ಹರ್ಷಿತಾ ಕೆ.ಟಿ
ನನ್ನೆಲ್ಲಾ ಕವನಗಳೂ
ಬರೀ ಅವನ ಸುತ್ತಲ್ಲೇ ಸುತ್ತುವವು
ಭ್ರಮಿತ ಜೇನುಹುಳುಗಳಂತೆ
ಕಣ್ಣಂಚು ನೀರು ಕಚ್ಚುವಂತೆ
ಮನಬಿಚ್ಚಿ ನಕ್ಕಿದ್ದು
ಕನ್ನಡಕದ ಮರೆಯಲ್ಲಿ
ಕಂಬನಿಯೆರಡ ಒರೆಸಿದ್ದು
ಚಂದಿರನತ್ತ ಬೊಟ್ಟು ಮಾಡಿ
ಬೆಳದಿಂಗಳ ತುತ್ತು ಉಣಿಸಿದ್ದು
ಹಸಿವಿಲ್ಲವೆಂದು ತಟ್ಟೆ ಮುಂದೆ
ಬೋರಲಾಗಿ ಮಲಗಿದ್ದು
ಎಷ್ಟೇ ನಿದ್ರಿಸಿದರೂ
ಸಾಲಲಿಲ್ಲವೆಂಬ ಧೋರಣೆ
ಮೊದಲೇ ಸುಂಕ ಕಟ್ಟಿ
ಕನಸು ಕಾಣುವ ಅವನ ವಾಡಿಕೆ
ಒಂದೇ ಎರಡೇ
ಲೆಕ್ಕ ವಿಲ್ಲದೆ ಮೊಳೆವ
ಹುಚ್ಚು ಅಣಬೆಯಂತೆ
ಹುಟ್ಟುತ್ತಲೇ ಇರುತ್ತವೆ
ಅವನ ಬಗ್ಗೆ ಗೀಚಲು
ರಸ ಪ್ರಸಂಗಗಳು
No comments:
Post a Comment