ಡಾ. ಅಶೋಕ್. ಕೆ. ಆರ್.
ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
‘ಸರಿ ಕಣೋ. ಡ್ಯೂಟಿಗೆ ಹೊರಟೆ. ಒಂಭತ್ತರ ಮೇಲೆ ಬಿಡುವಾಗ್ತೀನಿ. ಮೆಸೇಜು ಮಾಡ್ತೀನಿ’
“ಸರಿ ಸರಿ. ನಂಗೂ ಇವತ್ತು ಡ್ಯೂಟೀನೇ”
‘ಡ್ಯೂಟಿನಾ? ಪರೀಕ್ಷೆಗೆ ಓದಿಕೊಳ್ಳೋಕೆ ರಜೆ ಕೊಟ್ಟಿದ್ದಾರೆ ಅಂತಿದ್ದೆ’
“ನಿನ್ ಜೊತೆ ಡ್ಯೂಟಿ ಅಂದೆ”
‘ಹ ಹ. ನಿಂಗಿಷ್ಟ ಇಲ್ದೇ ಹೋದ್ರೆ ರಜಾ ಹಾಕೊಳ್ಳಪ್ಪ. ನಂದೇನೂ ಬಲವಂತವಿಲ್ಲ’
“ಹಂಗೇನಿಲ್ವೇ ನಂಗೂ ಇಷ್ಟಾನೇ. ಏನೋ ತಲೆಗ್ ಏನೇನೋ ಯೋಚ್ನೆ ಬರ್ತವೆ ಅಷ್ಟೇ”
‘ತಲೆ ಇರೋದೆ ಯೋಚ್ನೆ ಮಾಡೋದಿಕ್ಕಲ್ವ. ತಲೆ ಕೆಡಿಸ್ಕೋಬೇಡ ಬಿಡು’
ಸಾಲುದ್ದದ ಸ್ಮೈಲಿ ಕಳುಹಿಸಿದ. ಸ್ಮೈಲಿಯಲ್ಲಿ ಸರ್ವ ಭಾವನೆಗಳೂ ಅಡಕವಾಗಿದ್ದವು.
“ಸರಿ ಕಣೇ. ಡ್ಯೂಟಿಗೆ ಹೊರಡು. ಬಿಡುವಾದಾಗ ..... ಅಲ್ಲಲ್ಲ ಬಿಡುವು ಮಾಡಿಕೊಂಡು ಮೆಸೇಜು ಮಾಡು. ಕಾಯ್ತಿರ್ತೀನಿ”
‘ಬರೀ ಮೆಸೇಜೇ ಸಾಕೇನೋ. ನಾ ಫೋನ್ ಮಾಡಿ ಮಾತಾಡ್ಬೇಕು ಅಂತಿದ್ದೆ ಇವತ್ತು’
“ಡ್ಯೂಟಿ?”
‘ಡ್ಯೂಟಿ ಇದೆ. ಡ್ಯೂಟಿ ಡಾಕ್ಟರ್ ರೂಮಿರುತ್ತಲ್ಲ. ರಾತ್ರಿಯೇನೂ ಅಲ್ಲಿ ಪೇಷೆಂಟ್ಸ್ ಹೆಚ್ಚಿಗೆ ಇರಲ್ಲ. ಹತ್ ಘಂಟೆಗೆಲ್ಲ ರೂಮಿಗೋಗಿ ಮಲಗ್ತೀನಿ ಸಾಮಾನ್ಯವಾಗಿ. ನಿನಗೆ ನಿದ್ರೆ ಬಂದಿಲ್ಲ ಅಂದ್ರೆ ಫೋನ್ ಮಾಡ್ತೀನಿ ಹತ್ತರ ಮೇಲೆ’
‘ಹೇಳೋ’
“ನೀ ರೂಮಲ್ ಮಾತಾಡಿದ್ರೆ ಬೇರೆ ಸ್ಟಾಫಿಗೆ ಕೇಳಲ್ವೇನೇ?”
