Sep 8, 2019

ಒಂದು ಬೊಗಸೆ ಪ್ರೀತಿ - 30

ಡಾ. ಅಶೋಕ್.‌ ಕೆ. ಆರ್.‌
'ಅದೊಂದ್ ದೊಡ್ ಕತೆ. ದೀಪಾವಳಿ ಹಬ್ಬದ ದಿನ. ನನಗೆ ಅರ್ಧ ದಿನ ಡ್ಯೂಟಿಯಿತ್ತು. ಡ್ಯೂಟಿ ಮುಗಿಸಿ ಬರಬೇಕಾದರೆ ಎಂದಿನಂತೆ ಪರಶು ಜೊತೆಯಾಗಿದ್ದ. ಆಸ್ಪತ್ರೆಯ ಹತ್ತಿರ ಅಗ್ರಹಾರ ಸರ್ಕಲ್ಲಿನ ಬಳಿ ನಿಂತು ಮಾತನಾಡ್ತಿದ್ದೊ. ಒಂದರ್ಧ ಘಂಟೆಯ ಮಾತುಕತೆಯ ನಂತರ ಹೊರಡುವಾಗ ಅವನ ಗಾಡಿ ಸ್ಟಾರ್ಟೇ ಆಗಲಿಲ್ಲ. ಹಬ್ಬದ ದಿನ, ಹತ್ತಿರದ ಮೆಕ್ಯಾನಿಕ್ಕುಗಳ್ಯಾರೂ ಅಂಗಡಿ ತೆರೆದಿರಲಿಲ್ಲ. ಹತ್ತಿರದಲ್ಲೇ ಅವನ ಸ್ನೇಹಿತನ ಮನೆಯಿತ್ತು. ಅಲ್ಲಿ ಬೈಕನ್ನು ನಿಲ್ಲಿಸಿ ನನ್ನ ಸ್ಕೂಟರ್ ಹತ್ತಿಕೊಂಡ. ರಸ್ತೆಗಳು ಖಾಲಿಯಿದ್ವು. ವೇಗವಾಗಿ ಗಾಡಿ ಓಡಿಸ್ತಿದ್ದೆ. ಆತ ಬಲಗೈಯನ್ನು ನನ್ನ ತೊಡೆಯ ಮೇಲಿಟ್ಟಿದ್ದ, ಎಡಗೈ ನನ್ನ ಸೊಂಟವನ್ನು ಬಳಸಿತ್ತು. ತಲೆಯನ್ನು ನನ್ನ ಕತ್ತಿನ ಮೇಲಿಟ್ಟು ಮಾತನಾಡುತ್ತಿದ್ದ. ನೋಡಿದವರಿಗೆ ಯಾರಿಗೇ ಆದರೂ ಪ್ರೇಮಿಗಳೆಂದು ತಿಳಿಯುವಂತಿತ್ತು. ಅವನನ್ನು ಮನೆಗೆ ಬಿಟ್ಟು ಮನೆ ತಲುಪಿದೆ. ನಮ್ಮ ದೊಡ್ಡಪ್ಪ ಮನೆಗೆ ಬಂದಿದ್ದರು. ಅವರು ಹಂಗೆಲ್ಲ ಬರೋರಲ್ಲ, ಅವರಿಗೂ ನಮಗೂ ಅಷ್ಟಕಷ್ಟೇ. ಅದರಲ್ಲೂ ಹಬ್ಬದ ದಿನವೇ ಬಂದಿದ್ದಾರೆಂದ ಮೇಲೆ ಏನೋ ವಿಶೇಷವಿರಲೇಬೇಕು ಅಂದುಕೊಂಡೆ. ಅಪ್ಪ ಅಮ್ಮನ ಕಡೆ ನೋಡಿದೆ, ಇಬ್ಬರ ಮೊಗದಲ್ಲೂ ಬೀದಿಗೆಲ್ಲ ಹಂಚುವಷ್ಟು ಸಿಟ್ಟಿತ್ತು. ಓಹೋ ಇದು ನಂದೇ ವಿಷಯ ಅಂದುಕೊಂಡೆ. 'ನಿಮ್ ದೊಡ್ಡಪ್ಪ ಒಂದ್ ಸುದ್ದಿ ತಗಂಡ್ ಬಂದವ್ರೆ' ಅಂದ್ರು ಅಪ್ಪ. ಏನು ಅಂದೆ. 'ಯಾವ್ದೋ ಹುಡುಗನ್ನ ಕೂರಿಸಿಕೊಂಡು ಹೋಗ್ತಿದ್ಯಂತಲ್ಲ ಯಾರದು' ಅಪ್ಪ ಅವರ ಮುದ್ದಿನ ಮಗಳೊಡನೆ ಈ ರೀತಿ ಮಾತಾಡಬಲ್ಲರು ಅನ್ನೋ ಕಲ್ಪನೆ ಕೂಡ ಅವತ್ತಿನವರೆಗೆ ನನಗಿರಲಿಲ್ಲ. ಅವನಾ, ಪುರುಷೋತ್ತಮ್ ಅಂತ. ಅವನ ಗಾಡಿ ಕೆಟ್ಟಿತ್ತು. ಅವನನ್ನು ಮನೆಗೆ ಬಿಟ್ಟು ಬಂದೆ. 'ಫ್ರೆಂಡು ಅಂತೆಲ್ಲ ಹೇಳ್ಬೇಡ. ನೀವಿಬ್ರೂ ಅದೆಷ್ಟು ಕೆಟ್ಟದಾಗಿ ಕುಳಿತುಕೊಂಡು ಹೋಗ್ತಿದ್ರಿ ಅಂತ ನೋಡಿದ್ದೀನಿ ನಾನು' ದೊಡ್ಡಪ್ಪ ಗೇಲಿಯ ದನಿಯಲ್ಲಿ ಹೇಳಿದರು. ಅವರ ಕಡೆಗೊಮ್ಮೆ ದುರುಗುಟ್ಟಿ ನೋಡಿ ನಾನೆಲ್ಲಿ ಹೇಳಿದೆ ಅವನು ನನ್ನ ಫ್ರೆಂಡು ಅಂತ? ಅವನು ನನ್ನ ಲವರ್ರು. ಅಂದಹಾಗೆ ನಾವಿಬ್ರೂ ಕೆಟ್ಟದಾಗಿ ಕುಳಿತುಕೊಂಡು ಹೋಗ್ತಿರಲಿಲ್ಲ. ಆತ್ಮೀಯವಾಗಿ ಕುಳಿತುಕೊಂಡಿದ್ದೋ ಅಷ್ಟೇ ಎಂದೆ. ಅಷ್ಟು ಧೈರ್ಯವಾಗಿ ಹೇಗೆ ಹೇಳಿದೆ ಅಂತ ಇವತ್ತಿಗೂ ಅಚ್ಚರಿ ನನಗೆ. ನಾನೇ ಬಾಯಿಬಿಟ್ಟು ಸತ್ಯ ಹೇಳಿದಮೇಲೆ ದೊಡ್ಡಪ್ಪನಿಗೆ ಏನು ಹೇಳಬೇಕೆಂದು ತಿಳಿಯಲಿಲ್ಲ. ಹುಷಾರು ಕಣಪ್ಪ ಅಂತ ನನ್ನಪ್ಪನಿಗೆ ಹೇಳಿ ಹೊರಟುಬಿಟ್ಟರು. ನಂಗಿವತ್ತಿಗೂ ದೊಡ್ಡಪ್ಪನ ಮೇಲಿರೋ ಸಿಟ್ಟೆಂದರೆ ಹಬ್ಬ ಮುಗಿಯೋವರೆಗಾದರೂ ಕಾಯಬಹುದಿತ್ತು. ಪಟಾಕಿ ಹಚ್ಚೋದೆಂದರೆ ನನಗೆ ಪ್ರಾಣ. ಅವತ್ತು ದೀಪ ಕೂಡ ಹಚ್ಚಲಿಲ್ಲ. ರೂಮಿಗೋಗಿ ಬಾಗಿಲಾಕಿಕೊಂಡು ಪರಶುಗೆ ಫೋನ್ ಮಾಡಿ ಹಿಂಗಿಗಾಯ್ತು ಅಂತ ಹೇಳಿದೆ' 

