾಡ್ಕಂಡಿದ್ರೆ ಆಯ್ತು" 

'ಹು ಕಣೋ. ಒಂದೇನ್ ಗೊತ್ತ ಈಗೊಂದ್ ವಾರದಿಂದ – ಅದೇ ನಾನೂ ರಾಜೀವು ರಣಭಯಂಕರವಾಗಿ ಕಿತ್ತಾಡಿದ ಮೇಲೆ ಬದಲಾಗಿದ್ದಾರೆ. ಸೆಕ್ಸ್ ಗೆ ಆಸಕ್ತಿ ತೋರಿಸ್ತಿದ್ದಾರೆ. ಬಹುಶಃ ಅವರಿಗೂ ಮಕ್ಕಳಾಗಬೇಕೀಗ ಅಂತನ್ನಿಸಲು ಶುರುವಾಗಿರಬೇಕು' 

“ಗುಡ್ ಗುಡ್. ಹಂಗಾರೆ ಈ ಸಲ ಪ್ರೆಗ್ನೆಂಟ್ ಆಗಿದ್ರೂ ಆಗಿರಬಹುದು ಅನ್ನು" 

'ಇಲ್ವೋ ಈ ಸಲ ಲೇಟಾಯ್ತು. ಇನ್ನೊಂದತ್ತು ದಿನ ಮುಂಚಿತವಾಗಿಯಾದರೂ ಮಾಡಬೇಕಿತ್ತು. ಮುಂದಿನ ಸಲ ನೋಡಬೇಕು. ಹಿಂಸೆಯ ಕೆಲಸ ಅಂದ್ರೆ ನನ್ನ ಪಿರೀಯಡ್ಸು ತುಂಬಾ ಇರ್ರೆಗುಲರ್ರು. ಪ್ರೆಗ್ನೆಂಟ್ ಆಗೇ ಬಿಟ್ಟಿದೀನೇನೋ ಅನ್ನುವಂಗೆ ಅನ್ನಿಸಿಬಿಡುತ್ತೆ. ಒಂದೂವರೆ ತಿಂಗಳವರೆಗಂತೂ ಏನೂ ಪರೀಕ್ಷಿಸಲು ಹೋಗಿರಲ್ಲ ನಾನು. ಅದಾದ ಮೇಲೆ ವಾರಕ್ಕೊಮ್ಮೆ ಪ್ರೆಗ್ನೆನ್ಸಿ ಕಿಟ್ ತರೋದು ಪರೀಕ್ಷಿಸೋದು ಬೇಜಾರಾಗೋದು. ಬಹುಶಃ ಮಕ್ಕಳು ಪಡೆಯೋ ಭಾಗ್ಯ ಇಲ್ವೋ ಏನೋ' 

“ಆಗ್ತದೆ ಸುಮ್ನಿರೆ. ತಲೆಕೆಡಿಸ್ಕೋಬೇಡ" 

'ಏನೋ ನೋಡುವ. ನಿನ್ ಬಾಯ್ ಹಾರೈಕೆಯಂತೆ ಆಗಲಿ. ನಾಳೇನೇ ಆದ್ರೆ ಇನ್ನೂ ಖುಷಿ' 

“ಬೇಡ್ವೇ. ಅದು ಇಬ್ಬರಿಗೂ ಹಿಂಸೆಯ ಸಂಗತಿಯಾಗೋಗ್ತದೆ. ಅದರಲ್ಲೂ ನನಗೆ ಅಷ್ಟೆಲ್ಲ ಅರಗಿಸಿಕೊಳ್ಳೋ ಶಕ್ತಿ ಖಂಡಿತ ಇಲ್ಲ" 

'ಹೋಗ್ಲಿ ಬಿಡೋ ಸಾರಿ. ಮನಸ್ಸು ಹಾಳು ಮಾಡಿಕೋಬೇಡ. ಚೆನ್ನಾಗಿ ನಿದ್ರೆ ಮಾಡು. ನಾಳೆ ಇನ್ನೂ ಎಷ್ಟೆಲ್ಲ ಮಾತಾಡೋದಿದೆ, ಮಾಡೋದಿದೆ....' 

“ಹು. ಅಲ್ವೇ ಎಷ್ಟು ಘಂಟೆಗೆ ಬರ್ಲಿ ಅಂತ ಹೇಳಲೇ ಇಲ್ಲ" 

'಻ಅಲ್ವ! ನೀ ಮೈಸೂರಿಗೆ ಬಂದು ಎಲ್ಲಿರ್ತೀಯೋ?' 

