ಕು.ಸ.ಮಧುಸೂದನ
ಒಂದು:
ಅಡ್ಡಾದಿಡ್ಡಿ ಬೆಳೆದ ನಗರಗಳು
ಅನಾಥವಾದ ಹಳ್ಳಿಗಳು
ಪೂರ್ವದ ಮೇಲೆ ಹಲ್ಲೆ ಮಾಡಿ
ಒಸರಿದ ರಕ್ತ ನೆಕ್ಕುತಿಹ ಪಶ್ಚಿಮದ ಸೂರ್ಯ
ತಂದ ಕಡ ತೀರಿಸಲಾಗದೆ
ಕರಿಯ ತೊಗಲುಗಳನ್ನು ಮಾರಾಟಕ್ಕಿಟ್ಟ ವಂಚಕ ಪಡೆ
ಕಣ್ಣಿದ್ದರೂ ಕಾಣುತ್ತಲ್ಲ
ಕಿವಿಯಿದ್ದರೂ ಕೇಳುತ್ತಿಲ್ಲ
ಕಾಲಿದ್ದರೂ ನಡೆಯಲಾಗುತ್ತಿಲ್ಲ
ಇರುವೆರಡು ಕುಷ್ಠ ಹಿಡಿದ ಕೈಗಳಲಿ
ಅವರದೇ ಹರಿಕಥೆ ಭಜನೆ
ಎರಡು:
ಕರಗಳೆಲ್ಲ ಕಾರ್ಖಾನೆಗಳ ಪಾಲಾಗಿ
ಕಾಲುಗಳೆಲ್ಲ ಕಾರ್ಮಿಕರ ಸಾಲಾಗಿ
ಚರಕಗಳು ಮುರಿದು
ಹಸುಳೆಗಳ ತಲೆ ತರಿದು
ಬ್ರಹ್ಮಾಂಡದ ನಡೂ ಮದ್ಯೆ ಭರತಖಂಡದ
ಬಡ ಮನುಜರ ಮಾಂಸಖಂಡಗಳ ಬಗೆದು
ತಿನ್ನೋವಾಗ
ಕೆಟ್ಟು ಹೋದ ಕಂಪ್ಯೂಟರಿನೊಳಗೆ ತಲೆಯಿಕ್ಕಿ ಕೂತ
ಹರಯದ ಹೆಣ್ಣುಗಂಡುಗಳು
ಸುರತಕ್ಕೂ ಸಮಯ ಸಿಗದೆ
ಸಪ್ತಸಾಗರಗಳಾಚೆಯ ಪ್ರಭುಗಳ
ಕೈ ಸನ್ನೆಗೆ ಕಾದುಕೂತು
ನಿರ್ವೀರ್ಯರಾಗುತ್ತಿರಲು
ನಾವಿಲ್ಲಿ
ನಟ್ಟ ನಡು ಮದ್ಯಾಹ್ನ ಬೇಸಿಗೆಯಲಿ
ಬೆವರಿನಲಿ ಅಭ್ಯಂಜನ ಮಾಡಿ
ಉಂಡವರ ಗತ್ತಿನಲಿ ಎಲೆಯಡಿಕೆ ಮೆಲ್ಲುತ್ತ
ದೇಶಭಕ್ತಿ ದ್ವೇಷ ಭಕ್ತಿಯ
ಚರ್ಚೆ ಮಾಡುತ್ತ
ಕೂತಿರಲಾಗಿ ನಮ್ಮನನಾಳುವ ದಣಿಗಳು
ಹುಸಿನಗು ಬೀರುತ್ತಾ
ಕುರ್ಚಿಯ ಕಾಲುಗಳರಿಪೇರಿ ಮಾಡಿಸುತ್ತಿದ್ದಾರೆ
ಕೂಲಿಪಡೆಯ ಕೈಲಿ
ಮೂರು:
ಇದು ಇಂತಿರಲಾಗೊಂದು ದಿನ
ಕವಿತೆಗಿದು ಕಾಲವಲ್ಲವೆಂದು ಗೊಣಗಿದ ಕವಿಯ
ರುಂಡ ಮುಂಡಕೆ ಬಾರಿ ಬೇಡಿಕೆ ಬರಲಿದೆ!
ನಾಲ್ಲು:
ಮದ್ಯಾಹ್ನ ಮುಗಿದು
ಸಂಜೆಗತ್ತಲು ಕವಿಯಲು
ಹಾಸಿದ್ದರಣೋನ್ಮಾದದ ಬಾವುಟಗಗಳ ಇಳಿಸಿದ
ಕಾಲಾಳುಗಳೀಗ
ಸರದಿಯ ಸುರಕ್ಕೆ ಹೆಣ್ಣುಗಳ ಹುಡುಕುತ್ತಸಿಕ್ಕಸಿಕ್ಕ ಮನೆಗಳ ಕದ ತಟ್ಟುತ್ತಿದ್ದಾರೆ
ತಪ್ಪಿಸಿಕೊಳ್ಳುವಾತುರದಲ್ಲಿ
ಜಂತಿಗೆ ನೇಣು ಬೀಳುತಿವೆ
ಐದು:
ಮಾರನೇದಿನ ಕಾಟಾಚಾರದ ಪೋಸ್ಟ್ ಮಾರ್ಟಮ್
ಸಾಮೂಹಿಕ ಅಂತ್ಯಸಂಸ್ಕಾರ
ಮತ್ತದಕ್ಕೊಂದು ಶ್ರದ್ದಾಂಜಲಿಯ ಸಭೆ
ಸಾವಿರಾರು ಮೇಣದ ಬತ್ತಿಗಳ ಮೆರವಣಿಗೆ.
ಆರು:
ಹಾ!ಹಾ! ಅನ್ನುವಲ್ಲಿಗೆ
ತೆರೆದುಕೊಂಡಿದ್ದ ಕವಿತೆಗೆ
ಜೋರು ನಿದ್ದೆ.
ಮಧುಸೂದನ್ ರವರ ಮತ್ತಷ್ಟು ಬರಹಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
No comments:
Post a Comment