Aug 28, 2019

ಸಮ್ಮಿಶ್ರ ಸರಕಾರದ ಪತನ: ನಾಯಕರುಗಳ ಆರೋಪ-ಪ್ರತ್ಯಾರೋಪ!

ಕು.ಸ.ಮಧುಸೂದನ 
ಮಾಜಿ ಪ್ರದಾನಿ ಶ್ರೀದೇವೇಗೌಡರ ಮತ್ತು ಮಾಜಿಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರ ನಡುವಿನ ಆರೋಪ ಪ್ರತ್ಯಾರೋಪಗಳು,ರಾಜ್ಯ ರಾಜಕಾರಣವನ್ನು ಹತ್ತಿರದಿಂದ ಅವಲೋಕಿಸುತ್ತಿರುವವರಿಗೆ ಅಚ್ಚರಿಯನ್ನೇನು ಉಂಟು ಮಾಡಿಲ್ಲ. ಬದಲಿಗೆ ಕಳೆದ ಹದಿನಾರು ತಿಂಗಳ ಹಿಂದೆ ರಚನೆಯಾದ ಸಂಮಿಶ್ರ ಸರಕಾರದ ರಚನೆಯ ವಿಷಯಕ್ಕಾಗಿ ಮುನಿಸು ಮರೆತು ಒಂದಾಗಿದ್ದು ಬಾಜಪವನ್ನು ಸೋಲಿಸಲು ಜಾತ್ಯಾತೀತ ಪಕ್ಷಗಳು ಒಂದಾಗಬೇಕೆಂದು ಬಯಸಿದ್ದವರಿಗೆ ಸಂತೋಷವನ್ನುಂಟು ಮಾಡಿತ್ತು. ಆದರೆ ಶ್ರೀ ಕುಮಾರಸ್ವಾಮಿಯವರ ನೇತೃತ್ವದ ಸಮ್ಮಿಶ್ರ ಸರಕಾರ ಪತನವಾಗುವುದರೊಂದಿಗೆ ಜಾತ್ಯಾತೀತ ಮತದಾರರಿಗೆ ಭ್ರಮನಿರಸನವಾಗಿದೆ. ಮತ್ತು ಸ್ವಪ್ರತಿಷ್ಠೆಯೇ ಮುಖ್ಯವೆಂದುಕೊಂಡಿರುವ ನಾಯಕರುಗಳ ನಡೆಯ ಬಗ್ಗೆ ಜನ ಬೇಸರಗೊಂಡಿದ್ದಾರೆ. 

ಒಂದು ಕಡೆ ಜಾತ್ಯಾತೀತ ಜನತಾದಳದ ರಾಷ್ಟ್ರಾದ್ಯಕ್ಷರಾದ ದೇವೇಗೌಡರು ಕಾಂಗ್ರೆಸ್ಸಿನ ಕಿರುಕುಳಕ್ಕೆ ಕುಮಾರಸ್ವಾಮಿ ರೋಸಿಹೋಗಿದ್ದರು ಎಂದು ಹೇಳುತ್ತಲೇ ಸಮ್ಮಿಶ್ರ ಸರಕಾರ ಪತನವಾಗಲು ಸಿದ್ದರಾಮಯ್ಯನವರೇ ಕಾರಣ ಎಂಬ ಮಾತನ್ನೂ ಬಹಿರಂಗವಾಗಿ ಹೇಳುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಮಾತನಾಡಿದ ಸಿದರಾಮಯ್ಯನವರು ಸಮ್ಮಿಶ್ರ ಸರಕಾರ ಬೀಳಲು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ನಿರ್ದಾರಗಳನ್ನು ತೆಗೆದುಕೊಳ್ಳುತ್ತಿದ್ದುದು, ದೇವೇಗೌಡರ ಕುಟುಂಬ ಅದರಲ್ಲೂ ರೇವಣ್ಣನವರು ಸರಕಾರದ ಆಡಳಿತದಲ್ಲಿ ಮೂಗುತೂರಿಸಿದ್ದೇ ಕಾರಣವೆಂದು ಹೇಳಿದ್ದಾರೆ. ಸಮ್ಮಿಶ್ರ ಸರಕಾರದ ಹದಿನಾಲ್ಕು ತಿಂಗಳ ಆಡಳಿತವನ್ನು, ಅದರ ಆಂತರಿಕ ಕಿತ್ತಾಟಗಳನ್ನು ಸೂಕ್ಷ್ಮವಾಗಿ ನೋಡಿದವರಿಗೆ ಇಬ್ಬರೂ ನಾಯಕರುಗಳ ಮಾತುಗಳೂ ಅರ್ದಸತ್ಯವೆಂಬುದು ಗೊತ್ತಾಗುತ್ತದೆ. 

