May 7, 2019

ಒಂದು ಬೊಗಸೆ ಪ್ರೀತಿ - 15

ಡಾ. ಅಶೋಕ್.‌ ಕೆ. ಆರ್.‌

ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
ಕತೆ ಅರ್ಧಕ್ಕೆ ನಿಲ್ಲಿಸಿದ ಕಾರಣ ನಿದಿರೆ ಬರಲಿಲ್ಲ. ಎಷ್ಟು ಚೆಂದದ ದಿನಗಳಲ್ವ ಅವು. ಪೂರ್ತಿಯಾಗಿ ಹೇಳಿದರಷ್ಟೇ ನನಗೂ ಸಲೀಸು. ಇವನು ನೋಡಿದರೆ ನಿದ್ರೆ ಬರುತ್ತೆ ಅಂದುಬಿಟ್ಟ. ಅದೇನು ನಿಜವಾಗ್ಲೂ ನಿದ್ರೆ ಬಂದಿತ್ತೊ ಅಥವಾ ನಾನೇ ಜಾಸ್ತಿ ಹೇಳಿ ತಲೆ ತಿಂದೆನೋ? ಫೋನಿನಲ್ಲಿ ಹೇಗೆ ಗೊತ್ತಾಗುತ್ತೆ? ಏನೇ ಅಂದ್ರೂ ಸಾಗರ್ ಸುಳ್ಳೇಳೋ ಪೈಕಿ ಅಲ್ಲ. ಬೋರಾಗಿದ್ರೂ ನಿಜಾನೇ ಹೇಳ್ತಿದ್ದ. ನಾಳೆ ಹೇಳೋದಿಕ್ಕಾಗಲ್ಲ. ನಾಡಿದ್ದು ನೈಟ್ ಡ್ಯೂಟಿ ದಿನ ಬ್ಯುಸಿ ಇದ್ದರೆ ಮತ್ತೆ ಕಷ್ಟ. ಮತ್ಯಾವಾಗ ಹೇಳ್ತೀನೋ ಹೇಳೋದೇ ಇಲ್ವೋ ನೋಡೋಣ. ಮೊಬೈಲ್ ಗುಣುಗುಟ್ಟಿತು.

“ಯಾಕೋ ನಿದ್ರೆ ಬರ್ತಿಲ್ಲ ಕಣೇ. ಪೂರ್ತಿ ಇವತ್ತೇ ಕೇಳ್ಬೇಕು ಅನ್ನಿಸ್ತಿದೆ. ನೀನು ಮಲಗಿಬಿಟ್ಟೋ ಏನೋ. ಗುಡ್ ನೈಟ್” ಎಂದು ಸಾಗರ್ ಮೆಸೇಜು ಕಳುಹಿಸಿದ್ದ. ನನಗೆ ಅನಿಸಿದ್ದೇ ಇವನಿಗೂ ಅನ್ನಿಸಿದೆ. ಹತ್ತಿರದಲ್ಲಿದ್ದಿದ್ದರೆ ತಬ್ಬಿ ಮುದ್ದಾಡುವಷ್ಟು ಖುಷಿಯಾಯಿತು. ತಕ್ಷಣವೇ ಫೋನ್ ಮಾಡಿದೆ.

‘ಹಲೋ’

“ಹಲೋ… ನಿನಗೂ ನಿದ್ದೆ ಬಂದಿಲ್ವ?”

‘ಅರ್ಧ ಕೇಳಿಸ್ಕೊಂಡ ನಿನಗೇ ನಿದ್ದೆ ಬಂದಿಲ್ಲ. ಇನ್ನು ಅರ್ಧ ಹೇಳಿದ ನನಗೆ ಎಲ್ಲಿಂದ ಬರ್ಬೇಕು’

“ಸರಿ ಮುಂದುವರಿಸು”
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.
‘ಎಲ್ಲಿಗೆ ನಿಲ್ಸಿದ್ದೆ ಹೇಳು’

“ಅದೇ ಮುಟ್ಟಿನ ದಿನಗಳು”

‘ಹ್ಹ. ಮುಟ್ಟಿನ ದಿನಗಳ ಸಂತಸವೇನು ಹೆಚ್ಚು ದಿನಗಳಿರಲಿಲ್ಲ. ಮುಟ್ಟಿನ ದಿವಸ ಏರುಪೇರಾಗುತ್ತಿತ್ತು. ಕೆಲವೊಮ್ಮೆ ಒಂದೇ ತಿಂಗಳಿಗೆ ಮುಟ್ಟಾದರೆ ಹಲವು ಸಲ ಎರಡು ಮೂರು ತಿಂಗಳಾದರೂ ಆಗುತ್ತಿರಲಿಲ್ಲ. ಮನೆಯಲ್ಲಿ ವಿನಾಕಾರಣ ಗಾಬರಿ ನಮ್ಮಮ್ಮನಿಗೆ. ಡಾಕ್ಟರ್ ಹತ್ತಿರ ಕರೆದುಕೊಂಡು ಹೋಗಿದ್ದರು. ಏನೂ ತೊಂದರೆಯಿಲ್ಲ. ಶುರುವಿನಲ್ಲಿ ಹೀಗೇ ಇರುತ್ತೆ ಎಂದು ವಾಪಸ್ಸು ಕಳುಹಿಸಿದ್ದರು. ಥೂ ಥೂ ಬರೀ ಈ ವಿಷಯಾನೇ ಹೇಳ್ತಿದ್ದೆನಲ್ಲ. ಪರಶು ವಿಷಯ ಎಲ್ಲಿಗೆ ನಿಲ್ಲಿಸಿದೆ ಹೇಳು’

“ಪರಶು?”