‘ಹೇ. ಹೋಗೋ. ಊರಿಗೆಲ್ಲ ಕೇಳ್ವಂಗ್ ಜೋರಾಗ್ ಮಾತಾಡ್ತೀನಾ! ಮೆಲ್ಲಗಿನ ದನಿಯಲ್ಲೇ ಮಾತಾಡೋದು. ಮನೇಲೆಲ್ರೂ ಇದ್ದಾಗ್ಲೇ ಯಾರ್ಗೂ ಕೇಳ್ದಂತೆ ಮಾತಾಡೋದ್ರಲ್ಲಿ ಎಕ್ಸ್ಪರ್ಟ್ ಕಣಪ್ಪ ನಾನು’
“ಮ್”
‘ಸಾರಿ’
“ಯಾಕೆ”
‘ಹೋಲಿಕೆ ಮಾಡಬಾರದಿತ್ತು ಅದಿಕ್ಕೆ’
“ಹೋಗ್ಲಿ ಬಿಡು”
‘ಸರಿ ಕಣೋ. ಸಿಗ್ತೀನಿ ಆಮೇಲೆ. ಬಾಯ್’
“ಕಾಯ್ತಿರ್ತೀನಿ”
ಎಲಾ ಇವನ. ಬಾಯ್ ಅಂದ್ಮೇಲೆ ಯಾವತ್ತೂ ಪ್ರತ್ಯುತ್ತರಿಸದವನು ಕಾಯ್ತಿರ್ತೀನಿ ಅಂತ ಮೆಸೇಜು ಕಳಿಸಿಬಿಟ್ನಲ್ಲ. ಓಹೋ ಸಾಹೇಬ್ರಿಗೆ ನಮ್ಮ ಲವ್ ಸ್ಟೋರೀಲಿ ಏನೇನಾಯ್ತು ಅಂತ ತಿಳ್ಕೊಳ್ಳೋ ಕುತೂಹಲ ಅಂತ ಕಾಣ್ತದೆ. ನನ್ ಲವ್ ಸ್ಟೋರೀನ ಅವನಿಗೇಳಿ ನಾನ್ ನಿಜಕ್ಕೂ ತಪ್ ಮಾಡಿದ್ನಾ ಅಂತ ತಿಳ್ಕೊಳ್ಳೋ ಕುತೂಹಲ ನಂಗೂ ಇರೋದು ಸುಳ್ಳೇನಲ್ಲವಲ್ಲ. ಎದ್ದು ರೆಡಿಯಾಗಿ ಆಸ್ಪತ್ರೆಗೆ ಹೊರಟೆ. ಅಪ್ಪನ ಮನೆಯಿಂದ ಹೊರಡುವಾಗ ಬೇಸರ ಮನೆಯಿಂದೊರುಡುವಾಗ ಎಳ್ಳಷ್ಟೂ ಇರಲಿಲ್ಲ. ಇವತ್ತು ಸಾಗರನಿಗೆ ಯಾವ್ಯಾವ ವಿಷಯ ಹೇಳಬೇಕು ಅಂತ ಮನಸಿನಲ್ಲೇ ಲೆಕ್ಕ ಹಾಕಿಕೊಂಡು ಆಸ್ಪತ್ರೆ ತಲುಪಿದೆ.
ಡ್ಯೂಟಿ ಡಾಕ್ಟರ್ ರೂಮಿಗೆ ಮಲಗಲು ತೆರಳಿದಾಗ ಘಂಟೆ ಹತ್ತೂವರೆಯಾಗಿತ್ತು. ಏನ್ ಇವನು ಮಲಗಿಬಿಟ್ಟಿರ್ತಾನೋ ಏನೋ ಎಂಬ ಅನುಮಾನದಿಂದ ‘ಎದ್ದಿದ್ದೀಯೇನೋ’ ಎಂದು ಮೆಸೇಜಿಸಿದೆ. ಮೆಸೇಜಿನ ಡೆಲಿವರಿ ರಿಪೋರ್ಟ್ ಬರುವ ಮೊದಲೇ “ಹು” ಎಂದು ಪ್ರತ್ಯುತ್ತರ ಬಂದಿತ್ತು.
ತಲೆಗೆ ಹಾಕಿದ್ದ ಹೇರ್ ಪಿನ್ನನ್ನು ತೆಗೆದು ಕೂದಲು ಗಾಳಿಯಲ್ಲಾಡಲು ಬಿಟ್ಟು ಹಾಸಿಗೆಯ ಮೇಲೆ ಮಲಗಿದೆ. ಎದೆಯ ಮಟ್ಟ.... ಎದೆ ಅಂದ್ರೆ ಸಾಗರ್ ಬಯ್ತಾನಲ್ವ......ಮೊಲೆಯ ಮಟ್ಟಕ್ಕೆ ಬೆಡ್ ಶೀಟನ್ನು ಎಳೆದುಕೊಂಡು ಸಾಗರನಿಗೆ ಕರೆ ಮಾಡಿದೆ.
