ಕು.ಸ.ಮಧುಸೂದನ
ಕತ್ತಲಾಗಲೆಂದೆ ಬೆಳಗಾಗುವುದು
ಆರಲೆಂದೇ ದೀಪ ಉರಿಯುವುದು
ಬಾಡಲೆಂದೇ ಹೂವು ಅರಳುವುದು
ಕಮರಲೆಂದೆ ಕನಸು ಹುಟ್ಟುವುದು
ಗೊತ್ತಿದ್ದರೂ ಹಣತೆ ಹಚ್ಚಿಟ್ಟಳು
ಬರಲಿರುವ ಸಖನಿಗಾಗಿ.
ಮಲ್ಲೆ ಮೊಗ್ಗ ಮಾಲೆ ಹೆರಳಿಗೆ ಮುಡಿದು ನಿಂತಳು
ಬರಲಿರುವ ಸಖನ ಮೂಗಿಗೆ ಘಮಿಸಲೆಂದು
ಬರಡು ಎದೆಗೆ ವಸಂತನ ಕನವರಿಸಿ
ಹೊಸ ಕನಸು ಚಿಗುರಿಸಿಕೊಂಡಳು
ಬರುವ ಸಖನಿಗೊಂದಿಗೆ ಹಂಚಿಕೊಳ್ಳಲೆಂದು
ಮುಸ್ಸಂಜೆಗೆ ಬಂದ ಸಖ
ಹಚ್ಚಿಟ್ಟ ಹಣತೆ ಆರಿಸಿದ
ಮಲ್ಲೆ ಮಾಲೆಯ ಹೊಸಕಿಹಾಕಿದ
ಅದಾಗತಾನೆ ಚಿಗುರೊಡೆದಿದ್ದ ಕನಸುಗಳ ಚಿಗುರ ಚಿವುಟಿ
ಹಸಿಯೆದೆಯ ಮತ್ತೆ ಬರಡಾಗಿಸಿ
ನಡೆದ ಮತ್ತೊಂದು ಎದೆಬಯಲ ಅರಸಿ
ಅದೇ ಕಡೆ
ಮತ್ತವಳೆಂದು ಹಣತೆ ಹಚ್ಚಿಡಲಿಲ್ಲ
ಗಿಡದಿಂದ ಮಲ್ಲಿಗೆಯ ಬಿಡಿಸಿ ತರಲಿಲ್ಲ
ಒಣಗಿದೆದೆಗೆ ನೀರು ಹಾಯಿಸಲಿಲ್ಲ
ಕನಸಿರಲಿ ಮನಸಲ್ಲೂ ಮಂಡಿಗೆ ತಿನ್ನಲಿಲ್ಲ.
ಮಧುಸೂದನ್ ರವರ ಮತ್ತಷ್ಟು ಬರಹಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
No comments:
Post a Comment