‘ಅದೇ ಕಣೋ ಪುರುಷೋತ್ತಮ್. ನಾನವನನ್ನು ಪ್ರೀತಿಸಲು ಶುರುಮಾಡಿ ಒಂದು ಒಂದೂವರೆ ವರ್ಷದ ನಂತರ ಪರಶು ಅಂತ ಕರೆಯೋದಿಕ್ಕೆ ಪ್ರಾರಂಭಿಸಿದೆ. ನಿನಗ್ ಗೊತ್ತಾ ಅವರಮ್ಮ ಅವನನ್ನು ಹಾಗೇ ಕರೆಯುತ್ತಿದ್ದುದಂತೆ. ಮೊದಮೊದಲು ನಾನು ಹಾಗೆ ಕರೆದರೆ ಬೈದುಬಿಡುತ್ತಿದ್ದ. ಅಮ್ಮನಿಗೆ ಮಾತ್ರ ಹಾಗೆ ಕರೆಯೋ ಹಕ್ಕು ಅಂತ. ಕ್ರಮೇಣ ಒಗ್ಗಿಕೊಂಡ. ಇರಲಿ. ಅವನು ಹೀರೋ ಪುಕ್ಕಲ್ಲಿ ನಾನೇ ಕರ್ಕೊಂಡು ಹೋಗ್ತೀನಿ ಬಾರೇ ಅಂದಾಗ ನನಗೂ ಅವನ ಜೊತೆಗೆ ಹೋಗುವ ಆಸೆಯಾಗಿತ್ತು. ಫ್ರೆಂಡ್ ಜೊತೆ ಹೋದ್ರೆ ಏನ್ ತಪ್ಪು ಎನ್ನುವ ಸಮರ್ಥನೆ ಅಂತೂ ಇದ್ದೇ ಇತ್ತು. ಜೊತೆಯಲ್ಲಿರೊ ಹುಡುಗೀರು ಏನೇನೋ ಮಾತಾಡಿದ್ರೆ ಅನ್ನೋ ಭಯಾನೇ ಹೋಗುವುದನ್ನು ತಪ್ಪಿಸುವಂತೆ ಮಾಡಿತ್ತೇನೋ. ಜೊತೆಗೆ ಆಗ ನನಗೆ ಕ್ಲೋಸ್ ಅಂತ ಇದ್ದಿದ್ದು ಅಶ್ವಿನಿ ಅನ್ನೋ ಫ್ರೆಂಡು. ಪಿಯುಸಿಗೆ ಅವರ ಅಪ್ಪ ಅಮ್ಮ ಮೈಸೂರಿಗೆ ಬಂದಿದ್ದರು. ನಮ್ಮ ಏರಿಯಾದಲ್ಲೇ ಅವರ ಮನೆ. ಹಂಗಾಗಿ ಬೇಗ ಪರಿಚಯವಾಗಿಬಿಟ್ಟಿದ್ದೆವು. ಅವಳನ್ನು ಒಬ್ಬಳೇ ಬಿಟ್ಟು ಪರಶು ಜೊತೆ ಹೋಗೋದಿಕ್ಕೂ ನನಗೆ ಮನಸ್ಸಿರಲಿಲ್ಲ. ಅವತ್ತು ಮಾತನಾಡಿದ ಮೇಲೂ ಮೂರು ನಾಲ್ಕು ಸಲ ಪರಶು ಹೀರೋ ಪುಕ್ಕಿನಲ್ಲೇ ಹೋಗೋಣ ಬಾರೇ ಎಂದು ಕರೆದ. ಹೇ ಹೋಗೋ. ನಾನು ಅಶ್ವಿನಿ ಜೊತೇನೇ ಬರ್ತೀನಿ ಎಂದವನ ಮಾತನ್ನು ತಳ್ಳಿಹಾಕಿ ಸೈಕಲ್ ತಳ್ಳಿಕೊಂಡೇ ಹೋದೆ. ಒಂದು ದಿನ ವಿಧಿಯಿಲ್ಲದೇ ಅವನ ಜೊತೆಗೆ ಹೋಗಬೇಕಾಯಿತು. ಅವತ್ತು ಅಶ್ವಿನಿ ಬಂದಿರಲಿಲ್ಲ. ಊರಿಗೆ ಹೋಗಿದ್ದಳು. ಫಿಸಿಕ್ಸ್ ಟ್ಯೂಷನ್ ಮುಗಿಸಿ ಹೊರಬಂದಾಗ ನೋಡ್ತೀನಿ ನನ್ನ ಸೈಕಲ್ ಪಂಚರ್ ಆಗಿಬಿಟ್ಟಿದೆ. “ಇವತ್ತಾದರೂ ಬರ್ತೀರಾ ಮೇಡಮ್” ಎಂದು ಪರಶು ನಾಟಕೀಯವಾಗಿ ಹೇಳಿದಾಗ ಇಲ್ಲವೆನ್ನಲಾಗಲಿಲ್ಲ. ‘ಸರಿ ನಡಿಯಪ್ಪ ಶಿಷ್ಯ’ ಎಂದು ಕೀಟಲೆ ಮಾಡಿ ಗಾಡಿ ಹತ್ತಿದೆ. ಹೀರೋ ಪುಕ್ ನೋಡೋಕೆ ಪುಟ್ಟ ಗಾಡಿ. ಇವಾಗ ಅದು ಬರ್ತಾಇಲ್ಲ ಅನ್ಸುತ್ತೆ. ಗಾಡಿ ಪುಟ್ಟದಾದರೂ ಭಯಂಕರ ಪಿಕ್ ಅಪ್ಪು. ಸುಂಯ್ ಅಂತ ನುಗ್ಗುತ್ತೆ. ಅದರಲ್ಲೂ ಪರಶು ಗಾಡಿ ಓಡ್ಸೋದ್ರಲ್ಲಿ ಎಕ್ಸ್ ಪರ್ಟು. ಹಳ್ಳ ದಿಣ್ಣೆನೆಲ್ಲ ತಪ್ಪಿಸಿ ಗಾಡಿ ಇನ್ನೇನು ಬಿದ್ದೇ ಹೋಗುತ್ತದೆಯೆನ್ನುವಷ್ಟು ಬಗ್ಗಿಸಿ ಓಡಿಸುತ್ತಿದ್ದ. ಮುಂದೆ ಅವನು ಗಾಡಿ ಓಡಿಸುವ ಶೈಲಿ ಇಷ್ಟವಾಯಿತಾದರೂ ಮೊದಲ ದಿನ ಗಾಬರಿಯಾಗೋಗಿತ್ತು. ‘ಅಪ್ಪ ತಂದೆ ಇನ್ನೊಂದು ಸಲ ನಿನ್ನ ಜೊತೆಗೆ ಬರಲ್ಲ. ಹಿಂಗಾ ಗಾಡಿ ಓಡ್ಸೋದು’ ಎಂದು ಕೈಮುಗಿದು ಟ್ಯೂಷನ್ನಿನ ಒಳಗೋದೆ. ವಾಪಸ್ಸಾಗುವುದು ಹೇಗೆ ಎಂದು ಯೋಚಿಸುತ್ತಿದ್ದೆ. “ನಿಧಾನಕ್ಕೆ ಓಡಿಸ್ತೀನಿ ಬಾ” ಎಂದವನು ಕೇಳಿಕೊಂಡದ್ದಕ್ಕೆ ಅವನ ಜೊತೆಗೇ ಬಂದೆ. ನಿಧಾನಕ್ಕೆ ಓಡಿಸಿದ. ‘ಇವಾಗ ನೀನು ಗುಡ್ ಬಾಯ್’ ಎಂದ್ಹೇಳಿ ಬೆನ್ನುತಟ್ಟಿ ಕೆಳಗಿಳಿದೆ. ಅವನ ಮುಖದಲ್ಲಿ ನಗುವಿತ್ತು.