ಹಾಗೆ ನೋಡಿದರೆ 2004ರಲ್ಲಿ ತಮ್ಮನ್ನು ಮುಖ್ಯಮಂತ್ರಿಯಾಗಿಸುವ ಅವಕಾಶವಿದ್ದರೂ ಬೇಕೆಂತಲೇ ದೇವೇಗೌಡರು ತಪ್ಪಿಸಿದರೆಂಬ ಕೋಪ ಸಹಜವಾಗಿಯೇ ಸಿದ್ದರಾಮಯ್ಯನವರಿಗೆ ಇಂದಿಗೂ ಇದೆ. ಆ ನೋವಿನಲ್ಲಿಯೇ 2006ರಲ್ಲಿ ಅವರು ಅಹಿಂದ ಸಂಘಟನೆ ಕಟ್ಟಿ ನಂತರ ಕಾಂಗ್ರೆಸ್ ಸೇರಿ, ಅಲ್ಲಿ ವಿರೋಧಪಕ್ಷದ ನಾಯಕನಾಗಿ, ಮುಖ್ಯಮಂತ್ರಿಯೂ ಆಗಿದ್ದು ಈಗ ಇತಿಹಾಸ. ಅದೇ ರೀತಿ ತಮ್ಮಪಕ್ಷವನ್ನು ಬಿಟ್ಟಹೋಗಿ ಕಾಂಗ್ರೆಸ್ ಸೇರಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯನವರ ಮೇಲೆ ದೇವೇಗೌಡರಿಗೂ ಅಷ್ಟೇ ಸಿಟ್ಟಿದೆ. 2006ರಲ್ಲಿ ಶುರುವಾದ ಅವರ ಈ ವಿರಸ ಅಥವಾ ಶತೃತ್ವ 2018ರ ವಿದಾನಸಭಾ ಚುನಾವಣೆಗಳ ಪಲಿತಾಂಶ ಬರುವವರೆಗು ಚಾಲ್ತಿಯಲ್ಲಿತ್ತು. ಯಾವಾಗ ಅತಂತ್ರ ವಿದಾನಸಭೆ ರಚನೆಯಾಯಿತೊ ಆಗ ಬಾಜಪವನ್ನು ಅಧಿಕಾರದಿಂದ ದೂರವಿಡುವ ಏಕೈಕ ಕಾರಣಕ್ಕೆ ಕಾಂಗ್ರೆಸ್ ಹೈಕಮ್ಯಾಂಡ್ ಜಾತ್ಯಾತೀತ ಜನತಾದಳದೊಂದಿಗೆ ಮೈತ್ರಿ ಕುದುರಿಸಿ ಬೇಷರತ್ತಾಗಿ ಅವರಿಗೆ ಮುಖ್ಯಮಂತ್ರಿ ಗಾದಿಯನ್ನು ಬಿಟ್ಟು ಕೊಡಲು ನಿರ್ಧರಿಸಿತು. ಆದರೆ ಇಂತಹದೊಂದು ಮೈತ್ರಿಯ ಮಾತುಕತೆಯಿಂದ ಸಿದ್ದರಾಮಯ್ಯನವರನ್ನು ದೂರ ಇಡಲಾಗಿತ್ತು. ಮಾತುಕತೆ ಅಂತಿಮಗೊಂಡ ಮೇಲೆ ಸ್ವತ: ಸಿದ್ದರಾಮಯ್ಯನವರೇ ಈ ಮೈತ್ರಿ ವಿವರಗಳನ್ನು ಸಾರ್ವಜನಿಕವಾಗಿ ಮಾದ್ಯಮಗಳಿಗೆ ಹೇಳುವಂತೆ ಮಾಡಲು ಕಾಂಗ್ರೆಸ್ ಸಫಲವಾಗಿತ್ತು. 

