ಕು.ಸ.ಮಧುಸೂದನನಾಯರ್
ನೀಲಿ ಹೂವಿನಂತೆ ನಳನಳಿಸಿ
ಬೆಳದಿಂಗಳ ನಗುವ ಚೆಲ್ಲಿದವಳು
ನಕ್ಷತ್ರ ಕಣ್ಣುಗಳಲಿ ಬೆಳದಿಂಗಳ ಬೆಳಕ
ಹರಡಿದಾಗ ಅವನ ಕತ್ತಲ ಜಗಕೆ ಹಗಲು
ಬಂದಂತಾಗಿ
ಸಾವಿರ ಕನಸುಗಳು ಸೃಷ್ಠಿಯಾದವು
ಕನಸುಗಳೊಳಗೆ ಅವಳ
ಕೆನ್ನೆ ಗಲ್ಲ ತುಟಿಕಟಿಗಳ
ಗಲ್ಲ ಕುತ್ತಿಗೆಯ ಇಳಿಜಾರು
ಅವನೊಳಗೆ ಹೊಸ ಕನಸೊಂದನು ಮೂಡಿಸಿದವು
ನಗುವ ಅವಳ ಕಣ್ಣು
ಹೇಳಬೇಕಾದುದನೆಲ್ಲ ಕವಿತೆಯಾಗಿಸಿ
ಮಾತಾಡದೆ ಮೌನಕೆ ಶರಣಾಗಿ ಬಿಡುವ ಅವಳು
ಒಂಟಿಯಾಗಿ ಉಳಿದವನ
ಚಿರವಿರಹಿಯಾಗಿಸಿದಳು!
ಈಗವನು ನಿರೀಕ್ಷೆಯಲಿದ್ದಾನೆ ಅವಳೊಂದು ಮಾತಿಗೆ
ನಿನ್ನ ಪ್ರೀತಿಸುವೆನೆಂಬ ನುಡಿಗೆ
ದೇವತೆಯಂತವಳ ಎರಡು ಮಾತುಗಳ
ನಿರೀಕ್ಷೆಯಲ್ಲವನ
ಬದುಕು ತಳಮಳಿಸುತಿದೆ
ಪ್ರತಿಕ್ಷಣ ಪ್ರತಿದಿನ
ಕಾಲ ಕಾಯುವುದಿಲ್ಲ ಯಕ್ಷಿಣಿಯೇ
ಮಾತಾಡಿಬಿಡು ಈ ಸೂರ್ಯಾಸ್ತದೊಳಗೆ
ಮತ್ತೊಂದು ಸೂರ್ಯೋದಯದ ಖಾತ್ರಿಯಿಲ್ಲ ಅವನಿಗೆ.
ಕು.ಸ.ಮಧುಸೂದನ ರಂಗೇನಹಳ್ಳಿಯವರ ಮತ್ತಷ್ಟು ಬರಹಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
Sir really wonderful lines I feel it
ReplyDelete