ಕಾಲೇಜು ಶುರುವಾಗಲು ಮೂರು ದಿನವಿರಬೇಕಾದರೆ ಅಪ್ಪ ಕೈನೆಟಿಕ್ ಹೋಂಡಾ ಕೊಡಿಸಿದರು. ಅಶ್ವಿನಿ ಮನೇನೂ ಹತ್ತಿರಾನೇ ಇತ್ತಲ್ಲ. ನಾನೂ ಅವಳೂ ಇಬ್ಬರೂ ಜೊತೆಯಲ್ಲೇ ಟ್ಯೂಷನ್ನಿಗೆ ಹೋಗುತ್ತಿದ್ದೊ. ಕಾಲೇಜು ಶುರುವಾದಮೇಲಂತೂ ಓದೋದು ಬರೆಯೋದು ಟ್ಯೂಷನ್ನಿಗೆ ಹೋಗೋದು ಕಾಲೇಜಿಗೆ ಹೋಗೋದು ಇದರಲ್ಲೇ ಸಮಯ ಕಳೆದುಹೋಗುತ್ತಿತ್ತು. ನಾನು ಅಶ್ವಿನಿ ತುಂಬಾನೇ ಕ್ಲೋಸ್ ಆಗಿಬಿಟ್ಟೊ. ಪರಶು ಜೊತೆ ಮಾತಾಡ್ತಿದ್ದಿದ್ದು ಮಧ್ಯಾಹ್ನ ಲಂಚ್ ಬ್ರೇಕ್‍ನಲ್ಲಿ. ನನ್ನ ಜೊತೆ ಅಶ್ವಿನಿ ಇರ್ತಿದ್ಲು. ಅವನ ಜೊತೆ ಅಶೋಕ. ಅಶ್ವಿನಿ ಸ್ವಲ್ಪ ಕುಡುಮಿ. ಐದು ನಿಮಿಷಕ್ಕೆ ಗಬಗಬ ಅಂತ ಊಟ ಮುಗಿಸಿ ಕ್ಲಾಸಿಗೆ ಓಡಿಹೋಗಿ ಓದಲು ಶುರುಮಾಡಿಬಿಡುತ್ತಿದ್ದಳು. ನಾನು ಜಾಸ್ತಿ ಮಾತಾಡ್ತಿದ್ದಿದ್ದು ಪರಶು ಜೊತೆಗೆ. ಅಶೋಕ ಸ್ವಲ್ಪ ಹೊತ್ತು ಕೇಳಿಸಿಕೊಂಡು ಕೂರ್ತಿದ್ದ. “ನಾನು ಹೋಗಿರ್ತೀನಿ ಮಗ” ಅಂತ್ಹೇಳಿ ಬೇರೆ ಗೆಳೆಯರೊಡನೆ ಹೋಗಿಬಿಡುತ್ತಿದ್ದ. ನನ್ನ ಮತ್ತು ಪರಶುವಿನ ಮಾತುಗಳು ಅಡೆತಡೆಯಿಲ್ಲದೆ ಸಾಗುತ್ತಿತ್ತು. ಜಾಸ್ತಿ ಮಾತು ನಂದೇನೇ. ಬೆಳಿಗ್ಗೆ ಏನ್ ತಿಂಡಿ ತಿಂದೆ ಅನ್ನೋದರಿಂದ ಹಿಡಿದು ಕರ್ನಾಟಕದ ರಾಜಕೀಯ ಪರಿಸ್ಥಿತಿಯ ಬಗ್ಗೆ ಅವನ ಅಭಿಪ್ರಾಯವೇನು ಅನ್ನುವುದರವರೆಗೆ ಎಲ್ಲವನ್ನೂ ಕೇಳುತ್ತಿದ್ದೆ. ನಿಧನಿಧಾನಕ್ಕೆ ಅವನೂ ನನ್ನೊಡನೆ ಹೆಚ್ಚೆಚ್ಚು ಮಾತನಾಡತೊಡಗಿದ. ಅವನ ಮನೆಯಲ್ಲಿ ಅಪ್ಪ ಸರಿಯಿಲ್ಲ. ಅಮ್ಮಾನೇ ಎಲ್ಲಾ ಜವಾಬ್ದಾರಿ ಹೊತ್ಕೊಂಡಿದ್ರು. ಅಕ್ಕ ಇಂಜಿನಿಯರಿಂಗ್ ಮಾಡ್ತಿದ್ಲು. ಇವನಿಗೆ ಅಮ್ಮನನ್ನು ಕಂಡರೆ ಹೆಚ್ಚು ಪ್ರೀತಿ. ನಮ್ಮ ಮನೆಯಲ್ಲಿ ಮನೆಮಂದಿಯೆಲ್ಲ ಕುಳಿತು ಮಾತನಾಡುವುದರ ಬಗ್ಗೆ ಹೇಳಿದಾಗೆಲ್ಲ ಅವನಿಗೆ ಅಚ್ಚರಿ. ಮನೆಯವರೂ ಹೀಗೆ ಗೆಳೆತನದಿಂದ ಇರಬಹುದಾ ಅಂತ! ನನಗೂ ಅಚ್ಚರಿ ಒಂದೇ ಮನೆಯೊಳಗಿದ್ದು ಹೀಗೆ ಅಪರಿಚಿತರಂತೆ ಇರುವುದು ಹೇಗೆ ಅಂತ! ಹೊಸ ಗಾಡಿ ತಗಂಡಾಗಿಂದ ಪಾರ್ಟಿ ಯಾವಾಗ ಪಾರ್ಟಿ ಯಾವಾಗ ಅಂತ ತಲೆ ತಿನ್ನುತ್ತಿದ್ದ; ಪಾರ್ಟಿಗಾಗಿ ತಲೆ ತಿನ್ನುವವರ ಲಿಸ್ಟಿನಲ್ಲಿ ಅಶ್ವಿನಿ ಅಶೋಕ್ ಕೂಡ ಸೇರಿಕೊಂಡಿದ್ದರು. ಕೊನೆಗೊಂದು ದಿನ ಸರಿ ನಡೀರಪ್ಪ ಕೊಡಿಸ್ತೀನಿ ಅಂತ ಸಂಜೆ ಮರಿಮಲ್ಲಪ್ಪ ಕಾಲೇಜಿನ ಹತ್ತಿರದಲ್ಲಿರುವ ಚಾಟ್ ಸ್ಟ್ರೀಟಿಗೆ ಕರೆದುಕೊಂಡು ಹೋದೆ. ಆಗಿನ ಪಾರ್ಟಿ ಅಂದ್ರೆ ಗೊತ್ತಲ್ಲ. ಒಂದು ಪ್ಲೇಟ್ ಪಾನಿ ಪೂರಿ, ಒಂದೊಂದು ಲೋಟ ಕಬ್ಬು ಜ್ಯೂಸು. ಪಾರ್ಟಿ ಮುಗಿಸಿ ನಾನು ಅಶ್ವಿನಿ ಟ್ಯೂಷನ್ನಿನ ಕಡೆಗೆ ಕೈನೆಟಿಕ್ ಹೋಂಡಾದಲ್ಲಿ ಹೊರಟೊ.