‘ಆಯ್ತೇನೋ ಊಟ’
“ಹು. ನಿಂದು”
‘ಇಲ್ವೋ. ಮಧ್ಯಾಹ್ಮ ಅಪ್ಪನ ಮನೇಲಿ ಹೊಟ್ಟೆ ತುಂಬಾ ಬಿರಿಯಾನಿ ತಿಂದಿದ್ದೆ. ಹೊಟ್ಟೆ ಹಸಿವೇ ಇರಲಿಲ್ಲ. ರಾತ್ರಿ ಏನೂ ತಿನ್ನಲಿಲ್ಲ. ಇಲ್ಲಿಗೆ ಬಂದ ಮೇಲೆ ಒಂದ್ ಕಾಫಿ ಕುಡಿದೆ. ಸಾಕು ಅನ್ನಿಸಿತು’
“ಅಂದ್ರೂ ರಾತ್ರಿ ಊಟ ಬಿಡಬಾರದಪ್ಪ”
‘ಹಸಿವಿಲ್ಲದ ಮೇಲೆ ತಿನ್ನೋದ್ಯಾಕೆ ಅಲ್ವ’
“ಅದೂ ಸರೀನೆ”
‘ಮ್. ಮತ್ತೆ ಇನ್ನೇನ್ ಸಮಾಚಾರ’
“ಹಲೋ ಮೇಡಂ. ನನ್ ಸಮಾಚಾರ ಎಲ್ಲಾ ಹೇಳಾಯ್ತು. ನಿನ್ ಸಮಾಚಾರಾನೇ ಅರ್ಧಕ್ಕೆ ನಿಂತಿರೋದು”
‘ಅದೇನಪ್ಪ ಅಷ್ಟೊಂದ್ ಕ್ಯುರಿಯಾಸಿಟಿ’
“ಅಯ್ಯೋ. ನಮ್ಮುಡ್ಗಿ ಬಗ್ಗೆ ತಿಳ್ಕೊಳ್ಳೋ ಕುತೂಹಲ ತಪ್ಪಾ”
‘ಖುಷಿಯಾಯ್ತು ಕಣೋ’
“ಗೊತ್ತಾಯ್ತು”
‘ಏನ್ ಗೊತ್ತಾಯ್ತು’
“ನಾನು ನಮ್ಮುಡ್ಗಿ ಅಂದಿದ್ದಕ್ಕೆ ನಿಂಗೆ ಖುಷಿಯಾಯ್ತು ಅಂತ ಗೊತ್ತಾಯ್ತು”
‘ನೋಡ್ದಾ. ನಾನೇಳಲಿಲ್ವ. ನಮ್ಮಿಬ್ಬರ ಮಧ್ಯೆ ಟೆಲಿಪತಿ ವರ್ಕ್ ಆಗ್ತಿದೆ ಅಂತ’
“ಬುದ್ವಂತೆ”
‘ಅಲ್ವಾ ಮತ್ತೆ’
“ಸರಿ ಸರಿ ಮುಂದುಕ್ಕೇಳು. ಕಾಡ್ ಹರಟೆ ಇನ್ನೊಂದಿನ ಮುಂದುವರಿಸಬಹುದು”
‘ಹ.ಹ. ಕೇಳುವಂತನಾಗು ಪುಟ್ಟ. ಏನೋ ಅದು ಸದ್ದು’
“ಬೆಂಕಿಪೊಟ್ಣ”
‘ಓ ಹಚ್ಕಂಡ. ಎಲ್ಲಿಂದಾನೋ ಹೇಳೋದು. ಅವನು ಪ್ರಪೋಸ್ ಮಾಡಿದ. ಹಿಗ್ಗಾಡ್ಸಿ ಜಗ್ಗಾಡ್ಸಿ ನಾನೂ ಒಪ್ದೆ. ಅಂತೂ ಇಂತೂ ಲವ್ ಆಯ್ತು. ಆಗ ಮಾಡ್ತಿದ್ದ ಕೆಲಸಗಳನ್ನೆಲ್ಲ ಈಗ ನೆನಪಿಸಿಕೊಂಡ್ರೆ ನಗು ಬರ್ತದೆ. ಆಗಂತೂ ಆ ಕೆಲಸಗಳೆಲ್ಲ ಏನೋ ದೊಡ್ಡೋರಾಗಿಬಿಟ್ಟೋ ಅನ್ನೋ ಭಾವನೆ ತುಂಬ್ತಿತ್ತು’
“ಎಂತ ಕೆಲ್ಸಗಳಪ್ಪ”