ಸಾಗರ ಜೋರಾಗಿ ನಕ್ಕುಬಿಟ್ಟ. 'ಯಾಕೋ ಏನಾಯ್ತು' ಅಂದೆ. 

“ಅಲ್ವೆ. ಆಗಷ್ಟೇ ಸಿಕ್ಕಾಕಂಡಿದ್ದಿ. ಅಷ್ಟು ಅವಸರದಲ್ಲಿ ಹೋಗಿ ಫೋನ್ ಮಾಡಿದರೆ ಮನೆಯವರಿಗೆ ಕೇಳಿಸಿ ಇನ್ನೂ ರಾದ್ಧಾಂತ ಆಗೋದಿಲ್ವ!”

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

'ಪಕ್ಕದಲ್ಲಿ ಮಲಗಿರೋರಿಗೂ ಕೇಳಿಸದಷ್ಟು ಮೆಲ್ಲಗೆ ಮಾತಾಡೋದನೆಲ್ಲ ಪ್ರೀತಿ ಕಲಿಸಿಬಿಡುತ್ತೆ! ಇನ್ನೊಂದ್ ವಿಷಯ ಗೊತ್ತಾ ನಿಂಗೆ. ಎರಡನೆ ಎಂಬಿಬಿಎಸ್ ನಲ್ಲಿದ್ದಾಗಲೇ ಪರಶು ನನಗೊಂದು ಮೊಬೈಲ್ ಕೊಡಿಸಿದ್ದ. ಅಪ್ಪ ನನಗೆ ಮೊಬೈಲ್ ಕೊಡಿಸಿದ್ದು ನಾ ಕೊನೇ ವರ್ಷಕ್ಕೆ ಬಂದಾಗ. ಹೆಚ್ಚು ಕಡಿಮೆ ಎರಡು ವರ್ಷ ಮೊಬೈಲ್ ಬಳಸಿದ್ದೆ. ಮನೆಯಲ್ಲೇ ಬಳಸಿದ್ದೆ. ರಾತ್ರಿ ಪರಶು ಜೊತೆ ಮಾತನಾಡುತ್ತಿದ್ದೆ. ನಮ್ಮ ಮನೆಯವರಿಗೆ ಗೊತ್ತೇ ಆಗದಂತೆ ಎರಡು ವರ್ಷ ಮಾತನಾಡಿದ್ದೆ!' 

“ಓಹೋ ಭಲೇ ಟ್ಯಾಲೆಂಟೆಡ್ಡು ಬಿಡವ್ವ" 

'ಹು ಹು. ಆ ಟ್ಯಾಲೆಂಟುಗಳಿಗೆಲ್ಲ ಅನುಭವಿಸೋ ಕಾಲ ಈಗ ಬಂದಿತ್ತು' 

“ಅಂತದ್ದೇನಾಯ್ತು" 

'ಅಂತದ್ದೇನಾಯ್ತ! ಒಂದಾ ಎರಡಾ. ವಿಷಯ ಗೊತ್ತಾಗಿ ಒಂದೆರಡು ದಿನದವರೆಗೆ ಮನೆಯಲ್ಲಿ ಮೌನ. ತಮ್ಮ ಮಾತ್ರ ನನ್ನ ಜೊತೆ ಮಾತನಾಡುತ್ತಿದ್ದ. ಭಾನುವಾರ ಬಂತು. ಡ್ಯೂಟಿ ಮುಗಿಸಿ ಮನೆಗೆ ಬೇಗ ಬಂದೆ. ಅಪ್ಪ ಅಮ್ಮ ಇಬ್ಬರೂ ಚರ್ಚಿಸಿ ನನ್ನೊಡನೆ ಮಾತನಾಡಲು ನಿರ್ಧರಿಸಿದ್ದರು ಅನ್ನಿಸುತ್ತೆ. ಊಟವಾದ ನಂತರ ಕೂರಿಸಿಕೊಂಡರು. ತಮ್ಮ ರೂಮಿನಲ್ಲಿದ್ದ. 

“ಹೇಳಮ್ಮ ಅವನ ಬಗ್ಗೆ" ಅಂದರು ಅಮ್ಮ. 

'ಪರಶು.....ಪುರುಷೋತ್ತಮ ಅಂತ. ಒಂದೇ ಸ್ಕೂಲಲ್ಲಿ ಓದಿದ್ದು. ಪಿಯುಸೀಲಿ ಒಂದೇ ಕ್ಲಾಸು....' 

“ಮೆಡಿಕಲ್ಲೂ ಜೊತೆಗೆ ಮಾಡಿದ್ದಾ?” ಅಪ್ಪನ ಪ್ರಶ್ನೆ. 

'ಇಲ್ಲ. ಅವನು ಡಿಗ್ರಿಗೆ ಸೇರಿಕೊಂಡ' 

“ಮತ್ ಲವ್ ಆಗಿದ್ ಎಲ್ಲಿ" 

'ಪಿಯುಸೀಲಿ' 

“ಪಿಯುಸೀಲಿ" ಅಪ್ಪನ ವ್ಯಂಗ್ಯ. 

'ಹು' 

“ಯಾವ್ ಜಾತಿ?” ಅಮ್ಮ ಮಾತೇ ನಿಲ್ಲಿಸಿಬಿಟ್ಟಂತೆ ಮೌನವಾಗಿ ಕುಳಿತಿದ್ದರು. ವಿಷಯ ಯಾವ ಕಡೆಗೆ ಸಾಗುತ್ತಿದೆ ಅಂತ ಅರಿವಾಗುತ್ತಿತ್ತು. 

