May 7, 2019

ಖಾಲಿಯಾಗುತ್ತೇನೆ.

ಅನಿತಾ ಗೌಡ 
ಮೌನ ಪಾಳಿ ಮುಗಿಸಿ
ಮಾತಿಗೆಡೆ ಮಾಡಿಕೊಟ್ಟ ಗಳಿಗೆಯಲ್ಲಿ
ತೂತಾದಂತೆ ಆಕಾಶ ಮಾತುಗಳ ಮಳೆ

ಕಟ್ಟಿಕೊಂಡ ಗೋಡೆಗಳನೊಡೆದು
ಮುಚ್ಚಿಕೊಂಡ ಚಿಪ್ಪುಗಳ ತೆರೆದು
ನೆಲ ಮುಗಿಲುಗಳ ಕಿವಿಗಡಚಿಕ್ಕುವಂತ
ಶಬ್ದಗಳ ದೀಪಾವಳಿ
ಕೇಳಿದ್ದಕ್ಕೆ ಉತ್ತರ
ಮತ್ತದಕ್ಕೆ ಪ್ರತಿ ಪ್ರಶ್ನೆ

ಹೀಗೆ ನಡೆದ ಪ್ರಶ್ನೋತ್ತರಗಳ ಜುಗಲಬಂದಿಯಲಿ
ನಾನು ಎನ್ನುವುದೆ ನಗಣ್ಯವಾಗಿ
ಅವನು
ಮಾತ್ರ
ಉಳಿದು ಹೋಗುತ್ತಾನೆ.

ಒಡಲು ತುಂಬಿಕೊಂಡ ನಾನು
ಖಾಲಿಯಾಗುತ್ತೇನೆ! 

No comments:

Post a Comment