Mar 5, 2019

ಸುಮಲತಾ ಅಂಬರೀಷ್ ಗೊಂದು ಪತ್ರ.

ಪ್ರೀತಿಯ ಸುಮಲತಾ ಅಂಬರೀಷ್ ರವರಿಗೆ,

ದಶಕಗಳ ಕಾಲದಿಂದ ಜೊತೆಗಿದ್ೲದ ಸಂಗಾತಿಯನ್ನು ಇತ್ತೀಚೆಗಷ್ಟೇ ಕಳೆದುಕೊಂಡಿರುವವರಿಗೆ ಹೇಗಿದ್ದೀರಿ ಅಂತೆಲ್ಲ ಕೇಳಿ ಮುಜುಗರಕ್ಕೊಳಪಡಿಸಬಾರದೆಂಬ ಅರಿವಿದೆ. ಅಂಬರೀಷ್ ಎಂಬ ಚಿತ್ರ ನಟನ ಸಾವು ಅಭಿಮಾನಿ ಜನರ ನೆನಪಿನಿಂದ ದೂರಾಗುವ ಹೊತ್ತಿನಲ್ಲೇ ‘ಸುಮಲತಾ ಅಂಬರೀಷ್' ಎಂಬ ಹೆಸರು ಪತ್ರಿಕೆಗಳಲ್ಲಿ - ಮಾಧ್ಯಮಗಳಲ್ಲಿ ಪದೇ ಪದೇ ಪ್ರಸ್ತಾಪವಾಗುವುದರ ಮೂಲಕ ಅಂಬರೀಷ್ ಎಂಬ ರಾಜಕಾರಣಿ ಮತ್ತೆ ಮತ್ತೆ ನೆನಪಾಗುವಂತೆ ಮಾಡುತ್ತಿದ್ದೀರಿ. ಇನ್ನೇನು ಬರಲಿರುವ ಲೋಕಸಭಾ ಚುನಾವಣೆಗೆ ನಿಲ್ಲಲು ತಾವು ತಯಾರಿ ನಡೆಸುತ್ತಿದ್ದೀರಿ ಎಂಬ ಮಾಹಿತಿ ಪತ್ರಿಕೆಗಳ ಮೂಲಕ ಅರಿವಾಯಿತು. 

ಸುತ್ತಿಬಳಸಿ ಮಾತನಾಡುವ ಬದಲು ನೇರವಾಗಿ ಮುಖ್ಯ ವಿಷಯಕ್ಕೇ ಬರುವುದಾದರೆ ಅಂಬರೀಷ್ ರ ಮಡದಿ ಎಂಬುದೊಂದು ಅಂಶದ ಹೊರತಾಗಿ ಮಂಡ್ಯದಿಂದ ಲೋಕಸಭೆಗೆ ಸ್ಪರ್ಧಿಸುವ ಬೇರಾವ ಅರ್ಹತೆ ನಿಮ್ಮಲ್ಲಿದೆ? ಹೌದು, ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಚುನಾವಣೆಗೆ ಸ್ಪರ್ಧಿಸುವ ಹಕ್ಕಿದೆ, ಸಹಜವಾಗಿಯೇ ಆ ಹಕ್ಕು ನಿಮಗೂ ಇದೆ. ಅಂಬರೀಷ್ ರ ಮಡದಿಯಾಗಿರದೆ ಹೋಗಿದ್ದರೂ ನೀವು ಚುನಾವಣೆಗೆ ಸ್ಪರ್ಧಿಸುವ ಮನಸ್ಸು ಮಾಡುತ್ತಿದ್ದಿರಾ? ಅಂಬರೀಷ್ ಬದುಕಿದ್ದರೆ ಚುನಾವಣೆಗೆ ನೀವು ನಿಲ್ಲುತ್ತಿದ್ದಿರಾ? ಅಂಬರೀಷ್ ಸಾವಿನ ಸೂತಕದ ಸಂತಾಪದ ಲಾಭ ಪಡೆದು ಗೆಲುವು ಪಡೆಯುವುದಷ್ಟೇ ನಿಮ್ಮ ಉದ್ದೇಶವಾಗಿದೆ ಎಂಬ ಭಾವನೆ ಮೂಡಿದರದು ತಪ್ಪೇ? 