'ಗೊತ್ತಿಲ್ಲ' 

“ಐದು ವರ್ಷದಿಂದ ಜೊತೇಲಿದ್ಕೊಂಡು ಯಾವ್ ಜಾತಿ ಅಂತ ಗೊತ್ತಿಲ್ವಂತೆ. ತಿಕ ಮುಚ್ಕಂಡ್ ಹೇಳೇ ಚಿನಾಲಿ" ಅಪ್ಪನ ಮಾತಿಗೆ ಬೆಚ್ಚಿಬಿದ್ದೆ. ಮನೆಯಲ್ಲವರು ಆ ರೀತಿ ಭಾಷೆ ಬಳಸಿ ಮಾತನಾಡಬಹುದು ಅಂತ ಊಹೆಯೂ ಮಾಡಿರಲಿಲ್ಲ. ಚಿನಾಲಿ ಅನ್ನೋ ಪದಾನ ಇದೆರಡನೇ ಸಲ ಕೇಳ್ತಿದ್ದಿದ್ದು. ಮೊದಲ ಸಲ ಪರಶು ಆ ಪದ ಬಳಸಿ ಬಯ್ದಿದ್ದ. 

'ಒಕ್ಕಲಿಗರಿರಬೇಕು' 

“ಓಹೋಹೋ ಗೌಡ್ರು. ಹಂಗಾದ್ರೆ ಮರೆತುಬಿಡು. ನಾ ನಿಮ್ಮ ಅಮ್ಮನನ್ನು ಕಟ್ಕೊಂಡು ಅನುಭವಿಸಿದ ಮರ್ಯಾದೆಯೇ ಸಾಕು. ಅಂತ ಮರ್ಯಾದೆ ನನ್ನ ಮಗಳಿಗೆ ಸಿಗೋದು ಖಂಡಿತ ಬೇಡ" 

'ಆ ಮರ್ಯಾದೆ ಎಲ್ಲ ಅನುಭವಿಸಿದ ಮೇಲೆ ನೀವು ಅಮ್ಮ ಸುಖವಾಗೇ ಇದ್ದೀರಲ್ಲ. ನಾನೂ ಆ ಎಲ್ಲಾ ಮರ್ಯಾದೆ ಅನುಭವಿಸಿ ನಂತರ ಸುಖವಾಗೇ ಇರ್ತೀನಿ ಬಿಡಿ' ಗಟ್ಟಿ ದನಿಯಲ್ಲಿ ಮಾತನಾಡದಿದ್ದರೆ ಉಳಿಗಾಲವಿಲ್ಲ ಅಂತರಿವಾಗಿತ್ತು ನನಗೆ. ಮಗಳೀಗೆ ಧೃಡವಾಗಿ ಮಾತನಾಡುತ್ತಾಳೆ ಅಂತಂದುಕೊಂಡಿರಲಿಲ್ಲವೇನೋ ಅಪ್ಪ. ನನ್ನ ಮಾತುಗಳು ಸೃಜಿಸಿದ ಆಘಾತದಿಂದ ಹೊರಬರಲಾಗಲಿಲ್ಲ. “ಲೋಫರ್ ಮುಂಡೆ" ಅಂತ ಗೊಣಗಿಕೊಳ್ಳುತ್ತಾ ಮನೆಯಿಂದಾಚೆ ನಡೆದರು. ಅಮ್ಮನ ಕಣ್ಣಲ್ಲಿ ನೀರಿತ್ತು.

ನಿಮಗೀ ಕಾದಂಬರಿ ಮೆಚ್ಚುಗೆಯಾಗುತ್ತಿದ್ದಲ್ಲಿ 'ಹಿಂಗ್ಯಾಕೆ' ವೆಬ್ ಪುಟಕ್ಕೆ ಬೆಂಬಲವಾಗಿ ನಿಮ್ಮಿಂದ ಸಾಧ್ಯವಾದಷ್ಟು ಹಣವನ್ನು ಕಳಿಸಿಕೊಡಲು ಕೆಳಗಿರುವ ಲಿಂಕ್ ಕ್ಲಿಕ್ಕಿಸಿ.  ನಿಮ್ಮ ಬೆಂಬಲ ಮುಂದಿನ ದಿನಗಳಲ್ಲಿ ಈ ಕಾದಂಬರಿಯ ಇ - ಪುಸ್ತಕ ಉಚಿತವಾಗಿ ಲಭ್ಯವಾಗಿಸಲು ಸಹಕಾರಿಯಾಗಲಿದೆ.
* * *
ನಾಲ್ಕೈದು ವರ್ಷಗಳಿಂದ ಪ್ರೀತಿ ಪ್ರೇಮ ಅನ್ನೋದು ಎಷ್ಟು ಸುಮಧುರ ಭಾವನೆ ತಂದಿತ್ತೋ ಅದೆಲ್ಲವೂ ಮುಗಿದುಹೋದಂತಾಗಿತ್ತು. ಪರಶುವಿನ ಪ್ರೀತಿಯಲ್ಲಿ ಇನ್ನೂ ಏನೂ ಕೊರತೆಯಂತೂ ಇರಲಿಲ್ಲ ಅನ್ನು, ಆದರೆ ಪರಶುನನ್ನು ಪ್ರೀತಿಸಿದ್ದಕ್ಕಾಗಿಯೇ ಅಲ್ಲವಾ ಅಪ್ಪ ಹಿಂಗ್ ಆಡ್ತಿರೋದು, ಅಮ್ಮ ಮೂರೊತ್ತೂ ಅಳುತ್ತಾ ಕುಳಿತಿರೋದು ಅಂತನ್ನಿಸಲು ಪ್ರಾರಂಭವಾಯಿತು. ಇದರ ಜೊತೆಗೆ ಪರಶುವಿನ ಬೇಜವಾಬ್ದಾರಿತನ. ಉಹ್ಞೂ ಅವನಿಗೆ ಜವಾಬ್ದಾರಿ ಇರಲಿಲ್ಲ ಅನ್ನೋದು ಸರಿಯಲ್ಲ, ಎಲ್ಲಾ ಸರಿಹೋಗ್ತದೆ, ನಮ್ಮ ಪ್ರೀತಿಗೆ ಯಾರು ಅಡ್ಡಿ ಮಾಡಲು ಸಾಧ್ಯ ಅನ್ನುವ ಉದಾಸೀನ ಭಾವ. ಬರೋಬ್ಬರಿ ಐದೂವರೆ ವರುಷದ ಹಿಂದೆ ಪಿಯುಸಿಯಲ್ಲಿ ಪರಶುವಿನ ಲವ್ ಪ್ರಪೋಸಲ್ ಅನ್ನು ಒಪ್ಪಿಕೊಂಡಾಗ ನನ್ನಲ್ಲಾ ಭಾವವಿತ್ತು. ನನ್ನಪ್ಪ ಅಮ್ಮ ಕೂಡ ಲವ್ ಮಾಡೇ ಅದೂ ಅಂತರ್ಜಾತಿ ವಿವಾಹವನ್ನೇ ಆಗಿರೋದ್ರಿಂದ ನನ್ನ ಮದುವೆಗೆ ವಿರೋಧವಿರಲಾರದು ಎಂದುಕೊಂಡಿದ್ದೆ. ಆ ಕಲ್ಪನೆಯಿಂದ ಅಪ್ಪನ ಮಾತುಗಳು ನನ್ನನ್ನು ಹೊರತಂದಿದ್ದವು. ಪರಶು ಇನ್ನೂ ಅದೇ ವಿಲಾಸಿ ಕಲ್ಪನಾ ಲೋಕದಲ್ಲೇ ವಿಹರಿಸುತ್ತಿದ್ದ. ನಿಮ್ಮ ಮನೆಯಲ್ಲಿ ಮಾತಾಡು. ನಿನ್ನಕ್ಕನಿಗೆ ಹೇಳು, ಅಮ್ಮನಿಗೆ ಹೇಳು ಒಪ್ಪಿಸು, ಅದಕ್ಕೂ ಮೊದಲು ಒಂದ್ ಕೆಲಸ ಹುಡಿಕ್ಕೋ. ನಾ ಕಷ್ಟಪಟ್ಟು ನಮ್ಮ ಮನೆಯಲ್ಲಿ ಒಪ್ಪಿಸಿದ ಮೇಲೆ ಹುಡುಗ ಏನ್ ಕೆಲಸ ಅಂತ ಕೇಳಿದ್ರೆ ಅವರಿಗೆ ಹೇಳೋದಕ್ಕಾದ್ರೂ ಒಂದ್ ಕೆಲಸ ಹುಡುಕಿಕೊ...... ನಮ್ಮಿಬ್ಬರ ಭೇಟಿಯಲ್ಲಿ ನಡೆಯುತ್ತಿದ್ದ ಮಾತುಗಳಿವು. ಪ್ರೀತಿ ಪ್ರೇಮದ ಮಾತುಗಳೆಲ್ಲ ಮದುವೆ ಜವಾಬ್ದಾರಿ ಕೆಲಸದ ಮಾತುಗಳಾಗಿ ಬದಲಾಗಿಬಿಟ್ಟಿದ್ದೊ. 