‘ಅಯ್ಯೋ ಮಜಾ ಕೇಳು. ಇಬ್ರೂ ಕಾಲೇಜಲ್ ಸಿಗ್ತಿದ್ದೋ. ಟ್ಯೂಷನ್ನಲ್ ಸಿಗ್ತಿದ್ದೋ. ಘಂಟೆಗಟ್ಲೆ ಹರಟುತ್ತಿದ್ದೋ. ಹೊರಗಡೆ ಎಲ್ಲಿ ಸಿಗೋಕೂ ಇಬ್ರಿಗೂ ಭಯ. ಮನೆಯವರು ನೋಡಿಬಿಡ್ತಾರೆ ಅಂತಲ್ಲ. ನಮ್ ಕಾಲೇಜಿನವರ್ಯಾರಾದರೂ ನೋಡಿಬಿಟ್ಟು ಕಾಲೇಜ್ತುಂಬಾ ನಮ್ ಲವ್ ಸ್ಟೋರಿ ಸುದ್ದಿಯಾಗಿಬಿಟ್ಟರೆ ಅಂತ. ಅಶ್ವಿನಿಗೆ ವಿಷಯ ಗೊತ್ತಾದರೂ ನಾನಾಗೇ ಬಾಯಿಬಿಟ್ಟು ಹೇಳೋವರೆಗೂ ಒಮ್ಮೆಯಾದರೂ ಕೇಳಲಿಲ್ಲ. ಬೇರೆಯವರು ಅಪರೂಪಕ್ಕೆ ಕೇಳ್ತಿದ್ದರು, ಒಂದ್ಕಡೆ ಖುಷಿಯಾಗ್ತಿತ್ತು, ಮತ್ತೊಂದ್ಕಡೆ ಭಯವಾಗ್ತಿತ್ತು. ಹೇ ಅಂತದ್ದೇನಿಲ್ಲಪ್ಪ ಅಂತ ತಿಪ್ಪೆ ಸಾರಿಸುತ್ತಿದ್ದೋ. ನಮ್ ತಿಪ್ಪೆ ಸುಳ್ಳು ಅಂತ ನಮಗೂ ಗೊತ್ತಿರುತ್ತಿತ್ತು ಅವರಿಗೂ ಗೊತ್ತಿರುತ್ತಿತ್ತು. ಅಶ್ವಿನಿ ಇಷ್ಟೊಂದು ನಿರ್ಲಕ್ಷ್ಯ ತೋರಿದ್ದು ನನಗಂತೂ ಸರಿ ಕಾಣಲಿಲ್ಲ. ಕೊನೆಗೊಂದು ದಿನ ತಡೀಲಾರದೆ ನಾನೇ ಹೋಗಿ ಹೇಳಿಕೊಂಡೆ. ಹಿಂಗಿಂಗಾಯ್ತು ಅಂತ. ಹೌದಾ ಅಂತಷ್ಟೇ ಹೇಳಿದಳು. ಎಲ್ಲೋ ಇವಳಿಗೆ ಹೊಟ್ಟೆಕಿಚ್ಚು ತನಗಿಲ್ಲದ ಲವರ್ ಇವಳಿಗಿದ್ದಾಳಲ್ಲ ಅಂತ ಅಂದುಕೊಂಡಿದ್ದೆ. ಗೆಳತಿಯ ಆಯ್ಕೆ ಸರಿ ಇಲ್ಲ ಅನ್ನೋ ಕಾರಣಕ್ಕೆ ಅವಳು ಪ್ರತಿಕ್ರಿಯಿಸಿರಲಿಲ್ಲ. ಮುಖಕ್ ಹೊಡೆದಂಗೆ ಅವಳಿಗನ್ನಿಸಿದ್ದನ್ನು ಹೇಳಿದರೆ ಗೆಳೆತನ ಕೂಡ ಉಳಿಯೋದಿಲ್ಲ ಅನ್ನೋ ಕಾರಣಕ್ಕೆ ಅವಳು ಪ್ರತಿಕ್ರಿಯಿಸಿರಲಿಲ್ಲ ಅನ್ನೋ ಸತ್ಯ ಅರಿವಾಗುವಷ್ಟರಲ್ಲಿ ಜೀವನದಲ್ಲಿ ತುಂಬಾ ಮುಂದೆ ಬಂದುಬಿಟ್ಟಿದ್ದೆ ಕಣೋ. ಮತ್ತೆ ಹಳೆಯ ದಿನಗಳಿಗೆ ಮರಳಲಾಗದಷ್ಟು, ಹಳೆಯ ನೆಮ್ಮದಿ ಮರಳಿ ಪಡೆಯಲಾಗದಷ್ಟು ಮುಂದೆ ಬಂದುಬಿಟ್ಟಿದ್ದೆ’
“ಮತ್ತೆ ಹಳೇ ದಿನಗಳಿಗೆ ಕಳುಹಿಸಿದರೆ, ಅವನು ನಿನ್ನನ್ನು ಪ್ರಪೋಸ್ ಮಾಡಿದರೆ ಏನು ಮಾಡ್ತಿದ್ಯೆ”
‘ಮ್. ಒಪ್ತಿರಲಿಲ್ಲ ಕಣೋ. ಅವನ ಪ್ರೀತಿಯ ಅಗಾಧತೆಯನ್ನು ಅಳೆಯೋ ಶಕ್ತಿ ನನ್ನಲಿಲ್ಲ. ಆ ಅಗಾಧತೆಯನ್ನು ತಡೆದುಕೊಳ್ಳುವ ಛಾತಿಯೂ ನನ್ನಲಿಲ್ಲ. ಹೀಗೆಲ್ಲಾ ಆಗ್ತದೆ ಅಂತ ಗೊತ್ತಿದ್ರೆ ಒಪ್ತಿರಲಿಲ್ಲ’