“ಅಯ್ಯೋ ಇರೋಕೇನೆ ಜಾಗಕ್ಕೆ ಕೊರತೆ. ನಮ್ ಫ್ರೆಂಡ್ಸು ಸುಮಾರ್ ಜನ ರೂಮ್ ಮಾಡ್ಕಂಡಿದ್ದಾರೆ. ಅಲ್ಲಿದ್ದು ಅವರದ್ಯಾರ್ದಾದ್ರೂ ಬೈಕೆತ್ತಿಕೊಂಡು ಬರ್ತೀನಿ" 

'ಹಂಗಾದ್ರೆ ಸರಿ. ಇವರು ಏಳೂವರೆ ಅಷ್ಟೊತ್ತಿಗೆಲ್ಲ ಹೊರಡ್ತಾರೆ. ಇವರು ಹೋದ ಮೇಲೆ ಮೆಸೇಜ್ ಹಾಕ್ತೀನಿ. ಬಾ ಎಂಟು ಘಂಟೆ ಅಷ್ಟೊತ್ತಿಗೆ' 

“ಸರಿ. ಅಲ್ವೇ ಎಲ್ಲಿಗೆ ಬರಲಿ. ನಿನ್ ಮನೆ ಅಡ್ರೆಸ್ ಮೆಸೇಜ್ ಮಾಡು" 

'ಮೆಸೇಜ್ ಮಾಡಿದ್ರೆ ಹೆಂಗೋ ಗೊತ್ತಾಗ್ತದೆ? ಒಂಟಿಕೊಪ್ಪಲು ದೇವಸ್ಥಾನ ಗೊತ್ತಲ್ವ?' 

“ಹು" 

'ಅದರತ್ರ ಬಂದು ಫೋನ್ ಮಾಡು. ಹೆಂಗ್ ಬರ್ಬೇಕು ಅಂತ ಹೇಳ್ತೀನಿ' 

“ಹು" 

'ಸರಿ ಕಣೋ ಮಲಗು. ಇನ್ನೊಂದ್ವಿಷಯ ಸಾಗರ. ನಾಳೆ ಏನು ಬಟ್ಟೆ ಹಾಕೊಂಡಿರ್ಲೋ....' 

“ಏನೂ ಬೇಡ....” 

'ಥೂ ಪೋಲಿ. ಸರಿ ಬಿಡು ಸೀರೆ ಹಾಕೋತೀನಿ. ನಿನ್ ಇಷ್ಟದ ಬಣ್ಣದ್ದು' 

“ಕೆಂಪು?” 

'ಹು' 

“ಸರಿ ಕಣೇ. ಕಣ್ ಎಳೀತಿದೆ. ಗುಡ್ ನೈಟ್. ಲವ್ ಯು" 

'ಲವ್ ಯು ಟೂ ಕಣೋ. ಗುಡ್ ನೈಟ್' ಟಿವಿ ನೋಡುತ್ತಿದ್ದ ರಾಜೀವ ರೂಮಿಗೆ ಬಂದರು. ಮೆಸೇಜುಗಳನ್ನಷ್ಟೊತ್ತಿಗೆ ಡಿಲೀಟ್ ಮಾಡಿದ್ದೆ. ರಾಜೀವ ಬಂದವರೇ ನನ್ನ ಮೇಲೆ ಮಲಗಿ ತುಟಿಗೊಂದು ಮುತ್ತು ಕೊಟ್ಟರು. ತುಟಿಗಳು ಬಿಡುವಾದ ಬಳಿಕ 'ಇವತ್ ಬೇಡಾರೀ. ಯಾಕೋ ಮೂಡಿಲ್ಲ' ಎಂದೆ. 

“ಇದೇನಪ್ಪ ಅಪರೂಪಕ್ಕೆ ನಿನಗೆ ಮೂಡಿಲ್ಲ" ಎಂದು ಅಚ್ಚರಿ ತೋರುತ್ತಾ ಪಕ್ಕಕ್ಕೆ ಜಾರಿದರು. “ನಂಗೂ ಮೂಡಿರಲಿಲ್ಲ. ಸುಮ್ನೆ ಒಂದ್ ಮುತ್ ಕೊಡುವ ಅನ್ನಿಸ್ತು" ಎಂದರು. 

'ತರ್ಲೆ' ಅಂತ ರಾಜಿಯ ತಲೆಗೊಂದು ಮೊಟಕಿ ಅವರ ತೋಳಿನ ಮೇಲೆ ತಲೆಯಿಟ್ಟು ನಿದ್ರೆ ಹೋದೆ.

ಮುಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

No comments:

Post a Comment