"ನಾನೇನಾದ್ರೂ ಬ್ಯುಸಿನೆಸ್ ಮಾಡ್ತೀನಿ. ಸದ್ಯಕ್ಕೇನು ಆತುರ, ಇನ್ನೂ ವಯಸ್ಸಿದೆ, ನೀನು ಇಂಟರ್ನ್ ಶಿಪ್ ಮುಗಿಸು. ಆರಾಮಾಗಿ ಮಾತಾಡುವ. ನಿಮ್ಮ ಮನೆಯಲ್ಲೇನೂ ನಿನಗೆ ಹುಡುಗ ನೋಡ್ತಿಲ್ಲವಲ್ಲ. ನಿನ್ನ ಮೊಬೈಲು ಕಿತ್ತಿಟ್ಟಿಲ್ಲ, ನಿನ್ನ ಕೂಡಾಕಿಲ್ಲ. ಅಂದರೆ ನಿಮ್ಮ ಮನೆಯಲ್ಲಿ ತುಂಬಾ ವಿರೋಧವೇನೂ ಇರಲಾರದು ಬಿಡೆ. ಎಲ್ರೂ ಮನೇಲೂ ಲವ್ ಅಂದ ತಕ್ಷಣ ಒಂದಷ್ಟು ಉರಿದು ಬಿಳ್ತಾರಲ್ಲ ಹಂಗೆ ಉರಿದು ಬಿದ್ದಿದ್ದಾರೆ ಅಷ್ಟೇ. ಸರಿ ಹೋಗ್ತದೆ ಸುಮ್ನಿರು" ಅಂತಿದ್ದ. 

'ಹಂಗಲ್ವೋ. ಅಪ್ಪ ಅಮ್ಮ ಇಬ್ರೂ ನನ್ನ ಸರಿ ಮಾತನಾಡಿಸೋದೇ ಇಲ್ಲ ಈಗ. ಎಷ್ಟ್ ಬೇಜಾರ್ ಆಗ್ತದೆ ಗೊತ್ತಾ' 

“ಒಳ್ಳೇ ಕತೆಯಲ್ಲ. ನಮ್ಮ ಮನೇಲೂ ನಾವು ಒಬ್ಬರಿಗೊಬ್ಬರು ಮಾತಾಡಿ ಕೆಲವೊಮ್ಮೆ ವಾರಗಳೇ ಆಗಿಹೋಗಿರ್ತದೆ. ಬಾಗಿಲು ಹಾಕಳ್ಳಿ ಅಂತೇಳೋದನ್ನು ಹೊರತುಪಡಿಸಿ. ಅದ್ರಲ್ಲೇನಿದೆ ಅಚ್ಚರಿ" ಚಿಕ್ಕಂದಿನಿಂದ ಮನೆಯಲ್ಲಿ ತಾಸುಗಟ್ಟಲೆ ಹರಟುತ್ತಿದ್ದ ಮನೆಯವರ ಮೌನದ ಹಿಂದಿನ ನೋವು ಪುರುಷೋತ್ತಮನಿಗೆ ಅರ್ಥವೇ ಆಗಲಿಲ್ಲ. 

ಮನೇಲಿ ಗೊತ್ತಾಗಿದ್ರಿಂದ ಒಂದ್ ನೆಮ್ಮದಿಯೂ ಸಿಕ್ಕಿತ್ತು ನನಗೆ. ಭೇಟಿಯಾದಾಗಲೆಲ್ಲ ನಾನು ಗಾಬರಿಯಲ್ಲೇ ಇರುತ್ತಿದ್ದೆ, ಬೇಸರದಲ್ಲಿರುತ್ತಿದ್ದೆ. ಅವನಲ್ಲಿನ ಪೊಸೆಸಿವ್ನೆಸ್ ಮರೆಯಾಗಿ ಪ್ರೀತಿಯಷ್ಟೇ ಇರುತ್ತಿತ್ತು, ಒಂದಷ್ಟು ಹೆಚ್ಚೇ ಕಾಳಜಿ ವಹಿಸುತ್ತಿದ್ದ. ಕಾಲೇಜಲ್ಲಿ ಯಾರ ಜೊತೆ ಮಾತನಾಡಿದೆ, ಏನ್ ಕತೆ ಅಂತೆಲ್ಲ ಪೀಡಿಸುತ್ತಿರಲಿಲ್ಲ. ಬಹುಶಃ ನನ್ನ ಬೆನ್ನ ಹಿಂದೆ ಗೂಢಚಾರಿಕೆ ಮಾಡುವುದನ್ನೂ ಬಿಟ್ಟುಬಿಟ್ಟಿದ್ದ. ಹಿಂಗೇ ತಳ್ಳಾಡಿಕೊಂಡು ಇಂಟರ್ನ್ ಶಿಪ್ ಮುಗಿದೇ ಹೋಯಿತು. ದಿನಾ ಬೆಳಿಗ್ಗೆ ಕೆಲಸಕ್ಕೆ ಬಂದು ಮತ್ತೆ ಸಂಜೆ ವಾಪಸ್ಸಾದರೆ ಮನೆಯಲ್ಲೇನೇ ಸಮಸ್ಯೆಯಿದ್ದರೂ ಅಷ್ಟಾಗಿ ಕಾಡುವುದಿಲ್ಲ. ಬೆಳಿಗ್ಗೆಯಿಂದ ಸಂಜೆಯವರೆಗೆ ಮನೆಯಲ್ಲೇ ಇರುವುದೇ ನಿಜವಾದ ಸಮಸ್ಯೆ ಅಂತ ಅರಿವಾಯಿತು. 