“ಮ್. ಹೋಗ್ಲಿ ಬಿಡು. ಮತ್ತೆ ಹಿಂದಕ್ ಹೋಗೋದಿಕ್ಕಾಗಲ್ಲವಲ್ಲ”
‘ಅದ್ ಸರೀನೆ. ಕಾಲೇಜಲ್ಲಿ, ಟ್ಯೂಷನ್ ಹತ್ರ ಅಷ್ಟೊತ್ತು ಮಾತಾಡಿದ್ರೂ ಸಮಾಧಾನ ಇರ್ತಿರಲಿಲ್ಲ. ಅದೇನು ಅಷ್ಟೊಂದು ಮಾತಾಡ್ತಿದ್ದೋ ಅಂತ ನೆನಪಿಸಿಕೊಂಡ್ರೆ ಆಶ್ಚರ್ಯವಾಗ್ತದೆ. ಮದುವೆ ಮಕ್ಕಳು ಮಕ್ಕಳ ಹೆಸರು ಮನೆ ಸಂಸಾರ ಎಲ್ಲಾ ಮಾತನಾಡಿಬಿಟ್ಟಿದ್ದೋ’
“ಹ ಹ. ಏನು ಹೆಸರಿಟ್ಟಿದ್ರಿ ಮಕ್ಳಿಗೆ”
‘ಕ್ಷಮಾ ಕ್ಷಿತಿಜ್’
“ಒಂದ್ ಗಂಡು ಒಂದ್ ಹೆಣ್ಣು ಅಂತ ತೀರ್ಮಾನ ಮಾಡೇಬಿಟ್ಟಿದ್ರಿ”
‘ಹು’
“ಯಾಕೆ. ಹೇಳೋಕ್ ಕಷ್ಟವಾ? ಬಲವಂತವೇನಿಲ್ಲ”
ಎಲಾ ಇವನ, ನನ್ನ ಹು ಪದದಲ್ಲಿರೋ ದುಃಖವನ್ನೇ ಕಂಡುಹಿಡಿದುಬಿಟ್ಟನಲ್ಲಾ! ‘ಕಷ್ಟ ಅಂತಲ್ವೋ. ಹಳೇದೆಲ್ಲ ನೆನಪಿಗೆ ಬರ್ತದಲ್ವಾ. ಒಂಥರಾ ಅನ್ನಿಸ್ತದೆ ಅದನ್ನ ವಿವರಿಸೋದೆಂಗೆ ಅಂತ ಗೊತ್ತಿಲ್ಲ’
“ಹೋಗ್ಲಿ ಬಿಡೋ”
‘ಏನ್ ಹೇಳ್ತಿದ್ದೆ? ಆ....ನಾವ್ ಮಾತಾಡ್ತಿದ್ದ ವಿಷಯಗಳ ಬಗ್ಗೆ ಅಲ್ವ’
“ಹು”
‘ನೇರಾನೇರ ಮಾತಾಡ್ತಿದ್ರೂ ಫೋನಲ್ ಮಾತಾಡೋ ಹುಕಿ ನಂಗೆ. ಆಗೆಲ್ಲ ಲ್ಯಾಂಡ್ಲೈನ್ ಇರಲಿಲ್ವಲ್ಲ. ನಮ್ಮ ಮನೇಲಿ ಅಪ್ಪ ಅಮ್ಮ ಇಲ್ಲ ಅಂತಂದಾಗ ಅವನ ಜೊತೆ ಇದ್ದು ಹರಟೋದು ಬಿಟ್ಟು ಮನೆಗೆ ಓಡಿಬರುತ್ತಿದ್ದೆ. ಅವನು ಕಾಯಿನ್ ಬೂತಿನಿಂದ ನನಗೆ ಫೋನ್ ಮಾಡಬೇಕಿತ್ತು. ಅವನ ಬಳಿಯಿರೋ ಕಾಯಿನ್ನುಗಳು ಖಾಲಿಯಾಗೋವರೆಗೂ ಅಥವಾ ನಮ್ಮ ಮನೆಗೆ ಯಾರಾದ್ರೂ ಬರುವವರೆಗೂ ಮಾತನಾಡ್ತಿದ್ದೋ! ಫೋನಲ್ಲಿ ಮಾತಾಡೋಕೆ ಅಷ್ಟು ಖುಷಿ ಆಗ. ಇಡೀ ಸೆಕೆಂಡ್ ಪಿಯು ಹಿಂಗೇ ಮಾತಲ್ಲೇ ಕಳೆದುಬಿಡ್ತಿದ್ವೇನೋ. ಅಷ್ಟರಲ್ಲಿ ನಮ್ಮ ಕಾಲೇಜಿನಲ್ಲಿ ಪ್ರಿಪರೇಟರಿ ಪರೀಕ್ಷೆ ಬಂತು. ಅವನು ಫಿಸಿಕ್ಸು ಕೆಮಿಸ್ಟ್ರಿಯಲ್ಲಿ ಫೇಲು, ನನಗೆ ಎಪ್ಪತ್ತು ಪರ್ಸೆಂಟು. ನಮ್ ಕಾಲೇಜಿಂದೆ ಒಂದ್ ಹೋಟೆಲ್ಲಿತ್ತು. ನಮ್ ಕಾಲೇಜಿನ ಲವರ್ಸುಗಳೆಲ್ಲ ಅಲ್ಲಿಗೇ ಹೋಗ್ತಿದ್ದಿದ್ದು. ಹೋಟೆಲ್ಲಿನ ಮೂಲೆಯಲ್ಲಿ ಕುಳಿತು ಅರ್ಧ ಘಂಟೆ ಅತ್ತಿದ್ದೆ. ತಾನು ಫೇಲಾಗಿದ್ದರ ಪರಿವೆಯೇ ಇರಲಿಲ್ಲ ಪರಶುಗೆ. ಸಾರಿ ಕಣೇ. ಸಾರಿ ಕಣೇ ನನ್ನಿಂದಾನೇ ನೀ ಕಡಿಮೆ ಮಾರ್ಕ್ಸ್ ತೆಗೆಯೋ ಹಂಗಾಯ್ತು ಅಂತ ಒಂದೇ ಸಮನೆ ಕ್ಷಮೆ ಕೇಳುತ್ತಿದ್ದ. ಅವನಿಗೂ ಗೊತ್ತಿತ್ತು ನಾ ಒಮ್ಮೆ ಕೂಡ ತೊಂಭತ್ತಕ್ಕಿಂತ ಕಡಿಮೆ ತೆಗೆದಿರಲಿಲ್ಲ ಅಂತ. ಲವ್ ಮಾಡೇ ಹಿಂಗಾಗೋದೆ ತಪ್ಪು ಮಾಡ್ಬಿಟ್ನೇನೋ ಲವ್ ಮಾಡಿ ಅಂತ ಮೊದಲ ಬಾರಿಗೆ ಅನ್ನಿಸಿತು. ಅದನ್ನವನ ಬಳಿ ಹೇಳಿಕೊಳ್ಳುವಂತಿರಲಿಲ್ಲ. ಹೇಳಿದರೆ ನೊಂದುಕೊಳ್ಳುತ್ತಾನವನು. ನಾನೇನೋ ಪಾಸಾದೆ. ನೀನು ಪಾಪ ನನ್ ಜೊತೆ ಲವ್ವಿಗೆ ಬಿದ್ದು ಫೇಲಾಗೋದ್ಯಲ್ಲೋ ಅಂತ ಸುಳ್ಳು ಸುಳ್ಳೇ ಹೇಳ್ತಾ ಅವನು ಫೇಲಾಗಿದ್ದಕ್ಕೇ ನಾನು ಅಳ್ತಾ ಇರೋದು ಅಂತ ಬಿಂಬಿಸಲು ಪ್ರಯತ್ನಪಟ್ಟೆ. ಆ ತರದ ಮುಗ್ಧ ಸುಳ್ಳುಗಳು ಸಂಬಂಧವನ್ನು ಗಾಡವಾಗಿಸ್ತಾವೆ ಅಂತೆಲ್ಲ ಗೊತ್ತಾಗಿದ್ದು ನಂತರ. ಅಳಬೇಡ್ವೇ. ಇದು ಬರೀ ಪ್ರಿಪರೇಟರಿ ಅಲ್ವಾ. ಇನ್ನೂ ಎರಡು ತಿಂಗಳಿದೆ ಪರೀಕ್ಷೆಗೆ. ಇನ್ನು ಮೇಲೆ ಟ್ಯೂಷನ್ ಇಲ್ಲ, ಕಾಲೇಜ್ ಇಲ್ಲ. ನಾನೂ ಪಟ್ಟಾಗಿ ಕುಳಿತು ಓದ್ತೀನಿ, ಓದಿ ಪಾಸಾಗ್ತೀನಿ. ನೀನೂ ಚೆನ್ನಾಗಿ ಓದ್ಕೋ. ಪರೀಕ್ಷೆ ಮುಗಿಯೋವರೆಗೂ ಇಬ್ರೂ ಸಿಗೋದು ಬೇಡ. ವಾರಕ್ಕೊಮ್ಮೆ ಫೋನ್ ಮಾಡ್ಕಂಡಿರೋಣ ಸಾಕು ಎಂದ. ನನಗೂ ಅದೇ ಬೇಕಿತ್ತು. ಸರಿ ನಿನ್ನಿಷ್ಟ ಅಂದೆ. ನನ್ನ ಮನಸಲ್ಲಿರೋದನ್ನೇ ಹೇಳಿದ್ನಲ್ಲ ನನ್ನ ಪರಶು ಅಂತ ಖುಷಿಯಾಯಿತು. ಪ್ರಿಪರೇಟರಿಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ಮನೆಯಲ್ಲಿ ಒಂದು ಸುತ್ತು ಬಯ್ಯಿಸಿಕೊಂಡೆ. ಗಾಡಿ ತಕ್ಕೊಟ್ರೆ ಓದಿ ದಬಾಕ್ತೀನ ಅಂತಿದ್ಯಲ್ಲ ಇದೇನಾ ಅದು ಅಂತ ಅಪ್ಪ ನಂಗೂ ಅಮ್ಮಂಗೂ ಸೇರಿಸಿಯೇ ಅಣಕಿಸೋರು. ಕೊನೆಗೆ ಅಶ್ವಿನಿ ಕೂಡ ಹುಷಾರು ಕಣೇ, ಕೊನೇ ಪರೀಕ್ಷೇಲೂ ಹಿಂಗೇ ಮಾಡ್ಕೋಬೇಡ. ಪ್ರೀತಿ ಪ್ರೇಮದ ನೆಪಕ್ಕೆ ನಮ್ ಜೀವನ ಹಾಳ್ ಮಾಡ್ಕೊಳ್ಳೋದು ಮುಠ್ಠಾಳತನ ಅಂತಂದು ಬಿಟ್ಲು. ಪರಶುನ ಲವ್ ಪ್ರಪೋಸಲ್ ಅನ್ನು ನಾ ಒಪ್ಪಿಕೊಂಡ ವಿಷಯ ಅವಳಿಗೆ ಹೇಳೇ ಇರಲಿಲ್ಲ. Infact ಪರಶು ಜೊತೆ ಲವ್ ಶುರುವಾದ ಮೇಲೆ ಅವಳ ಜೊತೆ ಮಾತಾಡೋದು ಕೂಡ ಕಡಿಮೆ ಮಾಡಿಬಿಟ್ಟಿದ್ದೆ. ಒಂಥರಾ ಗಿಲ್ಟ್ ಕಾಡ್ತಿತ್ತು ಅವಳ ಜೊತೆ ಮಾತನಾಡಲು. ನಾ ಪರಶೂನ ಎಷ್ಟೇ ಗಾಢವಾಗಿ ಪ್ರೀತಿಸಿದರೂ ಸಹಿತ ನನ್ನ ನಿರ್ಧಾರ ತಪ್ಪೇನೋ ಅನ್ನುವಂತಹ ಭಾವನೆ ಯಾಕೋ ಗೊತ್ತಿಲ್ಲ ಮೊದಲ ದಿನದಿಂದಲೇ ಇತ್ತು. ಅಶ್ವಿನಿಗೆ ಪರಶುವಿನ ಬಗ್ಗೆ ಇದ್ದ ಅಭಿಪ್ರಾಯ ಕೂಡ ಅದಕ್ಕೆ ಕಾರಣವಾಗಿರಬಹುದೇನೋ. ಎರಡು ತಿಂಗಳ ಪ್ರಿಪರೇಟರಿ ರಜೆಯಲ್ಲಿ ಓದೋಕೆ ಕುಳಿತರೆ ಮೊದಮೊದಲಿಗೆ ಏಕಾಗ್ರತೆಯೇ ಇರುತ್ತಿರಲಿಲ್ಲ. ನಾಲ್ಕು ಸಾಲು ಓದುವಷ್ಟರಲ್ಲಿ ಪರಶು ನೆನಪಾಗುತ್ತಿದ್ದ. ಅವನ ಕೂಡ ಮಾತನಾಡಿದ ವಿಷಯಗಳು ನೆನಪಾಗುತ್ತಿದ್ವು. ಇದೆಲ್ಲವನ್ನೂ ಮೀರಿ ನಾನು ಚೆನ್ನಾಗಿ ಓದುವುದಕ್ಕೆ ಅಶ್ವಿನಿಯೇ ಕಾರಣವೆಂದರೆ ತಪ್ಪಾಗಲಾರದು. ನಾನು ಫೈನಲ್ ಪರೀಕ್ಷೆಯಲ್ಲೂ ಹಿಂಗೇ ಕಮ್ಮಿ ಮಾರ್ಕ್ಸ್ ತಗೋತೀನಿ ಅಂತ ಅಶ್ವಿನಿ ನಿರ್ಧರಿಸಿದಂತಿತ್ತು. ಮುಂಚೆ ನನ್ನನ್ನು ಡೌಟ್ಸ್ ಕೇಳ್ತಿದ್ದವಳು ಈಗ ಫೋನ್ ಮಾಡಿದಾಗ ಏನಾದ್ರೂ ಡೌಟ್ಸ್ ಇದ್ರೆ ಕೇಳೇ ಅನ್ನೋಳು. ನಂಗ್ ಉರ್ದೋಗೋದು. ಏನಾದ್ರ ಆಗ್ಲಿ ಅಶ್ವಿನಿಗಿಂತ ದ ಅಂಕವನ್ನಾದರೂ ಹೆಚ್ಚಾಗಿ ತೆಗೆಯಲೇಬೇಕು ಎಂದು ನಿರ್ಣಯ ಮಾಡಿಕೊಂಡೆ. ಮೊದಲ ವಾರ ಫೋನ್ ಮಾಡಿದ ಪರಶುಗೆ ಪರೀಕ್ಷೆ ಮುಗಿಯುವವರೆಗೂ ಯಾವುದೇ ಕಾರಣಕ್ಕೂ ಫೋನ್ ಮಾಡಕೂಡದು ಅಂತ ಕಟ್ಟುನಿಟ್ಟಾಗಿ ಹೇಳಿದೆ. ಎರಡು ತಿಂಗಳು ಸತತವಾಗಿ ಓದಿಕೊಂಡೆ. ಪರಶುನನ್ನು ಹೆಚ್ಚು ಕಡಿಮೆ ಎರಡು ತಿಂಗಳ ನಂತರ ನೋಡಿದ ಖುಷಿ ಪರೀಕ್ಷೆಗೆ ಹೋದಾಗ. ನನ್ನ ಮಟ್ಟಕ್ಕೆ ಪರೀಕ್ಷೆಯಲ್ಲಿ ಚೆನ್ನಾಗಿ ಮಾಡಿದೆನಾದರೂ ತುಂಬಾ ಸಮಾಧಾನವೇನಾಗಿರಲಿಲ್ಲ. ಅಶ್ವಿನಿಗಿಂತ ಕಡಿಮೆ ಅಂಕ ತೆಗೆಯೋದು ಖಾತ್ರಿಯಾದಂತಾಗಿತ್ತು. ಪರಶು ಅಂತೂ ಭಲೇ ಖುಷಿಯಲ್ಲಿದ್ದ. ಪಾಸಾಗೋದು ಗ್ಯಾರಂಟಿಯಾಗಿತ್ತವನಿಗೆ. ಪರೀಕ್ಷೆ ಮುಗಿಸಿಕೊಂಡು ಇಬ್ಬರೂ ಕಾಲೇಜಿಂದಿನ ಹೋಟೆಲ್ಲಿಗೆ ಹೋಗಿ ಮೂರ್ನಾಲ್ಕು ತಾಸು ಮಾತಾಡಿ ವಾಪಸ್ಸಾದೋ. ನನ್ನ ಪರೀಕ್ಷೆ ಟೆನ್ಶನ್ ಇನ್ನೂ ಮುಗಿದಿರಲಿಲ್ಲ. ಸಿಇಟಿ ಬಾಕಿಯಿತ್ತು. ಅದರ ಕೋಚಿಂಗಿಗೆ ಹೋಗಬೇಕಿತ್ತು. ಪರಶು ಬಿ.ಎಸ್.ಸಿ ಅಥವಾ ಬಿ.ಎ ಮಾಡಬೇಕೆಂದು ಈಗಾಗಲೇ ನಿರ್ಧರಿಸಿಬಿಟ್ಟಿದೆನಾದ್ದರಿಂದ ಸಿಇಟಿಗೆ ಓದುವ ಗೋಜಿರಲಿಲ್ಲ. ಬರಿಯೋ ಸಿಇಟಿ ಇಬ್ರೂ ಒಂದೇ ಇಂಜಿನಿಯರಿಂಗ್ ಕಾಲೇಜಿಗೆ ಹೋಗುವಾ ಎಂದು ನಾನೆಷ್ಟು ಹೇಳಿದರೂ ಅವನು ಕೇಳುತ್ತಲೇ ಇರಲಿಲ್ಲ. ಇಲ್ವೇ ನನಗವೆಲ್ಲಾ ಓದುವುದಕ್ಕಾಗುವುದಿಲ್ಲ. ನೀ ಓದ್ಕೋ. ನಾ ಯಾವ್ದಾದ್ರೂ ಒಂದ್ ಡಿಗ್ರಿ ಮಾಡ್ಕಂಡು ಬ್ಯುಸಿನೆಸ್ ಗಿಸಿನೆಸ್ ಶುರುಹಚ್ಕೋತೀನಿ ಅಂತಿದ್ದ'
ಮುಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
No comments:
Post a Comment