ಕು.ಸ.ಮದುಸೂದನರಂಗೇನಹಳ್ಳಿ
ಬರುತ್ತೇನೆಂದಿದ್ದೆ ಬರಲಿಲ್ಲ
ಕಾಯುತ್ತಿದ್ದೆ
ಇರುಳ ತಂಪಿನಲಿ ಸ್ವಸ್ಥನಂತೆ
ಹಗಲ ಭೇಗೆಯಲಿ ಅಸ್ವಸ್ಥನಂತೆ.
ಬೀಸು ಬಿದ್ದ ಹಾದಿ ನಿನ್ನ ಬರುವ ತೋರಲಿಲ್ಲ
ಬೀಸಿಬಂದ ಗಾಳಿ ನಿನ್ನ ವಾಸನೆ ಹೊತ್ತು ತರಲಿಲ್ಲ.
ಹಗಲ ಬೆನ್ನೇರಿ ಬಂದಿರುಳಿಗೆ
ಉಸಿರು ನೀಳವಾಯಿತು
ಹಸಿರು ಮಾಯವಾಯಿತು
ಮಿನುಗುತ್ತಿದ್ದ ಚುಕ್ಕಿಗಳು ಮೌನವಾಗಿ ಬಿಕ್ಕಿದವು
ಗೂಡು ಸೆರಿದ ಹಕ್ಕಿಗಳು ದನಿಯಿರದೆ ಕನಲಿದವು.
ಮತ್ತೆಂದಾದರೂ ಬಂದರೆ ವಸಂತ ಮರಳಿ
ನಗಲಿ ನೀ ಬರುವದಾರಿಯಲಿ ಹೂಗಳು ಅರಳಿ
ತೋಡಿಟ್ಟ ಗುಂಡಿಯ ಮುಚ್ಚಲು
ಕಾಯುತ್ತಿದೆ ಕಾಲಾಳುಗಳ ಪಡೆ
ಬಂದಿಲ್ಲಿ ಅರಸದಿರು ನನ್ನ ಸಮಾಧಿಯ
ಸಾಮೂಹಿಕವಾಗಿ ಸತ್ತವರ ಹೆಸರು ಬರೆದಿಡುವುದಾದರೂ ಯಾರು?
ಅಗಣಿತ ಗೋರಿಗಳ ಮೇಲೆ!
No comments:
Post a Comment