“ನನಗೊಂದು ಡೌಟು ಕಣೇ ಧರಣಿ” ಕಿವಿಯ ಹತ್ತಿರ ಬಂದು ಜೋರಾಗಿ ಹೇಳಿದಳು ಅಶ್ವಿನಿ.

‘ಹೇಳೇ’

“ನೀನು ಬಯ್ಯಬಾರದು”

‘ನಾನ್ಯಾಕೆ ನಿನ್ನನ್ನ ಬಯ್ಯಲಿ? ಬಯ್ಯುವಂತದ್ದೇನು ಹೇಳ್ಬೇಡ’

“ನೋಡ್ ಮತ್ತೆ! ಆ ಪುರುಷೋತ್ತಮ್ ಇದ್ದಾನಲ್ಲ…”

‘ಹ್ಞೂ’

“ಅವನು ಅವನು”

‘ಅದೇನ್ ಹೇಳೇ’

“ಅವನು ನಿನ್ನನ್ನು ಲವ್ ಮಾಡ್ತಿದ್ದಾನಾ ಅನ್ನೋ ಅನುಮಾನ ನಂಗೆ”

ಪುರುಷೋತ್ತಮ್ ನನ್ನನ್ನು ಲವ್ ಮಾಡೋದಾ?! ದಡಕ್ಕನೆ ಬ್ರೇಕ್ ಹಾಕಿ ಗಾಡಿ ನಿಲ್ಲಿಸಿದೆ. ಅವಳ ಕಡೆಗೆ ತಿರುಗಿ ನೋಡಿದೆ. ಅವಳ ಮುಖದಲ್ಲಿ ಭಯವಿತ್ತು. ಪೂರ್ತಿ ಕೋಪದಿಂದ ಅವಳ ಕಡೆಗೆ ನೋಡಿ ಎರಡು ನಿಮಿಷ ಅವಳನ್ನೇ ದಿಟ್ಟಿಸಿದೆ.

“ಸಾರಿ ಕಣೇ” ಎಂದಳು.

‘ಸಾರಿ ನಿನ್ನ ತಲೆ ಎಂದ್ಹೇಳಿ ಜೋರಾಗಿ ನಕ್ಕುಬಿಟ್ಟೆ.

“ಇದ್ಯಾಕೆ ನಗ್ತಿದ್ದಿ”

‘ಇನ್ನೇನು ಮಾಡ್ಲಿ. ನಿನಗ್ಯಾಕೆ ಈ ತರ ಎಲ್ಲಾ ಡೌಟು ಬಂತು’

“ನಾನೂ ಎಷ್ಟೋ ದಿನದಿಂದ ನೋಡ್ತಿದ್ದೀನಿ. ಅವನು ನಿನ್ನನ್ನು ನೋಡೋದಕ್ಕೂ ನನ್ನನ್ನೋ ಬೇರೆ ಹುಡುಗಿಯನ್ನೋ ನೋಡೋದಕ್ಕೂ ಬೇಕಾದಷ್ಟು ವ್ಯತ್ಯಾಸವಿದೆ. ಇವತ್ತಂತೂ ಅವನ ಗಮನವೆಲ್ಲ ನಿನ್ನ ಪಾರ್ಟಿಯ ಮೇಲಲ್ಲ ನಿನ್ನ ಮೇಲೇ ಇತ್ತು”

‘ಓಹೋ! ಅಷ್ಟಕ್ಕೇ ಲವ್ ಮಾಡ್ತಿದ್ದಾನೆ ಅಂದುಕೊಂಡುಬಿಡೋದ! ನೀನು ಫ್ರೆಂಡು. ನಾನು ಕ್ಲೋಸ್ ಫ್ರೆಂಡು ಅದಕ್ಕೇ ನಿನಗೆ ವ್ಯತ್ಯಾಸವೆನ್ನಿಸುತ್ತೆ’

“ನಾನೇನ್ ಅಷ್ಟು ದಡ್ಡೀನ?! ನೀನೇನೇ ಹೇಳು ಧರಣಿ. ಒಂದು ಹುಡುಗ ಹುಡುಗಿ ಫ್ರೆಂಡ್ಸಾಗಿರಬಹುದು, ಕ್ಲೋಸ್ ಫ್ರೆಂಡ್ಸ್ ಆಗಿ ಜಾಸ್ತಿ ದಿನ ಇರೋಕಾಗಲ್ಲ”

‘ನಾನೊಪ್ಪಲ್ಲಪ್ಪ. ನಾನು ಪುರುಷೋತ್ತಮಾನೇ ಇಲ್ವಾ ಈಗ ಕ್ಲೋಸ್ ಫ್ರೆಂಡ್ಸಾಗಿ’

“ನಿಮ್ದಿನ್ನೂ ಬಿಗಿನಿಂಗೂ. ಫ್ರೆಂಡ್ಸಾಗೇ ಉಳೀತೀರಾ ಅನ್ನೋ ನಂಬಿಕೆ ನನಗಂತೂ ಇಲ್ಲಪ್ಪ”

‘ನೀನೇ ನೋಡುವಂತೆ ಬಿಡು. ನಾವು ಲೈಫ್ ಲಾಂಗ್ ಹಿಂಗೇ ಫ್ರೆಂಡ್ಸಾಗೇ ಇರ್ತೀವಿ’ ಅವಳು ಹೇಳಿದ್ದಕ್ಕೆ ಮತ್ತೊಮ್ಮೆ ನಕ್ಕು ಟ್ಯೂಷನ್ನಿನ ಕಡೆಗೆ ವೇಗವಾಗಿ ಹೊರಟೆ’

“ಒಂದು ಮಾತು ಕೇಳಲಾ?” ಅಷ್ಟೊತ್ತಿನಿಂದ ಮೌನವಾಗಿ ನನ್ನ ಮಾತುಗಳನ್ನು ಕೇಳುತ್ತಿದ್ದ ಸಾಗರ್ ಪ್ರಶ್ನೆ ಮಾಡಿದ.

‘ಕೇಳೋ’

“ನಿನಗೇನನ್ನಿಸುತ್ತೆ. ಒಂದು ಹುಡುಗ ಹುಡುಗಿ ಕ್ಲೋಸ್ ಫ್ರೆಂಡ್ಸ್ ಆಗಿ ಜಾಸ್ತಿ ದಿನ ಇರೋದಿಕ್ಕಾಗಲ್ವಾ?”

‘ಮ್. ಅಶ್ವಿನಿ ಹೇಳಿದಾಗದು ಸುಳ್ಳು ಅನ್ನಿಸಿತ್ತು’

“ಈಗ”

‘ಉತ್ತರ ಹೇಳಿದ್ರೆ ನೀನು ಮತ್ತೆ ನನ್ನ ಜೊತೆಗೆ ಮಾತನಾಡೋದಿಲ್ಲ. ಬೆಳಿಗ್ಗೆ ಬೆಳಿಗ್ಗೆ ಮತ್ತೆ ಹತ್ತತ್ತು ಮೆಸೇಜು ಕಳಿಸಿಬಿಟ್ರೆ’

“ಹಂಗೇನೂ ಇಲ್ಲ ಹೇಳೇ”

