ಡಾ. ಅಶೋಕ್. ಕೆ. ಆರ್.
“ಎಲ್ಲಿಗೆದ್ದೋಗ್ತಿ.....ಮುಚ್ಕಂಡ್ ಕೂತ್ಕೊಳ್ಳೇ ಚಿನಾಲಿ" ಪುರುಷೋತ್ತಮನ ದನಿಗೆ ಬೆಚ್ಚಿ ಬಿದ್ದೆ. ಪುರುಷೋತ್ತಮನ ಪೊಸೆಸಿವ್ನೆಸ್ ಅನುಭವಿಸಿದ್ದೀನಿ. ಅವನು ಸಿಟ್ಟಿಗೆ ಬಂದು ನನಗೆ ಹೊಡೆದಿದ್ದೂ ಇದೆ. ಆದರೆ ಇವತ್ತಿನ ದನಿಯಲ್ಲವನು ಹಿಂದೆಂದೂ ಮಾತನಾಡಿರಲಿಲ್ಲ. ಇಲ್ಲಿ ಕುಳಿತಿರುವವನು ನಿಜ್ಜ ಅವನೇನಾ ಅಂತೆಲ್ಲ ಅನುಮಾನ ಮೂಡಿಬಿಟ್ಟಿತು. ಎದ್ದೋಗುವ ಮನಸ್ಸಾಗಲಿಲ್ಲ ಈ ಚಿನಾಲಿಗೆ. ಕುಳಿತುಕೊಂಡೆ. ಜೋರಾಗಿ ಉಸಿರು ಬಿಡುತ್ತಿದ್ದ. ಸಿಗರೇಟಿನ ಘಮದ ಜೊತೆಗೆ ಮತ್ತೊಂದು ದುರ್ವಾಸನೆಯೂ ಸೇರಿಕೊಂಡಿತ್ತು. ಮೊದಲಿಗದು ಏನೆಂದು ತಿಳಿಯಲಿಲ್ಲ. ತೀರ ಅಪರಿಚಿತ ವಾಸನೆಯೂ ಆಗಿರಲಿಲ್ಲ. ಕ್ಷಣದ ನಂತರ ಮನೆಯಲ್ಲಿ ಅಪ್ಪ ಕುಡಿಯುವಾಗ ಬರುತ್ತಿದ್ದ ವಾಸನೆಯದು ಎಂದು ತಿಳಿಯಿತು. ಅಲ್ಲಿಯವರೆಗೂ ಒಂದು ತೊಟ್ಟನ್ನೂ ಬಾಯಿಗೆ ಬಿಟ್ಟುಕೊಳ್ಳದ ನನ್ನ ಪುರುಷೋತ್ತಮ ಕುಡಿದು ಬಂದಿದ್ದ.... ಅವನು ಕುಡಿದಿರೋದಕ್ಕೆ ನಾನೇ ಕಾರಣ.....ಪಾಪವೆನ್ನಿಸಿತ್ತು ಅವನ ಬಗ್ಗೆ. ಆದರೆ ನಿಜ ಹೇಳ್ತೀನಿ ಸಾಗರ ಅಷ್ಟೆಲ್ಲ ಪಾಪವೆಂಬ ಭಾವ ಅವನ ಬಗ್ಗೆ ಮೂಡಿದ ಕ್ಷಣದಲ್ಲೂ ನಾ ಬೇರೆಯವರನ್ನ ಮದುವೆಯಾಗೋ ನಿರ್ಧಾರ ತೆಗೆದುಕೊಂಡಿರೋದು ತಪ್ಪು.... ನಾ ಪ್ರೀತಿಸಿರೋದು ಪುರುಷೋತ್ತಮನನ್ನು..... ಅವನನ್ನು ಬಿಟ್ಟು ಬೇರೆಯವರನ್ನು ಮದುವೆಯಾಗಬಾರದು ನಾನು..... ಇವನಲ್ಲೀಗ ಕ್ಷಮೆ ಕೇಳಿ ಇವನನ್ನೇ ಮದುವೆಯಾಗಬೇಕು..... ಉಹ್ಞೂ.... ಈ ರೀತಿಯ ಒಂದೇ ಒಂದು ಯೋಚನೆಯೂ ನನ್ನಲ್ಲಿ ತೇಲಿಹೋಗುವ ಮೋಡದಂತೆಯೂ ಮೂಡಲಿಲ್ಲ. ಅವನ ಮೇಲಿನ ಪ್ರೀತಿ ಸತ್ತೋಯ್ತ..... ಇಲ್ಲ..... ಇವತ್ತಿಗೂ ಅವನ ಮೇಲೆ ನನಗೆ ಪ್ರೀತಿ ಇದ್ದೇ ಇದೆ. ಅವನಷ್ಟು ಉತ್ಕಟವಾಗಿ ನನ್ನನ್ನು ಪ್ರೀತಿಸೋಕೆ ಯಾರಿಂದಲೂ ಸಾಧ್ಯವಿಲ್ಲ....... ಆ ಕ್ಷಣದಲ್ಲಿ..... ನನ್ನ ಪುರುಷೋತ್ತಮ ನನ್ನಿಂದಾಗಿ ಕುಡಿದು ಬಂದಿದ್ದಾನೆ ಅನ್ನೋ ಸತ್ಯ ಅರಿವಾದ ಸಂದರ್ಭದಲ್ಲಿ ಅವನ ಮೇಲಿನ ಪ್ರೀತಿ ಹೆಚ್ಚಾಗಲಿಲ್ಲ..... ನನ್ನ ನಿರ್ಧಾರವನ್ನು ಪುನರ್ ಪರಿಶೀಲಿಸುವ ಯೋಚನೆಯೂ ಹತ್ತಿರದಲ್ಲಿ ಸುಳಿಯಲಿಲ್ಲ.... ಅವನು ಇನ್ನೂ ಏನೇನು ಮಾಡಬಹುದು ಎನ್ನುವುದನ್ನು ಕಲ್ಪನೆಯೂ ಮಾಡಿಕೊಳ್ಳದ ನಾನು ಇನ್ನೂ ಅನೇಕನೇಕ ತಪ್ಪುಗಳನ್ನು ಅವತ್ತು ಮಾಡಿದೆ. ಅದನ್ನೆಲ್ಲ ಕೇಳಿ ನೀ ನಗದೇ ಹೋದರೆ ಹೇಳ್ತೀನಿ....'
“ಪಾಪ ಇಷ್ಟೊಂದು ಗಂಭೀರದ ವಿಷಯಗಳನ್ನೇಳುವಾಗ ನಗೋಕಾಗ್ತದಾ? ಹೇಳು"
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.