ಗಂಡ ಸತ್ತಾಗ ಹೆಂಡತಿಯನ್ನು, ಮಕ್ಕಳನ್ನು, ಅಣ್ಣ ತಮ್ಮಂದಿರನ್ನು ಚುನಾವಣೆಗೆ ನಿಲ್ಲುವಂತೆ ರಾಜಕಾರಣಿಗಳು - ಪಕ್ಷಗಳು ಒತ್ತಾಯ ಹೇರುವುದನ್ನು ನಾವು ಕಂಡಿದ್ದೇವೆ. ಅದಕ್ಕೆ ಮುಖ್ಯ ಕಾರಣ ಸಂತಾಪದಲೆಯನ್ನು ಬಳಸಿಕೊಂಡು ಗೆಲುವು ಕಂಡು ಪಕ್ಷಕ್ಕೊಂದು ಸ್ಥಾನ ಸಿಗಲಿ ಎಂಬ ಆಕಾಂಕ್ಷೆ. ಕರ್ನಾಟಕದಲ್ಲಿರುವ ಮೈತ್ರಿ ಸರ್ಕಾರದ ಕಾರಣದಿಂದಾಗಿ ಮಂಡ್ಯದ ಲೋಕಸಭಾ ಸ್ಥಾನಕ್ಕೆ ಸ್ಪರ್ಧಿಸುವ ಅವಕಾಶ ಜೆ.ಡಿ.ಎಸ್ ಅಭ್ಯರ್ಥಿಯ ಪಾಲಾಗುವ ಸಾಧ್ಯತೆ ಹೆಚ್ಚಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿಯೇ ಸರಿ. ಇದಕ್ಕೆ ಕಾರಣ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯದ ಎಲ್ಲಾ ಸ್ಥಾನಗಳಲ್ಲಿ ಜೆ.ಡಿ.ಎಸ್ ಜಯಗಳಿಸಿರುವುದು. ರಾಜಕಾರಣಿಗಳು - ಪಕ್ಷಗಳು ನಿಮ್ಮನ್ನು ಚುನಾವಣೆಗೆ ನಿಲ್ಲಿ ಎಂದು ಕೇಳಿಕೊಳ್ಳುವುದಕ್ಕೆ ಮುಂಚಿತವಾಗಿಯೇ ಚುನಾವಣೆಗೆ ನಿಲ್ಲಲು ನೀವು ಅತ್ಯುತ್ಸಾಹ ತೋರುತ್ತಾ ಮುಂದಡಿಯಿಡುತ್ತಿರುವುದು ನಿಮ್ಮ ಬಗೆಗಿನ ಗೌರವಕ್ಕೇ ಚ್ಯುತಿ ತರುವ ನಡವಳಿಕೆಯಲ್ಲವೇ?

ಅಂತಿಮವಾಗಿ ನಿಮಗೆ ಕಾಂಗ್ರೆಸ್ಸೇ ಟಿಕೇಟ್ ನೀಡಬಹುದು, ಅಥವಾ ಬಿಜಿಪಿಯಿಂದಲೂ ನೀವು ಸ್ಪರ್ಧಿಸಬಹುದು; ರಾಜಕಾರಣದಲ್ಲಿ ಯಾವುದೂ ಪೂರ್ಣ ನಿಶ್ಚಿತವೇನಲ್ಲವಲ್ಲ. ಜೆಡಿಎಸ್ಸೇ ನಿಮಗೆ ಟಿಕೆಟ್ ಕೊಟ್ಟುಬಿಡಬಹುದು. ಯಾರೂ ಟಿಕೇಟ್ ನೀಡದೆ ಹೋದರೂ ಸ್ವತಂತ್ರವಾಗಿ ಸ್ಪರ್ಧಿಸುವ ಅವಕಾಶವಂತೂ ನಿಮಗಿದ್ದೇ ಇದೆ. ಚುನಾವಣೆಗೆ ನೀವು ಅಧಿಕೃತವಾಗಿ ನಿಂತ ನಂತರ ಯಾವ ಆಧಾರದಲ್ಲಿ ಮತ ಯಾಚಿಸುತ್ತೀರಿ? ಅಂಬರೀಷ್ ರವರ ಕನಸಿನ ಮಂಡ್ಯವೆಂಬ ಹೆಸರಿನಲ್ಲಾ? ಮಂಡ್ಯದ ಕುರಿತಾಗಿ ಅಂಬರೀಷ್ ಗೊಂದು ಕನಸೇ ಇರಲಿಲ್ಲ ಅಲ್ಲವೇ…… ಮಂಡ್ಯದ ಜನ ತೋರಿದ ವಿನಾಕಾರಣ ಪ್ರೀತಿಗೆ ಪದೇ ಪದೇ ಗೆಲ್ಲಿಸಿದಕ್ಕೆ ಪ್ರತಿಯಾಗಿ ಅಂಬರೀಷ್ ಒಂದಷ್ಟಾದರೂ ಹೇಳಿಕೊಳ್ಳುವಂತಹ ಕೆಲಸ ಮಾಡಿದ್ದರೂ ಮಂಡ್ಯದ ಚಹರೆ ಬದಲಾಗುತ್ತಿತ್ತು. ಜೊತೆಜೊತೆಗೆ ರಾಜಕಾರಣಿಯಾಗಿಯೂ ಅಂಬರೀಷ್ ಎತ್ತರದ ಸ್ಥಾನಕ್ಕೇರುತ್ತಿದ್ದರು. ಅವರಿಗೆ ರಾಜಕೀಯದಲ್ಲಿ ಆಸಕ್ತಿ ಇರಲಿಲ್ಲವೋ ಅಥವಾ ರಾಜಕಾರಣದಲ್ಲಿ ಅವರಿಗೆ ಜಡತ್ವ ಆವರಿಸಿತ್ತೋ ಹೇಳುವವರಾರು?