ಅದೇನೇ ಲವ್ ಮಾಡ್ಲಿ, ಮನಸ್ಸು ಅದೆಷ್ಟೇ ಗೊಂದಲ್ಲದಲ್ಲಿರಲಿ ಓದುವುದನ್ನಂತೂ ಯಾವತ್ತಿಗೂ ಕಡೆಗಣಿಸಿದವಳಲ್ಲ ನಾನು...' 

“ಥೇಟ್ ನನ್ನ ಥರ ಻ಅನ್ನು" ಸಾಗರ ಹೇಳಿದ. ನಕ್ಕೆ. 

'ಹು. ಥೇಟು ನಿನ್ನ ಥರಾನೇ.... ಪಿಜಿ ಕೋಚಿಂಗಿಗೆ ಸೇರಲಿನ್ನೂ ಸಮಯವಿತ್ತು. ಪಿಜಿ ಎಂಟ್ರೆನ್ಸ್ ಪರೀಕ್ಷೆಗೆ ಬೇಕಾದ ಪುಸ್ತಕಗಳನ್ನೆಲ್ಲ ಖರೀದಿಸಿ ತುಂಬಾನೇ ಸೀರಿಯಸ್ಸಾಗಿ ಓದೋಕೆ ಶುರು ಮಾಡಿದ್ದೆ. ರೂಮಿನಿಂದ ಹೊರಬರುವುದೇ ಕಮ್ಮಿ ಆಗಿತ್ತು. ಪರಶುವಿನೊಡನೆ ಸಿಗುವುದು ಕಡಿಮೆಯಾಗಿತ್ತು. ಮೆಸೇಜು ಫೋನು ಮಾಡ್ಕೋತಿದ್ದೊ. ವಾರಕ್ಕೊಮ್ಮೆ ಭೇಟಿಯಾಗ್ತಿದ್ದೋ ಅಷ್ಟೆ. ಇದನ್ನೂ ನಮ್ಮ ಮನೆಯವರು ಅದರಲ್ಲೂ ನಮ್ಮಪ್ಪ ಸಹಿಸಲಿಲ್ಲ. ನಾ ರೂಮಲ್ಲಿ ಬಾಗಿಲಾಕಿಕೊಂಡು ಓದ್ತಿದ್ದರೆ "ನೋಡೋಗೆ ನಿನ್ನ ಮಗಳನ್ನ ಫೋನಲ್ಲಿ ಯಾರ್ ಜೊತೆ ಹರಟೆ ಕೊಚ್ತಿದ್ದಾಳೋ ಏನೋ. ಆ ಮುಂಡೆಮಗನ್ನೇ ಕರಸ್ಕೊಂಡಿದ್ರೂ ಕರಸ್ಕೊಂಡ್ಲೇ" ಅಂತ ನನಗೆ ಕೇಳಿಸುವಂತೆ ಜೋರು ಹೇಳೋರು. ಅಮ್ಮ ಪ್ರತಿಕ್ರಿಯಿಸುತ್ತಿರಲಿಲ್ಲ, ಻ಅಥವಾ ಮೆಲ್ಲಗಿನ ದನಿಯಲ್ಲಿ ನನಗೆ ತಿಳಿಯದಂತೆ ಏನೋ ಹೇಳುತ್ತಿದ್ದರು. ಎಷ್ಟ್ ದಿನ ಅಂತ ಈ ರೀತಿ ವ್ಯಂಗ್ಯದ ಮಾತುಗಳನ್ನು ಕೇಳಿಕೊಂಡು ಇರೋದು? 

ಆಗಷ್ಟೇ ಮೈಸೂರಿನಲ್ಲಿ ಕಾರ್ಪೋರೇಟ್ ಆಸ್ಪತ್ರೆಗಳು ಶುರುವಾಗ್ತಿದ್ದವು. 'ಹೆಲ್ತ್ ಫಸ್ಟ್' ಆಸ್ಪತ್ರೆ ಪ್ರಾರಂಭವಾಗಿ ಒಂದೆರಡು ತಿಂಗಳಾಗಿತ್ತು. ಎಂ.ಬಿ.ಬಿ.ಎಸ್ ಮುಗಿಸಿರೋ ಡ್ಯೂಟಿ ಡಾಕ್ಟರ್ ಬೇಕು ಅಂತ ಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದರು. ಮತ್ತೊಂದು ಯೋಚನೆ ಬರುವ ಮುಂಚೆ ಸಂದರ್ಶನಕ್ಕೆ ಹೋದೆ. ಸಂದರ್ಶನಕ್ಕೆ ಬಂದವರೇ ಕಡಿಮೆ ಮಂದಿ. ಬಂದವರೆಲ್ಲ ಆಯ್ಕೆಯಾದರು. ನನಗೆ ಎಮರ್ಜೆನ್ಸಿ ವಾರ್ಡಿಗೆ ಹಾಕಿದರು. 

ನಿಜ ಹೇಳಬೇಕೆಂದರೆ ಅಪ್ಪನಿಗೆ ನಾ ಓದಿ ಪಿಜಿ ಮಾಡಬೇಕೆಂದೇ ಮನಸ್ಸಲ್ಲಿದ್ದಿದ್ದು. ಎಲ್ಲ ಸರಿಯಾಗಿದ್ದರೆ, ಅಥವಾ ನನ್ನ ಪ್ರೀತಿಯ ವಿಷಯ ಗೊತ್ತಾಗದೇ ಹೋಗಿದ್ದರೆ ಈಗ್ಲೇ ಯಾವ್ ಕೆಲಸ? ಕುಂತ್ಕಂಡು ಓದ್ಕೋ ಪಿಜಿಗೆ, ದುಡ್ದು ಯಾರನ್ನ ಸಾಕಬೇಕಿದೆ ನೀನು ಅಂತಿದ್ದರೇನೋ. ಈಗವರಿಗೆ ನನ್ನ ಮುಖ ಮನೆಯಲ್ಲಿ ಕಾಣಿಸದೇ ಹೋಗುವುದೇ ಉತ್ತಮ ಻ಅನ್ನಿಸಿರಬೇಕು. ಹಿಂಗೆ ಕೆಲಸಕ್ಕೆ ಸೇರಿದ್ದೀನಿ ಅಂತೇಳಿದಾಗ ಏನಾದ್ರೂ ಮಾಡ್ಕಂಡು ಹಾಳಾಗ್ ಹೋಗು ಅಂತ ಆಶೀರ್ವಾದ ಮಾಡಿದರು. ಕೃತಾರ್ಥಳಾದಂತೆನಿಸಿತು. ನಕ್ಕು ಸುಮ್ಮನಾದೆ. 