ನಿಜ ಹೇಳಬೇಕೆಂದರೆ ವಿರೋಧಪಕ್ಷದಲ್ಲಿ ಕೂರಲು ಸಿದ್ದರಾಗಿದ್ದ ಸಿದ್ದರಾಮಯ್ಯನವರಿಗೆ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡುವ ಪಕ್ಷದ ನಿರ್ದಾರ ಇಷ್ಟವಿರದಿದ್ದರೂ ಹೈಕಮ್ಯಾಂಡ್ ಇಚ್ಚೆಗೆ ವಿರುದ್ದವಾಗಿ ಹೋಗಲಾಗದೆ ಮೌನವಾಗಿ ಸಮ್ಮತಿ ಸೂಚಿಸಿದ್ದರು. ನಂತರ ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿಯ ಅದ್ಯಕ್ಷರೂ ಆದರು. ಇಲ್ಲಿ ಪಕ್ಷದ ನಿಲುವಿಗೆ ಬದ್ದರಾಗಿರಬೇಕಾಗಿ ಬಂದ ಸಿದ್ದರಾಮಯ್ಯನವರ ಅಸಹಾಯಕತೆಯ ಜೊತೆಗೇನೆ ದೇವೇಗೌಡರ ಕುಟುಂಬದ ವಿರುದ್ದದ ಅವರ ಅಸಹನೆಯೂ ಬೆಳೆಯುತ್ತಾ ಹೋಯಿತು. ಇಂತಹ ಅಸಹನೆಗೆ ತುಪ್ಪ ಸುರಿಯುವಂತೆ ಮಂತ್ರಿಮಂಡಲ ರಚನೆಯಲ್ಲಿ ಸಿದ್ದರಾಮಯ್ಯನವರ ಆಪ್ತರಲ್ಲಿ ಹಲವರಿಗೆ ಸ್ಥಾನ ಸಿಗದಂತೆ ನೋಡಿಕೊಳ್ಳಲಾಯಿತು. ಇದಕ್ಕೆ ಪೂರಕವೆಂಬಂತೆ ಕಾಂಗ್ರೆಸ್ಸಲ್ಲಿದ್ದು ಸಿದ್ದರಾಮಯ್ಯನವರನ್ನು ಕಟುವಾಗಿ ಟೀಕಿಸುತ್ತಿದ್ದ ಹೆಚ್. ವಿಶ್ವನಾಥ್ ಅವರನ್ನು ಜಾತ್ಯಾತೀತ ಜನತಾದಳದ ಅದ್ಯಕ್ಷರನ್ನಾಗಿ ಮಾಡಿ, ಅವರನ್ನು ಸಮನ್ವಯ ಸಮಿತಿಯಲ್ಲಿ ಸೇರಿಸಲು ಪ್ರಯತ್ನಿಸಲಾಯಿತು. ಬಾಜಪದ ಜೊತೆ ಸೇರಿ ಚಾಮುಂಡೇಶ್ವರಿಯಲ್ಲಿ ತಮ್ಮನ್ನು ಸೋಲಿಸಿದ್ದ ಜನತಾದಳವನ್ನು ಅಕಾರಣವಾಗಿ ಒಪ್ಪಿಕೊಳ್ಳುವುದು ಕೊನೆಯ ಕ್ಷಣದವರೆಗು ಸಿದ್ದರಾಮಯ್ಯನವರಿಗೆ ಸಾದ್ಯವಿರಲಿಲ್ಲ. ಆದರೂ ಪಕ್ಷದ ಹಿತದೃಷ್ಠಿಯಿಂದ ಸರಕಾರವನ್ನು ಸುಗಮವಾಗಿ ನಡೆಸಲು ಬೇಕಾದ ಸಹಕಾರ ನೀಡುವುದಾಗಿ ಅವರು ಹೇಳುತ್ತಾ ಬಂದರೂ ಅವರ ಆಪ್ತರುಗಳು ಸುಮ್ಮನೇ ಕೂರದೆ ಸಿದ್ದರಾಮಯ್ಯನವರೆ ನಮ್ಮ ಮುಖ್ಯಮಂತ್ರಿ ಎಂದು ಹೇಳುತ್ತಾ ಸರಕಾರದೊಳಗೆ ಎಲವೂ ಸರಿಯಿಲ್ಲವೆಂಬುದನ್ನು ತೋರಿಸುತ್ತಾ ಹೋದರು. ಇದಕ್ಕೆ ತಕ್ಕನಾಗಿ ಪಕ್ಷದ ವಿರುದ್ದ ಬಂಡಾಯವೆದ್ದು ಅತೃಪ್ತ ಶಾಸಕರುಗಳೆಂದು ಗುರುತಿಸಿಕೊಂಡ ಬಹುತೇಕ ಶಾಸಕರಲ್ಲಿ ಹೆಚ್ಚಿನವರು ಸಿದ್ದರಾಮಯ್ಯನವರ ಆಪ್ತರೇ ಆಗಿದ್ದರು. ಹೀಗಾಗಿ ಸಹಜವಾಗಿಯೇ ಸ್ವತ: ಸಿದ್ದರಾಮಯ್ಯನವರೇ ಸಮ್ಮಿಶ್ರ ಸರಕಾರ ಬೀಳಿಸಲು ಪ್ರಯತ್ನಿಸುತ್ತಿದ್ದಾರೆಂಬ ಪ್ರಚಾರವೊಂದನ್ನು ಮಾಧ್ಯಮಗಳೂ ಮಾಡುತ್ತಾ ಹೋದವು. 

ಇತ್ತಕಡೆ ಜನತಾದಳದ ವರಿಷ್ಠ ನಾಯಕರುಗಳಲ್ಲಿಯೂ ಹಲವು ಬದಲಾವಣೆಗಳಾಗಿದ್ದವು. 2008ರಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ 2018ರ ಹೊತ್ತಿಗೆ ಬದಲಾಗಿದ್ದರು. ಮೊದಲೆಲ್ಲ ಶಾಸಕರುಗಳ ಕೈಗೆ ಸುಲಭಕ್ಕೆ ಸಿಗುತ್ತಿದ್ದ ಕುಮಾರಸ್ವಾಮಿಯವರೀಗ ಶಾಸಕರುಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಲುವಲ್ಲಿ ವಿಫಲರಾಗುತ್ತ ಹೋದರು. ಇನ್ನು ಅವರ ಸಹೋದರ ಹೆಚ್.ಡಿ.ರೇವಣ್ಣನವರು ಇತರೇ ಸಚಿವರುಗಳ ಇಲಾಖೆಗಳ ಅಧಿಕಾರಿಗಳ ವರ್ಗಾವಣೆಗಳಲ್ಲಿ ಹಸ್ತಕ್ಷೇಪ ನಡೆಸುತ್ತ ಕಾಂಗ್ರೆಸ್ ಸಚಿವರುಗಳ ಅತೃಪ್ತಿಗೆ ಕಾರಣರಾಗುತ್ತ ಹೋದರು. ಇದರ ಜೊತೆಗೆ ಬೆಂಗಳೂರಿನ ಅಭಿವೃದ್ದಿಯ ವಿಚಾರದಲ್ಲಿ ಮತ್ತು ಅನುದಾನ ಬಿಡುಗಡೆ ಮಾಡುವ ವಿಚಾರದಲ್ಲಿ ಬೆಂಗಳೂರಿನ ಶಾಸಕರುಗಳನ್ನು ನಿರ್ಲಕ್ಷಿಸುತ್ತ ಹೋದರು. ಸರಕಾರದ ಕೊನೆಯ ದಿನಗಳಲ್ಲಿ ರಾಜಧಾನಿಯಲ್ಲಿದ್ದು ಅತೃಪ್ತ ಶಾಸಕರುಗಳನ್ನು ಕರೆಸಿಕೊಂಡು ಮಾತಾಡಿಸಮಸ್ಯೆ ಬಗೆಹರಿಸಬೇಕಿದ್ದ ಮುಖ್ಯಮಂತ್ರಿಗಳು ಸಂದಿಗ್ದ ಸಮಯದಲ್ಲಿ ಅಮೇರಿಕಾ ಪ್ರವಾಸಕ್ಕೆ ಹೋಗಿ ಕುಳಿತದ್ದು ಅನಾಹುತಕ್ಕೆ ಕಾರಣವಾಯಿತು. ಇದರ ಜೊತೆಗೆ 2019ರ ಲೋಕಸಭಾ ಚುನಾವಣೆಯಲ್ಲಿ ಮಿತ್ರ ಪಕ್ಷಗಳ ಸೋಲು ಶಾಸಕರುಗಳು ಬೇರೊಂದು ಪಕ್ಷಕ್ಕೆ ವಲಸೆ ಹೋಗಲು ಅಂತಿಮವಾದ ಕಾರಣವಾಗಿ ಬಿಟ್ಟಿತು. 


ಹೀಗೆ ಸಮ್ಮಿಶ್ರ ಸರಕಾರ ಪತನಗೊಳ್ಳಲು ಕಾಂಗ್ರೆಸ್ ಮತ್ತು ಜನತಾದಳ ಎರಡೂ ಪಕ್ಷಗಳೂ ಸಮಾನವಾಗಿ ಕಾರಣವಾಗಿವೆಯೆಂಬುದನ್ನು ನೋಡಬಹುದು. ಆದರೆ ಸಮ್ಮಿಶ್ರ ಸರಕಾರದ ಪತನದ ವಿಚಾರದಲ್ಲಿ ಸ್ವಪಕ್ಷೀಯರೂ ಸೇರಿದಂತೆ ಎಲ್ಲರೂ ಸಿದ್ದರಾಮಯ್ಯನವರನ್ನೇ ಗುರಿ ಮಾಡಿಕೊಂಡು ಟೀಕಿಸುತ್ತಿರುವುದರ ಹಿಂದೆ ಇರಬಹುದಾದ ಕಾರಣಗಳನ್ನು ಹೇಳಲು ಮತ್ತೊಂದು ಪ್ರತ್ಯೇಕ ಲೇಖನವನ್ನೇ ಮಾಡಬೇಕಾಗುತ್ತದೆ. ಮುಂದಿನ ಸಂಚಿಕೆಯಲ್ಲಿ ಆ ಬಗ್ಗೆ ನೋಡೋಣ.

ಮಧುಸೂದನ್ ರವರ ಮತ್ತಷ್ಟು ಬರಹಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.

No comments:

Post a Comment