ಸ್ಪರ್ಧಿಸಿದ ಕೊನೆಯ ಚುನಾವಣೆಯಲ್ಲಿ ಅಂಬರೀಷ್ ಗೆಲುವು ಸಾಧಿಸಿದ್ದೂ ಅವರು ಹಿಂದೆ ಮಾಡಿದ ‘ಅಭಿವೃದ್ಧಿ' ಕೆಲಸಗಳ ಆಧಾರದಲ್ಲಲ್ಲ. ‘ಅಯ್ಯೋ ಇದೇ ನನ್ನ ಕೊನೇ ಚುನಾವಣೆ ಕಣ್ರೊ. ಗೆಲ್ಲಿಸ್ಕೊಟ್ಬಿಡಿ’ ಅಂತ ಕಣ್ಣೀರಾಗಿದ್ದಕ್ಕೆ ಮಂಡ್ಯದ ‘ಪ್ರಜ್ನಾವಂತ' ಮತದಾರರು ಕರಗಿ ನೀರಾಗಿ ಅಂಬರೀಷ್ ಗೆಲುವು ಕಂಡಿದ್ದರು. ಆ ಕೃತಜ್ನತೆಗಾದರೂ ಒಂದಷ್ಟು ಉತ್ತಮ ಕಾರ್ಯಗಳನ್ನು…. ಬಿಡಿ…… ನಿಯಮಿತವಾಗಿ ಮಂಡ್ಯಕ್ಕೆ ಭೇಟಿ ಕೊಟ್ಟಿದ್ದರೂ ಸಾಕಿತ್ತು ಕಳೆದ ಬಾರಿ ಅವರಿಗಲ್ಲದೆ ಇನ್ಯಾರಿಗೂ ಟಿಕೆಟ್ ಸಿಗುವ ಸಾಧ್ಯತೆಗಳಿರಲಿಲ್ಲ. ಅಂಬರೀಷ್ ಸಾವಿನ ಮರುಕವನ್ನೊರತುಪಡಿಸಿ ಇನ್ಯಾವ ಆಧಾರದಲ್ಲಿ ನೀವು ಮತ ಕೇಳುತ್ತೀರಾ? ಹೋಕ್ಕೊಳ್ಳಲಿ ಕೊನೇ ಪಕ್ಷ ‘ರಾಜಕಾರಣಿಯಾಗಿ ಅಂಬರೀಷ್ ಹೆಚ್ಚು ಕಡಿಮೆ ಸಂಪೂರ್ಣವಾಗಿ ವಿಫಲರಾಗಿದ್ದರು. ಇನ್ನೂ ಹೆಚ್ಚು ಸಕ್ರಿಯವಾಗಿ ಅವರು ಕ್ಷೇತ್ರದಲ್ಲಿ ತೊಡಗಿಕೊಳ್ಳಬೇಕಿತ್ತು. ಅವರ ವಿಫಲತೆಗೆ ಕ್ಷಮೆ ಯಾಚಿಸುತ್ತಾ ಅದೇ ತಪ್ಪುಗಳನ್ನು ನಾನು ಪುನರಾವರ್ತಿಸುವುದಿಲ್ಲವೆಂದು ಮಾತು ನೀಡುತ್ತೇನೆ’ ಎಂದು ಸ್ವ ವಿಮರ್ಶೆ ಮಾಡಿಕೊಳ್ಳುವ ಮೂಲಕವಾದರೂ ನೀವು ಮತ ಕೇಳಬಲ್ಲಿರಾ? 

ಇಂತಿ,
ಮಂಡ್ಯದ ಮತದಾರರಲ್ಲೊಬ್ಬ.

No comments:

Post a Comment