ಪರಶು ಈಗ ದಿನಾ ಭೇಟಿಯಾಗ್ತಿದ್ದ. ಇನ್ನೂ ಜವಾಬ್ದಾರಿ ಬಂದಿರಲಿಲ್ಲ. ಸರಿ ಹೋಗ್ತದೆ ಅನ್ನೋ ಎಂದಿನ ಡೈಲಾಗು ಕೇಳಿ ಕೇಳಿ ನನಗೂ ಬೇಸತ್ತು ಹೋಗಿತ್ತು. ಒಂದಿನ ಡ್ಯೂಟಿ ಮುಗಿಸಿಕೊಂಡು ಸಂಜೆ ಐದರ ಸುಮಾರಿಗೆ ಮನೆಗೆ ಹಿಂದಿರುಗಿದಾಗ ಮನೆಯ ಮುಂದೆ ಎರಡು ಕಾರು ನಿಂತಿತ್ತು. ಯಾರೋ ಅಪ್ಪನ ಸ್ನೇಹಿತರಿರಬೇಕೆಂದು ಒಳ ನಡೆದೆ. ಅಪ್ಪ ಯಾರ ಮಾತಿಗೋ ಜೋರು ನಗುತ್ತಿದ್ದರು. ನನ್ನನ್ನು ಕಂಡಾಗ ನಗುವನ್ನೊಮ್ಮೆ ನಿಲ್ಲಿಸಿ "ಯಾಕಮ್ಮ ತಡವಾಯ್ತ ಇವತ್ತು" ಅಂತಂದು "ಇವಳೇ ನನ್ನ ಮಗಳು ಧರಣಿ" ಎಂದು ಹುಡುಗನೊಬ್ಬನ ಕಡೆ ನೋಡಿ ಹೇಳಿದರು. ಆ ಹುಡುಗ ನನ್ನೆಡೆಗೆ ನೋಡಿ ಒಮ್ಮೆ ನಕ್ಕ. ನನಗೆ ವಾಸ್ತವದ ಅರಿವಾಗಿದ್ದಾಗ! ಮಗಳಿಗೆ ಮನೇಲಿ ಗಂಡು ನೋಡ್ತಿದ್ದಾರೆ! ನನಗೇ ತಿಳಿಯದಂತೆ ನೋಡ್ತಿದ್ದಾರೆ! “ಹೋಗಮ್ಮ ರೆಡಿಯಾಗಿ ಬರೋಗು" ಅಂದರು ಅಪ್ಪ. ಅಮ್ಮನ ಕಡೆ ನೋಡಿದೆ. ಅವರಿಗೆ ಏನು ಮಾಡಬೇಕೆಂದೇ ತೋಚದ ಪರಿಸ್ಥಿತಿ. ನನ್ನ ಬೆನ್ನ ಹಿಂದೆಯೇ ರೂಮಿನೊಳಗೆ ಬಂದರು. 

'ಏನಿದು ನಾನ್ ಸೆನ್ಸು' 

“ನಂಗೇನಮ್ಮ ಗೊತ್ತು. ನಿಮ್ಮಪ್ಪ ಅರ್ಧ ಘಂಟೆ ಮುಂಚೆ ಕರೆದುಕೊಂಡು ಬಂದಾಗಲೇ ನನಗೆ ಗೊತ್ತಾಗಿದ್ದು". 

'ಅರ್ಧ ಘಂಟೆ ಮುಂಚೇನೇ ಫೋನ್ ಮಾಡಿ ಹೇಳೋಕೇನಾಗಿತ್ತು ದಾಡಿ' 

“ನಾ ಫೋನ್ ಮಾಡುವವಳಿದ್ದೆ. ನಿಮ್ಮಪ್ಪ ಫೋನ್ ಕಿತ್ತಿಟ್ಟುಕೊಂಡರು. ಧರಣಿಗೆ ಹೇಳಿದ್ರೆ ಮನೆಗೇ ಬರೋದಿಲ್ಲ ಬೇಡ ಹೇಳೋದು ಅಂತಂದ್ರು" 

'ನಿಮ್ಮೆಜಮಾನ್ರು ಅಷ್ಟೆಲ್ಲ ಸಭ್ಯತೆಯಿಂದ ಮಾತಾಡ್ತಾರ! ವಿಷಯ ಗೊತ್ತಾದ್ರೆ ನಿನ್ನ ಚಿನಾಲಿ ಮಗಳು ಆ ಮುಂಡೆಮಗನ ಜೊತೆ ಓಡೋಗಿಬಿಡ್ತಾಳೆ. ಮುಚ್ಕೊಂಡಿರು ಅಂದಿರ್ತಾರೆ ಅಲ್ವ' ನಗುತ್ತಾ ಹೇಳಿದೆ. ಅಮ್ಮ ತಲೆತಗ್ಗಿಸಿದ್ದಳು. 