‘ಮ್. ಅವಳು ಹೇಳಿದ್ದೇ ಸರಿ ಅನ್ನಿಸುತ್ತೆ. ಕೊನೆವರೆಗೂ ಲೋಕದ ಕಣ್ಣಿಗೆ ಫ್ರೆಂಡ್ಸಾಗೇ ಉಳಿದುಬಿಡಬಹುದು. ಬಟ್ ಇಬ್ಬರಲ್ಲೊಬ್ಬರಿಗೆ ಸ್ನೇಹದ ಮತ್ತೊಂದು ಮಗುಲಾದ ಪ್ರೇಮದ ಭಾವನೆ ಮೂಡಿರುತ್ತದೆ. ಹೇಳ್ಕೊಂಡು ಪ್ರೇಮಿಗಳಾಗಿ ಸ್ನೇಹವನ್ನು ಮತ್ತಷ್ಟು ಹೆಚ್ಚಿಸಿಕೊಂಡವರೂ ಇದ್ದಾರೆ, ಹೇಳ್ಕೊಂಡು ಪ್ರೇಮದ ಜೊತೆಗೆ ಸ್ನೇಹವನ್ನು ಕಳ್ಕೊಂಡವರೂ ಇದ್ದಾರೆ. ನಾನು ಎರಡೂ ಕೆಟಗರಿಗೆ ಸೇರ್ತೀನಿ ಅನ್ಸುತ್ತೆ. ಸ್ನೇಹ ಹೆಚ್ಚೂ ಆಯಿತು, ಕೆಲವು ವರುಷಗಳ ನಂತರ ಸ್ನೇಹ ಪ್ರೇಮ ಎಲ್ಲಾ ಸತ್ತೂ ಹೋಯಿತು’

“ಸಾರಿ. ಬೇಜಾರ್ ಮಾಡಿದ್ನೇನೋ”

‘ನೀನ್ಯಾಕೆ ಸಾರಿ ಕೇಳ್ತೀಯ ಬಿಡು. ಇವೆಲ್ಲವನ್ನೂ ಅನುಭವಿಸಬೇಕು ಅನ್ನೋ ಕರ್ಮ ನನ್ನ ಹಣೆಯಲ್ಲಿ ಬರೆದಿದ್ದರೆ ಯಾರೇನು ಮಾಡಲು ಸಾದ್ಯ. ಅಶ್ವಿನಿಯ ಮಾತಿಗೆ ನಾನು ನಕ್ಕುಬಿಟ್ಟಿದ್ದಕ್ಕೆ ನನ್ನ ಪರಶು ಮಧ್ಯೆ ಇದ್ದ ಶುದ್ಧ ಸ್ನೇಹವೇ ಕಾರಣ ಎಂದು ನಂಬಿದ್ದೆ. ನನ್ನ ನಂಬಿಕೆ ತುಂಬ ದಿನ ಉಳಿಯಲಿಲ್ಲ ಬಿಡು. ಮಿಡ್ ಟರ್ಮ್ ಎಕ್ಸಾಮ್ಸಿನ ಕೊನೆಯ ದಿನ. ಒಂದು ವಾರ ಟ್ಯೂಷನ್ನಿಗೂ ರಜೆ ಕೊಟ್ಟಿದ್ದರು. ಅಶ್ವಿನಿಯ ಅಪ್ಪ ಕಾಲೇಜಿನ ಬಳಿ ಬಂದಿದ್ದರು. ಅವಳು ಅವರ ಜೊತೆ ಹೊರಟುಹೋದಳು. ಪುರುಷೋತ್ತಮ ಸಿಕ್ಕ.

“ನಡೀಯೇ ಪಾನಿ ಪೂರಿ ತಿನ್ನೋಣ” ಎಂದು ಕರೆದ.

‘ಏನಪ್ಪಾ ವಿಶೇಷ?’

“ಒಂದು ವಾರ ಸಿಗಲ್ಲವಲ್ಲ. ಅದಕ್ಕೆ”

‘ಪಾನಿ ಪೂರಿ ಬೇಜಾರು ಕಣೋ. ಐಸ್ಕ್ರೀಂ ಕೊಡ್ಸಿದ್ರೆ ಬರ್ತೀನಿ’

“ಸರಿ ನಡಿ. ಐಸ್ಕ್ರೀಮೇ ಕೊಡಿಸ್ತೀನಿ. ಇಲ್ಲೆಲ್ಲ ಬೇಡ. ಸಿಟಿ ಬಸ್ ಸ್ಟ್ಯಾಂಡ್ ಎದುರಿಗೆ ಲ್ಯಾಂಡ್ಸ್ ಡೌನ್ ಬಿಲ್ಡಿಂಗ್ ಇದೆಯಲ್ಲ. ಅಲ್ಲೊಂದು ಸೋಡಾ ಅಂಗಡಿಯಿದೆ ಹಳೇದು. ಅಲ್ಲಿ ತುಂಬಾ ಚೆನ್ನಾಗಿ ಐಸ್ ಕ್ರೀಂ ಮಾಡ್ತಾರೆ. ಅಲ್ಲಿಗೆ ಬರೋದಾದರೆ ಕೊಡಿಸ್ತೀನಿ”

‘ಎಕ್ಸಾಮ್ ಮುಗೀತಲ್ಲಪ್ಪ. ಆರಾಮಾಗಿ ಬರ್ತೀನಿ ನಡಿ’ ಇಬ್ಬರೂ ಗಾಡಿ ಹತ್ತಿ ಹೊರಟೊ. ಆಗೆಲ್ಲ ಮೈಸೂರಿನಲ್ಲಿ ಟ್ರಾಫಿಕ್ಕೇ ಇರಲಿಲ್ಲ. ಇಬ್ಬರೂ ಗಾಡಿ ಅಕ್ಕಪಕ್ಕ ಓಡಿಸ್ತಾ ಮಾತಾಡಿಕೊಂಡು ಹೊರಟೊ. ಐಸ್ ಕ್ರೀಂ ನಿಜಕ್ಕೂ ಚೆನ್ನಾಗಿರುತ್ತೆ ಅಲ್ಲಿ. ಹೋಗಿದ್ದೀಯ ಯಾವಾಗಾದ್ರೂ ಅಲ್ಲಿಗೆ’

