ಪ್ರವೀಣಕುಮಾರ್ ಗೋಣಿ
ಸುಖಾಸುಮ್ಮನೆ ಕಾಲವಲ್ಲದ
ಕಾಲದೊಳಗೆ ಸುರಿದು
ಸುಮ್ಮನಾಗುವ ಮಳೆಯಂತೆ
ವಿನಾಕಾರಣ ಕಂಗಳೊದ್ದೆಯಾಗುವಾಗ
ನಿನ್ನ ಅಂಗೈಯ ಬಿಸಿಯನ್ನ ಕೆನ್ನೆ ಬಯಸುತ್ತದೆ .
ಜಿಗಿ ಜಿಗಿಯೆನಿಸುವ ನಗರವೆನ್ನುವ
ನಾಗಾಲೋಟದ ಜಾತ್ರೆಯು
ಸಾಕೆನಿಸಿ ಒಬ್ಬಂಟಿಯಾಗಿ
ತಿರುಗಿ ಬರಲು ದಾರಿಯೇ ಇರದ
ದುರ್ಗಮ ಕಾಡೊಳಗೆ ಕಳೆದುಹೋಗಿಬಿಡಬೇಕೆನ್ನುವ
ಕಾಂಕ್ಷೆ ಕಾಡಿದಾಗಲೆಲ್ಲ ನನ್ನಯ
ಕಿರುಬೆರಳು ನಿನ್ನ ಹಸ್ತದ ಕೊಂಡಿಗೆ ಕಾತರಿಸುತ್ತದೆ .
ಹುಲ್ಲು ಹಾಸಿನ ಮೇಲೆ ಬೆನ್ನ ಚೆಲ್ಲಿ
ತಾಕುವ ತಂಗಾಳಿಗೆ ಎದೆಯೊಡ್ಡಿ
ಕಣ್ಣು ತೆರೆದಷ್ಟು ವಿಶಾಲವಾದ
ಆಗಸಕ್ಕೆ ಹೃದಯವನ್ನರ್ಪಿಸಿ
ದಂಡಿಯಾಗಿ ಮಿನುಗುವ
ನಕ್ಷತ್ರಗುಚ್ಛಗಳನ್ನ ಎಣಿಸುತ್ತ ರಾತ್ರಿ
ಕಳೆದುಬಿಡಬೇಕೆನ್ನುವ ತವಕ ಕಾಡಿದಾಗಲೆಲ್ಲ
ಪಕ್ಕದಲ್ಲಿ ನಿನ್ನ ಬಿಸಿಯುಸಿರಿನ ಪುಳಕಕ್ಕೆ
ಮನಸು ಹಾತೊರೆದು ಹಣ್ಣಾಗಿ ಹೋಗುತ್ತದೆ .
ಪ್ರವೀಣಕುಮಾರ್ ಗೋಣಿಯವರ ಮತ್ತಷ್ಟು ಬರಹಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
No comments:
Post a Comment