ಮುಖ ತೊಳೆದುಕೊಳ್ಳಲು ಒಳಗೋದೆ. ಏನ್ ಮಾಡೋದು ಏನ್ ಮಾಡೋದು ಅಂತ ತಲೆಯಲ್ಲಿ ಸಾವಿರ ಯೋಚನೆ. ಹಾಲಿಗೆ ಹೋಗೋದೇ ಬೇಡ್ವಾ? ಅಥವಾ ಕಾಟಾಚಾರಕ್ಕೆ ಹೋಗಿ ಬಂದು ಬಿಡಲಾ? ಹೇಳ್ದೇ ಕೇಳ್ದೇ ಮನೆಯಿಂದ ಹೊರಹೋಗಿ ಬಿಡಲಾ? ಅಪ್ಪನಿಗೊಂದು ಬಿಸಿ ಮುಟ್ಟಿಸಬೇಕೆಂದು ಬಲವಾಗಿ ಅನ್ನಿಸಿತು. ಈ ವಿಷಯವಾಗಿ ಒಂದು ದಿನವೂ ಕುಳಿತು ಸಮಾಧಾನದಿಂದ ಮಾತನಾಡದೇ ಹೋದವರಿಗೆ ನನ್ನನ್ನು ನನ್ನ ಪ್ರೀತಿಯನ್ನು ಇಷ್ಟು ಕೆಟ್ಟದಾಗಿ ಅವಮಾನಿಸುವ ಹಕ್ಕೇನಿದೆ? ಇಷ್ಟೆಲ್ಲ ಅವಮಾನವಾದವರಿಗೆ ತಿರುಗಿ ಅವಮಾನಿಸುವ ಹಕ್ಕೂ ನನಗೂ ಇದೆಯಲ್ಲ. ಬಚ್ಚಲುಮನೆಯ ಬಾಗಿಲಿಂದೆ ನಿನ್ನೆ ಮನೆಯಲ್ಲಿ ಹಾಕಿಕೊಂಡಿದ್ದ ಪಸದೋದ ಚೂಡಿದಾರ ನೇತಾಡುತ್ತಿತ್ತು. ಅದನ್ನೇ ಧರಿಸಿಕೊಂಡು ಹಾಲಿಗೆ ಬಂದೆ. ಅಪ್ಪನ ಮುಖದಲ್ಲಿ ಸಿಟ್ಟು ಕಾಣಿಸಿದರೆ ಬಂದವರಲ್ಲಿ ಗೊಂದಲ. ಹೋಗಿ ಅಪ್ಪನ ಪಕ್ಕದಲ್ಲೇ ಕುಳಿತೆ. ಟೇಬಲ್ಲಿನ ಮೇಲಿಟ್ಟಿದ್ದ ಉಪ್ಪಿಟ್ಟಿನ ಪ್ಲೇಟನ್ನು, ಬಹುಶಃ ಅಪ್ಪನದ್ದು, ಕೈಗೆತ್ತಿಕೊಂಡು ಒಂದು ತುಣುಕು ರವೆಯನ್ನೂ ಬಿಡದಂತೆ ತಿಂದು ಪ್ಲೇಟು ಕೆಳಗಿಟ್ಟು ಒಂದು ಲೋಟ ನೀರು ಕುಡಿದು ಸೀದಾ ರೂಮಿಗೆ ಬಂದು ಬಾಗಿಲು ಮುಂದೆ ತಳ್ಳಿದೆ. 'ಇವತ್ ಮನೆಯಲ್ಲಿನನ್ನ ನೋಡೋಕೆ ಗಂಡು ಕರೆಸಿದ್ರು ಅಪ್ಪ. ಥ್ಯಾಂಕ್ ಯು' ಅಂತ ಟೈಪಿಸಿ ಪುರುಷೋತ್ತಮನಿಗೆ ಕಳುಹಿಸಿದೆ. 

ಒಂದೆರಡು ನಿಮಿಷ ಗುಜು ಗುಜು ಶಬ್ದ ಕೇಳಿಸಿತು. ಅದಾದ ಮೇಲೆ ಹೊರಗೆ ನಿಂತಿದ್ದ ಎರಡು ಕಾರುಗಳ ಶಬ್ದ, ಮನೆಯ ಬಾಗಿಲು ಮುಚ್ಚಿದ ಶಬ್ದ. ಅದರ ಬೆನ್ನ ಹಿಂದೆಯೇ ಅಪ್ಪ ನನ್ನ ರೂಮಿನ ಬಾಗಿಲನ್ನು ತಳ್ಳಿಕೊಂಡು ಒಳಬಂದು ನನ್ನ ಜುಟ್ಟಿಡಿದು ತಲೆ ಬಗ್ಗಿಸಿ ಬೆನ್ನಿನ ಮೇಲೇ ಒಂದೇ ಸಮನೆ ಬಾರಿಸತೊಡಗಿದರು. ನನಗೆ ನೆನಪಿದ್ದಂತೆ ಅಪ್ಪ ನನ್ನ ಮೇಲೆ ಕೊನೆಯ ಬಾರಿ ಕೈಎತ್ತಿದ್ದು ಮೂರನೇ ಕ್ಲಾಸಿನಲ್ಲಿ. ಅದಾದ ಮೇಲೆ ಯಾವತ್ತೂ ಹೊಡೆದವರಲ್ಲ. ಬೆನ್ನ ಮೇಲೆ ಬೀಳುತ್ತಿದ್ದ ಏಟುಗಳು ಕಿರುಚಿಕೋ ಧರಣಿ ಅಂತ ಹೇಳುತ್ತಿದ್ದರೂ ಅದ್ಯಾವುದೋ ಶಕ್ತಿ ನನ್ನ ಬಾಯಿಂದ ಒಂದೇ ಒಂದು ಶಬ್ದ ಹೊರಬರದಂತೆ ತಡೆ ಹಿಡಿದುಬಿಟ್ಟಿತ್ತು. ಸುಸ್ತಾಗುವವರೆಗೂ ಅಪ್ಪ ಹೊಡೆಯುತ್ತಲೇ ಇದ್ದರು. ಮಧ್ಯೆ ಮಧ್ಯೆ ತಡೆಯಲು ಅಮ್ಮ ನಡೆಸಿದ ಪ್ರಯತ್ನ ಅವರಿಗೊಂದೆರಡು ಏಟು ಕೊಡಿಸುವಷ್ಟು ಸಫಲತೆ ಕಂಡಿತ್ತಷ್ಟೇ. ಸುಸ್ತಾದ ಅಪ್ಪ ಹಾಲಿಗೋಗಿ ಒಂದಷ್ಟು ಸುಧಾರಿಸಿಕೊಂಡು ಮನೆಯಿಂದ ಹೊರನಡೆದರು. 

“ಯಾಕಮ್ಮಾ ಹಿಂಗ್ ಹೊಟ್ಟೆ ಉರಿಸ್ತಿ" ಅಪ್ಪ ಹೋದ ನಂತರ ಅಮ್ಮ ಕಣ್ಣೀರಿಡುತ್ತಾ ಹೇಳಿದರು. ಅವರ ಕೈ ನನ್ನ ಬೆನ್ನು ಸವರುತ್ತಿತ್ತು. 

'ಉರಿಸ್ತಿರೋದು ನೀವು. ನನಗೆ ಹೇಳದೆ ಕೇಳದೆ ಗಂಡು ಕರೆಸಿ ತೋರಿಸೋ ಅನಿವಾರ್ಯವೇನಿತ್ತೀಗ' 

“ಮನೇಲಿ ವಿಷಯ ಗೊತ್ತಾಗಿ ಎಷ್ಟು ತಿಂಗಳಾಯಿತು ಅಂತಾದ್ರೂ ಗೊತ್ತಿದೆಯಾ ನಿನಗೆ?” ಅಮ್ಮನ ದನಿಯಲ್ಲಿ ಸಿಟ್ಟಿತ್ತು ನೋವಿತ್ತು. “ಅಷ್ಟು ತಿಂಗಳಿಂದ ಮನೆ ಸ್ಮಶಾನದಂತಾಗಿದೆ. ಮನೇಲಿ ವಿಷಯ ಗೊತ್ತಾದ ಮೇಲೆ ನಿನ್ನ ಹುಡುಗನನ್ನು ಅವನ ಮನೆಯವರನ್ನು ಕರೆಸಿ ಮಾತನಾಡಿಸಬೇಕು ಅನ್ನೋದು ನಿನಗೆ ಹೊಳೆಯದೇ ಹೋಯಿತಾ?” ಅಮ್ಮನ ಯೋಚನಾ ದಾಟಿ ನನ್ನನ್ನು ಚಿಂತೆಗೆ ದೂಡಿತು. ಒಂದ್ಕಡೆ ಮಾತು ಕೇಳದೆ ಉಡಾಫೆಯಿಂದಲೇ ಇರುವಂತಾಡೋ ಪರಶು, ಇನ್ನೊಂದು ಕಡೆ ನನಗೆ ಒಂದು ಮಾತೂ ತಿಳಿಸದೆ ಗಂಡು ಕರೆಸೋ ಅಪ್ಪ. ಯಾರ್ ಜೊತೆ ಮಾತಾಡ್ಲಿ, ಏನು ಮಾತಾಡ್ಲಿ ತಿಳಿಯಲಿಲ್ಲ. ಅಮ್ಮನ ಮುಂದೆ ಸೋಲೊಪ್ಪುವ ಮನಸ್ಸಿರಲಿಲ್ಲ. 