“ಅದು ನಮ್ಮ ಮಾಮೂಲಿ ಅಡ್ಡ. ಸಿಟಿ ಕಡೆಗೆ ಹೋದ್ರೆ ಅಲ್ಲೊಂದು ಫ್ರೂಟ್ ಸಲಾಡ್ ವಿತ್ ಐಸ್ ಕ್ರೀಂ, ಅದಾದ ಮೇಲೆ ಮಸಾಲೆ ಸೋಡಾ ಕುಡಿಯದೆ ಬರುತ್ತಿರಲಿಲ್ಲ”

‘ಓ ಪರವಾಗಿಲ್ಲ ತುಂಬಾನೇ ಫೇಮಸ್ಸು ಅದು ಹಂಗಾಂದ್ರೆ. ಅಲ್ಲಿ ಕೆಳಗೆ ಕೂರೋಕೆ ಬೆಂಚು ಹಾಕಿದ್ರು. ಮೇಲೆ ಪುಟ್ಟ ಅಟ್ಟದ ಮೇಲೆ ಎರಡು ಟೇಬಲ್ಲು, ಟೇಬಲ್ಲಿಗೆ ನಾಲ್ಕು ಚೇರು ಇಟ್ಟಿದ್ರು. ನೋಡಿದ್ದಾ?’

“ಹ್ಞೂ. ಗೊತ್ತು ಗೊತ್ತು”

‘ಆ ಅಟ್ಟಕ್ಕೆ ಕರೆದುಕೊಂಡು ಹೋದ. ಮೊದಲು ವೆನಿಲ್ಲಾ ಹೇಳಿದ. ಗಬಗಬನೆ ತಿಂದು ಮುಗಿಸಿದೆ. ‘ತುಂಬಾ ಚೆನ್ನಾಗಿದೆ ಕಣೋ. ದುಡ್ಡಿದ್ರೆ ಇನ್ನೊಂದು ಕೊಡ್ಸೋ’ ಎಂದು ನಾಚಿಕೆಬಿಟ್ಟು ಕೇಳಿದೆ. “ಅದಕ್ಕೇನಂತೆ ಎಷ್ಟು ಬೇಕಾದ್ರೂ ತಿನ್ನು” ಎಂದು ಮತ್ತೆ ಮೂರು ಬೇರೆ ಬೇರೆ ವೆರೈಟಿ ಐಸ್ ಕ್ರೀಂ ಆರ್ಡರ್ ಮಾಡಿದ. ಒಂದು ಅವನಿಗೆ ಎರಡು ನನಗೆ. ಎರಡನೇ ಐಸ್ ಕ್ರೀಮಿನ ಕೊನೆಯ ಸ್ಪೂನು ಬಾಯಲ್ಲಿತ್ತು.

“ಧರಣಿ ನಿನಗೇನೋ ಹೇಳ್ಬೇಕು”

‘ಏಳು ಏಳು’ ಐಸ್ ಕ್ರೀಂ ಸವಿಯುತ್ತಲೇ ಕೇಳಿದೆ.

“ನಾನು ನಿನ್ನನ್ನು ತುಂಬಾ ಲವ್ ಮಾಡ್ತಿದ್ದೀನಿ ಕಣೇ” ಬಾಯಲ್ಲಿದ್ದ ಚೂರು ಐಸ್ ಕ್ರೀಂಅನ್ನು ಗುಳುಮ್ಮನೆ ನುಂಗಿದೆ. ಅವನಿಗೆ ಏನು ಪ್ರತಿಕ್ರಿಯೆ ಕೊಡಬೇಕು ಎಂಬ ಯೋಚನೆ ಬರುವುದಕ್ಕೆ ಮುಂಚೆ ಅಶ್ವಿನಿ ನೆನಪಾದಳು. ಅವಳೆಷ್ಟು ಸರಿಯಾಗಿ ಗುರುತಿಸಿದ್ದಳಲ್ವಾ? ಇವನ ಜೊತೆ ಇಷ್ಟೆಲ್ಲ ಸಮಯ ಕಳೆದು ನನಗೇ ಇವನ ಮನಸ್ಸು ಅರ್ಥವಾಗಿರಲಿಲ್ಲ. ಅವಳಿಗೆ ಹೇಗೆ ಹೊಳೆಯಿತು? ಅವತ್ತು ಅಶ್ವಿನಿ ಹೇಳಿದಾಗ ನಕ್ಕುಬಿಟ್ಟಿದ್ದೆ. ಈಗ ಹೇಗೆ ಅವಳನ್ನೆದುರಿಸೋದು? ಎದುರಿಗೆ ಕುಳಿತಿದ್ದ ಪುರುಷೋತ್ತಮ ನಾನು ಅವನು ಹೇಳಿದ್ದರ ಬಗ್ಗೇನೇ ಯೋಚಿಸುತ್ತಿದ್ದಾಳೆ ಎಂದುಕೊಂಡನೋ ಏನೋ! ನನ್ನ ಯೋಚನೆಯಿದ್ದಿದ್ದೆಲ್ಲ ಅಶ್ವಿನಿಯ ಮುಂದೆ ನಗೆಪಾಟಲಿಗೀಡಾಗಬೇಕಾಗುತ್ತಲ್ಲ ಅಂತ.

“ಏನಾದ್ರೂ ಹೇಳೇ. ಐ ಲವ್ ಯೂ ಧರಣಿ” ಎಂದವನು ಮತ್ತೆ ಕೇಳಿದಾಗಲೇ ನನಗೆ ಓ! ಸದ್ಯಕ್ಕೆ ನಾನು ಇಲ್ಲಿ ಈ ಪ್ರಶ್ನೆಗೆ ಉತ್ತರ ಕೊಡಬೇಕಲ್ವ ಅನ್ನೋದು ನೆನಪಾಗಿದ್ದು.

ಏನು ಹೇಳುವುದೆಂದು ತಿಳಿಯಲಿಲ್ಲ. ಜೋರಾಗಿ ನಕ್ಕುಬಿಟ್ಟೆ.

“ಯಾಕೆ?”

‘ನೀನಿಂಗೆ ಕಾಮಿಡಿ ಮಾಡಿದ್ರೆ ನಗು ಬರದೇ ಇರುತ್ತ’

“ನಾನು ಸೀರಿಯಸ್ಸಾಗೇ ಹೇಳ್ತಿದ್ದೀನಿ ಧರಣಿ. ನಾನು ನಿನ್ನ ತುಂಬಾ ತುಂಬಾ ತುಂಬಾ ಲವ್ ಮಾಡ್ತಿದ್ದೀನಿ. ಮದುವೆಯಾದರೆ ನಿನ್ನನ್ನೇ ಎಂದೂ ನಿರ್ಧರಿಸಿಬಿಟ್ಟಿದ್ದೀನಿ”

ನನಗೆ ಏನು ಉತ್ತರ ಕೊಡಬೇಕೆಂದು ತಿಳಿಯಲಿಲ್ಲ. ಎದುರಿಗಿರೋ ಮೂರನೇ ಐಸ್ ಕ್ರೀಂ ಬೇರೆ ಕರಗಲಾರಂಭಿಸಿತ್ತು. ಅವನ ಕಡೆಗೆ ನೋಡಿದೆ. ಸಕಾರಾತ್ಮಕ ಉತ್ತರಕ್ಕಾಗಿ ನನ್ನತ್ತಲೇ ಕಣ್ಣು ನೆಟ್ಟಿದ್ದಾನೆ. ಅವನಿಗೆ ಉತ್ತರ ಕೊಡಲಾ ಐಸ್ ಕ್ರೀಂ ತಿನ್ನಲಾ ಎಂದು ಯೋಚಿಸಿದೆ. ಐಸ್ ಕ್ರೀಂ ಕರಗೋಗುತ್ತೆ, ಉತ್ತರ ಕಾಯುತ್ತೆ ಎಂದು ಹೊಳೆಯಿತು. ಏನು ಉತ್ತರ ಕೊಡಬೇಕೆಂದು ತಿಳಿಯಲಿಲ್ಲ. ತುಂಬಾ ದಿನದ ಸಾಮೀಪ್ಯದ ಕಾರಣ ಅವನ ಪ್ರಶ್ನೆ ಗಾಬರಿಯನ್ನೂ ಹುಟ್ಟಿಸಲಿಲ್ಲ. ಸಾವಕಾಶವಾಗಿ ಐಸ್ ಕ್ರೀಂ ತಿಂದೆ. ತಿಂದು ಮುಗಿಸಿ ನೀರು ಕುಡಿದೆ. ಅವನ ಕಣ್ಣುಗಳಿನ್ನೂ ನನ್ನ ಮೇಲೇ ನೆಟ್ಟಿತ್ತು. ಏನಾದ್ರೂ ಮಾತಾಡೇ ಎಂದು ಬೇಡಿಕೊಳ್ಳುತ್ತಿರುವಂತೆ ಕಾಣುತ್ತಿತ್ತು.

‘ಸರಿ ಕಣೋ ಪುರುಷೋತ್ತಮ. ನಾನಿನ್ನು ಬರ್ತೀನಿ. ಟೈಮ್ ಆಯ್ತು. ರಜ ಮುಗಿಸ್ಕೊಂಡು ಸಿಗೋಣ’ ಎಂದು ಹೊರಟೆ.

“ನನ್ನ ಪ್ರಶ್ನೆಗೆ ಉತ್ತರ”

‘ರಜೆ ಮುಗಿದ ಮೇಲೆ ಮಾತಾಡೋಣ ಬಿಡು’ ಎಂದ್ಹೇಳಿ ಹೊರಟುಬಿಟ್ಟೆ. ಅವನು ಕಾಯ್ತಾನೇ ಇದ್ದ’

“ಐಸ್ ಕ್ರೀಂ ದುಡ್ಡಾದರೂ ನೀನು ಕೊಟ್ಟೋ ಇಲ್ಲವೋ?”

‘ಹೇ ಹೋಗೋ ನಾನ್ಯಾಕೆ ಕೊಡಲಿ ಅವನೇ ಕೊಟ್ಟಿರ್ತಾನೆ’

“ನೋಡ್ದಾ ಐಸ್ ಕ್ರೀಂ ತಿಂದು ಅವನ ಪ್ರಶ್ನೆಗೆ ಉತ್ತರಾನೂ ಕೊಡದೇ ಬಿಲ್ಲೂ ಕೊಡದೆ ಹೊರಟುಹೋಗೋ ನಿನ್ನ ಕೊಬ್ಬಾ” ಸಾಗರ್ ನಗುತ್ತಾ ಹೇಳಿದ.

‘ಹ್ಹ ಹ್ಹ. ಅಲ್ವ. ಕೊಬ್ಬೇ ನನಗೆ. ಆ ಕೊಬ್ಬಿಗೆ ಏನೇನು ಅನುಭವಿಸಬೇಕೋ ಎಲ್ಲಾನೂ ಅನುಭವಿಸಿದೆ ಬಿಡು’

“ಮ್. ಮತ್ತೆ ರಜೆ ಮುಗಿದ ಮೇಲೆ ಏನಾಯ್ತು? ರಜೆಯಲ್ಲೆಲ್ಲ ಅವನದೇ ನೆನಪಾ?”

ಮುಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

No comments:

Post a Comment