'ಏನು ಅವನನ್ನು ಕರೆಸಿದ್ರೆ ಕೂರಿಸಿ ಮರ್ಯಾದೆಯಿಂದ ಮಾತನಾಡುವವರ ಹಾಗೆ ಹೇಳ್ತೀದ್ದೀರ' 

“ಅದು ನಂತರದ ವಿಷಯ. ಕರ್ಕೊಂಡು ಬರೋ ಜವಾಬ್ದಾರಿ ನಿಂದೇ ಅಲ್ವ. ಅದನ್ನ ಬಿಟ್ಟು ದಿಮ್ಮಿಕೇ ರಂಗ ಅಂತ ಇದ್ದುಬಿಟ್ರೆ....ನೀ ನಿಂಗ್ ತೋಚ್ದಂಗೆ ಮಾಡಿದ್ರೆ ಅವರು ನಿನ್ನಪ್ಪ....ಅವರೂ ಅವರು ತೋಚ್ದಂಗೇ ಮಾಡ್ತಾರೆ.....ನಿಮ್ಮಿಬ್ಬರ ಆಟದಲ್ಲಿ ಮನೆ ಮರ್ಯಾದೆ ಬೀದಿ ಪಾಲಾಯ್ತು ಅಷ್ಟೇ" 

'ಮರ್ಯಾದೆ ಯಾವ್ ಬೀದಿಗೂ ಹೋಗಿಲ್ಲ ಬಿಡಮ್ಮ. ಅಷ್ಟಕ್ಕೂ ನಾನೇನು ನಿಮ್ಮಗಳ ತರ ಮನೆ ಬಿಟ್ಟು ಓಡಿ ಹೋಗುವವ.....' ಮಾತು ಮುಗಿಯುವ ಮುನ್ನ ಅಮ್ಮನ ಕೈ ನನ್ನ ಕೆನ್ನೆಗೊಂದು ಏಟು ನೀಡಿತ್ತು. ಅಪ್ಪ ಚಿಕ್ಕಂದಿನಲ್ಲಾದರೂ ಹೊಡೆದದ್ದು ನೆನಪಿದೆ, ಅಮ್ಮ ಹೊಡೆದದ್ದಂತೂ ನೆನಪೇ ಇಲ್ಲ ನನಗೆ. ಅಮ್ಮನಂತ ಅಮ್ಮ ಕೂಡ ನನ್ನ ಮೇಲೆ ಕೈ ಮಾಡಿಸುವಂತೆ ಮಾಡಿದ ಪಾಪಿ ನಾನು' ನಿಟ್ಟುಸಿರುಬಿಟ್ಟೆ. 

“ಅದರಲ್ಲೇನು ಪಾಪ – ಪಾಪಿ. ಆ ಕ್ಷಣದ ಸಿಟ್ಟು ಆ ಮಾತುಗಳನ್ನಾಡಿಸಿರುತ್ತೆ ಅಷ್ಟೆ" ಸಾಗರ ಸಮಾಧಾನದಿಂದ ಹೇಳಿದ. ಬೆಂಕಿಕಡ್ಡಿಯ ಸದ್ದಾಯಿತು. ಸಿಗರೇಟು ಹಚ್ಚಿಕೊಂಡನೇನೋ. 

'ಏನೋಪ್ಪ. ಸಿಟ್ಟಿನಲ್ಲೆ ನಾವು ಮನದಾಳದ ಸತ್ಯಗಳನ್ನು ಹೇಳಿಬಿಡ್ತೀವಿ ಅನ್ಸುತ್ತೆ. ಹೊಡೆದ ಕೆನ್ನೆಯನ್ನು ಸವರುತ್ತಾ ಅಮ್ಮ "ನಿಮ್ಮಪ್ಪ ಆಗಲೀ ನಾನಾಗಲೀ ನಿಮ್ಮಗಳ ರೀತಿ ಪುಕ್ಕಲರಾಗಿರಲಿಲ್ಲ. ಪ್ರೀತಿ ಹುಟ್ಟಿದ ಎರಡು ತಿಂಗಳಿಗೆ ಇಬ್ಬರೂ ಮನೆಯಲ್ಲಿ ವಿಷಯ ತಿಳಿಸಿದ್ದೊ. ಮನೆಯವರನ್ನು ಒಪ್ಪಿಸುವುದಕ್ಕೆ ಎಲ್ಲಾ ರೀತಿಯ ಪ್ರಯತ್ನ ಮಾಡಿದೊ. ಓಡಿಸಿಕೊಂಡು ಹೋಗಿ ಮದುವೆಯಾಗೋ ಇಚ್ಛೆ ಅವರಿಗೂ ಇರಲಿಲ್ಲ, ಓಡಿ ಹೋಗಿ ಮದುವೆಯಾಗೋ ದರ್ದು ನನಗೂ ಇರಲಿಲ್ಲ. ನಮ್ಮ ಮನೆಯಲ್ಲಿ ಪರಿಸ್ಥಿತಿ ಗಂಭೀರವಾಗಿಬಿಟ್ಟಿತ್ತು. ಎಷ್ಟರಮಟ್ಟಿಗೆಂದರೆ ನನ್ನನ್ನು ಕೊಂದುಬಿಟ್ಟು ಜಾತಿ ಮರ್ಯಾದೆ ಉಳಿಸಿಕೊಂಡರೂ ತಪ್ಪಲ್ಲ ಅನ್ನೋ ಮಾತುಗಳು ಶುರುವಾಗಿಬಿಟ್ಟಿದ್ದವು. ನಮ್ಮ ಮನೆಯವರ ಜಾತಿ ಮರ್ಯಾದೆಗಿಂತ ನನ್ನ ಪ್ರಾಣ, ನನ್ನ ಜೀವನ ನನಗೆ ಮುಖ್ಯವಾಗಿತ್ತು. ಆ ಕಾರಣಕ್ಕಷ್ಟೇ ಓಡಿಹೋಗಿ ಮದುವೆಯಾಗಿದ್ದು. ತಿಳ್ಕೊ" ಎಂದ್ಹೇಳಿ ಎದ್ದು ನಡೆದರು ಅಮ್ಮ.

ಮುಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

No comments:

Post a Comment